ನೆಲಮಂಗಲ: ಮದುವೆಯಾಗಿ ಕೇವಲ 27 ದಿನಗಳಲ್ಲೇ ನವ ವಿವಾಹಿತೆ ನಿಗೂಢವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲದಲ್ಲಿ ಸಂಭವಿಸಿದೆ. ಐಶ್ವರ್ಯ (26) ಮೃತ ಯುವತಿಯಾಗಿದ್ದು, ಗಂಡನೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ನಿವಾಸಿಗಳಾದ ಮಮತಾ ಮತ್ತು ಕೃಷ್ಣಮೂರ್ತಿ ದಂಪತಿಯ ಹಿರಿಯ ಪುತ್ರಿ ಐಶ್ವರ್ಯ, ಬಾಗಲಗುಂಟೆ ಪೈಪ್ಲೈನ್ ಮಲ್ಲಸಂದ್ರ ನಿವಾಸಿ ಲಿಖಿತ್ ಸಿಂಹ ರನ್ನು ವಿವಾಹವಾಗಿದ್ದರು. ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮದುವೆ ನಡೆದಿದ್ದರೂ, ಮದುವೆಯಾದ ಕೆಲವೇ ದಿನಗಳಲ್ಲಿ ಐಶ್ವರ್ಯಗೆ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ.
ಈ ವಿಚಾರವಾಗಿ ನಿನ್ನೆ ಬೆಳಿಗ್ಗೆ ಎರಡೂ ಕುಟುಂಬಗಳ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ನಡೆಸಲಾಗಿತ್ತು. ಆದರೂ ಸಂಜೆ ವೇಳೆಗೆ ಐಶ್ವರ್ಯ ಮೇಲೆ ಮತ್ತೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಅದೇ ದಿನ ಸಂಜೆ ಲಿಖಿತ್ ತನ್ನ ಪೋಷಕರ ಮೂಲಕ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ಕುಟುಂಬಕ್ಕೆ ಮಾಹಿತಿ ನೀಡಿದ್ದಾನೆ.
ಮನೆಗೆ ಆಗಮಿಸಿದ ಕುಟುಂಬಸ್ಥರು ಐಶ್ವರ್ಯ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದನ್ನು ಕಂಡಿದ್ದಾರೆ. ಆದರೆ ಬಾಗಿಲು ಒಳಗಿನಿಂದ ಮುಚ್ಚಿರುವುದು ಸೇರಿದಂತೆ ಹಲವು ಅನುಮಾನಾಸ್ಪದ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ, ಗಂಡನೇ ಐಶ್ವರ್ಯಗೆ ನೇಣು ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯೆನ್ನಲಾದ ಪತಿ ಲಿಖಿತ್ ಸಿಂಹನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



