ಗದಗ:– PSI ಬಂಧನಕ್ಕೆ ಆಗ್ರಹಿಸಿ ಶ್ರೀ ರಾಮಸೇನೆ ಕಾರ್ಯಕರ್ತರು ಹಾಗೂ ಗೋಸಾವಿ ಸಮಾಜದಿಂದ ಇಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣ ಬಂದ್ ಗೆ ಕರೆ ಕೊಟ್ಟಿದ್ದರು.
ಬಂದ್ ಗೆ ಕರೆ ಕೊಟ್ಟ ಹಿನ್ನೆಲೆ ಪೊಲೀಸರು ಪಟ್ಟಣದಲ್ಲಿ ಪ್ರತಿಬಂಧಕಾಜ್ಞೆ ಜಾರಿ ಮಾಡಿದರು. ಆದರೆ ಇದಕ್ಕೂ ಕ್ಯಾರೇ ಎನ್ನದ ಪ್ರತಿಭಟನಾಕಾರರು ಇಂದು ಪೊಲೀಸರ ಸರ್ಪಗಾವಲಿದ್ದರೂ ಪ್ರತಿಭಟನೆ ಮಾಡಲು ಮುಂದಾದರು. ಈ ವೇಳೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪ್ರತಿಭಟನಾ ನಿರತರನ್ನು ಖಾಕಿಪಡೆ ಬಂಧಿಸಿದೆ.
ಈ ವೇಳೆ ಪೊಲೀಸರ ವಿರುದ್ಧದೇ ಗರಂ ಆದ ಪ್ರತಿಭಟನಾಕಾರರು, ಕುಂಕುಮ ಹಚ್ಚಿದ್ದಕ್ಕೆ ಬಂಧನ ಮಾಡಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ಗದಗ ಎಸ್ಪಿ ಬಿ.ಎಸ್. ನೇಮಗೌಡ, ಕುಂಕುಮ ಹಚ್ಚಿದ್ದಕ್ಕೆ ಬಂಧನ ಮಾಡಿಲ್ಲ ಎನ್ನುವ ಮೂಲಕ ಆರೋಪ ತಳ್ಳಿ ಹಾಕಿದರು.
ಲಕ್ಷ್ಮೇಶ್ವರ ಬಂದ್ ಅಂಗವಾಗಿ ಪ್ರತಿಭಟನೆ ನಡೆಸಲು ಬಂದವರನ್ನು ಅರೆಸ್ಟ್ ಮಾಡಲಾಗಿದೆ. ನಿನ್ನೆಯೇ ಬಂದ್ ಮಾಡದಂತೆ ಮನವಿ ಮಾಡಲಾಗಿತ್ತು. ಹೀಗಾಗಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ಪ್ರತಿಬಂಧಕಾಜ್ಞೆ ಜಾರಿ ಮಾಡಲಾಗಿದೆ. ಪ್ರತಿಬಂಧಕಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ಮಾಡಲು ಮುಂದಾದ 33 ಜನರನ್ನು ಮಾತ್ರ ಬಂಧನ ಮಾಡಲಾಗಿದೆ ಎಂದರು.
ವಿವಿಧ ರಸ್ತೆಗಳಲ್ಲಿ ಪೊಲೀಸರ ನಾಕಾಬಂದಿ ಹಾಕಲಾಗಿತ್ತು. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೂಬಸ್ತ್ ಕೈಗೊಳ್ಳಲಾಗಿತ್ತು.
ಪಿಎಸ್ಐ ಈರಪ್ಪ ರಿತ್ತಿ ಅವರ ವಿರುದ್ಧದ ಆರೋಪದ ಬಗ್ಗೆ ಡಿವೈಎಸ್ಪಿ ಮಟ್ಟದ ಅಧಿಕಾರಿಯನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ತಪ್ಪು ಆಗಿದ್ದರೆ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಲಾಗಿದೆ ಎಂದು ಲಕ್ಷ್ಮೇಶ್ವರ ಪಟ್ಟಣದಲ್ಲಿ ಎಸ್ಪಿ ಬಿ.ಎಸ್. ನೇಮಗೌಡ ಮಾಹಿತಿ ನೀಡಿದ್ದಾರೆ.