ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಅವರು, ಜೈಲು ಅಧಿಕಾರಿಗಳ ವಿರುದ್ಧ ಮಾಡಿದ್ದ ಹಲವು ದೂರುಗಳು ಸುಳ್ಳು ಎಂಬ ಶಂಕೆ ಉಂಟಾಗಿದೆ.
ಜೈಲಿನಲ್ಲಿನ ಸೌಲಭ್ಯಗಳ ಕೊರತೆಯ ಬಗ್ಗೆ ದರ್ಶನ್ ನ್ಯಾಯಾಲಯದ ಮೆಟ್ಟಿಲೇರಿದ್ದು, ಸ್ವತಃ ನ್ಯಾಯಾಧೀಶರು ಜೈಲು ಭೇಟಿ ನೀಡಿ ಪರಿಶೀಲಿಸಬೇಕೆಂದು ಮನವಿ ಸಲ್ಲಿಸಿದ್ದರು. ಇದರ ಹಿನ್ನೆಲೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.
ಪ್ರಾಧಿಕಾರದಿಂದ ಸಲ್ಲಿಸಲಾದ ವರದಿ ಪ್ರಕಾರ, ದರ್ಶನ್ ಇರುವ ಸೆಲ್‌ನಲ್ಲಿ ಭಾರತೀಯ ಹಾಗೂ ವಿದೇಶಿ ಶೈಲಿಯ ಎರಡು ಶೌಚಾಲಯಗಳಿವೆ. ಹಾಸಿಗೆ ದಿಂಬು ನೀಡಿಲ್ಲ ಎಂಬ ದೂರಿಗೆ, ವಿಚಾರಣಾಧೀನ ಕೈದಿಗಳಿಗೆ ಹೆಚ್ಚುವರಿ ಹಾಸಿಗೆ ಅಥವಾ ದಿಂಬು ನೀಡುವ ನಿಯಮವಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ದರ್ಶನ್ ಅವರಿಗೆ ಬಿಸಿಲು ಕಾಣಿಸುತ್ತಿಲ್ಲ ಎಂಬ ಆರೋಪಕ್ಕೂ ವರದಿ ತಿರುಗೇಟು ನೀಡಿದ್ದು, ಪ್ರತಿದಿನ ಒಂದು ಗಂಟೆ ವಾಕಿಂಗ್ ಮತ್ತು ಆಟಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದೆ. ಆದರೆ, ದರ್ಶನ್ ಸೆಲೆಬ್ರಿಟಿಯಾಗಿರುವುದರಿಂದ ಇತರೆ ಕೈದಿಗಳು ಅವರನ್ನು ನೋಡಲು, ಕಿರುಚಲು ಪ್ರಯತ್ನಿಸುತ್ತಾರೆ ಎಂಬ ಕಾರಣದಿಂದ ಅವರ ಚಲನವಲನಕ್ಕೆ ನಿರ್ಬಂಧವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಟಿವಿ ಸೌಲಭ್ಯ ನೀಡಿಲ್ಲ ಎನ್ನುವ ದೂರುಗೂ ಸ್ಪಷ್ಟನೆ ದೊರೆತಿದ್ದು, ಜೈಲಿನಲ್ಲಿ ಸಾಮಾನ್ಯ ಕೈದಿಗಳಿಗೆ ಟಿವಿ ಸೌಲಭ್ಯ ಇದೆ ಆದರೆ ಪ್ರತ್ಯೇಕ ಟಿವಿ ನೀಡುವ ವ್ಯವಸ್ಥೆ ಇಲ್ಲ ಎಂದು ತಿಳಿಸಲಾಗಿದೆ. ಇನ್ನೂ, ಜೈಲಿನಿಂದ ಕುಟುಂಬ ಸದಸ್ಯರಿಗೆ ಕರೆ ಮಾಡುವ ವೇಳೆ ಲೌಡ್‌ಸ್ಪೀಕರ್‌ನಲ್ಲಿ ಮಾತನಾಡುವಂತೆ ಅಧಿಕಾರಿಗಳು ಹೇಳುತ್ತಾರೆ ಎಂಬ ದರ್ಶನ್ ದೂರಿಗೂ ನಿಯಮದ ಪ್ರಕಾರವೇ ಅಧಿಕಾರಿಗಳು ಕೈದಿಗಳ ಕರೆಗಳನ್ನು ಆಲಿಸಬಹುದು ಎಂಬ ವಿವರಣೆ ನೀಡಲಾಗಿದೆ.
ಬಿಸಿಲಿಗೆ ಹೋಗದೆ ಕಾಲಿಗೆ ಫಂಗಸ್ ಬಂದಿದೆ ಎಂಬ ಆರೋಪವೂ ಸುಳ್ಳಾಗಿದ್ದು, ಚರ್ಮ ತಜ್ಞೆ ಡಾ. ಜ್ಯೋತಿ ಅವರು ದರ್ಶನ್ ಪರೀಕ್ಷಿಸಿ, ಅವರ ಹಿಮ್ಮಡಿ ತುಸು ಒಡೆದಿದೆ ಎಂದು ದೃಢಪಡಿಸಿದ್ದಾರೆ. ಸೊಳ್ಳೆ ಬತ್ತಿ, ಕನ್ನಡಿ ಹಾಗೂ ಬಾಚಣಿಕೆ ನೀಡಿಲ್ಲ ಎನ್ನುವ ಆರೋಪಕ್ಕೂ ಪ್ರತಿಕ್ರಿಯೆ ನೀಡಲಾಗಿದ್ದು, ಈ ಸೌಲಭ್ಯಗಳು ಶಿಕ್ಷಿತ ಕೈದಿಗಳಿಗೆ ಮಾತ್ರ ಲಭ್ಯವಿದ್ದು, ವಿಚಾರಣಾಧೀನ ಕೈದಿಗಳಿಗೆ ಅವು ನೀಡುವ ನಿಯಮವಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ವರದರಾಜ್ ಅವರು ವರದಿ ಸಲ್ಲಿಸಿದ್ದು, ಜೈಲು ಅಧಿಕಾರಿಗಳು ಕೈಪಿಡಿಯಲ್ಲಿರುವ ಎಲ್ಲಾ ನಿಯಮಗಳನ್ನು ಪಾಲಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ, ದರ್ಶನ್ ಅವರಿಗೆ ಬಿಸಿಲಿನಲ್ಲಿ ವಾಕಿಂಗ್ ಮಾಡಲು ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.