ವಾಷಿಂಗ್ಟನ್: ಅಮೆರಿಕ ಸರ್ಕಾರವು ಇರಾನ್ ಮತ್ತು ರಷ್ಯಾದ ತೈಲ ಖರೀದಿಗೆ ನೀಡಿದ್ದ ನಿರ್ಬಂಧ ವಿನಾಯಿತಿಯನ್ನು ಇನ್ನು ಮುಂದೆ ನವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ನಿರ್ಧಾರವು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮಾತನಾಡಿ, ರಷ್ಯಾ ತೈಲದ ಮೇಲಿನ ಸಾಮಾನ್ಯ ಪರವಾನಗಿಯನ್ನು ಮುಂದುವರಿಸುವುದಿಲ್ಲ ಎಂದು ತಿಳಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ, ಇಂಧನ ಪೂರೈಕೆಯನ್ನು ಸಮತೋಲನಗೊಳಿಸಲು ನೀಡಿದ್ದ ತಾತ್ಕಾಲಿಕ ವಿನಾಯಿತಿಗಳನ್ನು ಈಗ ಹಿಂತೆಗೆದುಕೊಳ್ಳಲಾಗುತ್ತಿದೆ.
ಈ ವಿನಾಯಿತಿಗಳ ಪ್ರಮುಖ ಪ್ರಯೋಜನವನ್ನು ಭಾರತ ಸೇರಿದಂತೆ ಹಲವು ದೇಶಗಳು ಪಡೆದುಕೊಂಡಿದ್ದವು. ವಿಶೇಷವಾಗಿ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ಸಮಸ್ಯೆಗಳ ಹಿನ್ನೆಲೆ, ಭಾರತಕ್ಕೆ ಬರುತ್ತಿದ್ದ ಅನೇಕ ತೈಲ ಹಡಗುಗಳು ಅಡಕವಾಗಿದ್ದವು. ಇದರಿಂದ ರಷ್ಯಾದ ತೈಲ ಖರೀದಿಗೆ ತಾತ್ಕಾಲಿಕ ಅನುಮತಿ ನೀಡಲಾಗಿತ್ತು.
ಅಮೆರಿಕ ಈ ಹಿಂದೆ ಇಂಧನ ಬೆಲೆ ಏರಿಕೆಯನ್ನು ನಿಯಂತ್ರಿಸಲು ಹಾಗೂ ಯುದ್ಧಕಾಲದಲ್ಲಿ ಪೂರೈಕೆ ಅಡಚಣೆಗಳನ್ನು ಕಡಿಮೆ ಮಾಡಲು ಸೀಮಿತ ಅವಧಿಗೆ ವಿನಾಯಿತಿ ನೀಡಿತ್ತು. ಮಾರ್ಚ್ 20ರಂದು ಇರಾನ್ ತೈಲಕ್ಕೂ ಇದೇ ರೀತಿಯ ಸಡಿಲಿಕೆ ನೀಡಲಾಗಿದ್ದು, ಸುಮಾರು 140 ಮಿಲಿಯನ್ ಬ್ಯಾರೆಲ್ ತೈಲ ಜಾಗತಿಕ ಮಾರುಕಟ್ಟೆಗೆ ತಲುಪಲು ಸಹಾಯ ಮಾಡಿತ್ತು.
ಈ ವಿನಾಯಿತಿ ಏಪ್ರಿಲ್ 19ರಂದು ಮುಕ್ತಾಯಗೊಳ್ಳಲಿದ್ದು, ಬಳಿಕ ಜಾಗತಿಕ ತೈಲ ಸರಬರಾಜು ಮತ್ತು ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.



