ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ನಡೆದ ವಿಶೇಷ ಸಾಮಾನ್ಯ ಸಭೆ ಹಾಗೂ 2025-26ನೇ ಸಾಲಿನ ಬಜೆಟ್ ಮಂಡನೆಯ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ ಬಜೆಟ್ ಮಂಡಿಸಿದರು. ಈ ಬಾರಿ ಸುಮಾರು 24 ಕೋಟಿ 45 ಲಕ್ಷಕ್ಕೂ ಅಧಿಕ ಗಾತ್ರದ ಬಜೆಟ್ ಮಂಡಿಸಲಾಗಿದ್ದು, ಒಟ್ಟು 1 ಕೋಟಿ 18 ಲಕ್ಷ 15 ಸಾವಿರ ರೂಗಳ ಉಳಿತಾಯ ಬಜೆಟ್‌ನ್ನು ಮಂಡಿಸಲಾಯಿತು.
ಶುಕ್ರವಾರ ನಡೆದ ಈ ಸಭೆಗೆ ಶಾಸಕ ಡಾ. ಚಂದ್ರು ಲಮಾಣಿ ಆಗಮಿಸಿದ್ದರು. ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ ಹಾಗೂ ಉಪಾಧ್ಯಕ್ಷ ಪೀರದೋಷ ಆಡೂರ ಹಾಗೂ ಸರ್ವ ಸದಸ್ಯರು, ಮುಖ್ಯಾಧಿಕಾರಿ ಮಹೇಶ ಹಡಪದ ಬಜೆಟ್ ಪ್ರತಿಗಳನ್ನು ಶಾಸಕರೊಂದಿಗೆ ಪ್ರದರ್ಶಿಸಿ ಬಜೆಟ್ ಮಂಡನೆಗೆ ತೆರಳಿದರು.
ಅಧ್ಯಕ್ಷರ ಅನುಮತಿ ಮೇರೆಗೆ ಸಭೆಯಲ್ಲಿ ಬಜೆಟ್ ಪ್ರಸ್ತುತಪಡಿಸಿದ ಮುಖ್ಯಾಧಿಕಾರಿ ಮಹೇಶ ಹಡಪದ, ಒಟ್ಟು 23 ಕೋಟಿ 27 ಲಕ್ಷ 62 ಸಾವಿರ ಪಾವತಿಗಳನ್ನು ಅಂದಾಜಿಸಲಾಗಿದ್ದು, ಈ ಬಾರಿಯ ನಮ್ಮ ಬಜೆಟ್ ಗಾತ್ರ 24 ಕೋಟಿ 45 ಲಕ್ಷಕ್ಕೂ ಅಧಿಕವಾಗಿದೆ. ಇದರಲ್ಲಿ 23 ಕೋಟಿ 27 ಲಕ್ಷ 62 ಸಾವಿರ ಕಳೆದು 1 ಕೋಟಿ, 18 ಲಕ್ಷ 15 ಸಾವಿರ ಉಳಿತಾಯವನ್ನು ನಿರೀಕ್ಷಿಸಲಾಗಿದೆ ಎಂದು ಘೋಷಿಸಿದರು. 2025-26ನೇ ಸಾಲಿಗೆ ಆದಾಯವನ್ನು ಪುರಸಭೆ ನಿಧಿಯಿಂದ ಒಟ್ಟು 4 ಕೋಟಿ 2 ಲಕ್ಷÀ 2 ಸಾವಿರ ರೂಗಳನ್ನು ಅಂದಾಜಿಸಲಾಗಿದ್ದು, ಎಸ್‌ಎಫ್‌ಸಿ ಮುಕ್ತ ನಿಧಿ 15ನೇ ಹಣಕಾಸು ಮತ್ತು ಇತರೆ ಅನುದಾನದ ಮೂಲದಿಂದ 8 ಕೋಟಿ 49 ಲಕ್ಷ 51 ಸಾವಿರ ರೂಗಳನ್ನು ನೀರೀಕ್ಷಿಸಲಾಗಿದೆ.
ಪುರಸಭೆ ನಿಧಿಯಿಂದ ಅವಶ್ಯಕ ಖರ್ಚುಗಳಿಗೆ ಒಟ್ಟು 4 ಕೋಟಿ 1 ಲಕ್ಷ 20 ಸಾವಿರ ರೂಗಳ ಹಣವನ್ನು ಮೀಸಲಾಗಿಡಲಾಗಿದೆ. ಅನುದಾನದಿಂದ ಬಂದ ಮೊತ್ತದಲ್ಲಿ 12.35 ಕೋಟಿಗೂ ಅಧಿಕ ಹಣವನ್ನು ಕೆರೆ ಅಭಿವೃದ್ಧಿ, ಮಳಿಗೆ ನಿರ್ಮಾಣಗಳಿಗೆ ಮೀಸಲಿಡಲಾಗಿದ್ದು, ಸರಕಾರಕ್ಕೆ ಕಟ್ಟಬೇಕಾದ ಉಪಕರ ಮತ್ತು ತೆರಿಗೆ ಇತ್ಯಾದಿಗಳಿಗಾಗಿ 2.86 ಕೋಟಿಗೂ ಅಧಿಕ ಹಣವನ್ನು ಮೀಸಲಿಡಲಾಗಿದೆ.
ಪ.ಜಾ, ಪ.ಪಂ ಕಲ್ಯಾಣ ಕಾರ್ಯಕ್ರಮಗಳಿಗೆ ಪುರಸಭೆ ನಿಧಿಯಿಂದ 3.30 ಲಕ್ಷ, ರಾಜ್ಯ ಹಣಕಾಸು ನಿಧಿಯಿಂದ 1.76 ಲಕ್ಷ, ಅಂಗವಿಕರಲ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಪುರಸಭೆ ನಿಧಿಯಿಂದ 68 ಸಾವಿರ, ರಾಜ್ಯ ಹಣಕಾಸು ನಿಧಿಯಿಂದ 1.21 ಲಕ್ಷ ರೂಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಸರಕಾರದಿಂದ ದೊರೆಯುವ ವಿಶೇಷ ಅನುದಾನವನ್ನು ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಕುಡಿಯುವ ನೀರು ಪೂರೈಕೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಉಪಾಧ್ಯಕ್ಷ ಪೀರದೋಷ ಆಡೂರ, ಹಿರಿಯ ಸದಸ್ಯರಾದ ರಾಜಣ್ಣ ಕುಂಬಿ, ಮಹೇಶ ಹೊಗೆಸೊಪ್ಪಿನ್, ಅಶ್ವಿನಿ ಅಂಕಲಕೋಟಿ, ಪ್ರವೀಣ ಬಾಳಿಕಾಯಿ, ಜಯಕ್ಕ ಅಂದಲಗಿ, ಜಯಕ್ಕ ಕಳ್ಳಿ, ಎಸ್.ಕೆ. ಹವಾಲ್ದಾರ, ವಿಜಯ ಕರಡಿ, ರಾಮಪ್ಪ ಗಡದವರ, ನೀಲಪ್ಪ ಪೂಜಾರ, ಕಿರಣ ನವಲೆ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು. ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಸಮುದಾಯ ಸಂಘಟನಾ ಅಧಿಕಾರಿ ಶೋಭಾ ಬೆಳ್ಳಿಕೊಪ್ಪ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಮಂಜುನಾಥ ಮುದಗಲ್, ಹನುಮಂತ ನಂದೆಣ್ಣವರ ಸೇರಿದಂತೆ ಪುರಸಭೆ ಸರ್ವ ಸದಸ್ಯರು ಹಾಜರಿದ್ದರು.
ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ಪುರಸಭೆ ಸದಸ್ಯರ ಜವಾಬ್ದಾರಿ ಹೆಚ್ಚಾಗಿದ್ದು, ನಗರೋತ್ಥಾನ ಕಾಮಗಾರಿಗಳನ್ನು ಆದಷ್ಟು ಶೀಘ್ರ ಮುಗಿಸಬೇಕು. ಬೇಸಿಗೆ ಕಾಲದಲ್ಲಿ ಪಟ್ಟಣದ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಮಾಡುವದು ಬೇಡ. ಪಕ್ಷಾತೀತವಾಗಿ ಕೆಲಸ ಮಾಡೋಣ. ಊರಿನ ಅಭಿವೃದ್ಧಿಗೆ ಎಲ್ಲರೂ ಕೂಡಿ ಕೆಲಸ ಮಾಡೋಣ.
– ಡಾ.ಚಂದ್ರು ಲಮಾಣಿ.
ಶಾಸಕರು, ಶಿರಹಟ್ಟಿ.