ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬರ್ತ್ ಡೇ ಪಾರ್ಟಿ, ಮೊಬೈಲ್ ಪೋನ್ ಬಳಕೆ ಯಾವುದೂ ನಿಂತಿಲ್ಲ. ಜೈಲಿನಲ್ಲಿ ಜೈಲಿನ ಸಿಬ್ಬಂದಿಯ ಬೆಂಬಲದಿಂದಲೇ ನಿಯಮಬಾಹಿರ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಹೌದು ವಿಕೃತ ಕಾಮಿ ಉಮೇಶ್ ರೆಡ್ಡಿ ಜೈಲಿನಲ್ಲಿ ಬಿಂದಾಸ್ ಲೈಫ್ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಉಮೆಶ್ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಿಂದಾಸ್ ಲೈಫ್ ನಡೆಸುತ್ತಿದ್ದಾನೆ. ವಿಕೃತ ಕಾಮಿಗೆ ಜೈಲಿನಲ್ಲಿ ಟಿವಿ, ಮೊಬೈಲ್ ಸೌಲಭ್ಯ ನೀಡಲಾಗಿದೆ.
ಜೊತೆಗೆ ತನಗೆ ಬೇಕಾದ ಅಡುಗೆ ಮಾಡಿಕೊಳ್ಳಲು ಜೈಲಿನೊಳಗೇ ಅಧಿಕಾರಿಗಳು ಸೌಲಭ್ಯ ಕಲ್ಪಿಸಿದ್ದಾರೆ. ಉಮೇಶ್ ರೆಡ್ಡಿ ಟಿವಿ ನೋಡ್ತಾ, ಆಂಡ್ರಾಯ್ಡ್ ಮತ್ತು ಕೀಪ್ಯಾಡ್ ಮೊಬೈಲ್ ಗಳನ್ನಿಟ್ಟುಕೊಂಡು ಮಾತನಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಇದರಿಂದ ಸೌಲಭ್ಯ ಕೊಟ್ಟ ಜೈಲಾಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ.
ಉಮೇಶ್ ರೆಡ್ಡಿ ಅಷ್ಟೇ ಅಲ್ಲ, ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧನ ಆಗಿರುವ ರನ್ಯಾ ರಾವ್ ಪ್ರಿಯಕರ ತೆಲುಗು ಸಿನಿಮಾ ನಟ ತರುಣ್ ರಾಜ್ ಕೂಡ ಬಿಂದಾಸ್ ಲೈಫ್ ಲೀಡ್ ಮಾಡ್ತಿದ್ದಾನೆ. ಮೊಬೈಲ್ ಜೊತೆಗೆ ಟಿವಿ ಸೌಲಭ್ಯ ಕಲ್ಪಿಸಿರೋದು ವೈರಲ್ ಆಗಿರುವ ವಿಡಿಯೋದಿಂದ ಗೊತ್ತಾಗಿದೆ. ಒಟ್ಟಿನಲ್ಲಿ ಕೈದಿಗಳ ರಾಜಾತಿಥ್ಯಕ್ಕೆ ಹೆಸರುವಾಸಿಯಾಗಿರುವ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು, ಸಿಬ್ಬಂದಿಗೆ ಈಗ ಸಂಕಷ್ಟ ಎದುರಾಗಿದ್ದು, ಮುಂದಿನ ಕ್ರಮ ಕಾದುನೋಡಬೇಕಿದೆ.


