ವಿಜಯಸಾಕ್ಷಿ ಸುದ್ದಿ, ಗದಗ : ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ರೈತರ ಹೊಲಗಳಲ್ಲಿ ನಿರ್ಮಿಸಿದ ಕಂದಕ ಬದು, ಕೃಷಿ ಹೊಂಡಗಳು ಮುಂಗಾರು ಮಳೆಯಿಂದಾಗಿ ಭರ್ತಿಯಾಗುತ್ತಿದ್ದು, ಅಂತರ್ಜಲ ಮಟ್ಟ ಹೆಚ್ಚಾಗಲು ಸಹಕಾರಿಯಾಗಿವೆ.
ರೈತರ ಕೃಷಿ ಚಟುವಟಿಕೆಗೆ ಮತ್ತು ನೀರಿನ ಅಭಾವ ನೀಗಿಸಲು ಮಳೆಯ ನೀರನ್ನು ಸಂಗ್ರಹಿಸಿ ಅದನ್ನು ವ್ಯವಸಾಯಕ್ಕೆ ಬಳಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಗದಗ ತಾಲೂಕಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಯೋಜನೆಯಡಿ ಅಂತರ್ಜಲ ಅಭಿವೃದ್ಧಿಗೆ ಹಾಗೂ ಮಣ್ಣು ಮತ್ತು ನೀರು ಸಂರಕ್ಷಣೆಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ರೈತರು ತಮ್ಮ ಹೊಲದಲ್ಲಿ ಕಂದಕ ಬದು ನಿರ್ಮಾಣ ಮಾಡಿ, ತೆಗೆದ ಗುಂಡಿಗಳಲ್ಲಿ ಮಳೆ ಬಂದಾಗ ನೀರು ಶೇಖರಣೆಯಾಗಿ ಅಂತರ್ಜಲ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ಈ ಯೋಜನೆಯನ್ನು ಸರಕಾರ ಸಮರ್ಪಕವಾಗಿ ಅನುಷ್ಠಾನ ಮಾಡುವುದರಿಂದ ರೈತರಿಗೆ ಸಾಕಷ್ಟು ಪ್ರಯೋಜನ ಲಭಿಸಲಿದೆ. ಗ್ರಾಮ ಪಂಚಾಯತಿಯಲ್ಲಿನ ಸಕ್ರಿಯ ಉದ್ಯೋಗ ಚೀಟಿದಾರರು ತಮ್ಮ ಗ್ರಾಮಗಳಲ್ಲಿಯ ರೈತರ ಜಮೀನುಗಳಲ್ಲಿ ಅಕುಶಲ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಫಲಾನುಭವಿಗಳು ಇದನ್ನು ತಮ್ಮ ತಮ್ಮ ಹೊಲಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಸರ್ಕಾರದ ಯೋಜನೆಯ ಲಾಭ ಪಡೆದುಕೊಳ್ಳುವುದರ ಜೊತೆಗೆ ತಮ್ಮ ಹೊಲವನ್ನು ತೇವಾಂಶಯುಕ್ತವನ್ನಾಗಿ ಮಾಡಬಹುದಾಗಿದೆ.
ರೈತರಾದ ಮಹದೇವಪ್ಪ ನರೇಗಾ ಯೋಜನೆಯಿಂದ ಆದ ಲಾಭದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತ, ಯೋಜನೆಯಡಿ ಗ್ರಾ.ಪಂಗೆ ಅರ್ಜಿ ಸಲ್ಲಿಸಿ 3 ಎಕರೆ ಕೃಷಿ ಜಮೀನಿನಲ್ಲಿ ಕಂದಕ ಬದು ನಿರ್ಮಾಣ ಮಾಡಿಕೊಂಡಿದ್ದು, ಇತೀಚೆಗೆ ಉತ್ತಮ ಮಳೆಯಾಗಿ ನೀರು ಸಂಗ್ರಣೆಯಾಗಿದೆ. ಜಮೀನುಗಳಲ್ಲಿ ಕಂದಕ ಬದು ನಿರ್ಮಾಣ ಮಾಡುತ್ತಿರುವದರಿಂದ ಮಳೆ ನೀರು ನಿಂತುಕೊಳ್ಳಲು ಅನುಕೂಲವಾಗಿದೆ. ಈ ಹಿಂದೆ ಜಮೀನಿನ ಮಣ್ಣು ಸಹ ಕೊಚ್ಚಿಕೊಂಡು ಹೋಗುತ್ತಿತ್ತು. ಇದೀಗ ಸಂಪೂರ್ಣ ಮಳೆಯಿಂದ ಜಮೀನು ಹಸಿಯಾಗಿ ಉತ್ತಮ ಬೆಳೆಗಳು ಬರುವ ನೀರಿಕ್ಷೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರೈತರು ಕೃಷಿಹೊಂಡ, ಬದುವಿನ ಮೇಲೆ ನುಗ್ಗೆ, ಹುರಳಿ, ತೊಗರಿ, ಕುಂಬಳ, ಮೆಣಸಿನಕಾಯಿ, ಟೊಮೆಟೋ, ಅಳಸಂದೆ, ಅವರೆ ಕಾಯಿ, ಈರುಳ್ಳಿ ಬೆಳೆಯಬಹುದು. ಇದರಿಂದಾಗಿ ಮನೆಗೆ ಅಗತ್ಯ ತರಕಾರಿ ಕೊಳ್ಳುವುದು ಸಹ ತಪ್ಪಲಿದೆ. ಅಧಿಕ ಉತ್ಪಾದನೆಯ ತರಕಾರಿ ಮಾರಾಟದಿಂದ ರೈತರಿಗೆ ಆದಾಯವೂ ದೊರೆಯಲಿದೆ. ಹುಲ್ಲಿನ ಬೀಜ ಬಿತ್ತನೆಯಿಂದ ಜಾನುವಾರುಗಳಿಗೆ ಪೌಷ್ಠಿಕ ಹಸಿ ಮೇವು ಪೂರೈಕೆ ಮಾಡಲು ಸಹ ಸಾಧ್ಯವಾಗುತ್ತದೆ.
– ಕುಮಾರ ಪೂಜಾರ.
ತಾ.ಪಂ ಸಹಾಯಕ ನಿರ್ದೇಶಕರು.ನರೇಗಾ ಯೋಜನೆಯಡಿ ನೀರು ಮತ್ತು ಮಣ್ಣು ಸಂರಕ್ಷಣೆ ಕಾಮಗಾರಿಗಳನ್ನು ಅನುಷ್ಠಾನ ಮಾಡುವುದರೊಂದಿಗೆ ಗ್ರಾಮದ ಕೂಲಿಕಾರರಿಗೆ ಕೆಲಸ ಒದಗಿಸಿ, ಕುಟುಂಬ ನಿರ್ವಹಣೆ ಅರ್ಥಿಕ ಸಹಕಾರಿಯಾಗಲಿದೆ. ಜೊತೆಗೆ ಮಳೆಯ ನೀರು ವ್ಯರ್ಥವಾಗದಂತೆ ತಡೆಯುವುದರಿಂದ ಅಂತರ್ಜಲ ಪ್ರಮಾಣ ಕೂಡ ಹೆಚ್ಚಾಗಲಿದೆ.
– ಮಲ್ಲಯ್ಯ ಕೊರವನವರ.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ.ಅಂತರ್ಜಲ ಮಟ್ಟ ಏರಿಕೆ
ರೈತರಿಂದ ರೈತರಿಗಾಗಿ, ರೈತರಿಗೋಸ್ಕರ ಎಂಬ ಧೈಯ ವಾಕ್ಯದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ತಾಲೂಕಿನಲ್ಲಿ ನಿರೀಕ್ಷೆಗಿಂತಲೂ ಅಧಿಕವಾಗಿ ರೈತರ ಹೊಲದಲ್ಲಿ ಬದುಗಳನ್ನು ನಿರ್ಮಿಸಿ ದಾಖಲೆ ಮಾಡಲಾಗಿದೆ. ಇದರಿಂದ ಅಂರ್ತಜಲಮಟ್ಟ ವೃದ್ಧಿಗೊಳ್ಳುವ ಜೊತೆಗೆ ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗಿದೆ. ಮಣ್ಣಿನ ಸವಕಳಿ ನಿಯಂತ್ರಣ, ತೇವಾಂಶ ಹೆಚ್ಚಾಗುವುದರಿಂದ ಶೇ.10ರಿಂದ 15ರಷ್ಟು ಇಳುವರಿ ಹೆಚ್ಚಾಗಲಿದೆ. 10 ಅಡಿ ಉದ್ದ, 5 ಅಡಿ ಅಗಲ, 2 ಅಡಿ ಆಳದ ತಗ್ಗುಗಳನ್ನು ನಿರ್ಮಿಸಲಾಗುತ್ತಿದ್ದು, ಪ್ರತಿ ತಗ್ಗು ಸುಮಾರು 2,500 ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುತ್ತದೆ.