ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಹೆರಿಗೆ ನಡೆದ ಪರಿಣಾಮ ಬಾಣಂತಿ ಮತ್ತು ನವಜಾತ ಶಿಶು ಮೃತಪಟ್ಟಿರುವ ಘಟನೆ ಆಕ್ರೋಶಕ್ಕೆ ಕಾರಣವಾಗಿದೆ.
ಢವಳಾರ ಗ್ರಾಮದ ಮೈತ್ರಾ ಅವರನ್ನು ಮೊದಲು ಯಂಕಂಚಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಸಿಂದಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಯಿತು. ಕುಟುಂಬದವರ ಆರೋಪದಂತೆ, ಅಲ್ಲಿ ವೈದ್ಯರು ಲಭ್ಯವಿರಲಿಲ್ಲ. ನರ್ಸ್ಗಳೇ ಹೆರಿಗೆ ಮಾಡಿಸಿದ ವೇಳೆ ನವಜಾತ ಗಂಡು ಶಿಶು ಸಾವನ್ನಪ್ಪಿದೆ.
ಹೆರಿಗೆಯ ಬಳಿಕ ಮೈತ್ರಾಗೆ ಭಾರೀ ರಕ್ತಸ್ರಾವ ಉಂಟಾಗಿ ಸ್ಥಿತಿ ಗಂಭೀರಗೊಂಡಿತ್ತು. ತಕ್ಷಣ ವಿಜಯಪುರದ ಬಿಎಲ್ಡಿಇ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಲಾದರೂ, ಮಾರ್ಗಮಧ್ಯೆ ಅಂಬ್ಯುಲೆನ್ಸ್ನಲ್ಲೇ ಅವರು ಮೃತಪಟ್ಟಿದ್ದಾರೆ.
“ವೈದ್ಯರು ಕರ್ತವ್ಯದಲ್ಲಿದ್ದರೆ ನಮ್ಮ ಮಗಳು ಮತ್ತು ಮೊಮ್ಮಗ ಉಳಿಯುತ್ತಿದ್ದರು” ಎಂದು ಪೋಷಕರು ಕಣ್ಣೀರಿನಿಂದ ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿ ಆರೋಗ್ಯ ಇಲಾಖೆ ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಜಿಲ್ಲಾ ವೈದ್ಯಾಧಿಕಾರಿ ಸಂಪತ್ ಕುಮಾರ್, ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.



