ವಿಜಯಸಾಕ್ಷಿ ಸುದ್ದಿ, ಗದಗ: ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳ ಆರೈಕೆಯ ಸೇವೆಯಲ್ಲಿ ನರ್ಸಿಂಗ್ ಸಿಬ್ಬಂದಿಗಳ ಕಾರ್ಯ ಅನುಪಮವಾದುದು. ನಿರಂತರ ಕೆಲಸದ ವೈದ್ಯಕೀಯ ಕ್ಷೇತ್ರದಲ್ಲಿ ನರ್ಸಿಂಗ್ ಸಿಬ್ಬಂದಿಗಳು ಬೆನ್ನೆಲುಬಾಗಿ ಕಾರ್ಯ ಮಾಡುತ್ತಾರೆ. ಅವರ ಸೇವೆ ಅಭಿನಂದನಾರ್ಹ ಎಂದು ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ನುಡಿದರು.
ಗದುಗಿನ ಪುರದ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಪ್ರಥಮ ಜಿ.ಎನ್.ಎಂ ಬ್ಯಾಚ್‌ನ ವಿದ್ಯಾರ್ಥಿಗಳ ದೀಪದಾನ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಶ್ರದ್ಧೆ, ನಿಷ್ಠೆಯಿಂದ ಅಧ್ಯಯನ ಮಾಡಬೇಕು. ಆಳವಾದ ಪ್ರಾತ್ಯಕ್ಷಿಕ ಜ್ಞಾನ ಪಡೆದು ರೋಗಿಗಳ ಸೇವೆ ಮಾಡಬೇಕು. ನರ್ಸಿಂಗ್ ವೃತ್ತಿ ಪವಿತ್ರವಾದುದು. ರೋಗಿಗಳಲ್ಲಿ ದೇವರನ್ನು ಕಾಣಬೇಕು. ವೃತ್ತಿಯ ಬಗ್ಗೆ ಗೌರವ, ಅಭಿಮಾನ ಇರಿಸಿಕೊಳ್ಳಬೇಕು ಎಂದರು.
ಇನ್ನೋರ್ವ ಅತಿಥಿ ಡಾ. ಜಿ.ಬಿ. ಪಾಟೀಲ ಮಾತನಾಡುತ್ತ, ನರ್ಸಿಂಗ್ ಶಿಕ್ಷಣವು ವೃತ್ತಿ ಕೌಶಲ್ಯದೊಂದಿಗೆ ಬೆಳೆಸಿಕೊಂಡ ಅನುಭವಿಕರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ಬೇಡಿಕೆ ಇದೆ ಎಂದರು.
ಪ್ರಾಚಾರ್ಯರಾದ ಸಿಬಿಲ್ ನಿಲೂಗಲ್ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧನೆ ಮಾಡಿದರು. ವೇದಿಕೆ ಮೇಲಿನ ಗಣ್ಯರು ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿದರು. ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಎಸ್.ವಿ. ಚರಂತಿಮಠ, ಡಾ. ಸುರೇಶ ಅಂಗಡಿ, ಜಯಶ್ರೀ ಪುರದ, ಸವಿತಾ ಸವಡಿ ಉಪಸ್ಥಿತರಿದ್ದರು.
ಸಂಸ್ಥೆಯ ಚೇರಮನ್ ನಿರ್ಮಲಾ ಈಶ್ವರ ಸವಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪೂರ್ವಿತಾ ಪುರದ ಹಾಗೂ ಡಾ. ಕಾವ್ಯ ಪುರದ ಪಾರಿತೋಷಕ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಡಾ. ಉಮೇಶ ವೀ.ಪುರದ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು. ಚೈತ್ರಾ ಹಾಗೂ ಸಹನಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಕರುಣಾ ವಂದನಾರ್ಪಣೆಗೈದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ದೇಶದಲ್ಲಿ ಪ್ರತಿ ಒಂದು ಸಾವಿರ ಜನರಿಗೆ ಮೂರು ಜನ ನರ್ಸಿಂಗ್ ಸಿಬ್ಬಂದಿಗಳ ಸೇವೆ ಅವಶ್ಯವಿದೆ. ಇದರ ಪೂರೈಕೆಗಾಗಿ ಇನ್ನೂ ಹೆಚ್ಚು ಕಾಲೇಜುಗಳು ಬರಬೇಕು. ಕೊರೋನಾ ಸಂದರ್ಭದಲ್ಲಿನ ನರ್ಸಿಂಗ್ ಸೇವೆಯನ್ನು ಎಂದೂ ಮರೆಯಲಾಗದು ಎಂದು ಎಸ್.ವಿ. ಸಂಕನೂರ ನುಡಿದರು.