ಗದಗ:- ದೇವಸ್ಥಾನದ ಜೀರ್ಣೋದ್ಧಾರದ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಚಕರು ಹಾಗೂ ಪಾರುಪತ್ತೆದಾರರಿಂದ ವಿರೋಧ ವ್ಯಕ್ತಪಡಿಸಿದ ಘಟನೆ ಗದಗದಲ್ಲಿ ಜರುಗಿದೆ.
ಇಲ್ಲಿನ ಗದುಗಿನ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರದ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಚಕರು ಹಾಗೂ ಪಾರುಪತ್ತೆದಾರರಿಗೆ ಮಾಹಿತಿ ನೀಡದೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಕಾಮಗಾರಿ ನಡೆಸಿದ್ದಾರೆ ಎಂದು ಕೆಲಕಾಲ ಮಾತಿನ ಚಕಮಕಿ ನಡೆದಿದೆ.
ಇತಿಹಾಸ ಪ್ರಸಿದ್ಧ ವೀರನಾರಾಯಣ ದೇವಸ್ಥಾನದ ಪುನಃ ಸ್ಥಾಪನೆ ಕಾಮಗಾರಿ ನಡೆಸಲಾಗುತ್ತದೆ.
ದೇವಸ್ಥಾನದ ಐತಿಹಾಸಿಕ ಕಂಬಗಳ ಜೊತೆಗೆ ಅಂಟಿಸಿಕೊಂಡು ಅರ್ಚಕರು ಕಟ್ಟಿಸಿದ್ದ ಗೋಡೆಯನ್ನು ಸುತ್ತಿಗೆ ಹಾಗೂ ಡ್ರಿಲ್ಲಿಂಗ್ ಮಷಿನ್ ಗಳ ಮೂಲಕ ಪ್ರವಾಸೋದ್ಯಮ ಇಲಾಖೆ ಧ್ವಂಸ ಮಾಡುತ್ತಿದೆ. ಮೂಲ ಸ್ವರೂಪದಲ್ಲಿಯೇ ದೇವಸ್ಥಾನ ಇರಬೇಕು ಅಂತ ಗೋಡೆ ಕೆಡವಲಾಗುತ್ತಿದೆ.
ಇದೇ ವೇಳೆ ಅರ್ಚಕರು, ನಾವೇ ಜೀರ್ಣೋದ್ಧಾರ ಮಾಡಿಕೊಳ್ಳುತ್ತೇವೆ ನಿಮ್ಮ ಅನುದಾನ ಅವಶ್ಯಕತೆ ಇಲ್ಲ ಅಂತ ಪಟ್ಟು ಹಿಡಿದಿದ್ದಾರೆ. ವಂಶಪಾರಂಪರ್ಯವಾಗಿ ದೇವಸ್ಥಾನದ ಪೂಜೆ ಪುನಸ್ಕಾರ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮದು ಒಂದೂ ಮಾತೂ ಕೇಳದೇ ನಮಗೆ ಯಾವುದೇ ನೋಟಿಸ್ ಕೂಡ ಕೊಡದೇ ದೇವಸ್ಥಾನದ ಗೋಡೆ ದ್ವಂಸ ಮಾಡುತ್ತಿದ್ದಾರೆ.
ಸದ್ಯ ದೀಪಾವಳಿ ಹಬ್ಬದ ಪೂಜೆ ಪುನಸ್ಕಾರಕ್ಕೂ ಅಡ್ಡಿ ಪಡಿಸಿದ್ದಾರೆ. ಇದರಿಂದ ಇಲ್ಲಿನ ಭಕ್ತರಿಗೆ ಹಾಗೂ ಎಲ್ಲಾ ಅರ್ಚಕರಿಗೂ ತುಂಬಾ ನೋವು ತಂದಿದೆ ಅಂತ ಅಸಮಾಧಾನ ಹೊರ ಹಾಕಿದ್ದಾರೆ.
ಇನ್ನೂ ಪ್ರವಾಸೋದ್ಯಮ ಇಲಾಖೆಯು, ಪೊಲೀಸರ ಸರ್ಪಗಾವಲಿನಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಂದಾಗಿದೆ.
ಕ್ರಿಸ್ತಶಕ 1117 ರಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನ್ ಈ ದೇವಸ್ಥಾನ ನಿರ್ಮಿಸಿದ್ದು, ಕಾಲಕ್ರಮೇಣ ಟೈಲ್ಸ್, ಕಾಂಕ್ರೀಟ್ ಗೋಡೆ ನಿರ್ಮಾಣ ಮಾಡಲಾಗಿದೆ.