ಹಾಸನ: ನಮ್ಮದು ನುಡಿದಂತೆ ನಡೆವ ಸರ್ಕಾರ. ಕೊಟ್ಟ ಮಾತಿನಂತೆ 142 ಭರವಸೆಗಳನ್ನು ಈಗಾಗಲೇ ಈಡೇರಿಸಿದೆ. ನಮ್ಮ ಸರ್ಕಾರದ ಸಾಧನೆಗಳಿಗೆ ಜನರ ಕಣ್ಣುಗಳೇ ಸಾಕ್ಷಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಹಾಸನದಲ್ಲಿ ಶನಿವಾರ ನಡೆದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.
“ದೇವರು ವರ ಹಾಗೂ ಶಾಪ ಎರಡನ್ನೂ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಈ ಅವಕಾಶದಲ್ಲಿ ಜನರ ಹೃದಯ ಗೆಲ್ಲಲು ಅನೇಕ ಯೋಜನೆ, ಕಾರ್ಯಕ್ರಮ ರೂಪಿಸಿದ್ದೇವೆ. ಬೆಲೆ ಏರಿಕೆಯಿಂದ ಆರ್ಥಿಕವಾಗಿ ತೊಂದರೆ ಅನುಭವಿಸಿದ್ದ ನಿಮಗೆ ಉಚಿತ ಬಸ್ ಪ್ರಯಾಣ, 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಬಡ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ, 10 ಕೆ.ಜಿ ಅಕ್ಕಿ, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ನಾವು ಪಕ್ಷಬೇಧ ಮಾಡದೆ ಯೋಜನೆ ನೀಡುತ್ತಿದ್ದೇವೆ” ಎಂದು ವಿವರಿಸಿದರು.
“ನಮ್ಮಯೋಜನೆಗಳ ಬಗ್ಗೆ ಕೆಲವರು ಟೀಕೆ ಮಾಡುತ್ತಾರೆ. ನಾನು ಅವರಿಗೆ ಉತ್ತರವಾಗಿ ಒಂದು ಉದಾಹರಣೆ ನೀಡುತ್ತೇನೆ. ಅಕ್ಬರ್ ಸತ್ಯಕ್ಕೂ ಸುಳ್ಳಿಗೂ ಇರುವ ಅಂತರವೆಷ್ಟು ಎಂದು ಕೇಳುತ್ತಾನೆ. ಅದಕ್ಕೆ ಬೀರ್ ಬಲ್, ಕೇವಲ ನಾಲ್ಕು ಬೆರಳುಗಳ ಅಂತರ ಸ್ವಾಮಿ, ಈ ಕಣ್ಣಲ್ಲಿ ನೋಡುವುದು ಸತ್ಯ, ಕಿವಿಯಲ್ಲಿ ಕೇಳುವುದು ಸುಳ್ಳು. ಈ ಕಣ್ಣು ಹಾಗೂ ಕಿವಿಯ ಮಧ್ಯೆ ಇರುವುದು ನಾಲ್ಕು ಬೆರಳಿನ ಅಂತರ ಎಂದು ವಿವರಿಸುತ್ತಾರೆ. ಹೀಗಾಗಿ ನಮ್ಮ ಸರ್ಕಾರದ ಕೆಲಸಗಳನ್ನು ಜನರು ಕಣ್ಣಾರೆ ಕಾಣುತ್ತಿದ್ದಾರೆಯೇ ಹೊರತು ಕೇವಲ ಕಿವಿಯಲ್ಲಿ ಕೇಳುತ್ತಿಲ್ಲ” ಎಂದು ವಿವರಿಸಿದರು.
“ಇದು ಅಭಿವೃದ್ಧಿಯ ಸರ್ಕಾರ. ಸರ್ವರಿಗೂ ಸಮಪಾಲು, ಸಮಬಾಳು, ಸರ್ವರಿಗೂ ನೆಮ್ಮದಿ, ಸರ್ವರಿಗೂ ಅಭಿವೃದ್ಧಿ ನೀಡುವ ಸರ್ಕಾರ ನಮ್ಮದು. ನಾವು ಒಂದು ನಿಮಿಷದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಒಂದು ನಿಮಿಷದಲ್ಲಿ ಜನರ ಅಭಿವೃದ್ಧಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು. ನಾವು ಅದರಂತೆ ಕೆಲಸ ಮಾಡುತ್ತಿದ್ದೇವೆ” ಎಂದರು.
“ತಾಯಿ ಹಾಸನಾಂಬೆ ದೇವಿಗೆ ನಮಿಸಲು ನಾನು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಈ ಜಿಲ್ಲೆಗೆ ಬಂದಿದ್ದೆವು. ಕೃಷ್ಣ ಬೈರೇಗೌಡರು ಈ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ನಂತರ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಜನರು ಬಂದು ದೇವಿ ದರ್ಶನ ಪಡೆದಿದ್ದಾರೆ. ಎರಡು ಮೂರು ತಿಂಗಳ ಹಿಂದೆ ಅರಸೀಕೆರೆಗೆ ಹೋದಾಗ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ದರ್ಶನ ಮಾಡುವ ಭಾಗ್ಯ ದೊರೆತಿತ್ತು” ಎಂದರು.
“ನಾವು ಹುಟ್ಟುವಾಗ ಖಾಲಿ ಕೈಯಲ್ಲಿ ಬರುತ್ತೇವೆ. ಹೋಗುವಾಗ ಪಾಪ ಪುಣ್ಯಗಳೊಂದಿಗೆ ಹೋಗುತ್ತೇವೆ. ಅದೇ ರೀತಿ ನಮ್ಮ ಸರ್ಕಾರ ಪ್ರತಿ ಹಂತದಲ್ಲೂ ಸಾಕ್ಷಿಗುಡ್ಡೆ ಬಿಟ್ಟು ಹೋಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಬಂದಾಗ ನಾನು ಒಂದು ಮಾತು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು. ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ” ಎಂದರು.
ಜನರ ಜೇಬಿಗೆ 1 ಲಕ್ಷ ಕೋಟಿ ಹಾಕಿದ್ದೇವೆ
“ನಮ್ಮ ಸರ್ಕಾರ ಗ್ಯಾರಂಟಿ ರೂಪದಲ್ಲಿ 1 ಲಕ್ಷ ಕೋಟಿ ಹಣವನ್ನು ಜನರ ಜೇಬಿಗೆ ಹಾಕಿದೆ. ರೈತರ ಪಂಪ್ ಸೆಟ್ ಗೆ ನೀಡಲಾಗುವ ಉಚಿತ ವಿದ್ಯುತ್ ಗೆ ಸರ್ಕಾರ 20 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಇಂದಿರಾ ಗಾಂಧಿ ಅವರ ಕಾಲದಲ್ಲಿ ಪಿಂಚಣಿ ಯೋಜನೆ, ಉಳುವವನಿಗೆ ಭೂಮಿ, ಅರಣ್ಯ ಭೂಮಿ ಸಕ್ರಮ ಸೇರಿದಂತೆ ಅನೇಕ ಯೋಜನೆ ನೀಡಿದೆವು. ಸಿಎಂ ಹಾಗೂ ನನ್ನ ಪಕ್ಷ ನನಗೆ ನೀರಾವರಿ ಇಲಾಖೆ ಜವಾಬ್ದಾರಿ ನೀಡಿದೆ. ಈ ಹಿಂದೆ ಹಾಸದ ಜಿಲ್ಲಾಧಿಕಾರಿ ಹಾಗೂ ಎಸ್ ಪಿಗೆ ಈ ಇಬ್ಬರೂ ಹೆಣ್ಣುಮಕ್ಕಳಿಗೆ ನಾನು ಅಭಿನಂದನೆ ಸಲ್ಲಿಸಲೇ ಬೇಕು. ಇಂದು ಎತ್ತಿನಹೊಳೆ ನೀರು ಆಚೆ ಬರಲು ಈ ಇಬ್ಬರು ಅಧಿಕಾರಿಗಳು ಕೊಟ್ಟ ಸಹಕಾರ ಕಾರಣ. ಅದನ್ನು ನಾನು ಮರೆಯಲು ಸಾಧ್ಯವಿಲ್ಲ” ಎಂದು ಶ್ಲಾಘಿಸಿದರು.


