Home Blog Page 10

ಬೆಂಗಳೂರು| ನಿಯಮ ಉಲ್ಲಂಘಿಸಿದ 89 ಪಿಜಿಗಳಿಗೆ ದಂಡ, 19 ಕಿಚನ್‌ಗಳಿಗೆ ಬೀಗ

0

ಬೆಂಗಳೂರು:- ಬೆಂಗಳೂರು ದಕ್ಷಿಣ ನಗರಪಾಲಿಕೆ ಅಧಿಕಾರಿಗಳು ನಿಯಮ ಪಾಲಿಸದ ಪೇಯಿಂಗ್‌ ಗೆಸ್ಟ್‌ ವಸತಿಗೃಹಗಳ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸಿದ್ದಾರೆ.

ಒಟ್ಟು 89 ಪಿಜಿಗಳಿಗೆ 61 ಸಾವಿರ ರೂಪಾಯಿ ದಂಡ ವಿಧಿಸಲಾಗಿದ್ದು, 19 ಪಿಜಿಗಳ ಅಡುಗೆ ಕೋಣೆಗಳಿಗೆ ಬೀಗ ಜಡಿಸಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪರಿಶೀಲನೆ ವೇಳೆ ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಅಡುಗೆ ಕೋಣೆ ನೈರ್ಮಲ್ಯ, ಸುರಕ್ಷತೆ, ಶೌಚಾಲಯ ವ್ಯವಸ್ಥೆ, ಅಗ್ನಿಶಾಮಕ ಸಾಧನಗಳು, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ ನೀಡುವ ಆಹಾರ ಸುರಕ್ಷತಾ ಪ್ರಮಾಣಪತ್ರ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಲಾಯಿತು.

ಅನೇಕ ಪಿಜಿಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿ ದಂಡ ವಿಧಿಸಲಾಗಿದೆ.

ಪ್ರದೇಶವಾರು ವಿವರ:

ಪದ್ಮನಾಭನಗರ – 3 ಪಿಜಿ ತಪಾಸಣೆ – ₹5,000 ದಂಡ.

ಜಯನಗರ – 13 ಪಿಜಿ ತಪಾಸಣೆ – ₹11,000 ದಂಡ – 3 ಪಿಜಿ ಕಿಚನ್‌ಗೆ ಬೀಗ.

ಬೆಂಗಳೂರು ದಕ್ಷಿಣ – 18 ಪಿಜಿ ತಪಾಸಣೆ – ₹9,000 ದಂಡ – 4 ಪಿಜಿ ಕಿಚನ್‌ಗೆ ಬೀಗ.

ಬಿಟಿಎಂ ಲೇಔಟ್ – 24 ಪಿಜಿ ಪರಿಶೀಲನೆ – 3 ಪಿಜಿ ಕಿಚನ್‌ಗೆ ಬೀಗ.

ಬೊಮ್ಮನಹಳ್ಳಿ – 32 ಪಿಜಿ ಪರಿಶೀಲನೆ – ₹39,000 ದಂಡ –
9 ಪಿಜಿ ಕಿಚನ್‌ಗೆ ಬೀಗ.

ಒಟ್ಟು 89 ಪಿಜಿಗಳಿಗೆ ದಂಡ ವಿಧಿಸಲಾಗಿದ್ದು, 19 ಪಿಜಿ ಅಡುಗೆ ಕೋಣೆಗಳಿಗೆ ಬೀಗ ಜಡಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವೈರಲ್ ಕುಂಭಮೇಳ ಸುಂದರಿ ಮೊನಾಲಿಸಾ: ಮೊದಲ ಸಿನಿಮಾದ ಸಂಭಾವನೆ ಹುಡುಗಿಯರ ಶಿಕ್ಷಣಕ್ಕೆ ಸಮರ್ಪಣೆ!

ಮಹಾ ಕುಂಭಮೇಳದಲ್ಲಿ ಹೂಮಾಲೆ ಮಾರಾಟ ಮಾಡುತ್ತಿದ್ದ ಯುವತಿ, ಇಂದು ಸಿನಿರಂಗದಲ್ಲಿ ಅವಕಾಶಗಳ ಮಳೆಗೊಳಗಾಗಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿಸಿದ ಮೊನಾಲಿಸಾ ಈಗ ಚಲನಚಿತ್ರ ಮತ್ತು ಜಾಹೀರಾತು ಕ್ಷೇತ್ರದಲ್ಲಿ ನಿರಂತರವಾಗಿ ಶೂಟಿಂಗ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕೈಯಲ್ಲಿ ಮೂರು ಸಿನಿಮಾಗಳಿರುವ ಮೊನಾಲಿಸಾ, ‘ದಿ ಡೈರಿ ಆಫ್ ಮಣಿಪುರ’ ಮೂಲಕ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. ಈ ಚಿತ್ರ ಮೊದಲ ಬಿಡುಗಡೆಯಾಗಲಿದ್ದು, ಚಿತ್ರೀಕರಣ ಈಗ ನಡೆಯುತ್ತಿದೆ. ಅಭಿಮಾನಿಗಳಲ್ಲಿ ಅವರ ಡೆಬ್ಯೂ ಸಿನಿಮಾಗೆ ಹೆಚ್ಚಿನ ನಿರೀಕ್ಷೆ ಇದೆ.

ಇತ್ತೀಚೆಗೆ ಪ್ರಯಾಗರಾಜ್‌ಗೆ ಭೇಟಿ ನೀಡಿದ ಅವರು ಗಂಗಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಕುಂಭಮೇಳದ ದಿನಗಳನ್ನು ನೆನೆದು ಅವರು ಭಾವುಕರಾದ ಕ್ಷಣಗಳು ವೈರಲ್ ಆಗಿವೆ. ಆದರೆ ಅದಕ್ಕಿಂತ ಹೆಚ್ಚು ಚರ್ಚೆಗೆ ಕಾರಣವಾದದ್ದು ಅವರ ಸಮಾಜಮುಖಿ ನಿರ್ಧಾರ.

ಮೊದಲ ಸಿನಿಮಾದ ಸಂಭಾವನೆಯನ್ನು ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಹುಡುಗಿಯರಿಗಾಗಿ ಶಾಲೆ ಆರಂಭಿಸಲು ಬಳಸುವ ನಿರ್ಧಾರವನ್ನು ಮೊನಾಲಿಸಾ ಘೋಷಿಸಿದ್ದಾರೆ. “ಹೆಣ್ಣುಮಕ್ಕಳ ಶಿಕ್ಷಣವೇ ಸಮಾಜದ ನಿಜವಾದ ಬದಲಾವಣೆ. ಅವಕಾಶಗಳಿಲ್ಲದೆ ಹಲವರು ಹಿಂದುಳಿದಿದ್ದಾರೆ. ನನ್ನ ಆದಾಯವನ್ನು ವೈಯಕ್ತಿಕ ಸುಖಕ್ಕೆ ಅಲ್ಲ, ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಬಳಸುತ್ತೇನೆ” ಎಂಬ ಅವರ ಮಾತುಗಳು ಜನಮನ ಗೆದ್ದಿವೆ.

ವೈರಲ್ ಫೇಮ್‌ನಿಂದ ಸಮಾಜಮುಖಿ ಚಿಂತನೆವರೆಗೆ – ಮೊನಾಲಿಸಾ ಇದೀಗ ಕೇವಲ ಸುಂದರಿ ಅಲ್ಲ, ಬದಲಾವಣೆಯ ಸಂಕೇತವಾಗಿ ಹೊರಹೊಮ್ಮುತ್ತಿದ್ದಾರೆ. ಅವರ ಈ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಉದಯಪುರದಲ್ಲಿ ಸ್ಟಾರ್ ಮದುವೆ? ₹60 ಕೋಟಿ OTT ಡೀಲ್ ತಿರಸ್ಕಾರದಿಂದ ವಿಜಯ್–ರಶ್ಮಿಕಾ ಮತ್ತೆ ಟ್ರೆಂಡಿಂಗ್!

ಸಿನಿರಂಗದ ಹಾಟ್ ಟಾಪಿಕ್ ಇದೀಗ ಒಂದೇ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ವೈಭವಶಾಲಿ ವಿವಾಹ ನಡೆಯಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಿದ್ಧತೆಗಳು ಆರಂಭಗೊಂಡಿವೆ ಎನ್ನುವ ಕೆಲವು ದೃಶ್ಯಗಳು ವೈರಲ್ ಆಗಿವೆ.

ಈ ಚರ್ಚೆಯ ನಡುವೆ ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಅಂತಾರಾಷ್ಟ್ರೀಯ OTT ದೈತ್ಯ Netflix, ಮದುವೆಯ ಎಕ್ಸ್‌ಕ್ಲೂಸಿವ್ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ₹60 ಕೋಟಿ ಆಫರ್ ನೀಡಿದೆಯೆಂದು ವರದಿಯಾಗಿದೆ. ಸೆಲೆಬ್ರಿಟಿಗಳ ವೈಯಕ್ತಿಕ ಕ್ಷಣಗಳನ್ನು ಜಾಗತಿಕ ಡಿಜಿಟಲ್ ಕಂಟೆಂಟ್ ಆಗಿ ಪರಿವರ್ತಿಸುವ OTT ತಂತ್ರದ ಭಾಗವಾಗಿಯೇ ಈ ಪ್ರಸ್ತಾಪ ಬಂದಿತ್ತು ಎನ್ನಲಾಗಿದೆ.

ಆದರೆ, ದಂಪತಿ ಈ ಆಫರ್‌ಗೆ ಸ್ಪಷ್ಟ ನಿರಾಕರಣೆ ನೀಡಿದ್ದಾರೆ. “ವಿವಾಹ ನಮ್ಮ ಖಾಸಗಿ ಕ್ಷಣ. ಅದನ್ನು ಕಮರ್ಷಿಯಲ್ ಕಂಟೆಂಟ್ ಆಗಿ ರೂಪಿಸುವ ಉದ್ದೇಶ ಇಲ್ಲ” ಎಂಬ ನಿಲುವು ಅವರು ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಒಮ್ಮೆ ಸ್ಟ್ರೀಮಿಂಗ್ ಹಕ್ಕು ನೀಡಿದರೆ ಅನೇಕ ಕಾನೂನು ಷರತ್ತುಗಳು, ಚಿತ್ರೀಕರಣದ ನಿಯಂತ್ರಣ ಹಾಗೂ ಅತಿಥಿಗಳ ಮೇಲೆ ನಿಯಮಗಳು ಅನಿವಾರ್ಯವಾಗುತ್ತವೆ. ಈ ಹಿನ್ನೆಲೆ ₹60 ಕೋಟಿ ಮೊತ್ತವೂ ಅವರ ನಿರ್ಧಾರವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ.

ಹಿಂದೆ ನಯನತಾರಾ-ವಿಘ್ನೇಶ್ ಶಿವಂ ವಿವಾಹದ ಸ್ಟ್ರೀಮಿಂಗ್ ಹಕ್ಕುಗಳನ್ನು Netflix ಪಡೆದುಕೊಂಡು ಸಾಕ್ಷ್ಯಚಿತ್ರವಾಗಿ ಬಿಡುಗಡೆ ಮಾಡಲಾಗಿತ್ತು. ಆದರೆ ಕಾನೂನು ವಿವಾದಗಳು ಮತ್ತು ವಿಳಂಬ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ಅನುಭವವೂ ವಿಜಯ್–ರಶ್ಮಿಕಾ ನಿರ್ಧಾರದಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನಲಾಗುತ್ತಿದೆ.

ಉದಯಪುರ ಅರಮನೆ ಮದುವೆ ವದಂತಿ ಅಧಿಕೃತವಾಗುತ್ತದೆಯೇ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಒಂದು ವಿಷಯ ಸ್ಪಷ್ಟ – ಈ ಸ್ಟಾರ್ ಜೋಡಿ ತಮ್ಮ ಖಾಸಗಿತನದ ವಿಚಾರದಲ್ಲಿ ಯಾವುದೇ ರಾಜಿ ಮಾಡಲು ಸಿದ್ಧರಿಲ್ಲ.

ತುಮಕೂರಿನಲ್ಲಿ ಹೃದಯ ವಿದ್ರಾವಕ ಘಟನೆ; ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಉಸಿರುಗಟ್ಟಿಸಿ ಕೊಂದ ಮಗಳು!

0

ತುಮಕೂರು:- ನಗರದ ಶ್ರೀನಗರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ.

ಹೆತ್ತ ತಾಯಿಯನ್ನೇ ಮಗಳು ಉಸಿರುಗಟ್ಟಿಸಿ ಕೊಂದಿರುವ ಪ್ರಕರಣ ಸಂಚಲನ ಮೂಡಿಸಿದೆ.
55 ವರ್ಷದ ಪುಷ್ಪಲತಾ ಮೃತ ದುರ್ದೈವಿ. 35 ವರ್ಷದ ಸುಚಿತ್ರಾ ತನ್ನ ತಾಯಿಯನ್ನು ಹತ್ಯೆ ಮಾಡಿದ ಮಗಳು. ಪುಷ್ಪಲತಾ ಹೆಸರಲ್ಲಿ ಮನೆ ಹಾಗೂ ಬ್ಯಾಂಕ್ ಖಾತೆಯಲ್ಲಿ ಸುಮಾರು 40 ಲಕ್ಷ ರೂಪಾಯಿ ಇದ್ದು, ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇದೇ ವೇಳೆ ಕೊಲೆಗೆ ಮತ್ತೊಂದು ಕಾರಣವೂ ಇರಬಹುದೆಂದು ತನಿಖೆಯಲ್ಲಿ ತಿಳಿದುಬಂದಿದೆ. ಸುಮಾರು ಒಂದೂವರೆ ವರ್ಷದ ಹಿಂದೆ ಸುಚಿತ್ರಾಳ ತಂದೆ ನಿಧನರಾಗಿದ್ದರು. ತಾಯಿಯೇ ಮಾಟ–ಮಂತ್ರ ಮಾಡಿಸಿ ತಂದೆಯನ್ನು ಕೊಂದಿದ್ದಾಳೆ ಎಂದು ಜ್ಯೋತಿಷಿಯೊಬ್ಬ ಹೇಳಿದ್ದನೆಂಬ ಮಾಹಿತಿ ಲಭ್ಯವಾಗಿದೆ. ಆ ಮಾತುಗಳನ್ನು ನಂಬಿದ ಸುಚಿತ್ರಾ ಈ ಕೃತ್ಯಕ್ಕೆ ಕೈ ಹಾಕಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಪ್ರಕರಣ ಸಂಬಂಧ ಸುಚಿತ್ರಾ ಹಾಗೂ ಅವಳಿಗೆ ಸಹಕಾರ ನೀಡಿದ ಗಂಡ ಸುರೇಶ್ ಅವರನ್ನು ಕ್ಯಾತಸಂದ್ರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಮುಂದುವರಿದಿದೆ.

ಹೊಸಕೋಟೆ| ಕ್ಯಾಂಟರ್‌-ಬೈಕ್‌-ಕಾರು ಡಿಕ್ಕಿ; ಸರಣಿ ಅಪಘಾತಕ್ಕೆ 7 ಮಂದಿ ದುರ್ಮರಣ!

0

ಬೆಂಗಳೂರು:- ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ಇಂದು ಬೆಳಗಿನ ಜಾವ ಭೀಕರ ಸರಣಿ ಅಪಘಾತ ಸಂಭವಿಸಿ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್‌, ಬೈಕ್‌ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಹಾಗೂ ಬೈಕ್‌ ಸವಾರ ಸೇರಿ ಒಟ್ಟು ಏಳು ಮಂದಿ ಜೀವ ಕಳೆದುಕೊಂಡಿದ್ದಾರೆ.

ಅಪಘಾತಕ್ಕೀಡಾದ ಕಾರು ಹೊಸಕೋಟೆಯಿಂದ ದೇವನಹಳ್ಳಿ ಮಾರ್ಗವಾಗಿ ಬರುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದ ಆರು ಮಂದಿ ಹಾಗೂ ಬೈಕ್ ಸವಾರ ಸಾವನ್ನಪ್ಪಿದ್ದು, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹಗಳನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹುಬ್ಬಳ್ಳಿ| ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಲಾರಿ!

0

ಹುಬ್ಬಳ್ಳಿ: ನಗರದ ಗಿರಣಿ ಚಾಳ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ಲಾರಿ ಪಲ್ಟಿಯಾದ ಘಟನೆ ನಡೆದಿದೆ. ಎದುರು ಬರುತ್ತಿದ್ದ ವಾಹನವನ್ನು ತಪ್ಪಿಸಲು ಯತ್ನಿಸಿದ ವೇಳೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಉರುಳಿದೆ.

ಬೆಳಗ್ಗಿನ ಸಮಯದಲ್ಲಿ ಸಂಭವಿಸಿದ ಈ ಅವಘಡದಲ್ಲಿ ದೊಡ್ಡ ಅನಾಹುತ ತಪ್ಪಿದೆ. ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದ ಬಳಿಕ ಲಾರಿಯನ್ನು ಸ್ಥಳದಿಂದ ತೆರವುಗೊಳಿಸಲಾಗಿದ್ದು, ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಗದಗ ಜಿಲ್ಲಾ ಬ್ಯಾಂಕ್ ನೌಕರರಿಂದ ಮುಷ್ಕರ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗಾಂಧಿ ಸರ್ಕಲ್ ಹತ್ತಿರದಲ್ಲಿ ಕೆನರಾ ಬ್ಯಾಂಕ್ ಎದುರು ಗದಗ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಹನುಮೇಶ್ ಎಂ.ಗಂಗರಾಹುತರ, ಅಧ್ಯಕ್ಷರಾದ ಕಾಮ್ರೆಡ್ ವಾಯ್.ಎಸ್. ನಾಯಕ್ ಇವರ ನೇತೃತ್ವದಲ್ಲಿ ಬ್ಯಾಂಕ್ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಿದರು.

ಕಾರ್ಮಿಕ ವಿರೋಧಿ ನೀತಿಯನ್ನು ಹೊಂದಿರುವ 4 ಕಾರ್ಮಿಕ ನೀತಿ ಸಂಹಿತೆಗಳನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದುಕೊಳ್ಳಬೇಕು, ಎಲ್ಲ ಇಲಾಖೆಗಳಲ್ಲಿ ಎಲ್ಲ ವರ್ಗದ ಹುದ್ದೆಗಳ ಅಗತ್ಯ ನೇಮಕಾತಿಯನ್ನು ಮಾಡಲೇಬೇಕು, ವಿಮಾ ಕಂಪನಿಗಳ ಖಾಸಗೀಕರಣ ಬೇಡ, ಸಾರ್ವತ್ರಿಕ ಬ್ಯಾಂಕುಗಳ ಖಾಸಗೀಕರಣ ಬೇಡ, ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಇವೇ ಮುಂತಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಮುಷ್ಕರದಲ್ಲಿ ಬ್ಯಾಂಕ್ ನೌಕರರ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಹನುಮೇಶ್ ಎಂ.ಗಂಗರಾಹುತರ, ಅಧ್ಯಕ್ಷರಾದ ಕಾಮ್ರೆಡ್ ವಾಯ್.ಎಸ್. ನಾಯಕ್, ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಮುಖಂಡರಾದ ಕಾಮ್ರೆಡ್ ಪ್ರವೀಣ್ ಅಣ್ಣಿಗೇರಿ, ಕಾಮ್ರೇಡ್ ರಮ್ಯ, ವಿಮಾ ನೌಕರರ ಸಂಘದ ಮುಖಂಡರಾದ ಕಾಮ್ರೆಡ್ ಜೆ.ಎಸ್. ತಳವಾರ, ಕಾಮ್ರೆಡ್ ವಿ.ಕೆ. ಮುದ್ಗಲ್‌ಮಠ, ಕಾಮ್ರೆಡ್ ಮಂಜುನಾಥ್ ದೊಡ್ಮನಿ, ಕಾಮ್ರೆಡ್ ಸಿದ್ದು ಉಮಚಗಿ, ಕಾಮ್ರೆಡ್ ವಿಜಯ್, ವಿನೋದ್ ಹೊಸೂರ, ಹರೀಶ್ ಬಾಗಲಕೋಟೆ, ದೀಪಕ್ ಕೊಲ್ಲಾಪುರಿ, ರಾಜು ಸಿಂಗಾಡಿ, ಕಾಮ್ರೆಡ್ ಅಶೋಕ್ ಗೌಡರ, ಕಾಮ್ರೆಡ್ ಸಿದ್ದನಗೌಡ, ಕಾಮ್ರೆಡ್ ಕೃಷ್ಣವೇಣಿ, ಕಾಮ್ರೆಡ್ ಸತ್ಯವ್ವ ಮೇಲ್ಮನಿ, ಕಾಮ್ರೆಡ್ ಜೊತ್ಸ್ನಾ ಟಿ, ಕಾಮ್ರೆಡ್ ಮಣಿಕಂಠ, ಕಾಮ್ರೆಡ್ ವಿಕ್ರಂ ಬಲೇರಿ, ಕಾಮ್ರೆಡ್ ಶ್ರೀಕಾಂತ್, ಕಾಮ್ರೆಡ್ ಮಧು, ಕಾಮ್ರೆಡ್ ಸತೀಶ್ ಪಾಲ್ಗೊಂಡಿದ್ದರು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಹನುಮೇಶ್ ಎಂ.ಗಂಗರಾಹುತರ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

“ಮತದಾರರಿಲ್ಲದ, ಕಾನೂನುಬಾಹಿರ ಚುನಾವಣೆಯನ್ನು ರದ್ದು ಮಾಡಬೇಕು”; ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ!

0

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಇಂದಿನ ಚುನಾವಣೆಗಳನ್ನು ಸಂವಿಧಾನಬಾಹಿರ ಮತ್ತು ಕಾನೂನುಬಾಹಿರ ಎಂದು ಆರೋಪಿಸಿದ್ದಾರೆ.

ಅಲ್ಲದೇ ಮತದಾರರಿಲ್ಲದ, ಕಾನೂನುಬಾಹಿರ ಹಾಗೂ ಸಂವಿಧಾನಬಾಹಿರ ಚುನಾವಣೆಯನ್ನು ರದ್ದುಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ. ಮತ್ತು ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿರುವುದನ್ನು ಕೂಡ ಒಪ್ಪಿದ್ದಾರೆ. ಅವಾಮಿ ಲೀಗ್‌ ಇಲ್ಲದೆ, ಜನರ ಮತದಾನದ ಹಕ್ಕುಗಳನ್ನು ಕಳೆದುಕೊಂಡಂತೆ ನಡೆಸಲಾದ ಚುನಾವಣೆ ಅಸಂವಿಧಾನಬಾಹಿರವಾಗಿದೆ. ಅಲ್ಲದೇ ಸರ್ಕಾರದ ಅಡಿಯಲ್ಲಿ ನಡೆದ ಬಂಧನಗಳು, ಬೆದರಿಕೆಗಳು ಮತ್ತು ಭಯದ ವಾತಾವರಣ ಕುರಿತಂತೆ ಖಂಡಿಸಿದ್ದಾರೆ.

ಎಲ್ಲಾ ರಾಜಕೀಯ ಕೈದಿಗಳು, ಶಿಕ್ಷಕರು, ಪತ್ರಕರ್ತರು, ಬುದ್ಧಿಜೀವಿಗಳು ಮತ್ತು ವೃತ್ತಿಪರರನ್ನು ಬಿಡುಗಡೆ ಮಾಡಬೇಕು ಮತ್ತು ಅವಾಮಿ ಲೀಗ್ ಚಟುವಟಿಕೆಗಳ ಮೇಲೆ ವಿಧಿಸಲಾಗಿರುವ ಅಮಾನತು ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರಕಾರಕ್ಕೆ ಹಣಕಾಸಿನ ಕೊರತೆಯಿಲ್ಲ: ಶಾಸಕ ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ರೋಣ: ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ಪೈಲಟ್ ಯೋಜನೆಯಡಿಯಲ್ಲಿ ಮುಗುಳಿ ಗ್ರಾಮ ಸೇರಿದಂತೆ ತಾಲೂಕಿನಲ್ಲಿ ಐದು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದು, ಈ ಯೋಜನೆಗೆ ಶಾಸಕರ ಅನುದಾನವನ್ನು ಒದಗಿಸಲಾಗುವುದು ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಅವರು ಗುರುವಾರ ತಾಲೂಕಿನ ಮುಗುಳಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದ ದುರ್ಗಾದೇವಿ ಸಮುದಾಯ ಭವನ, ಕಾಳಿಕಾದೇವಿ ಸಮುದಾಯ ಭವನದ ಭೂಮಿಪೂಜೆ, ಬೀರೇಶ್ವರ ಸಮುದಾಯ ಭವನದ ಉದ್ಘಾಟನೆ ಹಾಗೂ ದ್ಯಾಮುಣಸಿ ಗ್ರಾಮದಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಗ್ರಾಮಸ್ಥರ ಇಚ್ಛೆಯಂತೆ 1 ಕೋಟಿ 60 ಲಕ್ಷ ರೂ.ಗಳ ವೆಚ್ಚದಲ್ಲಿ ಪ್ರೌಢಶಾಲೆಯನ್ನು ನಿರ್ಮಿಸಿ ಈಗಾಗಲೇ ಉದ್ಘಾಟಿಸಲಾಗಿದೆ. 50 ಲಕ್ಷ ರೂ.ಗಳ ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಿಸಲಾಗಿದೆ. ಪ್ರೌಢಶಾಲೆಗೆ ಕುಡಿಯುವ ನೀರು ಪೂರೈಕೆಗೆ 5 ಲಕ್ಷ ರೂ.ಗಳನ್ನು ಒದಗಿಸಲಾಗಿದ್ದು, ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳಿಗೆ ಶೀಘ್ರವೇ ಭೂಮಿಪೂಜೆ ನೆರವೇರಿಸಲಾಗುವುದು. ಮುಂದಿನ ಹಂತದಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಸುಧಾರಿಸಲಾಗುವುದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮುಖ್ಯವಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಗದಗ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ. ಕಾರಣ ಇಂದು ಗ್ಯಾರಂಟಿ ಯೋಜನೆಗಳ ಲಾಭದಿಂದ ಬಡ ಕುಟುಂಬಗಳು ಆರ್ಥಿಕ ಸಬಲತೆಯನ್ನು ಕಾಣುತ್ತಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿದೆ. ಬಡವರಿಗೆ ಅನುಕೂಲವಾಗುವ ಮಹತ್ವದ ಯೋಜನೆಗಳನ್ನು ಬಿಜೆಪಿಯವರು ವಿರೋಧಿಸುತ್ತಿರುವುದು ನ್ಯಾಯವೇ ಎಂದು ಪ್ರಶ್ನಿಸಿದರು.

ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರಕಾರ 53 ಸಾವಿರ ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ ನೀಡುತ್ತಿದೆ. ಇದರಿಂದ ರಾಜ್ಯದಲ್ಲಿ 1 ಕೋಟಿ 20 ಲಕ್ಷ ಕುಟುಂಬಗಳು ಆರ್ಥಿಕ ಪ್ರಗತಿಯನ್ನು ಸಾಧಿಸಿವೆ. ಇನ್ನು ಸಾಮಾಜಿಕ ಭದ್ರತಾ ಯೋಜನೆಗಳಾದ ವಿಧವಾ ವೇತನ, ವಿಕಲಚೇತನ ವೇತನ, ವೃದ್ಧಾಪ್ಯ ವೇತನ ಸೇರಿ ಅನೇಕ ಯೋಜನೆಗಳಿಗೆ ಸರಕಾರ 1 ಲಕ್ಷ 17 ಸಾವಿರ ಕೋಟಿ ರೂ.ಗಳನ್ನು ಒದಗಿಸುತ್ತಿದೆ. ಸರಕಾರಕ್ಕೆ ಹಣಕಾಸಿನ ಕೊರತೆಯಿಲ್ಲ ಎನ್ನುವುದಕ್ಕೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿಯಾಗಿವೆ ಎಂದರು.

ದ್ಯಾಮುಣಸಿ ಗ್ರಾಮಕ್ಕೂ ಸಹ ಈ ಹಿಂದೆ ಸಾಕಷ್ಟು ಅನುದಾನವನ್ನು ಒದಗಿಸಲಾಗಿದೆ. ಈಗ ಮತ್ತೆ 25 ಲಕ್ಷ ರೂ.ಗಳ ಅನುದಾನದಲ್ಲಿ ಸಿಸಿ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಗ್ರಾಮಸ್ಥರ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸುತ್ತಾ ಬಂದಿದ್ದು, ಉಳಿದ ಬೇಡಿಕೆಗಳಿಗೆ ಮುಂದಿನ ಹಂತದಲ್ಲಿ ಅನುದಾನವನ್ನು ಒದಗಿಸುವ ಜೊತೆಗೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಶೆಟ್ಟರ, ಎಪಿಎಂಸಿ ಮಾಜಿ ಅಧ್ಯಕ್ಷ ಪರಶುರಾಮ ಅಳಗವಾಡಿ, ತಾ.ಪಂ ಮಾಜಿ ಸದಸ್ಯ ಶಿದ್ಲಿಂಗಪ್ಪ ಯಾಳಗಿ, ಎಪಿಎಂಸಿ ಮಾಜಿ ಸದಸ್ಯ ನಾಗರಾಜ, ಗ್ರಾ.ಪಂ ಮಾಜಿ ಅಧ್ಯಕ್ಷ ವೀರಣ್ಣ ಯಾಳಗಿ, ಮುಖಂಡರಾದ ಅಭಿಷೇಕ ನವಲಗುಂದ, ವಿಜಯ ತೊಟರ, ದೇಸಾಯಿ, ಸೋಮು ನಾಗರಾಜ, ಫಕ್ಕೀರಪ್ಪ ಮುಗುಳಿ, ಮಲ್ಲಪ್ಪ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಗುಳಿ ಗ್ರಾಮದ ಗಂಗಮ್ಮ ಬೆಟಗೇರಿ ಎಂಬ ವೃದ್ಧೆ ಒಂಟಿಯಾಗಿ ವಾಸ ಮಾಡುತ್ತಿರುವ ವಿಷಯ ಮಾಧ್ಯಮದವರ ಗಮನಕ್ಕೆ ಬರುತ್ತಿದ್ದಂತೆ ಈ ವಿಷಯವನ್ನು ತಾ.ಪಂ ಇಒ ಚಂದ್ರಶೇಖರ ಕಂದಕೂರ ಅವರೊಂದಿಗೆ ಹಂಚಿಕೊಂಡರು. ಆಗ ಚಂದ್ರಶೇಖರ ಕಂದಕೂರ ಅವರು ಪಿಡಿಒ ಜೊತೆಗೆ ವೃದ್ಧೆಯ ಮನೆಗೆ ತೆರಳಿ ಆರೋಗ್ಯವನ್ನು ವಿಚಾರಿಸಿದರು. ನಂತರ ವೃದ್ಧೆಗೆ ಹಣಕಾಸಿನ ನೆರವು ನೀಡಿ ವೃದ್ಧೆಯ ಸಂಬಂಧಿಗಳಿದ್ದರೆ ವಿಚಾರಿಸಿ ಮಾಹಿತಿ ನೀಡಿ. ಇಲ್ಲದಿದ್ದರೆ ಹಿರಿಯ ಅಧಿಕಾರಿಗಳ ಹಾಗೂ ಶಾಸಕರ ಸಲಹೆ ಪಡೆದು ವೃದ್ಧೆಗೆ ಆಸರೆ ಒದಗಿಸೋಣ ಎಂದು ಇಲಾಖೆಯ ಸಿಬ್ಬಂದಿಗಳಿಗೆ ಸೂಚಿಸಿದರು.

ಕಾರ್ಮಿಕ ಸಂಹಿತೆಗಳ ಜಾರಿಗೆ ಕರಡು ನಿಯಮಗಳ ಪ್ರಕಟಣೆ: ಸಿಐಟಿಯು ಖಂಡನೆ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಕೇಂದ್ರ ಸರ್ಕಾರ ಕಾರ್ಮಿಕರ ವಿರೋಧದ ನಡುವೆಯೂ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ ಕರಡು ನಿಯಮಗಳನ್ನು ಪ್ರಕಟಿಸಿದೆ. ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಸಹ ಸಂಹಿತೆಗಳ ಜಾರಿಗೆ ‘ಕೈಗಾರಿಕಾ ಸಂಬಂಧಗಳ (ಕರ್ನಾಟಕ) ಕರಡು ನಿಯಮಗಳು-2026’ ಪ್ರಕಟಿಸುವ ಮೂಲಕ ರಾಜ್ಯದ ಕಾರ್ಮಿಕರಿಗೆ ದ್ರೋಹ ಬಗೆದಿವೆ ಎಂದು ಸಿಐಟಿಯು ಮುಖಂಡ ಎಂ.ಎಸ್. ಹಡಪದ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಸಂಹಿತೆಗಳ ರದ್ದತಿಗೆ ಕಾರ್ಮಿಕ ಸಂಘಟನೆಗಳು ಫೆಬ್ರವರಿ 12ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ನಗರದ ತಹಸೀಲ್ದಾರ ಕಚೇರಿ ಮುಂಭಾಗದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ನಡೆದ ಮುಷ್ಕರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಂವಿಧಾನದ ಅನುಚ್ಛೇದ 246ರ ಅನ್ವಯ ಕಾರ್ಮಿಕ ಕಾನೂನುಗಳು ಸಮವರ್ತಿ ಪಟ್ಟಿಯಲ್ಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಕಾನೂನುಗಳನ್ನು ರಚಿಸುವ ಅಧಿಕಾರ ಹೊಂದಿದೆ. ಆದರೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕಾರ್ಮಿಕರ ಹಿತಾಸಕ್ತಿ ರಕ್ಷಿಸಲು ಕೇಂದ್ರದ ಬಿಜೆಪಿ ಸರ್ಕಾರ ರೂಪಿಸಿರುವ 4 ಕಾರ್ಮಿಕ ಸಂಹಿತೆಗಳನ್ನು ತಿರಸ್ಕರಿಸುವ, ಮಾರ್ಪಡಿಸುವ, ಹೊಸದಾಗಿ ಪರ್ಯಾಯ ಕಾರ್ಮಿಕ ಕಾನೂನು ರೂಪಿಸುವ ಸಂವಿಧಾನಬದ್ಧ ಅಧಿಕಾರ ಬಳಸುವ ಹೊಣೆಗಾರಿಕೆ ಇದ್ಯಾವುದನ್ನು ಪ್ರದರ್ಶಿಸಿಲ್ಲ ಎಂದು ಕಿಡಿಕಾರಿದರು.

ಕಾರ್ಮಿಕ ವಿರೋಧಿಯಾಗಿ ಪ್ರಕಟಿಸಿರುವ ಕರಡು ನಿಯಮಗಳನ್ನು ಕೂಡಲೇ ವಾಪಸ್ಸು ಪಡೆಯಬೇಕು. ಆ ಮೂಲಕ ರಾಜ್ಯದಲ್ಲಿನ ಕಾರ್ಮಿಕರ ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ರಕ್ಷಣೆ ಮಾಡಬೇಕು ಎಂದರು.

ಡಿವಾಯ್‌ಎಫ್‌ಐ ಮುಖಂಡ ಎಫ್ ಎಫ್ ತೋಟದ ಮಾತನಾಡಿ, ತಾಲೂಕಿನ ಬಗರ್ ಹುಕ್ಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರಗಳನ್ನು ವಿತರಿಸಬೇಕು. ರಿಗ್ರಾಂಟ್ ಮೂಲಕ ತಾಲೂಕು ಬಗರ್ ಹುಕ್ಕುಂ ಸಮಿತಿ ಮೂಲಕ ರೈತರಿಗೆ ಹಕ್ಕು ಪತ್ರ ಆದೇಶವಾಗಿರುವರಿಗೆ ಆಕಾರ ಬಂದು, ಹಾಗೂ ಆರ್.ಟಿ.ಸಿ ಒಳಗೆ ಹೆಸರಿರುವ ರೈತರಿಗೆ ಪೋಡಿ ಮಾಡಿ ಕೊಡಬೇಕು ಎಂದು ಆಗ್ರಹಿಸಿದರು.

ಬೀದಿಬದಿ ವ್ಯಾಪರಸ್ಥರ ಸಂಘದ ಅಧ್ಯಕ್ಷ ಶಾಮೀದಸಾಬ ದಿಂಡವಾಡ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳು ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಪುರಸಭೆ ಆಡಳಿತ ಅವರ ಬೇಕು ಬೇಡಿಕೆಗಳಿಗೆ ಮತ್ತು ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಬೀದಿಬದಿ ವ್ಯಾಪಾರಸ್ಥರನ್ನು ಹತ್ತಿಕ್ಕುವ ಮೂಲಕ ನಿರಂತರ ದೌರ್ಜನ್ಯಗಳು ನಡೆಯುತ್ತಲೇ ಇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕಟ್ಟಡ ಕಾರ್ಮಿಕ ಮುಖಂಡ ಮೆಹಬೂಬ್ ಹವಾಲ್ದಾರ, ರೂಪೇಶ ಮಾಳೋತ್ತರ, ವಿರೇಶ ಮಾಳೋತ್ತರ, ಅಂದಪ್ಪ ಕುರಿ, ಪರಶು ಅರಗಂಜಿ, ವಿರೇಶ ಇಟಗಿ, ಯಮನೂರ ಜಕ್ಕಲಿ, ಹನಮಂತ ಚಿಟಗಿ, ಅನಂದ ರಾಠೋಡ, ರೇಣಪ್ಪ, ಮೈಸೂರ ರಾಠೋಡ, ನೀಲಮ್ಮ ಹಿರೇಮಠ, ಶರಣಮ್ಮ ವಾಲಿ, ಮೈಲಾರಪ್ಪ ಮುತಾರಿ, ಮಾಂಡ್ರೆ ಸೇರಿದಂತೆ ಬಿಸಿಯೂಟ ನೌಕರರ ಸಂಘ, ಆಶಾ ನೌಕರರ ಸಂಘ, ಕಟ್ಟಡ ಕಾರ್ಮಿಕರ, ಗ್ರಾಪಂ ನೌಕರರು, ಅಂಗನವಾಡಿ, ವಿದ್ಯಾರ್ಥಿ-ಯುವಜನ ಸಂಘಟನೆ, ದೇವದಾಸಿ ಮಹಿಳಾ ಸಂಘಟನೆ, ಕೆಪಿಆರ್‌ಎಸ್ ಸೇರಿದಂತೆ ಸಾಮೂಹಿಕ ಸಂಘಟನೆ ಮುಖಂಡರು ಪಾಲ್ಗೊಂಡಿದ್ದರು.

ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ, ನಗರದ ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿಗಳನ್ನು ನೀಡುವ ಮೂಲಕ ಅವರ ವ್ಯಾಪಾರದ ಸ್ಥಳವನ್ನು ಖಾತರಿಗೊಳಿಸಿ ಅವರಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅವರಿಗೆ ವ್ಯಾಪಾರ ಭದ್ರತೆಯನ್ನು ಖಾತರಿಗೊಳಿಸಬೇಕು. ಬೀದಿ ಬದಿ ವ್ಯಾಪಾರಸ್ಥ ಕಾಯ್ದೆಯನ್ನು ಪಟ್ಟಣ ಪಂಚಾಯಿತಿ ಪುರಸಭೆ ಸಮಗ್ರವಾಗಿ ಅನುಷ್ಠಾನಗೊಳಿಸಿ ಬೀದಿಬದಿ ವ್ಯಾಪರಸ್ಥರ ಹಿತಕಾಯಬೇಕು. ರಾಜ್ಯದಲ್ಲಿ ದುಡಿತದ ಅವಧಿಯನ್ನು ದಿನಕ್ಕೆ 12 ಗಂಟೆಗೆ ಹೆಚ್ಚಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

error: Content is protected !!