Home Blog Page 10

ಶಿರಹಟ್ಟಿ ರಾಜಕೀಯದಲ್ಲಿ ರವಿಕಾಂತ ಅಂಗಡಿ ಹೆಸರು ಸದ್ದು!

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಶಿರಹಟ್ಟಿ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗುವ ಬೆಳವಣಿಗೆಯಲ್ಲಿ, ವಕೀಲ ಹಾಗೂ ಹೋರಾಟಗಾರ ರವಿಕಾಂತ ಅಂಗಡಿ ಅವರು ಚುನಾವಣಾ ಕಣಕ್ಕಿಳಿಯಬೇಕು ಎಂದು ಶಿರಹಟ್ಟಿ ತಾಲೂಕು ವಕೀಲರ ಸಂಘ ಆಗ್ರಹಿಸಿದೆ.

ಪಟ್ಟಣದ ವಕೀಲರ ಸಂಘದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ವೈ. ಗೊಬ್ಬರಗುಂಪಿ, “ಶಿರಹಟ್ಟಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ದೀರ್ಘಕಾಲದಿಂದ ಹೋರಾಟ ನಡೆಸುತ್ತಿರುವ ವಕೀಲ ರವಿಕಾಂತ ಅಂಗಡಿ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು,” ಎಂದು ಒತ್ತಾಯಿಸಿದರು.

ರವಿಕಾಂತ ಅಂಗಡಿ ಅವರು ಹಲವು ವರ್ಷಗಳಿಂದ ಜನಪರ ಹಾಗೂ ರೈತಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದು, ಶಿರಹಟ್ಟಿ, ಮುಂಡರಗಿ ಹಾಗೂ ಲಕ್ಷ್ಮೇಶ್ವರ ಭಾಗದ ರೈತರ ಜಮೀನು ರಕ್ಷಣೆ, ರೈತರ ಹಕ್ಕುಗಳ ಪರ ಹೋರಾಟ, ಸಾಮಾಜಿಕ ನ್ಯಾಯ ಹಾಗೂ ಪರಿಸರ ಸಂರಕ್ಷಣೆಯಂತಹ ವಿಚಾರಗಳಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

ಸಾಮಾನ್ಯ ಜನರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಗುಣ, ಕಾನೂನು ಕ್ಷೇತ್ರದಲ್ಲಿನ ಅನುಭವ ಹಾಗೂ ಜನಸೇವೆಯ ಬದ್ಧತೆಯಿಂದ ರವಿಕಾಂತ ಅಂಗಡಿ ಅವರು ಸಾರ್ವಜನಿಕರ ವಿಶ್ವಾಸ ಗಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹೊಸ ಚಿಂತನೆ ಹಾಗೂ ಪರಿಣಾಮಕಾರಿ ನಾಯಕತ್ವ ನೀಡುವ ಸಾಮರ್ಥ್ಯ ಅವರಲ್ಲಿದೆ ಎಂದು ಅಭಿಪ್ರಾಯಪಟ್ಟರು.

ಶಿರಹಟ್ಟಿ ಮತಕ್ಷೇತ್ರದ ಜನರು ಅಭಿವೃದ್ಧಿಪರ ಹಾಗೂ ಜನರ ನಡುವೆ ನಿರಂತರ ಸಂಪರ್ಕ ಹೊಂದಿರುವ ನಾಯಕತ್ವ ನಿರೀಕ್ಷಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರವಿಕಾಂತ ಅಂಗಡಿ ಅವರು ಚುನಾವಣೆಗೆ ಸ್ಪರ್ಧಿಸಬೇಕು ಎಂಬುದು ಕ್ಷೇತ್ರದ ಜನರ ಆಶಯವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಎ.ವಿ. ಮಾನೆ, ಕಾರ್ಯದರ್ಶಿ ಎ.ಎ. ಬೇವಿನಗಿಡದ, ಜಂಟಿ ಕಾರ್ಯದರ್ಶಿ ಮಹೇಶ ದಾನಪ್ಪಗೌಡರ, ಖಜಾಂಚಿ ಶ್ರೀಮತಿ ಬಂಡಿವಡ್ಡರ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.

ಜನರ ಪರ ಹೋರಾಟಕ್ಕೆ ಸದಾ ಸಿದ್ಧ

ಸಭೆಯಲ್ಲಿ ಮಾತನಾಡಿದ ವಕೀಲ ರವಿಕಾಂತ ಅಂಗಡಿ, “ನಾನು ಜನರ ಹಾಗೂ ರೈತರ ಸಮಸ್ಯೆಗಳ ಪರ ಸಾಕಷ್ಟು ಹೋರಾಟಗಳನ್ನು ನಡೆಸಿದ್ದೇನೆ. ಮುಂದೆಯೂ ಜನಪರ ಹಾಗೂ ರೈತಪರ ಕಾರ್ಯಗಳಿಗೆ ಸದಾ ಸಿದ್ಧನಿದ್ದೇನೆ. ಎಲ್ಲರ ಆಶಯದಂತೆ ಸ್ಪರ್ಧಿಸುವ ಅವಕಾಶ ದೊರೆತಲ್ಲಿ ಜನರ ಸೇವೆಗೆ ಇನ್ನಷ್ಟು ಬಲ ದೊರೆಯುತ್ತದೆ,” ಎಂದು ಹೇಳಿದರು.

₹4 ಕೋಟಿ ಕಾಮಗಾರಿ, ನೀರು ಮಾತ್ರ ಇಲ್ಲ: ಜೆಜೆಎಂ ವಿರುದ್ಧ ಲಕ್ಕುಂಡಿ ಗ್ರಾಮಸಭೆಯಲ್ಲಿ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯ ಅಸಮರ್ಪಕ ಕಾಮಗಾರಿ, ಕುಡಿಯುವ ನೀರಿನ ತಾರತಮ್ಯ ಪೂರೈಕೆ ಹಾಗೂ ಗ್ರಾಮ ಅಭಿವೃದ್ಧಿ ವಿಚಾರಗಳು ಲಕ್ಕುಂಡಿ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾದವು.

ಅನ್ನದಾನೀಶ್ವರ ಸಭಾಭವನದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಹಿಳೆಯರು ಹಾಗೂ ಯುವಕರು ಆಕ್ರೋಶ ವ್ಯಕ್ತಪಡಿಸಿ, “ಗ್ರಾಮದ 5 ವಾರ್ಡ್‌ಗಳಿಗೆ ಮಾತ್ರ ಸಮರ್ಪಕ ನೀರು ಪೂರೈಕೆಯಾಗುತ್ತಿದೆ. 6, 7, 8, 9 ಹಾಗೂ 10ನೇ ವಾರ್ಡ್‌ಗಳಿಗೆ 8ರಿಂದ 12 ದಿನಕ್ಕೊಮ್ಮೆ ನೀರು ಬರುತ್ತಿದ್ದು ಜನರು ಹಾಗೂ ಜಾನುವಾರುಗಳು ಸಂಕಷ್ಟ ಅನುಭವಿಸುತ್ತಿವೆ,” ಎಂದು ದೂರಿದರು.

ತಾ.ಪಂ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ ಹಾಗೂ ಎನ್.ಐ. ಕಿರಿಟಗೇರಿ ಮಾತನಾಡಿ, “ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ನೀರು ಮಾತ್ರ ಬರುತ್ತಿಲ್ಲ. ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು,” ಎಂದು ಎಚ್ಚರಿಸಿದರು.

ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದ ಶರಣು ಗೋಗೇರಿ ಮಾತನಾಡಿ, “101 ದೇವಸ್ಥಾನ ಹಾಗೂ ಭಾವಿಗಳನ್ನು ಹೊಂದಿರುವ ಲಕ್ಕುಂಡಿಯನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಶಾಸಕ ಎಚ್. ಕೆ. ಪಾಟೀಲ ಹಾಗೂ ಶಾಸಕ ಸಿ. ಸಿ. ಪಾಟೀಲ ಶ್ರಮಿಸುತ್ತಿದ್ದಾರೆ. ಗ್ರಾಮವನ್ನು ಸ್ವಚ್ಛ ಹಾಗೂ ಸುಂದರವಾಗಿ ಉಳಿಸಿ ಪ್ರವಾಸಿಗರನ್ನು ಸೆಳೆಯಲು ಗ್ರಾಮಸ್ಥರು ಸಹಕರಿಸಬೇಕು,” ಎಂದು ಮನವಿ ಮಾಡಿದರು.

ಗ್ರಾಮೀಣ ವಿಶ್ವವಿದ್ಯಾಲಯದ ಸಂಯೋಜಕ ಸೋಮಲಿಂಗ ಕರ್ಣಿ ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಮಾತನಾಡಿದರು. ನ್ಯಾಯವಾದಿ ಸುಪರ್ಣ ಬ್ಯಾಹಟ್ಟಿ ಮಹಿಳಾ ಕಾನೂನುಗಳ ಕುರಿತು ಹಾಗೂ ಸುಜಾತಾ ಶಾಸ್ತ್ರಿಮಠ ಮಹಿಳಾ ಜಾಗೃತಿ ಕುರಿತು ಮಾಹಿತಿ ನೀಡಿದರು.

ಪಿಡಿಒ ಡಾ. ಅಮೀರನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎಂ.ಎ. ಗಾಜಿ ಸ್ವಾಗತಿಸಿದರು.

ಗ್ರಾಮಸಭೆಯಲ್ಲಿ ಆಶ್ರಯ ವಸತಿ ಯೋಜನೆಯಡಿ ಜೀತ ಪದ್ಧತಿಯಿಂದ ಮುಕ್ತಿ ಪಡೆದ ಪಕ್ಕಣ್ಣ ಬೇಲೇರಿ, ಮ್ಯಾನುಯಲ್ ಸ್ಕಾವೆಂಜರ್ ಸೇವೆಯ ಮಾಯಪ್ಪ ಮುಳ್ಳಾಳ ಹಾಗೂ ವಿಜಯಲಕ್ಷ್ಮಿ ಕರಿ ಅವರನ್ನು ಫಲಾನುಭವಿಗಳಾಗಿ ಆಯ್ಕೆ ಮಾಡಲಾಯಿತು.

ಇದೇ ವೇಳೆ 2018ರಲ್ಲಿ ಆಯ್ಕೆಯಾಗಿದ್ದ ಕೆಲ ಫಲಾನುಭವಿಗಳ ಬದಲಿಗೆ ಅದೇ ಕುಟುಂಬದ ಸದಸ್ಯರನ್ನು ಮರು ಆಯ್ಕೆ ಮಾಡುವ ಠರಾವನ್ನು ಸಭೆಯಲ್ಲಿ ಓದಿ ತಿಳಿಸಲಾಯಿತು.

ಜೆಜೆಎಂ ಯೋಜನೆ ವಿರುದ್ಧ ಗರಂ

ಸುಮಾರು ₹4 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ ಎನ್ನಲಾಗುತ್ತಿರುವ ಜೆಜೆಎಂ ಕಾಮಗಾರಿಯಲ್ಲೂ ಇದುವರೆಗೂ ನೀರು ಪೂರೈಕೆ ಆರಂಭವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ವಾಲ್‌ಮನ್‌ಗೆ ಆಡಳಿತಾಧಿಕಾರಿ ತರಾಟೆ

ಈ ವೇಳೆ ನೀರು ಪೂರೈಕೆ ಮಾಡುತ್ತಿರುವ ವಾಲ್‌ಮನ್‌ರನ್ನು ಸಭೆಗೆ ಕರೆಯಿಸಿದ ಆಡಳಿತಾಧಿಕಾರಿ ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, “ಸಮರ್ಪಕ ನೀರು ಪೂರೈಕೆಗೆ ಅಗತ್ಯ ಸಂಪನ್ಮೂಲ ಒದಗಿಸಲಾಗುತ್ತಿದೆ. ಸಮಸ್ಯೆಗಳನ್ನು ತಕ್ಷಣ ಗಮನಕ್ಕೆ ತರಬೇಕು. ನಿರ್ಲಕ್ಷ್ಯ ವಹಿಸಿದರೆ ಕ್ರಮ ಅನಿವಾರ್ಯ,” ಎಂದು ಎಚ್ಚರಿಕೆ ನೀಡಿದರು.

ಸಮಾಜಕ್ಕೆ ಮಾದರಿಯಾದ ಹುಟ್ಟುಹಬ್ಬ ಆಚರಣೆ

ವಿಜಯಸಾಕ್ಷಿ ಸುದ್ದಿ, ಗದಗ: ಹುಟ್ಟುಹಬ್ಬವನ್ನು ವೈಭವವಾಗಿ ಆಚರಿಸುವ ಬದಲು ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾದ ಯುವಕನ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಶಿರಹಟ್ಟಿ ತಾಲೂಕಿನ ಅಲಗಿಲವಾಡ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಾಹಿಲ್ ಮಾಬುಸಾಬ ನದಾಫ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕುಟುಂಬಸ್ಥರು ನೋಟ್‌ಪುಸ್ತಕ, ಪೆನ್ನು ಹಾಗೂ ಅಂಕಲಿಪಿ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಟುಂಬಸ್ಥರು, “ಸರ್ಕಾರಿ ಶಾಲೆಯಲ್ಲಿ ಅನೇಕ ಬಡ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಹುಟ್ಟುಹಬ್ಬಕ್ಕೆ ಅನಗತ್ಯ ಖರ್ಚು ಮಾಡುವ ಬದಲು ಮಕ್ಕಳಿಗೆ ಕಲಿಕಾ ಸಾಮಗ್ರಿ ನೀಡುವ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ನೆರವಾಗಬೇಕು ಎಂಬ ಆಶಯದಿಂದ ಈ ಕಾರ್ಯ ಮಾಡಿದ್ದೇವೆ,” ಎಂದು ಹೇಳಿದರು.

“ನಾವೂ ಸಹ ಬಡ ಕುಟುಂಬದಿಂದ ಬಂದವರೇ ಆಗಿದ್ದು, ಖರ್ಚು ಮಾಡುವ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಸುವುದು ಉತ್ತಮ ಎಂಬ ಭಾವನೆಯಿಂದ ನಮ್ಮ ಕೈಲಾದ ಅಳಿಲು ಸೇವೆ ಸಲ್ಲಿಸಿದ್ದೇವೆ,” ಎಂದು ತಿಳಿಸಿದರು.

ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರು ಈ ಕಾರ್ಯವನ್ನು ಶ್ಲಾಘಿಸಿದ್ದು, ಗ್ರಾಮದಲ್ಲಿನ ಹಳೆಯ ವಿದ್ಯಾರ್ಥಿಗಳು ಹಾಗೂ ಸಜ್ಜನರು ಕೂಡ ಶಿಕ್ಷಣ ಸೇವೆಗೆ ಮುಂದೆ ಬರಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಖಾದರ್‌ಭಾಷಾ ಮುಂಡರಗಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರೇಮಯ್ಯ ಬಾಳಿಹಳ್ಳಿಮಠ, ಪ್ರಧಾನಗುರು ಹಾಲೇಶ ಎಸ್. ಜಕ್ಕಲಿ, ಶಿಕ್ಷಕ ನೆಮೇಶ ಯರಗುಪ್ಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಉರುಳು ಸೇವೆ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ನರೇಗಲ್ಲ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಬೆಂಬಲಿಗರು ಶನಿವಾರ ಉರುಳು ಸೇವೆ ಸಲ್ಲಿಸಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಘಟನೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

ಪಟ್ಟಣದ ಸಂತೆ ಬಜಾರದಲ್ಲಿರುವ ಆಂಜನೇಯ ದೇವಸ್ಥಾನದಿಂದ ಗ್ರಾಮದೇವಿ ದೇವಸ್ಥಾನದವರೆಗೆ ಕಾರ್ಯಕರ್ತರು ಉರುಳು ಸೇವೆ ಸಲ್ಲಿಸಿ, “ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ದೊರಕಲಿ” ಎಂದು ಸಂಕಲ್ಪ ಮಾಡಿದರು. ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹರಕೆ ಹೊತ್ತು ಪ್ರಾರ್ಥಿಸಿದರು.

ಈ ವೇಳೆ ಮಾತನಾಡಿದ ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ, “ಜಿ.ಎಸ್. ಪಾಟೀಲರು ಜಿಲ್ಲೆಯ ಹಿರಿಯ ಶಾಸಕರಾಗಿ ಎಲ್ಲರನ್ನು ಸಮಾನವಾಗಿ ಕರೆದುಕೊಂಡು ಹೋಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದ ರಾಜಕಾರಣ ಮಾಡಿದ್ದಾರೆ. ಕ್ಷೇತ್ರದಲ್ಲಿ ನಿರಂತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇಂದಿರಾ ಗಾಂಧಿಯವರೊಂದಿಗೆ ಹೆಜ್ಜೆ ಹಾಕಿದ ಅವರ ಹಿರಿತನ ಹಾಗೂ ಪಕ್ಷಕ್ಕಾಗಿ ದುಡಿದ ಸೇವೆಯನ್ನು ಗುರುತಿಸಿ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ” ಎಂದು ಎಚ್ಚರಿಸಿದರು.

ಯುವ ಮುಖಂಡರಾದ ಸದ್ದಾಂ ನಶೇಖಾನ ಹಾಗೂ ಗುಡದಪ್ಪ ಗೋಡಿ ಮಾತನಾಡಿ, “ನೆಲ-ಜಲ ಅಭಿವೃದ್ಧಿಗಾಗಿ ಸಾವಿರಾರು ಕೆರೆಗಳನ್ನು ನಿರ್ಮಿಸಿ ‘ಸಾವಿರ ಕೆರೆಗಳ ಸರದಾರ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೈತರ ಭೂಮಿ ಉಳಿಸಿ, ಯುವಕರಿಗೆ ಉದ್ಯೋಗ ಕಲ್ಪಿಸಿ, ದೀನ ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಬದುಕಿನ ದಾರಿ ತೋರಿದ ನಾಯಕರಿಗೆ ಸಚಿವ ಸ್ಥಾನ ನೀಡದೇ ಇರುವುದು ಅನ್ಯಾಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ಸಿಗಲಿ ಎಂಬ ಉದ್ದೇಶದಿಂದ ನಮ್ಮೂರಿನ ದೇವರಿಗೆ ಹರಕೆ ಹೊತ್ತು ಉರುಳು ಸೇವೆ ಸಲ್ಲಿಸಿದ್ದೇವೆ. ಈಗಲಾದರೂ ಹೈಕಮಾಂಡ್ ಸರಿಯಾದ ನಿರ್ಧಾರ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಿಂಗನಗೌಡ ಲಕ್ಕನಗೌಡ್ರ, ವೀರನಗೌಡ ಪಾಟೀಲ, ಅಲ್ಲಾಬಕ್ಷಿ ನದಾಫ್, ಸಂತೋಷ ಹನಮಸಾಗರ, ಕಳಕಪ್ಪ ಅಬ್ಬಿಗೇರಿ, ಶೇಖಪ್ಪ ಜುಟ್ಲದ, ಅಂದಾನಗೌಡ ಪಾಟೀಲ, ಕಳನಗೌಡ ಪೊಲೀಸ್ ಪಾಟೀಲ, ಕುಮಾರಸ್ವಾಮಿ ಕೋರಧಾನ್ಯಮಠ, ಶೇಖಪ್ಪ ಕೆಂಗಾರ, ಎ.ಎ. ನವಲಗುಂದ, ಸೋಮನಗೌಡ ಲಕ್ಕನಗೌಡ್ರ, ಬಾಳಪ್ಪ ಸೋಮಗೊಂಡ, ಫಕ್ರುಸಾಬ್ ರೇವಡಿಗಾರ, ಮಹ್ಮದಗೌಸ ಹೊಸಮನಿ, ಮಾಸಪ್ಪ ಕೊಂಡಿ, ವೀರಪ್ಪ ಹಾಲನ್ನವರ, ಆಶೀಫ್ ಹೊಸಮನಿ, ಸುರೇಶ ಹುನಗುಂದ, ದಾದಾಸಾಬ ನದಾಫ್, ವೀರೇಶ ಪಮ್ಮಾರ, ಪ್ರಕಾಶ ಪಾದಗಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.

“ಸಾವಿರ ಕೆರೆಗಳ ಸರದಾರ, ಜನಪರ ನಾಯಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡದೇ ಇರುವುದು ಕ್ಷೇತ್ರದ ಜನರ ಭಾವನೆಗೆ ಧಕ್ಕೆ. ಈಗಲಾದರೂ ಹೈಕಮಾಂಡ್ ನ್ಯಾಯ ಕೊಡಬೇಕು.”

ಶರಣಪ್ಪ ಬೆಟಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

  • ಜಿ.ಎಸ್.ಪಿ ಸಚಿವರಾದ್ರೆ 101 ತೆಂಗಿನಕಾಯಿ ಹರಕೆ
  • ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ಸಿಗಲೆಂದು ಅಭಿಮಾನಿಗಳ ವಿಶೇಷ ಸಂಕಲ್ಪ
  • ನರೇಗಲ್ಲ ಗ್ರಾಮದೇವಿ ದುರ್ಗಾದೇವಿಗೆ 101 ತೆಂಗಿನಕಾಯಿ ಒಡೆಯುವ ಹರಕೆ
  • ಸಚಿವ ಸ್ಥಾನಕ್ಕಾಗಿ ಉರುಳು ಸೇವೆ, ಡೊಳ್ಳು ಮಜಲು ಮೂಲಕ ಪ್ರಾರ್ಥನೆ
  • “ಈ ಬಾರಿ ಜಿ.ಎಸ್.ಪಿಗೆ ಸಚಿವ ಸ್ಥಾನ ನೀಡಲೇಬೇಕು” ಎಂದು ಕಾರ್ಯಕರ್ತರ ಆಗ್ರಹ

ಜಲ್ಲಿ ದರ ಏರಿಕೆ ಅನಿವಾರ್ಯ: ಆರ್.ಸಿ. ಕಾಮಾಜಿ

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರದ ಭಾರಿ ದಂಡದ ಬರೆ, ಉತ್ಪಾದನಾ ವೆಚ್ಚದ ಏರಿಕೆ ಹಾಗೂ ಗಣಿಗಾರಿಕೆ ಕ್ಷೇತ್ರದ ಮೇಲಿನ ಕಠಿಣ ನಿಯಮಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಕ್ರಷರ್ ಉದ್ಯಮಿಗಳು ಜಲ್ಲಿ ಹಾಗೂ ಇತರೆ ನಿರ್ಮಾಣ ಸಾಮಗ್ರಿಗಳ ದರ ಹೆಚ್ಚಳಕ್ಕೆ ತೀರ್ಮಾನಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗದಗ ಜಿಲ್ಲಾ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಆರ್.ಸಿ. ಕಾಮಾಜಿ, “ಪೆಟ್ರೋಲ್, ಡೀಸೆಲ್, ವಿದ್ಯುತ್, ಕಾರ್ಮಿಕರ ವೇತನ ಸೇರಿದಂತೆ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ. ಇದರ ಜತೆಗೆ ಸರ್ಕಾರ ವಿಧಿಸುತ್ತಿರುವ ಕೋಟ್ಯಂತರ ರೂಪಾಯಿ ದಂಡ ಉದ್ಯಮದ ಬೆನ್ನೆಲುಬೇ ಮುರಿಯುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ದೇಶದ ಬೇರೆ ಯಾವುದೇ ರಾಜ್ಯದಲ್ಲಿಲ್ಲದಷ್ಟು ಕಠಿಣ ಕಾನೂನುಗಳನ್ನು ಜಾರಿಗೊಳಿಸಿ ಗಣಿಗಾರಿಕೆ ಉದ್ಯಮಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಆಡಿಟ್ ವರದಿಯನ್ನು ಕಡೆಗಣಿಸಿ ಕೆಎಸ್‌ಆರ್‌ಎಸ್‌ಎ ಮೂಲಕ ಡ್ರೋನ್ ಸರ್ವೇ ನಡೆಸಿರುವುದು ಅವೈಜ್ಞಾನಿಕ ಕ್ರಮ ಎಂದು ಟೀಕಿಸಿದರು.

“2005-06ರಿಂದ 2024ರವರೆಗಿನ ಸುಮಾರು 18 ವರ್ಷಗಳ ಹಳೆಯ ವರದಿಯನ್ನು ಆಧರಿಸಿ ಈಗಿನ ಮಾಲೀಕರಿಗೆ ‘ಒನ್ ಟೈಮ್ ಸೆಟ್ಲ್‌ಮೆಂಟ್’ ಹೆಸರಿನಲ್ಲಿ ದಂಡ ವಿಧಿಸುವುದು ಕಾನೂನುಬಾಹಿರ. ಈ ಅವಧಿಯಲ್ಲಿ ಮಾಲೀಕರು ಬದಲಾಗಿದ್ದರೂ ಹಳೆಯ ದಾಖಲೆ ಮುಂದಿಟ್ಟು ದಂಡ ಹಾಕಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಒಂದೇ ಕಚ್ಚಾ ವಸ್ತುವಿಗೆ ಎರಡು ಬಾರಿ ರಾಯಲ್ಟಿ ವಸೂಲಿ ಮಾಡುತ್ತಿದೆ. ಕ್ವಾರಿ ಮಾಲೀಕರಿಂದ ರಾಯಲ್ಟಿ ಪಡೆಯುವುದಲ್ಲದೆ, ಸರ್ಕಾರದ ಕಾಮಗಾರಿಗಳ ಗುತ್ತಿಗೆದಾರರಿಂದಲೂ ಮತ್ತೆ ರಾಯಲ್ಟಿ ವಸೂಲಿ ಮಾಡುತ್ತಿರುವುದು ಉದ್ಯಮದ ಮೇಲೆ ಹೆಚ್ಚುವರಿ ಹೊರೆ ತಂದಿದೆ ಎಂದು ದೂರಿದರು.

“ಉದ್ಯಮ ಉಳಿಸಿಕೊಳ್ಳಲು ಜಲ್ಲಿ ಹಾಗೂ ನಿರ್ಮಾಣ ಸಾಮಗ್ರಿಗಳ ದರ ಹೆಚ್ಚಳ ಅನಿವಾರ್ಯವಾಗಿದೆ. ಈ ಸಂಕಷ್ಟದ ಪರಿಸ್ಥಿತಿಯನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು” ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಡಿ. ಸುರೇಂದ್ರರೆಡ್ಡಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಕ್ರಷರ್ ಮಾಲೀಕರು ಉಪಸ್ಥಿತರಿದ್ದರು.

“ಸರ್ಕಾರದ ಭಾರಿ ದಂಡ, ಡೀಸೆಲ್-ವಿದ್ಯುತ್ ದರ ಏರಿಕೆಯಿಂದ ಕ್ರಷರ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ನಷ್ಟ ತಡೆಯಲು ಜಲ್ಲಿ ದರ ಹೆಚ್ಚಳ ಅನಿವಾರ್ಯವಾಗಿದೆ.”

ಆರ್.ಸಿ. ಕಾಮಾಜಿ

ಅಧ್ಯಕ್ಷರು, ಜಿಲ್ಲಾ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಸಂಘ

ಹವಾಮಾನ ಬದಲಾವಣೆಗೆ ಸಜ್ಜಾಗಬೇಕು: ಡಾ. ಸರಿತಾ

ವಿಜಯಸಾಕ್ಷಿ ಸುದ್ದಿ, ಗದಗ: ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಜಿಲ್ಲಾಮಟ್ಟದಲ್ಲಿ ಸಮಗ್ರ ಕ್ರಿಯಾ ಯೋಜನೆ ರೂಪಿಸಿ ಕಾರ್ಯಕ್ಷಮತೆ ವರದಿ ಸಿದ್ಧಪಡಿಸಬೇಕು ಎಂದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಹಿರಿಯ ಸಮಾಲೋಚಕಿ ಡಾ. ಸರಿತಾ ಅಧಿಕಾರಿಗಳಿಗೆ ಸಲಹೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆ ಕುರಿತು ಕ್ರಿಯಾ ಯೋಜನೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹವಾಮಾನ ಬದಲಾವಣೆಯ ಇಲಾಖಾ ಕ್ರಿಯಾ ಯೋಜನೆಗಳ ಕಾರ್ಯಕ್ಷಮತೆ ಸೂಚಕಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅರ್ಥಮಾಡಿಕೊಳ್ಳಬೇಕು. ಗದಗ ಜಿಲ್ಲೆಗೆ ಸಂಬಂಧಿಸಿದ ವರದಿಯನ್ನು ಪರಿಣಾಮಕಾರಿಯಾಗಿ ಸಿದ್ಧಪಡಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಹೊಸ ತಂತ್ರಜ್ಞಾನ ಬಳಸಿ ತ್ಯಾಜ್ಯ ನಿರ್ವಹಣೆ, ತ್ಯಾಜ್ಯದಿಂದ ಇಂಧನ ಉತ್ಪಾದನೆ, ನದಿ-ಕೆರೆಗಳ ನೀರಿನ ಗುಣಮಟ್ಟ ಕಾಪಾಡುವುದು ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಹವಾಮಾನ ಬದಲಾವಣೆ ಹಾಗೂ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ ಕುರಿತು ಸುದೀರ್ಘ ಮಾಹಿತಿ ನೀಡಿದ ಡಾ. ಸರಿತಾ, ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳ ಜವಾಬ್ದಾರಿಗಳನ್ನು ವಿವರಿಸಿದರು.

ವಿಷಯ ತಜ್ಞ ಶಶಿಕುಮಾರ್ ಜಲ ಸಂಪನ್ಮೂಲ ವಲಯದ ಹವಾಮಾನ ಕ್ರಿಯಾ ಯೋಜನೆ ಕುರಿತು ಮಾಹಿತಿ ನೀಡಿದರು.

ಗದಗ ಜಿಲ್ಲೆಯ ಎನ್‌ಆರ್‌ಡಿಎಂಎಸ್ ಅಧಿಕಾರಿ ಮಂಜುನಾಥ, ಎನ್‌ಆರ್‌ಡಿಎಂಎಸ್ ಕೇಂದ್ರದ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಭಾಗವಹಿಸಿದ್ದರು.

“ಹವಾಮಾನ ಬದಲಾವಣೆಯ ಸವಾಲು ಎದುರಿಸಲು ತ್ಯಾಜ್ಯ ನಿರ್ವಹಣೆ, ಹಸಿರು ಇಂಧನ ಬಳಕೆ ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು.”

ಡಾ. ಸರಿತಾ

ಹಿರಿಯ ಸಮಾಲೋಚಕಿ, ಎಂಪ್ರಿ ಬೆಂಗಳೂರು

ಶುದ್ಧ ಗಾಳಿಗೆ ಕಪ್ಪತ್ತಗುಡ್ಡವೇ ಕಾರಣ: ವಾಯ್.ಎಸ್. ಮತ್ತೂರ

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ತೋಂಟದ ಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯ ವಾಯ್.ಎಸ್. ಮತ್ತೂರ ಅವರು ಸಸಿಗಳಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, “ಏಷ್ಯಾದಲ್ಲೇ ಅತ್ಯಂತ ಶುದ್ಧ ಗಾಳಿ ಇರುವ ಪ್ರದೇಶಗಳಲ್ಲಿ ಗದಗ ಸುತ್ತಮುತ್ತಲಿನ ಪರಿಸರವೂ ಒಂದು. ಇದಕ್ಕೆ ಪ್ರಮುಖ ಕಾರಣ ಕಪ್ಪತ್ತಗುಡ್ಡ. ಕಪ್ಪತ್ತಗುಡ್ಡವನ್ನು ಖಾಸಗಿ ಕಂಪನಿಗಳಿಂದ ನಾಶವಾಗದಂತೆ ಹಗಲು-ರಾತ್ರಿ ಉಪವಾಸ ಸತ್ಯಾಗ್ರಹ ನಡೆಸಿ ಸಂರಕ್ಷಿಸಿದ ಕೀರ್ತಿ ಪರಮಪೂಜ್ಯ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿಗಳಿಗೆ ಸಲ್ಲುತ್ತದೆ,” ಎಂದು ಹೇಳಿದರು.

“ಭೂಮಿಯನ್ನು ತಾಯಿಯಂತೆ ಗೌರವಿಸುವುದು ಹಾಗೂ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನಾವೆಲ್ಲರೂ ಪರಿಸರ ಉಳಿವಿಗಾಗಿ ಕೈಜೋಡಿಸಬೇಕು,” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಸಿ ನೆಟ್ಟು ಪರಿಸರ ಕಾಳಜಿ ಅಭಿಯಾನಕ್ಕೆ ಕೈಜೋಡಿಸಿದರು.

ಎಚ್.ಕೆ. ಪಾಟೀಲ ಕಡೆಗಣನೆ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಆಸೀಫ್ ದಂಡಿನ

ವಿಜಯಸಾಕ್ಷಿ ಸುದ್ದಿ, ಗದಗ: ಹಿರಿಯ ರಾಜಕಾರಣಿ ಎಚ್. ಕೆ. ಪಾಟೀಲ ಅವರನ್ನು ಸಚಿವ ಸಂಪುಟದಲ್ಲಿ ಸಮರ್ಪಕವಾಗಿ ಪರಿಗಣಿಸದಿರುವುದು ಉತ್ತರ ಕರ್ನಾಟಕದ ಜನತೆಗೆ ಮಾಡಿದ ಅನ್ಯಾಯವಾಗಿದೆ ಎಂದು ಅಂಜುಮನ್-ಎ-ಇಸ್ಲಾಂ ಸಂಸ್ಥೆ ಸದಸ್ಯ ಆಸೀಫ್ ಜಿ. ದಂಡಿನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕ ರಾಜಕೀಯದಲ್ಲಿ ಸ್ವಚ್ಛ ರಾಜಕಾರಣ, ಆಡಳಿತಾತ್ಮಕ ಅನುಭವ ಹಾಗೂ ಜನಪರ ಬದ್ಧತೆಗೆ ಹೆಸರಾಗಿರುವ ಎಚ್.ಕೆ. ಪಾಟೀಲ ಅವರನ್ನು ಸಚಿವ ಸಂಪುಟ ರಚನೆ ವೇಳೆ ಕಡೆಗಣಿಸಿರುವುದು ಉತ್ತರ ಕರ್ನಾಟಕದ ಜನರಲ್ಲಿ ತೀವ್ರ ನಿರಾಸೆ ಮೂಡಿಸಿದೆ ಎಂದು ತಿಳಿಸಿದ್ದಾರೆ.

ದಶಕಗಳ ಕಾಲ ಶಾಸಕರಾಗಿ ಹಾಗೂ ವಿವಿಧ ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿರುವ ಎಚ್.ಕೆ. ಪಾಟೀಲ ಅವರು ನೀರಾವರಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕಾನೂನು ಹಾಗೂ ಸಂಸದೀಯ ವ್ಯವಹಾರಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಅವಧಿಯಲ್ಲಿ ಕರ್ನಾಟಕ ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದು ದೇಶದ ಗಮನ ಸೆಳೆದಿತ್ತು ಎಂದು ಉಲ್ಲೇಖಿಸಿದರು.

ಎಚ್.ಕೆ. ಪಾಟೀಲ ಅವರು ಉತ್ತರ ಕರ್ನಾಟಕದ ಧ್ವನಿಯಾಗಿ, ರೈತರ ಹಿತಾಸಕ್ತಿಗಳ ಪರ ಹೋರಾಟಗಾರರಾಗಿ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ಪ್ರತಿಪಾದಿಸಿದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಅನುಭವ ಹಾಗೂ ಸಾಮರ್ಥ್ಯ ರಾಜ್ಯದ ಅಭಿವೃದ್ಧಿಗೆ ಅಮೂಲ್ಯ ಸಂಪತ್ತಾಗಿದೆ ಎಂದು ಹೇಳಿದರು.

ರಾಜ್ಯ ಆಡಳಿತದಲ್ಲಿ ಪ್ರಾದೇಶಿಕ ಸಮತೋಲನ, ಅನುಭವ ಹಾಗೂ ಜನಪ್ರತಿನಿಧಿತ್ವಕ್ಕೆ ಸೂಕ್ತ ಗೌರವ ದೊರೆಯಬೇಕು. ಮುಖ್ಯಮಂತ್ರಿ ಹಾಗೂ ಪಕ್ಷದ ಹೈಕಮಾಂಡ್ ಜನರ ಭಾವನೆಗಳನ್ನು ಗೌರವಿಸಿ ಎಚ್.ಕೆ. ಪಾಟೀಲ ಅವರ ಅನುಭವವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

“ಎಚ್.ಕೆ. ಪಾಟೀಲರಂತಹ ಹಿರಿಯ ನಾಯಕರು ಸರ್ಕಾರದ ಬಲ. ಅವರ ಅನುಭವಕ್ಕೆ ಸೂಕ್ತ ಸ್ಥಾನ ದೊರೆತಾಗ ಮಾತ್ರ ಆಡಳಿತ ಇನ್ನಷ್ಟು ಸಮರ್ಥವಾಗಲಿದೆ.”

ಆಸೀಫ್ ಜಿ. ದಂಡಿನ

ಸದಸ್ಯ, ಅಂಜುಮನ್-ಎ-ಇಸ್ಲಾಂ ಸಂಸ್ಥೆ ಗದಗ-ಬೆಟಗೇರಿ

ಅಧಿಕಾರ ಗರ್ವದ ಸಂಕೇತವಲ್ಲ, ಸಮಾಜ ಸೇವೆಯ ಜವಾಬ್ದಾರಿ: ಶ್ರೀಧರ ವಜ್ರಬಂಡಿ

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸಚಿವ ಸಂಪುಟದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಡಾ. ಎಚ್.ಕೆ. ಪಾಟೀಲರಿಗೆ ಸ್ಥಾನ ಕೈತಪ್ಪಿರುವ ವಿಚಾರಕ್ಕೆ ಉತ್ತರ ಕರ್ನಾಟಕದಲ್ಲಿ ಅಸಮಾಧಾನ ಜೋರಾಗಿದ್ದು, ಕಾಂಗ್ರೆಸ್ ಯುವ ಮುಖಂಡ ಶ್ರೀಧರ ವಜ್ರಬಂಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಅಧಿಕಾರ ಎಂಬುದು ಗರ್ವದ ಸಂಕೇತವಲ್ಲ, ಅದು ಸಮಾಜ ಸೇವೆಯ ಹೊಣೆಗಾರಿಕೆ” ಎಂಬ ತತ್ವದೊಂದಿಗೆ ರಾಜಕೀಯ ನಡೆಸಿದ ಎಚ್.ಕೆ. ಪಾಟೀಲರಂತಹ ಜನಪರ ನಾಯಕನನ್ನು ಸಚಿವ ಸಂಪುಟದಿಂದ ದೂರ ಇಡುವುದು ಸರಿಯಲ್ಲ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳಂತೆ ಜನಸಾಮಾನ್ಯರ ಸೇವೆಯನ್ನೇ ರಾಜಕೀಯ ಧರ್ಮವನ್ನಾಗಿಸಿಕೊಂಡಿರುವ ನಾಯಕ ಎಚ್.ಕೆ. ಪಾಟೀಲರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎನ್ನುವ ಬದ್ಧತೆಯಿಂದ ಅವರು ಕೆಲಸ ಮಾಡಿದ್ದಾರೆ. ಅಂತಹ ಅನುಭವಿ ಹಾಗೂ ಪಕ್ಷ ನಿಷ್ಠ ನಾಯಕನನ್ನು ಕಡೆಗಣಿಸಿರುವುದು ಉತ್ತರ ಕರ್ನಾಟಕದ ಜನತೆಗೆ ಮಾಡಿದ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಎಚ್.ಕೆ. ಪಾಟೀಲರ ಪಾತ್ರ ಅಪಾರವಾಗಿದೆ. ಪಕ್ಷದ ಮೊದಲ ಸಾಲಿನ ನಾಯಕರನ್ನೇ ಕಡೆಗಣಿಸಿದರೆ ಅದು ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ. ಕೂಡಲೇ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಅವಕಾಶ ನೀಡಬೇಕು. ಇಲ್ಲವಾದರೆ ಅವರ ಪರವಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಶ್ರೀಧರ ವಜ್ರಬಂಡಿ ಎಚ್ಚರಿಕೆ ನೀಡಿದರು.

ಸಚಿವರಾಗಿದ್ದ ಅವಧಿಯಲ್ಲಿ ಎಚ್.ಕೆ. ಪಾಟೀಲರು ಹಲವು ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದು, ರಾಜ್ಯಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಯೋಜನೆಗಳನ್ನು ದೇಶದ ಅನೇಕ ರಾಜ್ಯಗಳು ಮಾದರಿಯಾಗಿ ಅಳವಡಿಸಿಕೊಂಡಿವೆ ಎಂದು ಹೇಳಿದರು.

ಗದಗ ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿಯನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಎಚ್.ಕೆ. ಪಾಟೀಲರು ವಿಶೇಷ ಪರಿಶ್ರಮಪಟ್ಟಿದ್ದಾರೆ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಚನೆ, ಐತಿಹಾಸಿಕ ಪ್ರಾಚ್ಯಾವಶೇಷಗಳ ಸಂರಕ್ಷಣೆ ಹಾಗೂ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ರಾಜ್ಯದ ಘನತೆಯನ್ನು ಹೆಚ್ಚಿಸಿದ್ದಾರೆ ಎಂದು ಶ್ಲಾಘಿಸಿದರು.

“ಜನಪರ ಕಾಳಜಿ, ಆಡಳಿತ ಅನುಭವ ಮತ್ತು ಅಭಿವೃದ್ಧಿ ದೃಷ್ಟಿಕೋನ ಹೊಂದಿರುವ ಮುತ್ಸದ್ದಿ ರಾಜಕಾರಣಿಯನ್ನು ಕಡೆಗಣಿಸಿರುವುದು ಅಕ್ಷಮ್ಯ” ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಶ್ರೀಧರ ವಜ್ರಬಂಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಅಧಿಕಾರ ಎಂದರೆ ಹುದ್ದೆಯ ಅಹಂಕಾರವಲ್ಲ; ಜನರ ಕಣ್ಣೀರನ್ನು ಒರೆಸುವ ಜವಾಬ್ದಾರಿ. ಅಂತಹ ಜನಪರ ನಾಯಕ ಎಚ್.ಕೆ. ಪಾಟೀಲರನ್ನೇ ಸಚಿವ ಸಂಪುಟದಿಂದ ದೂರ ಇಟ್ಟಿರುವುದು ಉತ್ತರ ಕರ್ನಾಟಕದ ಆತ್ಮಗೌರವಕ್ಕೆ ಮಾಡಿದ ಅನ್ಯಾಯ.”
— ಶ್ರೀಧರ ವಜ್ರಬಂಡಿ

ಗ್ರಾಮೀಣ ಭಾಗಕ್ಕೆ ಹೊಸ ಬಸ್‌ ಬಿಡುವಂತೆ ಶಾಸಕ ಚಂದ್ರು ಲಮಾಣಿ ಆಗ್ರಹ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಮರ್ಪಕ ಬಸ್‌ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಕೆಎಸ್‌ಆರ್‌ಟಿಸಿ ಘಟಕಕ್ಕೆ ಸಾರಿಗೆ ಇಲಾಖೆಯಿಂದ ಮಂಜೂರಾದ ಎರಡು ನೂತನ ಬಸ್‌ಗಳಿಗೆ ಶನಿವಾರ ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಹಳೆಯ ಬಸ್‌ಗಳು ಆಗಾಗ್ಗೆ ಕೆಟ್ಟು ನಿಲ್ಲುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಅದರ ಬಗ್ಗೆ ಇಲಾಖೆ ಹೆಚ್ಚಿನ ನಿಗಾ ವಹಿಸಬೇಕು. ಆದಷ್ಟು ಹೊಸ ಬಸ್‌ಗಳನ್ನು ಗ್ರಾಮೀಣ ಭಾಗಗಳಿಗೆ ಓಡಿಸುವ ವ್ಯವಸ್ಥೆಯಾಗಬೇಕು ಎಂದು ಹೇಳಿದರು.

“ಲಕ್ಷ್ಮೇಶ್ವರ ಸಾರಿಗೆ ಘಟಕಕ್ಕೆ ಇನ್ನಷ್ಟು ಬಸ್‌ಗಳನ್ನು ಮಂಜೂರು ಮಾಡುವಂತೆ ಹಾಗೂ ಬೆಂಗಳೂರಿಗೆ ಎಸಿ ಕೋಚ್ ಬಸ್‌ ಸೌಲಭ್ಯ ಕಲ್ಪಿಸುವಂತೆ ಇಲಾಖೆಗೆ ಮನವಿ ಮಾಡಲಾಗಿದೆ” ಎಂದು ತಿಳಿಸಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶಕ್ತಿ ಯೋಜನೆಯೊಂದಿಗೆ ಲಕ್ಷ್ಮೇಶ್ವರ ಘಟಕಕ್ಕೆ ಇದುವರೆಗೆ ಸುಮಾರು 16 ನೂತನ ಬಸ್‌ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ಘಟಕ ವ್ಯವಸ್ಥಾಪಕಿ ಸವಿತಾ ಆದಿ, ಗ್ಯಾರಂಟಿ ಸಮಿತಿ ಸದಸ್ಯರು, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

error: Content is protected !!