Home Blog Page 10

ನಗರಸಭೆಯಾದ ಹರಪನಹಳ್ಳಿ: ಸಂಭ್ರಮಾಚರಣೆ

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ನಗರಸಭೆಯಾಗಬೇಕೆಂಬ ಬಹುದಿನಗಳ ಕನಸು ನನಸಾಗಿದ್ದು, ಇದಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಸಂತಸ ವ್ಯಕ್ತಪಡಿಸಿದರು.

ಹರಪನಹಳ್ಳಿ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಬುಧವಾರ ಸಂಜೆ ಪುರಸಭೆಯಿಂದ ನಗರಸಭೆಯಾಗಿ ಮುಂಬಡ್ತಿ ಪಡೆದಿದ್ದಕ್ಕಾಗಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.

ಯಾವುದೇ ಕೆಲಸ-ಕಾರ್ಯಗಳು ಸಿದ್ಧಿಯಾಗಲು ನಿರಂತರ ಪರಿಶ್ರಮ ಬೇಕು. ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹಾಗೂ ದಾವಣಗೆರೆ ಸಂಸದರ ಇಚ್ಛಾಶಕ್ತಿಯಿಂದ ಸರ್ಕಾರದ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರ ಪರಿಣಾಮ ಇಂದು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಇದರ ವ್ಯಾಪ್ತಿಗೆ ಒಳಪಡಬಹುದಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ಮಾತನಾಡಿ, ಹರಪನಹಳ್ಳಿ ಪುರಸಭೆಯ ಸರಹದ್ದನ್ನೇ ನಗರಸಭೆಯನ್ನಾಗಿ ಮುಂಬಡ್ತಿ ಹೊಂದಿಸಲಾಗಿದ್ದು, ನಗರಸಭೆಯ ವ್ಯಾಪ್ತಿಗೆ ಬರಲು ಇಚ್ಛಿಸುವ ಗ್ರಾಮಗಳು ಕೂಡ ನಗರಸಭೆಗೆ ಸಿಗುವ ಮೂಲಭೂತ ಸೌಕರ್ಯಗಳನ್ನು ಪಡೆಯಬಹುದಾಗಿದೆ ಎಂದರು.

ನಗರದ ಆಸ್ತಿ ತೆರಿಗೆ, ಖಾತಾ ವರ್ಗಾವಣೆ ಶುಲ್ಕ, ನೀರಿನ ತೆರಿಗೆ, ಘನತ್ಯಾಜ್ಯ ವಸ್ತು ನಿರ್ವಹಣೆ ಶುಲ್ಕಗಳು ಹೆಚ್ಚಳವಾಗಲಿದೆ. ಇದರಿಂದ ನಗರದ ಅಭಿವೃದ್ಧಿಗೆ ಹಣ ಉತ್ತಮವಾಗಿ ಕ್ರೋಢೀಕರಣಗೊಳ್ಳಲಿದೆ ಎಂದರು.

ಪುರಸಭೆ ಅಧ್ಯಕ್ಷೆ ಫಾತೀಮಾಭಿ, ಉಪಾಧ್ಯಕ್ಷ ಕೊಟ್ರೇಶ್, ಪುರಸಭೆ ಮಾಜಿ ಅಧ್ಯಕ್ಷ ಹರಾಳು ಅಶೋಕ್, ಪುರಸಭೆ ಸದಸ್ಯರಾದ ಇಜಂತ್ಕರ್ ಮಂಜುನಾಥ, ಕಿರಣ್ ಶಾನಭಾಗ, ಜಾವೇದ್, ಜಾಕೀರ್, ರೊಕ್ಕಪ್ಪ, ಸುಮಾ ಜಗದೀಶ್, ನಾಮನಿರ್ದೇಶನ ಸದಸ್ಯರು ವಸಂತಪ್ಪ, ಗುಡಿ ನಾಗರಾಜ, ಸುಮಾ ಜಗದೀಶ್, ಮುಖಂಡರಾದ ಹುಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಬಸವರಾಜ್ ಸಂಗಪ್ಪನವರ, ಇಸ್ಮಾಯಿಲ್ ಎಲಿಗಾರ, ಡಂಕಿ ವಾಸೀಮ್, ಶಶಿಕುಮಾರ್ ನಾಯ್ಕ, ಎನ್. ಶಂಕರ್, ಓ. ಮಹಾಂತೇಶ್, ವಾಗೀಶ್ ಮುಂತಾದವರಿದ್ದರು.

ಗುಣಮಟ್ಟದ ಕಲಿಕೆಗೆ ನೆರವಿನ ಹಸ್ತ

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಬ್ಯಾಂಕ್ ಕೇವಲ ಆರ್ಥಿಕ ವ್ಯವಹಾರಗಳನ್ನಷ್ಟೇ ಮಾಡದೇ ಸಮಾಜಮುಖಿ ಕಾರ್ಯ ಹಾಗೂ ವಿದ್ಯಾರ್ಥಿಗಳ ಹಿತ ಕಾಯುವಲ್ಲಿ ಒಂದು ಹೆಜ್ಜೆ ಮುಂದಿದೆ ಎಂದು ಗದಗ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ವೈಭವ ಅಗರವಾಲ ಹೇಳಿದರು.

ಅವರು ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಗೆ ನಾಲ್ಕು ಕಂಪ್ಯೂಟರ್‌ಗಳನ್ನು ಕೊಡುಗೆ ನೀಡಿ ಮಾತನಾಡಿ, ಈಗಾಗಲೇ ಈ ಶಾಲೆಗೆ ಕಳೆದ ಸಾಲಿನಲ್ಲಿ ಮೂರು ಜನ ವಿದ್ಯಾರ್ಥಿನಿಯರಿಗೆ ಶಿಷ್ಯವೇತನವನ್ನು ನೀಡಲಾಗಿದೆ. ಈ ಬಾರಿ ನಾಲ್ಕು ಕಂಪ್ಯೂಟರ್‌ಗಳನ್ನು ನೀಡುವ ಮೂಲಕ ಗುಣಮಟ್ಟದ ಕಲಿಕೆಗೆ ಉಪಯುಕ್ತವಾಗಲು ನೆರವಿನ ಹಸ್ತ ಚಾಚಿದೆ ಎಂದರು.

ಇನ್ನೋರ್ವ ಶಾಖಾ ವ್ಯವಸ್ಥಾಪಕ ಸುಬ್ಬರಥ ಮಾತನಾಡಿ, ಪ್ರತಿವರ್ಷ ಸರ್ಕಾರಿ ಶಾಲೆಗಳಿಗೆ ಗ್ರಾಮೀಣ ಬ್ಯಾಂಕ್ ಹಲವಾರು ರೀತಿಯ ನೆರವು ನೀಡುವ ಮೂಲಕ ಅಲ್ಲಿನ ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ಮಾಡುತ್ತಾ ಬಂದಿದೆ. 500ಕ್ಕೂ ಹೆಚ್ಚು ಮಕ್ಕಳು ಓದುತ್ತಿರುವ ಈ ಶಾಲೆಗೆ ಇನ್ನೂ ಹಲವಾರು ಮೂಲಭೂತ ಸೌಕರ್ಯಗಳು ಬೇಕಾಗಿದ್ದು, ಮುಂಬರುವ ದಿನಗಳಲ್ಲಿ ಮಾಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಶಾಲಾ ದತ್ತು ಉಸ್ತುವಾರಿ ಡಾ. ಬಸವರಾಜ ಧಾರವಾಡ, ಡಾ. ವಿಜಯಕುಮಾರ ಬ್ಯಾಳಿ, ಶಂಕ್ರಮ್ಮ ಆರ್.ಹಣಮಗೌಡ್ರು, ಮಂಜುಳಾ ಪಿ.ಸಾಮ್ರಾಣಿ, ಸುಮಂಗಲ ಎಂ.ಪತ್ತಾರ್, ಶಾರದಾ ಬಾಣದ, ಎಂ.ಐ. ಶಿವನಗೌಡ್ರು, ಶೋಭಾ ಎಸ್.ಗಾಳಿ, ರಮೇಶ್ ಬಸರಿ, ಸಾವಿತ್ರಿ ಎ.ಗದ್ದನಕೇರಿ, ಎನ್.ಆರ್. ಶಿರೋಳ್, ಸಬಿಯಾ ಯು.ಕುಷ್ಟಗಿ, ಗಂಗಾ ಎಂ.ಅಳವಂಡಿ, ಮಂಜುಳಾ ಟಿ, ಶಶಿಕಲಾ ಬಿ.ಗುಳೇದವರ, ಪದ್ಮಾ ವಿ.ದಾಸರ್, ಲಕ್ಷ್ಮಮ್ಮ ಮಾಳೋತ್ತರ್, ಶಾರದಾ ಬಾಣದ ಮುಂತಾದವರು ಉಪಸ್ಥಿತರಿದ್ದರು. ಸಂಜೀವಿನಿ ಕೂಲಗುಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮೀ ಅಣ್ಣಿಗೇರಿ ಮಾತನಾಡಿ, ಗ್ರಾಮೀಣ ಬ್ಯಾಂಕ್ ಕಳೆದ ಎರಡು ವರ್ಷದಿಂದ ನಮ್ಮ ಶಾಲೆಗೆ ನೆರವನ್ನು ನೀಡುತ್ತಾ ಬಂದಿದೆ. ಈ ಬಾರಿ ನಾಲ್ಕು ಕಂಪ್ಯೂಟರ್ ನೀಡುವ ಮೂಲಕ ನಮ್ಮ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಕಲ್ಪಸಿದೆ ಎಂದರು.

ಭಕ್ತರನ್ನು ಸೆಳೆಯುತ್ತಿರುವ ಮಾರನಬಸರಿ ಮೊಹರಂ

ವಿಜಯಸಾಕ್ಷಿ ಸುದ್ದಿ, ರೋಣ: ಮೊಹರಂ ಹಬ್ಬದಲ್ಲಿ ಮಹತ್ವದ ದಿನಗಳೆಂದು ಪರಿಗಣಿಸುವ ಸಂದಲ್ ರಾತ್ರಿ, ಕತ್ತಲ್ ರಾತ್ರಿ ಹಾಗೂ ದೇವರು ಹೊಳೆಗೆ ಹೋಗುವ ದಿನಗಳಂದು ಮಾರನಬಸರಿ ಗ್ರಾಮಕ್ಕೆ ಸಾವಿರಾರು ಭಕ್ತರು ಆಗಮಿಸಿ ಅಲೈದೇವರುಗಳ ದರ್ಶನ ಪಡೆಯುತ್ತಾರೆ.

ಗದಗ ಜಿಲ್ಲೆಯಲ್ಲಿ ಅತ್ಯಂತ ಸಂಭ್ರಮ ಮತ್ತು ಭಕ್ತಿಯಿಂದ ನಡೆಯುವ ಹಬ್ಬ ಮಾರನಬಸರಿ ಗ್ರಾಮದ ಮೊಹರಂ ಆಗಿದೆ. ಧರ್ಮ-ಜಾತಿಗಳ ಜಂಜಾಟಗಳಿಲ್ಲದೆ ಎಲ್ಲರೂ ಸೇರಿ ಆಚರಿಸುವ ಹಬ್ಬ ಇದಾಗಿದ್ದು, ಗ್ರಾಮದ ಮೊಹರಂ ಹಬ್ಬವನ್ನು ವೀಕ್ಷಿಸಲು ಜಿಲ್ಲೆಯ ಅನೇಕ ಗ್ರಾಮಗಳಿಂದ ಸಾವಿರಾರು ಭಕ್ತರು ಗ್ರಾಮಕ್ಕೆ ಆಗಮಿಸುತ್ತಾರೆ. ಹಬ್ಬದ ನಿಮಿತ್ತ ಗ್ರಾಮ ಬಗೆ ಬಗೆಯಲ್ಲಿ ಅಲಂಕೃತಗೊಂಡ ಝಗಮಗಿಸುವ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.

ಜುಲೈ 4ರಂದು ಸಂಧಲ್ ರಾತ್ರಿಯಿದ್ದು, ಈ ದಿನದಂದು ದೊಡ್ಡ ಮಸೂತಿಯ ದೊಡ್ಡ ದೇವರ ಸವಾರಿ ಮಧ್ಯರಾತ್ರಿ ಹೊರಡುತ್ತದೆ. ದೊಡ್ಡ ದೇವರ ಸವಾರಿ ವೀಕ್ಷಿಸಲು ಸಾವಿರಾರು ಭಕ್ತರು ನೆರೆಯುತ್ತಾರೆ. ಜುಲೈ 5ರಂದು ಕತ್ತಲ್ ರಾತ್ರಿ ದಿನದಂದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಎರಡು ಮಸೂತಿಗಳ ಎಲ್ಲ ದೇವರುಗಳ ಸವಾರಿ ನಡೆಯುತ್ತದೆ. ಜುಲೈ 6ರಂದು ಅಲೈ ದೇವರುಗಳು ಹೊಳೆಗೆ ಹೊಗುವ ದಿನವಾಗಿದ್ದು, ಮದ್ಯಾಹ್ನ 3 ಗಂಟೆಯ ಸುಮಾರಿಗೆ ದೇವರುಗಳ ಸವಾರಿ ನಡೆಯುತ್ತದೆ.

ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಗ್ಲಿಂಪ್ಸ್ ರಿಲೀಸ್

ರಾಕಿಂಗ್‌ ಸ್ಟಾರ್‌ ಯಶ್ ನಟಿಸಿ ನಿರ್ಮಿಸುತ್ತಿರುವ ಬಹುನಿರೀಕ್ಷಿತ ರಾಮಾಯಣ ಚಿತ್ರದ ಫಸ್ಟ್‌ ಟೈಟಲ್‌ ಟೀಸರ್‌ ರಿಲೀಸ್‌ ಆಗಿದೆ. ರಾಮಾಯಣ ಸಿನಿಮಾದ ಗ್ಲಿಪ್ಸ್‌ ಅನ್ನು ಗ್ಲಿಂಪ್ಸ್ ಅನ್ನು ಬೆಂಗಳೂರಿನ ನೆಕ್ಸಸ್ ಮಾಲ್ ಸೇರಿದಂತೆ ವಿವಿಧ ನಗರಗಳಲ್ಲಿ ಬೇರೆ ಬೇರೆ ಐಮ್ಯಾಕ್ಸ್ ಪರದೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

ರಾಮಾಯಣ ಸಿನಿಮಾದ ಫಸ್ಟ್‌ ಟೈಟಲ್‌ ಟೀಸರ್‌ ಅನ್ನು ರಾಕಿಂಗ್‌ ಸ್ಟಾರ್‌ ಯಶ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹತ್ತು ವರ್ಷಗಳ ಆಕಾಂಕ್ಷೆ. ಸಾರ್ವಕಾಲಿಕ ಶ್ರೇಷ್ಠ ಮಹಾಕಾವ್ಯವನ್ನು ಜಗತ್ತಿಗೆ ತರುವ ನಿರಂತರ ದೃಢನಿಶ್ಚಯ. ರಾಮಾಯಣವನ್ನು ಅತ್ಯಂತ ಗೌರವದಿಂದ ಪ್ರಸ್ತುತಪಡಿಸಲು ವಿಶ್ವದ ಕೆಲವು ಅತ್ಯುತ್ತಮ ವ್ಯಕ್ತಿಗಳು ಒಟ್ಟಾಗಿ ಶ್ರಮಿಸಿದ್ದಾರೆ. ಅದರ ಫಲಿತಾಂಶ ಇದು ಎಂದು ಯಶ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಆರಂಭಕ್ಕೆ ಸ್ವಾಗತ. ರಾಮ v/s ರಾವಣನ ಅಮರ ಕಥೆಯನ್ನು ಆಚರಿಸೋಣ. ನಮ್ಮ ಸತ್ಯ. ನಮ್ಮ ಇತಿಹಾಸ ಎಂದು ಯಶ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಬ್ರಹ್ಮ, ವಿಷ್ಣು, ಮಹೇಶ್ವರ ದೃಶ್ಯಗಳಿಂದ ಆರಂಭವಾಗುವ ಮೂರು ನಿಮಿಷದ ಟೀಸರ್ ಮೊದಲಿಂದ ಕೊನೆಯ ವರೆಗೂ ಅದ್ಧೂರಿತನದಿಂದ ಕೂಡಿದೆ. ಟೀಸರ್​​ನಲ್ಲಿ ಸಿನಿಮಾದಲ್ಲಿ ನಟಿಸಿರುವವರ ಹೆಸರು, ತಂತ್ರಜ್ಞರ ಹೆಸರುಗಳನ್ನು ತೋರಿಸಲಾಗಿದೆ.  ಸಿನಿಮಾಕ್ಕೆ ‘ರಾಮಾಯಣ’ ಎಂದು ಹೆಸರಿಡಲಾಗಿದ್ದು, ‘ನಮ್ಮ ಸತ್ಯ, ನಮ್ಮ ಇತಿಹಾಸ’ ಎಂಬ ಅಡಿಬರಹ ನೀಡಲಾಗಿದೆ.

ರಾಮಾಯಣ’ ಸಿನಿಮಾವನ್ನು ನಿತೀಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದಾರೆ. ಸುಮಾರು 800 ಕೋಟಿ ರೂಪಾಯಿ ಬಜೆಟ್‌ ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಮೊದಲ ಭಾಗ 2026ರ ದೀಪಾವಳಿಗೆ ಹಾಗೂ 2027ರ ದೀಪಾವಳಿಗೆ ಸಿನಿಮಾದ ಎರಡನೇ ಭಾಗ ಬಿಡುಗಡೆ ಆಗಲಿದೆ.

ಬೆಳಗಾವಿ| ಅನುಮಾನಾಸ್ಪದ ರೀತಿಯಲ್ಲಿ ಭಿಕ್ಷುಕನ ಶವ ಪತ್ತೆ!

ಬೆಳಗಾವಿ:- ಅನುಮಾನಾಸ್ಪದ ರೀತಿಯಲ್ಲಿ ಭಿಕ್ಷುಕನ ಶವ ಪತ್ತೆಯಾಗಿರುವ ಘಟನೆ ಬೆಳಗಾವಿ ಮಹಾನಗರದ ಕೊಲ್ಲಾಪುರ ವೃತ್ತದ ಬಳಿ ಜರುಗಿದೆ.

ಕಳೆದ ನಾಲ್ಕು -ಐದು ದಿನಗಳ ಹಿಂದೆಯೇ ಪಾಳು ಬಿದ್ದ ಕಟ್ಟಡದಲ್ಲಿ ಮೃತಪಟ್ಟಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆಯಾದ ರಾತ್ರಿಯೇ ನವವಿವಾಹಿತ ಸಾವು: ಪ್ರೀತಿಸಿದವಳ ಕೈಹಿಡಿದ ಯುವಕನಿಗೆ ಆಗಿದ್ದೇನು?

ಕೋಲಾರ:- ಪ್ರೀತಿ ಮಾಡಿದ ಯುವತಿಯನ್ನು ಸಬ್​ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದ ಯುವಕ ಅಂದಿನ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ಜರುಗಿದೆ.

ಹರೀಶ್ ಬಾಬು (33) ನೇಣಿಗೆ ಶರಣಾದ ಯುವಕ. ಈತ ಕಳೆದ 8 ವರ್ಷಗಳಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ದಿನಗಳಿಂದ ರಜೆಯಲ್ಲಿದ್ದ ಹರೀಶ್ ಬಾಬು, ಬುಧವಾರ ಬೆಳಿಗ್ಗೆ ರಿಜಿಸ್ಟಾರ್ ಮ್ಯಾರೇಜ್ ಆಗಿದ್ದರು. ಆದರೆ ಅದೇ ದಿನ ರಾತ್ರಿ 11:30ರ ಸುಮಾರಿಗೆ ಆಸ್ಪತ್ರೆಯ ಇಎನ್‌ಟಿ ವಿಭಾಗದ ಕೊಠಡಿಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಈ ಕುರಿತು ಮೃತ ಹರೀಶ್ ಬಾಬು ತಾಯಿ ಮಾತನಾಡಿ, ಒಂದು ತಿಂಗಳ ಹಿಂದೆ ಯುವತಿಯೊಬ್ಬಳು ನಮ್ಮ ಮನೆಗೆ ಬಂದು ನಾನು ಹಾಗೂ ಹರೀಶ್ ಮದುವೆಯಾಗುತ್ತೇವೆ ಎಂದಳು. ಅದಕ್ಕೆ ಕೆಲ ದಿನಗಳ ನಂತರ ನಾನೇ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ ಬುಧವಾರ ಬೆಳಿಗ್ಗೆ ಯುವತಿ ಕಡೆಯವರು ಬಂದು ನನ್ನ ಮಗನನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಮದುವೆ ಮಾಡಿಸಿದ್ದಾರೆ ಎಂದು ತಿಳಿಸಿದರು.

ಮೃತ ಹರೀಶ್ ಬುಧವಾರ ರಾತ್ರಿ 11:15ರ ಸುಮಾರಿಗೆ ಆಸ್ಪತ್ರೆಯೊಳಗೆ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮದ್ಯ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸದ್ಯ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಆನ್‍ಲೈನ್ ಗೇಮ್‍ ಚಟ: ಬರೋಬ್ಬರಿ 18 ಲಕ್ಷ ಕಳೆದುಕೊಂಡ ಯುವಕ ನೇಣಿಗೆ ಶರಣು!

ದಾವಣಗೆರೆ:- ಆನ್‍ಲೈನ್ ಗೇಮ್‍ನಲ್ಲಿ ಬರೋಬ್ಬರಿ 18 ಲಕ್ಷ ಕಳೆದುಕೊಂಡ ಯುವಕನೋರ್ವ ಮನನೊಂದು ವಿಡಿಯೋ ಮಾಡಿಟ್ಟು ನೇಣಿಗೆ ಶರಣಾಗಿರುವ ಘಟನೆ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

25 ವರ್ಷದ ಶಶಿ ಕುಮಾರ್ ಮೃತ ಯುವಕ. ಯುವಕ ಆನ್‍ಲೈನ್ ಗೇಮ್‍ನಲ್ಲಿ 18 ಲಕ್ಷ ರೂ. ಕಳೆದುಕೊಂಡಿದ್ದ. ಇದರಿಂದ ನೊಂದು ಆನ್‍ಲೈನ್ ಗೇಮ್ ನಿಷೇಧಿಸುವಂತೆ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಡಿಸಿ ಹಾಗೂ ಎಸ್ಪಿ ಮುಖಾಂತರ ಮನವಿ ಮಾಡಿಕೊಂಡಿದ್ದ. ದೂರು ನೀಡಿದರು ಯಾವುದೇ ಕ್ರಮವಾಗದ ಹಿನ್ನಲೆ ಸೆಲ್ಫಿ ವಿಡಿಯೋ ಮಾಡಿ ನೋವು ತೋಡಿಕೊಂಡಿದ್ದಾನೆ. ಬಳಿಕ ನೇಣಿಗೆ ಶರಣಾಗಿದ್ದಾನೆ.

ಡೆತ್‍ನೋಟ್‍ನಲ್ಲಿ ಗೇಮ್‍ನ ಅಕ್ರಮದ ಬಗ್ಗೆ ಯುವಕ ಅನಾವರಣ ಮಾಡಿದ್ದಾನೆ. ಅದರಲ್ಲಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ಹೆಸರು ಪ್ರಸ್ತಾಪ ಮಾಡಿ, ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾನೆ.

ತಿರುಪತಿ ಮಾದರಿ ಚಾಮುಂಡಿ ಬೆಟ್ಟದಲ್ಲೂ ಮೊಬೈಲ್‌ ನಿರ್ಬಂಧ ಮಾಡಬೇಕು: ಸಂಸದ ಯದುವೀರ್ ಒಡೆಯರ್!

ಮೈಸೂರು:- ತಿರುಪತಿ ಮಾದರಿ ಚಾಮುಂಡಿ ಬೆಟ್ಟದಲ್ಲೂ ಮೊಬೈಲ್‌ ನಿರ್ಬಂಧ ಮಾಡಬೇಕು ಎಂದು ಸಂಸದ ಯದುವೀರ್ ಒಡೆಯರ್ ಆಗ್ರಹಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿ ವಿಚಾರದ ಕೂಗಿಗೆ ಧ್ವನಿಗೂಡಿಸಿದ್ದಾರೆ. ವಸ್ತ್ರ ಸಂಹಿತೆ ಪರವಾಗಿ ನಾನು ಯಾವಾಗಲೂ ಇದ್ದೇನೆ. ಧಾರ್ಮಿಕ ಕ್ಷೇತ್ರಗಳಿಗೆ ಬಂದಾಗ ಜನರು ಧಾರ್ಮಿಕ ಭಾವನೆಯಿಂದಲೇ ಬರಬೇಕು. ಅದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಚಾಮುಂಡಿ ಬೆಟ್ಟದಲ್ಲೂ ವಸ್ತ್ರ ಸಂಹಿತೆ ಜಾರಿಯಾಗಬೇಕು ಎಂದು ಆಗ್ರಹಿಸಿದ್ದಾರೆ.

ತಿರುಪತಿ ಮಾದರಿ ಚಾಮುಂಡಿ ಬೆಟ್ಟದಲ್ಲೂ ಮೊಬೈಲ್ ನಿರ್ಬಂಧ ಮಾಡಬೇಕು. ಇತ್ತೀಚಿಗೆ ಕೆಲವರು ಗೊತ್ತಿದ್ದೋ ಗೊತ್ತಿಲ್ಲದೋ ದೇವಿಯ ಮೂಲ ವಿಗ್ರಹದ ವೀಡಿಯೋ ಮಾಡುತ್ತಿದ್ದಾರೆ. ಇದು ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಕಾನೂನನ್ನು ಜಾರಿ ಮಾಡಬೇಕು ಎಂದಿದ್ದಾರೆ.

ಕುಡುಕರೇ… ವಾರದಲ್ಲಿ ಎಷ್ಟು ಬಿಯರ್ ಕುಡಿದ್ರೆ ಒಳ್ಳೆಯದು? ನೀವು ತಿಳಿಯಲೇಬೇಕು!

ಅತಿಯಾದರೆ ಅಮೃತವೂ ವಿಷ ಅನ್ನೋದನ್ನು ನೀವು ಕೇಳಿರಬಹುದು. ಅದು ಯಾವುದಾದರೂ ಸರಿ. ಮಿತಿಮೀರಿದರೆ ಅಪಾಯ ಕಟ್ಟಿಟ್ಟಬುತ್ತಿ. ಇದು ಆಹಾರ-ಪಾನೀಯದ ವಿಷಯದಲ್ಲೂ ನಿಜ. ಹಾಗೆಯೇ ನಮ್ಮಲ್ಲಿ, ಆಲ್ಕೋಹಾಲ್‌ ಅಂಶವಿರುತ್ತದೆ ಎಂಬ ಕಾರಣಕ್ಕೆ ಬಿಯರ್‌ ಸೇವಿಸುವುದು ಆರೋಗ್ಯಕ್ಕೆ ಹಾನಿಕರ ಎಂದು ಹೇಳಲಾಗುತ್ತದೆ. ಆದರೆ ಅದನ್ನೂ ಹಿತಮಿತವಾಗಿ ಸೇವಿಸಿದರೆ ಅನೇಕ ಆರೋಗ್ಯ ಪ್ರಯೋಜನಗಳಿವೆ ಎನ್ನುತ್ತಾರೆ ತಜ್ಞರು. ಬಿಯರ್‌ಅನ್ನು ಮಿತವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಇಲ್ಲಿವೆ.

ಭಾರತದಲ್ಲಿ ಮಾದಕ ವ್ಯಸನಿಗಳು ಹೆಚ್ಚು ಸೇವಿಸುವ ಆಲ್ಕೊಹಾಲ್ಯುಕ್ತ ಪಾನೀಯಗಳಲ್ಲಿ, ಬಿಯರ್ ಮುಂಚೂಣಿಯಲ್ಲಿದೆ. ಗೋಧಿ ಮತ್ತು ಬಾರ್ಲಿಯಂತಹ ಧಾನ್ಯಗಳನ್ನು ಹುದುಗಿಸುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಭಾರತದಲ್ಲಿ ಹಲವಾರು ಬ್ರಾಂಡ್‌ಗಳ ಬಿಯರ್ ಲಭ್ಯವಿದೆ. ಈ ಆಲ್ಕೊಹಾಲ್ಯುಕ್ತ ಪಾನೀಯವು 4% ರಿಂದ 6% ರಷ್ಟು ಆಲ್ಕೋಹಾಲ್ ಅನ್ನು ಹೊಂದಿರುತ್ತದೆ.

ಹಿತಮಿತವಾಗಿ ಬಿಯರ್ ಕುಡಿಯುವುದರಿಂದ ಆರೋಗ್ಯಕ್ಕೆ ಕೆಲವು ಪ್ರಯೋಜನಗಳಿವೆ ಎಂದು ತಜ್ಞರು ಹೇಳ್ತಾರೆ. ಆದರೆ ಅತಿಯಾದರೆ, ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಬನ್ನಿ ಬಿಯರ್ ಕುಡಿಯುವುದರ ಹಿಂದಿನ ಆರೋಗ್ಯ ಪ್ರಯೋಜನಗಳು ಮತ್ತು ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳಬೇಕು. ಒಂದು ವಾರದಲ್ಲಿ ಎಷ್ಟು ಬಿಯರ್‌ಗಳನ್ನು ಕುಡಿಯುವುದು ಸುರಕ್ಷಿತ..? ಬನ್ನಿ ಈ ಕುರಿತು ತಿಳಿಯೋಣ..

ರಾಷ್ಟ್ರೀಯ ಆರೋಗ್ಯ ಸೇವೆ ವರದಿಯ ಪ್ರಕಾರ, ಪುರುಷರು ಮತ್ತು ಮಹಿಳೆಯರು ವಾರದಲ್ಲಿ 14 ಯೂನಿಟ್‌ಗಳಿಗಿಂತ ಹೆಚ್ಚು ಮದ್ಯಪಾನ ಮಾಡಬಾರದು ಎಂದು ತಿಳಿಸಿದೆ. 14 ಯೂನಿಟ್‌ ಅಂದ್ರೆ, 10 ಮಿಲಿಲೀಟರ್ ಅಥವಾ 8 ಗ್ರಾಂ ಶುದ್ಧ ಆಲ್ಕೋಹಾಲ್. ಉದಾಹರಣೆಗೆ 568 ಮಿಲಿಲೀಟರ್ ಕ್ಯಾನ್ ಸಾಮಾನ್ಯ ಬಿಯರ್ 5% ಆಲ್ಕೋಹಾಲ್ ಅನ್ನು ಹೊಂದಿರುತ್ತದೆ. ಇದು ಸುಮಾರು 3 ಯೂನಿಟ್ ಆಲ್ಕೋಹಾಲ್ ಅನ್ನು ಹೊಂದಿರುತ್ತದೆ.

ಅಂದರೆ ಒಂದು ವಾರದಲ್ಲಿ 6 ಕ್ಯಾನ್ ಸಾಮಾನ್ಯ ಬಿಯರ್ ಕುಡಿದರೆ 14 ಯೂನಿಟ್ ಮಿತಿಯಲ್ಲಿರುತ್ತೀರಿ. ಅದಕ್ಕಿಂತ ಹೆಚ್ಚು ಕುಡಿಯಬೇಡಿ ಎನ್ನುತ್ತಾರೆ ತಜ್ಞರು. ಅಲ್ಲದೆ ನಿಯಮಿತವಾಗಿ ಕುಡಿಯುವವರು ಪ್ರತಿ ವಾರ ಕನಿಷ್ಠ ಎರಡು ದಿನಗಳಾದರೂ ಬಿಡಬೇಕು. ಹೀಗೆ ಮಾಡುವುದರಿಂದ ದೇಹವು ಮದ್ಯದ ಪರಿಣಾಮದಿಂದ ಚೇತರಿಸಿಕೊಳ್ಳಲು ಸಮಯ ನೀಡಿದಂತಾಗುತ್ತದೆ.

ಬಿಯರ್‌ನಲ್ಲಿರುವ ಎಚ್‌ಡಿಎಲ್ ಅಥವಾ ಉತ್ತಮ ಕೊಲೆಸ್ಟ್ರಾಲ್ ಹೃದಯಕ್ಕೆ ಒಳ್ಳೆಯದು. ಇದು ಅಧಿಕವಾಗಿದ್ದರೆ, ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯಗಳು ಕಡಿಮೆಯಾಗುತ್ತವೆ. ಈ ಆಲ್ಕೊಹಾಲ್ಯುಕ್ತ ಪಾನೀಯವು ಅಲ್ಪ ಪ್ರಮಾಣದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಅವು ಮೂಳೆಗಳನ್ನು ಬಲಗೊಳಿಸುತ್ತವೆ. ಪರಿಣಾಮವಾಗಿ, ಆಸ್ಟಿಯೊಪೊರೋಸಿಸ್ ಅಪಾಯವು ಕಡಿಮೆಯಾಗುತ್ತದೆ.

ಜರ್ನಲ್ ಆಫ್ ನ್ಯೂಟ್ರಿಷನಲ್ ಬಯೋಕೆಮಿಸ್ಟ್ರಿಯಲ್ಲಿ ಪ್ರಕಟವಾದ ಅಧ್ಯಯನವು ಬಿಯರ್‌ನಲ್ಲಿ ಪಾಲಿಫಿನಾಲ್ಸ್ ಎಂಬ ಪದಾರ್ಥಗಳಿವೆ ಎಂದು ಕಂಡುಹಿಡಿದಿದೆ. ಪಾಲಿಫಿನಾಲ್‌ಗಳು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಂಶೋಧನೆಯ ಪ್ರಕಾರ, ಮಹಿಳೆಯರು ದಿನಕ್ಕೆ ಒಂದು ಬಿಯರ್ ಮತ್ತು ಪುರುಷರು ದಿನಕ್ಕೆ ಎರಡು ಬಿಯರ್ ಕುಡಿಯುತ್ತಿದ್ದರೆ ಅವರಿಗೆ ಹೃದಯ ಕಾಯಿಲೆ ಬರುವುದಿಲ್ಲ ಎಂದು ತಿಳಿಸಿದೆ..

“ಅತೀಯಾದ್ರೆ ಅಮೃತವೂ ವಿಷ” ಎನ್ನುವಂತೆ.. ಇದು ಬಿಯರ್‌ಗೂ ಅನ್ವಯಿಸುತ್ತದೆ. ತಜ್ಞರ ಪ್ರಕಾರ, ಮಿತಿಗಿಂತ ಹೆಚ್ಚು ಬಿಯರ್ ಕುಡಿಯುವುದರಿಂದ ಯಕೃತ್ತು ಮತ್ತು ಹೃದಯ ಸಮಸ್ಯೆಗಳು ಹಾಗೂ ಕ್ಯಾನ್ಸರ್ ಅಪಾಯ ಹೆಚ್ಚು. ನೀವು ಹೆಚ್ಚು ಬಿಯರ್ ಕುಡಿದರೆ, ನಿಮ್ಮ ದೇಹವು ನೀರನ್ನು ಕಳೆದುಕೊಳ್ಳುತ್ತದೆ. ಇದು ನಿರ್ಜಲೀಕರಣದಿಂದ ತಲೆನೋವು, ಒಣ ಬಾಯಿ ಮತ್ತು ಆಲಸ್ಯದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಬಿಯರ್ ಕುಡಿಯುವುದರಿಂದ ನಿದ್ರಾಹೀನತೆ ಉಂಟಾಗುತ್ತದೆ. ಬಿಯರ್ ಆಲ್ಕೋಹಾಲ್ ಆಗಿದ್ದು, ಇದರ ಹೆಚ್ಚಿನ ಸೇವನೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಅದಕ್ಕಾಗಿಯೇ ಮದ್ಯಪಾನವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಉತ್ತಮ. ಮದ್ಯ ಸೇವನೆ ಅಭ್ಯಾಸ ಇರುವವರು ಸುರಕ್ಷಿತ ಮಿತಿ ಮೀರಿ ಕುಡಿಬೇಡಿ.. ಆರೋಗ್ಯದ ಕಡೆ ಎಚ್ಚರ ವಹಿಸಿ..

ಗುಡ್ಡ ಕುಸಿತ: ಕೊಡಸಳ್ಳಿ ವಿದ್ಯುತ್’ಗಾರದ ಬಳಿ ಸಂಚಾರ ಬಂದ್!

ಕಾರವಾರ: ಧಾರಕಾರ ಮಳೆಯಿಂದಾಗಿ ಕೊಡಸಳ್ಳಿ ವಿದ್ಯುತ್‌ಗಾರದ ಬಳಿ ದೊಡ್ಡ ಪ್ರಮಾಣದ ಭೂ ಕುಸಿತವಾಗಿದ್ದು, ಕದ್ರಾ ಭಾಗದ ಬಾಳೆಮನೆ, ಸುಳಗೇರಿ ಕೊಡಸಳ್ಳಿ ಸಂಪರ್ಕ ರಸ್ತೆ ಕಡಿತವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆಯಿಂದಾಗಿ ಅವಾಂತರ ಸಂಭವಿಸಿದೆ.

ಕದ್ರಾದಿಂದ ಕೊಡಸಳ್ಳಿ ಡ್ಯಾಮ್ ಸಂಪರ್ಕಿಸುವ ರಸ್ತೆ ಭೂಕುಸಿತವಾದ್ದರಿಂದ ಕೊಡಸಳ್ಳಿ ಜಲ ವಿದ್ಯುತ್‌ಗಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಪಿಸಿ ಸಿಬ್ಬಂದಿಗೆ ತೆರಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಅದೃಷ್ಟವಶಾತ್ ಬೆಳಗ್ಗೆ ರಸ್ತೆಯಲ್ಲಿ ಯಾವ ಸಂಚಾರವೂ ಇಲ್ಲದ ಸಂದರ್ಭದಲ್ಲಿ ಗುಡ್ಡ ಕುಸಿದಿದ್ದು, ದೊಡ್ಡ ಅನಾಹುತ ತಪ್ಪಿದೆ. ಈ ಹಿಂದೆ ಕೊಡಸಳ್ಳಿ ಬಳಿ ಗುಡ್ಡ ಕುಸಿಯುವ ಎಚ್ಚರಿಕೆಯನ್ನು ಜಿಯಾಲಜಿಕಲ್ ಸರ್ವೆ ಆಪ್ ಇಂಡಿಯಾ ವಿಜ್ಞಾನಿಗಳು ನೀಡಿದ್ದರು.

error: Content is protected !!