Home Blog Page 101

ಡ್ರಿಫ್ಟಿಂಗ್ ಬಳಿಕ ಮತ್ತೊಂದು ಶಾಕ್: ರಿಕ್ಕಿ ರೈ ವಿರುದ್ಧ ವಂಚನೆ ಆರೋಪದಲ್ಲಿ ಹೊಸ ಎಫ್‌ಐಆರ್!

ಬೆಂಗಳೂರು: ಡ್ರಿಫ್ಟಿಂಗ್ ಪ್ರಕರಣದ ಬೆನ್ನಲ್ಲೇ, ರಿಕ್ಕಿ ರೈ ವಿರುದ್ಧ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದೆ. ಕಾರು ರಿಜಿಸ್ಟರ್ ಮಾಡದೇ, ಅದರ ಬಣ್ಣ ಬದಲಿಸಿ, ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ತಪ್ಪಿಸಿದ ಆರೋಪ ಕೇಳಿ ಬಂದಿದೆ.

ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಡ್ರಿಫ್ಟಿಂಗ್ ಪ್ರಕರಣದ ತನಿಖೆ ವೇಳೆ ದಾಖಲೆಗಳನ್ನು ಪರಿಶೀಲಿಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ದೆಹಲಿಯ ಆರ್‌ಟಿಓ ಹರಾಜಿನಲ್ಲಿ ಖರೀದಿಸಿದ ಲ್ಯಾಂಬೋರ್ಗಿನಿ ಕಾರಿಗೆ ನಂತರ ಬಣ್ಣ ಬದಲಿಸಿ, KA 05 XX 0009 ರೀತಿಯ ಫ್ಯಾನ್ಸಿ ನಂಬರ್ ಪಡೆದುಕೊಂಡಿರುವುದು ತಿಳಿದುಬಂದಿದೆ. ಆದರೆ, ಸರಿಯಾದ ರೀತಿಯಲ್ಲಿ ರಿಜಿಸ್ಟ್ರೇಶನ್ ಮಾಡಿಸಿಕೊಂಡಿದ್ದರೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸಬೇಕಾಗಿತ್ತು.

ಈ ಕ್ರಮವನ್ನು ತಪ್ಪಿಸಲು ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ವಂಚನೆ ಮಾಡಿದ ಆರೋಪ ಕೇಳಿಬಂದಿದೆ. ಇದೇ ಕಾರಣದಿಂದ ಕಾರಿನ ನಂಬರ್ ಪತ್ತೆಯಾಗಿದ್ದರೂ ಸಹ ಆರಂಭದಲ್ಲಿ ಮಾಲೀಕರ ಗುರುತು ಪತ್ತೆಯಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ನೀಡಿದ ದೂರಿನನ್ವಯ ಕಾನೂನು ಸುವ್ಯವಸ್ಥೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ನಡೆದ ಡ್ರಿಫ್ಟಿಂಗ್ ಸ್ಥಳ ಪರಿಶೀಲನೆಗೆ ಪೊಲೀಸರು ನೋಟಿಸ್ ನೀಡಿದರೂ, ಈವರೆಗೆ ರಿಕ್ಕಿ ರೈ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಸ್ತುತ ಕಾನೂನು ಸುವ್ಯವಸ್ಥೆ ಪೊಲೀಸರು ತನಿಖೆ ಮುಂದುವರಿಸಿದ್ದು, ಸಂಬಂಧಿತ ಕಾರು ಸಂಚಾರ ಪೊಲೀಸರ ವಶದಲ್ಲಿದೆ.

ಸೇವಾ ನಿಯಮ ತಿದ್ದುಪಡಿ ಇಲ್ಲದೆ ವೃಂದ ರದ್ದು ಅಸಾಧ್ಯ: ಹೈಕೋರ್ಟ್

ಬೆಂಗಳೂರು: ಸೇವಾ ನಿಯಮಗಳಲ್ಲಿ ತಿದ್ದುಪಡಿ ಮಾಡದೇ, ಕಾನೂನುಬದ್ಧವಾಗಿ ರಚಿಸಲಾದ ವೃಂದ ನಿಯಮಗಳನ್ನು ಸರ್ಕಾರದ ಆದೇಶದ ಮೂಲಕ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಇದೇ ವೇಳೆ, 2016ರ ಅಧಿಸೂಚನೆಯ ಆಧಾರದಲ್ಲಿ ವರ್ಕ್ ಇನ್ಸ್‌ಪೆಕ್ಟರ್ ಹುದ್ದೆಗೆ ಆಯ್ಕೆಯಾದ ಅರ್ಜಿದಾರ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಈ ಸಂಬಂಧ, ಹೆಚ್.ಪಿ. ಹರೀಶ್ ಕುಮಾರ್, ವಿಶ್ವನಾಥ್ ಮತ್ತು ಹಂಪಣ್ಣ ಕೊಲಾಕರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಿಸಿದ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಎಸ್. ರಾಚಯ್ಯ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ನ್ಯಾಯಪೀಠದ ಅಭಿಪ್ರಾಯದಂತೆ, ಸರ್ಕಾರಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನೀಡದಿರುವ ಅಧಿಕಾರ ಇದ್ದರೂ, ಅದು ಸಂವಿಧಾನಾತ್ಮಕ ತತ್ವಗಳು ಮತ್ತು ಕಾನೂನುಬದ್ಧ ನಿಯಮಗಳ ವ್ಯಾಪ್ತಿಯೊಳಗೇ ಇರಬೇಕು. ನೇಮಕಾತಿ ನಿರಾಕರಣೆ ನ್ಯಾಯಸಮ್ಮತವಾಗಿರಬೇಕು ಹಾಗೂ ಸಮರ್ಪಕ ಕಾರಣಗಳ ಆಧಾರದಲ್ಲಿರಬೇಕು; ದುರುದ್ದೇಶದಿಂದ ಆಗಿರಬಾರದು ಎಂದು ತಿಳಿಸಿದೆ.

ಇನ್ನೂ, 2021ರಲ್ಲಿ ಸರ್ಕಾರ ಹೊರಡಿಸಿದ ವರ್ಕ್ ಇನ್ಸ್‌ಪೆಕ್ಟರ್ ವೃಂದ ರದ್ದುಪಡಿಸುವ ಆದೇಶ ಕೇವಲ ನೀತಿ ನಿರ್ಧಾರವಾಗಿದ್ದು, ಸಂಬಂಧಿತ ನಿಯಮಗಳಲ್ಲಿ ತಿದ್ದುಪಡಿ ಆಗುವವರೆಗೆ ಅದು ಜಾರಿಗೆ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ, ನಿಯಮ ತಿದ್ದುಪಡಿ ಆಗುವವರೆಗೆ ವರ್ಕ್ ಇನ್ಸ್‌ಪೆಕ್ಟರ್ ಹುದ್ದೆಗಳು ಜಾರಿಯಲ್ಲೇ ಇರುತ್ತವೆ. ಆಯ್ಕೆಯಾದವರಿಗೆ ನೇಮಕಾತಿ ಹಕ್ಕು ಸಂಪೂರ್ಣ ಖಚಿತವಲ್ಲದಿದ್ದರೂ, ನೇಮಕಾತಿ ನಿರಾಕರಣೆಗೆ ಕಾನೂನುಬದ್ಧ ಕಾರಣಗಳಿರಬೇಕು ಎಂದು ಪೀಠ ಒತ್ತಿ ಹೇಳಿದೆ.

ಅಲ್ಲದೆ, 211 ಹುದ್ದೆಗಳಿದ್ದರೂ ಕೆಲವರು ಮಾತ್ರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಅವರ ನೇಮಕಾತಿಯನ್ನು ಪರಿಗಣಿಸಬೇಕು ಎಂದು ಸೂಚಿಸಿದೆ. ಭವಿಷ್ಯದಲ್ಲಿ ಈ ವೃಂದವನ್ನು ಕಾನೂನುಬದ್ಧವಾಗಿ ರದ್ದುಪಡಿಸಿದರೆ, ಅರ್ಜಿದಾರರನ್ನು ಸಮಾನ ಹುದ್ದೆಗಳಿಗೆ ವರ್ಗಾಯಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

LPG ಬಿಕ್ಕಟ್ಟು ನಿವಾರಿಸಲು ಲಾಕ್ ಡೌನ್ ಕೇವಲ ವದಂತಿ, ಆತಂಕ ಬೇಡ: ಕೇಂದ್ರ ಸರ್ಕಾರ ಸ್ಪಷ್ಟನೆ

0

ನವದೆಹಲಿ: ದೇಶದಲ್ಲಿ ತೈಲ ಬಿಕ್ಕಟ್ಟು ಉಲ್ಭಣಗೊಂಡ ಹಿನ್ನೆಲೆಯಲ್ಲಿ ವಿವಿಧ ವದಂತಿಗಳು ಹರಿದಾಡುತ್ತಿವೆ. ತೈಲ ಸಂಕಷ್ಟದಿಂದ ದೇಶದಲ್ಲಿ ಲಾಕ್‌ಡೌನ್ ಜಾರಿಯಾಗಬಹುದು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಪ್ರತಿಕ್ರಿಯಿಸಿ, ದೇಶದಲ್ಲಿ ಲಾಕ್‌ಡೌನ್ ಜಾರಿಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೇಳಿದ್ದಾರೆ.

ಜಾಗತಿಕ ಪರಿಸ್ಥಿತಿ ಅಸ್ಥಿರವಾಗಿದ್ದರೂ, ಇಂಧನ ಪೂರೈಕೆಯನ್ನು ಸರ್ಕಾರ ನಿಕಟವಾಗಿ ಗಮನಿಸುತ್ತಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧವಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಲಾಕ್‌ಡೌನ್ ಕುರಿತು ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿರುವ ಅವರು, ಇಂತಹ ವದಂತಿಗಳು ಸಮಾಜಕ್ಕೆ ಹಾನಿಕಾರಕವಾಗುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರೂ ಶಾಂತವಾಗಿದ್ದು, ಒಗ್ಗಟ್ಟಿನಿಂದ ನಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಇದೇ ವೇಳೆ, ಕಮರ್ಷಿಯಲ್ ಗ್ಯಾಸ್ ಪೂರೈಕೆಯ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ರಾಜ್ಯ ಸರ್ಕಾರಗಳ ಮನವಿಯ ಮೇರೆಗೆ ಗ್ಯಾಸ್ ಪೂರೈಕೆಯನ್ನು ಶೇ.20ರಷ್ಟು ಹೆಚ್ಚಿಸಲಾಗಿದೆ. ಈಗಿರುವ ಮಿತಿಯನ್ನು ಶೇ.50ರಿಂದ ಶೇ.70ಕ್ಕೆ ಹೆಚ್ಚಿಸಲಾಗಿದ್ದು, ಕೈಗಾರಿಕೆ, ಜವಳಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಇದರಿಂದ ನೆರವು ದೊರೆಯಲಿದೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಸಂಜೆ 6.30ಕ್ಕೆ ನಡೆಯಲಿರುವ ಈ ಸಭೆಯಲ್ಲಿ, ಉಂಟಾಗಿರುವ ಬಿಕ್ಕಟ್ಟನ್ನು ಎದುರಿಸಲು ಅಗತ್ಯ ಸಲಹೆಗಳನ್ನು ನೀಡುವ ಸಾಧ್ಯತೆ ಇದೆ.

ಅಯೋಧ್ಯೆಯಲ್ಲಿ ಶ್ರೀರಾಮನವಮಿ ಸಂಭ್ರಮ: ಬಾಲರಾಮನಿಗೆ ಸೂರ್ಯರಶ್ಮಿ ತಿಲಕ

0

ಅಯೋಧ್ಯೆ: ರಾಮನವಮಿ ಹಬ್ಬದ ಪವಿತ್ರ ಸಂದರ್ಭದಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿ ನಡೆದಸೂರ್ಯ ತಿಲಕಆಚರಣೆ ಬಾರಿ ವಿಶೇಷ ವೈಭವದಿಂದ ನೆರವೇರಿತು. ಬಾಲ ರಾಮನ ಮೂರ್ತಿಯ ಹಣೆ ಮೇಲೆ ನೇರವಾಗಿ ಸೂರ್ಯ ಕಿರಣಗಳು ತಿಲಕದ ರೂಪದಲ್ಲಿ ಹೊಳೆಯುವ ಕ್ಷಣ ಭಕ್ತರಲ್ಲಿ ಅಪಾರ ಭಕ್ತಿ ಮತ್ತು ಆನಂದವನ್ನು ಮೂಡಿಸಿತು.

ಅಧಿಕಾರಿಗಳ ಮಾಹಿತಿ ಪ್ರಕಾರ, ಶ್ರೀರಾಮನ ಮೂರ್ತಿಯ ಹಣೆಯ ಮೇಲಿನ ಸೂರ್ಯ ತಿಲಕವು ಮಧ್ಯಾಹ್ನ 12 ಗಂಟೆಗೆ ಆರಂಭವಾಗಿ ಸುಮಾರು 3 ರಿಂದ 4 ನಿಮಿಷಗಳವರೆಗೆ ಸ್ಪಷ್ಟವಾಗಿ ಕಾಣಿಸಿಕೊಂಡಿತು.

ಅದ್ಭುತ ದೃಶ್ಯದ ಹಿಂದೆ ಸುಧಾರಿತ ವೈಜ್ಞಾನಿಕ ತಂತ್ರಜ್ಞಾನ ಕಾರ್ಯನಿರ್ವಹಿಸಿದೆ. ದೇವಸ್ಥಾನದ ಮೇಲ್ಭಾಗದಲ್ಲಿ ಅಳವಡಿಸಿದ ವಿಶೇಷ ಲೆನ್ಸ್ಗಳು ಮತ್ತು ಕನ್ನಡಿಗಳ ವ್ಯವಸ್ಥೆಯ ಮೂಲಕ ಸೂರ್ಯನ ಕಿರಣಗಳನ್ನು ನಿಖರವಾಗಿ ಗರ್ಭಗುಡಿಯೊಳಗೆ ಹರಿಸುವ ವ್ಯವಸ್ಥೆ ಮಾಡಲಾಗಿದೆ.

ತಂತ್ರಜ್ಞಾನವು ಸೂರ್ಯನ ಸ್ಥಿತಿಯನ್ನು ಲೆಕ್ಕಹಾಕಿ, ಸರಿಯಾದ ಸಮಯದಲ್ಲಿ ಕಿರಣಗಳು ರಾಮನ ಮೂರ್ತಿಯ ಹಣೆಯ ಮೇಲೆ ಬೀಳುವಂತೆ ವಿನ್ಯಾಸಗೊಳಿಸಲಾಗಿದೆ. ಸಂದರ್ಭದಲ್ಲಿ ಇಡೀ ಅಯೋಧ್ಯೆ ನಗರ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದು, ಎಲ್ಲೆಡೆ ಶ್ರೀರಾಮನ ಜಯಘೋಷ ಮೊಳಗಿತು.

ಗ್ಯಾಸ್ ಕೊರತೆ ನಡುವೆಯೇ ಚಿಕ್ಕಬಳ್ಳಾಪುರದಲ್ಲಿ 247 ಸಿಲಿಂಡರ್ ಜಪ್ತಿ!

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಗೃಹ ಬಳಕೆಗಾಗಿ ಮೀಸಲಾಗಿರುವ ಸಿಲಿಂಡರ್ ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದುದರಿಂದ 247 ಸಿಲಿಂಡರ್ ಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಜಿ.ಪ್ರಭು ಮಾಹಿತಿ ನೀಡಿದ್ದಾರೆ.

ಜಪ್ತಿ ಮಾಡಿದ ಸಿಲಿಂಡರ್ ವಿತರಣೆ ಹೀಗಿದೆ: ಬಾಗೇಪಲ್ಲಿ – 13, ಚಿಕ್ಕಬಳ್ಳಾಪುರ – 71, ಚಿಂತಾಮಣಿ – 26, ಗೌರಿಬಿದನೂರು – 36, ಗುಡಿಬಂಡೆ – 68, ಶಿಡ್ಲಘಟ್ಟ – 31, ಚೇಳೂರು – 2. ಇದರಲ್ಲಿ 214 ಸಿಲಿಂಡರ್ಗಳು ಗೃಹಬಳಕೆಯ, 33 ಸಿಲಿಂಡರ್ ಗಳು ವಾಣಿಜ್ಯ ಉದ್ದೇಶದವು ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಗೃಹಬಳಕೆ ಸಿಲಿಂಡರ್ ಗಳನ್ನು ವಾಣಿಜ್ಯಕ್ಕಾಗಿ ಬಳಸುವವರ ವಿರುದ್ಧ ಭವಿಷ್ಯದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ಶಾಶ್ವತವಾಗಿ ಸಿಲಿಂಡರ್ ಮಂಜೂರಾತಿ ರದ್ದಾಗಬಹುದೆಂದು ಎಚ್ಚರಿಕೆ ನೀಡಿದ್ದಾರೆ.

 

ಇಸ್ರೇಲ್-ಅಮೆರಿಕ vs ಇರಾನ್ ದಾಳಿ-ಪ್ರತಿದಾಳಿ: 19 ಮಂದಿ ಸಾವು!

0

ವಾಷಿಂಗ್ಟನ್/ಜೆರುಸಲೆಂ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧ 28ನೇ ದಿನಕ್ಕೆ ಕಾಲಿಟ್ಟಿದ್ದು, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇನ್ನೂ ತೀವ್ರವಾಗಿ ಮುಂದುವರಿಯುತ್ತಿದೆ. ಇರಾನದ ಕೋಮ್ ನಗರದಲ್ಲಿ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ವಾಯುದಾಳಿ ನಡೆಸಿವೆ.

ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡ ದಾಳಿಯಲ್ಲಿ ಮೂವರು ಮನೆಗಳು ಧ್ವಂಸಗೊಂಡಿದ್ದು, ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ. ಹೆಜ್ಬೊಲ್ಲಾ ಸಂಘಟನೆಯನ್ನು ನಿಗ್ರಹಿಸಲು ಇಸ್ರೇಲ್ ಲೆಬನಾನ್ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಇತ್ತೀಚಿನ ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದಾರೆ.

ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ತೀವ್ರ ಪ್ರತಿದಾಳಿ ನಡೆಸಿದೆ. ಟೆಲ್ ಅವಿವ್ ನಗರವನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಲಾಗಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಕದನ ವಿರಾಮವನ್ನು ಇನ್ನೂ 10 ದಿನಗಳ ಕಾಲ ವಿಸ್ತರಿಸುವುದಾಗಿ ಘೋಷಿಸಿದ್ದಾರೆ.

ಅವಧಿಯಲ್ಲಿ ಇಂಧನ ಸ್ಥಾವರಗಳ ಮೇಲೆ ದಾಳಿ ನಡೆಸುವುದಿಲ್ಲ ಎಂದು ತಿಳಿಸಲಾಗಿದೆ. ಇರಾನ್ ಮನವಿಯ ಮೇರೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡುತ್ತಿದೆ: ಡಿಕೆ ಶಿವಕುಮಾರ್

ಬೆಂಗಳೂರು: ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆಯನ್ನು ಖಂಡಿಸಿ,  ಡಿಸಿಎಂ ಡಿಕೆ ಶಿವಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. “ಕೇಂದ್ರ ಸರ್ಕಾರ ನಮ್ಮನ್ನ ಕೊಲೆ ಮಾಡುತ್ತಿದೆ” ಎಂದು ತೈಲ ಬೆಲೆ ಏರಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ತಮ್ಮ ಪಕ್ಷದ ವರಿಷ್ಠ ನಾಯಕರು ಮತ್ತು ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

ಅಂತೆಯೇ, ಐಪಿಎಲ್ ಟಿಕೆಟ್ ಸಂಬಂಧಿ ಶಾಸಕರ ಬೇಡಿಕೆ ಕುರಿತು ಡಿಸಿಎಂ ಹೇಳಿದರು, “ಶಾಸಕರ ಬೇಡಿಕೆ ನ್ಯಾಯಸಮ್ಮತ. ಅವರು ವ್ಯವಸ್ಥೆಯ ಭಾಗ, ಅವರಿಗೆ ಸೂಕ್ತ ವ್ಯವಸ್ಥೆ ಒದಗಿಸಬೇಕು. ನಾನು ಕೆಎಸ್ಸಿಎ ಅಧ್ಯಕ್ಷರೊಂದಿಗೆ ಇಂದು ಈ ಬಗ್ಗೆ ಚರ್ಚೆ ಮಾಡುತ್ತೇನೆ.”

ಇದಕ್ಕೂ ನಡುವೆ, ಟಿಕೆಟ್ ಬೇಡಿಕೆಯನ್ನು ವಿರೋಧಿಸಿದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ಕಿಡಿ ಕಾರಿದರು. “ತೇಜಸ್ವಿ ಸೂರ್ಯ ತನ್ನ ಜ್ಞಾನವನ್ನು ತಮ್ಮ ಪಕ್ಷಕ್ಕೆ ಹೇಳಲಿ, ನಮಗೆ ಅಲ್ಲ,” ಎಂದು ಟೀಕೆ ಮಾಡಿದ್ದಾರೆ.

ಮಧ್ಯಪ್ರಾಚ್ಯ ಯುದ್ಧ: ಮತ್ತೆ 10 ದಿನ ಕದನ ವಿರಾಮ ಘೋಷಿಸಿದ ಟ್ರಂಪ್

0

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧವನ್ನು ಕೊನೆಗೊಳಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಕಲ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇರಾನ್ ಜೊತೆ ಮಾತುಕತೆ ಮುಂದುವರಿಸಲು  ಇಂಧನ ಸೌಲಭ್ಯಗಳ ಮೇಲಿನ ದಾಳಿ ಮತ್ತೆ 10 ದಿನಗಳವರೆಗೆ ವಿರಾಮಗೊಳಿಸಿರುವುದಾಗಿ ಘೋಷಿಸಿದ್ದಾರೆ.

ಟ್ರಂಪ್ ನಿರ್ಧಾರವನ್ನು ಇರಾನಿನ ಸರ್ಕಾರದ ಕೋರಿಕೆಯ ಮೇರೆಗೆ ತೆಗೆದುಕೊಂಡಿದ್ದಾರೆ ಮತ್ತು ಇದು ಇಬ್ಬರ ನಡುವೆ ಶಾಂತಿಯುತ ಮಾತುಕತೆಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಮಾಹಿತಿಯನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಷಿಯಲ್ನಲ್ಲಿ ಹಂಚಿಕೊಂಡಿದ್ದಾರೆ.

ಟ್ರಂಪ್ ಪೋಸ್ಟ್ನಲ್ಲಿ, ಇರಾನಿನ ಸರ್ಕಾರದ ಕೋರಿಕೆಯ ಮೇರೆಗೆ, ನಾನು ಇಂಧನ ಸ್ಥಾಪನೆಗಳ ಮೇಲಿನ ದಾಳಿಯನ್ನ 10 ದಿನಗಳವರೆಗೆ ವಿರಾಮಗೊಳಿಸುತ್ತಿದ್ದೇನೆ. ಇದು ಏಪ್ರಿಲ್ 6 ರಾತ್ರಿ 8 ಗಂಟೆಯವರೆಗೆ ಮುಂದುವರಿಯುತ್ತದೆ ಎಂದು ತಿಳಿಸಿದ್ದೇವೆ.

ಅಲ್ಲದೇ, ಮಾಧ್ಯಮ ವರದಿಗಳಲ್ಲಿ ಇರಾನ್ ಮಾತುಕತೆಗೆ ಒಪ್ಪಿಲ್ಲ ಎನ್ನುವ ತೀವ್ರ ಸುದ್ದಿಗಳನ್ನು ಟ್ರಂಪ್ ತಳ್ಳಿಹಾಕಿದ್ದಾರೆ. ಅಮೆರಿಕಾ ಮತ್ತು ಇರಾನ್ ನಡುವೆ ನಡೆಯುತ್ತಿರುವ ಮಾತುಕತೆ ಸಕಾರಾತ್ಮಕ ದಿಕ್ಕಿನಲ್ಲಿ, ಚೆನ್ನಾಗಿ ನಡೆಯುತ್ತಿವೆ ಎಂದು ದೃಢಪಡಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಮುಂದುವರಿದ ಸಿಲಿಂಡರ್ ಹಾಹಾಕಾರ; ನರಗುಂದದಲ್ಲಿ ಉದ್ದನೆಯ ಸಾಲು – ಜನರ ಆಕ್ರೋಶ!

0

ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿದ್ದು, ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಲಿಂಡರ್ ಪಡೆಯಲು ಜನರು ನಸುಕಿನಿಂದಲೇ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡು ಬಂದಿವೆ.

ಪಟ್ಟಣದ ಸಿದ್ದನಬಾವಿ ಓಣಿಯಲ್ಲಿರುವ ಇಂಡಿಯನ್ ಗ್ಯಾಸ್ ಏಜೆನ್ಸಿ ಎದುರು ಶುಕ್ರವಾರವೂ ಅರ್ಧ ಕಿಲೋಮೀಟರ್ ಉದ್ದದ ಸಾಲು ಕಂಡು ಬಂದಿದ್ದು, ಮಹಿಳೆಯರು ಮಕ್ಕಳ ಸಮೇತ ಖಾಲಿ ಸಿಲಿಂಡರ್ ಹಿಡಿದು ಗಂಟೆಗಳ ಕಾಲ ಕಾಯುತ್ತಿದ್ದಾರೆ. ವಿವಿಧ ಗ್ರಾಮಗಳಿಂದ ಆಗಮಿಸಿದ ನೂರಾರು ಜನರು ಬೆಳಗ್ಗೆಯೇ ಕ್ಯೂನಲ್ಲಿ ನಿಂತು ಸಿಲಿಂಡರ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

“ಮೂರು ತಿಂಗಳ ಹಿಂದೆ ಸಿಲಿಂಡರ್ ಪಡೆದಿದ್ದೇವೆ. ಈಗ ಬುಕ್ ಮಾಡಿದರೂ ಸಿಗುತ್ತಿಲ್ಲ. ಬೇರೆವರಿಗೆ ಕೊಡಲಾಗುತ್ತಿದೆ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಮಧ್ಯವರ್ತಿಗಳ ಮೂಲಕ ಹೆಚ್ಚಿನ ಹಣಕ್ಕೆ ಸಿಲಿಂಡರ್ ಮಾರಾಟವಾಗುತ್ತಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, ಬೆಳಗ್ಗೆ 8ರಿಂದ 11 ಗಂಟೆಯವರೆಗೆ ಮಾತ್ರ ಪೂರೈಕೆ ನಡೆಯುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಕಳೆದ ನಾಲ್ಕೈದು ದಿನಗಳಿಂದ ಈ ಸಮಸ್ಯೆ ಮುಂದುವರಿದಿದ್ದರೂ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೃಹಬಳಕೆ ಸಿಲಿಂಡರ್ ಕೊರತೆಯಿಂದ ನರಗುಂದದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೊಸ ತಂತ್ರಜ್ಞಾನ ಬಳಸಿ 3 ಕರಡಿಗಳನ್ನು ಏಕಕಾಲಕ್ಕೆ ಸೆರೆಹಿಡಿದ ಅರಣ್ಯ ಇಲಾಖೆ ಅಧಿಕಾರಿಗಳು!

ಬಳ್ಳಾರಿ: ಇದೇ ಮೊದಲ ಬಾರಿಗೆ ಹೊಸ ತಂತ್ರಜ್ಞಾನ ಬಳಸಿ (Automatic Mobile App Based Cage locking System) ಅರಣ್ಯ ಇಲಾಖೆ ಅಧಿಕಾರಿಗಳು ಜಿಂದಾಲ್‌ನಲ್ಲಿದ್ದ ಮೂರು ಕರಡಿಗಳನ್ನು ಏಕಕಾಲಕ್ಕೆ ಸೆರೆಹಿಡಿದಿದ್ದಾರೆ.

ಇದರಿಂದ ಗ್ರಾಮಸ್ಥರು ಹಾಗೂ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಎಸ್, ಬಳ್ಳಾರಿ ಜಿಲ್ಲೆಯ ತೋರಣಗಲ್ ಬಳಿಯ ಜಿಂದಾಲ್‌ನ ವಿದ್ಯಾನಗರದ ಟೌನ್‌ಶಿಪ್‌ನಲ್ಲಿ ಕಳೆದ 10 ತಿಂಗಳಿಂದ ಒಂದು ಕರಡಿ ಹಾಗೂ ಎರಡು ಮರಿಗಳು ಬೀಡು ಬಿಟ್ಟಿದ್ದವು. ಪ್ರತೀ ದಿನ ಕರಡಿಗಳನ್ನ ಕಂಡು ಜಿಂದಾಲ್ ಕಾರ್ಮಿಕರು, ನೌಕರರು ಹಾಗೂ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು. ಹೀಗಾಗಿ ವಿಶೇಷ ಕಾರ್ಯಾಚರಣೆ ಮೂಲಕ ಮೂರು ಕರಡಿಗಳನ್ನ ಏಕಕಾಲದಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Automatic Mobile App Based Cage locking System ಮೂಲಕ ಸೆರೆ ಹಿಡಿದ ಕರಡಿಗಳನ್ನ ರೇಡಿಯೋ-ಕಾಲರ್ ಅಳವಡಿಸಿ ಕರಡಿ ಧಾಮಕ್ಕೆ ಬಿಡಲಾಯಿತು. ಅರಣ್ಯ ಅಧಿಕಾರಿಗಳ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ಸೂಚಿಸಿದ್ದಾರೆ.

error: Content is protected !!