Home Blog Page 103

ದೆಹಲಿಯಲ್ಲಿ ಬಿಜೆಪಿ ಗೆದ್ದರೆ ರಾಜಕೀಯ ತ್ಯಜಿಸುವೆ: ಕೇಜ್ರಿವಾಲ್ ಸವಾಲ್

0

ನವದೆಹಲಿ: ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ತಮಗೆ, ಮನೀಶ್ ಸಿಸೋಡಿಯಾ ಹಾಗೂ ಇತರರಿಗೆ ನ್ಯಾಯಾಲಯ ಖುಲಾಸೆ ನೀಡಿದ ಹಿನ್ನೆಲೆ ಮಾತನಾಡಿದ ಅವರು, ನರೇಂದ್ರ ಮೋದಿ ಮತ್ತು ಅಮಿತ್ ಶಾ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ನ್ಯಾಯಾಲಯ ಪ್ರಕರಣವನ್ನು ನಕಲಿ ಮತ್ತು ವಿಚಾರಣೆಗೆ ಅನರ್ಹವೆಂದು ಹೇಳಿರುವುದಾಗಿ ಉಲ್ಲೇಖಿಸಿದ ಕೇಜ್ರಿವಾಲ್, ತಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆದಿದೆ ಎಂದು ಆರೋಪಿಸಿದರು.

ದೆಹಲಿಯಲ್ಲಿ ಚುನಾವಣೆ ನಡೆಸಿ ಫಲಿತಾಂಶ ನೋಡೋಣ ಎಂದು ಸವಾಲು ಹಾಕಿದ ಅವರು, ಬಿಜೆಪಿ ಹತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ರಾಜಕೀಯ ತ್ಯಜಿಸುವುದಾಗಿ ಘೋಷಿಸಿದರು. 2021–22ರ ಅಬಕಾರಿ ನೀತಿ ರೂಪಿಸುವ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಆರೋಪಿಸಿತ್ತು. ಆದರೆ ನ್ಯಾಯಾಲಯ ಪ್ರಾಸಿಕ್ಯೂಷನ್ ಪುರಾವೆಗಳನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ತೀರ್ಪು ನೀಡಿದೆ.

ಮದುವೆಗೆ ನಿರಾಕರಣೆ: ಪ್ರೇಯಸಿಯಿಂದ ಜಿಮ್ ಟ್ರೈನರ್​​ಗೆ ಚಾಕು ಇರಿತ!

0

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿಯಲ್ಲಿ ಪ್ರೇಮ ಕಲಹ ಭೀಕರ ತಿರುವು ಪಡೆದಿದೆ.

ತಾನು ಪ್ರೀತಿಸಿದ್ದ ಯುವಕ ಮದುವೆಗೆ ನಿರಾಕರಿಸಿ ದೂರವಾಗುತ್ತಿದ್ದಾನೆಂಬ ಆಕ್ರೋಶದಿಂದ 30 ವರ್ಷದ ಸುಧಾ ತನ್ನ ಪ್ರಿಯಕರ 27 ವರ್ಷದ ವೇಣುಗೋಪಾಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ. ಜಿಮ್‌ನಲ್ಲಿ ಪರಿಚಯವಾಗಿ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಇವರ ಸಂಬಂಧದಲ್ಲಿ ಕಳೆದ ನಾಲ್ಕು ತಿಂಗಳಿಂದ ಅಂತರ ಉಂಟಾಗಿತ್ತು ಎನ್ನಲಾಗಿದೆ.

ನಿನ್ನೆ ಸಂಜೆ ಮಾತನಾಡಬೇಕೆಂದು ಮನೆ ಹೊರಗೆ ಕರೆಸಿಕೊಂಡ ಸುಧಾ, ಕೆಲಕಾಲ ವಾಗ್ವಾದದ ಬಳಿಕ ವೇಣುಗೋಪಾಲ್‌ನ ಎದೆ, ಹೊಟ್ಟೆ ಮತ್ತು ಕೈ ಭಾಗಗಳಿಗೆ ಚಾಕು ಇರಿದು ಪರಾರಿಯಾಗಿದ್ದಾಳೆ. ರಕ್ತದ ಮಡುವಿನಲ್ಲಿದ್ದ ವೇಣು, ಕುಟುಂಬಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಕಠ್ಮಂಡುವಿನಲ್ಲಿ ಇಳಿಯಲು ಅನುಮತಿ ಇಲ್ಲ: ಎರಡು ದಿನ ವಿಮಾನದಲ್ಲೇ ಉಳಿದ ಕನ್ನಡಿಗರು

0

ಬೆಂಗಳೂರು: ಬೆಂಗಳೂರಿನಿಂದ ನೇಪಾಳದ ಕಠ್ಮಂಡುಗೆ ತೆರಳುತ್ತಿದ್ದ ಕನ್ನಡಿಗರು ಭಾರೀ ಸಂಕಷ್ಟ ಅನುಭವಿಸಿದ ಘಟನೆ ನಡೆದಿದೆ. ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಕಠ್ಮಂಡುವಿನಲ್ಲಿ ವಿಮಾನ ಇಳಿಯಲು ಅನುಮತಿ ಸಿಗದೆ, ಪ್ರಯಾಣಿಕರು ಎರಡು ದಿನಗಳ ಕಾಲ ವಿಮಾನದಲ್ಲೇ ಉಳಿಯುವಂತಾಯಿತು.

ಫೆಬ್ರವರಿ 26ರಂದು ಬೆಳಗ್ಗೆ ಬೆಂಗಳೂರಿನಿಂದ ಕಠ್ಮಂಡುಗೆ ಪ್ರಯಾಣ ಆರಂಭಿಸಿದ್ದ ವಿಮಾನವು, ಲ್ಯಾಂಡಿಂಗ್ ಅನುಮತಿ ಸಿಗದ ಕಾರಣ ದಿನಪೂರ್ತಿ ಆಕಾಶದಲ್ಲೇ ಸುತ್ತಾಡಿತು. ಬಳಿಕ ರಾತ್ರಿ ಮತ್ತೆ ಬೆಂಗಳೂರಿಗೆ ಮರಳಿತು. ಇದರಿಂದ ಪ್ರವಾಸಕ್ಕೆಂದು ತೆರಳಿದ್ದ ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾದರು.

ಪ್ರಯಾಣಿಕರ ಆರೋಪದಂತೆ, ವಿಮಾನದಲ್ಲಿದ್ದ ಅವಧಿಯಲ್ಲಿ ಸರಿಯಾದ ಆಹಾರ ಹಾಗೂ ಕುಡಿಯುವ ನೀರು ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದಾಗಿ ಮಕ್ಕಳು, ವೃದ್ಧರು ಸೇರಿ ಹಲವರು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.

ನಂತರ ಫೆಬ್ರವರಿ 27ರ ಬೆಳಗ್ಗೆ ಮತ್ತೆ ಅದೇ ವಿಮಾನದಲ್ಲಿ ಸುಮಾರು 170 ಪ್ರಯಾಣಿಕರನ್ನು ಕಠ್ಮಂಡುಗೆ ಕರೆದೊಯ್ಯಲಾಗಿದೆ. ಈ ಅವಾಂತರದಿಂದಾಗಿ ಪ್ರಯಾಣಿಕರಲ್ಲಿ ಆತಂಕ ಹಾಗೂ ಆಕ್ರೋಶ ವ್ಯಕ್ತವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ವಿಮಾನ ಸಂಸ್ಥೆ ಹಾಗೂ ಅಧಿಕಾರಿಗಳಿಂದ ಸ್ಪಷ್ಟನೆ ನಿರೀಕ್ಷಿಸಲಾಗಿದೆ.

ಆರಂಭದಲ್ಲಿ ಲಕ್ಷಣಗಳಿಲ್ಲ! ಫ್ಯಾಟಿ ಲಿವರ್ ಗುರುತಿಸುವುದು ಹೇಗೆ?

0

ಒಮ್ಮೆ 40–50 ವರ್ಷದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಫ್ಯಾಟಿ ಲಿವರ್ ಸಮಸ್ಯೆ ಈಗ ಯುವಕರು, ಯುವತಿಯರು ಮತ್ತು ಮಕ್ಕಳಲ್ಲಿಯೂ ಹೆಚ್ಚಾಗಿ ಕಾಣಿಸುತ್ತಿದೆ. ವೈದ್ಯರ ಪ್ರಕಾರ, ಮದ್ಯಪಾನ ಮಾಡದವರಲ್ಲಿಯೂ ಈ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ. ಇದಕ್ಕೆ ಪ್ರಮುಖ ಕಾರಣ ನಮ್ಮ ದೈನಂದಿನ ಆಹಾರ ಪದ್ಧತಿ.

ಆಹಾರವೇ ದೊಡ್ಡ ಕಾರಣ:

ಡಾ. ಅಜಯ್ ಕುಮಾರ್ ಅವರ ಪ್ರಕಾರ, ಪ್ರತಿದಿನ ಹೊರಗಿನ ಆಹಾರ ಸೇವಿಸುವ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕ. ವಿಶೇಷವಾಗಿ ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಿದ ಬ್ರೆಡ್, ಫಾಸ್ಟ್ ಫುಡ್, ತಂಪು ಪಾನೀಯಗಳು, ಸಿಹಿತಿಂಡಿಗಳು ಮತ್ತು ಹೆಚ್ಚು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಯಕೃತ್ತಿನಲ್ಲಿ ಕೊಬ್ಬು ಶೇಖರಣೆಯಾಗಲು ಕಾರಣವಾಗುತ್ತವೆ.

ಫ್ಯಾಟಿ ಲಿವರ್ ಹೇಗೆ ಉಂಟಾಗುತ್ತದೆ?

ಯಕೃತ್ತಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸಿದಾಗ ಫ್ಯಾಟಿ ಲಿವರ್ ಉಂಟಾಗುತ್ತದೆ. ಇದು ಗ್ರೇಡ್ 1, ಗ್ರೇಡ್ 2 ಲಿವರ್ ಫೈಬ್ರೋಸಿಸ್ ಹಾಗೂ ಗಂಭೀರ ಹಂತವಾದ ಸಿರೋಸಿಸ್ ವರೆಗೆ ಬೆಳೆಯಬಹುದು. ಸಿರೋಸಿಸ್ ಸ್ಥಿತಿ ಅತ್ಯಂತ ಅಪಾಯಕಾರಿ; ಕೆಲವು ಸಂದರ್ಭಗಳಲ್ಲಿ ಲಿವರ್ ಕಸಿ ಅಗತ್ಯವಾಗಬಹುದು.

ಮದ್ಯಪಾನ ಮಾಡದವರಲ್ಲಿ ಕಂಡುಬರುವ ಸ್ಥಿತಿಯನ್ನು ‘ನಾನ್-ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್’ ಎಂದು ಕರೆಯಲಾಗುತ್ತದೆ.

ಆರಂಭಿಕ ಲಕ್ಷಣಗಳು:

ಆರಂಭದಲ್ಲಿ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ನಂತರ:

  • ಆಯಾಸ
  • ಹೊಟ್ಟೆಯ ಬಲಭಾಗದಲ್ಲಿ ಸಣ್ಣ ನೋವು
  • ತೂಕ ಹೆಚ್ಚಾಗುವುದು

ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಆರಂಭಿಕ ಹಂತದಲ್ಲಿ ಈ ಸಮಸ್ಯೆಯನ್ನು ನಿಯಂತ್ರಿಸಬಹುದು.

ತಡೆಯಲು ಏನು ಮಾಡಬೇಕು?

*ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿ
*ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ
*ತೂಕವನ್ನು ನಿಯಂತ್ರಣದಲ್ಲಿಡಿ
*ಸಕ್ಕರೆ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿ

ಸರಿಯಾದ ಜೀವನಶೈಲಿ ಮತ್ತು ಸಮತೋಲನ ಆಹಾರ ಪದ್ಧತಿಯನ್ನು ಅನುಸರಿಸಿದರೆ ಫ್ಯಾಟಿ ಲಿವರ್ ಸಮಸ್ಯೆಯನ್ನು ತಡೆಗಟ್ಟುವುದು ಸಾಧ್ಯ. ಆರೋಗ್ಯವೇ ದೊಡ್ಡ ಸಂಪತ್ತು ಎಂಬುದನ್ನು ಮರೆಯಬೇಡಿ.

ಹೋಳಿಕಾ ದಹನದಿಂದ ಬಣ್ಣಗಳಾಟದವರೆಗೆ: ಹೋಳಿ ಮಹತ್ವ ಏನು?

0

2026ರ ಸಾಲಿನಲ್ಲಿ ಹೋಳಿ ಹಬ್ಬವನ್ನು ಮಾರ್ಚ್ 4ರಂದು ದೇಶಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಕೇವಲ ಬಣ್ಣಗಳಾಟವಲ್ಲ, ಬದಲಾಗಿ ಇದು ಸಂಸ್ಕೃತಿ, ಭಕ್ತಿ ಮತ್ತು ಪ್ರಕೃತಿಯ ಬದಲಾವಣೆಯ ಸಂಗಮವಾಗಿದೆ. ಇದು ಪ್ರಕೃತಿಯ ನವೀಕರಣ ಮತ್ತು ಮಾನವ ಸಂಬಂಧಗಳ ಮರುಜೋಡಣೆಯ ಅದ್ಭುತ ಸಂಕೇತವಾಗಿದೆ.

ಹಬ್ಬದ ಆರಂಭವು ಹಿಂದಿನ ದಿನವಾದ ಮಾರ್ಚ್ 3ರ ಸಂಜೆ ನಡೆಯುವ ‘ಹೋಳಿಕಾ ದಹನ’ ದೊಂದಿಗೆ ಶುರುವಾಗುತ್ತದೆ. ಸಂಜೆ 6:22 ರಿಂದ 8:50ರವರೆಗಿನ ಶುಭ ಮುಹೂರ್ತದಲ್ಲಿ, ಅಧರ್ಮದ ಸಂಕೇತವಾದ ಹೋಳಿಕೆಯನ್ನು ದಹಿಸಿ, ಸತ್ಯದ ಹಾದಿಯಲ್ಲಿ ನಡೆದ ಭಕ್ತ ಪ್ರಹ್ಲಾದನ ಗೆಲುವನ್ನು ಸ್ಮರಿಸಲಾಗುತ್ತದೆ. ಅಂದು ಬೆಳಗುವ ಅಗ್ನಿಯು ಮನಸ್ಸಿನ ದ್ವೇಷಗಳನ್ನು ಸುಟ್ಟುಹಾಕಿ, ನೈತಿಕತೆಯ ಹೊಸ ದೀಪವನ್ನು ಬೆಳಗುತ್ತದೆ.

ಚಳಿಗಾಲದ ಜಡತೆಯನ್ನು ಕಳೆದು, ವಸಂತದ ಚೈತನ್ಯವನ್ನು ಸ್ವಾಗತಿಸಲು ಈ ಹಬ್ಬವು ವೈಜ್ಞಾನಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಮಗೆ ನೆರವಾಗುತ್ತದೆ. ಪ್ರಾಚೀನ ಕಾಲದಲ್ಲಿ ಹಸಿರು ಮತ್ತು ಹಳದಿ ಬಣ್ಣಗಳಿಗಾಗಿ ಪಲಾಶದ ಹೂವು ಮತ್ತು ಅರಿಶಿನದಂತಹ ನೈಸರ್ಗಿಕ ಮೂಲಗಳನ್ನು ಬಳಸಲಾಗುತ್ತಿತ್ತು, ಇದು ಆರೋಗ್ಯಕ್ಕೂ ಪೂರಕವಾಗಿತ್ತು.

ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವಂತೆ, ಮಥುರಾದ ‘ಲಠ್ ಮಾರ್ ಹೋಳಿ’, ಗೋವಾದ ‘ಶಿಗ್ಮೋತ್ಸವ’ ಮತ್ತು ಪಂಜಾಬ್ ನಲ್ಲಿ ಆಚರಿಸಲ್ಪಡುವ ‘ಹೋಲಾ ಮೊಹಲ್ಲಾ’ ದಂತಹ ಆಚರಣೆಗಳು ಹಬ್ಬಕ್ಕೆ ವಿಶಿಷ್ಟ ಮೆರಗು ನೀಡುತ್ತವೆ. ವಿಶೇಷವಾಗಿ ಹೋಲಾ ಮೊಹಲ್ಲಾ ಹಬ್ಬವನ್ನು ಸಿಖ್ ಪಂಥದವರು ಶೌರ್ಯಪ್ರದರ್ಶನಗಳೊಂದಿಗೆ ಆಚರಿಸುತ್ತಾರೆ.

ಹೋಳಿಯ ಅತ್ಯಂತ ಸುಂದರ ಭಾಗವೆಂದರೆ, ಮರೆತ ಹಳೆಯ ವೈಮನಸ್ಸುಗಳನ್ನು ಬಣ್ಣಗಳ ಮೂಲಕ ಅಳಿಸಿಹಾಕಿ, ಹೊಸ ಸ್ನೇಹದ ಬಾಂಧವ್ಯವನ್ನು ಬೆಸೆಯುವುದು. ಈ ದಿನ ಮನೆಮನೆಗಳಲ್ಲಿ ಗರಿಗರಿಯಾದ ಸಿಹಿ ತಿನಿಸುಗಳನ್ನು ಸವಿಯುತ್ತಾ ಜನರು ಸಂಭ್ರಮಿಸುತ್ತಾರೆ.

ಈ ವರ್ಷವೂ ಪರಿಸರ ಸ್ನೇಹಿ ನೈಸರ್ಗಿಕ ಬಣ್ಣಗಳನ್ನು ಬಳಸುವುದು, ನೀರನ್ನು ಉಳಿತಾಯ ಮಾಡುವುದು ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಹೋಳಿ ಹಬ್ಬವು ಸಂತೋಷ, ಸಮಾನತೆ ಮತ್ತು ಸಹೋದರತ್ವದ ಸಂದೇಶವನ್ನು ಸಾರುವ ಹಬ್ಬವಾಗಿರಲಿ.

ಮೇ ತಿಂಗಳಲ್ಲಿ ಜಿಬಿಎ ಚುನಾವಣೆ: ಏಪ್ರಿಲ್ 6ಕ್ಕೆ ಅಧಿಸೂಚನೆ – ಸಚಿವ ರಾಮಲಿಂಗಾರೆಡ್ಡಿ

0

ಬೆಂಗಳೂರು: ಜಿಬಿಎ ಚುನಾವಣೆ ಮೇ ತಿಂಗಳಲ್ಲಿ ನಡೆಯಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 6ರಂದು ಚುನಾವಣೆಗೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಲಾಗುತ್ತದೆ. ಅದರ ಬಳಿಕ ಒಂದು ತಿಂಗಳೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಕರಗ ಉತ್ಸವದ ಬಗ್ಗೆ ಮಾತನಾಡಿದ ಸಚಿವರು, ಸಿ ಗ್ರೇಡ್ ದೇವಾಲಯಗಳ ಅಭಿವೃದ್ಧಿಗಾಗಿ ವಿಷನ್ ಗ್ರೂಪ್ ರಚಿಸಲಾಗಿದ್ದು, ಅದರ ಸಭೆಯನ್ನು ಇಂದು ಕರೆದಿದ್ದೇವೆ ಎಂದು ಹೇಳಿದರು. ಮುಜರಾಯಿ ಇಲಾಖೆಯ ಆಸ್ತಿಗಳನ್ನು ಮತ್ತೆ ಸುಪರ್ದಿಗೆ ಪಡೆಯುವ ಕಾರ್ಯ ನಡೆಯುತ್ತಿದ್ದು, ಆಸ್ತಿ ಹಿಂಡೀಕರಣ ಮತ್ತು ಗೆಜೆಟ್ ಪ್ರಕ್ರಿಯೆಯೂ ಮುಂದುವರಿದಿದೆ. ಈ ಕುರಿತು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ.

ಗ್ರಾಮೀಣ ಭಾಗದಲ್ಲಿ ಸಿ ಗ್ರೇಡ್ ದೇವಸ್ಥಾನಗಳ ದತ್ತು ಪ್ರಕ್ರಿಯೆ ಸರಳೀಕರಣಕ್ಕೂ ನಿರ್ಧಾರ ಕೈಗೊಳ್ಳಲಾಗಿದೆ. ದೇವಸ್ಥಾನಗಳ ಆಸ್ತಿಗೆ ಜಿಯೋ ಫೆನ್ಸಿಂಗ್ ವ್ಯವಸ್ಥೆ ಜಾರಿಗೆ ತರಲು ಯೋಜಿಸಲಾಗಿದೆ.

ಬೆಂಗಳೂರು ಕರಗ ಏಪ್ರಿಲ್ 1ರಂದು ನಡೆಯಲಿದೆ. ಎಂಟು ಸದಸ್ಯರ ಸಮಿತಿ ರಚನೆಯಾಗಿದ್ದು, ನಾರಾಯಣಸ್ವಾಮಿ ಅಧ್ಯಕ್ಷರಾಗಿದ್ದಾರೆ. ಟೆಂಡರ್ ಪ್ರಕ್ರಿಯೆಯನ್ನು ಮುಜರಾಯಿ ಇಲಾಖೆ ನಡೆಸುವುದಿಲ್ಲ; ಎಲ್ಲಾ ಹೊಣೆಗಾರಿಕೆ ಜಿಬಿಎಗೆ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಮೈಸೂರು ಬ್ಯಾಂಕ್ ಸರ್ಕಲ್, ಅವಿನ್ಯೂ ರೋಡ್, ಹಡ್ಸನ್ ಸರ್ಕಲ್ ಹಾಗೂ ಕಾಟನ್ ಪೇಟೆ ಪ್ರದೇಶಗಳಲ್ಲಿ ವಿದ್ಯುತ್ ದೀಪಾಲಂಕಾರ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕುರಿತು ಚಿಂತನೆ ನಡೆಯುತ್ತಿದ್ದು, ಮೈಸೂರು ದಸರಾ ಮಾದರಿಯಲ್ಲಿ ಉತ್ಸವವನ್ನು ನಡೆಸಲು ಯೋಜನೆ ರೂಪಿಸಲಾಗಿದೆ.

ಭದ್ರತಾ ಕ್ರಮಗಳ ಕುರಿತು ಪೊಲೀಸರಿಗೆ ಅಗತ್ಯ ಜಾಗ ಸೂಚಿಸಲಾಗಿದೆ. ಜಿಬಿಎಗೆ ನೀಡಲಾಗುವ ಅನುದಾನವನ್ನು ಅವರೇ ಖರ್ಚು ಮಾಡುವ ಹೊಣೆಗಾರಿಕೆ ವಹಿಸಿಕೊಳ್ಳಲಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.

2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ: ಕುರ್ಚಿ ಗೊಂದಲಕ್ಕೆ ಹೈಕಮಾಂಡ್ ಮಧ್ಯಪ್ರವೇಶಿಸಲಿ – ಗಣಿಗ ರವಿಕುಮಾರ್

0

ಮಂಡ್ಯ: 2028ರಲ್ಲಿಯೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕಾದರೆ, ಪಕ್ಷದೊಳಗಿನ ಕುರ್ಚಿ ಗೊಂದಲವನ್ನು ಹೈಕಮಾಂಡ್ ಮಧ್ಯಪ್ರವೇಶಿಸಿ ಬಗೆಹರಿಸಬೇಕು ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಒತ್ತಾಯಿಸಿದ್ದಾರೆ.

ಡಿಕೆ ಬೆಂಬಲಿಗ ಶಾಸಕರ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಸಂಬಂಧಿಸಿ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಅವರು ಪ್ರತಿಕ್ರಿಯೆ ನೀಡಿದರು. “ಬಾಲಕೃಷ್ಣ ಅವರ ಜನ್ಮದಿನ ಪ್ರಯುಕ್ತ ಊಟಕ್ಕೆ ಸೇರಿದ್ದೆವು. ಮಟನ್ ಬಿರಿಯಾನಿ ಹಾಗೂ ನಾಟಿ ಸ್ಟೈಲ್ ಅಡುಗೆ ಮಾಡಿಸಿದ್ದರು. ಊಟ ಮಾಡಿದ್ದು ಹೊರತು ಬೇರೆ ಏನೂ ಇಲ್ಲ. ಅಷ್ಟಕ್ಕೇ ಅನಾವಶ್ಯಕ ಊಹಾಪೋಹ ಸೃಷ್ಟಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು.

ನಮಗೆ ಸಿಎಂ ಹಾಗೂ ಡಿಸಿಎಂ ಇಬ್ಬರೂ ಒಂದೇ. ನಾನು ಸಿಎಂ ಪರವೂ ಇದ್ದೇನೆ, ಡಿಸಿಎಂ ಪರವೂ ಇದ್ದೇನೆ. 136 ಮಂದಿ ಶಾಸಕರು ಸಿಎಂ ಮತ್ತು ಡಿಸಿಎಂ ಪರ ಇದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಲಿ ಎಂಬುದು ನನ್ನ ವೈಯಕ್ತಿಕ ಆಸೆ ಎಂದು ಹೇಳಿದರು.

ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗವಾಗದಂತೆ, ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟರು.

ಸಿಎಂ, ದಲಿತ ಸಚಿವರು, 54 ಶಾಸಕರು ರಾಜೀನಾಮೆ ನೀಡಲಿ: ಎ.ನಾರಾಯಣಸ್ವಾಮಿ ಆಗ್ರಹ

0

ಬೆಂಗಳೂರು: ದಲಿತರ ಕುರಿತು ತಮಗೆ ಬದ್ಧತೆ, ಸಾಮಾಜಿಕ ಕಳಕಳಿ ಇದ್ದರೆ ದಲಿತ ಸಚಿವರು ತಕ್ಷಣ ರಾಜೀನಾಮೆ ಕೊಡಬೇಕು. ನಿಮಗೆ ಮಾನವೀಯತೆ ಇದ್ದರೆ, ಮೀಸಲು ಕ್ಷೇತ್ರದಿಂದ ಗೆದ್ದಿದ್ದರೆ 54 ಶಾಸಕರು ಮುಂದಿನ ವಿಧಾನಸಭಾ ಕಲಾಪಗಳಲ್ಲಿ ಭಾಗವಹಿಸಬಾರದು; ರಾಜೀನಾಮೆ ಕೊಡಿ ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಆಗ್ರಹಿಸಿದರು.

ಅವರು ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಪರಿಶಿಷ್ಟ ಜಾತಿ, ಪಂಗಡದ 54 ಜನ ಶಾಸಕರು ಇದ್ದಾರೆ. ಶಿಕ್ಷಣದಲ್ಲಿ ಕ್ರಾಂತಿ ಆಗಿದೆ. ಆದರೆ, ಈ 54 ಜನರು ಮಾತನಾಡುತ್ತಿಲ್ಲ. ಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ಮಾತನಾಡುವುದಿಲ್ಲ. ಯಾಕೆ ನೀವು ಸಚಿವ ಸ್ಥಾನದಲ್ಲಿ ಇದ್ದೀರಿ ಕೇಳಿದರು. ನಾವು ಹೋರಾಟದ ಕಡೆ ಹೆಜ್ಜೆ ಇಡಲಿದ್ದೇವೆ ಎಂದು ಪ್ರಕಟಿಸಿದರು. ರಾಜ್ಯದ ಮುಖ್ಯಮಂತ್ರಿಗಳೂ ರಾಜೀನಾಮೆ ನೀಡಲು ಒತ್ತಾಯಿಸಿದರು.

35 ವರ್ಷ ಹೋರಾಟ ಮಾಡಿದ ಮಾದಿಗರಿಗೆ ಸಿದ್ದರಾಮಯ್ಯನವರು ತಿರುಪತಿ ನಾಮ ಇಟ್ಟಿದ್ದಾರೆ ಎಂದರಲ್ಲದೇ, ರಾಜ್ಯದ ಇಡೀ ದಲಿತರಿಗೆ ಚೆಂಬು ಕೊಟ್ಟಿದ್ದಾರೆ ಎಂದು ಟೀಕಿಸಿದರು. ಒಳ ಮೀಸಲಾತಿ ವಿಚಾರದಲ್ಲಿ 101 ಜಾತಿಗೂ ಸಿದ್ದರಾಮಯ್ಯನವರು ಚೆಂಬು ಕೊಟ್ಟಿರುವುದಾಗಿ ದೂರಿದರು. ಉದ್ಯೋಗಾಕಾಂಕ್ಷಿ ಯುವಜನರ ಕಿವಿಗೆ ಚೆಂಡು ಹೂವನ್ನು ಇಟ್ಟಿದ್ದಾರೆ ಎಂದು ಆರೋಪಿಸಿದರು.

ತಮಿಳುನಾಡು ರಾಜ್ಯವು ಆರ್ಟಿಕಲ್ 9ರಡಿ ಸೇರಿ ಶೇ 69 ಮೀಸಲಾತಿ ಕೊಡುತ್ತಿದೆ. ತೊಡೆ ತಟ್ಟಿ ಆ ರಾಜ್ಯದ ಶೋಷಿತ ವರ್ಗಕ್ಕೆ ಮೀಸಲಾತಿ ನೀಡಿದೆ. ನಿಮಗೆ ಒಳ ಮೀಸಲಾತಿ ಬಗ್ಗೆ ಹೈಕೋರ್ಟ್, ಸುಪ್ರೀಂ ಕೋರ್ಟಿನಲ್ಲಿ ಹೇಗೆ ವಾದ ಮಾಡಬೇಕೆಂದು ಗೊತ್ತಿಲ್ಲದೇ ಅಲ್ಲ. ನಿಮಗೆ ಅದರ ಬಗ್ಗೆ ಆಸಕ್ತಿ ಇಲ್ಲ ಎಂದು ಆಕ್ಷೇಪಿಸಿದರು. ಸಮೀಕ್ಷೆ, ಆಯೋಗದ ವರದಿಗಳಿಗೆ ಹಣ ಖರ್ಚು ಮಾಡಿದ್ದೀರಿ. ಇದೇನು ನಿಮ್ಮಪ್ಪನ ದುಡ್ಡೇ ಎಂದು ಪ್ರಶ್ನಿಸಿದರು. ಯಾರ ಓಲೈಕೆಗೆ ಈ ರಾಜಕಾರಣ ಮಾಡುತ್ತ ಇದ್ದೀರಿ ಎಂದು ಕೇಳಿದರು.

ಸುಪ್ರೀಂ ಕೋರ್ಟಿನ ತೀರ್ಪು ಬಂದು ಒಂದು ವರ್ಷ ಕಳೆದರೂ ಈ ರಾಜ್ಯ ಸರಕಾರ ಒಳಮೀಸಲಾತಿ ಕುರಿತು ಚರ್ಚಿಸಿಲ್ಲ ಎಂದು ಟೀಕಿಸಿದರು. ನ್ಯಾ. ಸದಾಶಿವ ಅವರ, ಮಾಧುಸ್ವಾಮಿ ಅವರ ವರದಿಯನ್ನು ತಿರಸ್ಕರಿಸಿದ್ದರು. ನ್ಯಾ. ನಾಗಮೋಹನ್‍ದಾಸ್ ಅವರ ವರದಿಯನ್ನೂ ತಿರಸ್ಕರಿಸಿ ಒಳಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸಿದ್ದರು. ಹೈಕೋರ್ಟಿನಲ್ಲಿ ಕೇಸ್ ದಾಖಲಾಗಿತ್ತು. ಬಳಿಕ ಸದನದಲ್ಲಿ ಮಸೂದೆಗೆ ಒಪ್ಪಿಗೆ ಕೊಟ್ಟಿದ್ದು, ರಾಜ್ಯಪಾಲರಿಗೆ ಕಳಿಸಿದ್ದರು ಎಂದರು.

ಉದಯಪುರದಲ್ಲಿ ವಿವಾಹವಾದ ರಶ್ಮಿಕಾ–ವಿಜಯ್: ಪ್ರಧಾನಿಯನ್ನು ಭೇಟಿ ಮಾಡಿದ ಜೋಡಿ!

0

ದೆಹಲಿ: ತೆಲುಗು ಚಿತ್ರರಂಗದ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರನಲ್ಲಿ ಐಶಾರಾಮಿ ITC ರೆಸಾರ್ಟ್ನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.

ವಿವಾಹವಾದ ಮರುದಿನವೇ ನವ ದಂಪತಿ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಮದುವೆಗೆ ಮುನ್ನವೇ ಮೋದಿ ಅವರು ಪತ್ರ ಮುಖೇನ ಶುಭಾಶಯ ಕೋರಿದ್ದರೆಂದು ತಿಳಿದುಬಂದಿದೆ. ವಿಜಯ್ ಅವರ ತಂದೆ ಕಳುಹಿಸಿದ್ದ ಆಹ್ವಾನ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ, ವಧು-ವರರಿಗೆ ಶುಭಹಾರೈಕೆಗಳನ್ನು ತಿಳಿಸಿದ್ದರು.

ಇದೀಗ ದೆಹಲಿಯಲ್ಲಿ ಪ್ರಧಾನಿಯನ್ನು ಭೇಟಿ ಮಾಡಿದ ರಶ್ಮಿಕಾ ಮತ್ತು ವಿಜಯ್, ಮಾರ್ಚ್ 4ರಂದು ಹೈದರಾಬಾದ್ನಲ್ಲಿ ನಡೆಯಲಿರುವ ಆರತಕ್ಷತೆ ಸಮಾರಂಭಕ್ಕೆ ಖುದ್ದಾಗಿ ಆಹ್ವಾನಿಸಿದ್ದಾರೆ.

ಮದುವೆ ಸಮಾರಂಭ ರಾಜಸ್ಥಾನದಲ್ಲಿ ನೆರವೇರಿದರೆ, ಆರತಕ್ಷತೆ ಕಾರ್ಯಕ್ರಮದಲ್ಲಿ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

ಲಿವ್-ಇನ್ ಸಂಬಂಧದ ಮಗು: ತಾಯಿಯ ವಂಶಾವಳಿ ಸೇರಿಸಲು ಹೈಕೋರ್ಟ್ ಆದೇಶ

0

ಬೆಂಗಳೂರು: ಲಿವ್-ಇನ್ ಸಂಬಂಧದಿಂದ ಜನಿಸಿದ ಎಂಟು ವರ್ಷದ ಬಾಲಕಿಯ ಉಪನಾಮದಲ್ಲಿ ತಾಯಿಯ ವಂಶಾವಳಿಯನ್ನು ಸೇರಿಸಲು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಜನನ ಪ್ರಮಾಣಪತ್ರದಲ್ಲಿ ಮಗಳ ಉಪನಾಮವನ್ನು ಬದಲಾಯಿಸಲು ಸಲ್ಲಿಸಿದ್ದ ಮನವಿಯನ್ನು ಕಾರಣವಿಲ್ಲದೆ ತಿರಸ್ಕರಿಸಿದ್ದ ಜನನ ಮತ್ತು ಮರಣ ನೋಂದಣಿ ಇಲಾಖೆಯ ಕ್ರಮವನ್ನು ನ್ಯಾಯಾಲಯ ಪ್ರಶ್ನಿಸಿದೆ.

ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ, ಬಾಲಕಿಯ ಹೆಸರನ್ನು ತಂದೆಯ ಬದಲಿಗೆ ತಾಯಿಯ ಕುಟುಂಬದ ಹೆಸರಿನೊಂದಿಗೆ ಸೇರಿಸಲು ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಆದರೆ, ಜನನ ಪ್ರಮಾಣಪತ್ರದಲ್ಲಿ ಜೈವಿಕ ತಂದೆಯ ಹೆಸರನ್ನು ಹಾಗೆಯೇ ಉಳಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ.

ತಾಯಿ ಏಕೈಕ ಆರೈಕೆದಾರ ಮತ್ತು ನೈಸರ್ಗಿಕ ಪೋಷಕರಾಗಿದ್ದಲ್ಲಿ, ಮಗುವಿನ ಉಪನಾಮದಲ್ಲಿ ತಾಯಿಯ ವಂಶಾವಳಿಯನ್ನು ಗುರುತಿಸಲು ಯಾವುದೇ ಸಾಂವಿಧಾನಿಕ ಅಡಚಣೆ ಇಲ್ಲ ಎಂದು ಪೀಠ ಹೇಳಿದೆ. ತಾಯಿಯ ಗುರುತನ್ನು ಸೇರಿಸುವುದರಿಂದ ತಂದೆಯ ಸ್ಥಾನಮಾನ ಕಡಿಮೆಯಾಗುವುದಿಲ್ಲ; ಇದು ಸಮಾನತೆಯ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಮಕ್ಕಳು ತಂದೆಯ ಉಪನಾಮವನ್ನೇ ಹೊಂದಿರಬೇಕು ಎಂಬುದು ಕೇವಲ ಸಾಮಾಜಿಕ ಸಂಪ್ರದಾಯವಾಗಿದ್ದು, ಸಾಂವಿಧಾನಿಕ ಕಡ್ಡಾಯವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪೋಷಕತ್ವದ ಗುರುತಿನಲ್ಲಿ ಮಹಿಳೆಯರಿಗೂ ಸಮಾನ ಸ್ಥಾನಮಾನವಿದೆ ಎಂದು ಪೀಠ ಹೇಳಿದೆ.

1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆಯ ಪ್ರಕಾರ ಹೆಸರಿನಲ್ಲಿ ಉಂಟಾಗುವ ಗೊಂದಲಗಳನ್ನು ಸರಿಪಡಿಸಲು ರಿಜಿಸ್ಟ್ರಾರ್‌ಗೆ ಅಧಿಕಾರವಿದೆ. ಹೆಸರಿನಲ್ಲಿನ ದೋಷ ಮಾತ್ರವಲ್ಲದೆ ವಿಷಯವಸ್ತುವನ್ನೂ ತಿದ್ದುಪಡಿ ಮಾಡಬಹುದಾಗಿದೆ ಎಂದು ಪೀಠ ತಿಳಿಸಿದೆ.

ಅರ್ಜಿದಾರರು ತಂದೆಯ ಹೆಸರನ್ನು ಅಳಿಸಲು ಮನವಿ ಮಾಡಿಲ್ಲ. ತಂದೆಯ ಹೆಸರನ್ನು ಹಾಗೆಯೇ ಉಳಿಸಿ, ಮಗುವಿನ ಉಪನಾಮಕ್ಕೆ ತಾಯಿಯ ಕುಟುಂಬದ ಹೆಸರನ್ನು ಸೇರಿಸಲು ಮಾತ್ರ ಕೋರಿದ್ದಾರೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ.

ನ್ಯಾಯಪೀಠವು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದ 3ನೇ ವಿಧಿ ಹಾಗೂ ಭಾರತೀಯ ಸಂವಿಧಾನದ 21ನೇ ವಿಧಿಯಲ್ಲಿ ಉಲ್ಲೇಖಿಸಿರುವ “ಮಗುವಿನ ಹಿತಾಸಕ್ತಿ” ತತ್ವವನ್ನು ಉಲ್ಲೇಖಿಸಿದೆ. ಉಪನಾಮದಲ್ಲಿನ ಬದಲಾವಣೆ ಮಗುವಿನ ಗುರುತು, ಘನತೆ ಮತ್ತು ಯೋಗಕ್ಷೇಮವನ್ನು ಕಾಪಾಡುತ್ತದೆ ಎಂದು ಹೇಳಿದೆ.

ಅಲ್ಲದೆ, ಉಪನಾಮ ಬದಲಾವಣೆ ಮಾಡಿದರೂ ಜೈವಿಕ ತಂದೆಯಿಂದ ಮಗುವಿಗೆ ದೊರಕಬಹುದಾದ ಅನುವಂಶಿಕತೆ, ಉತ್ತರಾಧಿಕಾರ ಮತ್ತು ನಿರ್ವಹಣೆಯ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

error: Content is protected !!