ಮೈಸೂರು: ಜಿಲ್ಲೆಯಲ್ಲಿ ಕಾನೂನು ಕೈಯಲ್ಲಿ ಹಿಡಿದಿರುವ ವ್ಯಕ್ತಿಯೊಬ್ಬ ಸರ್ಕಾರಿ ಅಧಿಕಾರಿಗಳಿಗೆ ನೇರವಾಗಿ ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ನಿಂಹಾನ್ಸ್ ಮಾದರಿಯ ಆಸ್ಪತ್ರೆ ನಿರ್ಮಾಣಕ್ಕೆ ಗುರುತಿಸಿರುವ ಜಾಗವೇ ಇದೀಗ ಗಲಾಟೆಗೆ ಕಾರಣವಾಗಿದೆ.
ಮೈಸೂರು ತಾಲ್ಲೂಕಿನ ಗುಡಮಾದನಹಳ್ಳಿ ಗ್ರಾಮದಲ್ಲಿ ಸರ್ಕಾರ ಸ್ವಾಧೀನಕ್ಕೆ ಪಡೆಯಬೇಕಾದ 20 ಎಕರೆ ಜಮೀನಿನ ಪರಿಶೀಲನೆಗಾಗಿ ಗ್ರಾಮ ಆಡಳಿತಾಧಿಕಾರಿ ಜಿ. ಭವ್ಯ ಹಾಗೂ ಗ್ರಾಮ ಸಹಾಯಕ ನವೀನ್ ಕುಮಾರ್ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಜಾಗದಲ್ಲಿ ಅಕ್ರಮವಾಗಿ ಅಡಿಕೆ ತೋಟ ಬೆಳೆಸಿದ್ದ ಜಿಎಂ ಪುಟ್ಟಸ್ವಾಮಿ ಎಂಬಾತ ತೀವ್ರವಾಗಿ ಕೋಪಗೊಂಡು ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸಿದ್ದಾನೆ.
“ಯಾರ ಅನುಮತಿ ತೆಗೆದುಕೊಂಡು ಜಮೀನು ಮಂಜೂರು ಮಾಡಿದ್ದೀರಿ? ಮೊದಲು ತಹಸೀಲ್ದಾರ್ ತಲೆ ತೆಗೆಯಬೇಕು. ನಿನ್ನನ್ನ ಇಲ್ಲಿಯೇ ಕೊಂದು ಹಾಕುತ್ತೇನೆ” ಎಂದು ನೇರವಾಗಿ ಜೀವ ಬೆದರಿಕೆ ಹಾಕಿದ್ದಾನೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪರಿಸ್ಥಿತಿಯನ್ನು ಭಯಾನಕ ಮಟ್ಟಕ್ಕೆ ತಳ್ಳಿದ್ದಾನೆ.
ಘಟನೆಯ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದ್ದರೂ, ಪುಟ್ಟಸ್ವಾಮಿ ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಿಸಿದ್ದಾನೆ ಎಂಬ ಗಂಭೀರ ಆರೋಪವೂ ಇದೆ. ಸರ್ಕಾರಿ ಕರ್ತವ್ಯ ನಿರ್ವಹಣೆಯಲ್ಲಿದ್ದ ಅಧಿಕಾರಿಗಳ ಮೇಲೆ ನಡೆದ ಈ ದೌರ್ಜನ್ಯ ಇದೀಗ ಭಾರೀ ಆತಂಕಕ್ಕೆ ಕಾರಣವಾಗಿದೆ.

