Home Blog Page 3

‘ಚಂದ್ರಿ’ ಚಿತ್ರೀಕರಣ ಮುಕ್ತಾಯ: ಭರದಿಂದ ಸಾಗಿದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಓಜೆಎಸ್ ಮೂವಿ ಮೇಕರ್ಸ್ ಅರ್ಪಿಸುವ ‘ಚಂದ್ರಿ’ ಕನ್ನಡ ಚಲನಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಪೋಸ್ಟ್‌ ಪ್ರೊಡಕ್ಷನ್‌ ಕಾರ್ಯಗಳು ಭರದಿಂದ ಸಾಗಿವೆ.

ವಿಜಯನಗರ ಜಿಲ್ಲೆಯ ಕೊಟ್ಟೂರಿನ ಯುವ ಪ್ರತಿಭೆ ಎಸ್. ವೆಂಕಟೇಶ್ ಕೊಟ್ಟೂರು ನಿರ್ದೇಶಿಸುತ್ತಿರುವ ಎರಡನೇ ಚಿತ್ರ ಇದಾಗಿದ್ದು, ಡಾ. ಪ್ರವೀಣ್ ಚೌತಿ ಅವರ ‘ಬಯಲು’ ಕಥಾ ಸಂಕಲನದ ಕಥೆಯೊಂದನ್ನು ಆಧರಿಸಿ ಸಿನಿಮಾ ರೂಪಿಸಲಾಗಿದೆ. ಗ್ರಾಮೀಣ ಬದುಕಿನ ಸೂಕ್ಷ್ಮ ಭಾವನೆಗಳು, ಪ್ರೀತಿ, ಮೋಸ ಹಾಗೂ ಬದುಕಿಗಾಗಿ ನಡೆಯುವ ಹೋರಾಟವನ್ನು ಚಿತ್ರವು ತೆರೆದಿಡಲಿದೆ.

ಪ್ರಿಯಕರನ ಮೋಸಕ್ಕೆ ಬಲಿಯಾದ ಗ್ರಾಮೀಣ ಹೆಣ್ಣೊಬ್ಬಳು ಅಸಹಾಯಕಳಾಗಿ ಸಾವಿನ ಮನೆಯ ಕದ ತಟ್ಟುವ ಸಂದರ್ಭದಲ್ಲಿ ಸೈದಪ್ಪ ಆಕೆಗೆ ಹೊಸ ಬದುಕು ಕಟ್ಟಿಕೊಡುತ್ತಾನೆ. ಬದುಕಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ಎರಡು ಜೀವಗಳು ನಡೆಸುವ ಹೋರಾಟವೇ ಚಿತ್ರದ ಪ್ರಮುಖ ಕಥಾಹಂದರವಾಗಿದೆ.

ರಾಯಚೂರು ನಗರ, ಶಕ್ತಿನಗರ, ಕೊಟ್ಟೂರು, ಹೂವಿನಹಡಗಲಿ, ಮದಲಘಟ್ಟ ಹಾಗೂ ಮರಳವಾಡಿ ಸುತ್ತಮುತ್ತ 18 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

ಚಿತ್ರದ ಪ್ರಮುಖ ಪಾತ್ರವಾದ ಸೈದಪ್ಪನಾಗಿ ರಾಮರಾವ್.ಜಿ. ಅಭಿನಯಿಸಿದ್ದಾರೆ. ಅವರು ‘ಕೆಜಿಎಫ್’, ‘ಪೈಲ್ವಾನ್’, ‘ಐರಾವತ’, ‘ರುಸ್ತುಂ’, ‘ಜಗ್ಗು ದಾದ’, ‘ಬಘೀರ’, ‘ಭೈರತಿ ರಣಗಲ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಚಂದ್ರಿ ಪಾತ್ರದಲ್ಲಿ ವ್ಯೋಮಿ ಸಾಕೆಲ್ ಅಭಿನಯಿಸಿದ್ದಾರೆ.

ಪ್ರಗತಿ ಪ್ರಭು, ಚಕ್ರವರ್ತಿ ದಾವಣಗೆರೆ, ಶಿವಮೊಗ್ಗ ರಾಮಣ್ಣ, ಉಗ್ರಂ ಸುರೇಶ್, ಶಶಿಧರ್, ಡಾ. ಪ್ರವೀಣ್ ಚೌತಿ, ಎಸ್.ಕೆ. ಬಾಬು ಬೆಳಗೊಳ, ಸುರೇಶ್ ದೇವರಮನಿ, ಶಾರದಾ ಕಲ್ಲೂರ್, ಮಂಜೇಶ್ ಸೇರಿದಂತೆ ಕಲಾವಿದರು ತಾರಾಗಣದಲ್ಲಿದ್ದಾರೆ.

ಚಿತ್ರದ ಪ್ರಮುಖ ವಿಶೇಷತೆ ಎಂದರೆ ಸಿಂಕ್ ಸೌಂಡ್‌ನೊಂದಿಗೆ ಚಿತ್ರೀಕರಣ ನಡೆಸಿರುವುದು. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಅವುಗಳನ್ನು ನಿರ್ದೇಶಕ ಎಸ್. ವೆಂಕಟೇಶ್ ಕೊಟ್ಟೂರು ಅವರೇ ರಚಿಸಿದ್ದಾರೆ.

ಸುನಿಲ್ ಕೆ.ಆರ್.ಎಸ್. ಛಾಯಾಗ್ರಹಣ, ಮಹಾಂತೇಶ್ ನವಲಕಾರ್ ಸಂಭಾಷಣೆ, ಎಸ್.ಕೆ. ಸಹಿಶ್ಯಾಮ್ ಸಂಗೀತ, ಮುತ್ತುರಾಜ್ ಟಿ. ಸಂಕಲನ, ಮೋಹನ್–ಅಜಿತ್ ಯಳಿವಾಳ ಸಿಂಕ್ ಸೌಂಡ್, ರಾಜ ಭಾಸ್ಕರ್ 5.1 ಮಿಕ್ಸಿಂಗ್, ವರುಣ್ ಗೌಡ ಡಿ.ಐ., ಬಸವರಾಜ್ ಆಚಾರ್ ಕಲಾ ವಿಭಾಗದ ಜವಾಬ್ದಾರಿ ನಿರ್ವಹಿಸಿದ್ದಾರೆ.

ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ್ ಹಂಡಿಗಿ ಪಿಆರ್‌ಒಗಳಾಗಿ, ಎಚ್. ಶಶಿಧರ್–ಆರ್ಮುಗಂ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಚಿತ್ರಕಥೆ ಹಾಗೂ ನಿರ್ದೇಶನ ಎಸ್. ವೆಂಕಟೇಶ್ ಕೊಟ್ಟೂರು ಅವರದ್ದಾಗಿದೆ. ಶ್ರೀಮತಿ ಅನುಷಾ ಸುಪ್ರೀತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸೆ. 7ರಿಂದ ವರವಿಯಲ್ಲಿ ಮೌನೇಶ್ವರ ಜಾತ್ರಾಮಹೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ವರವಿ ಪುಣ್ಯಕ್ಷೇತ್ರದ ಶ್ರೀ ಜಗದ್ಗುರು ಮೌನೇಶ್ವರರ ಜಾತ್ರಾಮಹೋತ್ಸವ ಸೆ. 7ರಿಂದ 11ರವರೆಗೆ ಶ್ರದ್ಧಾ-ಭಕ್ತಿಯಿಂದ ಹಾಗೂ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೋಹನ ಸಿ. ನರಗುಂದ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 7ರಂದು ಬೆಳಗ್ಗೆ ಧ್ವಜಾರೋಹಣ ಹಾಗೂ ಮಹಾಯಜ್ಞ, ಮಧ್ಯಾಹ್ನ 12.15ಕ್ಕೆ ಜಾತ್ರಾಮಹೋತ್ಸವ ಉದ್ಘಾಟನೆ, ಸಂಜೆ 5.15ಕ್ಕೆ ಮಹಾರಥೋತ್ಸವ ನಡೆಯಲಿದೆ. ಸೆ. 8ರಂದು ಕಡುಬಿನ ಕಾಳಗ, ಸೆ. 9ರಂದು ಸಾಮೂಹಿಕ ಉಪನಯನ, ಸೆ. 10ರಂದು ಪಾಲಕಿ ಅಲಾವಿ ಗುಡ್ಡಕ್ಕೆ ತೆರಳುವ ಕಾರ್ಯಕ್ರಮ ಹಾಗೂ ಸೆ. 11ರಂದು ಮಹಾಪ್ರಸಾದ, ಪ್ರವಚನ, ಸಮಾರೋಪ, ದಾನಿಗಳಿಗೆ ಸನ್ಮಾನ ಮತ್ತು ಪೂಜಾಫಲ ಲಿಲಾವು ನಡೆಯಲಿದೆ. ಪ್ರತಿದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಸೆ. 7ರ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಮೌನೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಮೋಹನ ಸಿ. ನರಗುಂದ ಅಧ್ಯಕ್ಷತೆ ವಹಿಸುವರು. ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಶಾಸಕರಾದ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಗಂಗಣ್ಣ ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, ತಹಶೀಲ್ದಾರ ಕೆ. ರಾಘವೇಂದ್ರರಾವ್, ಡಿಎಸ್‌ಪಿ ಮರ್ತುಜಾ ಖಾದ್ರಿ, ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಈರಪ್ಪ ರಿತ್ತಿ ಸೇರಿದಂತೆ ಗಣ್ಯರು ಭಾಗವಹಿಸುವರು.

ಜಾತ್ರಾಮಹೋತ್ಸವದ ಮಹತ್ವ ಕುರಿತು ಮಾತನಾಡಿದ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಿಕೊಪ್ಪ, ಮೌನೇಶ್ವರರು ಧರ್ಮ ಜಾಗೃತಿ ಹಾಗೂ ಭಾವೈಕ್ಯತೆಯ ಸಂದೇಶ ಸಾರಿದ ಮಹಾತ್ಮರಾಗಿದ್ದು, ವರವಿ ಅವರ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಜಾತ್ರೆಯಲ್ಲಿ ಸರ್ವರೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಸೆ. 11ರ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಮೌನೇಶ್ವರ ಮಹಾಸ್ವಾಮಿಗಳು, ಶ್ರೀ ಫಕ್ಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹಾಗೂ ಶ್ರೀ ಶಿವಕುಮಾರ ಮಹಾಸ್ವಾಮಿಗಳು ವಹಿಸುವರು. ಡಾ. ಎಚ್.ಕೆ. ಪಾಟೀಲ ಘನ ಉಪಸ್ಥಿತರಿರುವರು. ಸಚಿವ ಬಸವರಾಜ ರಾಯರಡ್ಡಿ ಉದ್ಘಾಟಿಸುವರು. ಸಚಿವ ಕೆ.ಎಸ್. ಬಸವಂತಪ್ಪ ಗೌರವ ಉಪಸ್ಥಿತರಿರುವರು ಎಂದು ಟ್ರಸ್ಟ್‌ನ ಕೋಶಾಧ್ಯಕ್ಷ ಚಂದ್ರಕಾಂತ ಸೋನಾರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀಧರ ಕೊಣ್ಣೂರ, ಮೌನೇಶ ಸಿ. ಬಡಿಗೇರ, ಉಮೇಶ ಅಕ್ಕಸಾಲಿ, ವೀರಣ್ಣ ಹಲವಾಗಲಿ, ನಾಗರಾಜ ಕಮ್ಮಾರ, ಶಂಕರಾಚಾರ್ಯರ ಪತ್ತಾರ ಹಾಗೂ ಈರಣ್ಣ ಪತ್ತಾರ ಉಪಸ್ಥಿತರಿದ್ದರು.

ಗುರು ಅಗಲಿದರೂ, ಅವರ ಸೇವೆಯ ಬೆಳಕು ಆರಲಿಲ್ಲ: ತೋಂಟದ ಸಿದ್ಧರಾಮ ಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣವೆಂದರೆ ಕೇವಲ ಅಕ್ಷರ ಕಲಿಸುವುದಲ್ಲ, ಸಂಸ್ಕಾರ ನೀಡಿ ಮನುಷ್ಯನನ್ನು ನಿರ್ಮಾಣ ಮಾಡುವುದಾಗಿದೆ. ಇಂತಹ ಸಾರ್ಥಕ ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ರೂಪಿಸಿದವರು ಬಿ.ಜಿ. ಅಣ್ಣಿಗೇರಿ ಗುರುಗಳು ಎಂದು ಗದುಗಿನ ತೋಂಟದಾರ್ಯ ಮಠದ ಜ.ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಬಣ್ಣಿಸಿದರು.

ನಗರದ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದ ಆವರಣದಲ್ಲಿ ಶನಿವಾರ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ (ರಿ.) ವತಿಯಿಂದ ಆಯೋಜಿಸಿದ್ದ 7ನೇ ಪುಣ್ಯಸ್ಮರಣೆ, ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಗುರುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅಣ್ಣಿಗೇರಿ ಗುರುಗಳು ತಮ್ಮ ಇಡೀ ಬದುಕನ್ನು ಮಕ್ಕಳ ಭವಿಷ್ಯ ಹಾಗೂ ವ್ಯಕ್ತಿತ್ವ ರೂಪಣೆಗೆ ಮೀಸಲಿಟ್ಟಿದ್ದರು. ನಿವೃತ್ತಿಯ ನಂತರವೂ ಬಡಮಕ್ಕಳ ಉದ್ಧಾರಕ್ಕಾಗಿ ಶ್ರಮಿಸಿದ ಅವರ ಸೇವೆ ಅಪಾರ. ಯಾವುದೇ ಕ್ಷೇತ್ರದಲ್ಲಿದ್ದರೂ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಿದರೆ ಪುಣ್ಯಪುರುಷರಾಗಬಹುದು. ಶಿಕ್ಷಕರ ದಿನದಂದೇ ಲಿಂಗೈಕ್ಯರಾದ ಅಣ್ಣಿಗೇರಿ ಗುರುಗಳ ಪುಣ್ಯಸ್ಮರಣೆಯನ್ನು ಇದೇ ದಿನ ಆಚರಿಸುತ್ತಿರುವುದು ವಿಶೇಷ ಎಂದು ತೋಂಟದ ಶ್ರೀ ಹೇಳಿದರು.

ಅಣ್ಣಿಗೇರಿ ಗುರುಗಳ ಸೇವೆಯ ಸಾರ್ಥಕತೆಯನ್ನು ವಿವರಿಸಿದ ತೋಂಟದ ಶ್ರೀ, ಆಶ್ರಮದ ಮೂಲಕ ಇಂದಿಗೂ ಬಡಮಕ್ಕಳ ಶಿಕ್ಷಣಕ್ಕೆ ನೆರವು ಮುಂದುವರಿದಿರುವುದನ್ನು ಶ್ಲಾಘಿಸಿದರು. ವರ್ಷಕ್ಕೆ ಸುಮಾರು ₹3.40 ಲಕ್ಷ ವಿದ್ಯಾರ್ಥಿವೇತನವನ್ನು ಬಡಮಕ್ಕಳಿಗೆ ನೀಡಲಾಗುತ್ತಿದ್ದು, ಅನೇಕ ಮಕ್ಕಳು ಆಶ್ರಮದಲ್ಲಿ ಆಶ್ರಯ ಪಡೆದು ಪ್ರಸಾದ ಸ್ವೀಕರಿಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಣ್ಣಿಗೇರಿ ಗುರುಗಳ ಶಿಷ್ಯರು ಉಚಿತವಾಗಿ ಜ್ಞಾನಬೋಧೆ ಮಾಡುತ್ತಿರುವುದು ಅವರ ಸೇವಾ ಪರಂಪರೆ ಜೀವಂತವಾಗಿರುವುದಕ್ಕೆ ಸಾಕ್ಷಿ ಎಂದರು.

ಮರಣೋತ್ತರ ಗುರುಶ್ರೀ ಪ್ರಶಸ್ತಿ

ನಿವೃತ್ತ ಮುಖ್ಯೋಪಾಧ್ಯಾಯ ದಿ. ಶಂಕ್ರಪ್ಪ ಗುರಪ್ಪ ಅಣ್ಣಿಗೇರಿ ಅವರಿಗೆ ಮರಣೋತ್ತರವಾಗಿ ಗುರುಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಧರ್ಮಪತ್ನಿ ಗೌರಮ್ಮ ಅವರಿಗೆ ಪ್ರಶಸ್ತಿ ಹಾಗೂ ₹25 ಸಾವಿರ ಮೊತ್ತದ ಚೆಕ್‌ನ್ನು ಹಸ್ತಾಂತರಿಸಲಾಯಿತು.

ರಾಜಸ್ಥಾನದ ಉದಯಪುರದ ಡಾ. ಅಶೋಕ ಭಜಂತ್ರಿ ಹಾಗೂ ತೋರಣಗಲ್ಲಿನ ಎಂ.ಎಚ್. ಪ್ರದೀಪಕುಮಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ತಮ್ಮ ಗುರುಗಳಾದ ಬಿ.ಜಿ. ಅಣ್ಣಿಗೇರಿ ಅವರ ಶಿಕ್ಷಣ ಸೇವೆಯನ್ನು ಸ್ಮರಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ವೇದಿಕೆಯಲ್ಲಿದ್ದರು. ಆಶ್ರಮದಲ್ಲಿ ವಿವಿಧ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ. ಬಸಯ್ಯ ಬೆಳ್ಳೇರಿಮಠ ಸ್ವಾಗತಿಸಿ ಪರಿಚಯಿಸಿದರು. ಮಂಜುಳಾ ತುಂಬರಮಟ್ಟಿ ನಿರೂಪಿಸಿದರು. ಆಂಜನೇಯ ಕಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭಾಶ್ಚಂದ್ರ ಬೆಟದೂರ ವರದಿ ವಾಚಿಸಿ ವಂದಿಸಿದರು. ವಿಜಯಲಕ್ಷ್ಮೀ ಅಂಗಡಿ ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು. ಗಣ್ಯರು ಹಾಗೂ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಶಸ್ತಿ ಮೊತ್ತವನ್ನೇ ಶಿಕ್ಷಣಕ್ಕೆ ಅರ್ಪಿಸಿದ ಗೌರಮ್ಮ

ಪತಿಯ ಹೆಸರಿನಲ್ಲಿ ದೊರೆತ ಗೌರವವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿದ ಗೌರಮ್ಮ ಅವರು ₹25 ಸಾವಿರದ ಪ್ರಶಸ್ತಿ ಮೊತ್ತವನ್ನು ತಾವೇ ಇಟ್ಟುಕೊಳ್ಳದೆ, ಬಡಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳುವಂತೆ ಪ್ರತಿಷ್ಠಾನಕ್ಕೆ ಮರಳಿಸಿದರು. ಅವರ ಈ ನಡೆ ಸಮಾರಂಭದ ಪ್ರಮುಖ ವಿಶೇಷತೆಯಾಗಿ ಗಮನ ಸೆಳೆಯಿತು.

ನಿಶ್ಯಬ್ದದ ಬದುಕಿನ ಮಹಾ ಬೆಳಕು : ಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಾಜಿ

ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಾಜಿಯವರ ಬದುಕೇ ಒಂದು ನಿಶ್ಯಬ್ದ. ಆ ನಿಶ್ಯಬ್ದವನ್ನು ಶಬ್ದಗಳಲ್ಲಿ ಕಟ್ಟಿಕೊಡುವುದು ಅಸಾಧ್ಯ; ಕಟ್ಟಿಕೊಟ್ಟರೂ ಅದು ಅಪೂರ್ಣವೇ. ಏಕೆಂದರೆ ಅವರ ಬದುಕು ಪದಗಳಿಗೆ ನಿಲುಕದಷ್ಟು ವಿಶಾಲ, ವಿವರಣೆಗೆ ಸಿಗದಷ್ಟು ಆಳ ಹಾಗೂ ಅನುಭವಿಸಿದವರಿಗೆ ಮಾತ್ರ ಅರಿವಾಗುವಷ್ಟು ಆತ್ಮೀಯ.

ಭೂಮಾತೆಯ ಮಡಿಲಲ್ಲಿ ತಮ್ಮ ಶುಭ್ರ ಛಾಯೆಯನ್ನು ಬಿಟ್ಟುಹೋದ ಅನೇಕ ಪುಣ್ಯಾತ್ಮರ ಕುರಿತು ನಾವು ಕೇಳಿದ್ದೇವೆ, ಓದಿದ್ದೇವೆ; ಕೆಲವರನ್ನು ಪ್ರತ್ಯಕ್ಷವಾಗಿ ಕಂಡಿದ್ದೇವೆ. ಆದರೆ ಕೆಲವರು ಯಾವುದೇ ಉಪಮೆಗೆ ನಿಲುಕದವರು. ಅಂತಹ ಮಹನೀಯರನ್ನು ಪರಮಾತ್ಮನೇ ಮನುಕುಲಕ್ಕೆ ಕೊಡುಗೆಯಾಗಿ ನೀಡುತ್ತಾನೆ. ಪೂಜ್ಯ ಸಿದ್ಧೇಶ್ವರ ಅಪ್ಪಾಜಿಯವರು ಅಂತಹ ಅಪರೂಪದ ಪುಣ್ಯಾತ್ಮರಲ್ಲಿ ಒಬ್ಬರು.

ಅವರನ್ನು ಶರಣರೆನ್ನಬಹುದು, ಸಂತರೆನ್ನಬಹುದು, ದಾಸರೆನ್ನಬಹುದು, ಜ್ಞಾನಿ ಅಥವಾ ಆಧ್ಯಾತ್ಮಿಕ ಚೇತನರೆನ್ನಬಹುದು. ಆದರೆ ಈ ಪ್ರತಿಯೊಂದು ಪದವೂ ಅವರ ವ್ಯಕ್ತಿತ್ವದ ಒಂದು ಮುಖವನ್ನು ಮಾತ್ರ ಪರಿಚಯಿಸುತ್ತದೆ. ಈ ಎಲ್ಲ ಗುಣಗಳನ್ನೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಅವುಗಳನ್ನೂ ಮೀರಿದ ಸರಳ, ಸಜ್ಜನಿಕೆಯ ಹಾಗೂ ಶುಭ್ರ ಬದುಕನ್ನು ನಡೆಸಿದ ಅಪೂರ್ವ ವ್ಯಕ್ತಿತ್ವ ಅವರದು.

  • ಅವರ ಸರಳತೆಯೇ ಅವರ ವೈಭವ.
  • ಅವರ ಮೌನವೇ ಅವರ ಸಂದೇಶ.
  • ಅವರ ಜೀವನವೇ ಅವರ ಪ್ರವಚನ.
  • ಅವರ ನಡೆ-ನುಡಿಯೇ ಅವರ ತತ್ವಜ್ಞಾನ.

ದೊಡ್ಡ ದೊಡ್ಡ ಮಾತುಗಳಿಂದ ತಮ್ಮ ಮಹತ್ವವನ್ನು ಸಾರಲಿಲ್ಲ. ಬದಲಾಗಿ, ಬದುಕಿನ ಮೂಲಕವೇ ಮಹತ್ವವೆಂದರೇನು ಎಂಬುದನ್ನು ತೋರಿಸಿದರು. ಜ್ಞಾನವನ್ನು ಪ್ರದರ್ಶಿಸಲಿಲ್ಲ—ಹಂಚಿದರು. ಆಧ್ಯಾತ್ಮವನ್ನು ಕೇವಲ ಬೋಧಿಸಲಿಲ್ಲ—ಬದುಕಿದರು. ವೈರಾಗ್ಯವನ್ನು ವಿವರಿಸಲಿಲ್ಲ—ತಮ್ಮ ಜೀವನದಲ್ಲೇ ಸಾಕಾರಗೊಳಿಸಿದರು.

ಅವರ ಸನ್ನಿಧಿಯಲ್ಲಿ ಕುಳಿತಾಗ ಮನಸ್ಸನ್ನು ಆವರಿಸುತ್ತಿದ್ದ ನೆಮ್ಮದಿ ವಿಶಿಷ್ಟವಾದುದು. ಅವರ ಮಾತುಗಳು ಕಿವಿಗೆ ಬೀಳುವುದಕ್ಕಿಂತ ಮೊದಲು ಹೃದಯವನ್ನು ತಟ್ಟುತ್ತಿದ್ದವು. ಅತ್ಯಂತ ಸರಳವಾಗಿ ಮಾತನಾಡಿದರೂ, ಆ ಮಾತುಗಳ ಆಳವನ್ನು ಅರಿಯಲು ಕೆಲವೊಮ್ಮೆ ಇಡೀ ಬದುಕೇ ಬೇಕೆನಿಸುತ್ತಿತ್ತು.

  • ಅವರನ್ನು ನೋಡುವುದು ಒಂದು ಅನುಭವ.
  • ಅವರನ್ನು ಕೇಳುವುದು ಒಂದು ಪಾಠ.
  • ಅವರೊಂದಿಗೆ ಇರುವುದು ಒಂದು ಸೌಭಾಗ್ಯ.
  • ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಒಂದು ಆತ್ಮಯಾನ.
  • ಅಂತಹ ಮಹಾತ್ಮರ ಸನ್ನಿಧಿಯಲ್ಲಿ ಇದ್ದವರು ನಿಜಕ್ಕೂ ಸೌಭಾಗ್ಯಶಾಲಿಗಳು.

ಕಾಲ ಕಳೆಯುತ್ತದೆ. ದೇಹಗಳು ಮರೆಯಾಗುತ್ತವೆ. ಧ್ವನಿಗಳು ಮೌನವಾಗುತ್ತವೆ. ಆದರೆ ಕೆಲವು ವ್ಯಕ್ತಿತ್ವಗಳು ಮಾತ್ರ ಕಾಲವನ್ನು ಮೀರಿ ಉಳಿಯುತ್ತವೆ. ಏಕೆಂದರೆ ಅವರು ಬಿಟ್ಟುಹೋಗುವುದು ಕೇವಲ ನೆನಪುಗಳಲ್ಲ; ಒಂದು ಚಿಂತನೆ, ಒಂದು ದಾರಿ, ಒಂದು ಬೆಳಕು ಹಾಗೂ ಬದುಕಿನ ಮೌಲ್ಯ.

ಸಿದ್ಧೇಶ್ವರ ಅಪ್ಪಾಜಿಯವರು ಅಂತಹ ಬೆಳಕಿನ ಪಥಿಕರು. ಅವರ ಬದುಕನ್ನು ಬರೆಯಲು ಶಬ್ದಗಳು ಸಾಲವು. ಅವರ ವ್ಯಕ್ತಿತ್ವವನ್ನು ಅಳೆಯಲು ಅಳತೆಗೋಲು ಸಾಲದು. ಅವರ ಸರಳತೆಯನ್ನು ವರ್ಣಿಸಲು ವಿಶೇಷಣಗಳು ಸಾಲವು.

ಹೀಗಾಗಿ ಅವರ ಬದುಕಿನ ಮುಂದೆ ನಿಂತಾಗ ಪದಗಳೇ ಮೌನವಾಗುತ್ತವೆ. ಆ ಮೌನದಲ್ಲಿಯೇ ಅವರ ಮಹತ್ವವಿದೆ. ಆ ನಿಶ್ಯಬ್ದದಲ್ಲಿಯೇ ಅವರ ಸಂದೇಶವಿದೆ. ಆ ಸರಳತೆಯಲ್ಲಿಯೇ ಅವರ ದಿವ್ಯತೆಯಿದೆ.

ಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಾಜಿಯವರ ಬದುಕು—ನಿಶ್ಯಬ್ದವಾಗಿ ಹೊತ್ತಿ ಉರಿದ ಒಂದು ಜ್ಞಾನಜ್ಯೋತಿ.

ಡಾ. ವಿಜಯ್ ವಿ. ಮುರದಂಡೆ

ಸಹಾಯಕ ಪ್ರಾಧ್ಯಾಪಕರು,

ಕೆಎಲ್‌ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯ, ಗದಗ

ಪೆನ್ನು ಹಿಡಿದು ವಲಯ ಮಟ್ಟದಲ್ಲಿ ಮಿಂಚಿದ ಶ್ರಾವಣಿ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಡಿಜಿಟಲ್‌ ಯುಗದ ಭರಾಟೆಯ ನಡುವೆಯೂ ಪೆನ್ನು-ಪೇಪರ್‌ನೊಂದಿಗೆ ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸುವ ಕಲೆ ತನ್ನ ಮಹತ್ವವನ್ನು ಕಳೆದುಕೊಂಡಿಲ್ಲ ಎಂಬುದನ್ನು ವಿದ್ಯಾರ್ಥಿನಿ ಶ್ರಾವಣಿ ಕರಿಗಾರ ಅವರ ಸಾಧನೆ ಮತ್ತೊಮ್ಮೆ ಸಾಬೀತುಪಡಿಸಿದೆ.

ಭಾರತೀಯ ಅಂಚೆ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಪತ್ರ ಬರೆಯುವ ಅಭಿಯಾನ 2025-26ರ ‘ನನ್ನ ಆದರ್ಶ ವ್ಯಕ್ತಿಗೊಂದು ಪತ್ರ’ ವಿಷಯದ ಪತ್ರ ಬರೆಯುವ ಸ್ಪರ್ಧೆಯಲ್ಲಿ ಮುಂಡರಗಿಯ ಜಗದ್ಗುರು ತೋಂಟದಾರ್ಯ ವಸತಿ ಸಿ.ಬಿ.ಎಸ್.ಇ. ಶಾಲೆಯ ವಿದ್ಯಾರ್ಥಿನಿ ಕುಮಾರಿ ಶ್ರಾವಣಿ ಕರಿಗಾರ ವಲಯ ಮಟ್ಟದಲ್ಲಿ ಪ್ರಶಸ್ತಿ ಪಡೆದು ಗಮನ ಸೆಳೆದಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿರಹಟ್ಟಿ, ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಅಭ್ಯಾಸ, ಸೃಜನಶೀಲತೆ ಹಾಗೂ ಸಂವಹನ ಕೌಶಲ್ಯ ಬೆಳೆಸುವ ನಿಟ್ಟಿನಲ್ಲಿ ಅಂಚೆ ಇಲಾಖೆ ವಿವಿಧ ಪತ್ರ ಬರೆಯುವ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೈಬರಹದ ಅಭ್ಯಾಸವನ್ನು ಮುಂದುವರಿಸುವುದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಲಿದೆ ಎಂದರು.

ಅಂಚೆ ಇಲಾಖೆಯ ದೀನ್ ದಯಾಳ್ ಸ್ಪರ್ಶ ಯೋಜನೆಯಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಪರೀಕ್ಷೆ ನಡೆಸಲಾಗುತ್ತಿದ್ದು, ಅರ್ಹತೆ ಪಡೆದವರಿಗೆ ಪ್ರತಿವರ್ಷ ₹6,000 ಪ್ರೋತ್ಸಾಹಧನ ನೀಡಲಾಗುತ್ತದೆ. ವಿದ್ಯಾರ್ಥಿಗಳು ಅಂಚೆ ಇಲಾಖೆಯ ವಿವಿಧ ಉಳಿತಾಯ ಹಾಗೂ ಜನೋಪಯೋಗಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಂಚೆ ಜೀವ ವಿಮಾ ಅಧಿಕಾರಿ ಎಸ್.ಐ. ನಾಯ್ಕ ಮಾತನಾಡಿ, 18 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಗದಗ ನಗರದ ಎ.ಎಸ್.ಎಸ್. ಕಾಮರ್ಸ್ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಶ್ವೇತಾ ಸಿ. ಶಿರೂರ ಪ್ರಥಮ ಸ್ಥಾನ ಪಡೆದು ₹25,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಪಡೆದಿರುವುದನ್ನು ತಿಳಿಸಿದರು. ಜಿಲ್ಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿಯನ್ನು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುತ್ತಿದ್ದಾರೆ ಎಂದರು.

ಮುಂಡರಗಿ ಅಂಚೆ ಕಚೇರಿಯ ಅಂಚೆ ಪಾಲಕ ಹಾಲಪ್ಪ ವಾಮಕೆರಿ, ಶಾಲೆಯ ಪ್ರಾಚಾರ್ಯ ಶರಣಕುಮಾರ ಬುಗಟಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ, ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸುವುದು ಇಂತಹ ಸ್ಪರ್ಧೆಗಳ ಮುಖ್ಯ ಉದ್ದೇಶ. ಶ್ರಾವಣಿಯಂತಹ ವಿದ್ಯಾರ್ಥಿಗಳ ಸಾಧನೆ ಇತರರಿಗೂ ಪ್ರೇರಣೆಯಾಗಲಿ.

— ಎಸ್.ಎಸ್. ಶಿರಹಟ್ಟಿ, ವಿಭಾಗೀಯ ಅಂಚೆ ಅಧೀಕ್ಷಕ, ಗದಗ

ಶಿಕ್ಷಕರ ನಿರಂತರ ಪರಿಶ್ರಮದಿಂದ ಗದಗಕ್ಕೆ ಶೇ.94 ಎಸ್‌ಎಸ್‌ಎಲ್‌ಸಿ ಫಲಿತಾಂಶ: ಸಂಕನೂರ

0

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಸಮಯ ಮೀಸಲಿಡಬೇಕು. ಬೋಧನಾ ಕಾರ್ಯಕ್ಕೆ ಆದ್ಯತೆ ನೀಡುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದ ಸರಾಸರಿ ಫಲಿತಾಂಶ ಶೇ.93 ಇದ್ದರೆ, ಗದಗ ಜಿಲ್ಲೆ ಶೇ.94ರಷ್ಟು ಫಲಿತಾಂಶ ದಾಖಲಿಸಿ ರಾಜ್ಯದ ಸರಾಸರಿಯನ್ನು ಮೀರಿದೆ. ಇದಕ್ಕೆ ಜಿಲ್ಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರಂತರ ಪರಿಶ್ರಮವೇ ಕಾರಣ ಎಂದು ಸಂಕನೂರ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ಅವಧಿಗೂ ಮುನ್ನ ಹಾಗೂ ನಂತರ ಪರಿಹಾರ ಬೋಧನೆ, ಪರೀಕ್ಷಾ ಸಂದರ್ಭದಲ್ಲಿ ‘ಓದಿನ ಮನೆ’ ಸೇರಿದಂತೆ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಶ್ರಮಿಸಿದ ಶಿಕ್ಷಕರ ಸೇವೆಯನ್ನು ಶ್ಲಾಘಿಸಿದರು.

ಶಾಲೆಗಳಲ್ಲಿ ಆನ್‌ಲೈನ್ ಹಾಗೂ ಡಿಜಿಟಲ್ ಕಾರ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಪ್ಯೂಟರ್ ಅಥವಾ ಡೇಟಾ ಎಂಟ್ರಿ ಆಪರೇಟರ್‌ಗಳಂತಹ ಸಹಾಯಕ ಸಿಬ್ಬಂದಿ ಒದಗಿಸುವ ಕುರಿತು ಸರ್ಕಾರ ಗಮನಹರಿಸಬೇಕು. ಇದರಿಂದ ಶಿಕ್ಷಕರು ಬೋಧನೆ, ವಿದ್ಯಾರ್ಥಿಗಳ ಮಾರ್ಗದರ್ಶನ ಹಾಗೂ ಕಲಿಕಾ ಚಟುವಟಿಕೆಗಳಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತದೆ ಎಂದರು.

ಕನ್ನಡದ ಜತೆಗೆ ಇಂಗ್ಲಿಷ್‌ನಲ್ಲಿಯೂ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಅವಕಾಶ ಕಲ್ಪಿಸಲು ದ್ವಿಭಾಷಾ ಬೋಧನಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಶಿಕ್ಷಕರಿಗೆ ಆರು ತಿಂಗಳಿಂದ ಒಂದು ವರ್ಷದವರೆಗೆ ಹಂತ ಹಂತವಾಗಿ ತರಬೇತಿ ನೀಡಿದರೆ ಆತ್ಮವಿಶ್ವಾಸದಿಂದ ದ್ವಿಭಾಷಾ ಬೋಧನೆ ನಡೆಸಲು ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನ, ಜ್ಞಾನ, ಸರಳತೆ ಹಾಗೂ ನಿರಂತರ ಕಲಿಕೆಯ ಮನೋಭಾವ ಪ್ರತಿಯೊಬ್ಬ ಶಿಕ್ಷಕರಿಗೂ ಪ್ರೇರಣೆಯಾಗಬೇಕು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿ, ವಿಶ್ವವಿದ್ಯಾಲಯದ ಕುಲಪತಿ, ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿ ಹುದ್ದೆಗೇರಿದ ಅವರ ಜೀವನ ಶಿಕ್ಷಕರಿಗೆ ಆದರ್ಶವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಶಿಕ್ಷಕರನ್ನು ಗೌರವಿಸಲಾಯಿತು. ನಿವೃತ್ತ ಶಿಕ್ಷಕರನ್ನೂ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ವಿ. ಬಳ್ಳಾರಿ, ನಿವೃತ್ತ ಶಿಕ್ಷಕ ಎಸ್.ಎನ್. ಬಳ್ಳಾರಿ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಕೆ.ಡಿ. ಬಡಿಗೇರ ಸ್ವಾಗತಿಸಿದರು. ಎಂ.ಎಂ. ಮೇಗಲಮನಿ ನಿರೂಪಿಸಿ, ವಂದಿಸಿದರು.

ಶಿಕ್ಷಕ ವೃತ್ತಿ ಸಮಾಜ ನಿರ್ಮಾಣದ ಪ್ರಮುಖ ಕೊಂಡಿಯಾಗಿದೆ. ಶಿಕ್ಷಕರು ಪಠ್ಯ ಬೋಧನೆಗೆ ಮಾತ್ರ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳು, ಶಿಸ್ತು, ಜವಾಬ್ದಾರಿ ಹಾಗೂ ಆತ್ಮವಿಶ್ವಾಸ ಬೆಳೆಸುವ ಕೆಲಸಕ್ಕೂ ಆದ್ಯತೆ ನೀಡಬೇಕು. ಶಿಕ್ಷಕರ ಗೌರವ ಮತ್ತು ಘನತೆ ಎತ್ತಿಹಿಡಿದಾಗ ಮಾತ್ರ ಉತ್ತಮ ಶಿಕ್ಷಣ ವ್ಯವಸ್ಥೆ ನಿರ್ಮಿಸಲು ಸಾಧ್ಯ.

— ಎಸ್.ವಿ. ಸಂಕನೂರ, ವಿಧಾನ ಪರಿಷತ್ ಶಾಸಕ

ಅಧಿಕಾರಿಗಳು ಕೇಂದ್ರಸ್ಥಾನದಲ್ಲಿರದಿದ್ದರೆ ಸಿಎಂಗೆ ವರದಿ: ಡಾ. ಚಂದ್ರು ಲಮಾಣಿ ಎಚ್ಚರಿಕೆ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ವಾಸ್ತವ್ಯ ಮಾಡದೇ, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಉನ್ನತ ಅಧಿಕಾರಿಗಳಿಗೆ ಅಧಿಕೃತ ಠರಾವು ಮೂಲಕ ವರದಿ ಸಲ್ಲಿಸಲಾಗುವುದು ಎಂದು ಶಾಸಕ ಡಾ. ಚಂದ್ರು ಲಮಾಣಿ ಎಚ್ಚರಿಕೆ ನೀಡಿದರು.

ಶನಿವಾರ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನದ ಅಧ್ಯಕ್ಷತೆ ವಹಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿಗಳ ನಿರ್ದೇಶನದಂತೆ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿಯೇ ವಾಸ್ತವ್ಯ ಮಾಡಬೇಕು. ಇದನ್ನು ಖಚಿತಪಡಿಸಲು ಜಿಪಿಎಸ್ ಫೋಟೋ ಹಾಕಬೇಕು. ಕೇಂದ್ರಸ್ಥಾನದಲ್ಲಿ ವಾಸ್ತವ್ಯ ಮಾಡದ ಅಧಿಕಾರಿಗಳು ಕೂಡಲೇ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಬೆಳಗಿನ ಜಾವವೇ ಸಾರಾಯಿ ಮಾರಾಟ?

ಶಿರಹಟ್ಟಿ ಪಟ್ಟಣದ ಕೆಲ ಅಂಗಡಿಗಳಲ್ಲಿ ಬೆಳಗಿನ ಜಾವ 4 ಗಂಟೆಗೇ ಅಕ್ರಮವಾಗಿ ಸಾರಾಯಿ ಮಾರಾಟವಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. “ಚಹಾ ಸಿಗುವುದಿಲ್ಲ, ಆದರೆ ಸಾರಾಯಿ ಸಿಗುತ್ತದೆ. ಇದರಿಂದ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವ ಘಟನೆಗಳೂ ನಡೆಯುತ್ತಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಲಮಾಣಿ, ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕುವಂತೆ ಸೂಚಿಸಿದರು.

ಸಭೆಗೆ ಗೈರುಹಾಜರಾಗಿದ್ದ ಅಬಕಾರಿ ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಕ್ರಮಕ್ಕೆ ವರದಿ ಸಲ್ಲಿಸುವಂತೆ ತಹಸೀಲ್ದಾರ್ ಕೆ. ರಾಘವೇಂದ್ರರಾವ್ ಹಾಗೂ ಸಿಪಿಐ ಬಿ.ವಿ. ನ್ಯಾಮಗೌಡ ಅವರಿಗೆ ಸೂಚಿಸಿದರು.

ಎಪಿಎಂಸಿ ಸ್ವಚ್ಛಗೊಳಿಸಿ, ಬೀದಿ ವ್ಯಾಪಾರಿಗಳಿಗೆ ವ್ಯವಸ್ಥೆ

ಶಿರಹಟ್ಟಿ ಸರ್ಕಾರಿ ಶಾಲೆ ಸುತ್ತಮುತ್ತ ಒತ್ತುವರಿಯಾಗಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗಿದ್ದು, ಬಸ್ ನಿಲ್ದಾಣದ ಸಮೀಪದ ಬೀದಿ ವ್ಯಾಪಾರದಿಂದ ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಪಿಎಂಸಿ ಆವರಣವನ್ನು ಸ್ವಚ್ಛಗೊಳಿಸಿ, ಬೀದಿ ವ್ಯಾಪಾರಿಗಳಿಗೆ ಒಂದು ವಾರದೊಳಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಪಪಂ ಮುಖ್ಯಾಧಿಕಾರಿಗೆ ಶಾಸಕ ಲಮಾಣಿ ಸೂಚಿಸಿದರು.

ಫುಡ್ ಇಲ್ಲದಿದ್ದರೂ ಇಂದಿರಾ ಕ್ಯಾಂಟೀನ್‌ಗೆ ಬಿಲ್?

ಇಂದಿರಾ ಕ್ಯಾಂಟೀನ್‌ನಲ್ಲಿ ಕಳೆದ ಮೂರು ವರ್ಷಗಳಿಂದ ಆಹಾರ ಸಿಗದಿದ್ದರೂ ಪ್ರತಿ ತಿಂಗಳು ಬಿಲ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ₹5ಕ್ಕೆ ನೀಡುವ ಆಹಾರಕ್ಕೆ ಸರ್ಕಾರ ₹26 ಪಾವತಿಸುತ್ತಿದ್ದು, ಸಾರ್ವಜನಿಕರಿಗೆ ಸಮರ್ಪಕ ಆಹಾರ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಪಪಂ ಮುಖ್ಯಾಧಿಕಾರಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಆರ್.ವಿ. ದೊಡ್ಡಮನಿ, ಸಿಪಿಐ ಬಿ.ವಿ. ನ್ಯಾಮಗೌಡ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರಯ್ಯ ಮಠಪತಿ, ಪಪಂ ಮುಖ್ಯಾಧಿಕಾರಿ ನೀಲೇಶ ಹಾದಿಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

165ಕ್ಕೂ ಹೆಚ್ಚು ಅರ್ಜಿ ಸ್ವೀಕಾರ

ಮಧ್ಯಾಹ್ನ 3.30ರವರೆಗೆ 165ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳನ್ನು ಐಪಿಜಿಆರ್‌ಎಸ್ ಮೂಲಕ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಲಾಗಿನ್‌ಗೆ ಕಳುಹಿಸಲಾಗಿದೆ. ಅರ್ಜಿದಾರರಿಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಉತ್ತರ ನೀಡಲಾಗುವುದು ಎಂದು ತಹಸೀಲ್ದಾರ್ ಕೆ. ರಾಘವೇಂದ್ರರಾವ್ ತಿಳಿಸಿದರು.

ಜನರ ಮನೆಬಾಗಿಲಿಗೆ ಸರ್ಕಾರ; ಅಹವಾಲುಗಳಿಗೆ ತ್ವರಿತ ಪರಿಹಾರ : ಸಂತೋಷ ಲಾಡ್

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಜನರ ಸಮಸ್ಯೆಗಳನ್ನು ಕಚೇರಿಗಳ ಕಡತಕ್ಕೆ ಸೀಮಿತಗೊಳಿಸದೆ, ತ್ವರಿತಗತಿಯಲ್ಲಿ ವಿಲೇವಾರಿ ಮಾಡುವ ಉದ್ದೇಶದಿಂದ ಸರ್ಕಾರ ಪ್ರಜಾ ಸೇವಾ ಇಲಾಖೆಯನ್ನು ಸ್ಥಾಪಿಸಿದೆ. ಈ ಮೂಲಕ ಸರ್ಕಾರವೇ ಜನರ ಮನೆಬಾಗಿಲಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ಕಲ್ಪಿಸಲಿದೆ ಎಂದು ಕಾರ್ಮಿಕ, ಉದ್ಯೋಗ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಕಲಘಟಗಿಯ ಜನತಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಶನಿವಾರ ನಡೆದ ಪ್ರಜಾ ಸೇವಾ ಆಂದೋಲನ–ಜನಸಂಪರ್ಕ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜನರ ಅಹವಾಲುಗಳನ್ನು ಆಲಿಸಿ, ನಿಗದಿತ ಸಮಯದಲ್ಲಿ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿ ತಾಲೂಕಿನಲ್ಲೂ ಪ್ರಜಾ ಸೇವಾ ಆಂದೋಲನ ಸಭೆ ನಡೆಸಲಾಗುವುದು ಎಂದರು.

ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಜನರು ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸುವುದು ಪ್ರಜಾ ಸೇವಾ ಆಂದೋಲನದ ಪ್ರಮುಖ ಉದ್ದೇಶವಾಗಿದೆ. ಜನರ ಅಹವಾಲುಗಳನ್ನು ಆಲಿಸಿ, ಸಂಬಂಧಿಸಿದ ಇಲಾಖೆಗಳ ಮೂಲಕ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸಲಾಗುವುದು ಎಂದು ಲಾಡ್ ಹೇಳಿದರು.

ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿ, ಸರ್ಕಾರ ಜನಪರವಾಗಿದ್ದು, ರೈತರು, ಕಾರ್ಮಿಕರು ಹಾಗೂ ಮಹಿಳೆಯರ ಸಮಸ್ಯೆಗಳನ್ನು ಆಲಿಸಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ಅಧಿಕಾರಿಗಳು ನಿಗದಿತ ಸಮಯದಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ರಾಜ್ಯದ ಜನರು ನೀಡಿದ 136 ಸ್ಥಾನಗಳ ಬೆಂಬಲದ ಋಣ ತೀರಿಸುವ ನಿಟ್ಟಿನಲ್ಲಿ ಸರ್ಕಾರ ಜನರ ಮನೆಬಾಗಿಲಿಗೆ ಯೋಜನೆಗಳನ್ನು ತಲುಪಿಸಲಿದೆ. ಈಗಾಗಲೇ 42ಕ್ಕೂ ಅಧಿಕ ಅಹವಾಲುಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದರು. ರಾಜ್ಯದ 101 ತಾಲೂಕುಗಳು ಹಾಗೂ ಇತ್ತೀಚೆಗೆ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇನ್ನಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು ಎಂದರು.

ಶಾಸಕ ಎಫ್.ಎಚ್. ಜಕ್ಕಪ್ಪನವರ ಮಾತನಾಡಿ, ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ತಾಲೂಕು ಹಾಗೂ ಜಿಲ್ಲಾ ಕಚೇರಿಗಳಲ್ಲಿ ದಾಖಲಿಸಿಕೊಂಡು ಶೀಘ್ರ ಪರಿಹರಿಸಬೇಕು. ಅಧಿಕಾರಿಗಳು ಪ್ರಜೆಗಳ ಸೇವೆಗೆ ಬದ್ಧರಾಗಬೇಕು. ಹೈನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ವಿಶೇಷಚೇತನರಿಗೆ ತ್ರಿಚಕ್ರ ವಾಹನ ಹಾಗೂ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು. ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕುಮಾರ್ ಟಿ.ಎಚ್.ಎಂ., ಜಿಪಂ ಸಿಇಒ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಸ್ನೇಹಲ್ ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸ್ವಾಗತಿಸಿದರು. ಗೌರಿ ನಿರೂಪಿಸಿದರು.

ಜನರ ಮನೆ ಬಾಗಿಲಿಗೆ ಸರ್ಕಾರ ತೆರಳಲಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರದಲ್ಲೇ ಪರಿಹರಿಸಲು ಕ್ರಮ ವಹಿಸಲಾಗುವುದು. ನಿಗದಿತ ಸಮಯದಲ್ಲಿ ಜನರ ಅಹವಾಲುಗಳನ್ನು ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

— ಸಂತೋಷ ಲಾಡ್, ಕಾರ್ಮಿಕ, ಉದ್ಯೋಗ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ

ಖಾಲಿ ನಿವೇಶನ ಸ್ವಚ್ಛವಾಗಿಡದಿದ್ದರೆ ₹30 ಸಾವಿರದವರೆಗೆ ದಂಡ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನದಲ್ಲಿರುವ ಗಿಡಗಂಟಿ ಹಾಗೂ ಕಸವನ್ನು ತೆರವುಗೊಳಿಸಿ ಸ್ವಚ್ಛವಾಗಿಟ್ಟುಕೊಳ್ಳುವಂತೆ ನಗರಸಭೆ ಸೂಚಿಸಿದೆ.

ಈ ಕುರಿತು ಈಗಾಗಲೇ ಪತ್ರಿಕೆ ಹಾಗೂ ನಗರಸಭೆಯ ಆಟೋಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದ್ದು, ಸೆ.10ರೊಳಗೆ ತಮ್ಮ ಹೆಸರಿನಲ್ಲಿರುವ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ಪೌರಾಯುಕ್ತ ರಾಜಾರಾಮ ಪವಾರ್ ತಿಳಿಸಿದ್ದಾರೆ.

ನಿಗದಿತ ಅವಧಿಯೊಳಗೆ ನಿವೇಶನ ಸ್ವಚ್ಛಗೊಳಿಸದಿದ್ದರೆ ನಗರಸಭೆಯಿಂದಲೇ ಸ್ವಚ್ಛತಾ ಕಾರ್ಯ ಕೈಗೊಂಡು, ಅದಕ್ಕೆ ತಗಲುವ ವೆಚ್ಚವನ್ನು ಆಸ್ತಿ ಮಾಲೀಕರಿಂದ ವಸೂಲಿ ಮಾಡಲಾಗುವುದು. ನಗರಸಭೆಯಿಂದ ಸ್ವಚ್ಛಗೊಳಿಸಿದ ನಂತರ ಅದರ ವೆಚ್ಚವನ್ನು ಪಾವತಿಸದಿದ್ದಲ್ಲಿ ಸಂಬಂಧಿಸಿದ ಆಸ್ತಿಯ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಿ, ಆಸ್ತಿಯ ಮೇಲೆ ಭೂಜಾ ದಾಖಲೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

20×30 ಅಡಿ ನಿವೇಶನಕ್ಕೆ ₹15 ಸಾವಿರ, 30×40 ಅಡಿಗೆ ₹20 ಸಾವಿರ, 30×50 ಅಡಿಗೆ ₹22 ಸಾವಿರ, 40×60 ಅಡಿಗೆ ₹25 ಸಾವಿರ ಹಾಗೂ 40×60ಕ್ಕಿಂತ ಹೆಚ್ಚಿನ ಅಳತೆಯ ನಿವೇಶನಗಳಿಗೆ ₹30 ಸಾವಿರ ವಸೂಲಿ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಸ್ತಿ ಮಾಲೀಕರು ಯಾವುದೇ ಕ್ರಮಕ್ಕೆ ಅವಕಾಶ ನೀಡದೆ ನಿಗದಿತ ಅವಧಿಯೊಳಗೆ ತಮ್ಮ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ್ ಮನವಿ ಮಾಡಿದ್ದಾರೆ.

‘ಪ್ರಜಾ ಸೇವೆ’ ಅರಿವಾಗಿದ್ದು ಮೂರು ವರ್ಷಗಳ ಬಳಿಕವೇ?: ವೆಂಕನಗೌಡ ಆರ್. ಗೋವಿಂದಗೌಡ್ರ ಟೀಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಕಾಂಗ್ರೆಸ್ ಸರ್ಕಾರ ‘ಪ್ರಜಾ ಸೇವೆ’ ಎಂಬ ಹೊಸ ನಾಟಕ ಆರಂಭಿಸುವ ಮೂಲಕ ಕನ್ನಡಿಗರನ್ನು ಮಂಕು ಮಾಡಲು ಹೊರಟಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಟೀಕಿಸಿದ್ದಾರೆ.

ಸುಮಾರು 60 ವರ್ಷಗಳ ಕಾಲ ಅಧಿಕಾರ ನಡೆಸಿರುವ ಕಾಂಗ್ರೆಸ್ ಪಕ್ಷಕ್ಕೆ ಪ್ರಜೆಗಳ ಸೇವೆ ಮಾಡಬೇಕೆಂಬುದು ಈಗ ಅರಿವಾದಂತಿದೆ. ಇಷ್ಟು ವರ್ಷಗಳ ಕಾಲ ರಾಜ್ಯವನ್ನು ಕೊಳ್ಳೆ ಹೊಡೆದಿದ್ದು, ಇದೀಗ ಹಗರಣಗಳಲ್ಲಿ ಸಿಲುಕಿರುವ ಕಾಂಗ್ರೆಸ್ ಸರ್ಕಾರ ಹೊಸ ಹೊಸ ಹೆಸರುಗಳನ್ನು ಇಟ್ಟು ಜನರ ಗಮನವನ್ನು ಬೇರೆಡೆ ಸೆಳೆಯುವ ವಿಫಲ ಪ್ರಯತ್ನ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಚುನಾವಣೆ ವೇಳೆ ‘ಪ್ರಜೆಗಳೇ ಪ್ರಭುಗಳು’ ಎಂದು ಹೇಳಿ, ಜನರ ಸೇವೆ ಮಾಡುವುದಾಗಿ ಬಣ್ಣಬಣ್ಣದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷಗಳ ಬಳಿಕ ಪ್ರಜೆಗಳ ಸೇವೆ ಮಾಡಬೇಕೆಂಬುದು ಅರಿವಾಗಿದೆಯೇ? ಅಥವಾ ಲೂಟಿ ಮಾಡಲು ಹೊಸ ಹೆಸರನ್ನು ಬಳಸುತ್ತಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ವ್ಯಂಗ್ಯವಾಡಿದರು.

ಈ ಹಿಂದೆ ಕೂಡ ಹತ್ತು ಹಲವು ಹೊಸ ಹೆಸರುಗಳನ್ನು ಇಟ್ಟು ಸರ್ಕಾರದ ಹಣದಲ್ಲಿ ಪ್ರಚಾರ ಪಡೆದಿರುವುದನ್ನು ಯಾರೂ ಮರೆತಿಲ್ಲ. ಇದೀಗ ಮತ್ತೊಂದು ಹೊಸ ಹೆಸರಿನ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ವೆಂಕನಗೌಡ ಆರ್. ಗೋವಿಂದಗೌಡ್ರ ಟೀಕಿಸಿದ್ದಾರೆ.