Home Blog Page 2

ಮೈಸೂರಿನಲ್ಲಿ ಈಜಲು ಹೋದ ಅರಣ್ಯ ರಕ್ಷಕ ನೀರಿನಲ್ಲಿ ಮುಳುಗಿ ಸಾವು!

0

ಮೈಸೂರು: ಅರಣ್ಯ ಇಲಾಖೆಯ ಕ್ಯಾಂಪ್ ಸಮೀಪ ಹರಿಯುತ್ತಿದ್ದ ಕಬಿನಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಅರಣ್ಯ ರಕ್ಷಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಬುಧವಾರ ನಡೆದಿದೆ.

ಹೆಚ್.ಡಿ. ಕೋಟೆ ತಾಲೂಕಿನ ಅಂಕನಾಥಪುರ ಗ್ರಾಮದ ನಿವಾಸಿ ಸುಪ್ರೀತ್ (36) ಮೃತ ದುರ್ಧೈವಿಯಾಗಿದ್ದು,  ಎಂದಿನಂತೆ ಕರ್ತವ್ಯ ನಿರ್ವಹಿಸಿ, ರಾತ್ರಿ ಪಾಳಿಯ ಕೆಲಸ ಮುಗಿಸಿದ ನಂತರ ಬುಧವಾರ ಬೆಳಿಗ್ಗೆ ಸುಮಾರು 8 ಗಂಟೆಗೆ ಉದ್ಬೂರು ಗೇಟ್ ಸಮೀಪದ ಕಳ್ಳಬೇಟೆ ತಡೆ ಶಿಬಿರದ ಬಳಿ ತಮ್ಮ ಸಹೋದ್ಯೋಗಿಗಳಾದ ಅಯ್ಯಪ್ಪ ಮತ್ತು ಅಮನ್ ಜೊತೆ ಈಜಲು ತೆರಳಿದ್ದರು.

ಈಜಾಡುತ್ತಿದ್ದ ವೇಳೆ ಸುಪ್ರೀತ್ ಅವರಿಗೆ ಆಯಾಸವಾಗಿದ್ದು, ತಾವು ದಡಕ್ಕೆ ಮರಳುವುದಾಗಿ ಸಹೋದ್ಯೋಗಿಗಳಿಗೆ ತಿಳಿಸಿ ನೀರಿನಿಂದ ಹೊರಬರಲು ಯತ್ನಿಸಿದ್ದಾರೆ. ಆದರೆ ತೀವ್ರ ಆಯಾಸದಿಂದ ನೀರಿನಲ್ಲಿ ಮುಳುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಹೋದ್ಯೋಗಿಗಳ ಕೂಗನ್ನು ಕೇಳಿದ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ಆರಂಭಿಸಿದರು. ಆದರೆ ಪತ್ತೆಯಾಗದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.

ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿ, ಸ್ಥಳೀಯ ನುರಿತ ಈಜುಗಾರರು ಹಾಗೂ ಕೇರಳದಿಂದ ಆಗಮಿಸಿದ ಮುಳುಗು ತಜ್ಞರ ತಂಡ ಶೋಧ ಕಾರ್ಯ ಕೈಗೊಂಡಿತ್ತು. ಗುರುವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ಸುಪ್ರೀತ್ ಅವರ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಲಾಯಿತು.

ಮೃತರಿಗೆ ಇಬ್ಬರು ಚಿಕ್ಕ ಮಕ್ಕಳು ಇದ್ದು, ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು. ಈ ಕುರಿತು ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ನಲ್ಲಿ ಬಂದು ಯುವತಿಯರಿಗೆ ಬ್ಯಾಡ್ ಟಚ್: ಇಬ್ಬರ ಬಂಧನ

ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಯುವತಿಯರಿಗೆ ಬೈಕ್‌ನಲ್ಲಿ ಹಿಂಬದಿಯಿಂದ ಬಂದು ಕಿರುಕುಳ ನೀಡಿದ ಘಟನೆ ನಗರದ ಯಲಹಂಕ ಪ್ರದೇಶದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪಾವಗಡ ಮೂಲದ ಹರೀಶ್ ಮತ್ತು ಪ್ರಜ್ವಲ್ ಎಂದು ಗುರುತಿಸಲಾಗಿದ್ದು, ಇಬ್ಬರೂ ನಗರದಲ್ಲಿ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು.

ಘಟನೆ ಏಪ್ರಿಲ್ 22ರಂದು ಯಲಹಂಕದಿಂದ ಬಾಗಲೂರು ಕಡೆಗೆ ಸಾಗುವ ಮುಖ್ಯರಸ್ತೆಯಲ್ಲಿ ನಡೆದಿದ್ದು, ಬೈಕ್‌ನಲ್ಲಿ ಬಂದ ಆರೋಪಿಗಳು ಯುವತಿಯರ ಅಂಗಾಂಗಗಳನ್ನು ಮುಟ್ಟಿ ಅಸಭ್ಯ ವರ್ತನೆ ತೋರಿದ್ದಾರೆ ಎಂದು ತಿಳಿದುಬಂದಿದೆ.

ಈ ಕೃತ್ಯ ಹಿಂಬದಿಯಿಂದ ಬರುತ್ತಿದ್ದ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು.

ವಿಡಿಯೋ ಆಧಾರವಾಗಿ ತಕ್ಷಣವೇ ಸುವೋಮೋಟೋ ಪ್ರಕರಣ ದಾಖಲಿಸಿಕೊಂಡ ಯಲಹಂಕ ಪೊಲೀಸ್ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಮತ್ತೆ ಚರ್ಚೆಗಳು ಆರಂಭವಾಗಿವೆ.

SSLC ಪರೀಕ್ಷೆ ಪಾಸ್​ ಆದ ಖುಷಿಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ನೀರುಪಾಲು

0

ಕೋಲಾರ: ರಾಜ್ಯದಲ್ಲಿ ಈಜಲು ಹೋಗಿ ನೀರುಪಾಲಾಗುವ ಘಟನೆಗಳು ಹೆಚ್ಚುತ್ತಿರುವ ನಡುವೆ, ಎಸ್‌ಎಸ್‌ಎಲ್‌ಸಿ ಫಲಿತಾಂಶದ ಖುಷಿಯಲ್ಲಿದ್ದ ಬಾಲಕನೋರ್ವ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಕೋಲಾರದಲ್ಲಿ ನಡೆದಿದೆ.

ಮೃತ ಬಾಲಕನನ್ನು ಕಿರಣ್ (15) ಎಂದು ಗುರುತಿಸಲಾಗಿದ್ದು, ಆತ ಮುಳಬಾಗಿಲು ತಾಲೂಕಿನ ನಿವಾಸಿ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 239 ಅಂಕಗಳನ್ನು ಪಡೆದು ತೇರ್ಗಡೆಯಾದ ಖುಷಿಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದನು.

ಈ ವೇಳೆ ಈಜಲು ಬಾರದ ಕಾರಣ ಬಾವಿಯ ನೀರಲ್ಲಿ ಮುಳುಗಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಾಲಕನ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಘಟನೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿ–ಸಾರಿಗೆ ಸಿಬ್ಬಂದಿ ನಡುವೆ ಗಲಾಟೆ: ಬಸ್ ತಡೆದು ಪ್ರತಿಭಟನೆ

0

ಗದಗ: ಬಸ್ ನಿಲ್ಲಿಸದ ವಿಚಾರವಾಗಿ ವಿದ್ಯಾರ್ಥಿಗಳು ಹಾಗೂ ಸಾರಿಗೆ ನೌಕರರ ನಡುವೆ ನಡೆದ ವಾಗ್ವಾದ ಹಲ್ಲೆ ಆರೋಪದ ಮಟ್ಟಕ್ಕೆ ತಲುಪಿದ ಘಟನೆ ನಗರದಲ್ಲಿರುವ ಪುಟ್ಟರಾಜ್ ಗವಾಯಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ವಿದ್ಯಾರ್ಥಿಗಳು ಬಸ್ ಹತ್ತಲು ಕೈ ತೋರಿಸಿದ್ದರೂ ಚಾಲಕ ಬಸ್ ನಿಲ್ಲಿಸಿಲ್ಲ ಎನ್ನಲಾಗಿದ್ದು, ಇದನ್ನು ಪ್ರಶ್ನಿಸಲು ಮುಂದಾದಾಗ ವಿದ್ಯಾರ್ಥಿಗಳು ಮತ್ತು ಸಾರಿಗೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ಉಂಟಾಗಿದೆ.

ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಲುಪಿದ್ದು, ಸಾರಿಗೆ ನೌಕರರು ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆಯ ವಿರುದ್ಧ ಆಕ್ರೋಶಗೊಂಡ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಹಲ್ಲೆ ಮಾಡಿದ ನೌಕರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಶಹರ ಪೊಲೀಸ್ ಠಾಣೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ವಿದ್ಯಾರ್ಥಿಗಳನ್ನು ಮನವೊಲಿಸಲು ಹರಸಾಹಸ ಪಟ್ಟರು. ಈ ನಡುವೆ ಬಸ್ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು.

ಕೊನೆ ಕ್ಷಣದಲ್ಲಿ ಬಂದವರಿಗೂ ಪರೀಕ್ಷೆ ಬರೆಯಲು ನೆರವಾದ ಕೆಇಎ

ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯೋಜಿಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೊದಲ ದಿನವಾದ ಗುರುವಾರ ಅತ್ಯಂತ ಸುಗಮವಾಗಿ ನಡೆಯಿತು.

ರಾಜ್ಯದ 745 ಕೇಂದ್ರಗಳಲ್ಲಿ ನಡೆದ ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ವಿಷಯಗಳ ಪರೀಕ್ಷೆಗೆ ಶೇ.96 ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೊನೆ ಕ್ಷಣದಲ್ಲಿ ಪ್ರವೇಶ ಪತ್ರ ಇಲ್ಲದೆ ಪರದಾಡಿದ ಹಾಗೂ ನಿಗದಿತ ಪರೀಕ್ಷಾ ಕೇಂದ್ರಕ್ಕೆ ಹೋಗದೆ ಬೇರೊಂದು ಕೇಂದ್ರಕ್ಕೆ ಹೋಗಿ ಚಡಪಡಿಸುತ್ತಿದ್ದ ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿ ಪರೀಕ್ಷೆ ಬರೆಸುವಲ್ಲಿಯೂ ನಮ್ಮ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ನ ಬಿಜಿಎಸ್ ಪಿಯು ಕಾಲೇಜಿನಲ್ಲಿ ಪರೀಕ್ಷೆ ಬರೆಯಬೇಕಿದ್ದ ಅನ್ವಿ ಸೋಜನ್ ಎಂಬಾತ ಕೆಂಗೇರಿ ಸಮೀಪದ ಬಿಜಿಎಸ್ ಗ್ಲೋಬಲ್ ಕಾಲೇಜಿಗೆ ಹೋಗಿದ್ದರು. ಪುನಃ ಅವರು ಮಹಾಲಕ್ಷ್ಮಿ ಲೇಔಟ್ ಕಾಲೇಜಿಗೆ ಹೋಗಲು ತಡವಾಗುತ್ತದೆ ಎನ್ನುವ ಕಾರಣಕ್ಕೆ ಗ್ಲೋಬಲ್ ಕಾಲೇಜಿನಲ್ಲೇ ವಿಶೇಷವಾಗಿ ವ್ಯವಸ್ಥೆ ಮಾಡಿಸಿ ಪರೀಕ್ಷೆ ಬರೆಸಲಾಯಿತು ಎಂದು ಅವರು ವಿವರಿಸಿದರು.

ಇದೇ ರೀತಿ ಸಾಗರದ ಕಾಲೇಜಿನಲ್ಲಿ ಪರೀಕ್ಷೆ ಬರೆಯಬೇಕಿದ್ದ ಚಿನ್ಮಯಿ ಎಂಬಾತ ಶಿವಮೊಗ್ಗದ ಸೈನ್ಸ್ ಫೀಲ್ಡ್‌ ಕಾಲೇಜಿಗೆ ಹೋಗಿದ್ದರು. ವಿಷಯ ತಿಳಿದ ನಂತರ ಕಾಲೇಜಿನ ಪ್ರಾಂಶುಪಾಲರು ಅಲ್ಲೇ ಇದ್ದ ವೀಕ್ಷಕರ ಕಾರಿನಲ್ಲಿ ಆ ಅಭ್ಯರ್ಥಿಯನ್ನು ಸಾಗರಕ್ಕೆ ಕಳುಹಿಸಿ, ಪರೀಕ್ಷೆ ಬರೆಯಲು ನೆರವಾಗಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ನೇತೃತ್ವದಲ್ಲಿ ಸಿಸಿಟಿವಿ ಕ್ಯಾಮರಾ ಮೂಲಕ‌ ಮೇಲ್ವಿಚಾರಣೆ ಮಾಡಲಾಯಿತು. ಬೆಂಗಳೂರಿನ ಕೆಇಎ ಕಚೇರಿಯಲ್ಲಿ ಸ್ಥಾಪಿಸಿದ್ದ ಕಮಾಂಡ್ ಸೆಂಟರ್ ನಲ್ಲಿ ಬೆಂಗಳೂರು ಹಾಗೂ ಕಲ್ಬುರ್ಗಿ ಜಿಲ್ಲೆಯ ಪರೀಕ್ಷಾ ಕೇಂದ್ರಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಮೇಲ್ವಿಚಾರಣೆ ನಡೆಸಲಾಯಿತು ಎಂದು ಅವರು ಹೇಳಿದರು. ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಜೆ.ಗದ್ಯಾಳ್ ಅವರು ಕೂಡ ಪರೀಕ್ಷಾ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸಿದರು.

ಆಟೋ ಚಾಲಕರ ಮಗಳ ಸಾಧನೆ: 625ರಲ್ಲಿ 585 ಅಂಕ ಗಳಿಸಿದ ಆಶಾ

ಹಾವೇರಿ: ಜಿಲ್ಲೆಯ ರಾಣಿಬೇನ್ನೂರಿನ ಆಟೋ ಚಾಲಕ ನಾಗರಾಜ ನರಸಪ್ಪ ಆರೇರ ಅವರ ಪುತ್ರಿ ಆಶಾ ನಾಗರಾಜ ಆರೇರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ರಲ್ಲಿ 585 ಅಂಕಗಳನ್ನು ಗಳಿಸಿ ಸಾಧನೆ ಮೆರೆದಿದ್ದಾಳೆ.

ಹಗಲು-ರಾತ್ರಿ ಆಟೋ ಓಡಿಸಿ ಮಗಳನ್ನು ಓದಿಸಿದ ತಂದೆ ನಾಗರಾಜ ಅವರ ಪರಿಶ್ರಮಕ್ಕೆ ಮಗಳು ಉತ್ತಮ ಫಲಿತಾಂಶದ ಮೂಲಕ ಪ್ರತಿಫಲ ನೀಡಿದ್ದಾಳೆ. ಮಗಳ ಸಾಧನೆಯನ್ನು ಕಂಡು ಕುಟುಂಬ ಸದಸ್ಯರು ಕಣ್ಣೀರಿಟ್ಟರು.

ತಾಯಿ ರಾಧಾ ಹಾಗೂ ತಂದೆ ನಾಗರಾಜ ಅವರು ಆಶಾಳ ಓದಿಗೆ ನಿರಂತರ ಪ್ರೋತ್ಸಾಹ ನೀಡಿ ಸಾಥ್ ನೀಡಿದ್ದರು. ಅವರ ಕನಸು ನನಸಾಗುವಂತೆ ಆಶಾ ಉತ್ತಮ ಅಂಕಗಳನ್ನು ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ವೈದ್ಯೆಯಾಗುವ ಕನಸು ಹೊಂದಿರುವ ಆಶಾ, ಮುಂದಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಂಕಲ್ಪ ವ್ಯಕ್ತಪಡಿಸಿದ್ದಾಳೆ.

ಕಬಡ್ಡಿ ಬೆಟ್ಟಿಂಗ್ ಆರೋಪ: ಪರಮೇಶ್ವರ್ ವಿರುದ್ಧದ FIR ಗೆ ಹೈಕೋರ್ಟ್ ತಡೆ

ಬೆಂಗಳೂರು: ತುಮಕೂರಿನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಅಕ್ರಮ ಬೆಟ್ಟಿಂಗ್ ಆರೋಪ ಸಂಬಂಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.

ಈ ಸಂಬಂಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಅವರ ಪೀಠ, ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತುಮಕೂರಿನ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಟ್ಟಿಂಗ್ ಕುರಿತು ಮಾಧ್ಯಮ ವರದಿಗಳ ಆಧಾರದಲ್ಲಿ ದೂರು ನೀಡಲಾಗಿದೆ ಎಂದು ವಾದಿಸಿದರು. ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಖಾಸಗಿ ದೂರು ಸಲ್ಲಿಸಲಾಗಿದ್ದು, ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲು ಸೂಚಿಸಲಾಗಿದೆ. ಆದ್ದರಿಂದ ಆ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಯಾಗಿ ದೂರುದಾರರ ಪರ ವಕೀಲರು, ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಪತ್ರಿಕಾ ವರದಿಗಳು ಮತ್ತು ವಿಡಿಯೋ ದೃಶ್ಯಗಳನ್ನು ಸಲ್ಲಿಸಲಾಗಿದೆ. ಅವುಗಳನ್ನು ಪರಿಶೀಲಿಸಿದ ಬಳಿಕವೇ ಆದೇಶ ನೀಡಲಾಗಿದೆ ಎಂದು ವಾದಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಭಾರತೀಯ ನ್ಯಾಯ ಸಂಹಿತೆ 112ನೇ ವಿಧಿ ಅನ್ವಯ ಪ್ರಕರಣ ದಾಖಲಾಗಬೇಕಾದರೆ, ಆರೋಪಿತರು ಬೆಟ್ಟಿಂಗ್ ಗುಂಪಿನ ಸದಸ್ಯರಾಗಿರಬೇಕು ಎಂದು ಸೂಚಿಸಿತು. ಆದರೆ ಅರ್ಜಿದಾರರು ಅಂತಹ ಯಾವುದೇ ಗುಂಪಿನ ಸದಸ್ಯರಾಗಿದ್ದಾರೆ ಎಂಬುದಕ್ಕೆ ಸಾಕ್ಷ್ಯವಿಲ್ಲ ಎಂದು ಪ್ರಶ್ನಿಸಿತು.

ಇದೇ ವೇಳೆ, ಪೊಲೀಸರು ದೂರು ಸ್ವೀಕರಿಸಲು ಏಕೆ ನಿರಾಕರಿಸಿದರು ಎಂಬುದನ್ನು ಪರಿಶೀಲಿಸದೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ನೀಡಿರುವುದು ನಿಯಮಬಾಹಿರವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಎಫ್‌ಐಆರ್‌ಗೆ ತಾತ್ಕಾಲಿಕ ತಡೆ ನೀಡಿದೆ.

ಪ್ರಕರಣದ ಹಿನ್ನೆಲೆ:
2025ರ ಅಕ್ಟೋಬರ್ 19ರಂದು ತುಮಕೂರಿನಲ್ಲಿ ನಡೆದ ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾವಳಿಯಲ್ಲಿ, ದಕ್ಷಿಣ ಕನ್ನಡ ತಂಡ ಗೆಲ್ಲಲಿದೆ ಎಂದು ಹೇಳಿ ಜಿಲ್ಲಾಧಿಕಾರಿಯೊಂದಿಗೆ 500 ರೂಪಾಯಿ ಬೆಟ್ಟಿಂಗ್ ಕಟ್ಟಿದ್ದಾಗಿ ಪರಮೇಶ್ವರ್ ಹೇಳಿಕೆ ನೀಡಿದ್ದರು. ಬಳಿಕ ಈ ಕುರಿತು ಖಾಸಗಿ ದೂರು ದಾಖಲಾಗಿದ್ದು, ವಿಶೇಷ ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಪರಮೇಶ್ವರ್ ಹೈಕೋರ್ಟ್ ಮೊರೆ ಹೋಗಿದ್ದು, ತನ್ನ ವಿರುದ್ಧ ಯಾವುದೇ ದೃಢವಾದ ಸಾಕ್ಷ್ಯವಿಲ್ಲ ಮತ್ತು ಇದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಲಕ್ಷ ಲಕ್ಷ ಲಾಸ್: ಮನನೊಂದು ಯುವಕ ಆತ್ಮಹತ್ಯೆ!

0

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡ ಹಿನ್ನೆಲೆಯಲ್ಲಿ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

ಮೃತರನ್ನು ಹರ್ಷವರ್ಧನ್ (22) ಎಂದು ಗುರುತಿಸಲಾಗಿದೆ. ಇವರು ಮೊಬೈಲ್ ಮೂಲಕ ಸ್ಟಾಕ್ ಎಕ್ಸ್‌ಚೇಂಜ್ನಲ್ಲಿ ಟ್ರೇಡಿಂಗ್ ಮಾಡುತ್ತಿದ್ದರು. ಹೂಡಿಕೆ ಮಾಡಿದ ಹಣದಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದರಿಂದ ಮನೋವ್ಯಥೆಗೆ ಒಳಗಾಗಿದ್ದರು.

ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಹರ್ಷವರ್ಧನ್ ಅವರ ತಂದೆ ಚಂದ್ರಶೇಖರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮಲ್ಲಿಕಾರ್ಜುನ ಖರ್ಗೆಯವರು ದೇಶದ ಕ್ಷಮೆ ಕೇಳಬೇಕು: ಬಿ.ವೈ.ವಿಜಯೇಂದ್ರ ಆಗ್ರಹ

ಬೆಂಗಳೂರು: ಇಡೀ ವಿಶ್ವವೇ ನರೇಂದ್ರ ಮೋದಿಜೀ ಅವರ ನಾಯಕತ್ವವನ್ನು ಒಪ್ಪಿಕೊಳ್ಳುವ ಸಂದರ್ಭದಲ್ಲಿ ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿಜೀ ಅವರನ್ನು ಭಯೋತ್ಪಾದಕರೆಂದು ಹೇಳಿದ್ದು ಬಿಜೆಪಿ ಮಾತ್ರವಲ್ಲದೇ ಇಡೀ ದೇಶ ಇದನ್ನು ಬಲವಾಗಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಉಗ್ರವಾದಿ ಎಂದು ಹೇಳಿದ ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಇಂದು ಏರ್ಪಡಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಖರ್ಗೆಯವರು ಮತ್ತು ಕಾಂಗ್ರೆಸ್ಸಿಗೆ ಪ್ರಧಾನಿಯವರ ಜನಪ್ರಿಯತೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ತಿಳಿಸಿದರು.

ವಿಶ್ವದ 25ಕ್ಕೂ ಹೆಚ್ಚು ರಾಷ್ಟ್ರಗಳು ಮೋದಿಜೀ ಅವರಿಗೆ ತಮ್ಮ ದೇಶದ ಅತ್ಯುನ್ನತ ಗೌರವ ನೀಡಿವೆ ಎಂದು ಗಮನ ಸೆಳೆದರು. ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.

ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಕಾಲದಲ್ಲಿ ಸಂಬಳ ಕೊಡುತ್ತಿಲ್ಲ ಎಂದು ಟೀಕಿಸಿದರು. ರಾಜ್ಯದ ಆರ್ಥಿಕ ಪರಿಸ್ಥಿತಿ ಯಾವ ಕಡೆ ಸಾಗುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಫಲಿತಾಂಶದ ನಂತರ ರಾಜಕೀಯ ಕಿಡಿ: ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ–ಜೆಡಿಎಸ್ ವಾಗ್ದಾಳಿ

ಬೆಂಗಳೂರು : 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡ ಬಳಿಕ ರಾಜಕೀಯ ವಾಗ್ವಾದ ತೀವ್ರಗೊಂಡಿದೆ. ಈ ಬಾರಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಶೇ. 98.18 ಫಲಿತಾಂಶದೊಂದಿಗೆ ಉಡುಪಿ ದ್ವಿತೀಯ ಸ್ಥಾನ ಪಡೆದಿದೆ. ಆದರೆ ಶೇ. 85.06 ಫಲಿತಾಂಶದೊಂದಿಗೆ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಈ ಹಿನ್ನೆಲೆ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿ ತೀವ್ರ ಟೀಕೆ ಮಾಡಿದ್ದಾರೆ.

ಜೆಡಿಎಸ್, ಕಲಬುರಗಿಯ ಶೈಕ್ಷಣಿಕ ಹಿನ್ನಡೆಯಿಗೆ ಆಡಳಿತದ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿದ್ದು, ಮೂಲಸೌಕರ್ಯ, ಶಿಕ್ಷಕರ ನೇಮಕ ಮತ್ತು ಶಿಕ್ಷಣದ ಗುಣಮಟ್ಟ ಸುಧಾರಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದೆ. ಇದೇ ವೇಳೆ ಬಿಜೆಪಿ ಕೂಡ ಸಾಮಾಜಿಕ ಜಾಲತಾಣದ ಮೂಲಕ ವ್ಯಂಗ್ಯ ಪೋಸ್ಟ್ ಹಂಚಿಕೊಂಡು ಟೀಕೆ ಮಾಡಿದೆ.

ಇನ್ನು ಜೆಡಿಎಸ್ ನಾಯಕರು, “ಕಲಬುರಗಿಯನ್ನು ಶೈಕ್ಷಣಿಕವಾಗಿ ಹಿಂದುಳಿಯುವಂತೆ ಮಾಡಲಾಗಿದೆ” ಎಂದು ಆರೋಪಿಸಿದ್ದು, ಬಿಜೆಪಿ ಕೂಡ ಪ್ರಿಯಾಂಕ್ ಖರ್ಗೆ ಅವರ ಫೋಟೋ ಹಂಚಿಕೊಂಡು ಟೀಕಾತ್ಮಕ ಪ್ರತಿಕ್ರಿಯೆ ನೀಡಿದೆ.

ಈ ಫಲಿತಾಂಶದ ಹಿನ್ನೆಲೆಯಲ್ಲಿ ಶಿಕ್ಷಣ ಸಾಧನೆಗಿಂತ ರಾಜಕೀಯ ವಾಗ್ದಾಳಿ ಹೆಚ್ಚಾಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

error: Content is protected !!