ಹಾಸನ: ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಸುಮಾರು 8 ಎಕರೆ ಪ್ರದೇಶದ ಕಾಫಿ ತೋಟವನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ದಾಳಿಯಿಂದ ಕಾಫಿ, ಅಡಿಕೆ ಹಾಗೂ ಬಾಳೆ ಬೆಳೆಗಳು ನಾಶವಾಗಿದ್ದು, ತೋಟದ ಮಾಲೀಕರಿಗೆ ಸುಮಾರು 6 ಲಕ್ಷ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ.
ಜಗನ್ನಾಥ್ ಶೆಟ್ಟಿ, ಪ್ರಭಾಕರ್ ಶೆಟ್ಟಿ ಹಾಗೂ ಸ್ವಾಮಿ ಅವರಿಗೆ ಸೇರಿದ ತೋಟಕ್ಕೆ ಮರಿಗಳೊಂದಿಗೆ ಬಂದ 20ಕ್ಕೂ ಹೆಚ್ಚು ಕಾಡಾನೆಗಳು ನುಗ್ಗಿ ಬೆಳೆಗಳನ್ನು ಹಾನಿಗೊಳಿಸಿವೆ. ಕಾಡಾನೆಗಳ ಹಿಂಡು ತೋಟದಲ್ಲೇ ಬೀಡುಬಿಟ್ಟಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಮರಿಗಳೂ ಹಿಂಡಿನೊಂದಿಗೆ ಇರುವ ಕಾರಣ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದ್ದಾರೆ. ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸಿದರೆ ಅವುಗಳು ಆಕ್ರೋಶಗೊಂಡು ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಅಂತಹ ಕ್ರಮಕ್ಕೆ ಸಿಬ್ಬಂದಿ ಹಿಂದೇಟು ಹಾಕಿದ್ದಾರೆ.
ಕಾಡಾನೆಗಳ ಹಾವಳಿಯಿಂದ ತೋಟದ ಮಾಲೀಕರು ಹಾಗೂ ಸುತ್ತಮುತ್ತಲಿನ ರೈತರು ಆತಂಕದಲ್ಲಿದ್ದು, ಶೀಘ್ರದಲ್ಲೇ ಕಾಡಾನೆಗಳನ್ನು ಸುರಕ್ಷಿತವಾಗಿ ಕಾಡಿಗೆ ಮರಳಿಸುವಂತೆ ಹಾಗೂ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.



