ಕನ್ನಡ ಕಿರುತೆರೆಯ ಅಮೃತಧಾರೆ ಸೇರಿದಂತೆ ಹಲವು ಸೀರಿಯಲ್ಗಳಲ್ಲಿ ನಟಿಸಿದ್ದ ನಟಿ ಮೇಲೆ ಪತಿಯೇ ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್ನಲ್ಲಿ ನಡೆದಿದೆ.
ಕಿರುತೆರೆ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿಯಾಗಿದ್ದ ಶ್ರುತಿ ಮೇಲೆ ಪತಿಯೇ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದು ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಶ್ರುತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಆರೋಪಿ ಅಮರೇಶ್ ನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಜುಲೈ 4ರಂದು ನಟಿ ಶ್ರುತಿ ಮೇಲೆ ಹಲ್ಲೆ ನಡೆದಿದ್ದು ಇದೀಗ ಪ್ರಕರಣ ಬೆಳಕಿಗೆ ಬಂದಿದೆ. 20 ವರ್ಷದ ಹಿಂದೆ ಅಮರೇಶ್ ಎಂಬಾತನ ಪ್ರೀತಿಸಿ ಮದುವೆಯಾಗಿದ್ದ ನಟಿ ಶ್ರುತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ಹನುಮಂತ ನಗರದಲ್ಲಿ ಲೀಸ್ಗೆ ಮನೆ ಪಡೆದು ವಾಸವಿದ್ದರು. ಆದರೆ ಇತ್ತೀಚೆಗೆ ಶ್ರುತಿ ಹಾಗೂ ಅಮರೇಶ್ ಮಧ್ಯೆ ಹೊಂದಾಣಿಕೆ ಇರಲಿಲ್ಲ. ಶ್ರುತಿ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿದ್ದ ಅಮರೇಶ್ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದನಂತೆ. ಇದರಿಂದ ಬೇಸತ್ತಿದ್ದ ಶ್ರುತಿ ಕಳೆದ ಏಪ್ರಿಲ್ನಲ್ಲಿ ಗಂಡನಿಂದ ದೂರಾಗಿ ಅಣ್ಣನ ಮನೆಯಲ್ಲಿ ವಾಸವಾಗಿದ್ದರು. ಇದರ ಜೊತೆಗೆ ಇಬ್ಬರ ನಡುವೆ ಲೀಸ್ ಹಣಕ್ಕಾಗಿ ಸಹ ಜಗಳ ನಡೆದಿತ್ತಂತೆ.
ಈ ಬಗ್ಗೆ ನಟಿ ಶ್ರುತಿ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರಂತೆ. ಇದಾದ ಬಳಿಕ ಕಳೆದ ಗುರುವಾರ ರಾಜಿ ಸಂಧಾನ ಮಾಡಿ ಒಂದಾಗಿದ್ದಾರೆ. ರಾಜಿ ಸಂದಾನದ ಬಳಿಕ ಶ್ರುತಿ ಗಂಡನೊಂದಿಗೆ ಮನೆಗೆ ವಾಪಸ್ ಆಗಿದ್ದಾಳೆ. ಆದರೆ ಮನೆಗೆ ಬಂದ ಮರುದಿನವೇ ಮತ್ತೆ ಇಬ್ಬರ ನಡುವೆ ಜಗಳ ನಡೆದಿದೆ.ಈ ವೇಳೆ ಶ್ರುತಿಗೆ ಅಮರೇಶ್ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಶುಕ್ರವಾರ ಮಕ್ಕಳು ಕಾಲೇಜಿಗೆ ಹೋದ ನಂತರ ಹೆಂಡತಿ ಮೇಲೆ ಪೆಪ್ಪರ್ ಸ್ಪ್ರೇ ಹೊಡೆದು ಪತಿ ಹಲ್ಲೆ ಮಾಡಿದ್ದಾನೆ.