Home Blog Page 109

ಪೊಲೀಸ್ ಸಿಬ್ಬಂದಿಗೆ ಗುಡ್ ನ್ಯೂಸ್: ಕುಟುಂಬಸ್ಥರ ಜತೆ ಕಾಲ ಕಳೆಯಲು ರಜೆ ಭಾಗ್ಯ

0

ಬೆಂಗಳೂರು, ಜನವರಿ 29: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಅವರ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ದಿನದಂದು ಕಡ್ಡಾಯ ಸಾಂದರ್ಭಿಕ ರಜೆ ನೀಡುವಂತೆ ಪೊಲೀಸ್ ಮಹಾನಿರ್ದೇಶಕ (DG & IGP) ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ.

ಪೊಲೀಸ್ ಸಿಬ್ಬಂದಿಗೆ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಕಲ್ಪಿಸುವುದು, ಕೆಲಸದ ಒತ್ತಡ ಕಡಿಮೆ ಮಾಡುವುದು ಹಾಗೂ ವೈಯಕ್ತಿಕ ಜೀವನ ಮತ್ತು ಕರ್ತವ್ಯಗಳ ನಡುವಿನ ಸಮತೋಲನ ಕಾಪಾಡುವುದು ಈ ಆದೇಶದ ಮುಖ್ಯ ಉದ್ದೇಶವಾಗಿದೆ. ಇದರಿಂದ ಮನೋಬಲ ಹೆಚ್ಚಾಗಿ, ಕಾರ್ಯಕ್ಷಮತೆಯೂ ಉತ್ತಮವಾಗಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯ ಒಳಾಡಳಿತ ಇಲಾಖೆ, ಪೊಲೀಸ್ ಸಿಬ್ಬಂದಿಗೆ ಈ ರೀತಿಯ ರಜೆ ಸೌಲಭ್ಯ ಕಲ್ಪಿಸುವ ಕುರಿತು ಪೊಲೀಸ್ ಮಹಾನಿರ್ದೇಶಕರಿಗೆ ಅಧಿಕೃತ ಪತ್ರ ಬರೆದಿತ್ತು. ಈ ಪತ್ರವನ್ನು ಪರಿಶೀಲಿಸಿದ ನಂತರ ಡಿಜಿ ಡಾ. ಸಲೀಂ ಅವರು ಕಡ್ಡಾಯ ರಜೆ ನೀಡುವಂತೆ ಆದೇಶ ಹೊರಡಿಸಿದ್ದಾರೆ.

ಯಾರಿಗೆ ಈ ರಜೆ ಸಿಗಲಿದೆ?

ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರ ಸಲಹೆಯ ಮೇರೆಗೆ ಈ ನಿರ್ಧಾರಕ್ಕೆ ಚಾಲನೆ ಸಿಕ್ಕಿದೆ. ಮುಖ್ಯವಾಗಿ ಕೆಳ ಹಂತದ ಸಿಬ್ಬಂದಿಗಳಾದ ಪೊಲೀಸ್ ಕಾನ್ಸ್‌ಟೇಬಲ್ (PC) ಹೆಡ್ ಕಾನ್ಸ್‌ಟೇಬಲ್ (HC) ಸಹಾಯಕ ಪೊಲೀಸ್ ಉಪನಿರೀಕ್ಷಕ (ASI) ಈ ಶ್ರೇಣಿಯ ಸಿಬ್ಬಂದಿಗೆ ಈ ಸೌಲಭ್ಯ ಅನ್ವಯವಾಗಲಿದೆ.

ಆದೇಶದಲ್ಲಿ ಏನು ಉಲ್ಲೇಖಿಸಲಾಗಿದೆ?

ಪೊಲೀಸರು ಕಠಿಣ ಪರಿಸ್ಥಿತಿಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಅವರ ವೈಯಕ್ತಿಕ ಜೀವನಕ್ಕೂ ಮೌಲ್ಯ ನೀಡಬೇಕು ಎಂಬ ದೃಷ್ಟಿಯಿಂದ, ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದಂತಹ ಮಹತ್ವದ ದಿನಗಳಲ್ಲಿ ರಜೆ ನೀಡುವುದು ಅಗತ್ಯ ಎಂದು ಡಿಜಿ-ಐಜಿಪಿ ಹೇಳಿದ್ದಾರೆ.

ಇಂತಹ ಮಾನವೀಯ ಕ್ರಮದಿಂದ ಮನೋಬಲ ವೃದ್ಧಿ, ಒತ್ತಡ ಕಡಿಮೆ, ಕೆಲಸದ ತೃಪ್ತಿ ಹೆಚ್ಚಳ, ಶಿಸ್ತು ಮತ್ತು ಬದ್ಧತೆ ಬಲವರ್ಧನೆ, ಸಾಧ್ಯವಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಒಳಾಡಳಿತ ಇಲಾಖೆಯ ಪಾತ್ರ

ರಾಜ್ಯ ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿಯವರು ಪೊಲೀಸ್ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ, ಮೋಹನ್ ಕುಮಾರ್ ದಾನಪ್ಪ ಅವರು ಪೊಲೀಸ್ ಕಾನ್ಸ್‌ಟೇಬಲ್‌ನಿಂದ ಎಎಸ್‌ಐ ಹಂತದವರೆಗಿನ ಸಿಬ್ಬಂದಿಗೆ ಈ ರಜೆ ನೀಡಬೇಕು ಎಂದು ಮನವಿ ಮಾಡಿಕೊಂಡಿರುವುದನ್ನು ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು.

ದೆಹಲಿ ನಾಲ್ಕು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ: ಪೊಲೀಸರಿಂದ ತೀವ್ರ ಪರಿಶೀಲನೆ

0

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ನಾಲ್ಕು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿರುವ ಘಟನೆ ಆತಂಕ ಮೂಡಿಸಿದೆ. ಇದಲ್ಲದೆ, ಪಂಜಾಬ್–ಹರಿಯಾಣ ಸಚಿವಾಲಯಕ್ಕೂ ಇ-ಮೇಲ್ ಮೂಲಕ ಇದೇ ರೀತಿಯ ಬಾಂಬ್ ಬೆದರಿಕೆ ಬಂದಿರುವುದಾಗಿ ವರದಿಯಾಗಿದೆ.

ಲಾರೆಟೋ ಕಾನ್ವೆಂಟ್ ಶಾಲೆ (ದೆಹಲಿ ಕ್ಯಾಂಟ್)ಗೆ ಬೆಳಿಗ್ಗೆ 8:22ಕ್ಕೆ, ಡಾನ್ ಬಾಸ್ಕೊ ಶಾಲೆ (ಸಿ.ಆರ್. ಪಾರ್ಕ್)ಗೆ 9:18ಕ್ಕೆ, ಕಾರ್ಮೆಲ್ ಶಾಲೆ (ಆನಂದ್ ನಿಕೇತನ್)ಗೆ 9:22ಕ್ಕೆ ಹಾಗೂ ಕಾರ್ಮೆಲ್ ಶಾಲೆ (ಸೆಕ್ಟರ್ 23, ದ್ವಾರಕಾ)ಗೆ 9:25ಕ್ಕೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲೆಗಳಿಗೆ ದೂರವಾಣಿ ಮೂಲಕ ಬೆದರಿಕೆ ನೀಡಲಾಗಿದ್ದರೆ, ಪಂಜಾಬ್–ಹರಿಯಾಣ ಸಚಿವಾಲಯಕ್ಕೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನಿಸಲಾಗಿದೆ. ಮಾಹಿತಿ ದೊರಕುತ್ತಿದ್ದಂತೆ ಪೊಲೀಸ್ ತಂಡಗಳು ತಕ್ಷಣ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದವು.

ಪರಿಶೀಲನೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಆಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಬುಧವಾರ ಚಂಡೀಗಢ, ಗುರುಗ್ರಾಮ್ ಹಾಗೂ ಹರಿಯಾಣದ ಇತರೆ ಭಾಗಗಳಲ್ಲಿಯೂ ಹಲವು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದು, ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ತಪಾಸಣೆ ನಡೆಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬಳ್ಳಾರಿ ಗಲಭೆ ಪ್ರಕರಣದಲ್ಲಿ ಸರ್ಕಾರದ ಗೊಂದಲಕಾರಿ ನಡೆ: ವರ್ಗಾವಣೆ ಮಾಡಿದ ಡಿವೈಎಸ್‌ಪಿಯನ್ನು ಮತ್ತೆ ಕೂರಿಸಿದ ಸರ್ಕಾರ!

0

ಬಳ್ಳಾರಿ: ಬಳ್ಳಾರಿ ಬ್ಯಾನರ್ ಗಲಭೆ (Ballari Clash) ಪ್ರಕರಣದ ಬಳಿಕ ಪೊಲೀಸ್ ಇಲಾಖೆಯಲ್ಲಿ ಕೈಗೊಂಡಿದ್ದ ಕ್ರಮಗಳಲ್ಲಿ ರಾಜ್ಯ ಸರ್ಕಾರ ಇದೀಗ ದಿಢೀರನೇ ಯು-ಟರ್ನ್ ತೆಗೆದುಕೊಂಡಿದೆ. ವರ್ಗಾವಣೆ ಮಾಡಲಾಗಿದ್ದ ಡಿವೈಎಸ್‌ಪಿ ಚಂದ್ರಕಾಂತ ನಂದಾರೆಡ್ಡಿ ಅವರನ್ನು ಮತ್ತೆ ಮುಂದುವರಿಸಲು ಸರ್ಕಾರ ಆದೇಶ ಹೊರಡಿಸಿದೆ.

ಘಟನೆ ನಡೆದ ಮರುದಿನವೇ ಎಸ್ಪಿ ಪವನ್ ನೆಜ್ಜೂರ್ ಸಸ್ಪೆಂಡ್ ಆಗಿದ್ದರು. ಡಿಐಜಿ ವರ್ತಿಕಾ ಕಟಿಯಾರ್ ವರ್ಗಾವಣೆಯೂ ಆಗಿತ್ತು. ಇದಾದ ಬಳಿಕ ಡಿವೈಎಸ್‌ಪಿ ನಂದಾರೆಡ್ಡಿ ಅವರನ್ನು ಸ್ಥಳ ತೋರಿಸದೇ ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ 2023 ಬ್ಯಾಚ್ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ ಅವರನ್ನು ನೇಮಕ ಮಾಡಲಾಗಿತ್ತು.

ಆದರೆ ಅಧಿಕಾರ ಸ್ವೀಕಾರಕ್ಕೂ ಮುನ್ನವೇ ಸರ್ಕಾರ ನಂದಾರೆಡ್ಡಿ ಅವರನ್ನು ವಾಪಸ್ ಕರೆಸಿಕೊಂಡಿದೆ. ಇದರಿಂದ ಚಾರ್ಜ್ ತೆಗೆದುಕೊಳ್ಳಲು ಬಂದ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮಾಗೆ ಭಾರೀ ಮುಜುಗರ ಉಂಟಾಗಿದ್ದು, ಅವರನ್ನು ಕೇಂದ್ರ ಸ್ಥಾನಕ್ಕೆ ರಿಪೋರ್ಟ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಬ್ಯಾನರ್ ಗಲಭೆ ಪ್ರಕರಣದಲ್ಲಿ ಪೊಲೀಸ್ ವೈಫಲ್ಯವಾಗಿದೆ ಎಂದು ಎಡಿಜಿಪಿ ಆರ್. ಹಿತೇಂದ್ರ ಸರ್ಕಾರಕ್ಕೆ ಸ್ಪಷ್ಟ ವರದಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನಂದಾರೆಡ್ಡಿ ಅವರ ವರ್ಗಾವಣೆ ನಡೆದಿತ್ತು. ಈಗ ಅವರನ್ನು ಮತ್ತೆ ಮುಂದುವರಿಸಿರುವುದು ಸರ್ಕಾರದ ನಿರ್ಧಾರಗಳ ಮೇಲೆಯೇ ಹಲವು ಪ್ರಶ್ನೆಗಳು ಮತ್ತು ಅನುಮಾನಗಳಿಗೆ ಕಾರಣವಾಗುತ್ತಿದೆ.

Gadag Breaking: ಐತಿಹಾಸಿಕ ಲಕ್ಕುಂಡಿಯಲ್ಲಿ ಉತ್ಖನನ ವೇಳೆ 3 ಹೆಡೆಯ ನಾಗರ ಕಲ್ಲು ಪತ್ತೆ!

0

ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಮಹತ್ವದ ಕಲ್ಲು ಪತ್ತೆಯಾಗಿದೆ. 12ನೇ ದಿನದ ಉತ್ಖನನ ವೇಳೆ ಮೂರು ಹಡೆಯ ನಾಗರ ಕಲ್ಲು ಪತ್ತೆಯಾಗಿದ್ದು, ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ಕಾರ್ಯ ಮುಂದುವರಿದಿದ್ದು, ಈ ವೇಳೆ ಪ್ರಾಚೀನ ನಾಗರ ಕಲ್ಲುಗಳು ಪತ್ತೆಯಾಗಿವೆ. ಪ್ರತಿದಿನವೂ ಒಂದಿಲ್ಲೊಂದು ಪ್ರಾಚ್ಯಾವಶೇಷಗಳು ಗೋಚರವಾಗುತ್ತಿದ್ದು,

ಉತ್ಖನನ ಕಾರ್ಯ ದಿನದಿಂದ ದಿನಕ್ಕೆ ಹೆಚ್ಚಿನ ಕುತೂಹಲಕ್ಕೆ ಕಾರಣವಾಗುತ್ತಿದೆ. ಉತ್ಖನನ ಮುಂದುವರಿದಂತೆ ಇನ್ನಷ್ಟು ಮಹತ್ವದ ಐತಿಹಾಸಿಕ ವಸ್ತುಗಳು ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.

Gold Rate: ಚಿನ್ನದ ಬೆಲೆಯಲ್ಲಿ ಭಾರೀ ಹೆಚ್ಚಳ: ಒಂದೇ ದಿನಕ್ಕೆ 11,770 ರೂಪಾಯಿ ಏರಿಕೆ ಕಂಡ ಬಂಗಾರ..!

0

ಬೆಂಗಳೂರು: ಚಿನ್ನದ ದರ ಆಕಾಶಕ್ಕೇರುತ್ತಿದ್ದು, ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಗುರುವಾರದಂದು 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 17,885 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 1,78,850 ರೂ. ತಲುಪಿದ್ದು, ಏಕಕಾಲದಲ್ಲಿ 10 ಗ್ರಾಂಗೆ 11,770 ರೂ. ಏರಿಕೆಯಾಗಿದೆ.

ನಿನ್ನೆ 10 ಗ್ರಾಂ ಚಿನ್ನದ ಬೆಲೆ 5,000 ರೂ. ಹೆಚ್ಚಾಗಿದ್ದುದನ್ನು ಗಮನಿಸಿದರೆ, ಇಂದು ಹೆಚ್ಚಿನ ಏರಿಕೆ ದಾಖಲಾಗಿದೆ. 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 16,395 ರೂ. ಇದ್ದರೆ, 10 ಗ್ರಾಂ ಬೆಲೆ 1,63,950 ರೂ. ತಲುಪಿದೆ.

ಬೆಳ್ಳಿ ಮಾರುಕಟ್ಟೆ ಕೂಡ ಉದ್ದೀಪನಗೊಂಡಿದೆ. ಇಂದು ಬೆಳ್ಳಿ ಬೆಲೆ 30 ರೂ. ಹೆಚ್ಚಳದೊಂದಿಗೆ 1 ಗ್ರಾಂಗೆ 410 ರೂ., 1 ಕೆಜಿ ಬೆಲೆ 4,10,000 ರೂ. ಆಗಿದೆ.

ಚಿನ್ನಬೆಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿ, ಚಿಲ್ಲರೆ ಬೇಡಿಕೆಯು ಹೆಚ್ಚಳ, ಡಾಲರ್ ದುರ್ಬಲತೆ ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು ನೆರೆದಿವೆ. ನೋಟಿಗೆ ಸೇರಿರುವ ಜಿಎಸ್ಟಿ ಹೊರತುಪಡಿಸಿ ಬೆಲೆ ಮಳಿಗೆಗಳಲ್ಲಿ ಸ್ವಲ್ಪ ವ್ಯತ್ಯಾಸ ಕಾಣಬಹುದು.

IND vs NZ: ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ!

0

ವಿಶಾಖಪಟ್ಟಣ: ಭಾರತ ವಿರುದ್ಧ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ನ್ಯೂಝಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಪಂದ್ಯದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಬಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ, ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಬ್ಯಾಟರ್‌ಗಳನ್ನು ಔಟ್ ಮಾಡಿದ ಮೊದಲ ಬೌಲರ್ ಎಂಬ ವಿಶ್ವ ದಾಖಲೆಯನ್ನು ಮ್ಯಾಟ್ ಹೆನ್ರಿ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು, ಜನವರಿ 25ರಂದು ನಡೆದ ಮೂರನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಸಹ ಮೊದಲ ಎಸೆತದಲ್ಲೇ ಔಟ್ ಮಾಡಿದ್ದರು.

ಈ ಮೂಲಕ ಒಂದೇ ಸರಣಿಯಲ್ಲಿ ಇಬ್ಬರು ಆರಂಭಿಕ ಬ್ಯಾಟರ್‌ಗಳನ್ನು ಮೊದಲ ಎಸೆತದಲ್ಲೇ ಔಟ್ ಮಾಡಿದ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರದ ಮೊದಲ ಬೌಲರ್ ಎಂಬ ಗೌರವಕ್ಕೂ ಮ್ಯಾಟ್ ಹೆನ್ರಿ ಪಾತ್ರರಾದರು.

ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ನ್ಯೂಝಿಲೆಂಡ್ ತಂಡ 20 ಓವರ್‌ಗಳಲ್ಲಿ 215 ರನ್‌ಗಳನ್ನು ಕಲೆಹಾಕಿತು. ಈ ದೊಡ್ಡ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 165 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮ ನಾಲ್ಕನೇ ಟಿ20 ಪಂದ್ಯದಲ್ಲಿ ಕಿವೀಸ್ ಪಡೆ 50 ರನ್‌ಗಳ ಭರ್ಜರಿ ಜಯ ದಾಖಲಿಸಿತು.

ಸುಳ್ವಾಡಿ ವಿಷಪ್ರಸಾದ ಆರೋಪಿ ಇಮ್ಮಡಿ ಮಹದೇವಸ್ವಾಮಿ‌ಗೆ ಮಹದೇಶ್ವರ ಬೆಟ್ಟ ಪ್ರವೇಶ ನಿಷೇಧ

0

ಚಾಮರಾಜನಗರ: ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣದ ಆರೋಪಿ ಇಮ್ಮಡಿ ಮಹದೇವಸ್ವಾಮಿ ಅವರಿಗೆ ಮಲೆ ಮಹದೇಶ್ವರ ಬೆಟ್ಟ ಪ್ರವೇಶವನ್ನು ನಿಷೇಧಿಸಿ ಆಡಳಿತ ಕಠಿಣ ಕ್ರಮ ಕೈಗೊಂಡಿದೆ. ಹನೂರು ತಹಸೀಲ್ದಾರ್ ಚೈತ್ರಾ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಜಾಮೀನಿನ ಮೇಲೆ ಹೊರಬಂದಿರುವ ಇಮ್ಮಡಿ ಮಹದೇವಸ್ವಾಮಿ, ಸಾಲೂರು ಮಠದಲ್ಲಿ ನಡೆಯಲಿರುವ ಪಟ್ಟದ ಮಹದೇವಸ್ವಾಮೀಜಿಯ 32ನೇ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂದಾಗಿದ್ದರು. ಆದರೆ, ಆರೋಪಿ ಭಾಗವಹಿಸಿದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಸಂತ್ರಸ್ತರು ಹಾಗೂ ದಲಿತ ಸಂಘಟನೆಗಳು ಎಚ್ಚರಿಕೆ ನೀಡಿದ್ದವು.

ಸಾಲೂರು ಮಠದ ಆವರಣ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಪೊನ್ನಾಚಿ ಮಹದೇವಸ್ವಾಮಿ ಮನವಿ ಸಲ್ಲಿಸಿದ್ದೂ, ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿತು. ಇಮ್ಮಡಿ ಮಹದೇವಸ್ವಾಮಿ ಸಾಲೂರು ಮಠದ ಮಹದೇಶ್ವರಸ್ವಾಮಿ ಎಜುಕೇಶನ್ ಸೊಸೈಟಿಯ ಸದಸ್ಯರಾಗಿದ್ದರೂ, ಅವರ ಹಾಜರಾತಿಯಿಂದ ಶಾಂತಿ ಭಂಗ ಮತ್ತು ಗಲಭೆ ಉಂಟಾಗುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವೇಶ ನಿಷೇಧ ಹೇರಿದೆ.

ಇಂದಿನಿಂದ ಮುಂದಿನ ಆದೇಶದವರೆಗೆ ಇಮ್ಮಡಿ ಮಹದೇವಸ್ವಾಮಿ ಅವರಿಗೆ ಮಲೆ ಮಹದೇಶ್ವರ ಬೆಟ್ಟ ಪ್ರವೇಶ ಸಂಪೂರ್ಣ ನಿರ್ಬಂಧಿಸಲಾಗಿದೆ.

ಲಾರಿ ಹರಿದು ಪಾದಚಾರಿ ಸಾವು: 32 ವರ್ಷಗಳ ಬಳಿಕ ಚಾಲಕನ ಬಂಧನ

0

ದಾವಣಗೆರೆ: ಲಾರಿ ಹರಿದು ಪಾದಚಾರಿ ಸಾವನ್ನಪ್ಪಿದ ಪ್ರಕರಣದಲ್ಲಿ, ಅಪಘಾತಕ್ಕೆ ಕಾರಣನಾಗಿದ್ದ ಚಾಲಕನನ್ನು 32 ವರ್ಷಗಳ ಬಳಿಕ ಜಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಗಂಗಾಧರಪ್ಪ (67) ಎಂದು ಗುರುತಿಸಲಾಗಿದೆ. ಈತ 1994ರಲ್ಲಿ ದಾವಣಗೆರೆ ಜಿಲ್ಲೆಯ ಕಲ್ಲೇದೇವಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ–13ರಲ್ಲಿ ನಡೆದ ಅಪಘಾತದಲ್ಲಿ ಪಾದಚಾರಿಯೊಬ್ಬರ ಸಾವಿಗೆ ಕಾರಣನಾಗಿದ್ದಾನೆ.

ಅಪಘಾತದ ಬಳಿಕ ಆರೋಪಿಯು ಇಷ್ಟು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಪ್ರಕರಣವನ್ನು ಪುನರ್ ಪರಿಶೀಲಿಸಿದ ಜಗಳೂರು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ಸ್ಪೆಕ್ಟರ್ ಸಿದ್ದರಾಮಯ್ಯ ಹಾಗೂ ಎಸ್ಐ ವೆಂಕಟೇಶ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ಜಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಶಿವಮೊಗ್ಗ: ಮಂಗನ ಕಾಯಿಲೆಗೆ ಬಲಿಯಾದ 29 ವರ್ಷದ ಯುವಕ!

0

ಶಿವಮೊಗ್ಗ: ಮಂಗನ ಕಾಯಿಲೆ ಸೋಂಕಿನಿಂದ ಬಳಲುತ್ತಿದ್ದ ತೀರ್ಥಹಳ್ಳಿ ತಾಲೂಕಿನ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಮೃತನನ್ನು ಸಸಿ ತೋಟದ ನಿವಾಸಿ ಕಿಶೋರ್ (29) ಎಂದು ಗುರುತಿಸಲಾಗಿದೆ. ಜನವರಿ 20ರಿಂದ ಕಿಶೋರ್ ತೀವ್ರ ಜ್ವರದಿಂದ ಬಳಲುತ್ತಿದ್ದು, ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದಿನದಿಂದ ದಿನಕ್ಕೆ ಜ್ವರದ ತೀವ್ರತೆ ಹೆಚ್ಚಾಗಿತ್ತು.

ರೋಗಲಕ್ಷಣಗಳು ಗಂಭೀರಗೊಂಡ ಹಿನ್ನೆಲೆಯಲ್ಲಿ, ಜನವರಿ 25ರಂದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತಜ್ಞ ವೈದ್ಯರ ತಂಡ ಸತತ ಚಿಕಿತ್ಸೆ ನೀಡಿದರೂ, ಸೋಂಕಿನ ತೀವ್ರತೆಯಿಂದಾಗಿ ಕಿಶೋರ್ ಪ್ರಾಣ ಕಳೆದುಕೊಂಡಿದ್ದಾರೆ.

ಅಧಿಕಾರಿ ಮೇಲೆ ಸಿಎಂ ಶಿಸ್ತು ಕ್ರಮದ ಎಚ್ಚರಿಕೆ: ರಾಜೀನಾಮೆಗೆ ಮುಂದಾಗಿದ್ದ ಸಚಿವ ಕೆ.ಜೆ. ಜಾರ್ಜ್?

0

ಬೆಂಗಳೂರು: ಇಂಧನ ಸಚಿವ ಕೆಜೆ ಜಾರ್ಜ್ ರಾಜೀನಾಮೆಗೆ ಮುಂದಾಗಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಸುಮಾರು ಒಂದು ವಾರದ ಹಿಂದೆ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಕೆಜೆ ಜಾರ್ಜ್, ಹಿರಿಯ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಪಂಕಜ್ ಕುಮಾರ್ ಪಾಂಡೆ ವಿರುದ್ಧ ಕ್ರಮ ಕೈಗೊಳ್ಳುವುದಾದರೆ, ನಾನೇ ರಾಜೀನಾಮೆ ನೀಡುತ್ತೇನೆ ಎಂದು ಜಾರ್ಜ್ ಅವರು ಸಿಎಂ ಮುಂದೆ ಹೇಳಿದ್ದರು ಎಂದು ತಿಳಿದುಬಂದಿದೆ. ಜಾರ್ಜ್ ರಾಜೀನಾಮೆ ಮಾತು ಆಡುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಧಾನ ಪಡಿಸಿ ಕಳುಹಿಸಿದ್ದರು ಎನ್ನಲಾಗಿದೆ.

ಕೆಪಿಟಿಸಿಎಲ್ ಎಂಡಿ ಜೊತೆಗೆ ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಇ-ಆಡಳಿತ) ಹುದ್ದೆಯನ್ನೂ ಹೊಂದಿರುವ ಪಂಕಜ್ ಕುಮಾರ್ ಪಾಂಡೆ ವಿರುದ್ಧ ಹಲವು ದೂರುಗಳು ಸರ್ಕಾರಕ್ಕೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ಪಡೆಯಲು ಮುಖ್ಯಮಂತ್ರಿ ಕಚೇರಿಯಿಂದ ಅವರನ್ನು ಭೇಟಿಗೆ ಆಹ್ವಾನಿಸಲಾಗಿತ್ತು.

ಆದರೆ ಸಿಎಂ ಕಚೇರಿಯಿಂದ ಅಧಿಕೃತ ಮಾಹಿತಿ ತಲುಪಿದ್ದರೂ ಸಹ ಪಂಕಜ್ ಕುಮಾರ್ ಪಾಂಡೆ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡದೇ ನಿರ್ಲಕ್ಷ್ಯ ವಹಿಸಿದ್ದರು. ಹಿರಿಯ ಅಧಿಕಾರಿಯ ಈ ನಡೆಗೆ ಮುಖ್ಯಮಂತ್ರಿ ಕಚೇರಿ ಗಂಭೀರವಾಗಿ ಪ್ರತಿಕ್ರಿಯಿಸಿ,

ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಪಾಂಡೆ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ‘ನೋಟಿಸ್ ನೀಡಿದ ದಿನವೇ ಲಿಖಿತ ವಿವರಣೆ ನೀಡಬೇಕು’ ಎಂಬ ಕಟ್ಟುನಿಟ್ಟಿನ ಆದೇಶವನ್ನೂ ನೀಡಲಾಗಿತ್ತು. ಸರ್ಕಾರದ ಈ ಕ್ರಮಕ್ಕೆ ಇಂಧನ ಸಚಿವ ಕೆಜೆ ಜಾರ್ಜ್ ಅಸಮಾಧಾನಗೊಂಡಿದ್ದರು ಎನ್ನಲಾಗುತ್ತಿದೆ.

error: Content is protected !!