ಬಂಜಾರರು ದೀಪಾವಳಿಯನ್ನು ವಿಶೇಷ ಮತ್ತು ಸಂಪ್ರದಾಯಬದ್ಧ ರೀತಿಯಲ್ಲಿ ಆಚರಿಸುತ್ತಾರೆ. ಈ ಹಬ್ಬದ ಆಚರಣೆಗಳಲ್ಲಿ ಯುವತಿಯರು ಮತ್ತು ಮಹಿಳೆಯರ ಪಾತ್ರ ದೊಡ್ಡದು. ಅವರು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ, ಹಾಡುತ್ತಾ, ನೃತ್ಯ ಮಾಡುತ್ತಾ ಹಬ್ಬವನ್ನು ಸಂಭ್ರಮಿಸುತ್ತಾರೆ. ಪಟಾಕಿ ಬದಲಿಗೆ ಪರಿಸರ ಸ್ನೇಹಿ ಆಚರಣೆಗಳಾದ ಎತ್ತುಗಳಿಗೆ ಅಲಂಕಾರ ಮಾಡುವುದು, ಕಣಗಲ ಹೂವು, ಶೇಂಗಾ, ಜೋಳ ಮುಂತಾದವುಗಳನ್ನು ಸಂಗ್ರಹಿಸುವುದು, ಸಪ್ತ ಮಾತೃಕೆಯರ ಪೂಜೆ, ಮತ್ತು ಪೂರ್ವಿಕರಿಗೆ ಗೌರವ ಸಲ್ಲಿಸುವುದು ಇವರ ಆಚರಣೆಗಳ ವಿಶೇಷತೆ.
ಅಭ್ಯಂಜನ, ಹೋಳಿಗೆ ಊಟ, ಪಟಾಕಿಗಳ ಚಿತ್ತಾರ… ದೀಪಾವಳಿ ಎಂದೊಡನೆ ಮನಸ್ಸಿನಲ್ಲಿ ಸುಳಿಯುವ ಚಿತ್ರಗಳಿವು. ಆದರೆ, ಇಂಥ ಆಚರಣೆಗಳಿಂದ ಹೊರತಾಗಿರುವ, ಬಂಜಾರರು ಆಚರಿಸುವ ‘ದವಾಳಿ’ ಹಬ್ಬವು ಪ್ರಕೃತಿಯ ಆರಾಧನೆ, ಹಿರಿಯರ ಸ್ಮರಣೆ, ಪರಸ್ಪರ ಹಂಚಿ ತಿನ್ನುವ ಗುಣ, ಸಕಲರಿಗೂ ಲೇಸು ಬಯಸುವ ಕಾರಣದಿಂದಾಗಿ ವಿಭಿನ್ನವಾಗಿ ಕಾಣುತ್ತದೆ.
ರಂಗು ರಂಗಿನ ಉಡುಪು ಮತ್ತು ವಿಶಿಷ್ಠ ಭಾಷೆಯ ಕಾರಣಕ್ಕಾಗಿ ಥಟ್ಟನೆ ಗಮನ ಸೆಳೆಯುವ ಬಂಜಾರರು (ಲಂಬಾಣಿ) ಮೂಲತಃ ಬುಡಕಟ್ಟು ಸಮುದಾಯದವರು. ಸಿಂಧು ಕಣಿವೆಯ ನಾಗರಿಕತೆಯೊಂದಿಗೆ ನಂಟು ಹೊಂದಿರುವಅಂತ ಈ ಸಮುದಾಯ ವಿಶ್ವದ 114 ದೇಶಗಳಲ್ಲಿ ಲಂಬಾಣಿ, ಲಮಾಣಿ, ಲಬಾನ್, ಸುಗಾಲಿ ಹೀಗೆ ನಾನಾ ಹೆಸರುಗಳಲ್ಲಿ ಹರಿದು ಹಂಚಿ ಹೋಗಿದೆ. ಆಧುನಿಕ ಕಾಲಘಟ್ಟದಲ್ಲೂ ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಜೋಪಾನವಾಗಿರಿಸಿಕೊಂಡಿರುವ ಈ ಸಮುದಾಯದವರ ವಿಭಿನ್ನ ಆಚರಣೆಗಳು ಇಂದಿಗೂ ಗಮನ ಸೆಳೆಯುತ್ತವೆ. ಅಂಥ ಆಚರಣೆಗಳಲ್ಲಿ ವಿಶಿಷ್ಟವಾದದ್ದು ಬಂಜಾರರ ‘ದವಾಳಿ’ ಅರ್ಥಾತ್ ದೀಪಾವಳಿ.
ಪ್ರಕೃತಿ ಜತೆಗಿನ ಪ್ರೀತಿ, ಹಿರಿಯರ ಸ್ಮರಣೆ, ಪರಸ್ಪರ ಹಂಚಿ ತಿನ್ನುವ ಗುಣ, ಜಾನುವಾರುಗಳೆಡೆಗಿನ ಪ್ರೇಮ ಹಾಗೂ ಸಕಲರಿಗೂ ಲೇಸು ಬಯಸುವ ಗುಣ ಇವರು ಆಚರಿಸುವ ದವಾಳಿಯ ವಿಶೇಷ. ಕಾಳಿ ಆಮಾಸ್, ನಸಾಬ್, ಧಬುಕಾರ್, ಮೇರಾ, ಫೂಲ್ ತೋಡನ್, ಗೊದಣೋ, ಸಳೋಯಿ ಸೇವನೆ ಲಂಬಾಣಿಗರ ದವಾಳಿಯ ವಿಶಿಷ್ಟ ಆಚರಣೆಗಳು. ರಾಜ್ಯದ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಸೇರಿದಂತೆ ಇತರ ಭಾಗಗಳಲ್ಲಿ ದವಾಳಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಕಾಳಿ ಅಮಾಸ್ ದಿನ ಬಂಜಾರರು ಸಾಮೂಹಿಕವಾಗಿ ಬೇಟೆಯಾಡುವುದು ವಾಡಿಕೆ. ಆದರೆ, ಈಗ ಬೇಟೆ ನಿಷಿದ್ಧವಿರುವುದರಿಂದ ಕುರಿ, ಮೇಕೆ ಕೊಯ್ದು ಅದನ್ನೇ ತಾಂಡಾದ ಪ್ರತಿ ಮನೆಗೂ ಸಮಪಾಲು ಹಾಕುತ್ತಾರೆ. ಕುರಿಯ ಪ್ರತಿ ಅಂಗದ ತುಂಡೂ ಪ್ರತಿ ಮನೆಗೂ ತಲುಪುವಂತೆ ಪಾಲು ಹಾಕುತ್ತಾರೆ. ಈ ಮೂಲಕ ಎಲ್ಲರೂ ಸಮಾನರು ಎನ್ನುವ ಸಮಾನತೆಯ ಗುಣವನ್ನು ಪ್ರತಿಪಾದಿಸುತ್ತಾರೆ. ಕುರಿಯ ಕರಳು ಇತ್ಯಾದಿ ಹಾಗೂ ರಕ್ತದಿಂದ ಸಳೋಯಿ ಎನ್ನುವ ವಿಶಿಷ್ಟ ಮಾಂಸದಡುಗೆ ಮತ್ತು ಕಾನಾಬಾಜ್ (ಸುಟ್ಟ ಕುರಿಯ ತಲೆಯ ಕಿವಿಯ ಸಮೇತ ತೆಗೆದ ಚರ್ಮ) ಖಾದ್ಯವನ್ನು ಪರಸ್ಪರ ಹಂಚಿಕೊಂಡು ತಿನ್ನುತ್ತಾರೆ.
ದುಡಿಮೆಗೆಂದು ದೂರದ ಊರುಗಳಿಗೆ ವಲಸೆ ಹೋಗಿರುವವರು ತಪ್ಪದೇ ದವಾಳಿಯಂದು ತಾಂಡಾಕ್ಕೆ ಬರುತ್ತಾರೆ. ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗಿಯಾಗಿ, ಹಿರಿಯರನ್ನು ನೆನೆದು, ಒಟ್ಟಾಗಿ ಊಟ ಮಾಡಿ ಕಷ್ಟ–ಸುಖ ಹಂಚಿಕೊಳ್ಳುತ್ತಾರೆ.
ಲಂಬಾಣಿಗರ ದವಾಳಿಯ ಕೇಂದ್ರ ಬಿಂದು ತಾಂಡಾದ ಯುವತಿಯರ ‘ಮೇರಾ’ (ಶುಭ ಕೋರುವುದು) ಆಚರಣೆ. ಮದುವೆಯಾಗದ ಯುವತಿಯರಷ್ಟೇ ಇದನ್ನು ಆಚರಿಸುತ್ತಾರೆ. ‘ಮೇರಾ’ಗಾಗಿ ಹಬ್ಬಕ್ಕೂ ತಿಂಗಳ ಮುನ್ನವೇ ತಾಂಡಾದ ಸೇವಾಲಾಲ್ ಮಟ್ಟು (ದೇಗುಲ) ಎದುರು ಯುವತಿಯರ ಹಾಡು, ಕುಣಿತದ ತಯಾರಿ ನಡೆದಿರುತ್ತದೆ. ಇದಕ್ಕೆ ತಾಂಡಾದ ಹಿರಿಯ ಮಹಿಳೆಯರ ಮಾರ್ಗದರ್ಶನವಿರುತ್ತದೆ. ಮುಖ್ಯವಾಗಿ ಇಂಥ ಹಾಡು, ನೃತ್ಯಗಳ ಸಂದರ್ಭಗಳಲ್ಲಿ ಯುವತಿಯರಲ್ಲಿ ತಮ್ಮ ಮನದನ್ನೆಯನ್ನು ಯುವಕರು ಆರಿಸಿಕೊಳ್ಳುವುದು ವಿಶೇಷ. ಇಂಥ ಯುವತಿ ಇಷ್ಟವಾಗಿದ್ದಾಳೆ ಎಂದು ಯುವಕ ಮನೆಯ ಹಿರಿಯರಿಗೆ ಹೇಳಿದರೆ, ಪರಸ್ಪರರ ಮನೆಗಳಲ್ಲಿ ಮಾತುಕತೆ ನಡೆಯುತ್ತದೆ. ಹೀಗೆ ವಿವಾಹಕ್ಕೆ ‘ಮೇರಾ’ ಮುನ್ನುಡಿ ಆಗುತ್ತದೆ.
ಕುಟುಂಬದ ಹಿರಿಯರನ್ನು ಸ್ಮರಿಸುವ ಆಚರಣೆಗೆ ‘ಧಬುಕಾರ್’ ಅನ್ನಲಾಗುತ್ತದೆ. ಹಿರಿಯರಿಂದ ಪ್ರಾರಂಭವಾಗಿ ಇತ್ತೀಚೆಗೆ ಮೃತರಾದವರವರೆಗೆ ಎಲ್ಲರನ್ನೂ, ಕೆಲವೆಡೆ ತಮ್ಮ ಸಾಕುಪ್ರಾಣಿಗಳ ಹೆಸರುಗಳನ್ನೂ ಸ್ಮರಿಸುತ್ತಾ ಸಿಹಿ ಅಡುಗೆ ಎಡೆ ಹಾಕುತ್ತಾರೆ. ಮನೆಯ ಒಲೆಯನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ ಅಲಂಕರಿಸುತ್ತಾರೆ. ಅಕ್ಕಿ ಹಿಟ್ಟು ಬೆಲ್ಲ ಹಾಕಿದ ನೀರನ್ನು ಕಲಸಿ, ಬೇಯಿಸಿದ ಮುದ್ದೆ ಹಿಟ್ಟಿನಂಥ ಹದವಾದ ಸಿಹಿ ಖಾದ್ಯದ ಜತೆಗೆ ತುಪ್ಪ ಸೇರಿಸಿ ಈ ಒಲೆಯ ಕೆಂಡದಲ್ಲಿಯೇ ಹಿರಿಯರಿಗಾಗಿ ಎಡೆ ಹಾಕುತ್ತಾರೆ.
ಕಾಳಿ ಅಮಾಸ್ನ ಮರುದಿನ ಬೆಳಿಗ್ಗೆ ಯುವತಿಯರು ತಮ್ಮ ಸಾಂಪ್ರದಾಯಿಕ ಲಂಬಾಣಿ ಉಡುಪು ತೊಟ್ಟು ಬುಟ್ಟಿ ಹಿಡಿದುಕೊಂಡು ಕಾಡು ಇಲ್ಲವೇ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಸಿಗುವ ಕೆಲವು ಹೂಗಳನ್ನು ತರಲು ಹೋಗುತ್ತಾರೆ. ಬರುವಾಗ ರಾಗಿ, ಜೋಳದ ತೆನೆ ಅಥವಾ ಬೆಳೆದ ಬೆಳೆಗಳನ್ನು ತರುವರು. ದಾರಿಯುದ್ದಕ್ಕೂ ಹಾಡು–ಕುಣಿತದ ಸಾಥ್ ಇರುತ್ತದೆ.
ಕಾಡಿನಲ್ಲಿರುವ ವಿಶೇಷ ಹೂಗಳನ್ನು ಸಂಗ್ರಹಿಸುತ್ತಾರೆ. ಅದರಲ್ಲೂ ಹಳದಿ ಬಣ್ಣದ ಹೊನ್ನಂಬರಿ (ಆವರಿಕೆ) ಹೂಗಳನ್ನೂ ತರುತ್ತಾರೆ. ‘ಮೇರಾ’ದಲ್ಲಿ ಸಂಗ್ರಹವಾಗಿದ್ದ ಹಣದಲ್ಲಿ ಖರೀದಿಸಿದ ತಿಂಡಿ–ತಿನಿಸನ್ನು ಕಾಡಿನಲ್ಲಿಯೇ ಒಂದೆಡೆ ಕುಳಿತು ಯುವತಿಯರು ಹಂಚಿಕೊಂಡು ತಿಂದು ತಾಂಡಾಕ್ಕೆ ಮರಳುವರು. ಬಳಿಕ ತಾಂಡಾದ ಪ್ರತಿ ಮನೆಗೆ ಭೇಟಿ ನೀಡಿ ಅಲ್ಲಿ ಐದೈದು ಗೊದಣೋ (ಸಗಣಿಯ ಉಂಡೆ) ಮಾಡುತ್ತಾರೆ. ಇವುಗಳನ್ನು ಹೂಗಳಿಂದ ಅಲಂಕರಿಸಿ ಒಳಿತಾಗಲಿ ಎಂದು ಕೋರಿ ಐದು ಕಡೆ ಅಂದರೆ ದನದ ಕೊಟ್ಟಿಗೆ, ಅಡುಗೆ ಮನೆ, ದೇವರ ಹತ್ತಿರ, ಮುಖ್ಯ ಬಾಗಿಲು, ಮನೆ ಮಾಳಿಗೆ ಮೇಲೆ ಇಡುತ್ತಾರೆ.
– ಸುರೇಶ ಎಸ್. ಲಮಾಣಿ
ಲೇಖಕರು, ಹವ್ಯಾಸಿ ಛಾಯಾಗ್ರಾಹಕರು.