Home Blog Page 2

ಭಾರತ ಪ್ರಥಮ ಸ್ವಾತಂತ್ರ‍್ಯ ಹೋರಾಟದ ಧೀರ ನಾಯಕಿ – ಕಿತ್ತೂರು ರಾಣಿ ಚೆನ್ನಮ್ಮ

ಮಹಿಳೆ ದುರ್ಬಲಳಲ್ಲ, ಅವಳಲ್ಲಿ ದೇಶವನ್ನು ಕಾಪಾಡುವ ಶಕ್ತಿಯಿದೆ.’ ಈ ಮಾತು ಕಿತ್ತೂರಿನ ಧೀರ ನಾಯಕಿ ರಾಣಿ ಚೆನ್ನಮ್ಮರ ಬದುಕಿನ ಸಾರ. ಭಾರತದ ಸ್ವಾತಂತ್ರ್ಯ ಇತಿಹಾಸದ ಮೊದಲ ಪುಟದಲ್ಲೇ ಅಕ್ಷರಶಃ ಅಮರಳಾದ ಹೆಸರಿದು. ಬ್ರಿಟಿಷರ ಕ್ರೂರ ಆಳ್ವಿಕೆಗೆ ಮೊದಲ ಬಾರಿಗೆ ಸವಾಲು ಹಾಕಿದ ಧೈರ್ಯವಂತೆ ರಾಣಿ ಚೆನ್ನಮ್ಮರು, ಮಹಿಳಾ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯ ಜೀವಂತ ಪ್ರತೀಕವಾಗಿ ಇಂದಿಗೂ ಜನಮನಗಳಲ್ಲಿ ಅಳಿಯದ ಸ್ಥಾನ ಪಡೆದಿದ್ದಾರೆ.

1778ರಲ್ಲಿ ಬೆಳಗಾವಿ ಜಿಲ್ಲೆಯ ಕಾಕತ ಗ್ರಾಮದಲ್ಲಿ ಜನಿಸಿದ ಚೆನ್ನಮ್ಮರು ಬಾಲ್ಯದಲ್ಲೇ ಸಾಹಸ ಪ್ರಿಯೆ. ಕುದುರೆ ಸವಾರಿ, ಕತ್ತಿಯಾಟ, ಬಿಲ್ಲುಬಾಣ ಇವು ಅವರ ದಿನನಿತ್ಯದ ಆಟಗಳು. ದೃಢ ಮನೋಬಲ ಮತ್ತು ನ್ಯಾಯಬುದ್ಧಿಯಿಂದ ಅವರು ತೊಡಗಿದ ಪ್ರತಿ ಕಾರ್ಯದಲ್ಲೂ ಶೌರ್ಯ ಪ್ರದರ್ಶಿಸಿದರು. ಆ ಸಮಯದಲ್ಲಿ ಮಹಿಳೆಯರು ಅಂಗಳದ ಒಳಗೆ ಸೀಮಿತವಾಗಿದ್ದಾಗ, ಚೆನ್ನಮ್ಮರು ಹೊರಾಂಗಣದಲ್ಲಿ ಧೈರ್ಯ ಪ್ರದರ್ಶನದ ಮಾದರಿಯಾದರು.

ಚೆನ್ನಮ್ಮರು ಕಿತ್ತೂರಿನ ರಾಜ ಮಲ್ಲಸರ್ಜರ ಪತ್ನಿಯಾಗಿದ್ದರು. ಪತಿಯ ನಿಧನದ ಬಳಿಕ ಅವರು ರಾಜ್ಯದ ಹೊಣೆ ಹೊತ್ತು ಆಡಳಿತದಲ್ಲಿ ದೃಢತೆಯಿಂದ ನಡೆದುಕೊಂಡರು. ಸಂತಾನವಿಲ್ಲದ ಕಾರಣ ಶಿವಲಿಂಗಪ್ಪನನ್ನು ದತ್ತು ಪಡೆದರು. ಆದರೆ ಬ್ರಿಟಿಷರು ತಮ್ಮ “**Doctrine of Lapse**” ಎಂಬ ಅಕ್ರಮ ನೀತಿಯಡಿ ದತ್ತಕದ ಮೂಲಕ ರಾಜ್ಯದ ಹಕ್ಕು ಸಿಗುವುದಿಲ್ಲ ಎಂದು ಘೋಷಿಸಿ, ಕಿತ್ತೂರನ್ನು ವಶಪಡಿಸಿಕೊಳ್ಳಲು ಮುಂದಾದರು.

ರಾಣಿಗೆ ಇದು ಕೇವಲ ಆಡಳಿತದ ವಿಷಯವಲ್ಲ, ಗೌರವ ಮತ್ತು ಸ್ವಾಭಿಮಾನದ ವಿಷಯವಾಯಿತು. ಅವರು ಬ್ರಿಟಿಷ ಅಧಿಕಾರಿಗೆ ಬರೆದ ಪತ್ರದಲ್ಲಿ ಹೇಳಿದರು: ನಮ್ಮ ರಾಜ್ಯದ ಹಕ್ಕು, ಗೌರವ ಹಾಗೂ ಸ್ವಾಭಿಮಾನವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ.’ ಎಂದು ಎಚ್ಚರಿಕೆ ಸಹ ನೀಡಿದರು.

ಬ್ರಿಟಿಷರ ವಿರುದ್ಧದ ಮೊದಲ ಮಹಿಳಾ ಕ್ರಾಂತಿಯಾಗಿ 1824ರ ಕಿತ್ತೂರು ಯುದ್ಧ ಇತಿಹಾಸದಲ್ಲಿ ಚಿರಸ್ಮರಣೀಯ. ರಾಣಿ ಚೆನ್ನಮ್ಮರ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಸ್ಥಳೀಯ ಯೋಧರು ಅಪಾರ ಶೌರ್ಯ ತೋರಿದರು. ಅವರ ಸೇನಾಪತಿಗಳಾದ ಅಮತೂರು ಬಲಪ್ಪ, ಸಂಗೊಳ್ಳಿ ರಾಯಣ್ಣ, ಗುರು ಬಸಪ್ಪ ನಾಯ್ಕ, ಸಿದ್ದಪ್ಪ ನಾಯ್ಕ ಮುಂತಾದವರು ರಾಣಿಯ ಮಾತಿಗೆ ಜೀವಕೊಡಲು ಸಿದ್ಧರಾದರು.

ಯುದ್ಧದ ವೇಳೆ ಬ್ರಿಟಿಷ ಕಮಾಂಡರ್ ಥಾಕ್ಸನ್ ಹಾಗೂ ಅನೇಕರು ಕೊಲ್ಲಲ್ಪಟ್ಟರು. ಇದು ಭಾರತೀಯ ಸ್ವಾತಂತ್ರ್ಯ ಚಳುವಳಿಯ ಮೊದಲ ವಿಜಯದ ಬೆಳಕು ಎಂದೇ ಕರೆಯಲ್ಪಟ್ಟಿದೆ. ಈ ಸೋಲಿನಿಂದ ಕೋಪಗೊಂಡ ಬ್ರಿಟಿಷರು ಮೋಸ ಮಾಡಿ ಶಾಂತಿ ಒಪ್ಪಂದದ ನೆಪದಲ್ಲಿ ಕೋಟೆಗೆ ನುಗ್ಗಿದರು. ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರನ್ನು ಬಂಧಿಸಿದರು. ರಾಣಿಯನ್ನು ಬೈಲಹೊಂಗಲ ಕಾರಾಗೃಹಕ್ಕೆ ಕಳುಹಿಸಿ ಕಠಿಣ ನಿಗಾವಳಿಯಲ್ಲಿ ಇರಿಸಿದರು.

ಬಂಧನದಲ್ಲಿದ್ದರೂ ಅವರ ಮನಸ್ಸಿನಲ್ಲಿ ದೇಶದ ಸ್ವಾತಂತ್ರ್ಯದ ಕನಸು ಆರಲಿಲ್ಲ. ಅವರು ತಮ್ಮ ಹೋರಾಟಗಾರರಿಗೆ ಪ್ರೇರಣಾ ಪತ್ರಗಳನ್ನು ಕಳುಹಿಸುತ್ತಿದ್ದರು. ಕೊನೆಗೆ 1829ರಲ್ಲಿ ಕಾರಾಗೃಹದಲ್ಲಿಯೇ ಪ್ರಾಣ ತ್ಯಾಗ ಮಾಡಿದರೂ, ಅವರ ಆತ್ಮದ ದೀಪ ಭಾರತಕ್ಕೆ ಶಾಶ್ವತವಾಗಿ ಬೆಳಗಿತು. ರಾಣಿ ಚೆನ್ನಮ್ಮರು ಹಾಕಿದ ಹೋರಾಟದ ಕಿಡಿ ಮಣ್ಣಿನಲ್ಲಿ ಆರಲಿಲ್ಲ. ಸಂಗೊಳ್ಳಿ ರಾಯಣ್ಣರು ಅವರಿಂದ ಪ್ರೇರಿತವಾಗಿ ಗೆರಿಲ್ಲಾ ಯುದ್ಧ ತಂತ್ರದಿಂದ ಬ್ರಿಟಿಷರಿಗೆ ಭಾರೀ ತೊಂದರೆ ನೀಡಿದರು. ಕರ್ನಾಟಕದಿಂದ ಝಾನ್ಸಿವರೆಗೆ, ಹಲವೆಡೆಗಳಲ್ಲಿ ಕ್ರಾಂತಿಚೇತನ ಹುಟ್ಟಿತು. ಅವರ ಹೋರಾಟವೇ 1857ರ ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾದ ಬೀಜವಾಯಿತು.

ಪ್ರತಿ ವರ್ಷ ಅಕ್ಟೋಬರ್ ತಿಂಗಳ ಮೂರನೇ ವಾರದಲ್ಲಿ ನಡೆಯುವ ಕಿತ್ತೂರು ಉತ್ಸವ ರಾಣಿ ಚೆನ್ನಮ್ಮರ ಶೌರ್ಯವನ್ನು ಸ್ಮರಿಸುವ ಸಾಂಸ್ಕೃತಿಕ ಹಬ್ಬವಾಗಿದೆ. ರಾಜ್ಯಾದ್ಯಂತ ಶಾಲೆ, ಮಹಾವಿದ್ಯಾಲಯಗಳಲ್ಲಿ ಅಕ್ಟೋಬರ್ 23ರ ದಿನವನ್ನು ರಾಣಿ ಚೆನ್ನಮ್ಮರ ಜನ್ಮ ದಿನಾಚರಣೆ ಮೂಲಕ ಸ್ಮರಿಸಲ್ಪಡುತ್ತದೆ. ಶೌರ್ಯ ಮೆರವಣಿಗೆ, ನಾಟಕ, ನೃತ್ಯ ಪ್ರದರ್ಶನಗಳು, ಕಿತ್ತೂರಿನ ಇತಿಹಾಸದ ಚಿತ್ರ-ಶಿಲ್ಪ ಪ್ರದರ್ಶನಗಳು, ವಿದ್ಯಾರ್ಥಿಗಳ ಪ್ರಬಂಧ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಿಗೆ ರಾಣಿ ಚೆನ್ನಮ್ಮರ ಕುರಿತಾಗಿ ತಿಳಿಸಿಕೊಡಲಾಗುತ್ತದೆ.

ಕಿತ್ತೂರು ರಾಣಿ ಚೆನ್ನಮ್ಮರು ಕೇವಲ ಇತಿಹಾಸದ ಒಂದು ಅಧ್ಯಾಯವಲ್ಲ. ಅವರು ಮಹಿಳಾ ಸಬಲೀಕರಣದ ಶಾಶ್ವತ ಮಾದರಿ, ದೇಶಭಕ್ತಿಯ ಜೀವಂತ ದೀಪ. ಅವರ ಹೆಸರಿನಲ್ಲಿ ದೇಶದಾದ್ಯಂತ ರಸ್ತೆ, ವಿಶ್ವವಿದ್ಯಾಲಯಗಳು, ಸ್ಮಾರಕಗಳು ಸ್ಥಾಪಿಸಲ್ಪಟ್ಟಿವೆ. ಅವರ ಜೀವನ ಕಥೆ ಪ್ರತಿ ಭಾರತೀಯ ಮಹಿಳೆಗೆ ಆತ್ಮವಿಶ್ವಾಸ, ಶಕ್ತಿ ಮತ್ತು ಪ್ರೇರಣೆಯನ್ನು ಬಿತ್ತುತ್ತದೆ.

ರಾಣಿ ಚೆನ್ನಮ್ಮರು ಶೌರ್ಯ, ತ್ಯಾಗ ಮತ್ತು ಮಹಿಳಾ ಶಕ್ತಿಯ ಅನನ್ಯ ಪ್ರೇರಣೆ. ಅವರ ಹೆಸರಿನಂತೆ ಕಿತ್ತೂರಿನ ಮಣ್ಣು ಎಂದಿಗೂ ಧೈರ್ಯ, ಸ್ವಾತಂತ್ರ್ಯ ಮತ್ತು ಗೌರವದ ಸಂಕೇತವಾಗಿ ಬೆಳಗುತ್ತದೆ.

ವಸಂತ ಬಿ. ಮಡ್ಲೂರ
ಸಹಾಯಕ ನಿರ್ದೇಶಕರು,
ವಾ.ಸಾ.ಸಂ ಇಲಾಖೆ, ಗದಗ.

ಜನಪದ ಸಾಹಿತ್ಯ ಜೀವನ ಮೌಲ್ಯಗಳ ಹೂರಣ: ಗವಿಸಿದ್ಧಯ್ಯ ಹಳ್ಳಿಕೇರಿಮಠ

0

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಸಂಸ್ಕೃತಿಯ ಬೇರುಗಳನ್ನು ಜನಪದ ಸಾಹಿತ್ಯದಲ್ಲಿ ಕಾಣುತ್ತೇವೆ. ದಿನನಿತ್ಯದ ಬದುಕು, ಹಬ್ಬ ಹರಿದಿನಗಳು, ಕೃಷಿ ಚಟುವಟಿಕೆಗಳು, ಭಕ್ತಿ ಭಾವ, ಪೌರಾಣಿಕ ಸನ್ನಿವೇಶಗಳನ್ನು ಇದು ಒಳಗೊಂಡಿದೆ. ಒಟ್ಟಾರೆ, ಇದು ಜೀವನ ಮೌಲ್ಯಗಳ ಹೂರಣದಿಂದ ಕೂಡಿದೆ ಎಂದು ಜನಪದ ಕಲಾವಿದ ಗವಿಸಿದ್ಧಯ್ಯ ಹಳ್ಳಿಕೇರಿಮಠ ಅಭಿಪ್ರಾಯಪಟ್ಟರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ, ಕಸಾಪ ಕಾರ್ಯಾಲಯದಲ್ಲಿ ದಿ. ನಾರಾಯಣಭಟ್ ಶಿವಪೂರ ಅವರ ಸ್ಮರಣಾರ್ಥ ಏರ್ಪಡಿಸಿದ್ದ ದತ್ತಿ ಉಪನ್ಯಾಸದಲ್ಲಿ “ಯುವಜನತೆ ಮತ್ತು ಜನಪದ ಸಾಹಿತ್ಯ” ಕುರಿತು ಮಾತನಾಡಿದರು.

ಕಸಾಪ ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ನಾರಾಯಣಭಟ್ ಶಿವಪೂರ ಅವರ ಸಂಸ್ಮರಣೆ ಮಾಡಿ, ಶ್ರಮ ಸಂಸ್ಕೃತಿಯ ಮೂಲಕ ಗದಗ ಪರಿಸರದಲ್ಲಿ ಹೊಟೇಲ್ ಉದ್ಯಮವನ್ನು ಪ್ರಾರಂಭಿಸಿ ಮಾದರಿ ಜೀವನ ನಡೆಸಿದ್ದಾರೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅಪಾರ ಒಲವನ್ನು ಹೊಂದಿದ್ದರು ಎಂದು ತಿಳಿಸಿದರು.

ನಾರಾಯಣಭಟ್ ಶಿವಪೂರ ಅವರ ಸಾಮಾಜಿಕ ಸೇವೆಯ ಕುರಿತು ಡಾ. ಆರ್.ಎನ್. ಗೋಡಬೋಲೆ, ಡಾ. ವಾಣಿ ಶಿವಪೂರ ಹಾಗೂ ಡಾ. ಅನಂತ ಶಿವಪೂರ ಮಾತನಾಡಿದರು.

ಈ ಸಂದರ್ಭದಲ್ಲಿ ಅಶೋಕ ಹಾದಿ ಅವರನ್ನು ಗೌರವಿಸಲಾಯಿತು. ಮಂಜುಳಾ ವೆಂಕಟೇಶಯ್ಯ ಕವನ ವಾಚಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಚಂದ್ರಶೇಖರ ವಸ್ತ್ರದ, ಡಾ. ಜಿ.ಬಿ. ಪಾಟೀಲ, ಸಿ.ಕೆ.ಎಚ್. ಕಡಣಿ ಶಾಸ್ತ್ರಿ, ಆರ್.ಡಿ. ಕಪ್ಪಲಿ, ಬಿ.ಬಿ. ಹೊಳಗುಂದಿ, ರತ್ನಕ್ಕ ಪಾಟೀಲ, ರಾಜೇಶ್ವರಿ ಬಡ್ನಿ, ಉಮಾದೇವಿ ಕಣವಿ, ಬಸವರಾಜ ಗಣಪ್ಪನವರ, ಯಲ್ಲಪ್ಪ ಹಂದ್ರಾಳ, ಪ್ರಸನ್ನಕುಮಾರ ಇನಾಮದಾರ, ಚಂದ್ರಶೇಖರ ಐಲಿ, ರಾಜಶೇಖರ ಕರಡಿ, ಮಲ್ಲಿಕಾರ್ಜುನ ನಿಂಗೋಜಿ, ಜೆ.ಎ. ಪಾಟೀಲ, ಅಶೋಕ ಸತ್ಯರೆಡ್ಡಿ, ಗಂಗವ್ವ ಮುದಗಲ್, ಚನವೀರಪ್ಪ ದುಂದೂರ, ಸತೀಶ ಕುಲಕರ್ಣಿ, ಬಿ.ಎಸ್. ಹಿಂಡಿ, ಶರಣಪ್ಪ ಹೊಸಂಗಡಿ, ಬಸವರಾಜ ನೆಲಜೇರಿ, ಅಂಬಿಕಾ ಶಿವಪೂರ, ಸತೀಶಕುಮಾರ ಚನ್ನಪ್ಪಗೌಡ್ರ, ಕೆ.ಎನ್. ಶಿವಪೂರ, ಕಾರ್ತಿಕ ಶಿವಪೂರ, ಸರಸ್ವತಿ ಶಿವಪೂರ, ಎಂ.ಎಫ್. ಡೋಣಿ ಮೊದಲಾದವರು ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ:
ಶಿಷ್ಠ ಸಾಹಿತ್ಯದ ಉಗಮಕ್ಕೆ ಜನಪದವೇ ಮೂಲ. ಗ್ರಾಮೀಣ ಜನ ತಮ್ಮ ಜೀವನಾನುಭವಗಳನ್ನು ಎರಕ ಹೊಯ್ದು ಜನಪದ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ಉತ್ತರ ಕರ್ನಾಟಕದ ಜನಪದ ಸಂಸ್ಕೃತಿ ವಿಶಿಷ್ಟವಾದುದು. ಜಾನಪದ ಪ್ರಕಾರಗಳ ಕಲಿಕೆ ಶಿಕ್ಷಣದ ಒಂದು ಭಾಗವಾಗಿ ಸರ್ಕಾರ ಅಳವಡಿಸಿದಾಗ ಇಂದಿನ ಪೀಳಿಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.

ಪರಿಸರಕ್ಕೆ ಹಾನಿ ಮಾಡುವ ಪಟಾಕಿಗಳ ಮಾರಾಟ, ಬಳಕೆ ನಿಷೇಧ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಮುಂಡರಗಿ ತಾಲೂಕಿನಲ್ಲಿ ಗದಗ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ದ, ವಾಯು ಮಾಲಿನ್ಯ ನಿಯಂತ್ರಣದಲ್ಲಿಡಲು ಹಾಗೂ ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯ ಸಂರಕ್ಷಣೆಯ ಹಿತದೃಷ್ಟಿಯಿಂದ ಭಾರತ ಸರ್ಕಾರದ ಪರಿಸರ (ಸಂರಕ್ಷಣಾ) ನಿಯಮಾವಳಿ 1986 ತಿದ್ದುಪಡಿ 1999 ಮತ್ತು 2000 ಅಡಿಯಲ್ಲಿ ನಿಗದಿಪಡಿಸಿರುವ ಮಾನದಂಡಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸುವಂತೆ ಮುಂಡರಗಿ ತಾಲೂಕ ತಹಸೀಲ್ದಾರ್ ಯರಿಸ್ವಾಮಿ ಪಿ.ಎಸ್. ಕೋರಿದ್ದಾರೆ.

ಸರ್ವೋಚ್ಚ ನ್ಯಾಯಾಲಯವು ನೀಡಿದ ನಿರ್ದೇಶನದಲ್ಲಿ ಅನುಮತಿಸಿರುವ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ. ಪಟಾಕಿ ಮಾರಾಟ ಮಾಡುವವರು ಹಾಗೂ ಪಟಾಕಿ ಸಂಗ್ರಹಿಸುವ ಗೋದಾಮುಗಳಿಗೆ ಸಂಬಂಧಪಟ್ಟ ಎಲ್ಲ ಇಲಾಖೆಯ ಅನುಮತಿ ಪಡೆಯತಕ್ಕದ್ದು.

ದಿನದ ಯಾವುದೇ ಸಮಯದಲ್ಲಿ ನಿಶ್ಶಬ್ದ ವಲಯಗಳೆಂದು ಘೋಷಿಸಲ್ಪಟ್ಟಿರುವ ಸ್ಥಳಗಳಲ್ಲಿ ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ, ವೃದ್ಧಾಶ್ರಮಗಳ ಸುತ್ತಮುತ್ತ ಯಾವುದೇ ರೀತಿಯ ಶಬ್ದ ಉಂಟುಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳ ಬಳಕೆಯನ್ನು ನಿಷೇಧಿಸಲಾಗಿದೆ.

ಯಾವುದೇ ಕ್ರಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ, ಅದಕ್ಕೆ ಕಾರಣರಾದವರ ಮೇಲೆ ಕಾಯ್ದೆಯನುಸಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗುವುದು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ದ ಹಾಗೂ ವಾಯು ಮಾಲಿನ್ಯ ನಿಯಂತ್ರಣದಲ್ಲಿಟ್ಟು ಹಬ್ಬವನ್ನು ‘ಹಸಿರು ದೀಪಾವಳಿ–ಸ್ವಸ್ಥ ದೀಪಾವಳಿ: ಪರಿಸರ ಸ್ನೇಹಿ ದೀಪಾವಳಿ’ಯನ್ನಾಗಿ ಆಚರಿಸಲು ಸಾರ್ವಜನಿಕರು ಸಹಕರಿಸುವಂತೆ ಮುಂಡರಗಿ ತಹಸೀಲ್ದಾರ್ ಯರಿಸ್ವಾಮಿ ಪಿ.ಎಸ್. ಕೋರಿದ್ದಾರೆ.

ಬಾಕ್ಸ್

125 ಡೆಸಿಬಲ್‌ಗಳಿಗಿಂತ ಹೆಚ್ಚು ಶಬ್ದ ಉಂಟುಮಾಡುವ ಪಟಾಕಿಗಳ ದಾಸ್ತಾನು, ಮಾರಾಟ ಹಾಗೂ ಉಪಯೋಗಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯವು ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದೆ. ಸರ್ವೋಚ್ಚ ನ್ಯಾಯಾಲಯ ಹಾಗೂ ಹಸಿರು ನ್ಯಾಯ ಪೀಠದ ಆದೇಶದಂತೆ ಎಲ್ಲ ಹಸಿರು ಪಟಾಕಿಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಹಾಗೂ ಕ್ಯೂಆರ್‌ಕೋಡ್ ಇರುವ ಹಸಿರು ಪಟಾಕಿ — ಕಡಿಮೆ ಮಾಲಿನ್ಯ ಉಂಟುಮಾಡುವ ಪಟಾಕಿ ಮಾತ್ರ ಮಾರಾಟ ಮಾಡುವುದು.

ಹಬ್ಬದ ನೆಪದಲ್ಲಿ ಇಸ್ಪೀಟ್ ಆಡಿದರೆ ಕಠಿಣ ಕ್ರಮ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜೂಜು, ಇಸ್ಪೀಟ್ ಮತ್ತಿತರ ಆಟಗಳನ್ನು ಆಡಿದರೆ, ಅಕ್ರಮ ಚಟುವಟಿಕೆಗಳನ್ನು ನಡೆಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್‌ಐ ಐಶ್ವರ್ಯಾ ನಾಗರಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಈ ಪ್ರಕಟಣೆಯನ್ನು ಹೊರಡಿಸಲಾಗಿದ್ದು, ದೀಪಾವಳಿ ಪೂಜೆಯ ನಂತರ ಬಹಳಷ್ಟು ಜನ ದೀಪ ಕಾಯುವ ನೆಪದಲ್ಲಿ ಇಸ್ಪೀಟ್ ಮತ್ತಿತರ ಜೂಜಾಟಗಳನ್ನು ಆಡುವುದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಆಡಿಸುವವರ ಮತ್ತು ಆಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು. ಆದ್ದರಿಂದ ನರೇಗಲ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕರು ಈ ಪ್ರಕಟಣೆಯನ್ನು ಗಂಭೀರವಾಗಿ ಪರಿಗಣಿಸಿ, ಜಾಗರೂಕರಾಗಿರಬೇಕೆಂದು ತಿಳಿಸಲಾಗಿದೆ.

ಸಚಿವ ಪ್ರಲ್ಹಾದ ಜೋಷಿ ಅವರಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಪಶ್ಚಿಮ ಪದವೀಧರ ಚುನಾವಣೆ 2026ರ ಮತದಾರರ ನೋಂದಣಿ ಜಾಗೃತಿಯ ಅಭಿಯಾನವನ್ನು ಕೈಗೊಂಡಿರುವ ಗದುಗಿನ ನಿತ್ಯವಿಜಯ ಪ್ರತಿಷ್ಠಾನದ ಸಂಸ್ಥಾಪಕರು, ಬಿಜೆಪಿಯ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸದಸ್ಯರಾದ ಡಾ. ಎಸ್.ಎಚ್. ಶಿವನಗೌಡರ ಅವರ ನೇತೃತ್ವದ ತಂಡವು ಗದಗ ಹಾಗೂ ಹುಬ್ಬಳ್ಳಿಯ ವಿವಿಧೆಡೆ ಮತದಾರರ ನೋಂದಣಿ ಕುರಿತು ಜಾಗೃತಿ ಮೂಡಿಸಿತು.

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರ ಕಾರ್ಯಾಲಯಕ್ಕೆ ಭೇಟಿ ನೀಡಿದ ತಂಡವು ಅವರನ್ನು ಸನ್ಮಾನಿಸಿ ಗೌರವಿಸಿತು. ಈ ಸಂದರ್ಭದಲ್ಲಿ ಔಪಚಾರಿಕವಾಗಿ ಮಾತನಾಡಿದ ಪ್ರಹ್ಲಾದ ಜೋಷಿ ಅವರು, ಮತದಾರರ ನೋಂದಣಿ ಜಾಗೃತಿ ಅಭಿಯಾನವು ಮತಕ್ಷೇತ್ರದ ಎಲ್ಲೆಡೆಯೂ ನಡೆಯುವಂತಾಗಲಿ. ಬಿಜೆಪಿಯ ಕಾರ್ಯಕರ್ತರು ಈ ಕಾರ್ಯವನ್ನು ಯಶಸ್ವಿಗೊಳಿಸಿ ಹೆಚ್ಚಿನ ಪ್ರಮಾಣದಲ್ಲಿ ನೋಂದಣಿ ಮಾಡಿಸಬೇಕು ಎಂದರು; ಡಾ. ಎಸ್.ಎಚ್. ಶಿವನಗೌಡರ ನೇತೃತ್ವದಲ್ಲಿ ಈ ಕಾರ್ಯಕ್ಕೆ ಮುಂದಾಗಿರುವ ತಂಡದ ಕಾರ್ಯ ಅಭಿನಂದನೀಯ ಎಂದರು.

ಪ್ರಚಾರ ಸಮಿತಿಗೆ ಮೈಲಾರಪ್ಪ ಉಪಾಧ್ಯಕ್ಷ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಾಂಗ್ರೆಸ್ ಪಕ್ಷದ ಕಾರ್ಯಚಟುವಟಿಕೆಗಳನ್ನು ಸದೃಢಗೊಳಿಸಲು ರಾಜ್ಯದ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಂತೆ ರೋಣ ಮತಕ್ಷೇತ್ರದ ಪ್ರಚಾರ ಸಮಿತಿಯ ಉಪಾಧ್ಯಕ್ಷರಾಗಿ ಜೈಭೀಮ್ ಸಂಘಟನೆಯ ರಾಜ್ಯ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ ಮೈಲಾರಪ್ಪ ಚಳ್ಳಮರದ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಆಯ್ಕೆ ಸಮಿತಿ ಸಭೆಯ ಅಧ್ಯಕ್ಷತೆಯನ್ನು ಧುರೀಣ ಮಿಥುನ್ ಜಿ. ಪಾಟೀಲ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಉಸ್ತುವಾರಿ ಅನ್ನಪೂರ್ಣಾ ಪೂಜಾರ, ಗದಗ ಜಿಲ್ಲಾಧ್ಯಕ್ಷ ಅಶೋಕ ಮಂದಾಲಿ, ವೀರಣ್ಣ ಶೆಟ್ಟರ್, ಗಜೇಂದ್ರಗಡ ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶರಣಪ್ಪ ಬೆಟಗೇರಿ ಮತ್ತಿತರರು ಉಪಸ್ಥಿತರಿದ್ದರೆಂದು ಪ್ರಕಟಣೆ ತಿಳಿಸಿದೆ.

ಮನೆ ಕಟ್ಟಲು ಪಡೆದಿದ್ದ ಸಾಲ ತೀರಿಸಲಾಗದೆ ಯೋಧ ಆತ್ಮಹತ್ಯೆ!

0

ಮೈಸೂರು: ಮನೆ ನಿರ್ಮಾಣಕ್ಕಾಗಿ ಪಡೆದ ಸಾಲವನ್ನು ತೀರಿಸಲಾಗದೆ ಯೋಧನೋರ್ವ ಆತ್ಮಹತ್ಯೆಗೆ ಶರಣಾದ ದುರ್ಘಟನೆ ಹುಣಸೂರು ನಗರದಲ್ಲಿ ನಡೆದಿದೆ. ಮೃತರನ್ನು ಎಂ. ಚಂದ್ರಶೇಖರ್ (35) ಎಂದು ಗುರುತಿಸಲಾಗಿದ್ದು, ಅವರು ನಂಜಾಪುರದ ನಿವಾಸಿ ಹಾಗೂ ಸೈನಿಕರಾಗಿದ್ದರು.

ಎರಡು ವರ್ಷಗಳ ಹಿಂದೆ ಹುಣಸೂರು ಹೊಸ ಬಡಾವಣೆಯಲ್ಲಿ ಮನೆ ನಿರ್ಮಿಸಲು ಬ್ಯಾಂಕ್ ಮತ್ತು ಸ್ನೇಹಿತರ ಬಳಿ ಸಾಲ ಮಾಡಿದ್ದ ಅವರು, ಇತ್ತೀಚೆಗೆ ಸಾಲದ ಬಾಧೆಯಿಂದ ಪರದಾಡುತ್ತಿದ್ದರು ಎಂದು ತಿಳಿದುಬಂದಿದೆ.

15 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರ, ಆಗ್ರಾ, ಚೀನಾ ಗಡಿಯಲ್ಲಿ ಚಂದ್ರಶೇಖರ್ ಕರ್ತವ್ಯ ನಿರ್ವಹಿಸಿದ್ದರು. 1 ತಿಂಗಳ ಹಿಂದೆ ಅವರು ರಜೆ ಮೇಲೆ ಮನೆಗೆ ಬಂದಿದ್ದರು. ದೀಪಾವಳಿ ಹಬ್ಬದ ನಂತರ ಕರ್ತವ್ಯಕ್ಕೆ ವಾಪಸ್ಸಾಗ ಬೇಕಿತ್ತು. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ಶಾಲೆಯ ಕ್ರೂರ ಕೃತ್ಯ: 2 ದಿನ ಕ್ಲಾಸಿಗೆ ಬರದ ವಿದ್ಯಾರ್ಥಿಗೆ ಪೈಪ್ʼನಿಂದ ಹಲ್ಲೆ

0

ಬೆಂಗಳೂರು:- 2 ದಿನ ಶಾಲೆಗೆ ಬರದಿದ್ದಕ್ಕೆ ಶಿಕ್ಷಕರು ವಿದ್ಯಾರ್ಥಿಗೆ ಕ್ರೂರ ಶಿಕ್ಷೆ ನೀಡಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯ ಖಾಸಗಿ ಶಾಲೆಯಲ್ಲಿ ನಡೆದಿದೆ.

ಐದನೇ ತರಗತಿ ವಿದ್ಯಾರ್ಥಿಯನ್ನು ಕತ್ತಲು ಕೋಣೆಯಲ್ಲಿ ಕೂಡಿಹಾಕಿ ಪಿವಿಸಿ ಪೈಪ್‌ನಿಂದ ಹೊಡೆದು ಚಿತ್ರಹಿಂಸೆ ನೀಡಲಾಗಿದೆ. ಈ ಹಲ್ಲೆಯಿಂದ ಬಾಲಕ ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗಿ, ಮನೆಯಲ್ಲಿ ಕಿರುಚಾಡುತ್ತ ಓಡಾಡುತ್ತಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ.

ವಿದ್ಯಾರ್ಥಿಯು ಎರಡು ದಿನ ಕ್ಲಾಸ್ ಬಿಟ್ಟಿದ್ದರಿಂದ ಪ್ರಾಂಶುಪಾಲರು ಹಾಗೂ ಕೆಲ ಶಿಕ್ಷಕರು ಸೇರಿ ಹಲ್ಲೆ ನಡೆಸಿದ್ದಾರೆಂದು ಆರೋಪ. ಮಗುವಿನ ದೇಹದ ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿರುವುದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೋಷಕರ ಆಕ್ರೋಶ – “ಶಾಲೆಯವರು ನಮ್ಮ ಮಗುವಿಗೆ ಕ್ರೂರ ಶಿಕ್ಷೆ ನೀಡಿದ್ದು ಮಾತ್ರವಲ್ಲ, ಬದಲಾಗಿ ಗಾಂಜಾ ಸೇವನೆ ಮಾಡುತ್ತಿದ್ದಾನೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ. ಈ ಘಟನೆಯ ಕುರಿತು ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಕ್ರಿಕೆಟ್ʼಗೆ ವಿದಾಯ ಹೇಳಿದ RCB ಮಾಜಿ ಆಟಗಾರ..! ಯಾರವರು?

0

ಆರ್‌ಸಿಬಿ ಪರ ಆಡಿದ್ದ ಹಾಗೂ ಜಮ್ಮು-ಕಾಶ್ಮೀರದ ಮೊದಲ ಅಂತರರಾಷ್ಟ್ರೀಯ ಕ್ರಿಕೆಟಿಗನಾದ ಪರ್ವೇಜ್ ರಸೂಲ್, ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 2014ರ ಜೂನ್ 15ರಂದು ಬಾಂಗ್ಲಾದೇಶ ವಿರುದ್ಧ ಮಿರ್ಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಸೂಲ್,

10 ಓವರ್‌ಗಳಲ್ಲಿ 60 ರನ್‌ ನೀಡಿ 2 ವಿಕೆಟ್‌ ಪಡೆದಿದ್ದರು. ನಂತರ 2017ರ ಜನವರಿ 26ರಂದು ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ 5 ರನ್‌ ಬಾರಿಸಿ, ಇಯಾನ್ ಮಾರ್ಗನ್‌ ಅವರ ವಿಕೆಟ್‌ ಪಡೆದಿದ್ದರು.

ಭಾರತ ಪರ ಕೇವಲ ಒಂದೊಂದು ಏಕದಿನ ಮತ್ತು ಟಿ20 ಪಂದ್ಯವನ್ನಾಡಿದರೂ, ದೇಶೀಯ ಕ್ರಿಕೆಟ್‌ನಲ್ಲಿ ಪರ್ವೇಜ್ ರಸೂಲ್ ಗಮನಾರ್ಹ ಸಾಧನೆ ಮಾಡಿದ್ದಾರೆ. 95 ಪ್ರಥಮ ದರ್ಜೆ ಪಂದ್ಯಗಳಲ್ಲಿ 5648 ರನ್ ಹಾಗೂ 352 ವಿಕೆಟ್‌ ಪಡೆದಿರುವ ಅವರು, ರಣಜಿ ಟ್ರೋಫಿಯಲ್ಲಿ ಎರಡು ಬಾರಿ ಅತ್ಯುತ್ತಮ ಆಲ್-ರೌಂಡರ್ ಪ್ರಶಸ್ತಿ ಗೆದ್ದಿದ್ದಾರೆ.

ಐಪಿಎಲ್‌ನಲ್ಲಿ ಪುಣೆ ವಾರಿಯರ್ಸ್ ಇಂಡಿಯಾ, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಒಟ್ಟು 11 ಪಂದ್ಯಗಳನ್ನು ಆಡಿದ್ದಾರೆ.

ನಿವೃತ್ತಿ ಘೋಷಿಸಿದ ಬಳಿಕ ರಸೂಲ್ ಹೇಳಿರುವಂತೆ, “ಒಮ್ಮೆ ಜಮ್ಮು-ಕಾಶ್ಮೀರ ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ನಾವು ದೊಡ್ಡ ತಂಡಗಳನ್ನು ಸೋಲಿಸಿದ್ದೇವೆ. ರಾಜ್ಯ ತಂಡದ ನಾಯಕನಾಗಿ ನಮ್ಮ ಯಶಸ್ಸಿಗೆ ನಾನು ಕೊಡುಗೆ ನೀಡಿದ್ದೇನೆಂಬುದೇ ನನಗೆ ಹೆಮ್ಮೆ,” ಎಂದು ಹೇಳಿದ್ದಾರೆ.

ಮೈಸೂರು: ಕಾಲುವೆಗೆ ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲು!

0

ಮೈಸೂರು: ಕಾಲುವೆಗೆ ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲಾಗಿರುವ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಟ್ಟಣದಲ್ಲಿ ನಡೆದಿದೆ. ಆಯಾನ್(16), ಆಜಾನ್(13) ಹಾಗೂ ಲುಕ್ಮಾನ್(14) ಮೃತ ದುರ್ಧೈವಿಗಳಾಗಿದ್ದು, ಚಾಮರಾಜ ಎಡದಂಡೆ ಕಾಲುವೆಯಲ್ಲಿ ಈಜಾಡಲು ಹೋದವರು ಜಲಸಮಾಧಿಯಾಗಿದ್ದು,

ಇಬ್ಬರ ಮೃತದೇಹ ಪತ್ತೆಯಾಗಿದೆ. ಇನ್ನುಳಿದ ಮತ್ತೊಬ್ಬನ ಶವಕ್ಕೆ ಶೋಧ ಕಾರ್ಯ ನಡೆದಿದೆ. ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಟ್ಟಣದಲ್ಲಿ ಮೂವರು ಬಾಲಕರು ಚಾಮರಾಜ ಎಡದಂಡೆ ಕಾಲುವೆಯಲ್ಲಿ ಈಜೋದಕ್ಕೆ ತೆರಳಿದ್ದರು.

ಈ ವೇಳೆಯಲ್ಲಿ ನೀರಲ್ಲಿ ಮುಳುಗಿ ಈ ದುರ್ಘಟನೆ ಸಂಭವಿಸಿದೆ. ಇನ್ನು ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಸಾಲಿಗ್ರಾಮ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಶೋಧ ಕಾರ್ಯ ನಡೆಸಿದ್ದು, ಸದ್ಯ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.

error: Content is protected !!