Home Blog Page 11

ಮಹಿಳೆ–ಮಕ್ಕಳ ರಕ್ಷಣೆಗೆ ‘ಅಕ್ಕಪಡೆ’: ದಿನಕ್ಕೆ 12 ಗಂಟೆ ಗಸ್ತು, ದೂರುದಾರರ ಹೆಸರು ಗೌಪ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

0

ಬೆಂಗಳೂರು: ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಸಲುವಾಗಿಯೇ ಅಕ್ಕಪಡೆ ರಚಿಸಲಾಗಿದ್ದು, ದಿನದಲ್ಲಿ 12 ಗಂಟೆ ಗಸ್ತು ತಿರುಗಲಿದೆ. ದೌರ್ಜನ್ಯಕ್ಕೊಳಗಾಗಿ ದೂರು ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ವಿಶೇಷ ಅಧಿವೇಶನದ ವಿಧಾನಸಭೆಯ ಪ್ರಶ್ನೋತ್ತರ ವೇಳೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್‌ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಕ್ಕಳ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ದಿನದ 24 ಗಂಟೆಯೂ ಸಹಾಯವಾಣಿಗಳನ್ನು ತೆರೆಯಲಾಗಿದೆ ಎಂದರು.

ಕಳೆದ ವರ್ಷ ನವೆಂಬರ್‌ 28 ರಂದು ಅಕ್ಕ ಪಡೆಗೆ ಚಾಲನೆ ನೀಡಲಾಗಿದ್ದು, ಈ ಅಕ್ಕಪಡೆ ಎಲ್ಲೆಡೆ ಗಸ್ತು ತಿರುಗುತ್ತದೆ. ನಮ್ಮ ಇಲಾಖೆಯಿಂದ ಸಹಾಯವಾಣಿ ತೆರೆಯಲಾಗಿದ್ದು, 1098 ಸಂಖ್ಯೆಗೆ ಕರೆ ಮಾಡಬಹುದು. ಅಕ್ಕ ಪಡೆಗೆ ಮಹಿಳಾ ಸಹಾಯವಾಣಿ 181, ಜೊತೆಗೆ ಪೊಲೀಸ್‌ ಇಲಾಖೆಯ 112 ಸಂಖ್ಯೆಗೆ ಕರೆ ಮಾಡಬಹುದು. ದೌರ್ಜನ್ಯ ತಡೆಗಟ್ಟಲು ಗ್ರಾಮ ಪಂಚಾಯಿತಿಯಿಂದ ಹಿಡಿದು ಮೇಲ್ಮಟ್ಟದವರೆಗೂ ಸಮಿತಿ ರಚಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಉತ್ತರಿಸಿದರು.

ಮಹಿಳೆಯರ ಹಾಗೂ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿರುತ್ತದೆ. ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗುತ್ತಿದೆ. ಬೀದಿ ನಾಟಕಗಳ ಮೂಲಕ ಜನರನ್ನು ತಲುಪುವ ಕೆಲಸ ಮಾಡಲಾಗುತ್ತಿದೆ, ಆಕಾಶವಾಣಿಯಲ್ಲಿ ಒಂದೂವರೆ ತಿಂಗಳ ಪ್ರಚಾರ ನೀಡಲಾಗಿದೆ ಎಂದು ಹೇಳಿದರು.

ಗದಗ ಬಸ್ ನಿಲ್ದಾಣದ ಬಯಲು ಪ್ರದೇಶದಲ್ಲಿ ಬೆಂಕಿ: ಅಗ್ನಿಶಾಮಕ ದಳದಿಂದ ತಪ್ಪಿದ ಭಾರೀ ಅನಾಹುತ:

0

ಗದಗ: ಗದಗ ಕೇಂದ್ರ ಬಸ್ ನಿಲ್ದಾಣದ ಬಯಲು ಜಾಗೆಯಲ್ಲಿ ಕಸ ಹಾಗೂ ಹುಲ್ಲಿಗೆ ಬೆಂಕಿ ಹೊತ್ತಿಕೊಂಡ ಘಟನೆ ಇಂದು ನಡೆದಿದೆ. ಘಟನೆ ಕೆಲಕಾಲ ಪ್ರಯಾಣಿಕರು ಹಾಗೂ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿತು.

ಯಾರೋ ಕಿಡಿಗೇಡಿಗಳು ಬಿಸಾಡಿದ ಬೀಡಿ ಅಥವಾ ಸಿಗರೇಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗುತ್ತಿದೆ. ಪರಿಸ್ಥಿತಿ ಗಮನಿಸಿದ ಸಾರಿಗೆ ಸಂಸ್ಥೆ ಸಿಬ್ಬಂದಿಗಳು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಿಯಂತ್ರಣಕ್ಕೆ ತಂದು, ಹೆಚ್ಚಿನ ಹಾನಿ ಸಂಭವಿಸದಂತೆ ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಟ್ಟಿದೆ.

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಲೋಕಾಯುಕ್ತ ಬಿ–ರಿಪೋರ್ಟ್ ಪ್ರಶ್ನಿಸಿದ್ದ ಅರ್ಜಿ ವಜಾ

0

ಬೆಂಗಳೂರು/ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ನೀಡಿದ್ದ ಕ್ಲೀನ್‌ಚಿಟ್ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿದಂತೆ ನಾಲ್ವರ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ–ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿಯ ವಾದ–ಪ್ರತಿವಾದಗಳನ್ನು ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಲೋಕಾಯುಕ್ತ ಸಲ್ಲಿಸಿದ್ದ ಬಿ–ರಿಪೋರ್ಟ್ ಅನ್ನು ಪುರಸ್ಕರಿಸಿ, ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಇಂದು (ಜನವರಿ 22) ವಜಾಗೊಳಿಸಿ ಆದೇಶ ಹೊರಡಿಸಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ದೊಡ್ಡ ರಿಲೀಫ್ ದೊರೆತಂತಾಗಿದೆ.

ಲೋಕಾಯುಕ್ತ ತನಿಖೆ ಮತ್ತು ಬಿ–ರಿಪೋರ್ಟ್

ಮುಡಾ ಹಗರಣದ ಸಂಬಂಧ ಲೋಕಾಯುಕ್ತ ನಡೆಸಿದ್ದ ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾಲೀಕ ದೇವರಾಜು ವಿರುದ್ಧ ಯಾವುದೇ ಅಪರಾಧ ಸಾಬೀತಾಗಿಲ್ಲ ಎಂದು ಹೇಳಿ ಬಿ–ರಿಪೋರ್ಟ್ ಸಲ್ಲಿಸಿತ್ತು.

ಆದರೆ ಈ ಬಿ–ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯಗೆ ರಾಜಕೀಯವಾಗಿ ಒತ್ತಡ ಹೆಚ್ಚಾಗಿತ್ತು. ಆದರೆ ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಲೋಕಾಯುಕ್ತ ಬಿ–ರಿಪೋರ್ಟ್ ಪುರಸ್ಕರಿಸಿ ಅರ್ಜಿಯನ್ನು ವಜಾಗೊಳಿಸಿದೆ.

ರಾಜಕೀಯ ವಲಯದಲ್ಲಿ ಚರ್ಚೆ

ತಮ್ಮ ರಾಜಕೀಯ ಜೀವನದಲ್ಲಿ ಸಿಎಂ ಸಿದ್ದರಾಮಯ್ಯ ‘ಕ್ಲೀನ್ ಹ್ಯಾಂಡ್’ ರಾಜಕಾರಣಿ ಎಂಬ ಹೆಸರು ಪಡೆದಿದ್ದರು. ಆದರೆ ಮುಡಾ ಹಗರಣ ಅವರ ವಿರುದ್ಧ ಆರೋಪಗಳೊಂದಿಗೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಕೋರ್ಟ್ ಆದೇಶದ ಮೂಲಕ ಪ್ರಕರಣಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದ್ದು, ಸಿಎಂ ಸಿದ್ದರಾಮಯ್ಯ ನಿರಾಳರಾದಂತಾಗಿದೆ.

ಜಯನಗರ ವಿಧಾನಸಭಾ ಫಲಿತಾಂಶ ವಿವಾದ: ಸುಪ್ರೀಂನಲ್ಲಿ ಬಿಜೆಪಿ ಶಾಸಕ ರಾಮಮೂರ್ತಿಗೆ ಹಿನ್ನಡೆ

0

ಬೆಂಗಳೂರು: ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಪ್ರಕರಣದ ಟ್ರಯಲ್‌ಗೆ (ವಿಚಾರಣೆ) ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಹಾಗೂ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಆದೇಶ ಹೊರಡಿಸಿದ್ದು, ಚುನಾವಣಾ ತಕರಾರು ಪ್ರಕರಣದ ವಿಚಾರಣೆ ಮುಂದುವರಿಯಲು ಅವಕಾಶ ನೀಡಿದೆ. ಈ ಮೂಲಕ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆ ಎದುರಾಗಿದೆ.

ಏನಿದು ಜಯನಗರ ವಿವಾದ?

2023ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಿ.ಕೆ.ರಾಮಮೂರ್ತಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಸೌಮ್ಯ ರೆಡ್ಡಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಸಿ.ಕೆ.ರಾಮಮೂರ್ತಿ ಅವರು ಸೌಮ್ಯ ರೆಡ್ಡಿ ಅವರನ್ನು ಕೇವಲ 16 ಮತಗಳ ಅಂತರದಲ್ಲಿ ಸೋಲಿಸಿದ್ದರು.

ಆದರೆ ತಮ್ಮ ಪರಾಭವವನ್ನು ಪ್ರಶ್ನಿಸಿದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ, ಮತ ಎಣಿಕೆ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗಿದೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇವಿಎಂ ಮತ ಎಣಿಕೆಯಲ್ಲಿ ತಾನು ಮುನ್ನಡೆ ಸಾಧಿಸಿದ್ದೆ, ಆದರೆ ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಅವರು ಆರೋಪಿಸಿದ್ದರು.

ಅಂಚೆ ಮತ ಎಣಿಕೆಯಲ್ಲಿ ವ್ಯತ್ಯಾಸ ಆರೋಪ

ಸೌಮ್ಯ ರೆಡ್ಡಿ ಅವರ ಪ್ರಕಾರ, ಒಟ್ಟು 827 ಅಂಚೆ ಮತಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಪ್ರತಿ ಬಾರಿ ಮರು ಎಣಿಕೆ ಮಾಡಿದಾಗ ವಿಭಿನ್ನ ಅಂಕಿ-ಅಂಶಗಳು ಲಭ್ಯವಾಗಿದ್ದವು. ಅಲ್ಲದೆ ಮತ ಎಣಿಕೆ ಪ್ರಕ್ರಿಯೆ ಆರಂಭವಾದ ನಂತರವೂ ಅಂಚೆ ಮೂಲಕ ಬಂದ ಮತ ಪತ್ರಗಳನ್ನು ಎಣಿಕೆಗೆ ಪರಿಗಣಿಸಲಾಗಿದೆ ಎಂದು ಅವರು ಆರೋಪಿಸಿದ್ದರು.

ಈ ಹಿನ್ನೆಲೆ, ವಿಜೇತ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಸೌಮ್ಯ ರೆಡ್ಡಿ ಅವರು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಈ ಸಂಬಂಧ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಸೌಮ್ಯ ರೆಡ್ಡಿ ಅವರಿಗೆ ಸೂಚನೆ ನೀಡಿತ್ತು.

ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆ

ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿ.ಕೆ.ರಾಮಮೂರ್ತಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದ ವಿಚಾರಣೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ಸುಪ್ರೀಂ ಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿದ್ದು, ಚುನಾವಣಾ ತಕರಾರು ಪ್ರಕರಣದ ಟ್ರಯಲ್ ಮುಂದುವರಿಯಲಿದೆ.

ಧಾರವಾಡ- ಶಿರಡಿ ನಗರದಲ್ಲಿ ಹುಚ್ಚು ನಾಯಿ ದಾಳಿ: 9 ಮಂದಿ ಆಸ್ಪತ್ರೆಗೆ ದಾಖಲು, ಸ್ಥಳೀಯರಲ್ಲಿ ಆತಂಕ

0

ಧಾರವಾಡ: ಧಾರವಾಡ ನಗರದ ಶಿರಡಿ ನಗರ ಪ್ರದೇಶದಲ್ಲಿ ಹುಚ್ಚು ನಾಯಿಯೊಂದು ದಾಳಿ ನಡೆಸಿದ ಪರಿಣಾಮ, ಒಟ್ಟು 9 ಮಂದಿ ಗಾಯಗೊಂಡಿದ್ದಾರೆ. ಬಡಾವಣೆಯಲ್ಲಿ ಅಲೆದಾಡಿದ ನಾಯಿ ಜನರ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಘಟನೆಯಲ್ಲಿ ಶಾಲೆಯಿಂದ ಮರಳುತ್ತಿದ್ದ ರಿಶೀಕ್ ಎಂಬ ಬಾಲಕನಿಗೆ ಕಿವಿಯಲ್ಲಿ ಗಂಭೀರ ಗಾಯವಾಗಿದೆ. ಗಂಗವ್ವ ಉಪ್ಪಾರ, ಲಕ್ಷ್ಮೀ ಮಾದರ, ಶೀತಲ ಕಬಾಡಿ ಸೇರಿದಂತೆ ಇನ್ನಿತರರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಎಲ್ಲ ಗಾಯಾಳುಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಯಿಯ ನಿರಂತರ ದಾಳಿಯಿಂದ ಭಯಭೀತರಾದ ಸ್ಥಳೀಯರು, ಆತ್ಮರಕ್ಷಣೆಗಾಗಿ ನಾಯಿಯನ್ನು ಹಿಡಿದು ಕೊಂದು ಹಾಕಿದ್ದಾರೆ. ಘಟನೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಜಾತ್ರೆಗಳಲ್ಲಿ ಬೊಂಬೆ ಮಾರಾಟ, ಕೂದಲು ಮಾರಾಟ ನೆಪದಲ್ಲಿ ಕಳ್ಳತನ! ದಂಪತಿ ಅರೆಸ್ಟ್

0

ಬೆಂಗಳೂರು: ಜಾತ್ರೆಗಳಲ್ಲಿ ಬೊಂಬೆ ಮಾರಾಟ, ಕೂದಲು ಮಾರಾಟ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ದಂಪತಿಯನ್ನು ಕೆಆರ್ ಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಗಾಯತ್ರಿ ಹಾಗೂ ಶ್ರೀಕಾಂತ್ ಎಂದು ಗುರುತಿಸಲಾಗಿದೆ.

ಜಾತ್ರೆಗಳಲ್ಲಿ ಬೊಂಬೆ ಮಾರಾಟ ಹಾಗೂ ಕೂದಲು ಖರೀದಿ ನೆಪದಲ್ಲಿ ಮಹಿಳೆಯರ ಗಮನ ಹರಿಸಿ, ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಗಳ ಕೈಯಿಂದ ಭಾರೀ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಕೆಆರ್ ಪುರದ ದೇವಸಂದ್ರ ಪ್ರದೇಶದಲ್ಲಿ ಜಾತ್ರೆ ನಡೆಯುತ್ತಿದ್ದ ವೇಳೆ, ದಂಪತಿಯೊಬ್ಬರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡಲಾಗಿದೆ. ಈ ವೇಳೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಗಳಿಂದ ಸುಮಾರು ₹60 ಲಕ್ಷ ಮೌಲ್ಯದ 398 ಗ್ರಾಂ ಚಿನ್ನಾಭರಣವನ್ನು ಕೆಆರ್ ಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಆರೋಪಿಗಳಲ್ಲಿ ಹೆಂಡತಿ ಗಾಯತ್ರಿ ಜಾತ್ರೆಗಳಲ್ಲಿ ಕೂದಲು ಹಾಗೂ ಬೊಂಬೆ ವ್ಯಾಪಾರ ಮಾಡುತ್ತಿದ್ದರೆ,

ಗಂಡ ಶ್ರೀಕಾಂತ್ ಜಾತ್ರೆಗೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದನು. ಈ ಸಂಬಂಧ ಕೆಆರ್ ಪುರ ಪೊಲೀಸರು ಇಬ್ಬರನ್ನೂ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಂದ ಇನ್ನಷ್ಟು ಕಳ್ಳತನ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಹುಚುಕನಹಳ್ಳಿ–ಸೀರಕಟಹಳ್ಳಿಯಲ್ಲಿ 1.8 ತೀವ್ರತೆಯ ಭೂಕಂಪನ: ಅಧಿಕಾರಿಗಳಿಂದ ಪರಿಶೀಲನೆ

0

ಬೀದರ್: ಬೀದರ್ ಜಿಲ್ಲೆಯ ಹುಚುಕನಹಳ್ಳಿ ಹಾಗೂ ಸೀರಕಟಹಳ್ಳಿ ಗ್ರಾಮಗಳ ಸುತ್ತಮುತ್ತ ಇಂದು ಮಧ್ಯಾಹ್ನ ಲಘು ಭೂಕಂಪನ ದಾಖಲಾಗಿದೆ. ಜನವರಿ 28ರಂದು ಮಧ್ಯಾಹ್ನ 1:34ರ ವೇಳೆಗೆ ಸಂಭವಿಸಿದ ಕಂಪನವು ರಿಕ್ಟರ್ ಮಾಪಕದಲ್ಲಿ 1.8 ತೀವ್ರತೆಯಾಗಿದೆ.

ಭೂಕಂಪದ ಕೇಂದ್ರಬಿಂದು ರಂಜೋಲಖೇಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಚುಕನಹಳ್ಳಿ ಗ್ರಾಮದ ಸುಮಾರು 1 ಕಿ.ಮೀ ವಾಯವ್ಯ ಭಾಗದಲ್ಲಿದೆ ಎಂದು ತಿಳಿದುಬಂದಿದೆ. ಕಂಪನದ ವೇಳೆ ಭೂಮಿಯಿಂದ ಶಬ್ದ ಕೇಳಿಬಂದ ಕಾರಣ ಸ್ಥಳೀಯರು ಕೆಲಕಾಲ ಆತಂಕಕ್ಕೆ ಒಳಗಾದರು.

ಘಟನೆಯ ಮಾಹಿತಿ ಪಡೆದ ಬಳಿಕ ಬೀದರ್ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ಲಘು ಭೂಕಂಪವಾಗಿರುವುದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಸಾವಿನಲ್ಲೂ ಒಂದಾದ ಸಹೋದರರು! ಅಣ್ಣನ ಅಗಲಿಕೆಯ ದುಃಖದಲ್ಲೇ ತಮ್ಮನೂ ಸಾವು

0

ಕಲಬುರಗಿ: ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಸಹೋದರರ ಸಾವಿನ ಘಟನೆ ಜನರಲ್ಲಿ ತೀವ್ರ ನೋವು ಮೂಡಿಸಿದೆ. ಗ್ರಾಮದ ಹಿರಿಯ ನಿವಾಸಿ ಬಸವಂತರಾಯ ಸಣ್ಣಕ್ (81) ಅವರು ಅನಾರೋಗ್ಯದಿಂದ ಜನವರಿ 26ರಂದು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆ ಜನವರಿ 27ರಂದು ನೆರವೇರಿತ್ತು.

ಅಣ್ಣನ ಅಗಲಿಕೆಯ ಆಘಾತಕ್ಕೆ ಒಳಗಾಗಿದ್ದ ಅವರ ತಮ್ಮ ಶಿವರಾಯ ಸಣ್ಣಕ್ (79) ಅವರು ಮಾನಸಿಕವಾಗಿ ಕುಸಿದು, ಮನೆಗೆ ಮರಳಿದ ಬಳಿಕ ಆರೋಗ್ಯ ಹದಗೆಟ್ಟು ಅದೇ ದಿನ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಅಣ್ಣ-ತಮ್ಮಂದಿರಿಬ್ಬರೂ ಸತತ ಎರಡು ದಿನಗಳಲ್ಲಿ ಅಗಲಿರುವುದರಿಂದ ಗ್ರಾಮದಲ್ಲಿ ಶೋಕಾಚರಣೆ ಮುಂದುವರಿದಿದೆ.

ಇನ್ನೊಂದೆಡೆ, ದಾವಣಗೆರೆ ತಾಲೂಕಿನ ತುರ್ಚಗಟ್ಟ ಗ್ರಾಮದಲ್ಲಿ 35 ವರ್ಷದ ಯುವಕ ರಮೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ಮಾರ್ಗಮಧ್ಯೆಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಧಾರವಾಡದಲ್ಲಿ ಮೆಡಿಕಲ್ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆ! ಕಾರಣ ನಿಗೂಢ

0

ಧಾರವಾಡ: ಮೆಡಿಕಲ್ ಪಿಜಿ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ. ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್)ಯ ಸೈಕಿಯಾಟ್ರಿಕ್ ಪಿಜಿ ವಿಭಾಗದ ಮೊದಲನೇ ವರ್ಷದ ವಿದ್ಯಾರ್ಥಿನಿ ಡಾ. ಪ್ರಜ್ಞಾ ಪಾಲೇಗರ್ (24) ಮೃತ ದುರ್ಧೈವಿಯಾಗಿದ್ದು,

ಶಿವಮೊಗ್ಗ ಮೂಲದ ಡಾ. ಪ್ರಜ್ಞಾ, ಎರಡು ವಾರಗಳ ಹಿಂದಷ್ಟೇ ಪಿಜಿ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ಬಂದಿದ್ದರು. ನಿನ್ನೆ ಅವರ ತಂದೆ–ತಾಯಿ ಭೇಟಿಗೆ ಬಂದಿದ್ದು, ಬಳಿಕ ತೆರಳಿದ್ದರು ಎನ್ನಲಾಗಿದೆ.

ಡಾ. ಪ್ರಜ್ಞಾ, ಡಾ. ಪ್ರಿಯಾ ಪಾಟೀಲ್ ಅವರೊಂದಿಗೆ ಹಾಸ್ಟೆಲ್ ರೂಮ್ ಶೇರ್ ಮಾಡಿಕೊಂಡಿದ್ದರು. ಆದರೆ ಪೋಷಕರು ಬಂದಿದ್ದ ಹಿನ್ನೆಲೆಯಲ್ಲಿ ಡಾ. ಪ್ರಿಯಾ ಆ ರಾತ್ರಿ ಹೊರಗಡೆ ಉಳಿದುಕೊಂಡಿದ್ದರು ಎಂದು ತಿಳಿದುಬಂದಿದೆ. ಈ ಕಾರಣದಿಂದ ಡಾ. ಪ್ರಜ್ಞಾ ಒಬ್ಬರೇ ರೂಮಿನಲ್ಲಿ ಇದ್ದರು.

ಬೆಳಗ್ಗೆ ಡಾ. ಪ್ರಿಯಾ ರೂಮಿಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಉಪನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವ್ಯಾಸಂಗದ ಒತ್ತಡ ಅಥವಾ ಮನಸ್ಸಿನ ಅಶಾಂತಿಯೇ ಈ ದುರ್ಘಟನೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜಮ್ಮು- ಕಾಶ್ಮೀರದ ಸೋನಾಮಾರ್ಗ್​ ರೆಸಾರ್ಟ್​ ಮೇಲೆ ಹಿಮಪಾತ! ತಪ್ಪಿದ ದುರಂತ

0

ಜಮ್ಮು ಮತ್ತು ಕಾಶ್ಮೀರ: ಕಣಿವೆ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಹಿಮಪಾತದ ನಡುವೆ, ಪ್ರವಾಸಿಗರ ಪ್ರಮುಖ ತಾಣವಾಗಿರುವ ಸೋನಾಮಾರ್ಗ್‌ನಲ್ಲಿ ಭಾರೀ ಹಿಮಪಾತ ಸಂಭವಿಸಿದೆ. ಮಧ್ಯ ಕಾಶ್ಮೀರದ ಗಂಡೇರ್ಬಲ್ ಜಿಲ್ಲೆಯ ಸೋನಾಮಾರ್ಗ್ ಪ್ರವಾಸಿ ರೆಸಾರ್ಟ್ ಮೇಲೆ ಹಿಮದ ರಾಶಿ ಪ್ರವಾಹದಂತೆ ಹರಿದು ಬಂದಿದ್ದು, ರೆಸಾರ್ಟ್ ಸಂಪೂರ್ಣವಾಗಿ ಹಿಮದ ಅಡಿಯಲ್ಲಿ ಮುಚ್ಚಿಕೊಂಡಿದೆ.

ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ರಾತ್ರಿ 10.12ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ರೆಸಾರ್ಟ್ ಹಾಗೂ ಸುತ್ತಮುತ್ತಲಿನ ಕಟ್ಟಡಗಳು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿದ್ದು,

ಬೃಹತ್ ಹಿಮಪಾತದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ವಿಡಿಯೋಗಳಲ್ಲಿ ಕಟ್ಟಡಗಳ ಮೇಲೆ ಹಿಮದ ರಾಶಿ ಹರಿದುಬರುತ್ತಿರುವುದು ಸ್ಪಷ್ಟವಾಗಿ ಕಾಣಿಸಿದೆ. ಈ ಹಿಮಪಾತದಲ್ಲಿ ಯಾವುದೇ ಜೀವಹಾನಿ ವರದಿಯಾಗಿಲ್ಲ. ಆದರೆ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹಾಗೂ ಅಪಾಯಕಾರಿ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಸೋನಾಮಾರ್ಗ್ ಸೇರಿದಂತೆ ಕಣಿವೆಯ ಹಲವಾರು ಭಾಗಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಮಧ್ಯಮದಿಂದ ಭಾರಿ ಹಿಮ ಬೀಳುತ್ತಿದೆ. ಇದಕ್ಕೆ ಜೊತೆಗೆ, ರಾಜ್ಯದಲ್ಲಿ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಉತ್ತರಾಖಂಡದ ಬದರಿನಾಥ್, ಕೇದಾರನಾಥ ಸೇರಿದಂತೆ ಹಲವು ಎತ್ತರದ ಪ್ರದೇಶಗಳಲ್ಲಿ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಂದು ವಾರದೊಳಗೆ ಇದು ರಾಜ್ಯದಲ್ಲಿ ಸಂಭವಿಸಿರುವ ಎರಡನೇ ಹಿಮಪಾತವಾಗಿದೆ. ಇದಕ್ಕೂ ಮುನ್ನ ಜನವರಿ 23ರಂದು ಸಂಭವಿಸಿದ್ದ ಭಾರಿ ಹಿಮಪಾತವು ಎತ್ತರದ ಪ್ರದೇಶಗಳನ್ನು ಆವರಿಸಿತ್ತು. ಈ ಹಿನ್ನೆಲೆ, ಹಿಮಪಾತದ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಎಲ್ಲಾ ಜಿಲ್ಲೆಗಳಿಗೆ ಎಚ್ಚರಿಕೆ ರವಾನಿಸಿದೆ.

error: Content is protected !!