Home Blog Page 110

ಪಾಸ್‌ಪೋರ್ಟ್ ವೆರಿಫಿಕೇಶನ್: ಹೊಸ ನಿಯಮಗಳು ಜಾರಿ!

0

ಬೆಂಗಳೂರು: ಡಿಜಿ ಮತ್ತು ಐಜಿಪಿ ಸೂಚನೆಯಂತೆ, ಸಿಲಿಕಾನ್ ಸಿಟಿಯಲ್ಲಿ ಪಾಸ್‌ಪೋರ್ಟ್ ವೆರಿಫಿಕೇಶನ್‌ಗೆ ಹೊಸ ನಿಯಮಗಳು ಜಾರಿಗೆ ಬಂದಿವೆ.

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಈ ಮಾರ್ಗಸೂಚಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗಿನಿಂದ ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ವೋನ್ ಕ್ಯಾಮೆರಾ ಕಡ್ಡಾಯವಾಗಿದ್ದು, ಅರ್ಜಿದಾರರನ್ನು ಪೊಲೀಸ್ ಠಾಣೆಗೆ ಕರೆಸಬಾರದು. ಬದಲಾಗಿ, ಅಧಿಕಾರಿಗಳು ಅರ್ಜಿದಾರರ ವಿಳಾಸಕ್ಕೆ ಭೇಟಿ ನೀಡಿ, ನೆರೆಹೊರೆಯವರಿಂದ ಮಾಹಿತಿ ಸಂಗ್ರಹಿಸಬೇಕು.

ಅರ್ಜಿ ನೀಡುವ ಕನಿಷ್ಠ 24 ಗಂಟೆ ಮೊದಲು ಅರ್ಜಿದಾರರಿಗೆ ಎಸ್‌ಎಂಎಸ್ ಅಥವಾ ಕರೆ ಮೂಲಕ ಮಾಹಿತಿ ನೀಡಬೇಕು. ಅಧಿಕಾರಿಗಳು ಅರ್ಜಿದಾರರಿಂದ ಯಾವುದೇ ರೀತಿಯ ಲಂಚ ಅಥವಾ ಆಮಿಷ ನಿರೀಕ್ಷಿಸಬಾರದು. ಅರ್ಜಿದಾರರನ್ನು ಅಲೆದಾಡಿಸುವುದು ಅಥವಾ ವರದಿ ನೀಡಲು ವಿಳಂಬ ಮಾಡುವುದು ಮಾಡಬಾರದು. ಪ್ರತಿಕೂಲ ವರದಿ ಸಲ್ಲಿಸುವಾಗ, ಅಧಿಕಾರಿಗಳು ಸ್ಪಷ್ಟ ಮತ್ತು ಸೂಕ್ತ ಪುರಾವೆಗಳನ್ನು ಹೊಂದಿರಬೇಕು.

ನಿಯಮ ಪಾಲನೆಯ ಮೇಲೆ ವಾರಕ್ಕೆ ಒಂದು ಬಾರಿ ಡಿಸಿಪಿ ವರದಿ ಪರಿಶೀಲಿಸುತ್ತಾರೆ. ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ.

 

ಕಲ್ಲು ಹೊಡೆಯಬೇಡಿ, ಓಡಿಸಬೇಡಿ; ಬೀದಿ ನಾಯಿಗಳ ಪರ ಧ್ವನಿ ಎತ್ತಿದ ಸುಧಾ ಮೂರ್ತಿ!

0

ಬೆಂಗಳೂರು: ಸಿಲಿಕಾನ್ ಸಿಟಿಯಾದ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಅವುಗಳ ಮೇಲಿನ ದೌರ್ಜನ್ಯದ ಸುದ್ದಿಗಳು ಆಗಾಗ ಕೇಳಿಬರುತ್ತಿವೆ. ಇಂತಹ ಸಂದರ್ಭದಲ್ಲಿ, ಇನ್ಫೋಸಿಸ್ ಫೌಂಡೇಶನ್‌ನ ಮಾರ್ಗದರ್ಶಕಿ ಸುಧಾ ಮೂರ್ತಿ ಅವರು ಮೂಕ ಪ್ರಾಣಿಗಳ ಪರವಾಗಿ ಧ್ವನಿ ಎತ್ತಿದ್ದಾರೆ. ಅವರು ನಗರ ಜನರಿಗೆ ಬೀದಿ ನಾಯಿಗಳ ಬಗ್ಗೆ ದಯೆ ಮತ್ತು ಮಾನವೀಯತೆ ತೋರಲು ಮನವಿ ಮಾಡಿದ್ದಾರೆ.

ಬೆಂಗಳೂರು ಕಾರ್ಯಕ್ರಮದಲ್ಲಿ ಮಾತನಾಡಿದ ಸುಧಾ ಮೂರ್ತಿಯವರು, “ನನ್ನ ಮನೆಯ ಬಳಿಯೂ ಹಲವು ಬೀದಿ ನಾಯಿಗಳಿವೆ. ಅವುಗಳಿಗೆ ನಾವು ನೀಡುವ ಒಂದು ತುತ್ತು ಅನ್ನಕ್ಕಿಂತ ಹೆಚ್ಚಾಗಿ, ನಾವು ತೋರುವ ಒಂದು ಸಣ್ಣ ಪ್ರೀತಿಯ ಸ್ಪರ್ಶ ಅಥವಾ ಕರುಣೆಯ ನೋಟ ಮುಖ್ಯ. ಪ್ರಾಣಿಗಳು ಭಾಷೆಯನ್ನು ಅರ್ಥ ಮಾಡಿಕೊಳ್ಳಲಾರವು, ಆದರೆ ಅವುಗಳಿಗೆ ಪ್ರೀತಿಯ ಭಾಷೆ ಚೆನ್ನಾಗಿ ಗೊತ್ತು,” ಎಂದು ಭಾವುಕರಾಗಿ ಹೇಳಿದರು.

ಬೀದಿ ನಾಯಿಗಳನ್ನು ಕಂಡಾಗ ಕಲ್ಲು ಹೊಡೆಯುವುದು ಅಥವಾ ಓಡಿಸುವುದು ಮಾಡಬೇಡಿ. ಅವುಗಳೂ ಈ ಸಮಾಜದ ಭಾಗವೆಂದು ನಾವು ಮರೆಯಬಾರದು. ನಗರದ ಬೆಳವಣಿಗೆಯ ನಡುವೆ ನಾವು ಅವುಗಳ ಆವಾಸಸ್ಥಾನಗಳನ್ನು ಕಿತ್ತುಕೊಂಡಿದ್ದೇವೆ, ಹೀಗಾಗಿ ಅವುಗಳಿಗೆ ಆಸರೆ ನೀಡುವುದು ನಮ್ಮ ಜವಾಬ್ದಾರಿ. ನಿಮ್ಮ ಮನೆಯ ಮುಂದೆ ಬರುವ ನಾಯಿಗಳಿಗೆ ಸ್ವಲ್ಪ ನೀರು ಅಥವಾ ಆಹಾರ ನೀಡಿ; ಅವು ನಮಗಿಂತ ಹೆಚ್ಚು ನಿಷ್ಠೆಯನ್ನು ತೋರಿಸುತ್ತವೆ ಎಂದು ಮನವಿ ಮಾಡಿದ್ದಾರೆ.

ಸುಧಾ ಮೂರ್ತಿಯವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಅನೇಕ ಬೆಂಗಳೂರಿಗರು ತಮ್ಮ ಮನೆಯ ಬಳಿಯ ಬೀದಿ ನಾಯಿಗಳ ಜೊತೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

 

ಕರ್ನಾಟಕದಲ್ಲಿ ವಾಯು ಗುಣಮಟ್ಟ ಕಳಪೆ; ಬೆಂಗಳೂರು, ಮಂಗಳೂರು, ಉಡುಪಿಯ ಜನರಿಗೆ ಆತಂಕ

0

ಬೆಂಗಳೂರು: ಬೆಂಗಳೂರು, ಮಂಗಳೂರು ಮತ್ತು ಉಡುಪಿಯ ವಾಯು ಗುಣಮಟ್ಟ ಈಗ ಕಳಪೆ ಮಟ್ಟಕ್ಕೆ ತಲುಪಿದ್ದು, ಸ್ಥಳೀಯರಲ್ಲಿ ಆತಂಕ ಉಂಟುಮಾಡುತ್ತಿದೆ.

ಕಳೆದ ಕೆಲ ದಿನಗಳಿಂದ ಈ ನಗರಗಳ ಗಾಳಿಯ ಮಟ್ಟದಲ್ಲಿ ನಿರಂತರ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಏರ್ ಕ್ವಾಲಿಟಿ ಸೂಚ್ಯಂಕ ಇಂದು 168 ರಷ್ಟು ದಾಖಲಾಗಿದ್ದು, WHO ಮಾನದಂಡಗಳ ಪ್ರಕಾರ ಇದು ಅನಾರೋಗ್ಯಕರ ಮಟ್ಟಕ್ಕೆ ಸೇರಿದೆ. ಇಂತಹ ಮಟ್ಟದ ಗಾಳಿ ಉಸಿರಾಟದ ಸಮಸ್ಯೆ, ಕಫ, ಜ್ವರ, ತೀವ್ರ ಪ್ರಕರಣಗಳಲ್ಲಿ ಹೃದಯ ಸಂಬಂಧಿ ತೊಂದರೆಗಳಿಗೆ ಕಾರಣವಾಗಬಹುದು.

ಉಡುಪಿಯ ಗಾಳಿ ಇನ್ನೂ ಹೆಚ್ಚಿನ ಮಟ್ಟಕ್ಕೆ ಏರಿಕೆ ಕಂಡು, ಇಂದು 200 ರ ಗಡಿಯನ್ನು ತಲುಪಿದ್ದು, ಇದು ಗಂಭೀರ ಆರೋಗ್ಯ ಹಾನಿ ಸೂಚಿಸುತ್ತದೆ. ಇವು ನಗರಸ್ಥರಿಗೆ ಮತ್ತು ವಿಶೇಷವಾಗಿ ಹೃದಯ ಹಾಗೂ ಉಸಿರಾಟ ಸಂಬಂಧಿ ಸಮಸ್ಯೆ ಹೊಂದಿರುವವರಿಗೆ ಹೆಚ್ಚು ಅಪಾಯಕಾರಿ. ಮಂಗಳೂರು, ಮೈಸೂರು, ಕಲಬುರ್ಗಿ, ವಿಜಯಪುರ ಮತ್ತು ಬೇರೆ ಕೆಲ ನಗರಗಳಲ್ಲಿಯೂ ಗಾಳಿ ಕಳಪೆ ಅಥವಾ ಅನಾರೋಗ್ಯಕರ ಮಟ್ಟಕ್ಕೆ ಏರಿಕೆಯಾಗಿದೆ. ದಿನದಿಂದ ದಿನಕ್ಕೆ ಗಾಳಿ ಮಾಲಿನ್ಯ ಹೆಚ್ಚುತ್ತಿರುವುದು, ಪ್ಲಾಸ್ಟಿಕ್ ಸುಟ್ಟು, ವಾಹನಗಳಿಂದ ಹೊರಹೊಮ್ಮುವ ಧೂಳು, ಕಾರ್ಖಾನೆಗಳಿಂದ ಹೊರಬರುವ ವಾಯು ಮಾಲಿನ್ಯಗಳು ಮುಖ್ಯ ಕಾರಣಗಳು ಎಂದು ವಾಯು ಗುಣಮಟ್ಟ ತಜ್ಞರು ಹೇಳಿದ್ದಾರೆ.

ಸ್ಥಳೀಯರು ಹೊರಗೆ ಹೆಚ್ಚು ಸಮಯ ಕಳೆದರೆ ಎಚ್ಚರಿಕೆ ವಹಿಸಲು ಸಲಹೆ ನೀಡಲಾಗಿದೆ. ಜನರು ಹೆಚ್ಚು ಫುಟ್ಬಾಲ್, ಓಟ ಅಥವಾ ಹೊರಗಡೆ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಕು, ಮತ್ತು ಮನೆಯಲ್ಲಿ ವಾತಾವರಣವನ್ನು ಶುದ್ಧವಾಗಿಟ್ಟುಕೊಳ್ಳಲು ಫಿಲ್ಟರ್ ಅಥವಾ ಪೌರಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಮಕ್ಕಳ, ವೃದ್ಧರ ಮತ್ತು ಆರೋಗ್ಯ ಸಮಸ್ಯೆ ಹೊಂದಿರುವವರಿಗಾಗಿ, ಮಾಸ್ಕ್ ಧರಿಸುವುದು ಮತ್ತು ಗಾಳಿಯ ಅನುಸರಣೆ ಮಾಡುವ ಮೊಬೈಲ್ ಅಥವಾ ವೆಬ್ ತಂತ್ರಜ್ಞಾನಗಳನ್ನು ಬಳಸುವುದು ಸೂಕ್ತ.

ಈಗಿನ ಪರಿಸ್ಥಿತಿಯಲ್ಲಿ, ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳು ಗಾಳಿಯ ಗುಣಮಟ್ಟ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿರುವರೂ, ಜನರ ಸಹಭಾಗಿತ್ವ ಮತ್ತು ಎಚ್ಚರಿಕೆ ಬಹಳ ಮುಖ್ಯ. ಗಾಳಿ ಮಾಲಿನ್ಯ ಕಡಿಮೆಯಾಗಲು ವಾಹನ ಸಂಚಾರ ನಿಯಂತ್ರಣ, ಕಾರ್ಖಾನೆ ನಿಯಮ ಪಾಲನೆ ಮತ್ತು ಸಾರ್ವಜನಿಕ ಜಾಗಗಳಲ್ಲಿ ಧೂಳಿನ ನಿಯಂತ್ರಣ ಪ್ರಮುಖವಾಗಿದೆ. ಜನರು ತಮಗೆಲ್ಲಾ ತಕ್ಕ ಎಚ್ಚರಿಕೆ ವಹಿಸಿದರೆ, ಆರೋಗ್ಯ ಹಾನಿಯನ್ನು ತಡೆಯಬಹುದು ಮತ್ತು ಹೊರಗಡೆ ಸುರಕ್ಷಿತವಾಗಿ ಸಾಗಬಹುದು.

 

ಗರ್ಭಪಾತದ ನಂತರ ಸುರಕ್ಷಿತ ಆರೈಕೆ ಅಗತ್ಯ; ಮಹಿಳೆಯರು ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!

0

ಗರ್ಭಪಾತದ ನಂತರ, ಮಹಿಳೆಯ ದೇಹದಲ್ಲಿ ಹಲವಾರು ಬದಲಾವಣೆಗಳು ಸಂಭವಿಸುತ್ತವೆ. ಗರ್ಭಾಶಯ ತನ್ನ ಸಾಮಾನ್ಯ ಸ್ಥಿತಿಗೆ ಮರಳಲು ಮತ್ತು ದೇಹ ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಈ ಅವಧಿಯಲ್ಲಿ ಸರಿಯಾದ ಆರೈಕೆಯಿಲ್ಲದಿದ್ದರೆ, ಸೋಂಕು, ಅತಿಯಾದ ರಕ್ತಸ್ರಾವ, ದೌರ್ಬಲ್ಯ ಮತ್ತು ಇತರ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ.

ಡಾ. ಸಲೋನಿ ಚಡ್ಡಾ – ಆರ್‌ಎಂಎಲ್ ಆಸ್ಪತ್ರೆ ತಿಳಿಸುವಂತೆ:

  • ಗರ್ಭಪಾತದ ನಂತರ ಹೆಚ್ಚು ಶ್ರಮ ಅಥವಾ ಭಾರವಾದ ದೈಹಿಕ ಕೆಲಸ ಮಾಡಬಾರದು. ದೈಹಿಕ ಪರಿಶ್ರಮ ರಕ್ತಸ್ರಾವವನ್ನು ಹೆಚ್ಚಿಸುತ್ತದೆ ಮತ್ತು ಚೇತರಿಕೆಯನ್ನು ನಿಧಾನಗೊಳಿಸುತ್ತದೆ.
  • ವೈದ್ಯರ ಸಲಹೆಯಿಲ್ಲದೆ ಔಷಧಿಗಳನ್ನು ತೆಗೆದುಕೊಳ್ಳಬಾರದು. ನಿಗದಿತ ಔಷಧಿ ಕೋರ್ಸ್ ಅನ್ನು ಪೂರ್ಣಗೊಳಿಸದಿರುವುದೂ ಹಾನಿಕಾರಕವಾಗಿದೆ.
  • ನೋವು, ಸೌಮ್ಯ ಜ್ವರ ಅಥವಾ ಅಸಹಜ ರಕ್ತಸ್ರಾವವನ್ನು ಸಾಮಾನ್ಯವೆಂದು ನಿರ್ಲಕ್ಷಿಸಬಾರದು. ಇವು ವೈದ್ಯರ ತಕ್ಷಣದ ಪರಿಶೀಲನೆಗೆ ಕಾರಣವಾಗಬಹುದು.
  • ಶುಚಿತ್ವದಲ್ಲಿ ನಿರ್ಲಕ್ಷ್ಯ ಮಾಡಬಾರದು. ಹಳೆಯ ಅಥವಾ ಒದ್ದೆಯಾದ ಬಟ್ಟೆಗಳನ್ನು ಧರಿಸುವುದರಿಂದ ಸೋಂಕುಗಳ ಸಾಧ್ಯತೆ ಹೆಚ್ಚುತ್ತದೆ.
  • ಸೂಚಿಸಲಾದ ವಿಶ್ರಾಂತಿ ಅವಧಿಯನ್ನು ತಪ್ಪಿಸಬಾರದು. ತಪಾಸಣೆಗಳನ್ನು ನಿರ್ಲಕ್ಷಿಸಬಾರದು.
  • ಮಾನಸಿಕ ಒತ್ತಡವನ್ನು ನಿರ್ಲಕ್ಷಿಸಬಾರದು. ಭಾವನಾತ್ಮಕ ಬೆಂಬಲವನ್ನು ಪಡೆಯುವುದು ಚೇತರಿಕೆಗೆ ಸಹಾಯಕ.

ಆಹಾರ ಮತ್ತು ಜೀವನಶೈಲಿ:

  • ಹಸಿರು ತರಕಾರಿ, ಹಣ್ಣು, ಬೇಳೆ, ಹಾಲು, ಮೊಸರು ಮುಂತಾದ ಪೌಷ್ಟಿಕ ಮತ್ತು ಸಮತೋಲಿತ ಆಹಾರ ಸೇವಿಸಬೇಕು. ಇವು ಕಬ್ಬಿಣ, ಪ್ರೋಟೀನ್ ಮತ್ತು ವಿಟಮಿನ್‌ಗಳಲ್ಲಿ ಸಮೃದ್ಧವಾಗಿವೆ ಮತ್ತು ದೇಹವನ್ನು ಬಲಪಡಿಸುತ್ತವೆ.
  • ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು.
  • ಜಂಕ್ ಫುಡ್, ಹೆಚ್ಚು ಎಣ್ಣೆ, ಮಸಾಲೆ, ಆಲ್ಕೋಹಾಲ್, ಧೂಮಪಾನ ಮತ್ತು ಅತಿಯಾದ ಕಾಫಿ ಸೇವನೆಯು ಚೇತರಿಕೆಯನ್ನು ನಿಧಾನಗೊಳಿಸುತ್ತವೆ; ಇವನ್ನು ತಪ್ಪಿಸಬೇಕು.

ಸರಿಯಾದ ಆರೈಕೆಯಿಂದ ದೇಹ ಬೇಗ ಗುಣಮುಖವಾಗುತ್ತದೆ, ಭವಿಷ್ಯದ ಆರೋಗ್ಯ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ ಮತ್ತು ಮಹಿಳೆಯ ಶಾರೀರಿಕ ಮತ್ತು ಮಾನಸಿಕ ಕ್ಷೇಮ ಸಾಧನೆ ಸುಗಮವಾಗುತ್ತದೆ.

 

ಹಬ್ಬದಲ್ಲಿ ರಾಸಾಯನಿಕ ಬಣ್ಣ ಬಳಸದಿರಿ: ಸಿಪಿಐ ಬಿ.ವ್ಹಿ. ನ್ಯಾಮಗೌಡ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಸೇರಿ ತಾಲೂಕಿನಾದ್ಯಂತ ನಡೆಯಲಿರುವ ಹೋಳಿ ಹಬ್ಬವನ್ನು ಎಲ್ಲರೂ ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಬಿ.ವ್ಹಿ. ನ್ಯಾಮಗೌಡ ಹೇಳಿದರು.

ಅವರು ಗುರುವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡುತ್ತಿದ್ದರು.

ಹಬ್ಬಗಳು ನಾಡಿನ ಸಂಪ್ರದಾಯದ ಪ್ರತೀಕ ಮತ್ತು ಪರಸ್ಪರರಲ್ಲಿ ಸ್ನೇಹ, ಸೌಹಾರ್ದತೆ ಬೆಸೆಯುವ ಕೊಂಡಿಯಾಗಿವೆ. ಹಬ್ಬದ ಸಂದರ್ಭದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ರಾಸಾಯನಿಕಯುಕ್ತ ಬಣ್ಣ ಬಳಸಬಾರದು. ಮುಂಜಾಗೃತ ಕ್ರಮವಾಗಿ ಸೂಕ್ತ ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಹಿತಕರ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಬ್ಬದ ದಿನ ಬೇಕಾಬಿಟ್ಟಿ ವರ್ತನೆಯಿಂದ ಸಾಮಾಜಿಕ ಶಾಂತಿಗೆ ಭಂಗವನ್ನುಂಟುಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಬ್ಬದ ಸಮಯದಲ್ಲಿ ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ಪರೀಕ್ಷಾರ್ಥಿಗಳಿಗೆ ತೊಂದರೆಯಾಗದಂತೆ ಹಬ್ಬ ಆಚರಣೆ ಮಾಡಬೇಕು ಎಂದು ಹೇಳಿದರು.

ಪಿಎಸ್‌ಐ ನಾಗರಾಜ ಗಡದ ಮಾತನಾಡಿ, ಹಬ್ಬದಲ್ಲಿ ರಾಸಾಯನಿಕ ಮಿಶ್ರಿತ ಬಣ್ಣವನ್ನು ಬಳಸಬೇಡಿ, ಹಬ್ಬದ ದಿನ ಬೈಕ್‌ಗಳ ಕರ್ಕಶ ಶಬ್ದ ಹಾಗೂ ಟ್ರ್ಯಾಕ್ಟರ್‌ನಲ್ಲಿ ಅಬ್ಬರದ ಸೌಂಡ್ ಮೂಲಕ ಸಾರ್ವಜನಿಕರಿಗೆ, ವಿದ್ಯಾರ್ಥಿಗಳ ಓದಿಗೆ ತೊಂದರೆ ಮಾಡಬೇಡಿ. ಕಳೆದ ಬಾರಿ ವಿದ್ಯಾರ್ಥಿನಿಯರು ಇರುವ ಬಸ್‌ನಲ್ಲಿ ಬಣ್ಣ ಎರಚಿ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿತ್ತು. ಅಂತಹ ಘಟನೆಗಳು ನಡೆಯದಂತೆ ನಿಗಾವಹಿಸುತ್ತೇವೆ. ಹೋಳಿ ಹಬ್ಬವನ್ನು ಸಹೋದರತ್ವ ಭಾವನೆಯಿಂದ ಶಾಂತಿಯುತ ಮತ್ತು ಅರ್ಥಪೂರ್ಣವಾಗಿ ಆಚರಿಸಿ ಎಂದರು.

ಹಿರಿಯರಾದ ಪಿ.ಬಿ. ಖರಾಟೆ, ಗಂಗಾಧರ ಮೆಣಸಿನಕಾಯಿ ಮಾತನಾಡಿ, ಸ್ನೇಹ ಸೌಹಾರ್ದತೆ ಮತ್ತು ಧಾರ್ಮಿಕ ಬಾಂಧವ್ಯ ವೃದ್ಧಿಸುವ ಪವಿತ್ರ ಹೋಳಿ ಹಬ್ಬಕ್ಕೆ ಸಾಂಪ್ರದಾಯಿಕ, ವೈಜ್ಞಾನಿಕ ಹಿನ್ನೆಲೆಯಿದ್ದು, ಅವುಗಳನ್ನು ಮುಂದಿನ ಸಮಾಜಕ್ಕೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲರದ್ದಾಗಿದೆ. ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಪೊಲೀಸ್ ಮತ್ತು ಪುರಸಭೆ ಜಂಟಿ ಕಾರ್ಯಾಚರಣೆ ಮೂಲಕ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಈ ವೇಳೆ ಶಿವಣ್ಣ ಕಟಗಿ, ಮಾಬುಸಾಬ ಮುಳುಗುಂದ, ಶರಣು ಗೋಡಿ, ನವೀನ ಹಿರೇಮಠ, ವಿಜಯ ಕುಂಬಾರ, ಹಾಲಪ್ಪ ಸೂರಣಗಿ, ಮಂಜುನಾಥ ಶೆರಸೂರಿ, ಮಲ್ಲೇಶಪ್ಪ ಬಸಾಪುರ, ದಾವೂದಖಾನ ಕಾರಡಗಿ, ಯೂನುಷ್ ಚೌರಿ, ಗೋಪಿ ಪಾಣಿಗಟ್ಟಿ, ಮುತ್ತು ಪಾಣಿಗಟ್ಟಿ, ಭರಮಗೌಡ ಪಾಣಿಗಟ್ಟಿ, ಮಂಜುನಾಥ ಕೊಡಳ್ಳಿ, ಫಕ್ಕೀರೇಶ ಅಣ್ಣಿಗೇರಿ, ಬಸಣ್ಣ ಬೆಂಗಳೂರು, ಜಗದೀಶ ಕೋಲಕಾರ, ಶೇಖಣ್ಣ ಹಂಜಗಿ, ಹಿಂದೂ-ಮುಸ್ಲಿಂ ಬಾಂಧವರು ಇದ್ದರು.

ಮಾ.3ರಂದು ಎಲ್ಲೆಡೆ ಕಾಮರತಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಕೆಲ ಗ್ರಾಮಗಳಲ್ಲಿ ಬಣ್ಣದೋಕುಳಿ ನಡೆಯಲಿದೆ. ಮಾ. 4ರಂದು ತಾಲೂಕಿನ ಗ್ರಾಮೀಣ ಭಾಗದಲ್ಲಿ ಮತ್ತು ಮಾ. 7ರಂದು ಲಕ್ಷ್ಮೇಶ್ವರದಲ್ಲಿ ರಂಗ ಪಂಚಮಿ ನಡೆಯಲಿದೆ. ಇತ್ತೀಚೆಗಷ್ಟೇ ಗ್ರಾಮದೇವಿ ಜಾತ್ರೆ ನಡೆದ ಹಿನ್ನೆಲೆಯಲ್ಲಿ ಈ ವರ್ಷ ಶಿಗ್ಲಿಯಲ್ಲಿ ರಂಗಿನೋಕುಳಿ ಆಡದಿರಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ.

ಪ್ರಜ್ವಲ್ ರಿತ್ತಿಗೆ ನಿವೇಶನ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ತನ್ನ ಮನೆ ನಿರ್ಮಾಣದ ಸಂದರ್ಭದಲ್ಲಿ ಚಿನ್ನಾಭರಣಗಳ ನಿಧಿ ಸಿಕ್ಕಿದ್ದನ್ನು ಸರ್ಕಾರಕ್ಕೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಬಾಲಕ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಗುರುವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿವೇಶನವನ್ನು ವಿತರಿಸಿದರು.

ಈ ಕುರಿತು ಮಾಹಿತಿ ನೀಡಿದ ಅಭಿವೃದ್ಧಿ ಅಧಿಕಾರಿ ಅಮೀರನಾಯಕ, ಮಾರುತಿ ನಗರದ 7 ಎಕರೆ ಕ್ಷೇತ್ರದಲ್ಲಿಯ 274/4ರ ಸರ್ವೇಯಲ್ಲಿ ನಿವೇಶನವನ್ನು ವಿತರಿಸಲಾಗಿದ್ದು, ಸ್ಥಳದಲ್ಲಿ ಜಿ.ಪಿ.ಎಸ್ ಭಾವಚಿತ್ರವನ್ನು ತೆಗೆಯಲಾಗಿದೆ ಎಂದು ತಿಳಿಸಿದರು.


ಮಂತ್ರಾಲಯ ದರ್ಶನ ಮುಗಿಸಿ ವಾಪಸಾಗುತ್ತಿದ್ದ ವೇಳೆ ದುರಂತ – ಚಳ್ಳಕೆರೆಯಲ್ಲಿ ಕಾರು-ಲಾರಿ ಡಿಕ್ಕಿ, ಮೂವರು ಸಾವು

0

ಚಿತ್ರದುರ್ಗ: ಮಂತ್ರಾಲಯದಲ್ಲಿ ರಾಘವೇಂದ್ರಸ್ವಾಮಿ ದರ್ಶನ ಮುಗಿಸಿ ವಾಪಸಾಗುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ನಡೆದಿದೆ.

ಹಿರೆಹಳ್ಳಿ ಟೋಲ್ ಸಮೀಪ ಕಾರು ಹಾಗೂ ಲಾರಿಯ ನಡುವೆ ಭಾರೀ ಡಿಕ್ಕಿ ಸಂಭವಿಸಿದೆ. ಮಂತ್ರಾಲಯದಿಂದ ತಿಪಟೂರು ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ.

ಈ ಅಪಘಾತ ಚಳ್ಳಕೆರೆ ವ್ಯಾಪ್ತಿಯ ತಳಕು ಪೊಲೀಸ್ ಠಾಣೆ ಹದ್ದಿನಲ್ಲಿ ನಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಅಪಘಾತದ ಶಬ್ದ ಕೇಳಿ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ಮುಂದಾದರು. ಬಳಿಕ ತಳಕು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತರ ಗುರುತು ಹಾಗೂ ಹೆಚ್ಚಿನ ವಿವರಗಳನ್ನು ಸಂಗ್ರಹಿಸುವ ಕಾರ್ಯ ಮುಂದುವರೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಈ ದುರ್ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಪತ್ರಿಕೋದ್ಯಮಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರ: ಕೆ. ವಿ. ಪ್ರಭಾಕರ್

0

ಗದಗ: ಗದಗ ಜಿಲ್ಲೆ ಕಲೆ, ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು ಹೊಂದಿದ್ದು, ಪತ್ರಿಕೋದ್ಯಮಕ್ಕೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್ ಅಭಿಪ್ರಾಯಪಟ್ಟರು.

ನಗರದ ಹಾತಲಗೇರಿ ರಸ್ತೆಯಲ್ಲಿರುವ ರತ್ನಾಕರವಾಣಿ ಕನ್ನಡ ದಿನಪತ್ರಿಕೆ ಕಾರ್ಯಾಲಯಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ಅವ್ವ ದತ್ತಿ ನಿಧಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಅಂಗವಾಗಿ ಗದಗ ನಗರಕ್ಕೆ ಆಗಮಿಸಿರುವುದಾಗಿ ತಿಳಿಸಿದರು. ಗದಗ ಐತಿಹಾಸಿಕ ತಾಣವಾಗಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಿಲ್ಲೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತರ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಸಮಾಜ ಸುಧಾರಣೆಯಲ್ಲಿ ಮಾಧ್ಯಮದ ಪಾತ್ರವನ್ನು ಅವರು ಸಮಗ್ರವಾಗಿ ಅರಿತುಕೊಂಡಿದ್ದು, ಆ ನಿಟ್ಟಿನಲ್ಲಿ ಪತ್ರಕರ್ತರಿಗೆ ಅಗತ್ಯ ಗೌರವ ನೀಡುತ್ತಿದ್ದಾರೆ ಎಂದು ಹೇಳಿದರು.

ಮಾಧ್ಯಮ ಸಲಹೆಗಾರನಾಗಿ ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಸರ್ಕಾರ ಹೆಚ್ಚಿನ ಮಹತ್ವ ನೀಡಿದ್ದು, ಯಾವುದೇ ಕಾರಣಕ್ಕೂ ಜಿಲ್ಲಾ ಪತ್ರಿಕೆಗಳ ಜಾಹೀರಾತು ಕಡಿತವಾಗಬಾರದೆಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಯೋಜನೆ ಜಾರಿಗೆ ತಂದಿದ್ದು, ವಿಶೇಷ ಆರೋಗ್ಯ ಯೋಜನೆ ಕುರಿತು ಚರ್ಚೆ ನಡೆಯುತ್ತಿದೆ. ಸರ್ಕಾರ ಸದಾ ಪತ್ರಿಕೆಗಳ ಬೆಂಬಲಕ್ಕೆ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಹಿರಿಯರಿಂದ ಅಭಿನಂದನೆ

ಹಿರಿಯ ವರದಿಗಾರ ಅನಂತ್ ಕಾರ್ಕಳ ಮಾತನಾಡಿ, “ಕೆ. ವಿ. ಪ್ರಭಾಕರ್ ಅವರು ಮಾಧ್ಯಮ ಸಲಹೆಗಾರರಾದ ಬಳಿಕ ಮಾಧ್ಯಮ ಹಾಗೂ ಪತ್ರಿಕೆಗಳ ಸಮಸ್ಯೆಗಳ ಕುರಿತು ಸಮಗ್ರ ಅಧ್ಯಯನ ನಡೆಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕೆ ಸ್ಪಂದಿಸುವಂತೆ ಮಾಡಿದ್ದಾರೆ. ಅವರ ಕಾರ್ಯ ಶ್ಲಾಘನೀಯ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿಂಗಪ್ಪ ಚವಡಿ, ಎಚ್. ಎಂ. ಶರೀಫನವರ್, ರಾಮಕೃಷ್ಣ ರೊಳ್ಳಿ, ಶರಣು ದೊಡ್ಡೂರ, ಪ್ರಕಾಶ್ ಕರಿ, ಸಂಜೀವ್ ಪಾಂಡ್ರೆ, ಗಣೇಶ್ ಪೈ, ರಮೇಶ್ ಭಜಂತ್ರಿ, ದೇವಪ್ಪ ಲಿಂಗದಾಳ, ಗಿರೀಶ್ ಕಮ್ಮಾರ್, ವಿನಯ್ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಕೆ. ವಿ. ಪ್ರಭಾಕರ್ ಅವರು ಮಾಧ್ಯಮ ಸಲಹೆಗಾರರಾದ ನಂತರ ಸರ್ಕಾರ ಮತ್ತು ಮಾಧ್ಯಮದ ನಡುವೆ ಸಮನ್ವಯ ಹೆಚ್ಚಾಗಿದೆ. ಮಾಧ್ಯಮ ಕ್ಷೇತ್ರಕ್ಕೆ ಅವರದೇ ಆದ ವಿಶೇಷ ಕೊಡುಗೆ ಇದೆ. ರತ್ನಾಕರವಾಣಿ ಕನ್ನಡ ದಿನಪತ್ರಿಕೆ ಕಾರ್ಯಾಲಯಕ್ಕೆ ಆಗಮಿಸಿ ಶುಭ ಹಾರೈಸಿರುವುದು ಸಂತಸ ತಂದಿದೆ.”

— ಜಗದೀಶ್ ಎಸ್. ಪಿ.
ಸಂಪಾದಕರು, ರತ್ನಾಕರವಾಣಿ ಕನ್ನಡ ದಿನಪತ್ರಿಕೆ

ಕುಡಿಯುವ ನೀರಿಲ್ಲದೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ!

0

ವಿಜಯಸಾಕ್ಷಿ ಸುದ್ದಿ, ಕೊಟ್ಟೂರು: ತಾಲೂಕು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲದೆ ಪ್ರಯಾಣಿಕರು ದಿನನಿತ್ಯ ತೊಂದರೆ ಅನುಭವಿಸುವಂತಾಗಿದೆ. ಈ ನಿರ್ಲಕ್ಷ್ಯದಿಂದ ಬೇಸತ್ತು ಸಾರ್ವಜನಿಕರು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸರ್ಕಾರಿ ಬಸ್ ತಂಗುದಾಣವಾಗಿದ್ದರೂ ಶುದ್ಧ ಕುಡಿಯುವ ನೀರಿನ ಘಟಕವೇ ಇಲ್ಲದಿರುವುದು ಆಶ್ಚರ್ಯಕಾರಿಯಾಗಿದೆ. ದೂರದ ಊರುಗಳಿಂದ ಬರುವ ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ಅನೇಕ ಪ್ರಯಾಣಿಕರು ನೀರಿನ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.

ಸ್ಥಿತಿವಂತರು ಹಾಗೂ ಮಧ್ಯಮ ವರ್ಗದವರು ಹಣ ನೀಡಿ ಅಂಗಡಿಗಳಲ್ಲಿ ಸಿಗುವ ಬಾಟಲ್ ನೀರನ್ನು ಖರೀದಿಸಿ ದಾಹ ತೀರಿಸಿಕೊಳ್ಳುವ ಪರಿಸ್ಥಿತಿ ಇದೆ. ಆದರೆ ಹಳ್ಳಿಗಳಿಂದ ಕೂಲಿ ಕೆಲಸಕ್ಕಾಗಿ ಪಟ್ಟಣಕ್ಕೆ ಬರುವ ಬಡ ಕಾರ್ಮಿಕರು ದುಡ್ಡು ಕೊಟ್ಟು ನೀರು ಖರೀದಿಸಲು ಸಾಧ್ಯವಾಗದೆ ಸಣ್ಣಪುಟ್ಟ ಹೋಟೆಲ್‌ಗಳನ್ನು ಅವಲಂಬಿಸುವಂತಾಗಿದೆ.

ಹಲವು ವರ್ಷಗಳಿಂದಲೂ ಈ ಸಮಸ್ಯೆ ಮುಂದುವರಿದಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಇನ್ನಾದರೂ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡು ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಪ್ರಯಾಣಿಕರ ಮೂಲಭೂತ ಅಗತ್ಯವನ್ನು ಪೂರೈಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಗೃಹಲಕ್ಷ್ಮಿ ಹಣ ದೇವಾಲಯ ನಿರ್ಮಾಣಕ್ಕೆ ದೇಣಿಗೆ: ತಿಮ್ಮಾಪುರ ಮಹಿಳೆಯರ ಅಭೂತಪೂರ್ವ ನಿರ್ಧಾರ!

0

ಗದಗ: ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಸಾಮಾಜಿಕ–ಆಧ್ಯಾತ್ಮಿಕ ಬದ್ಧತೆಯೊಂದು ಗಮನಸೆಳೆಯುವ ಘಟನೆ ನಡೆದಿದೆ. ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಜಮಾದ ರೂ.2000 ನೆರವು ಮೊತ್ತವನ್ನು ಗ್ರಾಮದಲ್ಲಿನ ಶ್ರೀ ರೇಣುಕಾದೇವಿ ಎಲ್ಲಮ್ಮನ ದೇವಸ್ಥಾನ ಕಟ್ಟಡ ಕಾಮಗಾರಿಗೆ ದೇಣಿಗೆಯಾಗಿ ನೀಡುವ ನಿರ್ಧಾರವನ್ನು ಗ್ರಾಮ ಮಹಿಳೆಯರು ಕೈಗೊಂಡಿದ್ದಾರೆ.

ಗ್ರಾಮದ ಎಲ್ಲಾ ಫಲಾನುಭವಿಗಳು ತಮ್ಮ ಖಾತೆಗೆ ಜಮಾ ಆದ ಮೊತ್ತವನ್ನು ಸ್ವಯಂಪ್ರೇರಿತವಾಗಿ ದೇವಸ್ಥಾನದ ಅಭಿವೃದ್ಧಿಗೆ ಸಮರ್ಪಿಸಿದ್ದು, ಗ್ರಾಮದಲ್ಲಿ ಭಕ್ತಿಭಾವ ಮತ್ತು ಏಕತೆ ಮೆರೆಯಲಾಗಿದೆ. ಮಹಿಳೆಯರ ಈ ತೀರ್ಮಾನಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ದೊಡ್ಡ ಮಟ್ಟದ ಬೆಂಬಲ ಸಿಕ್ಕಂತಾಗಿದೆ.

ಗ್ರಾಮದ ಹಿರಿಯರು ಹಾಗೂ ಯುವಕರು ಮಹಿಳೆಯರ ಈ ದಾನಶೀಲತೆಯನ್ನು ಶ್ಲಾಘಿಸಿದ್ದು, ಗ್ರಾಮಾಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಮಹಿಳೆಯರ ಪಾತ್ರ ಮತ್ತಷ್ಟು ಬಲವಾಗುತ್ತಿರುವುದನ್ನು ಇದು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ದೇವಸ್ಥಾನ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಗ್ರಾಮ ಸಮಿತಿ ತಿಳಿಸಿದೆ.

error: Content is protected !!