ಹಾವೇರಿ: ಸ್ಟಿಂಗ್ ಆಪರೇಷನ್ನಿಂದ ತಪ್ಪಿಸಿಕೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿತ್ತೂರಿಗೆ ಓಡಿ ಬಂದು ಕುಳಿತಿದ್ದಾರೆ. ಮುಖ್ಯಮಂತ್ರಿ ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇಲ್ಲ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡರು. ಸಿದ್ದರಾಮಯ್ಯ ಉತ್ತಮ ಆಡಳಿತಗಾರ ಹಾಗೂ ಹಿಂದುಳಿದ ವರ್ಗಗಳ ಧ್ವನಿಯಾಗಿದ್ದಾರೆ. ಸಿದ್ದರಾಮಯ್ಯ ಇಲ್ಲದ ಕಾಂಗ್ರೆಸ್ ದೊಡ್ಡ ಶೂನ್ಯ ಇದ್ದಂತೆ ಎಂದು ಹೇಳಿದರು.
ಸ್ಟಿಂಗ್ ಆಪರೇಷನ್ ಮೂಲಕ ಸಿದ್ದರಾಮಯ್ಯ ಅವರಿಗೆ ಕಪ್ಪು ಮಸಿ ಬಳಿಯುವ ಪ್ರಯತ್ನ ನಡೆದಿದೆ. ಅವರಿಗೆ ಅಪಮಾನ ಮಾಡುವ ಕೆಲಸ ಮಾಡಲಾಗಿದೆ ಎಂದು ಆರೋಪಿಸಿದ ಬಿ.ಸಿ. ಪಾಟೀಲ್, ರೈತರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಒಂದು ದಿನವೂ ಮಾತನಾಡಿಲ್ಲ ಎಂದು ಟೀಕಿಸಿದರು. ಜನರ ಗಮನವನ್ನು ಬೇರೆಡೆ ಸೆಳೆಯಲು ಸ್ಟಿಂಗ್ ಆಪರೇಷನ್ ತಂತ್ರ ಬಳಸಲಾಗುತ್ತಿದೆ ಎಂದು ದೂರಿದರು.
ಇದೇ ವೇಳೆ, ಸ್ಟಿಂಗ್ ಆಪರೇಷನ್ನ ಪಿತಾಮಹ ಡಿ.ಕೆ. ಶಿವಕುಮಾರ್ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿರುವುದನ್ನು ಉಲ್ಲೇಖಿಸಿದ ಅವರು, ಈ ಹೇಳಿಕೆಗೆ ತಾವು ಸಹಮತ ವ್ಯಕ್ತಪಡಿಸುವುದಾಗಿ ತಿಳಿಸಿದರು.
ಮುಖ್ಯಮಂತ್ರಿಯವರ ಕೆಲಸವೇ ಸ್ಟಿಂಗ್ ಆಪರೇಷನ್ ಮಾಡುವುದಾಗಿದೆ. ಇಂತಹ ಚಟುವಟಿಕೆಗಳನ್ನು ಬಿಟ್ಟು ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸಲಿ. ಇಂತಹ ಮುಖ್ಯಮಂತ್ರಿ ರಾಜ್ಯಕ್ಕೆ ಬೇಕೇ ಎಂದು ಪ್ರಶ್ನಿಸಿದರು.

