Home Blog Page 3

ಗ್ರಾಮೀಣ ಉದ್ಯೋಗ ಯೋಜನೆಗೆ ಸಂಕಷ್ಟ: ಮಿಥುನ ಜಿ.ಪಾಟೀಲ 

0

ವಿಜಯಸಾಕ್ಷಿ ಸುದ್ದಿ, ಡಂಬಳ: ಕೂಲಿ ಕಾರ್ಮಿಕರ ಹಿತ ಕಾಯುವ ಮಹಾತ್ಮ ಗಾಂಧಿ ರೋಜ್ಗಾರ ಕಾಯ್ದೆಯ ಹಕ್ಕುಸ್ವರೂಪವನ್ನು ತೆಗೆದುಹಾಕಿ ಕೇವಲ ಸರ್ಕಾರದ ಅಣತಿಯ ಯೋಜನೆಯಾಗಿ ಜಿ ರಾಮ್ ಜಿ ಯೋಜನೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ರೋಣ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಜಿ.ಪಾಟೀಲ (ಸಂಗನಗೌಡ) ಆರೋಪಿಸಿದರು.

ಡಂಬಳ ಗ್ರಾಮದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ರೈತರ, ಕೂಲಿಕಾರ್ಮಿಕರ, ಮಹಿಳೆಯರು ಮತ್ತು ಪುರುಷರಿಗೆ ಒಂದೇ ವೇತನ ಜಾರಿಗೆ ಮಾಡಿ ಆರ್ಥಿಕವಾಗಿ ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಬೇಕು ಎನ್ನುವ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಳಿಸಿತ್ತು. ಮಹಾತ್ಮ ಗಾಂಧಿ ರೋಜ್ಗಾರ ಯೋಜನೆಯ ಕಾಯ್ದೆ ಗ್ರಾಮೀಣ ಭಾಗದ ಕೃಷಿ ಕೂಲಿಕಾರರು, ಬಡ ರೈತರು ಹಾಗೂ ಇನ್ನಿತರೆ ಗ್ರಾಮೀಣ ದುಡಿಮೆಗಾರರಲ್ಲಿ ಬಹು ದೊಡ್ಡ ಆಶಾಕಿರಣವಾಗಿತ್ತು.

ಆದರೆ ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಮನರೇಗಾ ಕಾಯ್ದೆ ಹಾಗೂ ಹಕ್ಕು ಸ್ವರೂಪವನ್ನು ತೆಗೆದುಹಾಕಿ ಕೇವಲ ಸರ್ಕಾರದ ಅಣತಿಯ ಯೋಜನೆಯಾಗಿ ಹೊಸದಾಗಿ ವಿಕಸಿತ ಭಾರತ ರೋಜ್ಗಾರ್ ಆಜೀವಿಕ ಮಿಷನ್ ಗ್ರಾಮೀಣ ಖಾತರಿ (ವಿ.ಬಿ.ಜಿ. ರಾಮ್ ಜಿ) ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಹೊಸ ಕಾಯ್ದೆಯಿಂದ ಕೂಲಿಕಾರ ಕಾರ್ಮಿಕರ ಮೇಲೆ ಹಲವು ದುಷ್ಪರಿಣಾಮಗಳು ಬೀರುತ್ತವೆ. 125 ದಿನಗಳ ಕೆಲಸ ಸಿಗುವುದಿಲ್ಲ ಮತ್ತು ಕೆಲಸದಿಂದ ವಂಚಿತರಾಗುತ್ತಾರೆ. ಕೇಂದ್ರ ಸರ್ಕಾರ ದೇಶದ ಎಲ್ಲಾ ರಾಜ್ಯಗಳಲ್ಲಿ ಶೇ. 60ರಷ್ಟು, ರಾಜ್ಯ ಸರ್ಕಾರ ಶೇ. 40ರಷ್ಟು ಮೊತ್ತವನ್ನು ಖರ್ಚು ಮಾಡಬೇಕೆಂಬ ಅಂಶಗಳಿಂದ ಕಾರ್ಮಿಕರನ್ನು ಕೂಲಿಯಿಂದ ವಂಚಿತರಾಗಿ ಮಾಡುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

`ಓದಿನ ಮನೆ’ ಅತ್ಯಂತ ಉಪಯುಕ್ತ: ಆರ್.ಎಸ್. ಬುರುಡಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಸದ್ದು ಗದ್ದಲವಿಲ್ಲದ ಶಾಂತ ವಾತಾವರಣ ಸೃಷ್ಟಿಸಿ ಏಕಾಗ್ರಚಿತ್ತದಿಂದ ಅಭ್ಯಾಸದಲ್ಲಿ ತಲ್ಲೀನರಾಗಲು ಓದಿನ ಮನೆ ಕಾರ್ಯ ಯೋಜನೆ ಅತ್ಯಂತ ಉಪಯುಕ್ತವಾಗಿದೆ ಎಂದು ಗದಗ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಶಿಗ್ಲಿಯ ಕೆ.ಜಿ. ಮುದಗಲ್ಲ ಪ್ರೌಢಶಾಲೆಯ ಜಿ.ಎಸ್.ಎಸ್ ಶಾಲಾ ಉತ್ಸವದ ವೇಳೆ ಓದಿನ ಮನೆ ಉದ್ಘಾಟಿಸಿ ಮಾತನಾಡಿದರು.

ಓದಿನ ಮನೆಯಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ, ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವ ಉಂಟಾಗುತ್ತದೆ. ಓದುವ ವೇಳೆ ಮೂಡುವ ಪ್ರಶ್ನೆ, ಸಮಸ್ಯೆಗಳಿಗೆ ಶಿಕ್ಷಕರು ಮತ್ತು ಸಹಪಾಠಿಗಳೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಬಹುದಾಗಿದೆ. ಟಿವಿ, ಮೊಬೈಲ್ ಇತರೆ ಚಟುವಟಿಕೆಗಳಿಂದ ದೂರವಿದ್ದು, ಓದುವ, ಬರೆಯುವ ಕೌಶಲ್ಯ ಹೆಚ್ಚುತ್ತದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪಾಲನೆ ಜತೆಗೆ ಪರೀಕ್ಷೆ ಎದುರಿಸುವಲ್ಲಿ ಆತ್ಮಸ್ಥೈರ್ಯ ಬೆಳೆಸುತ್ತದೆ. ಈ ಕಾರ್ಯ ಯೋಜನೆ ಯಶಸ್ವಿಯಾಗುವಲ್ಲಿ ಪಾಲಕರು ಮತ್ತು ಶಿಕ್ಷಕರ ಪ್ರೋತ್ಸಾಹ ಅಗತ್ಯ ಎಂದರು.

ಈ ವೇಳೆ ಬಿಇಓ ಹೆಚ್. ನಾಣ್ಕಿ ನಾಯಕ, ಸಂಸ್ಥೆಯ ಚೇರಮನ್ ರಂಜನ್ ಪಾಟೀಲ, ಸಹ ಚೇರಮನ್ ರಾಜರತ್ನ ಹುಲಗೂರ, ಪ್ರವೀಣ ಹುಲಗೂರ, ಶಿವಾನಂದ ಮೂಲಿಮನಿ, ಯಲ್ಲಪ್ಪ ತಳವಾರ, ಮಂಜುನಾಥ ಶಂಭೋಜಿ, ಮುಖ್ಯೋಪಾಧ್ಯಾಯ ಎಲ್.ಎಸ್. ಅರಳಹಳ್ಳಿ, ಪ್ರಕಾಶ ಮ್ಯಾಗೇರಿ, ರಮೇಶ ನವಲೆ, ಸಿ.ವ್ಹಿ. ಹೂಗಾರ, ಪ್ರಕಾಶ ರಜಪೂತ, ಅಮರೇಶ್ವರ ಹುಲಗೂರ, ಫಕ್ಕೀರೇಶ ಕುರಿ, ವೀರಣ್ಣ ಅಳ್ಳಳ್ಳಿ, ಎಂ.ವಿ. ತಿಮ್ಮಾಪುರ ಮುಂತಾದವರಿದ್ದರು.

ಅತ್ತ ಹೆರಿಗೆಗೆ ತವರಿಗೆ ಹೋದ ಪತ್ನಿ; ಇತ್ತ ಹಳೇ ಪ್ರೇಯಸಿ ಜತೆ ಸೂಸೈಡ್ ಮಾಡಿಕೊಂಡ ಪತಿ!

0

ಬೆಳಗಾವಿ:- ಜಿಲ್ಲೆ ರಾಮದುರ್ಗ ತಾಲೂಕಿನ ಮಲ್ಲಾಪುರ ಬಳಿ ಪತ್ನಿ ಹೆರಿಗೆಗೆಂದು ತವರು ಮನೆಗೆ ಹೋಗಿದ್ದಾಗ ಪತಿ ತನ್ನ ಹಳೇ ಪ್ರೇಯಸಿ ಜೊತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಜೋಡಿಯನ್ನು ಮಲ್ಲಾಪುರದ ಜಗದೀಶ್ ಕವಳೇಕರ(27), ಗಂಗಮ್ಮ(26) ಎಂದು ಗುರುತಿಸಲಾಗಿದೆ. ಜಗದೀಶ್ ಹಾಗೂ ಗಂಗಮ್ಮ ಮೊದಲಿನಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ, ಜಗದೀಶ್​​ ಬೇರೆ ಯುವತಿ ಜೊತೆ ಮದುವೆಯಾಗಿದ್ದು, ಸದ್ಯ ಪತ್ನಿ ಗರ್ಭಿಣಿ. ಹೀಗಾಗಿ ಆಕೆ ತವರು ಮನೆಗೆ ಹೋಗಿದ್ದಾಗ ಇತ್ತ ಪ್ರೇಯಿಸಿಯೊಂದಿಗೆ ನದಿಗೆ ಹಾರಿ ಸಾವಿನ ಮನೆ ಸೇರಿದ್ದಾನೆ. ಸ್ವತಃ ಹೆಂಡ್ತಿಯೇ ಜಗದೀಶ್ ಹಾಗೂ ಗಂಗಮ್ಮಳ ಮದ್ವೆ ಮಾಡುವುದಾಗಿ ಹೇಳಿದ್ದಳು ಎಂದು ತಿಳಿದುಬಂದಿದೆ.

ಇಂದು ಮಲಪ್ರಭಾ ನದಿಯಲ್ಲಿ ತಬ್ಬಿಕೊಂಡ ರೀತಿಯಲ್ಲಿ ಎರಡು ಶವಗಳು ತೆಲಿ ಬಂದಿದ್ದು, ಇದನ್ನು ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಶವಗಳನ್ನು ನದಿ ದಡಕ್ಕೆ ತಂದು ನೋಡಿದಾಗ ಜಗದೀಶ್ ಹಾಗೂ ಗಂಗಮ್ಮ ಎನ್ನುವುದು ಗೊತ್ತಾಗಿದೆ. ಮದುವೆಯಾಗಿದ್ದವ ಪತ್ನಿ ಬಿಟ್ಟು ಪ್ರೇಯಸಿ ಜೊತೆಗೆ ಸಾವಿನ ಮನೆ ಸೇರಿದ್ದಾನೆ. ಇನ್ನೊಂದೆಡೆ ಗಂಗಮ್ಮಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಬಸವರಾಜ ಬೊಮ್ಮಾಯಿಯವರ ಕೊಡುಗೆ ಅನನ್ಯ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಜನ್ಮದಿನದ ಪ್ರಯುಕ್ತ ಬುಧವಾರ ಪಟ್ಟಣದ ಶ್ರೀ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮೇಶ್ವರ ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, ಕನ್ನಡ ನಾಡಿನ ನೆಲ, ಜಲ, ಭಾಷೆ ರಕ್ಷಣೆ ಜೊತೆಗೆ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರೇಷ್ಠವಾದ ಕೊಡುಗೆಗಳನ್ನು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ನಮ್ಮ ರಾಜ್ಯ, ರಾಷ್ಟ್ರದ ಸೇವೆ ಮಾಡಲು ದೇವರು ಅವರಿಗೆ ಆಯುರಾರೋಗ್ಯ ನೀಡಲಿ ಎಂದರು.

ಗಿರಿಜಾ ಬಸವ ಆಸ್ಪತ್ರೆ ಹಾಗೂ ಜಿಮ್ಸ್‌ನ ಡಾ. ಪ್ರಕಾಶ ಹೊಸಮನಿ ನೇತೃತ್ವದ ವೈದ್ಯರ ತಂಡದಿಂದ ಹಲವಾರು ಜನರ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತ ಔಷಧಿ ಪಡೆದರು. ಪಕ್ಷದ ಮುಖಂಡರಾದ ಚಂಬಣ್ಣ ಬಾಳಿಕಾಯಿ, ದೇವಣ್ಣ ಬಳಿಗಾರ, ಸೋಮಣ್ಣ ಡಾಣಗಲ್, ಎಂ.ಎಸ್. ದೊಡ್ಡಗೌಡ್ರ, ರವಿಕಾಂತ ಅಂಗಡಿ, ಹೊನ್ನಪ್ಪ ವಡ್ಡರ, ಅಶೋಕ ನಿರಾಲೋಟಿ, ಬಸವರಾಜ ಉಮಚಗಿ, ಸುಭಾನಸಾಬ ಹೊಂಬಳ, ಬಸವರಾಜ ಜಾಲಗಾರ, ಮುತ್ತು ನೀರಲಗಿ, ರಾಜು ಲಿಂಬಿಕಾಯಿ, ಮಾಂತೇಶ ಉಮಚಗಿ, ಮಲ್ಲಿಕಾರ್ಜುನ ನಿರಾಲೋಟಿ, ಚಂದ್ರು ಮಾಗಡಿ ಮುಂತಾದವರಿದ್ದರು.

ಮೌಲಿಕ ಕೃತಿಗಳಿಂದ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿ: ಕೆ.ಎಚ್. ಬೇಲೂರ

0

ವಿಜಯಸಾಕ್ಷಿ ಸುದ್ದಿ, ಗದಗ: ಸಾಹಿತ್ಯ ವಲಯಕ್ಕೆ ಅತ್ಯುತ್ತಮ ಕೃತಿಗಳನ್ನು ನೀಡುವ ಮೂಲಕ ಕನ್ನಡದ ಹಿರಿಮೆಯನ್ನು ಗಡಿಯಾಚೆಗೂ ವಿಸ್ತರಿಸುವ ಕಾರ್ಯವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳು ಮಾಡಿದ್ದಾರೆ. ಅವರ ಕೃತಿಗಳನ್ನು ಓದುವ ಮೂಲಕ ನಮ್ಮ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಬೇಕೆಂದು ಸಂಸ್ಕೃತಿ ಚಿಂತಕರಾದ ಪ್ರೊ. ಕೆ.ಎಚ್. ಬೇಲೂರ ತಿಳಿಸಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜರುಗಿದ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು.

ಸಾಹಿತಿ ತಯಬಅಲಿ ಹೊಂಬಳ ಅವರ ಕಾದಂಬರಿ ‘ಮೊದಲ ಸಹಗಮನ’ ಹಾಗೂ ಮಕ್ಕಳ ಕಥಾ ಸಂಕಲನ ‘ಬಾರೋ ಬಾರೋ ಚಂದ್ರಮ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಡಾ. ಶಿವಪ್ಪ ಕುರಿ, ಬರಹಗಾರನಿಗೆ ಬದ್ಧತೆ ಇರಬೇಕು. ಅಸಹಾಯಕರಿಗೆ, ಅಶಕ್ತರಿಗೆ ದನಿಯಾಗಬೇಕು. ಈ ದಿಸೆಯಲ್ಲಿ ತಯಬಅಲಿ ಅವರು ಪ್ರಚಲಿತ ಸಂದರ್ಭದ ಸಮಸ್ಯೆಗಳಿಗೆ ಅಕ್ಷರರೂಪವನ್ನು ನೀಡಿ ಓದುಗರನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದಾರೆ. ಅವರ ದಣಿವರಿಯದ ಕಾಯಕ ನಿಷ್ಠೆ ನಮಗೆಲ್ಲಾ ಮಾದರಿಯಾದುದು ಎಂದು ತಿಳಿಸಿದರು.

ಮೊದಲ ಸಹಗಮನ ಕೃತಿಯನ್ನು ಪರಿಚಯಿಸಿದ ನೀಲಮ್ಮ ಅಂಗಡಿ, ಇಲ್ಲಿ ವೃದ್ಧಾಪ್ಯದ ಸಂಕಟಗಳನ್ನು ವಿವರಿಸಿದ್ದಾರೆ. ಬದುಕಿನ ಅಂತಿಮ ಸಮಯದಲ್ಲಿ ಹಿರಿಯರಿಗೆ ಬೇಕಾಗಿರುವುದು ಹಿಡಿಯಷ್ಟು ಪ್ರೀತಿ. ಅದರಿಂದ ವಂಚಿತರಾಗಿ ತೊಳಲಾಡುವ ಕುಟುಂಬವೊಂದರ ಸಂದರ್ಭವನ್ನು ಮನಮಿಡಿಯುವಂತೆ ಚಿತ್ರಿಸಿದ್ದಾರೆ ಎಂದು ತಿಳಿಸಿದರು.

ಬಾರೋ ಬಾರೋ ಚಂದ್ರಮ ಕೃತಿಯನ್ನು ಪರಿಚಯಿಸಿ ಮಾತನಾಡಿದ ಕ್ಷಮಾ ವಸ್ತ್ರದ, ಮಕ್ಕಳಿಗೆ ಕತೆಗಳೆಂದರೆ ಪಂಚಪ್ರಾಣ. ನೀತಿಯನ್ನು ನೇರವಾಗಿ ಹೇಳದೇ ಕತೆಗಳ ರೂಪದಲ್ಲಿ ತಿಳಿಸಿದರೆ ಹೆಚ್ಚು ಪರಿಣಾಮ ಬೀರುತ್ತದೆ. ವ್ಯಕ್ತಿತ್ವ ನಿರ್ಮಾಣಕ್ಕೆ ಅವಶ್ಯವಿರುವ ಕತೆಗಳು ಈ ಸಂಕಲನದಲ್ಲಿವೆ. ಮಕ್ಕಳ ಸಾಹಿತ್ಯ ನಿರ್ಲಕ್ಷಕ್ಕೆ ಒಳಗಾಗಿದ್ದು, ಅದರ ಶ್ರೀಮಂತಿಕೆಯನ್ನು ಹೆಚ್ಚಿಸುವ ಕಾರ್ಯವನ್ನು ಲೇಖಕರು ಮಾಡುತ್ತಿದ್ದಾರೆ ಎಂದರು.

ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು. ಕಾರ್ಯಕ್ರಮದಲ್ಲಿ ಚಂದ್ರಶೇಖರ ವಸ್ತ್ರದ, ಡಾ. ಜಿ.ಬಿ. ಪಾಟೀಲ, ಬಸವರಾಜ ಗಿರಿತಿಮ್ಮಣ್ಣವರ, ಎಂ.ಸಿ. ವಗ್ಗಿ, ವಿದ್ಯಾಧರ ದೊಡ್ಡಮನಿ, ಶಶಿಕಾಂತ ಕೊರ್ಲಹಳ್ಳಿ, ಶಿವಾನಂದ ಭಜಂತ್ರಿ, ಕು.ಶಿ. ಜಯದೇವಭಟ್, ವಿ.ಎಸ್. ದಲಾಲಿ, ಕೆ.ಎಸ್. ದಂಡಗಿ, ಶೈಲಶ್ರೀ ಕಪ್ಪರದ, ಕೆ.ಎಸ್. ಬಾಳಿಕಾಯಿ, ಸಿ.ಎಂ. ಮಾರನಬಸರಿ, ರತ್ನಾ ಪುರಂತರ, ಶೈಲಜಾ ಗಿಡ್ನಂದಿ, ರಾಜಶೇಖರ ಕರಡಿ, ಬಿ.ಬಿ. ಹೊಳಗುಂದಿ, ಮಲ್ಲಿಕಾರ್ಜುನ ನಿಂಗೋಜಿ, ಪ್ರಲ್ಹಾದ ನಾರಪ್ಪನವರ, ಕಸ್ತೂರಿ ಕಡಗದ, ಮಂಜುಳಾ ವೆಂಕಟೇಶಯ್ಯ, ರಾಹುಲ ಗಿಡ್ನಂದಿ, ಎಸ್.ಯು. ಸಜ್ಜನಶೆಟ್ಟರ, ಅಶೋಕ ಸತ್ಯರಡ್ಡಿ, ಎಸ್.ಎ. ಬಾಣದ, ಅಶೋಕ ಅಂಗಡಿ, ವಾಯ್.ಕೆ. ಹಂದ್ರಾಳ, ಎಂ.ಸಿ. ಹುಚ್ಚಮ್ಮನವರ, ಎಂ.ಸಿ. ದೊಡ್ಡಮನಿ, ಅಕ್ಕಮ್ಮ ಪಾರ್ವತಿಮಠ, ಸತೀಶ ಕುಲಕರ್ಣಿ, ಮಲ್ಲಪ್ಪ ಡೋಣಿ, ಕೆ.ಜಿ. ವ್ಯಾಪಾರಿ, ಬಸವರಾಜ ನೆಲಜೇರಿ, ಕಿರಣ ಗುಗ್ಗರಿ, ದಾಕ್ಷಾಯಿಣಿ ಗುಗ್ಗರಿ, ದೀಲಿಪಕುಮಾರ ಮುಗಳಿ, ಪಾರ್ವತಿ ಮುಗಳಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಮಕ್ಕಳು ಮತ್ತು ಹಿರಿಯರು ಇಂದು ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಕ್ಕಳು ಬಾಲ್ಯವನ್ನು, ಹಿರಿಯರು ಪ್ರೀತಿಯನ್ನು ಕಳೆದುಕೊಂಡಿದ್ದಾರೆ. ಮಕ್ಕಳ ಬಾಲ್ಯವನ್ನು ಸುಂದರಗೊಳಿಸುವ ಮತ್ತು ಹಿರಿಯರ ಸಂಕಟಗಳನ್ನು ಸಮಾಜದ ಮುಂದಿಡುವ ಪ್ರಯತ್ನವನ್ನು ಈ ಕೃತಿಗಳ ಮೂಲಕ ಮಾಡಿರುವ ತಯಬಅಲಿ ಅವರ ಸಾಹಿತ್ಯ ಸೇವೆ ಮಾದರಿಯಾದುದು ಎಂದು ತಿಳಿಸಿದರು.

ಮದುವೆ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ: ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮದುವೆಯು ಮನುಷ್ಯನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಜೀವಿತಾವಧಿಯಲ್ಲಿ ಮನುಷ್ಯನಿಗೆ ಸಿಗುವ ಅನೇಕ ಸಂಸ್ಕಾರಗಳಲ್ಲಿ ಮದುವೆಯೂ ಒಂದು ಮತ್ತು ಇದು ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಕೋಡಿಕೊಪ್ಪದ ಶ್ರೀ ವೀರಪ್ಪಜ್ಜನವರ ಜಾತ್ರಾಮಹೋತ್ಸವದ ಮುನ್ನಾ ದಿನ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮದುವೆಯಾಗುವುದು ಮುಖ್ಯವಲ್ಲ. ಆದರೆ ನಂತರ ಇಬ್ಬರೂ ಹೊಂದಿಕೊಂಡು ಬಾಳುವೆಯನ್ನು ಸಾಗಿಸುವುದು ಮುಖ್ಯ. ಇಬ್ಬರ ನಡುವಿನ ಹೊಂದಾಣಿಕೆ ಕೆಟ್ಟರೆ ಬದುಕು ಘೋರವಾಗುತ್ತದೆ. ಆದ್ದರಿಂದ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೀವು ಎಂದಿಗೂ ಹೊಂದಾಣಿಕೆಯ ಜೀವನ ನಡೆಸಿ ಸುಖ-ಸಂತೋಷದಿಂದ ಬಾಳಿರಿ ಎಂದರು.

ಜೀವನ ಹೂವಿನ ಹಾಸಿಗೆಯಲ್ಲ. ಕಷ್ಟ-ನಷ್ಟಗಳು ಎದುರಾಗುತ್ತವೆ. ಮನೆಯಲ್ಲಿನ ಹಿರಿಯ ಮಾರ್ಗದರ್ಶನವನ್ನು ಪಡೆದುಕೊಂಡು ಜೀವನದಲ್ಲಿ ಯಾವ ಎಡರು-ತೊಡರುಗಳ ಬಾರದಂತೆ ನಿಮ್ಮ ಜೀವನ ಸಾಗಿಸಿ. ಶ್ರೀ ವೀರಪ್ಪಜ್ಜನವರ ಕೃಪಾಶೀರ್ವಾದದಡಿಯಲ್ಲಿ ನೀವು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೀರಿ. ಶ್ರೀ ವೀರಪ್ಪಜ್ಜನವರು ನಿಮಗೆ ಸಕಲ ಸನ್ಮಂಗಲಗಳನ್ನುಂಟುಮಾಡುತ್ತಾರೆ ಎಂದರು.

ಶ್ರೀ ವೀರಪ್ಪಜ್ಜನವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಮಲ್ಲಯ್ಯ ಚಪ್ಪನ್ನಮಠ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ದಿಂಡೂರ, ಎಂ.ಎ. ಹಿರೇವಡೆಯರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವೇ.ಮೂ ರುದ್ರಮನಿ ಶಾಸ್ತ್ರಿ ಹಿರೇಮಠರು ವಿವಾಹ ಕಾರ್ಯಗಳನ್ನು ನೆರವೇರಿಸಿದರು. ನೂರಾರು ಭಕ್ತರು ನೂತನ ದಂಪತಿಗಳನ್ನು ಆಶೀರ್ವದಿಸಿದರು. ಸಾಮೂಹಿಕ ವಿವಾಹದಲ್ಲಿ ಐದು ಜೊತೆ ಜೋಡಿಗಳು ನೂತನ ದಾಂಪತ್ಯಕ್ಕೆ ಕಾಲಿಟ್ಟರು. ಸಮಾರಂಭದಲ್ಲಿ ಟ್ರಸ್ಟ್ ಕಮಿಟಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

ಅಜಿತ್ ಪವಾರ್ ಸಾವಿನಲ್ಲಿ ರಾಜಕೀಯ ತರಬೇಡಿ; ಚಿಕ್ಕಪ್ಪ ಶರದ್ ಪವಾರ್ ಮನವಿ!

0

ನವದೆಹಲಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಆಕಸ್ಮಿಕ ನಿಧನದ ನಂತರ, ಅವರ ಚಿಕ್ಕಪ್ಪ ಹಾಗೂ ಸಂಸದ ಶರದ್ ಪವಾರ್ ಅವರು ಬಾರಾಮತಿಗೆ ಆಗಮಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಅಜಿತ್ ಪವಾರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಬಳಿಕ ಅವರು ಈ ದುರ್ಘಟನೆಯ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದರು. ಅಜಿತ್ ಪವಾರ್ ಅವರ ಸಾವು ಕೇವಲ ಒಂದು ಆಕಸ್ಮಿಕ ಅಪಘಾತವಾಗಿದ್ದು, ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶಗಳಾಗಲಿ, ಷಡ್ಯಂತ್ರವಾಗಲಿ ಇಲ್ಲ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದರು. “ಇದು ಮಹಾರಾಷ್ಟ್ರಕ್ಕೆ ತುಂಬಾ ದೊಡ್ಡ ನಷ್ಟ. ಕಠಿಣ ಪರಿಶ್ರಮಿ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಈ ನಷ್ಟವನ್ನು ಭರಿಸುವುದು ಅಸಾಧ್ಯ,” ಎಂದು ಅವರು ದುಃಖ ವ್ಯಕ್ತಪಡಿಸಿದರು.

ಅಜಿತ್ ಪವಾರ್ ಅವರ ಸಾವಿನ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಶರದ್ ಪವಾರ್, “ಇಂದಿಗೂ ಕೆಲ ವಿಷಯಗಳು ನಮ್ಮ ಕೈಯಲ್ಲಿಲ್ಲ. ದಯವಿಟ್ಟು ಈ ದುಃಖದ ಸಂದರ್ಭದಲ್ಲೂ ರಾಜಕೀಯ ತರಬೇಡಿ. ಇದು ಕೇವಲ ಅಪಘಾತ,” ಎಂದು ಮನವಿ ಮಾಡಿದರು.
ಮಮತಾ ಬ್ಯಾನರ್ಜಿ, ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಯಾದವ್ ಸೇರಿದಂತೆ ಹಲವು ರಾಜಕೀಯ ನಾಯಕರು ಈ ಘಟನೆಗೆ ಸಂಬಂಧಿಸಿ ತನಿಖೆಗೆ ಆಗ್ರಹಿಸಿದ ಹಿನ್ನೆಲೆಯಲ್ಲೇ ಶರದ್ ಪವಾರ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ.

ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ವಿಧಿವಶ; ನಾಳಿನ ಬೆಂಗಳೂರು ಚಲೋ ಮುಂದೂಡಿಕೆ

0

ಬೆಂಗಳೂರು: 85 ವರ್ಷದ ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್‌ ಫೆಡರೇಷನ್ ಅಧ್ಯಕ್ಷ, ಕಾರ್ಮಿಕ ಮುಖಂಡ ಎಚ್‌.ವಿ. ಅನಂತ್ ಸುಬ್ಬರಾವ್ ಇಂದು ಸಂಜೆ ಹೃದಯಾಘಾತದಿಂದ ನಿಧನರಾದರು.

ಅವರು ವಿಜಯನಗರದಲ್ಲಿರುವ ತಮ್ಮ ಮನೆಯಲ್ಲಿ ಸ್ನಾನ ಮಾಡಿದ ಬಳಿಕ ಉಸಿರಾಟದ ತೊಂದರೆ ಕಾಣಿಸಿಕೊಂಡು, ಆಸ್ಪತ್ರೆಗೆ ತಲುಪುವ ಮಾರ್ಗದಲ್ಲಿಯೇ ಕೊನೆಯುಸಿರೆಳೆದರು. ಅನಂತ್ ಸುಬ್ಬರಾವ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಮುಖಂಡರಾಗಿದ್ದರು. ಅನಂತ್ ಸುಬ್ಬರಾವ್, ನಾಲ್ಕು ದಶಕಗಳ ಕಾಲ ಕಾರ್ಮಿಕ ಹೋರಾಟ, ಚಳವಳಿಗಳನ್ನು ಸಂಘಟಿಸಿ ನಡೆಸಿದವರಾಗಿದ್ದು, ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿದ್ದರು. ಇದೀಗ ಅವರ ನಿಧನದಿಂದ ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ.

ಇನ್ನೂ ವಿವಿಧ ಬೇಡಿಕೆ ಈಡೇರಿಸುವಂತೆ ನಾಲ್ಕು ನಿಗಮದ ಸಾರಿಗೆ ನೌಕರರು ಬೆಂಗಳೂರು ಚಲೋ ಪ್ರತಿಭಟನೆಗೆ ಕರೆ ನೀಡಿದ್ದರು. ಇದರಿಂದ ನಾಳೆ ಬಸ್ ಸಂಚಾರ ಇರುತ್ತಾ ಇಲ್ವಾ ಎಂಬ ಗೊಂದಲ ಪ್ರಯಾಣಿಕರಲ್ಲಿ  ಮೂಡಿಸಿತ್ತು. ಆದ್ರೆ, ಸಾರಿಗೆ ನೌಕರರ ಸಂಘದ ಮುಖಂಡ ಸಾವನ್ನಪ್ಪಿರುವುದರಿಂದ ಬೆಂಗಳೂರು ಚಲೋ ಮುಷ್ಕರವನ್ನು ಮುಂದೂಡಿದ್ದಾರೆ. ಹೀಗಾಗಿ ನಾಳೆ ಎಂದಿನಂತೆ ಬಸ್ ಸಂಚಾರ ಇರಲಿದೆ.

ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಕನಸು ಕಾಣುತ್ತಿದ್ದವರಿಗೆ ಬಿಗ್ ಶಾಕ್; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ!

0

ಬೆಂಗಳೂರು:- ಕರ್ನಾಟಕದ 25 ನಿಗಮ ಮಂಡಳಿಗಳ ಅಧ್ಯಕ್ಷರ ಅವಧಿ ಪೂರ್ಣಗೊಂಡಿದ್ದು, ಈಗ ಸರ್ಕಾರ ಹಿಂದಿನ ನೇಮಕದವರನ್ನೇ ಮುಂದುವರಿಸಲು ಆದೇಶ ಹೊರಡಿಸಿದೆ.

2024 ರ ಜನವರಿ 26ರಿಂದ ಎರಡು ವರ್ಷಾವಧಿಗೆ ನೇಮಕಗೊಂಡಿದ್ದ ಅಧ್ಯಕ್ಷರು ಇನ್ನು ಮುಂದಿನ ಆದೇಶವರೆಗೆ ತಮ್ಮ ಸ್ಥಾನವನ್ನು ಕಾಯ್ದುಕೊಳ್ಳಲಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದ್ದು, ಇದರ ಅರ್ಥ ಯಾವಾಗ ಬೇಕಾದರೂ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನಕ್ಕೆ ಕುತ್ತು ಬರಬಹುದು.

ಸದ್ಯ ಪಕ್ಷದೊಳಗೆ ಒಂದೆಡೆ ಸಚಿವ ಸಂಪುಟ ಪುನಾರಚನೆ, ಇನ್ನೊಂದೆಡೆ ನಾಯಕತ್ವ ಬದಲಾವಣೆ ಚರ್ಚೆಗಳು ಜೋರಾಗಿವೆ. ಇದರಿಂದ ಈಗಾಗಲೇ ಎರಡು ವರ್ಷ ಪೂರೈಸಿರುವ ನಿಗಮ ಮಂಡಳಿ ಅಧ್ಯಕ್ಷರು ಸರ್ಕಾರ ಇರುವವರೆಗೆ ಮುಂದುವರೆಯುತ್ತಾರೋ ಅಥವಾ ಮಧ್ಯದಲ್ಲೇ ಸರ್ಕಾರ ಕೈಬಿಡುತ್ತದೆಯೋ ಎಂಬ ಕುತೂಹಲ ಮೂಡಿಸಿದೆ.

WPL 2026; ಕೊನೆಯ 3 ಪಂದ್ಯಗಳು ನಿರ್ಧರಿಸಲಿದೆ ಪ್ಲೇಆಫ್ ಭವಿಷ್ಯ! ಹೀಗಾದ್ರೆ ಮಾತ್ರ ಈ ತಂಡಗಳಿಗೆ ಅವಕಾಶ!

0

ಮಹಿಳಾ ಪ್ರೀಮಿಯರ್ ಲೀಗ್ 2026 ಟೂರ್ನಿಯಲ್ಲಿ ಇದುವರೆಗೆ 17 ಪಂದ್ಯಗಳು ಮುಗಿದಿದ್ದು, ಲೀಗ್ ಹಂತದಲ್ಲಿ ಇನ್ನೂ ಕೇವಲ 3 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 7 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ 10 ಅಂಕಗಳೊಂದಿಗೆ ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿದ್ದರೂ, ನೇರ ಫೈನಲ್ ಪ್ರವೇಶಕ್ಕಾಗಿ ಯುಪಿ ವಾರಿಯರ್ಸ್ ವಿರುದ್ಧದ ಕೊನೆಯ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಇತ್ತ ಗುಜರಾತ್ ಜೈಂಟ್ಸ್ 8 ಅಂಕಗಳೊಂದಿಗೆ ಉತ್ತಮ ಸ್ಥಿತಿಯಲ್ಲಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧದ ಕೊನೆಯ ಪಂದ್ಯವನ್ನು ಗೆದ್ದರೆ ನಾಕೌಟ್ ಹಂತ ಖಚಿತವಾಗಲಿದೆ.

ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಲಾ 6 ಅಂಕಗಳನ್ನು ಹೊಂದಿದ್ದು, ಎರಡೂ ತಂಡಗಳಿಗೆ ಉಳಿದ ಪಂದ್ಯಗಳು ಮಾಡು–ಮಡಿ ಹೋರಾಟವಾಗಿವೆ. ವಿಶೇಷವಾಗಿ ಡೆಲ್ಲಿ ತಂಡವು ಗೆಲುವಿನ ಜೊತೆಗೆ ತನ್ನ ನೆಟ್ ರನ್ ರೇಟ್‌ನ್ನೂ ಸುಧಾರಿಸಿಕೊಳ್ಳಬೇಕಾದ ಒತ್ತಡದಲ್ಲಿದೆ. ಇನ್ನು 4 ಅಂಕಗಳೊಂದಿಗೆ ಇರುವ ಯುಪಿ ವಾರಿಯರ್ಸ್ ತಂಡಕ್ಕೆ ಆರ್‌ಸಿಬಿ ಹಾಗೂ ಡೆಲ್ಲಿ ವಿರುದ್ಧದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಮಾತ್ರ ಪ್ಲೇಆಫ್ ಕನಸು ಜೀವಂತವಾಗಲಿದೆ.

ಹೀಗಾಗಿ ಉಳಿದ ಮೂರು ಪಂದ್ಯಗಳ ಫಲಿತಾಂಶಗಳು WPL 2026 ಪ್ಲೇಆಫ್ ಚಿತ್ರಣವನ್ನು ಸಂಪೂರ್ಣವಾಗಿ ನಿರ್ಧರಿಸಲಿವೆ.

error: Content is protected !!