Home Blog Page 114

ಕಂಟೆಂಟ್ ಕ್ರಿಯೇಟರ್ಸ್‌ʼಗೆ ನ್ಯಾಯಯುತ ಆದಾಯ ಹಂಚಿಕೆ ಅಗತ್ಯ: ಸಚಿವ ಅಶ್ವಿನಿ ವೈಷ್ಣವ್

0

ನವದೆಹಲಿ: ಸಾಮಾಜಿಕ ಮಾಧ್ಯಮ ವೇದಿಕೆಗಳು ಕಂಟೆಂಟ್ ಕ್ರಿಯೇಟರ್ಸ್‌ಗಳಿಗೆ ನ್ಯಾಯಯುತ ಆದಾಯದ ಪಾಲನ್ನು ಹಂಚಿಕೊಳ್ಳಬೇಕು ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ ಸಮಾವೇಶದಲ್ಲಿ ಮಾತನಾಡಿದ ಅವರು,

ಸುದ್ದಿ ಸಂಸ್ಥೆಗಳು, ಸಾಂಪ್ರದಾಯಿಕ ಮಾಧ್ಯಮಗಳು, ದೂರದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಕಂಟೆಂಟ್ ಕ್ರಿಯೇಟರ್ಸ್, ಪ್ರಭಾವಿಗಳು, ಪ್ರಾಧ್ಯಾಪಕರು ಮತ್ತು ಸಂಶೋಧಕರು ಸೇರಿದಂತೆ ಎಲ್ಲರಿಗೂ ಸಾಮಾಜಿಕ ಮಾಧ್ಯಮ ವೇದಿಕೆಗಳು ನ್ಯಾಯಸಮ್ಮತವಾಗಿ ಆದಾಯ ಹಂಚಿಕೆ ಮಾಡಬೇಕು ಎಂದು ತಿಳಿಸಿದರು.

ವೇದಿಕೆಗಳಲ್ಲಿ ಸಮಾನ ಹಣಗಳಿಕೆ ಮಾದರಿಗಳನ್ನು ಜಾರಿಗೆ ತರಬೇಕೆಂದು ಅವರು ಕರೆ ನೀಡಿದರು. ಮಾಧ್ಯಮ, ಶಾಸಕಾಂಗ ಮತ್ತು ನ್ಯಾಯಾಂಗ ಸೇರಿದಂತೆ ಮಾನವ ಸಮಾಜದ ವಿವಿಧ ಸ್ತಂಭಗಳನ್ನು ಬಂಧಿಸಿರುವ ನಂಬಿಕೆ ಎಂಬ ತತ್ವ ಇತ್ತೀಚೆಗೆ ಸವಾಲಿಗೆ ಒಳಗಾಗಿದೆ ಎಂದು ಹೇಳಿದರು.

ಇಡೀ ಸಮಾಜವು ಸಂಸ್ಥೆಗಳ ಮೇಲಿನ ನಂಬಿಕೆಯ ಮೇಲೆ ನಿರ್ಮಾಣಗೊಂಡಿದೆ. ಆ ನಂಬಿಕೆಗೆ ಧಕ್ಕೆಯಾದಾಗ ಸಮಾಜದ ಅಡಿಪಾಯವೇ ದುರ್ಬಲಗೊಳ್ಳಲು ಆರಂಭವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಡೀಪ್‌ಫೇಕ್‌ಗಳು, ತಪ್ಪು ಮಾಹಿತಿ ಅಭಿಯಾನಗಳು ಹಾಗೂ ಕೃತಕವಾಗಿ ಸೃಷ್ಟಿಸಲಾದ ವೀಡಿಯೊಗಳು ಮಾಧ್ಯಮ ಸೇರಿದಂತೆ ಹಲವು ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸುತ್ತಿವೆ ಎಂದು ಸಚಿವರು ಎಚ್ಚರಿಸಿದರು.

ಶಿಕ್ಷಣದಲ್ಲಿ ಹೊಸ ಮಾದರಿ! KPS ಬದಲಾಗಿ “ಮ್ಯಾಗ್ನೆಟ್ ಶಾಲೆ” – ಸಚಿವ ಕೃಷ್ಣ ಬೈರೇಗೌಡ

0

ಹಾಸನ: ಜಿಲ್ಲೆಯ ಕೆಪಿಎಸ್ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗಳಾಗಿ ಪರಿವರ್ತಿಸುವ ಮೂಲಕ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು,

ಹಳ್ಳಿಗಳಲ್ಲಿ ಕೆಲವೆಡೆ ನಾಲ್ಕು-ಐದು ಮಕ್ಕಳು ಮಾತ್ರ ಶಾಲೆಗೆ ಹಾಜರಾಗುತ್ತಿರುವ ಪರಿಸ್ಥಿತಿ ಇದೆ. ಇದರಿಂದ ಶಾಲೆಗಳು ನಾಮಕಾವಸ್ತೆಗೆ ನಡೆಯುತ್ತಿರುವಂತಾಗಿದೆ. ಮಕ್ಕಳಿಗೆ ಸಮರ್ಪಕ ಶಿಕ್ಷಣ ಸಿಗದ ಹಿನ್ನೆಲೆಯಲ್ಲಿ ಕೆಪಿಎಸ್ ಶಾಲೆಗಳನ್ನು ಬಲಪಡಿಸಿ ಮ್ಯಾಗ್ನೆಟ್ ಶಾಲೆಗಳಾಗಿ ರೂಪಾಂತರಿಸಿ ಉತ್ತಮ ಮೂಲಸೌಕರ್ಯ, ಅರ್ಹ ಶಿಕ್ಷಕರು ಹಾಗೂ ಗುಣಮಟ್ಟದ ಬೋಧನೆ ಒದಗಿಸುವುದು ಸರ್ಕಾರದ ಉದ್ದೇಶ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರಸ್ತುತ 15 ಕೆಪಿಎಸ್ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಶಾಲೆಗಳಲ್ಲೂ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದು ಡಿಡಿಪಿಐ ರಂಗನಾಥ್ ಸಚಿವರಿಗೆ ಮಾಹಿತಿ ನೀಡಿದರು.

ಇದೇ ವೇಳೆ ಬಿಪಿಎಲ್ ಕಾರ್ಡ್ ಆದಾಯ ಮಿತಿಯನ್ನು 1.20 ಲಕ್ಷ ರೂಪಾಯಿಗೆ ಸೀಮಿತಗೊಳಿಸಿರುವ ಕುರಿತು ಶಾಸಕ ಕೆ.ಎಂ. ಶಿವಲಿಂಗೇಗೌಡ ಸಚಿವರ ಗಮನ ಸೆಳೆದರು. ಈ ನಿರ್ಧಾರದಿಂದ ಗ್ರಾಮೀಣ ಭಾಗದ ಅನೇಕ ಬಡವರ ಬಿಪಿಎಲ್ ಕಾರ್ಡ್‌ಗಳು ರದ್ದಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ವಾಯು ಗುಣಮಟ್ಟ ಸೂಚ್ಯಂಕ 100 ದಾಟಿದರೆ GBAಗೆ ನೋಟಿಸ್: ಸಚಿವ ಈಶ್ವರ್ ಖಂಡ್ರೆ ಸೂಚನೆ

0

ಬೆಂಗಳೂರು: ವಾಯು ಗುಣಮಟ್ಟ ಸೂಚ್ಯಂಕ (AQI) ಮೌಲ್ಯವು 100 ದಾಟಿದರೆ ಸಂಬಂಧಿತ ಸ್ಥಳೀಯ ಸಂಸ್ಥೆಗಳಿಗೆ ತಕ್ಷಣ ನೋಟಿಸ್ ಜಾರಿ ಮಾಡಿ, ನಿಗದಿತ ಕಾಲಮಿತಿಯಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಕೋರಿಕೆಯ ಮೇರೆಗೆ ನಡೆದ ಉನ್ನತಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ರಾಷ್ಟ್ರ ರಾಜಧಾನಿ ದೆಹಲಿಯಂತೆಯೇ ಬೆಂಗಳೂರು ಕೂಡ ‘ಗ್ಯಾಸ್ ಚೇಂಬರ್’ ಆಗದಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಈ ಸಂಬಂಧ ಶೀಘ್ರದಲ್ಲೇ ನಗರದ ಎಲ್ಲಾ 28 ಶಾಸಕರೊಂದಿಗೆ ಸಭೆ ನಡೆಸಲಾಗುವುದು ಎಂದರು.

ಬೆಂಗಳೂರು ನಗರದಲ್ಲಿ ವಾಯು, ಜಲ ಹಾಗೂ ಶಬ್ದ ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆ, ನಿಯಂತ್ರಣಕ್ಕೆ ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುರೇಶ್ ಕುಮಾರ್, ನಗರದ ರಸ್ತೆಗಳ ಧೂಳಿನಿಂದ ವಾಯು ಗುಣಮಟ್ಟ ಕುಸಿಯುತ್ತಿದ್ದು, ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚುತ್ತಿದೆ. ವೈದ್ಯರು ಬೆಂಗಳೂರು ಹೊರವಲಯಕ್ಕೆ ತೆರಳುವಂತೆ ಸಲಹೆ ನೀಡುತ್ತಿರುವುದು ಗಂಭೀರ ಪರಿಸ್ಥಿತಿ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಬೆಂಗಳೂರಿನ 11 ಸ್ಥಾಪಿತ ಕೇಂದ್ರಗಳು ಹಾಗೂ 13 ಸಂಚಾರಿ ಘಟಕಗಳ ಮೂಲಕ AQI ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. AQI 100 ದಾಟಿದರೆ ತಕ್ಷಣ ನೋಟಿಸ್ ನೀಡಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಕ್ರಮ ವಹಿಸದಿದ್ದರೆ ನಿಯಮಾನುಸಾರ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

‘ವಿಡಿಯೋ ತಿರುಚಿ ವೈರಲ್ ಮಾಡಿದ್ದಾರೆ’ – ಮಲ್ಲಿಕಾರ್ಜುನ ಮುತ್ಯಾ ಪ್ರಕರಣದಲ್ಲಿ ಬಾಲಕಿ ಪೋಷಕರ ಪ್ರತಿಕ್ರಿಯೆ

0

ಯಾದಗಿರಿ: ಪೋಕ್ಸೋ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಮಲ್ಲಿಕಾರ್ಜುನ ಮುತ್ಯಾ ಸಂಬಂಧಿಸಿದಂತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅಜ್ಞಾತ ಸ್ಥಳದಲ್ಲಿರುವ ಮುತ್ಯಾ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಬೆನ್ನಲ್ಲೇ, ಮಹಾರಾಷ್ಟ್ರದ ಸೊಲ್ಲಾಪುರದಲ್ಲಿರುವ ಬಾಲಕಿಯ ಪೋಷಕರೂ ತಮ್ಮ ಆವೃತ್ತಿಯನ್ನು ಸಾರ್ವಜನಿಕಗೊಳಿಸಿದ್ದಾರೆ.

ಪೋಷಕರ ಪ್ರಕಾರ, ಅವರು ಹಲವು ವರ್ಷಗಳಿಂದ ಮಲ್ಲಿಕಾರ್ಜುನ ಮುತ್ಯಾ ಅವರ ಭಕ್ತರಾಗಿದ್ದು, ಮಗಳ ಹುಟ್ಟುಹಬ್ಬದ ದಿನ ಆಶೀರ್ವಾದ ಪಡೆಯಲು ಮಠಕ್ಕೆ ತೆರಳಿದ್ದರು. ಆಶೀರ್ವಾದದ ಕ್ಷಣವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದೇವೆ. ಆದರೆ ಅದನ್ನು ಕಿಡಿಗೇಡಿಗಳು ತಿರುಚಿ ವೈರಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪೊಲೀಸರ ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಮುತ್ಯಾ ವಿರುದ್ಧದ ಆರೋಪಗಳನ್ನು ನಾವು ಒಪ್ಪುವುದಿಲ್ಲ ಎಂದು ಪೋಷಕರು ಹೇಳಿದ್ದಾರೆ.

ಇದೀಗ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ಮುಂದಿನ ಬೆಳವಣಿಗೆಗಳತ್ತ ಸಾರ್ವಜನಿಕರ ಗಮನ ನೆಟ್ಟಿದೆ.

ನಿರುದ್ಯೋಗ ವಿಚಾರದಲ್ಲಿ ಬಿಜೆಪಿ ಪ್ರಧಾನಿ ಮೋದಿಗೆ ಪ್ರಶ್ನಿಸಲಿ: ಹರಿಪ್ರಸಾದ್ ಸವಾಲು

0

ನವದೆಹಲಿ: ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಪರಿಷತ್ ಸದಸ್ಯ B. K. ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ 2014ರಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. 11 ವರ್ಷಗಳಲ್ಲಿ 22 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಾಗಿತ್ತು. ನಿರುದ್ಯೋಗ ಸಮಸ್ಯೆ ಬಗ್ಗೆ ಪ್ರಶ್ನಿಸುವ ಬಿಜೆಪಿ ನಾಯಕರು ಮೊದಲು ಪ್ರಧಾನಿ ಮೋದಿಯವರನ್ನೇ ಪ್ರಶ್ನಿಸಲಿ ಎಂದು ಸವಾಲು ಹಾಕಿದರು.

ಹುಬ್ಬಳ್ಳಿ-ಧಾರವಾಡದಲ್ಲಿ ನಡೆದ ನಿರುದ್ಯೋಗಿಗಳ ಪ್ರತಿಭಟನೆ ಕುರಿತು ಮಾತನಾಡಿದ ಅವರು, Gen-Z ಯುವ ಸಮುದಾಯ ನಿರುದ್ಯೋಗ ಸಮಸ್ಯೆ ಕುರಿತು ಹೋರಾಟ ನಡೆಸುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲು ಅವರಿಗೆ ಹಕ್ಕಿದೆ. ಆದರೆ ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಸಹಿಸಲಾರದೆ ಬಿಜೆಪಿ ಈ ಹೋರಾಟಕ್ಕೆ ಬೆಂಬಲಿಸುತ್ತಿದೆ ಎಂದು ಆರೋಪಿಸಿದರು.

2023-24ರ ಮಾಹಿತಿಯ ಪ್ರಕಾರ ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಸುಮಾರು 40 ಲಕ್ಷ ಹುದ್ದೆಗಳು ಖಾಲಿ ಇವೆ. ಗೃಹ, ರೈಲ್ವೆ ಹಾಗೂ ರಕ್ಷಣಾ ಇಲಾಖೆಯಲ್ಲಿ ಒಟ್ಟು 9.79 ಲಕ್ಷ ಹುದ್ದೆಗಳು ಭರ್ತಿಯಾಗಿಲ್ಲ. ಸೈನ್ಯದಲ್ಲಿ 1.55 ಲಕ್ಷ ಹುದ್ದೆಗಳು ಖಾಲಿ ಇದ್ದು, ಶಸ್ತ್ರಾಸ್ತ್ರ ಪಡೆಗಳಲ್ಲಿ 92,414 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದ್ದಾರೆ.

ದೇಶಭಕ್ತಿ ಹಾಗೂ ದೇಶಸೇವೆ ಬಗ್ಗೆ ಭಾಷಣ ಮಾಡುವವರು ಈ ಖಾಲಿ ಹುದ್ದೆಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಕುರಿತು ಬಿಜೆಪಿ ನಾಯಕರು ಮೊದಲು ತಮ್ಮ ‘ವಿಶ್ವಗುರು’ರನ್ನು ಪ್ರಶ್ನಿಸಲಿ ಎಂದು ಹರಿಪ್ರಸಾದ್ ವ್ಯಂಗ್ಯವಾಡಿದರು.

ಹಾವೇರಿಯಲ್ಲಿ ಲಂಚದ ಬಲೆ: 8,500 ರೂ. ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಗ್ರಾಮ ಲೆಕ್ಕಾಧಿಕಾರಿ !

0

ಹಾವೇರಿ: ಜಿಲ್ಲೆಯಲ್ಲಿ ಮತ್ತೊಂದು ಲಂಚ ಪ್ರಕರಣ ಬೆಳಕಿಗೆ ಬಂದಿದೆ. ನೆಗಳೂರು ಗ್ರಾಮದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಪಕ್ಕೀರೇಶ ಬಾರ್ಕಿ, ಖಾತೆ ಬದಲಾವಣೆಯ ಪ್ರಕ್ರಿಯೆಗಾಗಿ ಹಣ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ.

ಬಸಾಪುರ ಗ್ರಾಮದ ರೈತ ಕರಿಯಲ್ಲಪ್ಪ ಕೆಸರಳ್ಳಿ ಅವರ ಬಳಿ 63 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದು, 30 ಸಾವಿರ ರೂಪಾಯಿ ಮೊತ್ತ ಈಗಾಗಲೇ ಪಡೆದಿದ್ದನೆಂದು ತಿಳಿದುಬಂದಿದೆ. ಇಂದು 8,500 ರೂಪಾಯಿ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಲೋಕಾಯುಕ್ತ ಸಿಪಿಐ ಶ್ರೀದೇವಿ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ದಾಳಿಯ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.

ವಾಹನ ಮಾಲೀಕರೇ ಗಮನಿಸಿ.. ಏ.1ರಿಂದ ಇ20 ಮಿಶ್ರಿತ RON 95 ಪೆಟ್ರೋಲ್ ಮಾರಾಟ ಕಡ್ಡಾಯ!

0

ನವದೆಹಲಿ: ಏಪ್ರಿಲ್ 1ರಿಂದ ದೇಶದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಕಡ್ಡಾಯವಾಗಿ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ (E20) ಮಾರಾಟ ಮಾಡಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿದೆ.ಫೆಬ್ರವರಿ 17ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದೆ.

ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನಿರ್ದಿಷ್ಟತೆಗಳ ಪ್ರಕಾರ ಮತ್ತು ರಿಸರ್ಚ್ ಆಕ್ಟೇನ್ ನಂಬರ್ (RON) 95 ಹೊಂದಿರುವ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟ ಮಾಡಬೇಕು ಎಂದು ತಿಳಿಸಲಾಗಿದೆ.

RON ಎನ್ನುವುದು ಎಂಜಿನ್ ಕಾರ್ಯಕ್ಷಮತೆಯನ್ನು ಅಳೆಯುವ ಪ್ರಮುಖ ಮಾನದಂಡವಾಗಿದೆ. ಎಥೆನಾಲ್ ಸ್ವಭಾವಿಕವಾಗಿ ಸುಮಾರು 108ಕ್ಕಿಂತ ಹೆಚ್ಚಿನ ಆಕ್ಟೇನ್ ರೇಟಿಂಗ್ ಹೊಂದಿದೆ. ಎಥೆನಾಲ್ ಮಿಶ್ರಣದಿಂದ ಎಂಜಿನ್‌ಗೆ ತೊಂದರೆ ಉಂಟಾಗದಂತೆ RON 95 ಮಾನದಂಡದ ಇಂಧನವನ್ನು ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿದೆ.

RON 95 ಪೆಟ್ರೋಲ್ ಆಧುನಿಕ ಹಾಗೂ ಉನ್ನತ ಕಾರ್ಯಕ್ಷಮತೆಯ ಎಂಜಿನ್‌ಗಳಿಗೆ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಇದು ಹೆಚ್ಚು ಸ್ವಚ್ಛವಾಗಿ ಉರಿಯುವ ಮೂಲಕ ಇಂಗಾಲದ ಮಾನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್ ಹೊರಸೂಸುವಿಕೆಯನ್ನು 30ರಿಂದ 44 ಶೇಕಡಾವರೆಗೆ ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ 2003ರೊಳಗೆ ಭಾರತದಲ್ಲಿ ಕಚ್ಚಾ ತೈಲದಿಂದ ಸಂಸ್ಕರಣೆಗೊಂಡ ಪೆಟ್ರೋಲ್ ನೇರವಾಗಿ ಬಂಕ್‌ಗಳಿಗೆ ಬರುತ್ತಿತ್ತು. ಈಗ ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಮಾಡುವ ಪದ್ಧತಿ ಅನುಸರಿಸಲಾಗುತ್ತಿದೆ. 20% ಎಥೆನಾಲ್ ಮತ್ತು 80% ಪೆಟ್ರೋಲ್ ಮಿಶ್ರಿತ ಇಂಧನವನ್ನು ‘ಇ20’ ಎಂದು ಕರೆಯಲಾಗುತ್ತದೆ. ಕಬ್ಬು, ಜೋಳ ಅಥವಾ ಹೆಚ್ಚುವರಿ ಧಾನ್ಯಗಳಿಂದ ತಯಾರಿಸಲಾದ ಜೈವಿಕ ಇಂಧನವೇ ಎಥೆನಾಲ್ ಆಗಿದೆ.

ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ ಆರೋಪ: ಯಾದಗಿರಿ ಶಹಾಪುರದಲ್ಲಿ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ – ನಾಪತ್ತೆ ಬಗ್ಗೆ ಚರ್ಚೆ!

0

ಯಾದಗಿರಿ: ಜಿಲ್ಲೆಯಲ್ಲಿ ಧಾರ್ಮಿಕ ವಲಯಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಘಟನೆ ಬೆಳಕಿಗೆ ಬಂದಿದೆ. ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ಪ್ರಕರಣದ ಬಳಿಕ ಮುತ್ಯಾ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ.

ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ಚುರುಕುಗೊಂಡಿದೆ. ಮಠದಲ್ಲಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕೂಡ ಭಾಗವಹಿಸಿದ್ದರು. ಆರೋಪಿಗೆ ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮುತ್ಯಾ ಬೆಂಬಲಿಗರು, ವಿಡಿಯೋವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಹೇಳಿದ್ದು, ಮಲ್ಲಿಕಾರ್ಜುನ ಮುತ್ಯಾ ಎಲ್ಲೂ ಪರಾರಿ ಆಗಿಲ್ಲ ಎಂದು ಅವರ ಕುಟುಂಬ ಸದಸ್ಯರು ಸ್ಪಷ್ಟಪಡಿಸಿದ್ದಾರೆ. ಈ ಘಟನೆ ಸ್ಥಳೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.

ಲಕ್ಷ ಲಕ್ಷ ಸಾಲ ಮಾಡಿ ತೀರಿಸಲಾಗದೆ 120 ಅಡಿ ಹೈ ಟೆನ್ಷನ್ ಕಂಬ ಏರಿ ಆತ್ಮಹತ್ಯೆಗೆ ಯತ್ನಸಿದ ರೈತ.!

0

ತುಮಕೂರು: 120 ಅಡಿ ಎತ್ತರದ ವಿದ್ಯುತ್ ಹೈ ಟೆನ್ಷನ್ ಕಂಬ ಏರಿ ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಿ.ಕೆ. ಹಳ್ಳಿ–ದಳವೆಹಳ್ಳಿ ರಸ್ತೆಯಲ್ಲಿ ನಡೆದಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಸುಮಾರು ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ರೈತನನ್ನು ರಕ್ಷಿಸಿದ್ದಾರೆ.

ಬಿ.ಕೆ. ಹಳ್ಳಿ ಗ್ರಾಮದ ಗೋಪಾಲ್ (53) ಆತ್ಮಹತ್ಯೆಗೆ ಯತ್ನಿಸಿದ ರೈತ. ಮದ್ಯ ಸೇವಿಸಿದ ಸ್ಥಿತಿಯಲ್ಲಿ ವಿದ್ಯುತ್ ಹೈ ಟೆನ್ಷನ್ ಕಂಬ ಏರಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳೀಯರು ಈ ದೃಶ್ಯ ಗಮನಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಟ್ಟು ಕಾರ್ಯಾಚರಣೆ ನಡೆಸಿದರು. ಸುಮಾರು ಮೂರು ಗಂಟೆಗಳ ಪ್ರಯತ್ನದ ಬಳಿಕ ಯಾವುದೇ ಅನಾಹುತವಾಗದಂತೆ ಗೋಪಾಲ್ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಗೋಪಾಲ್ ತಿಳಿಸಿದ್ದಾರೆ. ಜಮೀನಿಗೆ ಬೋರ್‌ವೆಲ್ ಕೊರೆಸಲು ಹಾಗೂ ಮಗಳ ಮದುವೆಗಾಗಿ ಸುಮಾರು 6 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. ಸಾಲಗಾರರ ಒತ್ತಡ ಹೆಚ್ಚಾಗಿದ್ದರಿಂದ ಮನನೊಂದು ಮದ್ಯ ಸೇವಿಸಿ ಕಂಬ ಏರಿದ್ದಾಗಿ ತಿಳಿಸಿದ್ದಾರೆ. ಸದ್ಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಗೋಪಾಲ್ ಅವರನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಯಾಂಡಲ್ ವುಡ್ ನಿರ್ದೇಶಕನ ಕಿಡ್ನ್ಯಾಪ್ ಕೇಸ್: ಚಿನ್ನಾಭರಣ ದೋಚಿದ್ದ ಗ್ಯಾಂಗ್ ಅರೆಸ್ಟ್!

0

ಬೆಂಗಳೂರು: ನಿರ್ದೇಶಕ ಅನೀಶ್ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಘಟನೆ ಬೆಂಗಳೂರಿನ ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.

ಅನೀಶ್ “ಜೀವನದ ಭಾಷೆ” ಎಂಬ ಸಿನಿಮಾವನ್ನು ನಿರ್ದೇಶಿಸುತ್ತಿದ್ದರು. ಇದಕ್ಕೂ ಮುನ್ನ “ಭರವಸೆಯ ಜೀವನ” ಎಂಬ ಶಾರ್ಟ್ ಮೂವಿ ನಿರ್ಮಿಸಿದ್ದರು. ಕೆಲವು ಕಾರಣಗಳಿಂದ ಸಿನಿಮಾ ನಿಲ್ಲಿಸಿ ಬಳಿಕ ಮುಂಬೈಗೆ ಸ್ಥಳಾಂತರವಾಗಿದ್ದರು.

ಈ ನಡುವೆ, ತಮ್ಮ ಕಾರು ಮಾರಾಟದ ಬಗ್ಗೆ ನಟಿ ಐಶ್ವರ್ಯ ಅವರಿಗೆ ಮಾಹಿತಿ ನೀಡಿದ್ದರು. ದುನಿಯಾ ವಿಜಯ್ ಅಭಿನಯದ “ಭೀಮ” ಸಿನಿಮಾದಲ್ಲಿ ನಟಿಸಿದ್ದ ಐಶ್ವರ್ಯ ಮೂಲಕ ಆರೋಪಿಗಳು ಮಾಹಿತಿ ಕಲೆಹಾಕಿದ್ದಾರೆ. ಕಾರು ಖರೀದಿ ಮಾಡುವುದಾಗಿ ಹೇಳಿ ಅನೀಶ್ ಅವರನ್ನು ಸಂಪರ್ಕಿಸಿ, ನಟಿಯ ಮೂಲಕ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ.

ಬೆಂಗಳೂರಿಗೆ ಬಂದ ಬಳಿಕ ಕಾರು ಖರೀದಿ ನೆಪದಲ್ಲಿ ಅನೀಶ್ ಅವರನ್ನು ಕಿಡ್ನ್ಯಾಪ್ ಮಾಡಲಾಗಿದೆ. ನಿರ್ದೇಶಕನೊಂದಿಗೆ ಐದು ಲಕ್ಷ ರೂಪಾಯಿ ಹಣದ ವಿಚಾರವಾಗಿ ಉಂಟಾದ ಜಗಳವೇ ಈ ಕೃತ್ಯಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ 11 ಆರೋಪಿಗಳನ್ನು ಬಂಧಿಸಿರುವ ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

error: Content is protected !!