Home Blog Page 117

ವಿಶೇಷ ಅಧಿವೇಶನದಲ್ಲೂ ಚರ್ಚೆ ಆಯ್ತು ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ ನಟನ ಹೆಸರು

‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟ ಇಂದು ಕೇವಲ ಮನರಂಜನಾ ಲೋಕದ ವ್ಯಕ್ತಿಯಾಗಿಲ್ಲ. ಅವರ ಹೆಸರು ಈಗ ರಾಜಕೀಯ ಚರ್ಚೆಗಳಲ್ಲೂ ಕೇಳಿಬರುತ್ತಿದೆ. ರಾಜ್ಯದ ವಿಶೇಷ ಅಧಿವೇಶನದಲ್ಲಿ ಗಿಲ್ಲಿ ಹೆಸರು ಪ್ರಸ್ತಾಪವಾಗಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಶಾಸಕ ಪ್ರದೀಪ್ ಈಶ್ವರ್, ಗಿಲ್ಲಿ ಪಡೆದ ಬಹುಮಾನವನ್ನು ಉದಾಹರಣೆಯಾಗಿ ತೆಗೆದುಕೊಂಡು ಕೇಂದ್ರ ಸರ್ಕಾರದ ತೆರಿಗೆ ವ್ಯವಸ್ಥೆಯನ್ನು ಟೀಕಿಸಿದರು.
“50 ಲಕ್ಷ ಗೆದ್ದ ಗಿಲ್ಲಿಗೆ ಸಿಗುವ ಹಣ ಕಡಿಮೆ. ಬಹುತೇಕ ಹಣ ತೆರಿಗೆಯಾಗಿ ಹೋಗುತ್ತದೆ. ನಿಜವಾದ ವಿನ್ನರ್ ನಿರ್ಮಲಾ ಸೀತಾರಾಮನ್” ಎಂಬ ಅವರ ಹೇಳಿಕೆ ಸದನದಲ್ಲಿ ಚರ್ಚೆಗೆ ಕಾರಣವಾಯಿತು.

ಗಿಲ್ಲಿಗೆ ದೊರೆತ ಬಹುಮಾನಗಳ ವಿವರ ನೋಡಿದರೆ, ಬಿಗ್ ಬಾಸ್ ಶೋದಿಂದ 50 ಲಕ್ಷ ರೂ. ಸುದೀಪ್ ಅವರಿಂದ 10 ಲಕ್ಷ ರೂ. ಮಾರುತಿ ಸುಜುಕಿಯಿಂದ ವಿಕ್ಟೋರಿಸ್ ಕಾರು ಇವೆಲ್ಲವೂ ಅವರ ಗೆಲುವಿನ ಮಹತ್ವವನ್ನು ತೋರಿಸುತ್ತದೆ.

ತೆರಿಗೆಯ ಲೆಕ್ಕಾಚಾರದಲ್ಲಿ ಪ್ರದೀಪ್ ಈಶ್ವರ್ 52% ತೆರಿಗೆ ಎಂದು ಹೇಳಿದ್ದರೆ, ಕೆಲವರು ಇದನ್ನು ಅತಿಶಯೋಕ್ತಿ ಎಂದು ಟೀಕಿಸುತ್ತಿದ್ದಾರೆ. ವಾಸ್ತವದಲ್ಲಿ ತೆರಿಗೆ ಶೇಕಡಾ 40–50ರೊಳಗೆ ಇರಬಹುದು ಎಂಬ ವಾದವೂ ಕೇಳಿಬರುತ್ತಿದೆ.

ಗಿಲ್ಲಿ ನಟ ತಮ್ಮ ಹಾಸ್ಯ, ಸರಳ ವ್ಯಕ್ತಿತ್ವ ಮತ್ತು ಪ್ರಾಮಾಣಿಕತೆಯಿಂದ ಜನರ ಮನ ಗೆದ್ದಿದ್ದಾರೆ. ಬಿಗ್ ಬಾಸ್ ನಂತರ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಅಭಿಮಾನಿಗಳ ಭಾರೀ ಬೆಂಬಲ ಅವರಿಗೆ ದೊರೆಯುತ್ತಿದೆ.

ಒಟ್ಟಿನಲ್ಲಿ ಹೇಳುವುದಾದರೆ, ಗಿಲ್ಲಿ ನಟ ಇಂದು ಕೇವಲ ಬಿಗ್ ಬಾಸ್ ವಿನ್ನರ್ ಅಲ್ಲ — ಅವರು ರಾಜ್ಯಮಟ್ಟದ ಚರ್ಚೆಯ ವಿಷಯವಾಗಿದ್ದಾರೆ. ಮನರಂಜನೆಯಿಂದ ಆರಂಭವಾದ ಅವರ ಪಯಣ ಇದೀಗ ರಾಜಕೀಯ ವೇದಿಕೆಯವರೆಗೂ ತಲುಪಿದೆ.

ನಿವೃತ್ತಿ ಘೋಷಿಸಿದ ಗಾಯಕ ಅರಿಜಿತ್ ಸಿಂಗ್: ಕೋಟ್ಯಂತರ ಅಭಿಮಾನಿಗಳಿಗೆ ಬಿಗ್ ಶಾಕ್

ಸಂಗೀತ ಲೋಕದ ಸೂಪರ್‌ಸ್ಟಾರ್ ಗಾಯಕ ಅರಿಜಿತ್ ಸಿಂಗ್ ನಿವೃತ್ತಿ ಘೋಷಣೆ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಅನೇಕ ಸೂಪರ್ ಹಿಟ್ ಹಾಡುಗಳ ಮೂಲಕ ಸಂಗೀತ ಲೋಕದಲ್ಲಿ ಅಚ್ಚಳಿಯದ ಗುರುತು ಮೂಡಿಸಿರುವ ಅರಿಜಿತ್, ಈಗ ಹಿನ್ನೆಲೆ ಗಾಯನದಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದ್ದಾರೆ.

ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. “ಈ ಪ್ರಯಾಣ ಅದ್ಭುತವಾಗಿತ್ತು. ಕೇಳುಗರಾಗಿ ನನಗೆ ನೀಡಿದ ಪ್ರೀತಿಗೆ ನಾನು ಸದಾ ಋಣಿಯಾಗಿದ್ದೇನೆ. ಇನ್ನು ಮುಂದೆ ಹೊಸ ಹಿನ್ನೆಲೆ ಗಾಯನ ಕೆಲಸಗಳನ್ನು ಸ್ವೀಕರಿಸುವುದಿಲ್ಲ”
ಎಂದು ಹೇಳಿದ್ದಾರೆ.

ಆದರೆ ಸಂಗೀತವನ್ನು ಸಂಪೂರ್ಣವಾಗಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಇನ್ನಷ್ಟು ಕಲಿಯಬೇಕು, ಚಿಕ್ಕ ಕಲಾವಿದನಾಗಿ ಹೊಸ ಪ್ರಯತ್ನಗಳನ್ನು ಮುಂದುವರಿಸಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಒಪ್ಪಿಕೊಂಡಿರುವ ಹಾಡುಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.

ಕನ್ನಡದ ‘ಮೌನ ತಾಳಿತೆ..’ ಸೇರಿದಂತೆ ಹಲವು ಭಾಷೆಗಳ ಹಾಡುಗಳ ಮೂಲಕ ಬಹುಭಾಷಾ ಅಭಿಮಾನಿಗಳನ್ನು ಸಂಪಾದಿಸಿರುವ ಅರಿಜಿತ್, ಈ ನಿರ್ಧಾರಕ್ಕೆ ಕಾರಣವೇನು ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದು, “ಈ ನಿರ್ಧಾರ ಹಿಂತೆಗೆದುಕೊಳ್ಳಲಿ” ಎಂಬ ಆಶಯ ವ್ಯಕ್ತಪಡಿಸುತ್ತಿದ್ದಾರೆ.

ಲ್ಯಾಂಡಿಂಗ್ ವೇಳೆ ವಿಮಾನ ಪತನ; ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಾವು!

0

ಮುಂಬೈ:- ಮಹಾರಾಷ್ಟ್ರದ ಬಾರಾಮತಿಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಭೀಕರವಾಗಿ ಪತನಗೊಂಡಿದೆ.

ಈ ದುರ್ಘಟನೆಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಆರು ಮಂದಿ ಮೃತಪಟ್ಟಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮೂಲಗಳು ದೃಢಪಡಿಸಿವೆ. ಘಟನೆ ನಡೆದ ತಕ್ಷಣವೇ ರಕ್ಷಣಾ ಹಾಗೂ ತುರ್ತು ಸೇವಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಪ್ರಾಥಮಿಕ ವರದಿಗಳ ಪ್ರಕಾರ ತುರ್ತು ಭೂಸ್ಪರ್ಶ (ಎಮರ್ಜೆನ್ಸಿ ಲ್ಯಾಂಡಿಂಗ್) ಮಾಡಲು ಪ್ರಯತ್ನಿಸುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅಜಿತ್ ಪವಾರ್ ಅವರು ಬಾರಾಮತಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ವಿಮಾನ ಪತನಕ್ಕೆ ತಾಂತ್ರಿಕ ದೋಷ ಅಥವಾ ಇಳಿಯುವ ವೇಳೆ ಉಂಟಾದ ಅಡಚಣೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸುದ್ದಿಯಿಂದ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ತೀವ್ರ ಆಘಾತ ಉಂಟಾಗಿದ್ದು, ಸುದೀರ್ಘ ಕಾಲ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ವ್ಯಾಪಕ ಸಂತಾಪ ವ್ಯಕ್ತವಾಗುತ್ತಿದೆ.

ಇಂದಿನಿಂದ ಕೇಂದ್ರ ಬಜೆಟ್ ಅಧಿವೇಶನ ಶುರು; ಉಭಯ ಸದನ ಉದ್ದೇಶಿಸಿ ರಾಷ್ಟ್ರಪತಿ ಮುರ್ಮು ಭಾಷಣ!

0

ನವದೆಹಲಿ: 2026-27ರ ಆರ್ಥಿಕ ವರ್ಷದ ಕೇಂದ್ರ ಬಜೆಟ್‌ ಮಂಡಿಸಲು ಕೇಂದ್ರ ಸರ್ಕಾರ ಸಿದ್ದತೆ ನಡೆಸಿದೆ.

ಇಂದಿನಿಂದ ಸಂಸತ್ತಿನಲ್ಲಿ ಕೇಂದ್ರ ಬಜೆಟ್‌ ಅಧಿವೇಶನವು ಆರಂಭವಾಗಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿ ಅಧಿವೇಶನಕ್ಕೆ ಚಾಲನೆ ನೀಡಲಿದ್ದಾರೆ. ಅಧಿವೇಶನವು ಎರಡು ಹಂತಗಳಲ್ಲಿ ನಡೆಯಲಿದೆ. ಫೆಬ್ರವರಿ 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡಿಸಲಿದ್ದಾರೆ. ಅವರ ಬಜೆಟ್‌ ಮಂಡನೆಯೊಂದಿಗೆ ಫೆಬ್ರವರಿ 13 ರವರೆಗೆ ಮೊದಲ ಹಂತದ ಅಧಿವೇಶನ ನಡೆಯಲಿದೆ.

ಬಳಿಕ ಮಾರ್ಚ್ 9ರಿಂದ ಏಪ್ರಿಲ್ 2ರವರೆಗೆ ಎರಡನೇ ಹಂತದ ಅಧಿವೇಶನ ನಡೆಯಲಿದೆ. ಎರಡನೇ ಹಂತದ ವೇಳೆ ಬಜೆಟ್‌ ಕುರಿತು ಗಂಭೀರ ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಅಧಿವೇಶನದ ಸಮಯದಲ್ಲಿ ಮನರೇಗಾ ಮತ್ತು ಎಸ್‌ಐಆರ್‌ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ವಿರೋಧ ಪಕ್ಷಗಳು ಸಜ್ಜಾಗಿವೆ ಎಂದು ವರದಿಯಾಗಿದೆ.

ದೇಶಾದ್ಯಂತ ಮನರೇಗಾ ಬದಲಾವಣೆಗೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್‌ ಸಂಸದರು, ‘ಕಾಂಗ್ರೆಸ್ ಸಂಸದೀಯ ಸಮಿತಿ’ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ.

“ಗಿಲ್ಲಿ ವಿಚಾರದಲ್ಲಿ ಮತ್ತೆ ಸತೀಶ್ ವಿವಾದ: ‘ನಶೆಯಲ್ಲಿ ಹೇಳಿದ್ದೆ’ ಎಂದು ಕೈ ತೊಳೆದುಕೊಂಡ ಡಾಗ್ ಬ್ರೀಡರ್”

ಡಾಗ್ ಬ್ರೀಡರ್ ಸತೀಶ್ ಕ್ಯಾಡಬಾಮ್ ಎಲ್ಲೆಂದರಲ್ಲಿ ಮಾತನಾಡುವ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಟಿವಿ ಡಿಬೇಟ್‌ಗಳಿಂದ ಹಿಡಿದು ಯೂಟ್ಯೂಬ್ ಸಂದರ್ಶನಗಳವರೆಗೆ, ಪ್ರತಿಯೊಂದು ವೇದಿಕೆಯಲ್ಲೂ ತಮ್ಮ ಹೇಳಿಕೆಗಳಿಂದಲೇ ಸುದ್ದಿ ಆಗುತ್ತಿದ್ದಾರೆ. ಇದೀಗ ‘ಗಿಲ್ಲಿ ಗೆಲ್ಲಲ್ಲ’ ಹೇಳಿಕೆ ಕುರಿತು ಹೊಸ ಸ್ಪಷ್ಟನೆ ನೀಡಿದ್ದಾರೆ.

ಗಿಲ್ಲಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದ ಸತೀಶ್, ‘ನನಗೆ ಬಿಗ್ ಬಾಸ್ ಮನೆಯಲ್ಲಿ ಹಿಂಸೆ ಕೊಟ್ಟ’, ‘ಗಿಲ್ಲಿ ಹೊರಗೆ ಹೋಗಲು ನಾನೇ ಕಾರಣ’ ಎಂದು ಹಲವು ಬಾರಿ ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದರು. ಈ ಹೇಳಿಕೆಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು.

ಈಗ ಮಾಧ್ಯಮಗಳ ಎದುರು ಮಾತನಾಡಿದ ಸತೀಶ್, “ನಾನು ಹೇಳಿದ ಮಾತು ನಿಜವಾಗಿಲ್ಲ. ನಾನು ಜ್ಯೋತಿಷಿ ಅಲ್ಲ. ಕುಡಿದ ನಶೆಯಲ್ಲಿ ಹೇಳಿದ್ದ ಮಾತು ಅದು” ಎಂದು ಹೇಳುವ ಮೂಲಕ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.

ಈ ವಿಚಾರದಿಂದ ಬೇಸರಗೊಂಡಿರುವ ಸತೀಶ್, ಗಿಲ್ಲಿ ಅಭಿಮಾನಿಗಳು ತಮಗೆ ಹಾಗೂ ತಮ್ಮ ತಾಯಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿ ಕೆಲವರನ್ನು ಬಂಧಿಸುವಂತೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ ಸಾರ್ವಜನಿಕ ವಲಯದಲ್ಲಿ ಸತೀಶ್ ಹೇಳಿಕೆಗಳ ಮೇಲೆ ನಂಬಿಕೆ ಕಡಿಮೆಯಾಗಿದೆ. ಅವರ ಬಹುತೇಕ ಮಾತುಗಳು ಟ್ರೋಲ್ ಆಗುತ್ತಿದ್ದು, ಈಗ ಅವರ ಪ್ರತಿಯೊಂದು ಹೇಳಿಕೆಯನ್ನೂ ಜನರು ಸಂಶಯದಿಂದಲೇ ನೋಡುತ್ತಿದ್ದಾರೆ.

ಉತ್ತರ ಕನ್ನಡ| ಮನೆಗೆ ಯಾರೂ ಇಲ್ಲದ ವೇಳೆ ಬೆಂಕಿ ಹಚ್ಚಿದ್ದ 18ರ ಯುವಕ ಅರೆಸ್ಟ್!

0

ಉತ್ತರ ಕನ್ನಡ: ಜಿಲ್ಲೆಯ ಕುಮಟಾ ತಾಲ್ಲೂಕಿನ ದೇವರ ಹಕ್ಕಲದಲ್ಲಿ ದುಷ್ಕರ್ಮಿಯೊಬ್ಬ ಮನೆಯೊಂದಕ್ಕೆ ಬೆಂಕಿ ಇಟ್ಟಿರುವ ಘಟನೆ ಜರುಗಿದೆ.

ಅದೃಷ್ಟವಶಾತ್ ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದೆ ಇದ್ದ ಕಾರಣ ಭಾರೀ ಅನಾಹುತ ತಪ್ಪಿದೆ. 18ರ ಹುಡುಗ ಈ ಕೃತ್ಯ ಎಸಗಿದ್ದಾನೆ. ದಿನಕರ್ ಎಂಬುವವರಿಗೆ ಸೇರಿದ ಮನೆ ಇದಾಗಿದೆ. ಕುಮಟಾದ ವೆಂಕಟರಮಣ ದೇವರ ಜಾತ್ರೆಗೆ ದಿನಕರ್ ಕುಟುಂಬ ತೆರಳಿತ್ತು. ಈ ವೇಳೆ ಬೆಂಕಿ ಇಡಲಾಗಿದೆ.

ಮನೆಗೆ ಬೆಂಕಿ ಹಚ್ಚುತ್ತಿದ್ದಂತೆ ನೆರೆಯವರು ಬೆಂಕಿ ನಂದಿಸಿದ್ದಾರೆ. ಆರೋಪಿಯನ್ನು ಕುಮಟಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಎಸ್‌ಪಿ ದೀಪನ್ , ಎಎಸ್‌ಪಿ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕುಮಟಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊಪ್ಪಳ| ಹೃದಯಾಘಾತದಿಂದ 18ರ ಪಿಯುಸಿ ವಿದ್ಯಾರ್ಥಿನಿ ಸಾವು

0

ಕೊಪ್ಪಳ:- ಜಿಲ್ಲೆ ಕೂಕನೂರ ತಾಲೂಕಿನ ರ್ಯಾವಣಕಿ ಗ್ರಾಮದಲ್ಲಿ ಹೃದಯಾಘಾತಕ್ಕೆ 18ರ ಯುವತಿ ಸಾವನ್ನಪ್ಪಿರುವ ಘಟನೆ ಜರುಗಿದೆ.

18 ವರ್ಷದ ಕಾವ್ಯಾ ಚಲವಾದಿ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತ ಯುವತಿ ಪಿಯುಸಿ ಓದುತ್ತಿದ್ದರು ಎಂದು ತಿಳಿದುಬಂದಿದೆ.

ಮೃತ ಕಾವ್ಯಾ ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮಗಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಶಿವಮೊಗ್ಗದಲ್ಲಿ ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್; ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ!

0

ಶಿವಮೊಗ್ಗ: ನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ನಾನ್ ಎಸಿ ಸ್ಲೀಪರ್ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಸ್ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಅರಸಾಳು ಸಮೀಪದ ಸೂಡೂರು ಗ್ರಾಮದ ಬಳಿ ನಡೆದಿದೆ.

ಬೆಂಕಿ ಹೊತ್ತಿಕೊಂಡ ದೃಶ್ಯ ಭಯಾನಕವಾಗಿತ್ತು. ಅನ್ನಪೂರ್ಣ ಹೆಸರಿನ ಖಾಸಗಿ ಬಸ್ ಹೊಸನಗರ ತಾಲೂಕು ನಗರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ನಗರ, ಹೊಸನಗರ ಹಾಗೂ ರಿಪ್ಪನ್‌ಪೇಟೆಗಳಲ್ಲಿ ಪ್ರಯಾಣಿಕರನ್ನು ಪಿಕ್‌ಅಪ್ ಮಾಡಿಕೊಂಡಿತ್ತು. ಅರಸಾಳು ಗ್ರಾಮದ ಬಳಿ ಇರುವ 9ನೇ ಮೈಲಿಗಲ್ಲಿನ ಸಮೀಪ ಬಸ್ ಸಾಗುತ್ತಿದ್ದಾಗ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಬಸ್‌ಗೆ ಬೆಂಕಿ ತಗುಲಿದೆ. ಈ ವೇಳೆ ಬಸ್‌ನಲ್ಲಿ ಸುಮಾರು 36 ಜನ ಪ್ರಯಾಣಿಕರು ಇದ್ದರು. ಪರಿಸ್ಥಿತಿ ಅರಿತ ಚಾಲಕ ಸಮಯಪ್ರಜ್ಞೆ ಪ್ರದರ್ಶಿಸಿ ಬಸ್ ಅನ್ನು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಬಸ್ ಪ್ರಯಾಣ ಆರಂಭಿಸಿ ಕೇವಲ 30 ನಿಮಿಷಗಳಷ್ಟೇ ಕಳೆದಿದ್ದು, ಪ್ರಯಾಣಿಕರು ಇನ್ನೂ ನಿದ್ರೆಗೆ ಜಾರಿರದ ಕಾರಣ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಎಲ್ಲರೂ ಬಸ್‌ನಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯಲ್ಲಿ ಎಲ್ಲಾ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, 12 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದ ಪ್ರಯಾಣಿಕರನ್ನು ರಿಪ್ಪನ್‌ಪೇಟೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ರಿಪ್ಪನ್‌ಪೇಟೆ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಬಸ್ ಹೊರಟು ಹೆಚ್ಚು ಸಮಯವಾಗಿರದ ಕಾರಣ ಹಾಗೂ ಹೇಗೆ ಬೆಂಕಿ ತಗುಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ರಿಪ್ಪನ್‌ಪೇಟೆ ಠಾಣೆಯ ಪಿಎಸ್ಐ ಮಾತನಾಡಿ, ಬಸ್‌ಗೆ ಬೆಂಕಿ ತಗುಲಿದ ಕಾರಣ ತಿಳಿದುಬಂದಿಲ್ಲ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಗಾಯಗೊಂಡ ಎಲ್ಲ ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಉಡುಪಿ ಬೋಟ್ ದುರಂತ: ಚಿಕಿತ್ಸೆ ಫಲಕಾರಿಯಾಗದೆ ಮತ್ತೋರ್ವ ಯುವತಿ ಸಾವು!

0

ಉಡುಪಿ: ಉಡುಪಿಯ ಮಲ್ಪೆ ವ್ಯಾಪ್ತಿಯ ಕೋಡಿಬೆಂಗ್ರೆಯಲ್ಲಿರುವ ಡೆಲ್ಟಾ ಬೀಚ್ ಸಮೀಪ ನಡೆದ ಪ್ರವಾಸಿ ಬೋಟ್ ದುರಂತ ಪ್ರಕರಣದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮತ್ತೋರ್ವ ಯುವತಿ ಸಾವನ್ನಪ್ಪಿದ್ದಾರೆ.

ಮೈಸೂರಿನ ದಿಶಾ (23) ಮೃತ ಯುವತಿ ಎಂದು ಗುರುತಿಸಲಾಗಿದೆ. ಈ ಮೂಲಕ ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ನಿನ್ನೆ ನಡೆದ ಅಪಘಾತದಲ್ಲಿ ಶಂಕರಪ್ಪ (22) ಹಾಗೂ ಸಿಂಧು (23) ಎಂಬುವವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿರುವ ಧರ್ಮರಾಜ್ ಎಂಬ ಯುವಕನಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಡಿಬೆಂಗ್ರೆಯ ಡೆಲ್ಟಾ ಬೀಚ್ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬೀಚ್ ದೃಶ್ಯಗಳು ಭೂಲೋಕದ ಸ್ವರ್ಗದಂತೆ ಕಾಣುತ್ತವೆ. ಇದೇ ಆಕರ್ಷಣೆಯಿಂದ ಮೈಸೂರಿನ ಬಿಪಿಒ ಕಾಲ್ ಸೆಂಟರ್‌ನ 28 ಮಂದಿ ಯುವಕ–ಯುವತಿಯರ ಪ್ರವಾಸಿ ತಂಡ ಮೋಜು ಮಾಡಲು ಉಡುಪಿಗೆ ಆಗಮಿಸಿತ್ತು. ಆದರೆ ಅವರ ಪ್ರವಾಸವೇ ದುರಂತದಲ್ಲಿ ಅಂತ್ಯಗೊಂಡಿದೆ.

ಡೆಲ್ಟಾ ಬೀಚ್ ಸಮೀಪ ಎರಡು ಪ್ರವಾಸಿ ಬೋಟುಗಳಲ್ಲಿ 28 ಮಂದಿ ಕಡಲಿಗೆ ಇಳಿದಿದ್ದರು. ಭದ್ರತಾ ದೃಷ್ಟಿಯಿಂದ ಎಲ್ಲರಿಗೂ ಲೈಫ್ ಜಾಕೆಟ್ ನೀಡಲಾಗಿದ್ದರೂ, ಕೆಲವರು ಮಾತ್ರ ಜಾಕೆಟ್ ಧರಿಸಿದ್ದು, ಇನ್ನು ಕೆಲವರು ನಿರ್ಲಕ್ಷ್ಯದಿಂದ ಧರಿಸದೆ ಬೋಟ್ ಹತ್ತಿದ್ದರು ಎನ್ನಲಾಗಿದೆ. ಕಡಲಿನಲ್ಲಿ ಬೋಟ್ ಸಾಗುತ್ತಿದ್ದಾಗ ಕೆಲ ಪ್ರವಾಸಿಗರು ಕುಣಿದು ಹಾರಾಟ ನಡೆಸಿದ್ದು, ಇದರಿಂದ ಬೋಟ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.
ಘಟನೆಯ ಸುದ್ದಿ ತಿಳಿದ ತಕ್ಷಣ ಸ್ಥಳೀಯ ಮೀನುಗಾರರಾದ ನಾಗರಾಜ, ವಿಶ್ವನಾಥ್ ಶ್ರೀಯಾನ್ ಹಾಗೂ ದಿನೇಶ್ ಕರ್ಕೆರ ಅವರು ಮತ್ತೊಂದು ಬೋಟಿನ ಮೂಲಕ ಸ್ಥಳಕ್ಕೆ ಧಾವಿಸಿ ನೀರಿನಲ್ಲಿ ಮುಳುಗಿದವರನ್ನು ರಕ್ಷಣೆ ಮಾಡಿದ್ದಾರೆ.

ಲೈಫ್ ಜಾಕೆಟ್ ಧರಿಸಿದ್ದ ಹಲವರನ್ನು ಸುಲಭವಾಗಿ ಮೇಲಕ್ಕೆತ್ತಿ ಸುರಕ್ಷಿತವಾಗಿ ಇನ್ನೊಂದು ಬೋಟಿಗೆ ಸ್ಥಳಾಂತರಿಸಲಾಯಿತು. ನೀರಿನಲ್ಲಿ ಬಿದ್ದ 14 ಮಂದಿಯ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಶಂಕರಪ್ಪ ಹಾಗೂ ಸಿಂಧು ನಿನ್ನೆ ಮೃತಪಟ್ಟರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ದಿಶಾ ಕೊನೆಯುಸಿರೆಳೆದಿದ್ದಾರೆ. ಈ ದುರಂತದಿಂದ ಪ್ರವಾಸಿಗರ ಕುಟುಂಬಗಳಲ್ಲಿ ಶೋಕದ ವಾತಾವರಣ ಆವರಿಸಿದೆ.

ರಾಮಣ್ಣ ಮೇಗಲಮನಿಯವರಿಗೆ ಸಮಾಜಸೇವಾ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಸ್ವಾರ್ಥ ಸೇವೆ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಕಡು ಬಡವರ ಹಿತ ಕಾಯುವ ಉದ್ದೇಶದೊಂದಿಗೆ ಸೇವೆ ಸಲ್ಲಿಸುತ್ತಿರುವ ಅತ್ತಿಕಟ್ಟಿ ಗ್ರಾಮದ ಹಿರಿಯ ನೇತಾರ ಹಾಗೂ ಸಮಾಜ ಸೇವಕರಾದ ರಾಮಣ್ಣ ಮೇಗಲಮನಿ ಅವರಿಗೆ ತಾಲೂಕಾಡಳಿತದ ವತಿಯಿಂದ 77ನೇ ಗಣರಾಜ್ಯೋತ್ಸವದ ಅಂಗವಾಗಿ ಸಮಾಜಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸೋಮಪ್ಪ–ಫಕೀರವ್ವ ದಂಪತಿಗಳ ಪುತ್ರ ರಾಮಣ್ಣ ಮೇಗಲಮನಿ ಅತ್ತಿಕಟ್ಟಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಡೋಣಿ ಗ್ರಾಮದಲ್ಲಿ 7ನೇ ತರಗತಿ, ಹಳ್ಳಿಕೇರಿಯಲ್ಲಿ 8 ಮತ್ತು 9ನೇ ತರಗತಿ ಹಾಗೂ ಗದಗ ಬಸವೇಶ್ವರ ಶಾಲೆಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಪೂರೈಸಿದರು. 30ನೇ ವಯಸ್ಸಿನಲ್ಲಿ 10ನೇ ತರಗತಿ ಪೂರ್ಣಗೊಳಿಸಿ, ಪಿಯುಸಿ ನಂತರ 35ನೇ ವಯಸ್ಸಿನಲ್ಲಿ ಗದಗ ನಗರದ ಕೆಎಸ್‌ಎಸ್ ಕಾಲೇಜಿನಲ್ಲಿ ಬಿ.ಎ. ಪದವಿ ಆರಂಭಿಸಿದರು. 50ನೇ ವಯಸ್ಸಿನಲ್ಲಿ ಉಳಿದ ವಿಷಯಗಳನ್ನು ಬರೆದು ಬಿ.ಎ. ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಜೀವನಪೂರ್ತಿ ಕಲಿಕೆಯ ಪ್ರೇರಣೆಯಾಗಿ ಹೊರಹೊಮ್ಮಿದ್ದಾರೆ.

ರಾಜಕೀಯ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದು, 2005ರಲ್ಲಿ ಅತ್ತಿಕಟ್ಟಿ ಗ್ರಾ.ಪಂ ಸದಸ್ಯರಾಗಿ, 2018ರಲ್ಲಿ ಎಸ್‌ಡಿಎಂಸಿ ಸದಸ್ಯರಾಗಿ, ಎಪಿಎಂಸಿ ಸದಸ್ಯರಾಗಿ ಹಾಗೂ ಮುಂಡರಗಿ ತಾಲೂಕು ಪಂಚ ಗ್ಯಾರಂಟಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ದುರ್ಗಾದೇವಿ ಸಮಿತಿಯ ಅಧ್ಯಕ್ಷರಾಗಿ ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ಕದಾಂಪುರ ಕ್ಲಸ್ಟರ್ ವ್ಯಾಪ್ತಿಯ 10 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪ್ರತಿ ಶಾಲೆಗೆ 20 ಸಾವಿರ ರೂ.ಗಳಂತೆ ಒಟ್ಟು 2 ಲಕ್ಷ ರೂ. ದೇಣಿಗೆ ನೀಡಿದ್ದು, ಅತ್ತಿಕಟ್ಟಿ ಗ್ರಾಮದ ಶಾಲೆಗೆ 1,10,000 ರೂ. ದೇಣಿಗೆ ನೀಡಿದ್ದಾರೆ. ಈ ಮೊತ್ತವನ್ನು ಬ್ಯಾಂಕ್ ಡಿಪಾಸಿಟ್ ಮಾಡಿ ಅದರ ಬಡ್ಡಿ ಹಣವನ್ನು ಪ್ರತಿವರ್ಷ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ನೀಡುವ ವ್ಯವಸ್ಥೆ ಮಾಡಿರುವುದು ಅವರ ಸೇವೆಯ ವಿಶೇಷತೆಯಾಗಿದೆ.

ಮುಂಡರಗಿ ನಗರದ ಕ್ರೀಡಾಂಗಣದಲ್ಲಿ 80 ಸಾವಿರ ರೂ. ವೆಚ್ಚದಲ್ಲಿ ದ್ವಜಸ್ತಂಭ ನಿರ್ಮಾಣ, 1 ಲಕ್ಷ ರೂ. ಕನಕಭವನ ನಿರ್ಮಾಣಕ್ಕೆ ಸಹಾಯ, ಡಂಬಳ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ 50 ಸಾವಿರ ರೂ. ದೇಣಿಗೆ, ಶಾಲಾ ಪರಿಕರ ವಿತರಣೆ ಹಾಗೂ ಕಡುಬಡವರಿಗೆ ಆರ್ಥಿಕ ನೆರವು ನೀಡುತ್ತಾ ಬರುತ್ತಿದ್ದಾರೆ.

ಈ ಸೇವೆಗಾಗಿ ಅವರಿಗೆ ತಾಲೂಕು ಸಮಾಜಸೇವಾ ಪ್ರಶಸ್ತಿ, ಉತ್ತಮ ಎಸ್‌ಡಿಎಂಸಿ ಅಧ್ಯಕ್ಷ ಪ್ರಶಸ್ತಿ ಸೇರಿದಂತೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹಲವಾರು ಗೌರವಗಳು ಸಂದಿವೆ. ಅವರ ನಿರಂತರ ಜನಸೇವೆಗೆ ಗ್ರಾಮಸ್ಥರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಮಕ್ಕಳ ಶಿಕ್ಷಣವೇ ಸಮಾಜದ ಭವಿಷ್ಯ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಉತ್ತಮ ಅವಕಾಶಗಳು ದೊರಕಬೇಕು ಎಂಬ ಉದ್ದೇಶದಿಂದ ಈ ಸಹಾಯ ಮಾಡಲಾಗಿದೆ. ಮುಂದೆಯೂ ಶಿಕ್ಷಣ ಕ್ಷೇತ್ರಕ್ಕೆ ನನ್ನ ಸಹಕಾರ ನಿರಂತರವಾಗಿರುತ್ತದೆ”

  • ರಾಮಣ್ಣ ಮೇಗಲಮನಿ.
    ಸಮಾಜಸೇವಾ ಪ್ರಶಸ್ತಿ ಪುರಸ್ಕೃತರು.

“ರಾಮಣ್ಣ ಮೇಗಲಮನಿ ಅವರು 10 ಶಾಲೆಗಳಿಗೆ 20 ಸಾವಿರ ರೂ. ಹಾಗೂ ಅತ್ತಿಕಟ್ಟಿ ಗ್ರಾಮದ ಶಾಲೆಗೆ 1.10 ಲಕ್ಷ ರೂ. ನೆರವು ನೀಡುವ ಮೂಲಕ ತಾಲೂಕಿನ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಮತ್ತು ಪ್ರತಿಭಾ ಪ್ರೋತ್ಸಾಹಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ”

  • ಗಂಗಾಧರ ಅಣ್ಣಿಗೇರಿ.
    ಕ್ಷೇತ್ರ ಶಿಕ್ಷಣಾಧಿಕಾರಿ, ಮುಂಡರಗಿ.

error: Content is protected !!