Home Blog Page 12

ಜುಲೈ 3ರಿಂದ ಫುಟ್‌ಬಾಲ್ ತರಬೇತಿ

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲೂ ಫುಟ್‌ಬಾಲ್ ಆಟಗಾರರ ಸಂಖ್ಯೆ ಹೆಚ್ಚುತ್ತಿದ್ದು, ಆಸಕ್ತರಿಗೆ ಗುಣಮಟ್ಟದ ತರಬೇತಿ ನೀಡಲು ಹಾಗೂ ಅರ್ಹ ತರಬೇತುದಾರರಿಂದ ತರಬೇತಿ ಸಿಗಲಿ ಎಂಬ ಉದ್ದೇಶದಿಂದ ‘ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಷನ್’ನ ‘ಡಿ’ ಲೈಸೆನ್ಸ್ ಕೋರ್ಸ್ಗೆ ಜುಲೈ 3ರಿಂದ 8ರವರೆಗೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ಅಧ್ಯಕ್ಷ ಸರ್ಫರಾಜ ಶೇಖ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಫುಟ್‌ಬಾಲ್ ಆಟಗಾರರಿದ್ದರು. ಆದರೆ, ಇದೀಗ ಯುವಕರು, ವಿದ್ಯಾರ್ಥಿಗಳು ಫುಟ್‌ಬಾಲ್ ಕ್ರೀಡೆಯತ್ತ ಆಸಕ್ತಿ ವಹಿಸುತ್ತಿದ್ದಾರೆ. ಆದರೆ, ಅವರೆಲ್ಲರಿಗೂ ತರಬೇತಿ ನೀಡಲು ಅರ್ಹ ತರಬೇತುದಾರರ ಕೊರತೆಯಿದ್ದು, ಈ ತರಬೇತಿಯಿಂದ ಕೊರತೆ ನೀಗಲಿದೆ. ಈ ಉದ್ದೇಶದಿಂದ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತಿ ನಡೆಯಲಿದೆ ಎಂದರು.

ತರಬೇತಿ ವೇಳೆ 24 ಸ್ಲಾಟ್‌ಗಳಿದ್ದು, ಈಗಾಗಲೇ ಎಲ್ಲವೂ ನೋಂದಣಿಯಾಗಿವೆ. ಇದರಲ್ಲಿ ಗದಗನಿಂದ 18, ಜತೆಗೆ ಮೈಸೂರು, ಬೆಳಗಾವಿ, ಧಾರವಾಡ ಜಿಲ್ಲೆಗಳಿಂದಲೂ ಹೆಸರು ನೋಂದಣಿಯಾಗಿದೆ. ಈ ತರಬೇತಿಗೆ ಕರ್ನಾಟಕ ಸ್ಟೇಟ್ ಫುಟ್‌ಬಾಲ್ ಅಸೋಸೀಯೇಶನ್ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರೂ ಸಹ ಸಹಕಾರ ನೀಡಿದ್ದು, ಅವರಿಗೂ ಸಹ ಗದಗ ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ಅಭಿನಂದಿಸಲಿದೆ ಎಂದು ತಿಳಿಸಿದರು.

ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಷನ್‌ನ ‘ಡಿ’ ಲೈಸೆನ್ಸ್ ಕೋರ್ಸ್ ಪೂರ್ಣಗೊಳಿಸಿರುವ ಫುಟ್‌ಬಾಲ್ ತರಬೇತುದಾರ ಶಶಿಕುಮಾರ ಮುಂಡರಗಿ ಮಾತನಾಡಿ, ಗದಗ ಜಿಲ್ಲೆ ಪ್ರತಿ ತಾಲೂಕು, ಹೋಬಳಿ ಮಟ್ಟದಲ್ಲೂ ಫುಟ್‌ಬಾಲ್ ಕ್ರೀಡಾಪಟುಗಳು ಇರಬೇಕು. ಆ ಮೂಲಕ ಗದಗ ಫುಟ್‌ಬಾಲ್ ಸಿಟಿಯಾಗಬೇಕು ಎಂಬ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ಆಸಕ್ತಿಯಿಂದಾಗಿ ‘ಎಲೆವನ್ ಸೈಡ್’ ಅಂತಾರಾಷ್ಟ್ರೀಯ ಗುಣಮಟ್ಟದ ಫುಟ್‌ಬಾಲ್ ಕ್ರೀಡಾಂಗಣ ಬರಲಿದೆ. ಇದಕ್ಕೆ ಪೂರಕವಾಗಿ ತರಬೇತುದಾರರ ಸಂಖ್ಯೆ ಹೆಚ್ಚಿ, ಫುಟ್‌ಬಾಲ್ ಕ್ರೀಡಾಪಟುಗಳು ಹೆಚ್ಚಾಗಿ, ಭಾರತ ತಂಡವೂ ಸೇರಿ ರಾಷ್ಟ್ರ ಹಾಗೂ ಅಂತಾ ರಾಷ್ಟ್ರ ಮಟ್ಟದಲ್ಲಿ ಗದಗ ಜಿಲ್ಲೆ ಪ್ರತಿನಿಧಿಸುವವರನ್ನು ಸಿದ್ಧಗೊಳಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ‘ಡಿ’ ಲೈಸೆನ್ಸ್ ಕೋರ್ಸ್ ಪೂರ್ಣಗೊಳಿಸಿರುವ ಫುಟ್‌ಬಾಲ್ ತರಬೇತುದಾರ ಚಂದ್ರಶೇಖರ ಅಣ್ಣಿಗೇರಿ, ಓಂಕಾರ ಓದುಗೌಡರ, ರಮೇಶ ಕರಿಕಟ್ಟಿ, ಪೃಥ್ವಿ ಪರಾಪೂರ ಇದ್ದರು.

ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಷನ್‌ನ ‘ಎ’ ಲೈಸೆನ್ಸ್ ಡಿಪ್ಲೋಮಾ ಕೋಚ್ ಹಾಗೂ ಕರ್ನಾಟಕ ಸ್ಟೇಟ್ ಫುಟ್‌ಬಾಲ್ ಅಸೋಸಿಯೇಶನ್‌ನ ಕೋಚ್ ಎಜ್ಯುಕೇಟರ್ ಶಿವಕುಮಾರ ವರದರಾಜ ಮಾತನಾಡಿ, ಫುಟ್‌ಬಾಲ್ ತರಬೇತಿ ಪಡೆಯುವ ಆಸಕ್ತರಿಗೆ ಗುಣಮಟ್ಟದ ತರಬೇತಿ ಸಿಕ್ಕರೆ ಗುಣಮಟ್ಟದ ಕ್ರೀಡಾಪಟುಗಳು ಹೊರಹೊಮ್ಮುತ್ತಾರೆ. ಈ ನಿಟ್ಟಿನಲ್ಲಿ ಕೋರ್ಸ್ ನೆರವಾಗಲಿದೆ ಎಂದು ಹೇಳಿದರು.

ರಾಷ್ಟ್ರ ಮಟ್ಟದ ಆಯುರ್ವೇದ ಸಮ್ಮೇಳನ ಜು.5ಕ್ಕೆ

ವಿಜಯಸಾಕ್ಷಿ ಸುದ್ದು, ಗದಗ: ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿ ಜುಲೈ 5ರಂದು ಬೆಳಗ್ಗೆ 10.30ಕ್ಕೆ ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸ್ನಾತಕೋತ್ತರ ಸಂಶೋಧನಾ ಕೇಂದ್ರದಿಂದ ರಾಷ್ಟ್ರ ಮಟ್ಟದ ಆಯುರ್ವೇದ ಸಮ್ಮೇಳನ `ಚೈತನ್ಯ’ ಹಮ್ಮಿಕೊಳ್ಳಲಾಗಿದೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಂತೋಷ ಬೆಳವಡಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನರ ದೌರ್ಬಲ್ಯ ರೋಗಗಳ ಕುರಿತು ಸಮಗ್ರ ಅಧ್ಯಯನ ವಿಷಯದ ಬಗ್ಗೆ ರಾಷ್ಟ್ರ ಮಟ್ಟದ ಆಯುರ್ವೇದ ಮಹಾ ಸಮ್ಮೇಳನ ಆಯೋಜಿಸಲಾಗಿದೆ. ದೆಹಲಿಯ ರಾಷ್ಟ್ರೀಯ ಆಯುಷ್ ವಿಜ್ಞಾನ ಆಯೋಗ ಆಯುರ್ವೇದ ಮಂಡಳಿಯ ಮಾಜಿ ಅಧ್ಯಕ್ಷ ಡಾ. ಬಿ.ಎಸ್. ಪ್ರಸಾದ ಕಾರ್ಯಕ್ರಮ ಉದ್ಘಾಟಿಸುವರು. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಂತೋಷ ಬೆಳದಡಿ ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ಜಗದ್ಗುರು ಶಿವಾನಂದ ವಿದ್ಯಾವರ್ಧಕ ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್. ಪಾಟೀಲ, ನಿವೃತ್ತ ಪ್ರಾಚಾರ್ಯ ಡಾ. ಜಿ.ಬಿ. ಪಾಟೀಲ ಭಾಗವಹಿಸುವರು ಎಂದರು.

ಸಮ್ಮೇಳನದಲ್ಲಿ ನುರಿತ ಪ್ರಾಧ್ಯಾಪಕರು, ಚಿಕಿತ್ಸಕರು ಹಾಗೂ ನರ ದೌರ್ಬಲ್ಯ ರೋಗಗಳಿಗೆ ಸಂಬಂಧಪಟ್ಟ ವಿವಿಧ ವಿಷಯಗಳ ಮೇಲೆ ಉಪನ್ಯಾಸಗಳನ್ನು ಮತ್ತು ಪ್ರಬಂಧಗಳನ್ನು ಮಂಡಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಜ್ಞಾನದ ಹರಿವನ್ನು ಹಂಚಲಿದ್ದಾರೆ. ಡಾ. ಮುರಳಿಕೃಷ್ಣ, ಡಾ. ಅಶ್ವಿನಿಕುಮಾರ, ಡಾ. ವೀರಣ್ಣ ಜತ್ತಿ, ವಿನಾಯಕ ಅವರಿಂದ ಉಪನ್ಯಾಸ ಜರುಗಲಿದೆ ಎಂದರು.

ರಾಷ್ಟ್ರ ಮಟ್ಟದ ಆಯುರ್ವೇದ ಮಹಾ ಸಮ್ಮೇಳನಕ್ಕೆ ಕರ್ನಾಟಕ ಹಾಗೂ ಅಂತರ ರಾಜ್ಯಗಳಿಂದ ಸುಮಾರು 50ಕ್ಕೂ ಅಧಿಕ ವಿವಿಧ ಆಯುರ್ವೇದ ಮಹಾವಿದ್ಯಾಲಯಗಳು, ಸಂಘ-ಸಂಸ್ಥೆಗಳು ಹಾಗೂ ಸಂಶೋಧನಾ ಕೇಂದ್ರಗಳಿಂದ ಪ್ರಾಧ್ಯಾಪಕರು, ಸಂಶೋಧಕರು, ವಿಜ್ಞಾನಿಗಳು, ಪಿಎಚ್‌ಡಿ ಮತ್ತು ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ನರ ದೌರ್ಬಲ್ಯ ರೋಗಗಳ ವಿವಿಧ ವಿಷಯಗಳಿಗೆ ಸಂಬಂಧಿಸಿದ 200ಕ್ಕೂ ಹೆಚ್ಚು ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ವಿವಿಧ ರಾಜ್ಯಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಂಶೋಧಕರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ದುಗ್ಗಪ್ಪ ಕೊಲ್ಮೆ, ಡಾ. ಬೂದೇಶ ಕನಾಜ, ಡಾ. ಮಲ್ಲಿಕಾರ್ಜುನ, ಡಾ. ಕುಮಾರ ಚೌಡಪ್ಪನವರ ಇದ್ದರು.

ನರ ದೌರ್ಬಲ್ಯ ರೋಗಗಳು ಕೇವಲ ರೋಗಗಳಲ್ಲಿ ಬದಲಾಗಿ, ಮನುಷ್ಯನ ಮೆದುಳಿನಲ್ಲಿರುವ ನರ ಕೋಶಗಳ ಮೇಲೆ ಪರಿಣಾಮ ಬೀರುವ ನರ ಕೋಶಗಳ ಪ್ರಗತಿಶೀಲ ಕ್ಷೀಣತೆ ಅಥವಾ ಸಾವಿಗೆ ಕಾರಣವಾಗುವ ಹಲವಾರು ಪರಸ್ಥಿತಿಗಳಿಗೆ ಪ್ರಮುಖ ಪದವಾಗಿದೆ. ಇದು ಪ್ರಪಂಚಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ನರ ದೌರ್ಬಲ್ಯ ಕಾಯಿಲೆಗಳ ಆತ್ಮಹತ್ಯೆ ದೈಹಿಕ ಅಸ್ವಸ್ಥತೆ ಹೆಚ್ಚಿನ ವೆಚ್ಚಗಳು ಮತ್ತು ಕಳಪೆ ಗುಣಮಟ್ಟದ ಜೀವನದೊಂದಿಗೆ ಗಣನಿಯವಾಗಿ ಜಾಗತಿಕ ಆರೋಗ್ಯ ಸಮಸ್ಯೆಯನ್ನುಂಟು ಮಾಡುತ್ತಿದೆ ಎಂದು ಡಾ. ಸಂತೋಷ ಬೆಳವಡಿ ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷರ ಆಯ್ಕೆಗೆ ನ್ಯಾಯಾಲಯದ ತಡೆ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಮಧ್ಯಾಹ್ನ 12ಕ್ಕೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಿಗದಿಯಾಗಿತ್ತು. ವಿರೋಧಿ ಸದಸ್ಯರು ಸದ್ಯದ ಅಧ್ಯಕ್ಷೆ ಗಂಗವ್ವ ದ್ಯಾಮಣ್ಣ ಜಂಗಣ್ಣವರ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ್ದರಿಂದ ಅಧ್ಯಕ್ಷರ ಆಯ್ಕೆಗೆ ಮುಹೂರ್ತ ನಿಗದಿಯಾಗಿತ್ತು.

ಕರ್ನಾಟಕದ ಉಚ್ಛ ನ್ಯಾಯಾಲಯವು ಈ ಆಯ್ಕೆಗೆ ತಡೆಯಾಜ್ಞೆ ನೀಡಿರುವುದರಿಂದ ಸಭೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆಯೆಂದು ಉಪವಿಭಾಗಾಧಿಕಾರಿಗಳು ಆದೇಶ ಕಳಿಸಿದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಸಭೆಯನ್ನು ರದ್ದುಪಡಿಸಲಾಯಿತು.

ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ಯಾರೇ ಅಧ್ಯಕ್ಷರಾದರೂ ಅವರ ಅಧಿಕಾರದ ಅವಧಿ ಕೇವಲ ಆರೇ ತಿಂಗಳು. ಏಕೆಂದರೆ ಅಲ್ಲಿ ಯಾವುದಾದರೊಂದು ನೆಪದಿಂದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗುತ್ತದೆ. ಇದು ಗ್ರಾಮದ ಅಭಿವೃದ್ಧಿಗೆ ಹೊಡೆತ ನೀಡುತ್ತಿದೆ ಎಂಬುದು ಜಕ್ಕಲಿಯ ಸಾರ್ವಜನಿಕರ ಅಳಲು.

ಉಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅಧ್ಯಕ್ಷರ ಆಯ್ಕೆ ಸಭೆ ರದ್ದಾಗಿ ಪ್ರಸ್ತುತ ಅಧ್ಯಕ್ಷರೇ ಮುಂದಿನ ಆದೇಶದವರೆಗೂ ಮುಂದುವರೆಯುತ್ತಾರೆ ಎಂದು ತಿಳಿಯುತ್ತಿದ್ದಂತೆ ಅಧ್ಯಕ್ಷೆ ಗಂಗವ್ವ ಜಂಗಣ್ಣವರ ಅವರ ಅಭಿಮಾನಿಗಳು, ಮುತಣ್ಣ ಕಡಗದ ಮತ್ತಿತರರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಚುನಾವಣಾ ಕೆಲಸ ನೀಡದಂತೆ ಮನವಿ

ವಿಜಯಸಾಕ್ಷಿ ಸುದ್ದಿ, ಗದಗ: ಮತಗಟ್ಟೆ ಮಟ್ಟದ (ಬಿ.ಎಲ್.ಓ) ಚುನಾವಣಾ ಭಾಗದ ಕೆಲಸ ನೀಡದಂತೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಸಮಿತಿ ಗದಗ ವತಿಯಿಂದ ಗದಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಮೂಲಕ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಿಐಟಿಯು ಮುಖಂಡ ಮಹೇಶ ಹಿರೇಮಠ ಮಾತನಾಡಿ, ಅಂಗನವಾಡಿ ನೌಕರರು ಬಿ.ಎಲ್.ಓ. ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಈಗ ನಮ್ಮ ಇಲಾಖೆಯ ಕೆಲಸವನ್ನು ಹೊರತುಪಡಿಸಿ ಬೇರೆ ಇಲಾಖೆಯ ಕೆಲಸ ಮಾಡಬಾರದೆಂದು ಆದೇಶವಿದೆಯಲ್ಲದೆ, ಅಂಗನವಾಡಿ ಕೆಲಸಗಳೇ ಸಾಕಷ್ಟಿರುತ್ತವೆ. ಇದರ ನಡುವೆ ಬಿ.ಎಲ್.ಓ ಕೆಲಸ ಮಾಡಲು ಹೋದರೆ ಅಂಗನವಾಡಿ ಮಕ್ಕಳ ಶಾಲಾ ಪೂರ್ವ ಶಿಕ್ಷಣ ಕುಂಠಿತಗೊಳ್ಳುತ್ತದೆ ಎಂದು ಮನವಿ ಸಲ್ಲಿಸಿ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಮಾರುತಿ ಚಿಟಗಿ, ಪೀರು ರಾಠೋಡ, ಅಧ್ಯಕ್ಷರಾದ ಸಾವಿತ್ರಿ ಸಬ್ನಿಸ್, ಶಾರದಾ ರೋಣದ, ಗಂಗಮ್ಮ ದೇವರಡ್ಡಿ, ಸುಶೀಲಾ ಚಲವಾದಿ, ಗಿರಿಜಾ ಮಾಚಕ್ಕನವರ, ಕವಿತಾ ಬಡಿಗೇರ, ನೀಲಮ್ಮ ಹಿರೇಮಠ, ಅನ್ನಪೂರ್ಣ ಸಾಲಿಮಠ, ಶಾರದಾ ಹಳೇಮನಿ, ಮಂಗಲಾ ಪಟ್ಟಣಶೆಟ್ಟಿ, ಕಮಲಾಕ್ಷಿ ಬೀಳಗಿ, ಗಂಗಮ್ಮ ಮಾದರ, ಜ್ಯೋತಿ, ಶರಣಮ್ಮ ವಾಲಿ ಉಪಸ್ಥಿತರಿದ್ದರು.

ಕರವೇ ಮಹಿಳಾ ತಾಲೂಕಾಧ್ಯಕ್ಷರ ನೇಮಕ

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಕ್ಷಣಾ ವೇದಿಕೆ ಶಿರಹಟ್ಟಿ ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾಗಿ ಯಶೋಧ ದೇವಪ್ಪ ಬಾಳೋಜಿ ಇವರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಶಿರಹಟ್ಟಿ ವಿಭಾಗದಲ್ಲಿ ಹಲವು ವರ್ಷಗಳಿಂದ ಸೇವೆ ಮಾಡಿರುವ ಇವರನ್ನು ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾಧ್ಯಕ್ಷ ಹನಮಂತಪ್ಪ ಎಚ್.ಅಬ್ಬಿಗೇರಿ ಶಿರಹಟ್ಟಿ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿದ್ದಾರೆ.

ಮಾಧ್ಯಮ ಹಬ್ಬದಲ್ಲಿ `ಸಮಗ್ರ ಚಾಂಪಿಯನ್’

ವಿಜಯಸಾಕ್ಷಿ ಸುದ್ದಿ, ವಿಜಯಪುರ: ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿ.ವಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಜಂಟಿಯಾಗಿ ಹಮ್ಮಿಕೊಂಡಿದ್ದ ‘ಇಂಪ್ರೆಶನ್-2025’ ಮಾಧ್ಯಮ ಹಬ್ಬದಲ್ಲಿ ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿಯರು `ಸಮಗ್ರ ಚಾಂಪಿಯನ್‌ಶಿಪ್’ ಗಳಿಸಿದ್ದಾರೆ.

ತುಮಕೂರಿನಲ್ಲಿ ಎರಡು ದಿನಗಳ ಕಾಲ ನಡೆದ ‘ಇಂಪ್ರೆಶನ್-2025’ ಮಾಧ್ಯಮ ಹಬ್ಬದಲ್ಲಿ ಮಾಧ್ಯಮಕ್ಕೆ ಸಂಬಂಧಿಸಿದ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ 30ಕ್ಕೂ ಹೆಚ್ಚು ತಂಡಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು.

ಜ್ಯೋತಿ ಎಸ್- ಟಿವಿ ಸುದ್ದಿ ನಿರೂಪಣೆ (ಪ್ರಥಮ), ಶಿಲ್ಪಾ ಪವಾರ- ಪುಟ್ಟಕತೆ (ಪ್ರಥಮ), ಅಸ್ಮಾ ಪಲ್ಠನ್- ರೀಲ್ಸ್ ನಿರ್ಮಾಣ (ಪ್ರಥಮ), ಜ್ಯೋತಿ ಎಸ್-ಪಿಟಿಸಿ (ತೃತೀಯ), ಭಸಮ್ಮಾ ಹಾಗೂ ಜ್ಯೋತಿ ಎಸ್ ಚರ್ಚಾ ಸ್ಪರ್ಧೆ (ದ್ವಿತೀಯ), ಮೇಘಪುಷ್ಪಾ, ವಿದ್ಯಾಶ್ರೀ, ಅನ್ನಪೂರ್ಣಾ, ರಾಜೇಶ್ವರಿ ಹಾಗೂ ರತ್ನಾಂಜಲಿ ಜಾಹೀರಾತು ನಿರ್ಮಾಣದಲ್ಲಿ (ತೃತೀಯ) ಸ್ಥಾನ ಪಡೆದಿದ್ದಾರೆ.

ಸಮಗ್ರ ಚಾಂಪಿಯನ್ ಗಳಿಸಿರುವ ವಿದ್ಯಾರ್ಥಿನಿಯರನ್ನು ಹಂಗಾಮಿ ಕುಲಪತಿ ಪ್ರೊ. ನಾಮದೇವಗೌಡ, ಕುಲಸಚಿವ ಶಂಕರಗೌಡ ಸೋಮನಾಳ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ. ಚಂದ್ರಶೇಖರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಅಭಿನಂದಿಸಿದ್ದಾರೆ.

ಈ ವಿದ್ಯಾರ್ಥಿನಿಯರ ತಂಡದೊಂದಿಗೆ ಸಹಾಯಕ ಪ್ರಾಧ್ಯಾಪಕರಾದ ಡಾ. ತಹಮೀನಾ ನಿಗಾರ ಸುಲ್ತಾನಾ, ಸಂದೀಪ್, ಅತಿಥಿ ಉಪನ್ಯಾಸಕರಾದ ಸುಷ್ಮಾ ಪವಾರ, ಫಿಲೋಮಿನಾ ಮತ್ತು ಪವಿತ್ರಾ ಕಂಬಾರ ಇದ್ದರು.

ಪಂಚ ಗ್ಯಾರಂಟಿಯಿಂದ ಸಮ ಸಮಾಜ

ವಿಜಯಸಾಕ್ಷಿ ಸುದ್ದಿ, ಗದಗ: ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪಾತ್ರ ಮಹತ್ತರವಾಗಿದೆ. ಬಡ ಮತ್ತು ಮಧ್ಯಮ ವರ್ಗದವರ ಜೀವನದಲ್ಲಿ ಸಂತೋಷ ತಂದಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.

ನಗರದ ಹೊಸ ಬಸ್ ನಿಲ್ದಾಣದಲ್ಲಿ ಜುಲೈ 2ರಿಂದ 4ರವರೆಗೆ ಆಯೋಜಿಸಿರುವ ಕರ್ನಾಟಕ ಸರ್ಕಾರದ 2 ವರ್ಷಗಳ ಸಾಧನೆ ಬಿಂಬಿಸುವ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸರಕಾರದ ಸಾಧನೆಗಳನ್ನು ಬಿಂಬಿಸುವ ಹಾಗೂ ಜನಪರ ಯೋಜನೆಗಳ ಮಾಹಿತಿಯನ್ನು ನೀಡುವ ವಸ್ತು ಪ್ರದರ್ಶನ ಹಮ್ಮಿಕೊಂಡಿರುವುದು ಶ್ಲಾಘನೀಯ. ಗೃಹಲಕ್ಷ್ಮೀ ಯೋಜನೆ ಮಹಿಳೆಯರನ್ನು ಆರ್ಥಿಕ ಸಬಲೀಕರಣದತ್ತ ದಿಟ್ಟ ಹೆಜ್ಜೆಯಾಗಿದೆ. ಹಸಿವು ಮುಕ್ತ ಕರ್ನಾಟಕ ಮಾಡುವ ದೃಢ ಸಂಕಲ್ಪದಿಂದ ಪ್ರತಿಯೊಬ್ಬ ಪಡಿತರದಾರರಿಗೆ ತಲಾ 10 ಕೆ ಜಿ ಆಹಾರ ಧಾನ್ಯ ಒದಗಿಸಲಾಗುತ್ತಿದೆ. ಗೃಹಜ್ಯೋತಿ ಯೋಜನೆಯಿಂದ ಉಚಿತ ಬೆಳಕು ನೀಡಿ ಸುಸ್ಥಿರ ಬದುಕನ್ನು ನಡೆಸಲು ಸಹಕಾರಿಯಾಗಿದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ನಿಜವಾದ ಶಕ್ತಿ ಬಂದಿದೆ. ಯುವನಿಧಿಯಲ್ಲಿ ನೋಂದಣಿಯಾದ ಯುವಜನತೆಗೆ ಹಣ ನೀಡಲಾಗುತ್ತಿದೆ ಎಂದು ಹೇಳಿದರು.

ರೋಣ ತಾಲೂಕಿನ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮಿಥನಗೌಡ ಪಾಟೀಲ ಮಾತನಾಡಿ, ಗ್ಯಾರಂಟಿ ಯೋಜನೆಗಳ ಜೊತೆಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಿಸಿ ರಾಜ್ಯವನ್ನು ಪ್ರಗತಿಯತ್ತ ಮುನ್ನಡೆಸುತ್ತಿದ್ದು, ಗ್ಯಾರಂಟಿಯಿಂದ ಬಡವರಿಗೆ, ಯುವಕರಿಗೆ, ಮಹಿಳೆಯರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರ್‌ಸಾಬ್ ಬಬರ್ಚಿ, ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಅಶೋಕ ಮಂದಾಲಿ, ನೀಲಮ್ಮ ಬೋಳಣ್ಣನವರ, ಬಸವರಾಜ ಕಡೇಮನಿ, ಶಂಭು ಕಾಳೆ, ಸಂಗಮೇಶ ಕೆರಕಲಮಟ್ಟಿ, ಸಾವಿತ್ರಿ ಹೂಗಾರ, ದೇವರಡ್ಡಿ ತಿರ್ಲಾಪುರ, ಗಣೇಶ ಮಟ್ಟಾಲಿ, ಸಂಗಮೇಶ ಹಾದಿಮನಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಮಹಿಳಾ ಮತ್ತು ಮಕ್ಕಳ ನಿರೂಪಣಾಧಿಕಾರಿ ರಾಧಾ ಮಣ್ಣೂರು, ಹುಲಿಗೆಮ್ಮ ಜೋಗೆರ ಹಾಜರಿದ್ದರು.

ಮುಖ್ಯಮಂತ್ರಿಗಳೊಂದಿಗೆ ಸೆಲ್ಪಿ!

ವಸ್ತುಪ್ರದರ್ಶನದಲ್ಲಿ ನಾಡಿನ ಜನರ ಬದುಕು ಬೆಳಗಿಸಿದ ಗ್ಯಾರಂಟಿ ಯೋಜನೆಗಳ ಸಮಗ್ರ ಮಾಹಿತಿ, ಯಶೋಗಾಥೆಯನ್ನೊಳಗೊಂಡ ಗ್ಯಾರಂಟಿಯ ಸಮರ್ಪಣೆ, ಅಭಿವೃದ್ಧಿಯ ಸಂಕಲ್ಪದ 2 ವರ್ಷಗಳ ಸಾಧನಾ ಸಂಭ್ರಮದ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಪಡೆದುಕೊಳ್ಳುವಂತೆ ಬಿಂಬಿಸುವ ಸೆಲ್ಪಿ ಸಾರ್ವಜನಿಕರ ಗಮನ ಸೆಳೆಯಿತು.

“ಸರ್ಕಾರದ 2 ವರ್ಷದ ಸಾಧನೆ ಆಚರಣೆ ರಾಜ್ಯಾದ್ಯಂತ ಸಂತೋಷದಿಂದ ಆಚರಿಸಲಾಗಿದೆ. ಪಂಚ ಗ್ಯಾರಂಟಿ ಮೂಲಕ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು ಜನರ ವಿಶ್ವಾಸ ಉಳಿಸಿಕೊಂಡಿದ್ದೇವೆ. ಗ್ಯಾರಂಟಿ ಯೋಜನೆ ಮೂಲಕ ಸಾಮಾನ್ಯ ಜನರಿಗೆ ಸ್ವಾಭಿಮಾನದ ಬದುಕನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದೇವೆ. ಸಮ ಸಮಾಜ ನಿರ್ಮಾಣದ ಜೊತೆಗೆ ಆರ್ಥಿಕವಾಗಿ ಸಮಾನತೆ ಮೂಡಿದೆ”

– ಕೃಷ್ಣಗೌಡ ಎಚ್.ಪಾಟೀಲ.

ಗದಗ ತಾಲೂಕು ಗ್ಯಾರಂಟಿ ಯೋಜನೆಗಳ

ಅನುಷ್ಠಾನ ಪ್ರಾಧಿಕಾರದ ಸದಸ್ಯರು.

ಕದ್ದುಮುಚ್ಚಿ ಮಹಿಳೆಯರ ಅಶ್ಲೀಲ ವಿಡಿಯೋ ರೆಕಾರ್ಡ್: ಇನ್ಫೋಸಿಸ್ ಉದ್ಯೋಗಿ ಅರೆಸ್ಟ್!

ಬೆಂಗಳೂರು:- ಮಹಿಳೆಯರ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಇನ್ಫೋಸಿಸ್ ಉದ್ಯೋಗಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸ್ವಪ್ನಿಲ್ ನಾಗೇಶ್ ಮಲಿ (28) ಬಂಧಿತ ಉದ್ಯೋಗಿ. ಈತ ಮಹಾರಾಷ್ಟ್ರದ ಸಾಂಗ್ಲಿ ಮೂಲದವ. ಬೆಂಗಳೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಹೀಲೆಕ್ಸ್ ಡಿಪಾರ್ಟ್ಮೆಂಟ್ ನಲ್ಲಿ ಸೀನಿಯರ್ ಅಸೋಸಿಯೇಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಸ್ವಪ್ನಿಲ್, ಜೂನ್ 30ರಂದು ಮಹಿಳಾ ಉದ್ಯೋಗಿ ಶೌಚಾಲಯಕ್ಕೆ ಹೋಗಿದ್ದಾಗ ಕದ್ದು ವಿಡಿಯೋ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಮಹಿಳೆ ಕೊಟ್ಟ ದೂರಿನ ಮೇರೆಗೆ ಸದ್ಯ ಪೊಲೀಸರು ಸ್ವಪ್ನಿಲ್​ ನನ್ಜು ಬಂಧಿಸಿದ್ದಾರೆ.

ಇನ್ನೂ ಪ್ರಾಥಮಿಕ ತನಿಖೆ ವೇಳೆ ಈತನ ಮೊಬೈಲ್​ ನಲ್ಲಿ 30ಕ್ಕೂ ಹೆಚ್ಚು ಮಹಿಳೆಯರ ವಿಡಿಯೋಗಳು ಪತ್ತೆಯಾಗಿವೆ. ಜೂನ್ 30ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಮಹಿಳೆ ಮೂತ್ರ ವಿಸರ್ಜನೆಗೆ ಟಾಯ್ಲೆಟ್ ಹೋಗಿದ್ದಾಳೆ. ಮೇಲಿಂದ ಯಾರೋ ರೆಕಾರ್ಡ್ ಮಾಡುತ್ತಿರುವ ರೀತಿ ಎದುರಿನ‌ ಡೋರ್ ನಲ್ಲಿ ಪ್ರತಿಬಿಂಬ ಕಂಡಿದೆ. ಎಚ್ಚೆತ್ತ ಮಹಿಳೆ ಹೊರಗೆ ಬಂದು ನೋಡಿದ್ದಾಳೆ. ಓರ್ವ ಯುವತಿ ಮಾತ್ರ ಕಂಡಿದ್ದಾಳೆ. ಇನ್ನೂ ಅನುಮಾನ ಪರಿಹರಿಸಿಕೊಳ್ಳಲು ಮತ್ತೆ ಟಾಯ್ಲೆಟ್ ಹೋಗೆ ಕೆಲ ಹೊತ್ತು ಮಹಿಳೆ ಕಾದಿದ್ದಾಳೆ. ಅಷ್ಟೊತ್ತಿಗೆ ಆರೋಪಿ ಪ್ಯಾಂಟ್ ಬಿಚ್ಚಿ ಕಮೊಡ್ ಮೇಲೆ ನಿಂತು ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಕಂಡಿದ್ದು, ಕೂಡಲೇ ಆ ಮಹಿಳೆ ಜೋರಾಗಿ ಕಿರುಚಾಡಿದಾಗ, ಭಯಭೀತನಾದ ಸ್ವಪ್ನಿಲ್ ಆಕೆಯ ಬಳಿ ಕ್ಷಮೆ ಕೇಳಿದ್ದಾನೆ. ಅಷ್ಟರೊಳಗೆ ಘಟನಾ ಸ್ಥಳಕ್ಕೆ ಎಚ್‌ಆರ್ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮೊಬೈಲ್‌ನಲ್ಲಿ 30ಕ್ಕೂ ಹೆಚ್ಚು ಮಹಿಳೆಯರ ವಿಡಿಯೋಗಳು ಇರುವುದು ಪತ್ತೆಯಾಗಿದೆ.

ವಿಚಾರ ತಿಳಿಯುತ್ತಿದ್ದಂತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಘಟನೆ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಸ್ಪಷ್ಟನೆ ಕೊಟ್ಟಿದ್ದಾರೆ.

ಸರ್ಕಾರಿ ಶಾಲೆಗಳ ಶಿಕ್ಷಣದಲ್ಲಿರಲಿ ವಿಶ್ವಾಸ

ವಿಜಯಸಾಕ್ಷಿ ಸುದ್ದಿ, ರೋಣ: 2025-26ನೇ ಶೈಕ್ಷಣಿಕ ಸಾಲಿನಲ್ಲಿ ರೋಣ ತಾಲೂಕಿನ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವ ಗುರಿಯೊಂದಿಗೆ ಶಿಕ್ಷಣ ಇಲಾಖೆಯ `ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ರೂಪುರೇಷೆಯನ್ನು ಸಿದ್ಧಪಡಿಸಿದ್ದು, ಜುಲೈ ತಿಂಗಳಿನಿಂದ ಬಹುತೇಕ ಎಲ್ಲಾ ಶಾಲೆಗಳಲ್ಲಿ ಕಾರ್ಯಕ್ರಮ ಆರಂಭ ಮಾಡಲಾಗುತ್ತಿದೆ.

ಈ ಕುರಿತು ಬುಧವಾರ ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರ ಮಾಹಿತಿ ನೀಡಿ, ಈ ಕಾರ್ಯಕ್ರಮವು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಬಗ್ಗೆ, ಸರಕಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು, ವಿದ್ಯಾರ್ಥಿಗಳನ್ನು ಆತ್ಮವಿಶ್ವಾಸದಿಂದ ಶಾಲೆ-ಕಾಲೇಜುಗಳತ್ತ ಹೆಜ್ಜೆ ಇಡುವಂತೆ ಪ್ರೇರೇಪಿಸುವುದು ಮತ್ತು ಮಕ್ಕಳು ತರಗತಿಯಿಂದ ಹೊರಗುಳಿಯುವುದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಈ ಕಾರ್ಯಕ್ರಮ ಸಿದ್ಧಪಡಿಸಿದೆ ಎಂದರು.

ರೋಣ ತಾಲೂಕಿನ ಎಲ್ಲಾ ಗ್ರಾ.ಪಂ ವ್ಯಾಪ್ತಿಯ ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಗಳಲ್ಲಿ ಪಾಲಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಬಿಸಿಯೂಟದ ಅಡುಗೆ ಸಿಬ್ಬಂದಿ, ಗ್ರಾ.ಪಂ/ವಾರ್ಡ್ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಸಮೀಪದ ಶಾಲೆಗಳ ಮುಖ್ಯ ಶಿಕ್ಷಕರು, ಮತ್ತು ಉಪನ್ಯಾಸಕರು ಮತ್ತು ಎಲ್ಲಾ ಭಾಗಿದಾರರನ್ನು ಒಳಗೊಳಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಸರ್ವೆ ಶೀಟ್‌ಗಳನ್ನು ನೀಡಿ, ಶಾಲೆ-ಕಾಲೇಜುಗಳ ಮೂಲ ಸೌಕರ್ಯ, ಶೈಕ್ಷಣಿಕ ಸೌಲಭ್ಯ, ಕಲಿಕೆಯ ಗುಣಮಟ್ಟ ಮತ್ತು ವಾತಾವರಣದ ಬಗ್ಗೆ ಅಭಿಪ್ರಾಯ ಸಂಗ್ರಹಿಸುವುದಲ್ಲದೆ ಸಂವಾದದ ಮೂಲಕ ಸಲಹೆಗಳನ್ನು ಸ್ವೀಕರಿಸಿ, ಶಾಲೆಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ.

ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ನಿರ್ದೇಶಕರು, ಜಿಲ್ಲಾ ಮಟ್ಟದ ಸಿಇಒ, ಡಿಡಿಪಿಐ, ಡಿಡಿಪಿಯು, ತಾಲೂಕು/ವಲಯ ಮಟ್ಟದ ತಾ.ಪಂ ಇಒ, ಬಿಇಒ, ಬಿ.ಆರ್.ಸಿ/ ಸಿ.ಆರ್.ಪಿ, ಮುಖ್ಯ ಶಿಕ್ಷಕರು, ಪ್ರಾಚಾರ್ಯರು ಮತ್ತು ಅಡುಗೆ ಸಿಬ್ಬಂದಿ ಸೇರಿದಂತೆ ಮೇಲ್ವಿಚಾರಣಾ ತಂಡಗಳು ಸಹಕಾರ ನೀಡಲಿವೆ. ರೋಣ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳು ಈ ಕಾರ್ಯಕ್ರಮವನ್ನು ಜುಲೈ ತಿಂಗಳಿನಿಂದ 2025-2026ರ ಶೈಕ್ಷಣಿಕ ಸಾಲಿನ ಪೂರ್ತಿ ನಡೆಸಲಾಗುವುದು.

“ಈ ಶೈಕ್ಷಣಿಕ ಸಾಲಿನಿಂದ ಆರಂಭವಾದ ಈ ಕಾರ್ಯಕ್ರಮವು ಈಗ ಮುಂದುವರಿದ ರೂಪದಲ್ಲಿ ಸಮುದಾಯದಲ್ಲಿ ಶಿಕ್ಷಣದ ಜಾಗೃತಿಯನ್ನು ತರುತ್ತಿದೆ. ಹಳೆಯ ವಿದ್ಯಾರ್ಥಿಗಳಲ್ಲಿ ತಾವು ಓದಿದ ಶಾಲೆ-ಕಾಲೇಜುಗಳ ಬಗ್ಗೆ ಅಭಿಮಾನ ಮೂಡಿಸುವ ಜೊತೆಗೆ, ಅವರಿಂದ ಶಾಲೆಯ ಅಭಿವೃದ್ಧಿಗೆ ಕೊಡುಗೆಗಳನ್ನು ಪಡೆಯುವುದು ಮತ್ತು ಪೋಷಕರಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣದ ಕುರಿತು ವಿಶ್ವಾಸ ತುಂಬುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ”

– ಎಂ.ಎ. ಫನಿಭಂದ.

ಬಿಇಓ, ರೋಣ ತಾಲೂಕು.

ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಕ್ಷೀರಭಾಗ್ಯ, ಮೊಟ್ಟೆ/ಬಾಳೆಹಣ್ಣು, ರಾಗಿಮಾಲ್ಟ್, ಮಧ್ಯಾಹ್ನದ ಬಿಸಿಯೂಟದಂತಹ ಯೋಜನೆಗಳ ಮೂಲಕ ಮಕ್ಕಳಲ್ಲಿರುವ ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ನಿವಾರಿಸುವದು, ಕ್ರೀಡೆ ಮತ್ತು ಶೌಚಾಲಯ, ಕುಡಿಯುವ ನೀರು ಇನ್ನಿತರ ಹಲವಾರು ಯೋಜನೆಗಳ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸುವುದು, ಆಧುನಿಕ ಕಲಿಕಾ ಸೌಲಭ್ಯಗಳಾದ ಸ್ಮಾರ್ಟ್ ಕ್ಲಾಸ್, ಡಿಜಿಟಲ್ ಲೈಬ್ರರಿ, ಗುಣಮಟ್ಟದ ಶಿಕ್ಷಕರು ಮತ್ತು ಶೈಕ್ಷಣಿಕ ಪ್ರೋತ್ಸಾಹಕ ಯೋಜನೆಗಳ ಕುರಿತು ಮಾಹಿತಿ ಹಂಚುವುದು, ದಾಖಲಾದ ವಿದ್ಯಾರ್ಥಿಗಳು ನಿಯಮಿತವಾಗಿ ತರಗತಿಗಳಿಗೆ ಹಾಜರಾಗಿ ಕಲಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಖಾತರಿಪಡಿಸುವ ಯೋಜನೆ ಇದಾಗಿದೆ.

ಜುಲೈ 3ರಂದು ಪೂಜ್ಯಶ್ರೀ ಡಾ. ಕಲ್ಲಯ್ಯಜ್ಜನವರು 55ನೇ ವರ್ಷದ ಜನ್ಮದಿನಾಚರಣೆ

ವಿಜಯಸಾಕ್ಷಿ ಸುದ್ದಿ, ಗದಗ: ಬಾಲ್ಯದಲ್ಲಿ ಅಂಧತ್ವಕ್ಕೆ ಶರಣಾಗಿ ಗದುಗಿನ ಸುಕ್ಷೇತ್ರ ಶ್ರೀ ವೀರೇಶ್ವರ ಪುಣ್ಯಾಶ್ರಮದ ಗಾನಯೋಗಿ ಪಂ. ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾಗಿ ಅಭ್ಯಾಸಗೈಯುತ್ತ ಸರಳ ಬದುಕಿನ ವಿದ್ಯಾರ್ಥಿಯಾಗಿ ಇಂದು ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾಗಿ, ಉಭಯ ಗುರುಗಳ ಮಾರ್ಗದರ್ಶನದಂತೆ ಅಂಧ-ಅನಾಥರಿಗೆ ಅಭಯ ಹಸ್ತ ನೀಡಿ ಆಶ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಪರಮಪೂಜ್ಯ ಶ್ರೀ ಕಲ್ಲಯ್ಯಜ್ಜನವರ ಜೀವನ ಸಮಾಜಕ್ಕೆ ಮಾದರಿಯಾಗಿದೆ.

ಪೂಜ್ಯಶ್ರೀ ಕಲ್ಲಯ್ಯಜ್ಜನವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದಲ್ಲಿ 1971ರ ಜುಲೈ 3ರಂದು ಶ್ರೀ ವೀರಯ್ಯನವರು ಹಿರೇಮಠ ಹಾಗೂ ಮಾತೋಶ್ರೀ ಬಸಮ್ಮನವರ ಪುತ್ರರಾಗಿ ಜನ್ಮತಾಳಿದರು. ಗಂಗಾವತಿ ತಾಲೂಕಿನ ಉಡಮಕಲ್ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಕಲ್ಲಯ್ಯಜ್ಜನವರು ನಂತರ ಗದುಗಿನ ಕೆ.ಎಚ್. ಪಾಟೀಲ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಪಡೆದರು. ಅಲ್ಲಿಂದ ಪಂ. ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಬಿ.ಮ್ಯೂಸಿಕ್ ಪದವಿ ಪಡೆದರು.

ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರಲ್ಲಿ ಜೂನಿಯರ್, ಸೀನಿಯರ್, ವಿದ್ವತ್ ದರ್ಜೆ ಸಂಗೀತ ಅಭ್ಯಾಸವನ್ನು ಪಡೆದರು. ಸಂಸ್ಥೆಯಲ್ಲಿ ಎರಡು ವರ್ಷ ಆಶ್ರಮದ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ಗುರುವಿನ ಆಶೀರ್ವಾದದಿಂದ ಸ್ವಂತ ಕವಿಗಳಾಗಿ ನಾಟಕ ಹಾಗೂ ಕವನಗಳನ್ನು ಅಲ್ಲದೆ, ತಮ್ಮ ಗುರುಗಳಾದ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಚರಿತಾಮೃತ ಕುರಿತು `ಧರೆಗೆ ಬಂದ ದೇವರು’ ಎಂಬ ಗ್ರಂಥವನ್ನು ರಚಿಸಿದ್ದಾರೆ. ಗುರುವಿನ ಮೇಲೆ ಇಟ್ಟಿರುವ ಭಕ್ತಿ ಪ್ರೇಮದ ಕಾಣಿಕೆಯಾಗಿ ಇವರಿಗೆ ನೂರಾರು ತುಲಾಭಾರ ಸೇವೆಗಳು ಜರುಗಿವೆ.

ಬಡವ-ಬಲ್ಲಿದರ, ದೀನ-ದಲಿತರ ಕಣ್ಮಣಿಗಳು, ಪುಣ್ಯಾಶ್ರಮದ ಸರ್ವಾಂಗೀಣ ಅಭಿವೃದ್ಧಿಯ ಹರಿಕಾರರು, ಅವಳಿ ನಗರದ ಪುಣ್ಯಧಾಮ, ಸಂಗೀತ ಕಾಶಿ ಸುಕ್ಷೇತ್ರ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾಗಿರುವ ಪರಮಪೂಜ್ಯ ಶ್ರೀ ಡಾ.ಕಲ್ಲಯ್ಯಜ್ಜನವರ 55ನೇ ವರ್ಷದ ಜನ್ಮದಿನದ ಸಂಭ್ರಮಾಚರಣೆಯು ಜುಲೈ 3ರಂದು ಸಂಜೆ 6 ಗಂಟೆಗೆ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀಗುರು ಪುಟ್ಟರಾಜ ಕಲಾಭವನದಲ್ಲಿ ಜರುಗಲಿದೆ.

ಈ ಕಾರ್ಯಕ್ರಮದಲ್ಲಿ ಕಪೋತಗಿರಿ ನಂದಿವೇರಿ ಸಂಸ್ಥಾನ ಮಠದ ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಲಿಂಗಸೂರ ಮಾಣಿಕೇಶ್ವರಿ ಆಶ್ರಮದ ಪೂಜ್ಯಶ್ರೀ ಶಿವಶರಣೆ ನಂದೀಶ್ವರಿ ಅಮ್ಮನವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

2001ರ ಸೆಪ್ಟಂಬರ್ 17ರಂದು ಪಂ. ಪುಟ್ಟರಾಜ ಕವಿ ಗುರುಗಳ ಅಪ್ಪಣೆಯ ಮೇರೆಗೆ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ಮರಳಿ ಬಂದು ಹೆಚ್ಚಿನ ಸಂಗೀತ ವಿದ್ಯಾಭ್ಯಾಸ ಪಡೆದರು. ಪೂಜ್ಯಶ್ರೀ ಪಂ. ಪುಟ್ಟರಾಜ ಕವಿ ಗವಾಯಿಗಳವರ ನಂತರ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾಗಿ ಆಶ್ರಮವನ್ನು ಮುನ್ನಡೆಸುತ್ತಿದ್ದಾರೆ.

error: Content is protected !!