Home Blog Page 12

ತಲೆನೋವು ಬಂದಾಗ ವಾಂತಿ ಸಮಸ್ಯೆ ಕಾಡುತ್ತಿದೆಯೇ? ಈ ಟಿಪ್ಸ್ ಫಾಲೋ ಮಾಡಿ

0

ಇತ್ತೀಚಿನ ದಿನಗಳಲ್ಲಿ ಅನೇಕರು ಗ್ಯಾಸ್ ತಲೆನೋವು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಮಸ್ಯೆ ಸಾಮಾನ್ಯವಾದದ್ದಾಗಿದ್ದರೂ, ದಿನನಿತ್ಯದ ಜೀವನದಲ್ಲಿ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ತಜ್ಞರ ಪ್ರಕಾರ, ರೀತಿಯ ತಲೆನೋವಿಗೆ ಆಸ್ಪತ್ರೆ ಹೋಗುವ ಅವಶ್ಯಕತೆ ಎಲ್ಲ ಸಮಯದಲ್ಲೂ ಇರದೇ, ಕೆಲವು ಸರಳ ಮನೆಮದ್ದುಗಳಿಂದಲೇ ನಿವಾರಣೆ ಪಡೆಯಬಹುದು.

ಅಧ್ಯಯನಗಳ ಪ್ರಕಾರ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ತಲೆನೋವಿಗೆ ಕಾರಣವಾಗಬಹುದು. ಜಠರಗರುಳಿನ ಆರೋಗ್ಯವು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯೊಂದಿಗೆ ನಿಕಟವಾಗಿ ಸಂಬಂಧಿಸಿದೆ. ಕರುಳಿನ ಉರಿಯೂತದಿಂದ ಉಂಟಾಗುವ ರಾಸಾಯನಿಕಗಳು ರಕ್ತಪ್ರವಾಹದ ಮೂಲಕ ಮೆದುಳಿಗೆ ತಲುಪಿ ತಲೆನೋವನ್ನು ಉಂಟುಮಾಡುತ್ತವೆ. ಕೆಲವರಿಗೆ ವಾಕರಿಕೆ ಮತ್ತು ವಾಂತಿ ಲಕ್ಷಣಗಳೂ ಕಾಣಿಸಬಹುದು.

ಸರಿಯಾದ ಆಹಾರದ ಕೊರತೆಯಿಂದ ಅಜೀರ್ಣ, ವಾಯು ಹಾಗೂ ಮಲಬದ್ಧತೆ ಸಮಸ್ಯೆಗಳು ಉಂಟಾಗುತ್ತವೆ. ಇವುಗಳೇ ಗ್ಯಾಸ್ ತಲೆನೋವಿಗೆ ಪ್ರಮುಖ ಕಾರಣಗಳಾಗಿವೆ. ಆದರೆ, ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಸಮಸ್ಯೆಯನ್ನು ನಿಯಂತ್ರಿಸಬಹುದು.

ನಿಂಬೆ ರಸವು ಗ್ಯಾಸ್ ತಲೆನೋವಿಗೆ ಪರಿಣಾಮಕಾರಿ ಮನೆಮದ್ದು ಎಂದು ಪರಿಗಣಿಸಲಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ನಿಂಬೆಯಲ್ಲಿ ಇರುವ ವಿಟಮಿನ್ ಸಿ ದೇಹದ ಪಿಹೆಚ್ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

ಪುದೀನಾ ಚಹಾ ಕೂಡ ತಲೆನೋವನ್ನು ತಗ್ಗಿಸಲು ಸಹಕಾರಿ. ಇದು ಸ್ನಾಯುಗಳನ್ನು ಸಡಿಲಗೊಳಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಒಂದು ಕಪ್ ಪುದೀನಾ ಟೀ ಸೇವನೆ ತಕ್ಷಣದ ಪರಿಹಾರ ನೀಡಬಹುದು ಎಂದು ತಜ್ಞರು ಹೇಳುತ್ತಾರೆ.

ಮೆಗ್ನೀಸಿಯಮ್ ಸಮೃದ್ಧ ಆಹಾರಗಳನ್ನು ಆಹಾರದಲ್ಲಿ ಸೇರಿಸುವುದೂ ಮುಖ್ಯ. ಇದು ಗ್ಯಾಸ್ ತಲೆನೋವನ್ನು ಕಡಿಮೆ ಮಾಡಲು ಸಹಕಾರಿ. ಜೊತೆಗೆ, ಮಜ್ಜಿಗೆ ಸೇವನೆಯಿಂದ ಅಜೀರ್ಣ, ವಾಯು ಮತ್ತು ಗ್ಯಾಸ್ ಸಮಸ್ಯೆಗಳು ಕಡಿಮೆಯಾಗುತ್ತವೆ. ಪ್ರೋಬಯಾಟಿಕ್ಗಳುಳ್ಳ ಮಜ್ಜಿಗೆ ಜಠರ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ತುಳಸಿ ಎಲೆಗಳನ್ನು ಜಗಿದು ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳು ಕಡಿಮೆಯಾಗುತ್ತವೆ. ತುಳಸಿಯಲ್ಲಿ ಇರುವ ಗುಣಗಳು ಹೊಟ್ಟೆಯ ಉರಿಯೂತವನ್ನು ತಗ್ಗಿಸಿ, ತಲೆನೋವಿಗೂ ಪರಿಹಾರ ನೀಡುತ್ತವೆ.

ಮನೆಯಲ್ಲಿ ತುಳಸಿ ನೆಡುವಾಗ ಈ ತಪ್ಪು ಮಾಡಲೇಬೇಡಿ! ವಾಸ್ತು ತಜ್ಞರು ಹೇಳುವುದೇನು?

0

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರ ಸ್ಥಾನವಿದೆ. ಈ ಗಿಡವನ್ನು ನೆಡುವುದು ಮನೆಯಲ್ಲಿ ಶುಭ, ಸಮೃದ್ಧಿ ಮತ್ತು ದೇವಿಯ ಕೃಪೆ ತರುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ಗುರುವಾರ ಮತ್ತು ಶುಕ್ರವಾರಗಳು ತುಳಸಿ ಗಿಡವನ್ನು ನೆಡುವ ಅತ್ಯಂತ ಶ್ರೇಷ್ಠ ದಿನಗಳಾಗಿದ್ದು, ಗುರುವಾರವು ವಿಷ್ಣುವಿಗೆ ಹಾಗೂ ಶುಕ್ರವಾರವು ಲಕ್ಷ್ಮಿಗೆ ಸಮರ್ಪಿತವಾಗಿದೆ. ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ತುಳಸಿಯನ್ನು ನೆಟ್ಟು ಪೂಜಿಸುವುದರಿಂದ ಅನಂತ ಪುಣ್ಯವು ಲಭಿಸುತ್ತದೆ.

ವಾಸ್ತುಶಾಸ್ತ್ರದ ಪ್ರಕಾರ, ಸೋಮವಾರ, ಬುಧವಾರ ಮತ್ತು ಶನಿವಾರ ಹೊಸ ತುಳಸಿ ಗಿಡವನ್ನು ನೆಡುವುದು ಶ್ರೇಷ್ಠವಲ್ಲ. ಭಾನುವಾರ ಮತ್ತು ಏಕಾದಶಿ ತಿಥಿಗಳಂದು ತುಳಸಿಯನ್ನು ಸ್ಪರ್ಶಿಸುವುದರ ಅಥವಾ ಹೊಸದಾಗಿ ನೆಡುವುದರ ನಿರ್ಬಂಧವಿದೆ.

ಮನೆಯಲ್ಲಿ ತುಳಸಿ ಗಿಡ ಇದ್ದರೆ ಪ್ರತಿದಿನ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಬೆಳಿಗ್ಗೆ ಸ್ನಾನ ಮಾಡಿದ ನಂತರ ಮಾತ್ರ ಗಿಡಕ್ಕೆ ನೀರು ಅರ್ಪಿಸುವುದು ಉತ್ತಮ. ಆದರೆ ಭಾನುವಾರ ಮತ್ತು ಏಕಾದಶಿಯಂದು ನೀರು ನೀಡಬಾರದು. ಪ್ರತಿದಿನ ಸಂಜೆ ತುಳಸಿ ಕಟ್ಟೆಯ ಬಳಿ ತುಪ್ಪ ಅಥವಾ ಎಣ್ಣೆ ದೀಪ ಹಚ್ಚುವುದರಿಂದ ಮನೆಯ ವಾಸ್ತು ದೋಷ ನಿವಾರಣೆ ಆಗಿ, ಸಕಾರಾತ್ಮಕ ಶಕ್ತಿ ಆಕರ್ಷಿತವಾಗುತ್ತದೆ.

ತುಳಸಿ ಗಿಡವನ್ನು ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದು ಶ್ರೇಷ್ಠ. ಅದರ ಸುತ್ತಮುತ್ತಲಿನ ಜಾಗವು ಸದಾ ಸ್ವಚ್ಛವಾಗಿರಬೇಕು; ಪಾದರಕ್ಷೆಗಳು ಅಥವಾ ಕೊಳಕು ವಸ್ತುಗಳನ್ನು ಅಲ್ಲಿ ಇಡಬಾರದು. ಒಣಗಿದ ಗಿಡವನ್ನು ಮನೆಯಲ್ಲಿ ಇಟ್ಟುಕೊಳ್ಳದೆ ತಕ್ಷಣ ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು, ಏಕೆಂದರೆ ಅದನ್ನು ಉಳಿಸುವುದರಿಂದ ವಾಸ್ತು ದೋಷ ಉಂಟಾಗಬಹುದು.

ಈ ನಿಯಮಗಳನ್ನು ಪಾಲಿಸಿದರೆ ಮನೆಗೆ ಲಕ್ಷ್ಮಿ ಹಾಗೂ ನಾರಾಯಣರ ಆಶೀರ್ವಾದ ಸದಾ ಇರಲಿದೆ.

 

ಬೆಂಗಳೂರಿನಲ್ಲಿ ಆಂಧ್ರ ಸಾರಿಗೆ ಬಸ್ ಅಪಘಾತ: ಪ್ರಯಾಣಿಕರು ಸೇಫ್

ಬೆಂಗಳೂರು: ಬೆಂಗಳೂರಿನ ಶಿವಾನಂದ ಸರ್ಕಲ್  ಬಳಿ ವೇಗವಾಗಿ ಬಂದ ಆಂಧ್ರ ಸಾರಿಗೆ ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಘಟನೆ ನಡೆದಿದೆ.

ಅಧೋನಿಯಿಂದ ಅನಂತಪುರ ಮೂಲಕ ಬೆಂಗಳೂರಿಗೆ ಬರುತ್ತಿದ್ದ ಬಸ್, ವೇಗವಾಗಿ ಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗದ ಚಕ್ರ ಹಾಗೂ ಎಂಜಿನ್ ಕಿತ್ತು ಹೊರಬಿದ್ದಿದ್ದು, ಬಸ್ ಭಾರೀ ಹಾನಿಗೊಳಗಾಗಿದೆ.

ಅದೃಷ್ಟವಶಾತ್ ಅಪಘಾತದಲ್ಲಿ ಪ್ರಯಾಣಿಕರು ಸೇಫ್ ಆಗಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ.

ಘಟನೆಯ ಮಾಹಿತಿ ತಿಳಿದ ತಕ್ಷಣ ಹೈಗ್ರೌಂಡ್ಸ್ ಪೊಲೀಸರು ಸ್ಥಳಕ್ಕೆ ಆಗಮಿಸಿ, ಡಿವೈಡರ್‌ಗೆ ಸಿಲುಕಿರುವ ಬಸ್‌ನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ.

Breaking News: ಹಿಂಬದಿಯಿಂದ ಬಸ್ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪಾಲನಜೋಗನಹಳ್ಳಿ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಪಾಲನಜೋಗನಹಳ್ಳಿ ನಿವಾಸಿ ಪುರುಷೋತ್ತಮ (29) ಎಂದು ಗುರುತಿಸಲಾಗಿದೆ. ಅವರು ರಾಜಾನುಕುಂಟೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಬೈಕ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಮಾಹಿತಿಯ ಪ್ರಕಾರ, ದ್ವಿಚಕ್ರ ವಾಹನವನ್ನು ಓವರ್‌ಟೇಕ್ ಮಾಡಲು ಬಂದ ಕೆಎಸ್‌ಆರ್‌ಟಿಸಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರನ ಮೇಲೆ ಬಸ್ ಹರಿದ ಪರಿಣಾಮ ಪುರುಷೋತ್ತಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಿರುಗಾಳಿ ಮಳೆ ಅವಾಂತರ! ಮನೆ ಮೇಲೆ ಬಿದ್ದ ತೆಂಗಿನ ಮರ, ತಾಯಿ-ಮಗ ಗಂಭೀರ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ಭೀಕರ ಬಿರುಗಾಳಿ ಮಳೆಯಿಂದ ದೊಡ್ಡ ಅನಾಹುತ ಸಂಭವಿಸಿದೆ.

ಮಳೆಯ ಅಬ್ಬರಕ್ಕೆ ಮನೆಯೊಂದರ ಮೇಲೆ ತೆಂಗಿನ ಮರ ಮುರಿದು ಬಿದ್ದ ಪರಿಣಾಮ ತಾಯಿ ಮತ್ತು ಮಗ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಅನಿಗೋಳ ಗ್ರಾಮದ ನಿವಾಸಿಗಳಾದ ನೀಲವ್ವ ಯಲ್ಲಯ್ಯನವರ (70) ಹಾಗೂ ಅವರ ಮಗ ಉಳವಪ್ಪ (37) ಮನೆಯಲ್ಲಿ ಇದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಏಕಾಏಕಿ ಸುರಿದ ಅಕಾಲಿಕ ಮಳೆ ಹಾಗೂ ಬಿರುಗಾಳಿಗೆ ಮನೆಯ ಪಕ್ಕದಲ್ಲಿದ್ದ ತೆಂಗಿನ ಮರ ಬುಡಮೇಲಾಗಿ ಮನೆ ಮೇಲೆ ಬಿದ್ದಿದೆ.

ಮರ ಬಿದ್ದ ರಭಸಕ್ಕೆ ಮನೆ ಸಂಪೂರ್ಣ ಹಾನಿಗೊಳಗಾಗಿದ್ದು, ದಿನನಿತ್ಯ ಬಳಕೆಯ ವಸ್ತುಗಳು ನಾಶವಾಗಿವೆ. ಸದ್ದು ಕೇಳಿದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ, ಅವಶೇಷಗಳಡಿ ಸಿಲುಕಿದ್ದ ತಾಯಿ-ಮಗನನ್ನು ಸಾಹಸಪಟ್ಟು ರಕ್ಷಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗಂಡನೊಂದಿಗೆ ಅಕ್ರಮ ಸಂಬಂಧ ಆರೋಪ: ಮಹಿಳೆ ಮೇಲೆ ಆ್ಯಸಿಡ್ ದಾಳಿ ಮಾಡಿದ ಪತ್ನಿ!

ಕೋಲಾರ: ಜಿಲ್ಲೆಯ ಆಜಾದ್ ನಗರದಲ್ಲಿ ಅಕ್ರಮ ಸಂಬಂಧದ ಆರೋಪದ ಹಿನ್ನೆಲೆ ನಡೆದ ರಾಜಿ ಸಂಧಾನ ಹಿಂಸಾತ್ಮಕ ತಿರುವು ಪಡೆದುಕೊಂಡು ಮಹಿಳೆಯೊಬ್ಬಳು ಮತ್ತೊಬ್ಬಳ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಘಟನೆಯಲ್ಲಿ ಮುಸ್ಕಾನ್ ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯಾಗಿ ಗುರುತಿಸಲಾದ ಆಯೇಷಾ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರೂ, ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾಹಿತಿಯ ಪ್ರಕಾರ, ಆಯೇಷಾಳ ಪತಿ ಶಾಬಾಜ್ ಅಹಮದ್ ಮತ್ತು ಮುಸ್ಕಾನ್ ನಡುವೆ ಅಕ್ರಮ ಸಂಬಂಧ ಇರುವ ಶಂಕೆ ವ್ಯಕ್ತವಾಗಿತ್ತು. ಮುಸ್ಕಾನ್ ತನ್ನ ಪತಿಯಿಂದ ದೂರವಾಗಿದ್ದ ಸಂದರ್ಭ ಶಾಬಾಜ್ ಆಕೆಗೆ ಹಣಕಾಸಿನ ನೆರವು ನೀಡುತ್ತಾ ಸಂಬಂಧ ಬೆಳೆಸಿದ್ದನೆಂಬ ಆರೋಪವಿದೆ.

ಮೂರು ತಿಂಗಳ ಹಿಂದೆ ಮುಸ್ಕಾನ್ ಮತ್ತು ಶಾಬಾಜ್ ಬೆಂಗಳೂರಿಗೆ ಓಡಿ ಹೋಗಿದ್ದು, ಇತ್ತೀಚೆಗೆ ಸಂಬಂಧಿಕರು ಅವರನ್ನು ಪತ್ತೆಹಚ್ಚಿ ಕೋಲಾರಕ್ಕೆ ಕರೆತಂದಿದ್ದರು. ಈ ಹಿನ್ನೆಲೆ ಸಮಸ್ಯೆ ಬಗೆಹರಿಸಲು ಬುಧವಾರ ರಾತ್ರಿ ‘ರಾಜಿ ಪಂಚಾಯ್ತಿ’ ಏರ್ಪಡಿಸಲಾಗಿತ್ತು.

ಸಭೆಯಲ್ಲಿ ವಾಗ್ವಾದ ತೀವ್ರಗೊಂಡ ವೇಳೆ, ಪೂರ್ವಸಿದ್ಧತೆಯೊಂದಿಗೆ ಬಂದಿದ್ದ ಆಯೇಷಾ ಬಾತ್ ರೂಂ ಕ್ಲೀನಿಂಗ್ ಆಸಿಡ್ ಅನ್ನು ಮುಸ್ಕಾನ್ ಮುಖಕ್ಕೆ ಎರಚಿದ್ದಾಳೆ. ಗಂಭೀರವಾಗಿ ಗಾಯಗೊಂಡ ಮುಸ್ಕಾನ್ ಅವರನ್ನು ಗಲ್ ಪೇಟೆ ಪೊಲೀಸರು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

21 ದಿನಗಳಲ್ಲಿ 2.48 ಕೋಟಿ, ಮಂತ್ರಾಲಯದಲ್ಲಿ ದಾಖಲೆ ಕಾಣಿಕೆ ಸಂಗ್ರಹ!

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಮಾರ್ಚ್ ತಿಂಗಳ ಮೊದಲ 21 ದಿನಗಳಲ್ಲೇ ಭಕ್ತರು ದಾಖಲೆಯ ಪ್ರಮಾಣದ ಕಾಣಿಕೆ ಅರ್ಪಿಸಿದ್ದಾರೆ.

ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು ₹2,48,28,737 ನಗದು ಸಂಗ್ರಹವಾಗಿದ್ದು, ಇದಲ್ಲದೆ 14 ಗ್ರಾಂ ಚಿನ್ನ ಹಾಗೂ 2.16 ಕೆಜಿ ಬೆಳ್ಳಿಯ ಆಭರಣಗಳನ್ನು ಭಕ್ತರು ರಾಯರ ಪಾದಕ್ಕೆ ಸಮರ್ಪಿಸಿದ್ದಾರೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.

ಕಡಿಮೆ ಅವಧಿಯಲ್ಲೇ ಇಷ್ಟೊಂದು ಪ್ರಮಾಣದ ಕಾಣಿಕೆ ಸಂಗ್ರಹವಾಗಿರುವುದು ಭಕ್ತರ ಅಪಾರ ಭಕ್ತಿ ಹಾಗೂ ನಂಬಿಕೆಯನ್ನು ತೋರಿಸುತ್ತದೆ ಎಂದು ಹೇಳಲಾಗಿದೆ.

ಪ್ರಾಧ್ಯಾಪಕರ ಜೊತೆ ಅಕ್ರಮ ಸಂಬಂಧ ಕಲ್ಪಿಸಿ ಅಪಪ್ರಚಾರ: ಮನನೊಂದು ಬಿಎಎಂಎಸ್ ವಿದ್ಯಾರ್ಥಿನಿ ಸೂಸೈಡ್

ಚಿತ್ರದುರ್ಗ:- ಪ್ರಾಧ್ಯಾಪಕರ ಜೊತೆ ಸಂಬಂಧ ಕಲ್ಪಿಸಿ ಅಪಪ್ರಚಾರ ಮಾಡಿದ ಹಿನ್ನೆಲೆ ಮನನೊಂದು ಬಿಎಎಂಎಸ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

ಲಿಖಿತಾ(23) ಮೃತ ವಿದ್ಯಾರ್ಥಿನಿ. ಪ್ರಾಧ್ಯಾಪಕ ಡಾ. ರಾಜು ಅವರೊಂದಿಗೆ ಸಂಬಂಧವಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ, ತನ್ನ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದರಿಂದ ನೊಂದಿದ್ದ ವಿದ್ಯಾರ್ಥಿನಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಲಿಖಿತಾ ಆತ್ಮಹತ್ಯೆಗೂ ಮುನ್ನ ತಾನು ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ ಪ್ರಾಧ್ಯಾಪಕ ಡಾ. ರಾಜು, ಅವರ ಪತ್ನಿ ನಿಶಾ ಹಾಗೂ ಕೆಲವು ವಿದ್ಯಾರ್ಥಿನಿಯರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇವರ ಕಿರುಕುಳ ಮತ್ತು ಅಪಪ್ರಚಾರವೇ ನನ್ನ ಸಾವಿಗೆ ಕಾರಣ ಎಂದು ಅವರು ಡೆತ್ ನೋಟ್‌ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಸಿಡಿಲು ಬಡಿದು ಕುರಿಗಾಹಿ ಯುವಕ ಸಾವು: ಮತ್ತೊಬ್ಬ ರೈತ ಗಂಭೀರ

0

ಗದಗ: ಜಿಲ್ಲೆಯ ನರಗುಂದ ಪಟ್ಟಣದ ಜಗಾಪೂರ ಒಳರಸ್ತೆಯಲ್ಲಿ ಬುಧವಾರ ಸಿಡಿಲು ಬಡಿದು ಕುರಿಗಾಹಿ ಯುವಕ ಮೃತಪಟ್ಟಿದ್ದು, ರೈತನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಮೂಲಂಗಿ ಗ್ರಾಮದ ಮಾರುತಿ ಮಾಡಗೆಪ್ಪ ಕುರಿ (22) ಮೃತಪಟ್ಟ ದುರ್ದೈವಿ. ನರಗುಂದದ ಹಾಲಭಾವಿಕೇರಿ ಓಣಿಯ ನಿಂಗಪ್ಪ ಸಿಂಗಾಡೆಪ್ಪ ಮಜ್ಜಗಿ (43) ಅವರಿಗೆ ಬೆನ್ನು, ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಪಟ್ಟಣದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂಲತಃ ಹಿರೇಮೂಲಂಗಿ ಗ್ರಾಮದ ನಿವಾಸಿಯಾಗಿದ್ದ ಮಾರುತಿ ಕಳೆದೊಂದು ತಿಂಗಳಿನಿಂದ ನರಗುಂದ ತಾಲೂಕಿನಲ್ಲೇ ಕುರಿ ಮೇಯಿಸುತ್ತಿದ್ದರು. ಬುಧವಾರ ಮಧ್ಯಾಹ್ನದವರೆಗೆ ತೀವ್ರ ಬಿಸಿಲು ಇದ್ದು, ನಂತರ ಏಕಾಏಕಿ ಮೋಡ ಕವಿದು ಗುಡುಗು, ಸಿಡಿಲು ಹಾಗೂ ಬಿರುಗಾಳಿಯೊಂದಿಗೆ ಧಾರಾಕಾರ ಮಳೆ ಸುರಿಯಿತು.

ಈ ಸಂದರ್ಭದಲ್ಲಿ ಜಮೀನಿನಲ್ಲಿದ್ದ ಮರದ ಕೆಳಗೆ ಆಶ್ರಯ ಪಡೆದಿದ್ದಾಗ ಸಿಡಿಲು ಬಡಿದು ಮಾರುತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆ ಜಮೀನಿನಲ್ಲಿ ಉಳುಮೆ ಮಾಡಲು ತೆರಳಿದ್ದ ನಿಂಗಪ್ಪ ಮಜ್ಜಗಿ ಗಂಭೀರವಾಗಿ ಗಾಯಗೊಂಡಿದ್ದು, ಟ್ರ್ಯಾಕ್ಟರ್ ಚಾಲಕ ವಿಠ್ಠಲ ತೋರಗಲ್ಲ್ ಅದೃಷ್ಟವಶಾತ್ ಪಾರಾಗಿದ್ದಾರೆ.

ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ: IAS ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ! ತನಿಖೆಗೆ ಹೈಕೋರ್ಟ್ ಅನುಮತಿ

ಬೆಂಗಳೂರು: ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಸೆಕ್ಷನ್ 17ಎ ಅಡಿ ತನಿಖೆಗೆ ಅನುಮತಿ ನೀಡಲು ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಪ್ರಕರಣ ವಿಚಾರಣೆ ವೇಳೆ ಭ್ರಷ್ಟಾಚಾರವು ಕ್ಯಾನ್ಸರ್ ಅಥವಾ ಪ್ಲೇಗ್‌ನಂತೆ ಸಮಾಜಕ್ಕೆ ಅಪಾಯಕಾರಿ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಆರೋಪಗಳಿದ್ದಾಗ ತನಿಖೆ ನಡೆಯದೇ ಸತ್ಯ ಬಹಿರಂಗವಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ಪ್ರಕರಣವನ್ನು ಅಂದಿನ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಬಯಲಿಗೆಳೆದಿದ್ದರು. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ, ನಗರಸಭೆ, ಪುರಸಭೆ ಹಾಗೂ ಮಹಾನಗರ ಪಾಲಿಕೆಗಳ ಪೂರ್ವಾನುಮತಿಯಿಲ್ಲದೆ ಬಟ್ಟೆ ಬ್ಯಾಗ್‌ಗಳನ್ನು ದುಬಾರಿ ದರಕ್ಕೆ ಖರೀದಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಚಿಲ್ಲರೆ ಮಾರುಕಟ್ಟೆಯಲ್ಲಿ ₹10 ರಿಂದ ₹13ಕ್ಕೆ ಸಿಗುವ ಬ್ಯಾಗ್‌ಗಳನ್ನು ₹52ಕ್ಕೆ ಖರೀದಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಇದರಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂದು ದೂರಲಾಗಿದೆ. ಸುಮಾರು 14.71 ಲಕ್ಷ ಬ್ಯಾಗ್‌ಗಳ ಖರೀದಿಯಲ್ಲಿ ₹14 ಕೋಟಿ ಮಟ್ಟದ ಅವ್ಯವಹಾರ ನಡೆದಿರುವ ಸಾಧ್ಯತೆಯೂ ವ್ಯಕ್ತವಾಗಿದೆ.

ಇದೇ ವೇಳೆ, ಕೈಮಗ್ಗ ಅಭಿವೃದ್ಧಿ ನಿಗಮವನ್ನು ಬಿಟ್ಟು ಖಾಸಗಿ ವ್ಯಕ್ತಿಗೆ ಟೆಂಡರ್ ನೀಡಿರುವುದೂ ವಿವಾದಕ್ಕೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಆಗ್ರಹ ವ್ಯಕ್ತವಾಗುತ್ತಿದ್ದಂತೆ ಸರ್ಕಾರ ರೋಹಿಣಿ ಸಿಂಧೂರಿ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿತ್ತು.

ಈಗ ಹೈಕೋರ್ಟ್ ಆದೇಶದೊಂದಿಗೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮುಂದಿನ ತನಿಖೆಯ ಫಲಿತಾಂಶದತ್ತ ಎಲ್ಲರ ಗಮನ ಸೆಳೆದಿದೆ.

error: Content is protected !!