Home Blog Page 122

Gold Rate: ಚಿನ್ನದ ಬೆಲೆ ಓಟಕ್ಕೆ ಇಂದು ತಾತ್ಕಾಲಿಕ ಬ್ರೇಕ್: ಬೆಳ್ಳಿ ದರದಲ್ಲಿ ಭಾರಿ ಹೆಚ್ಚಳ!

0

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಗಗನಮುಖಿಯಾಗಿದ್ದ ಚಿನ್ನದ ಬೆಲೆಗೆ ಇಂದು ಬ್ರೇಕ್ ಬಿದ್ದಿದ್ದು, ಯಾವುದೇ ಏರಿಕೆ ಅಥವಾ ಇಳಿಕೆ ಕಾಣದೆ ತಟಸ್ಥವಾಗಿಯೇ ಉಳಿದಿದೆ. ಆದರೆ, ಬೆಳ್ಳಿ ಬೆಲೆ ಇಂದು ಭರ್ಜರಿ ಏರಿಕೆ ಕಂಡಿದ್ದು, ಕೆಜಿಗೆ 3 ಲಕ್ಷದ 70 ಸಾವಿರ ರೂಪಾಯಿಗೆ ತಲುಪಿದೆ.

ಜನವರಿ 27, 2026 (ಮಂಗಳವಾರ) ರಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹16,195ಕ್ಕೆ ಸ್ಥಿರವಾಗಿದ್ದು, 10 ಗ್ರಾಂ ಶುದ್ಧ ಚಿನ್ನದ ಬೆಲೆ ₹1,61,950 ಆಗಿದೆ. 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹14,845 ಇದ್ದು, 10 ಗ್ರಾಂಗೆ ₹1,48,450 ಇದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರವೂ ಇದೇ ಮಟ್ಟದಲ್ಲಿದ್ದು, ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ. ಹೀಗಾಗಿ ಆಭರಣ ಮಳಿಗೆಗಳಲ್ಲಿ ದರಗಳಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರಬಹುದು.

ಇನ್ನು ಬೆಳ್ಳಿ ಬೆಲೆ ಇಂದು ಪ್ರತಿ ಗ್ರಾಂಗೆ ₹10 ಏರಿಕೆಯಾಗಿದ್ದು, ಗ್ರಾಂ ದರ ₹370 ಆಗಿದೆ. ಇದರೊಂದಿಗೆ ಕೆಜಿ ಬೆಲೆಯಲ್ಲಿ ₹10,000 ಏರಿಕೆ ಕಂಡುಬಂದಿದ್ದು, ಪ್ರತಿ ಕೆಜಿಗೆ ₹3,70,000 ರೂಪಾಯಿ ದಾಖಲಾಗಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಬೆಳ್ಳಿ ಬೆಲೆ ಸುಮಾರು 200% ನಷ್ಟು ಏರಿಕೆ ಕಂಡಿದ್ದರೆ, ಚಿನ್ನದ ಬೆಲೆ ಸುಮಾರು 80% ವರೆಗೆ ಹೆಚ್ಚಳವಾಗಿದೆ. ಸೌರಶಕ್ತಿ, ಎಲೆಕ್ಟ್ರಿಕ್ ವಾಹನಗಳು (ಇವಿ), ಗ್ರಿಡ್ ಮೂಲಸೌಕರ್ಯ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಬೆಳ್ಳಿಯ ಬಳಕೆ ಹೆಚ್ಚುತ್ತಿರುವುದರಿಂದ ಅದರ ಬೇಡಿಕೆ ಜಾಸ್ತಿಯಾಗಿದ್ದು,

ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. ಅದೇ ರೀತಿ, ಚಿನ್ನವು ಸುರಕ್ಷಿತ ಹೂಡಿಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂಬ ನಿರೀಕ್ಷೆಯನ್ನೂ ತಜ್ಞರು ವ್ಯಕ್ತಪಡಿಸಿದ್ದಾರೆ.

ಖ್ಯಾತ ಸೀರಿಯಲ್‌ ನಟಿ ಹಾಗೂ ಪತಿ ಮೇಲೆ ಸಂಬಂಧಿಯಿಂದಲೇ ಭೀಕರ ಹಲ್ಲೆ: ಆಸ್ಪತ್ರೆಗೆ ದಾಖಲು!

ಬೆಂಗಳೂರು: ‘ಗಾಂಧಾರಿ’ ಮೂಲಕ ಮನೆಮಾತಾಗಿರುವ ನಟಿ ಕಾವ್ಯಾ ಗೌಡ ಮತ್ತು ಅವರ ಪತಿ ಸೋಮಶೇಖರ್ ಮೇಲೆ ಅವರದೇ ಸಂಬಂಧಿಕರಿಂದ ಭೀಕರ ದಾಳಿ ನಡೆದಿರುವ ಆರೋಪ ದಾಖಲಾಗಿದೆ.

ನಟಿಯ ಹೆಚ್ಚುತ್ತಿರುವ ಜನಪ್ರಿಯತೆ ಸಹಿಸದೆ ಈ ದಾಳಿ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಆರೋಪಿಗಳೆಂದರೆ ಸೋಮಶೇಖರ್ ಅವರ ಅತ್ತಿಗೆಯ ತಂದೆ ಸೇರಿ ಕುಟುಂಬದವರೇ ಎಂಬುದು ಪ್ರಕರಣಕ್ಕೆ ಇನ್ನಷ್ಟು ಗಂಭೀರತೆ ತಂದಿದೆ.

ಮನೆಗೆ ನುಗ್ಗಿ ದಂಪತಿಯನ್ನು ನಿಂದಿಸಿ ಹಲ್ಲೆ ನಡೆಸಲಾಗಿದೆ. ಸೋಮಶೇಖರ್ ಮೇಲೆ ಚಾಕು ಬಳಸಿ ದಾಳಿ ನಡೆದಿದ್ದು, ಗಾಯಗೊಂಡಿದ್ದಾರೆ. ಕಾವ್ಯಾ ಗೌಡ ಮೇಲೂ ದೈಹಿಕ ದಾಳಿ ನಡೆದಿದೆ. ಜೊತೆಗೆ ಗಂಭೀರ ಬೆದರಿಕೆಗಳನ್ನು ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಘಟನೆಯ ನಂತರ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ನಟಿ ಕಾವ್ಯಾ ಗೌಡ ಅವರ ಅಕ್ಕ ಭವ್ಯ ಗೌಡ ಅವರು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರೇಮ, ನಂದಿಶ್, ಪ್ರಿಯಾ ಮತ್ತು ರವಿಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಘಟನೆಯಿಂದ ನಟಿ ಕಾವ್ಯಾ ಗೌಡ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದಾರೆ ಎನ್ನಲಾಗಿದೆ.

ನಾಪತ್ತೆಯಾಗಿದ್ದ ವೃದ್ಧ ಪತ್ತೆ: ಗದಗ ಪೊಲೀಸರ ಮಾನವೀಯತೆಗೆ ಮೆಚ್ಚುಗೆ

0

ಗದಗ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಅಡ್ನೂರ ಉರುಸ್‌ನಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಗದಗ ಗ್ರಾಮೀಣ ಪೊಲೀಸರು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಒಪ್ಪಿಸಿ ಮಾನವೀಯತೆ ಮೆರೆದ ಘಟನೆ ಜರುಗಿದೆ.

ಗದಗ ಗ್ರಾಮೀಣ ಠಾಣೆಯ ಸಿಬ್ಬಂದಿಗಳಾದ ಮೆಹಬೂಬ್ ವಡ್ಡಟ್ಟಿ ಹಾಗೂ ಪ್ರಕಾಶ್ ಗಾಣಿಗೇರ ಎಂಬುವವರೇ ಮಾನವೀಯತೆ ಮೆರೆದ ಸಿಬ್ಬಂದಿಗಳು.

ಡಿಸೆಂಬರ್ 31ರಂದು ಅಡ್ನೂರ ಗ್ರಾಮದಿಂದ ಬೆಳಗಿನ ಜಾವ ಅಲ್ಲಾಸಾಬ ಹುಸೇನ್ ಸಾಬ ದೊಡ್ಡಮನಿ (60) ಎಂಬುವವರು ನಾಪತ್ತೆಯಾಗಿದ್ದರು. ಅಂದಿನಿಂದ ಕುಟುಂಬದ ಸದಸ್ಯರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ.

ಸೋಮವಾರ ಗದಗ ತಾಲೂಕಿನ ಬಳಗಾನೂರ ಚಿಕೆನಕೊಪ್ಪದ ಶರಣರ ಜಾತ್ರೆಯ ಬಂದೋಬಸ್ತ್‌‌ಗೆ ಹೊರಟಿದ್ದ ಇಬ್ಬರು ಸಿಬ್ಬಂದಿ ದಾರಿಯ ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಯನ್ನು ನೋಡಿ ಮಾತನಾಡಿಸಿದ್ದಾರೆ. ಆದರೆ ಆತ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಿತ್ರಾಣಗೊಂಡಿದ್ದಾತನನ್ನು ಬಳಗಾನೂರಿಗೆ ಕರೆದುಕೊಂಡು ಹೋಗಿ ಜ್ಯೂಸ್ ಕುಡಿಸಿದ್ದಾರೆ. ಇದರಿಂದಾಗಿ ಚೇತರಿಸಿಕೊಂಡ ಆ ವ್ಯಕ್ತಿ ತೊದಲುತ್ತಾ, ಅಸ್ಪಷ್ಟವಾಗಿ ಸಣ್ಣ ಧ್ವನಿಯಲ್ಲಿ ಮಾತನಾಡಿದಾಗ ಆತ ಯಾರು, ಎಲ್ಲಿಯವನು ಎಂಬ ಮಾಹಿತಿ ತಿಳಿದಿಲ್ಲ. ನಂತರ ಬಿಳೆಹಾಳೆ ಹಾಗೂ ಪೆನ್ನು ಕೊಟ್ಟ ಪೊಲೀಸರು, ಆ ಹಾಳೆಯಲ್ಲಿ ಬರೆಯಲು ಹೇಳಿದಾಗ ಆತನ ಹೆಸರು, ತನ್ನ ಊರಿನ ಹೆಸರು ಬರೆದಿದ್ದಾನೆ. ಆಗ ಮಾಹಿತಿ ಕಲೆ ಹಾಕಿದ ಪೊಲೀಸರು, ಅಣ್ಣಿಗೇರಿ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾದ ಬಗ್ಗೆ ತಿಳಿದುಕೊಂಡು ಅವರ ಕುಟುಂಬದ ಸದಸ್ಯರನ್ನು ಕರೆಸಿ ಅವರಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.

ಮೆಹಬೂಬ್ ವಡ್ಡಟ್ಟಿ ಹಾಗೂ ಪ್ರಕಾಶ್ ಗಾಣಿಗೇರ ಅವರ ಈ ಕಾರ್ಯಕ್ಕೆ ವೃದ್ಧ ಅಲ್ಲಾಸಾಬನ ಕುಟುಂಬಸ್ಥರು ಹಾಗೂ ಪೊಲೀಸ್ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಆನೇಕಲ್‌ನಲ್ಲಿ ಸಿನಿಮಾ ಸ್ಟೈಲ್ ಕಿಡ್ನಾಪ್ ಯತ್ನ: ನಡುರಸ್ತೆಯಲ್ಲೇ ಯುವಕನ ಮೇಲೆ ಪುಡಿರೌಡಿಗಳ ದಾಳಿ!

0

ಆನೇಕಲ್:- ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಕ್ರಾಸ್ ಬಳಿ ಸಿನಿಮಾ ಶೈಲಿಯಲ್ಲಿ ಯುವಕನನ್ನು ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಮೂರು ಬೈಕ್ ಹಾಗೂ ಒಂದು ಕಾರಿನಲ್ಲಿ ಬಂದ ಸುಮಾರು ಎಂಟು ಮಂದಿ ಪುಡಿರೌಡಿಗಳ ಗ್ಯಾಂಗ್, ನಡುರಸ್ತೆಯಲ್ಲೇ ಯುವಕನನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕಾರಿನೊಳಗೆ ಎಳೆದು ಹಾಕಲು ಪ್ರಯತ್ನಿಸಿದೆ. ‘ಇತ್ತೀಚೆಗೆ ಆಪರೇಷನ್ ಆಗಿದೆ, ದಯವಿಟ್ಟು ಬಿಡಿ’ ಎಂದು ಯುವಕ ಮನವಿ ಮಾಡಿಕೊಂಡರೂ ಗ್ಯಾಂಗ್ ಕರುಣೆ ತೋರಲಿಲ್ಲ. ಯುವಕ ಕಿರುಚಾಡಿ ಸಹಾಯಕ್ಕಾಗಿ ಕೂಗಿಕೊಂಡಾಗ ಸ್ಥಳಕ್ಕೆ ಸಾರ್ವಜನಿಕರು ಜಮಾಯಿಸಿ ಪ್ರಶ್ನೆ ಮಾಡುತ್ತಿದ್ದಂತೆ ಆರೋಪಿಗಳು ಕಾರು ಮತ್ತು ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ.

ಸಾರ್ವಜನಿಕರ ಸಮಯೋಚಿತ ಮಧ್ಯಸ್ಥಿಕೆಯಿಂದ ದೊಡ್ಡ ಅನಾಹುತ ತಪ್ಪಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ವಿದೇಶಿಗರಿಗೆ ಮನೆ ಬಾಡಿಗೆ ನೀಡಿದ್ರೆ ಎಚ್ಚರ; ಪೊಲೀಸ್ ಠಾಣೆಗೆ ಮಾಹಿತಿ ನೀಡೋದು ಕಡ್ಡಾಯ!

0

ಬೆಂಗಳೂರು:- ನಗರದಲ್ಲಿ ಡ್ರಗ್ಸ್ ಶೇಖರಣೆ ಹಾಗೂ ಪೆಡ್ಲಿಂಗ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ ನೀಡುವ ಮನೆ ಮಾಲೀಕರಿಗೆ ಬೆಂಗಳೂರು ಈಶಾನ್ಯ ವಿಭಾಗದ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ವಿದೇಶಿಗರಿಗೆ ಮನೆ ಬಾಡಿಗೆ ನೀಡುವ ಮೊದಲು ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಫಾರ್ಮ್–16 ಸಲ್ಲಿಸಬೇಕು ಎಂದು ಸೂಚಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ಮನೆ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಇತ್ತೀಚೆಗೆ ವೀಸಾ ಅವಧಿ ಮುಗಿದರೂ ನಗರದಲ್ಲೇ ತಂಗುತ್ತಿರುವ ಹಾಗೂ ವಿದ್ಯಾರ್ಥಿ ವೀಸಾದ ಮೇಲೆ ಬಂದು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ವಿದೇಶಿಗರ ಪ್ರಕರಣಗಳು ಪತ್ತೆಯಾಗಿರುವುದರಿಂದ, ಅವರ ಚಲನವಲನದ ಮೇಲೆ ನಿಗಾ ವಹಿಸಲಾಗುತ್ತಿದೆ. ಈ ನಿಯಮಗಳ ಮೂಲಕ ಬಾಡಿಗೆ ಮನೆಗಳಲ್ಲಿ ವಾಸಿಸುವವರ ಮಾಹಿತಿ ಪೊಲೀಸರಿಗೆ ಲಭ್ಯವಾಗಲಿದ್ದು, ನಗರದಲ್ಲಿನ ಅಕ್ರಮ ಚಟುವಟಿಕೆಗಳಿಗೆ ತಡೆ ಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೈಸೂರು| ಬೈಕ್‌ಗೆ ಬಸ್ ಡಿಕ್ಕಿ; ಮಹಿಳೆ ಸಾವು, ಇಬ್ಬರಿಗೆ ಗಾಯ

0

ಮೈಸೂರು:- ಮೈಸೂರು ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತರನ್ನು ಅಶ್ವಿನಿ (36) ಎಂದು ಗುರುತಿಸಲಾಗಿದ್ದು, ಇವರು ನಾಗಮಂಗಲ ಗ್ರಾಮದ ನಿವಾಸಿ ಹಾಗೂ ಜೀವನ್ ಅವರ ಪತ್ನಿಯಾಗಿದ್ದಾರೆ. ಅಪಘಾತದ ವೇಳೆ ಬೈಕ್‌ನ ಹಿಂಬದಿ ಸವಾರರಾಗಿದ್ದ ಅಶ್ವಿನಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ಬೈಕ್ ಚಾಲನೆ ಮಾಡುತ್ತಿದ್ದ ಜೀವನ್ ಹಾಗೂ ಅವರ ಮಗು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ದುರ್ಘಟನೆ ಹುಣಸೂರು ತಾಲೂಕಿನ ಯಶೋಧರಪುರ ಗೇಟ್ ಬಳಿ ಸಂಭವಿಸಿದೆ.

ಮಾಹಿತಿಯಂತೆ, ಜೀವನ್ ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ಬೈಕಿನಲ್ಲಿ ಹುಣಸೂರು ಕಡೆಗೆ ತೆರಳುತ್ತಿದ್ದ ವೇಳೆ, ಪಿರಿಯಾಪಟ್ಟಣ ಕಡೆಯಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರರು ರಸ್ತೆಗೆ ಬಿದ್ದಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಚಾಮರಾಜನಗರ| ಗಡಿ ರಸ್ತೆಯಲ್ಲಿ ಒಂಟಿ ಸಲಗದ ಅಟ್ಟಹಾಸ: ಕಾರನ್ನು ಅಟ್ಟಾಡಿಸಿದ ಕಾಡಾನೆ!

0

ಚಾಮರಾಜನಗರ: ಕರ್ನಾಟಕ–ತಮಿಳುನಾಡು ಗಡಿ ಪ್ರದೇಶದಲ್ಲಿ ಒಂಟಿ ಸಲಗದ ಉಪಟಳ ಮತ್ತೆ ಆತಂಕ ಮೂಡಿಸಿದೆ.

ತಮಿಳುನಾಡಿನ ಸತ್ಯಮಂಗಲ ಟೈಗರ್ ರಿಸರ್ವ್ ಅರಣ್ಯದ ಮುಖ್ಯ ರಸ್ತೆಯಲ್ಲಿ ಇಂದು ಬೆಳಗಿನ ಜಾವ ನಡೆದ ಘಟನೆಯಲ್ಲಿ, ಒಂಟಿ ಸಲಗವು ಸಂಚರಿಸುತ್ತಿದ್ದ ಕಾರನ್ನು ಅಟ್ಟಾಡಿಸಿರುವ ಘಟನೆ ವರದಿಯಾಗಿದೆ.

ಕಾಡಿನೊಳಗಿಂದ ಹೊರಬಂದ ಸಲಗವು ರಸ್ತೆ ಮೇಲೆ ಸಾಗುತ್ತಿದ್ದ ವಾಹನಗಳತ್ತ ದಾಳಿ ಮಾಡಲು ಯತ್ನಿಸಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸತ್ಯಮಂಗಲ ಟೈಗರ್ ರಿಸರ್ವ್ ಅರಣ್ಯವು ಕರ್ನಾಟಕದ ಬಿಳಿಗಿರಿ ಟೈಗರ್ ರಿಸರ್ವ್‌ಗೆ ಹೊಂದಿಕೊಂಡಿರುವ ಪ್ರದೇಶವಾಗಿದ್ದು, ಈ ಗಡಿ ಭಾಗದಲ್ಲಿ ಒಂಟಿ ಸಲಗದ ಸಂಚಾರ ಆಗಾಗ ಕಂಡುಬರುತ್ತಿದೆ. ಇತ್ತೀಚಿನ ಘಟನೆಗಳಿಂದ ಸ್ಥಳೀಯರು ಹಾಗೂ ದೂರ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಒಂಟಿ ಸಲಗವು ಯಾವುದೇ ಕ್ಷಣದಲ್ಲಿ ಕರ್ನಾಟಕ ಗಡಿ ದಾಟಿ ಪ್ರವೇಶಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಕರ್ನಾಟಕ ಅರಣ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಗಡಿ ಪ್ರದೇಶದಲ್ಲಿ ಹೆಚ್ಚುವರಿ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ವಾಹನ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.

ಬೆಂಗಳೂರು| ಕೋಟಿ ರೂ. ಎಟಿಎಂ ನಗದು ದೋಚಿದ ಸಿಬ್ಬಂದಿ: ಹಿಟಾಚಿ ಪೇಮೆಂಟ್ ಸರ್ವಿಸ್ ಕಂಪನಿಯಲ್ಲಿ ಭಾರೀ ವಂಚನೆ!

0

ಬೆಂಗಳೂರು: ಎಟಿಎಂಗಳಿಗೆ ನಗದು ಡೆಪಾಸಿಟ್ ಮಾಡಬೇಕಿದ್ದ ಒಂದು ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕಂಪನಿಯ ಸಿಬ್ಬಂದಿಯೇ ದೋಚಿ ಪರಾರಿಯಾದ ಘಟನೆ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಇತ್ತೀಚೆಗಷ್ಟೇ 400 ಕೋಟಿ ರೂ. ಹಣ ದರೋಡೆ ಪ್ರಕರಣದ ಕುರಿತ ಚರ್ಚೆ ನಡೆಯುತ್ತಿರುವ ನಡುವೆಯೇ ಈ ದೊಡ್ಡ ಪ್ರಮಾಣದ ನಗದು ಕಳವು ಪ್ರಕರಣ ಬಹಿರಂಗವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಿಟಾಚಿ ಪೇಮೆಂಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕೆಲ ಸಿಬ್ಬಂದಿಗಳು ಈ ವಂಚನೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಕಂಪನಿ ಅಧಿಕಾರಿ ಮಿಥುನ್ ಅವರು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಎಸ್, ಜನವರಿ 19ರಂದು ಕೋರಮಂಗಲದಲ್ಲಿರುವ ಆ್ಯಕ್ಸಿಸ್ ಬ್ಯಾಂಕ್‌ಗೆ ಸೇರಿದ ಒಂದು ಕೋಟಿಗೂ ಅಧಿಕ ಹಣವನ್ನು ವಿವಿಧ ಎಟಿಎಂಗಳಿಗೆ ಡೆಪಾಸಿಟ್ ಮಾಡುವಂತೆ ಮಿಥುನ್ ಅವರು ಸೂಚನೆ ನೀಡಿದ್ದರು. ಈ ಉದ್ದೇಶಕ್ಕಾಗಿ ಕಂಪನಿಯ ಎರಡು ಪ್ರತ್ಯೇಕ ತಂಡಗಳಿಗೆ ನಗದು ಹಂಚಿಕೆ ಮಾಡಲಾಗಿತ್ತು.
ಪ್ರವೀಣ್, ಧನಶೇಖರ್, ರಾಮಕ್ಕ, ಹರೀಶ್ ಕುಮಾರ್, ಪ್ರವೀಣ್ ಕುಮಾರ್ ಹಾಗೂ ವರುಣ್ ಎಂಬ ಸಿಬ್ಬಂದಿಗಳಿಗೆ ಎಟಿಎಂಗಳಿಗೆ ಹಣ ಜಮಾ ಮಾಡುವ ಜವಾಬ್ದಾರಿ ನೀಡಲಾಗಿತ್ತು. ಆದರೆ, ಅವರು ಎಟಿಎಂಗಳಿಗೆ ಹಣ ಹಾಕದೇ ನಗದಿನೊಂದಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಒಂದು ತಂಡವು ಸುಮಾರು 57 ಲಕ್ಷ ರೂ. ನಗದು ತೆಗೆದುಕೊಂಡು ಪರಾರಿಯಾಗಿದ್ದರೆ, ಮತ್ತೊಂದು ತಂಡವು ಸುಮಾರು 80 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದೆ ಎಂದು ತಿಳಿದುಬಂದಿದೆ.

ಎಟಿಎಂಗಳಲ್ಲಿ ಹಣ ಜಮಾ ಆಗದಿರುವುದು ಗೊತ್ತಾದ ಬಳಿಕ ಕಂಪನಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ. ದೂರು ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಕರೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಭೀಕರ ಅಗ್ನಿ ಅವಘಡ; ಧಗಧಗನೆ ಹೊತ್ತಿ ಉರಿದ 10 ಲಕ್ಷ ರೂ. ಮೌಲ್ಯದ ಪೈಪ್‌ಗಳು!

0

ಯಾದಗಿರಿ:- ಯಾದಗಿರಿಯ ವೀರಭದ್ರೇಶ್ವರ ಕಾಲೋನಿಯಲ್ಲಿ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಗೆ 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಪೈಪ್‌ಗಳು ಸುಟ್ಟು ಭಸ್ಮವಾಗಿರುವ ಘಟನೆ ಜರುಗಿದೆ.

ಎಸ್, ಸದಾಶಿವರಡ್ಡಿ ರೊಟ್ನಡಗಿ ಅವರಿಗೆ ಸೇರಿದ ಶರಣಬಸವೇಶ್ವರ ಟ್ರೇಡಿಂಗ್ ಶಾಪ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಏಕಾಏಕಿ ಹೊತ್ತಿಕೊಂಡ ಬೆಂಕಿಗೆ ಪೈಪ್‌ಗಳು ಬೆಂಕಿಗೆ ಸುಟ್ಟು ಕರಕಲಾಗಿವೆ. ಅವಘಡದಿಂದ ಸುಮಾರು 10 ಲಕ್ಷ ರೂ.ಗೂ ಅಧಿಕ ವೆಚ್ಚದ ಪೈಪ್‌ಗಳು ಭಸ್ಮವಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ.

ರಾಯಚೂರು| ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಲೆಗೈದ ಪಾಪಿ ಮಗ!

0

ರಾಯಚೂರು:- ರಾಯಚೂರಿನ ಲಿಂಗಸೂಗೂರು ತಾಲೂಕಿನ ಜಕ್ಕೇರುಮಡು ತಾಂಡದಲ್ಲಿ ಆಸ್ತಿಗಾಗಿ ತಾಯಿಯನ್ನೇ ಮಗ ಕೊಂದು ಪರಾರಿಯಾಗಿರುವ ಘಟನೆ ಜರುಗಿದೆ.

55 ವರ್ಷದ ಚಂದವ್ವ ಕೊಲೆಯಾದ ಮಹಿಳೆ. ಕುಮಾರ ತಾಯಿಯನ್ನೇ ಕೊಲೆಗೈದ ಪಾಪಿ ಮಗ. ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕುಮಾರ ಗ್ರಾಮಕ್ಕೆ ಬಂದಿದ್ದ. ಪಿತ್ರಾರ್ಜಿತ ಮೂರು ಎಕರೆ ಜಮೀನನ್ನು ಅಣ್ಣತಮ್ಮಂದಿರರಿಬ್ಬರಿಗೆ ಪಾಲು ಮಾಡುವಂತೆ ಕುಮಾರ ತಾಯಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ. ತಾಯಿ ಆಸ್ತಿ ಭಾಗಮಾಡಲು ಒಪ್ಪಿರಲಿಲ್ಲ, ಇದರಿಂದ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮದ್ಯದ ನಶೆಯಲ್ಲಿ ತಾಯಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.

ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನ ಶವಾಗಾರಕ್ಕೆ ರವಾನಿಸಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

error: Content is protected !!