Home Blog Page 131

ಇಂದಿರಾನಗರದಲ್ಲಿ ಎಟಿಎಂ ದರೋಡೆಗೆ ವಿಫಲ ಯತ್ನ: ನೇಪಾಳ ಮೂಲದ ಯುವಕ ಬಂಧನ

0

ಬೆಂಗಳೂರು: ಸಿಎಂಎಸ್ ಕಂಪನಿ ಮಾಜಿ ಸಿಬ್ಬಂದಿ ಎಟಿಎಂ ದರೋಡೆ ಪ್ರಕರಣದ ಸಂಚಲನ ಇನ್ನೂ ತಣ್ಣಗಾಗುವ ಮುನ್ನವೇ ನಗರದಲ್ಲಿ ಮತ್ತೊಂದು ಎಟಿಎಂ ದರೋಡೆಗೆ ಯತ್ನ ನಡೆದಿದೆ.

ಫೆಬ್ರವರಿ 10ರಂದು ಮಧ್ಯರಾತ್ರಿ, ಬೆಂಗಳೂರು ನಗರದ ಇಂದಿರಾನಗರ ಡಬಲ್ ರೋಡ್ ಬಳಿಯ ಬ್ಯಾಂಕ್ ಆಫ್ ಬರೋಡಾ ಎಟಿಎಂಗೆ ನುಗ್ಗಿದ ಆರೋಪಿ ಶಟ್ಟರ್ ಮುಚ್ಚಿ ದರೋಡೆಗೆ ವಿಫಲ ಯತ್ನ ನಡೆಸಿದ್ದಾನೆ.

ನೇಪಾಳ ಮೂಲದ ರಾಜೇಂದ್ರ ಸಿಂಗ್ (23) ಕಟ್ಟಿಂಗ್ ಮಷೀನ್ ಬಳಸಿ ಎಟಿಎಂ ಯಂತ್ರ ಒಡೆದು ಹಣ ದೋಚಲು ಯತ್ನಿಸಿದ್ದ. ಅಲ್ಲದೆ ಸಿಸಿಟಿವಿ ಕ್ಯಾಮೆರಾಗಳನ್ನು ಬಟ್ಟೆ ಮತ್ತು ಟೇಪ್ ಬಳಸಿ ಮುಚ್ಚಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾನೆ. ಆದರೆ ಯಂತ್ರ ಒಡೆಯಲು ಸಾಧ್ಯವಾಗದೆ ಹಣ ಸಿಗದೆ ಖಾಲಿಹಸ್ತದಿಂದ ಪಾರಾಗಿದ್ದ.

ಪ್ರಕರಣ ದಾಖಲಿಸಿಕೊಂಡ ಇಂದಿರಾನಗರ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧನದ ಬಳಿಕ ಆರೋಪಿ ನಾಗಾರ್ಜುನ ಹೋಟೆಲ್‌ನ ಕಿಚನ್‌ನಲ್ಲಿ ಕೆಲಸ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ.

ನಗರದಲ್ಲಿ ಎಟಿಎಂ ದರೋಡೆ ಯತ್ನಗಳು ಮರುಕಳಿಸುತ್ತಿರುವುದು ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.

ಕಲ್ಲು ತೂರಾಟ ಪ್ರಕರಣ: ಬಂಧಿತ 7 ಮಂದಿ ಅಮಾಯಕರು, ಬಿಡುಗಡೆಗೆ ಮುಸ್ಲಿಂ ಮುಖಂಡರ ಮನವಿ

0

ಬಾಗಲಕೋಟೆ: ಕಲ್ಲು ತೂರಾಟ ಪ್ರಕರಣದಲ್ಲಿ ಬಂಧನಕ್ಕೊಳಗಾದ 8 ಜನರಲ್ಲಿ 7 ಮಂದಿ ಅಮಾಯಕರಾಗಿದ್ದು, ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮುಸ್ಲಿಂ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಶುಕ್ರವಾರ ನಡೆದ ಶಾಂತಿ ಸಭೆಗೆ ಮುಸ್ಲಿಂ ಸಮುದಾಯ ಗೈರಾಗಿದ್ದ ಹಿನ್ನೆಲೆಯಲ್ಲಿ, ಇಂದು ಬಾಗಲಕೋಟೆ ನವನಗರದ ಜಿಲ್ಲಾಡಳಿತ ಭವನದಲ್ಲಿ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರ ನೇತೃತ್ವದಲ್ಲಿ ಮರು ಶಾಂತಿ ಸಭೆ ಆಯೋಜಿಸಲಾಯಿತು. ಆದರೆ ಈ ಬಾರಿ ಹಿಂದೂ ಮುಖಂಡರು ಸಭೆಗೆ ಹಾಜರಾಗಲಿಲ್ಲ.

ಸಭೆಯಲ್ಲಿ ಮುಸ್ಲಿಂ ಸಮುದಾಯದ ಪ್ರತಿನಿಧಿಗಳು ಮಾತ್ರ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಚಿವರಿಗೆ ಮೌಖಿಕವಾಗಿ ಸಲ್ಲಿಸಿದರು. ಬಂಧಿತರಲ್ಲಿ ಒಬ್ಬ ಮಾತ್ರ ನಿಜವಾದ ಆರೋಪಿ, ಉಳಿದ 7 ಮಂದಿ ನಿರಪರಾಧಿಗಳು ಎಂದು ಅವರು ವಾದಿಸಿದರು.

ಸಭೆಯ ಬಳಿಕ ಮಾತನಾಡಿದ ಆರ್.ಬಿ. ತಿಮ್ಮಾಪೂರ, “ಜಿಲ್ಲೆಯ ಎಲ್ಲಾ ಸಮುದಾಯದ ಜನರು ಶಾಂತಿ ಮತ್ತು ಸಂಯಮ ಕಾಪಾಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬಾರದು,” ಎಂದು ಕರೆ ನೀಡಿದರು.

ಪ್ರಕರಣದ ಸುತ್ತ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆ ಗಟ್ಟಿಯಾಗಿದ್ದು, ಬಂಧಿತರ ಬಿಡುಗಡೆ ವಿಚಾರ ಇದೀಗ ಜಿಲ್ಲಾಡಳಿತದ ತೀರ್ಮಾನಕ್ಕೆ ಕಾಯುತ್ತಿದೆ.

ತಮಿಳುನಾಡು ಮಾದರಿ ಶಿಕ್ಷಕರ ನೇಮಕ ಜಾರಿಗೆ ಬರಲಿ: ಬಸವರಾಜ ಬೊಮ್ಮಾಯಿ ಆಗ್ರಹ

0

ಹಾವೇರಿ: ಒಬ್ಬ ಶಿಕ್ಷಕರು ನಿವೃತ್ತಿಯಾಗುವ ಮುನ್ನವೇ ಹೊಸ ಶಿಕ್ಷಕರ ನೇಮಕ ಮಾಡುವ ತಮಿಳುನಾಡು ಮಾದರಿಯ ವ್ಯವಸ್ಥೆ ರಾಜ್ಯದಲ್ಲೂ ಜಾರಿಯಾದರೆ ಖಾಲಿ ಹುದ್ದೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಿರಿಯ ಪ್ರಾಥಮಿಕ ಶಾಲೆ ಯ 21ನೇ ವಾರ್ಷಿಕ ಸ್ನೇಹ ಸಮ್ಮೇಳನ, ಸರಸ್ವತಿ ಪೂಜೆ, 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

“ತಾಯಿ ಮೊದಲ ಗುರು, ನಂತರ ಶಾಲೆಯ ಗುರು ಶಿಕ್ಷಣ ನೀಡುತ್ತಾರೆ. ಸಮಾಜ ಬದುಕಿನ ಪಾಠ ಕಲಿಸುತ್ತದೆ. ವಿದ್ಯಾರ್ಥಿ ಜೀವನವು ಶಾಲೆಯಲ್ಲಿ ಪಾಠ–ಪರೀಕ್ಷೆಯಾಗಿದ್ದರೆ, ಜೀವನದಲ್ಲಿ ಮೊದಲೇ ಪರೀಕ್ಷೆ ನಂತರ ಪಾಠ. ಹೀಗಾಗಿ ಪಾಠ–ಪರೀಕ್ಷೆ ನಿರಂತರ ಪ್ರಕ್ರಿಯೆ,” ಎಂದು ಅವರು ಹೇಳಿದರು.

ಗ್ರಾಮೀಣ ಮತ್ತು ನಗರ ಮಕ್ಕಳ ಶಿಕ್ಷಣದ ನಡುವಿನ ಅಂತರವನ್ನು ಉಲ್ಲೇಖಿಸಿದ ಅವರು, 5ನೇ ತರಗತಿವರೆಗೆ ಕನ್ನಡ ಮತ್ತು ನಂತರ ಇಂಗ್ಲಿಷ್ ಕಲಿಯುವ ವ್ಯವಸ್ಥೆಯಿಂದ ಗ್ರಾಮೀಣ ಮಕ್ಕಳು ಸ್ಪರ್ಧೆಯಲ್ಲಿ ಹಿಂದುಳಿಯುವ ಪರಿಸ್ಥಿತಿ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. “ಈ ಪ್ರಶ್ನೆಗೆ ಸಚಿವರು ಉತ್ತರ ಕೊಡಬೇಕು,” ಎಂದು ಅವರು ಸವಾಲು ಹಾಕಿದರು.

ರಾಜ್ಯದಲ್ಲಿ 65% ಶಾಲೆಗಳು ಹಳೆ ಮೈಸೂರು ಭಾಗದಲ್ಲಿದ್ದು, 35% ಮಾತ್ರ ಉತ್ತರ ಕರ್ನಾಟಕದಲ್ಲಿವೆ ಎಂದ ಅವರು, ಸರ್ಕಾರಿ ಶಾಲೆಗಳನ್ನು ಗಟ್ಟಿಗೊಳಿಸಿ, ಶಿಕ್ಷಕರ ನೇಮಕಾತಿಯನ್ನು ವೇಗಗೊಳಿಸಬೇಕು ಎಂದು ಒತ್ತಾಯಿಸಿದರು.

“ನಾನು ಮುಖ್ಯಮಂತ್ರಿಯಾಗಿದ್ದಾಗ 30 ಸಾವಿರ ಶಾಲಾ ಕಟ್ಟಡ ನಿರ್ಮಾಣಕ್ಕೆ ತೀರ್ಮಾನಿಸಿದ್ದೆವು. ಮೊದಲ ವರ್ಷವೇ 9 ಸಾವಿರ ಕಟ್ಟಡಗಳು ನಿರ್ಮಾಣಗೊಂಡವು. 15 ಸಾವಿರ ಶಿಕ್ಷಕರ ನೇಮಕಕ್ಕೂ ಆದೇಶ ನೀಡಿದ್ದೆವು. ಅದು ಮುಂದುವರೆಯಬೇಕು,” ಎಂದು ಬೊಮ್ಮಾಯಿ ಹೇಳಿದರು.

ತಮಿಳುನಾಡಿನಲ್ಲಿ ನಿವೃತ್ತಿಗೆ ಒಂದು ವರ್ಷ ಮುಂಚೆಯೇ ಶಿಕ್ಷಕರ ನೇಮಕ ಮಾಡಿ ತರಬೇತಿ ನೀಡುವ ವ್ಯವಸ್ಥೆಯನ್ನು ಉದಾಹರಿಸಿ, “ಆ ಮಾದರಿ ಕರ್ನಾಟಕದಲ್ಲೂ ಜಾರಿಯಾಗಬೇಕು,” ಎಂದು ಆಗ್ರಹಿಸಿದರು.

ಕಾಡಾನೆ ದಾಳಿಗೆ ಕಾಫಿನಾಡಲ್ಲಿ ಕೋಪದ ಜ್ವಾಲೆ: ಲಾಠಿಚಾರ್ಜ್ ಖಂಡಿಸಿ ಶೃಂಗೇರಿ ಕ್ಷೇತ್ರ ಸಂಪೂರ್ಣ ಬಂದ್

0

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ಬಲಿಯಾದ ಘಟನೆ ಕಾಫಿನಾಡಿನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣದ ವಿರುದ್ಧ ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಮತ್ತಷ್ಟು ಉದ್ವಿಗ್ನತೆ ಸೃಷ್ಟಿಸಿದೆ. ಇದರ ಖಂಡನೆಗಾಗಿ ಸೋಮವಾರ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಸಂಪೂರ್ಣ ಬಂದ್ ಆಚರಿಸಲಾಯಿತು.

ಶೃಂಗೇರಿ, ಎನ್ ಆರ್ ಪುರ, ಕೊಪ್ಪ ತಾಲೂಕು ಹಾಗೂ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದು, ರಸ್ತೆಗಳು ಬಿಕೋ ಎನ್ನುತ್ತಿದ್ದವು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಾಣಿಜ್ಯ ಮತ್ತು ಸಾರ್ವಜನಿಕ ಚಟುವಟಿಕೆಗಳು ಸ್ಥಗಿತಗೊಂಡವು.

ಸರ್ಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆಸಿದ ಕ್ರಮವನ್ನು ಖಂಡಿಸಿ ಬಂದ್‌ಗೆ ಕರೆ ನೀಡಲಾಗಿತ್ತು. ರೈತ ಸಂಘಟನೆಗಳು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಬಂದ್‌ಗೆ ಬೆಂಬಲ ಸೂಚಿಸಿದ್ದವು.

ನಾಗರಿಕ ಹಿತ ರಕ್ಷಣಾ ವೇದಿಕೆ, ರೈತ ಒಕ್ಕೂಟ, ಆಟೋ ಚಾಲಕರು ಮತ್ತು ಮಾಲೀಕರ ಸಂಘಗಳು ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಕೈಜೋಡಿಸಿವೆ. ಬಿಜೆಪಿ ಪಕ್ಷವೂ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದೆ. ಕಾಡಾನೆ ಹಾವಳಿ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಬ್ರೇಕ್ ಫೇಲ್..ರಸ್ತೆ ಪಕ್ಕದ ರೈಲಿಂಗ್ಸ್ ಗೆ ಡಿಕ್ಕಿ ಹೊಡೆದ KSRTC ಬಸ್; ತಪ್ಪಿದ ದುರಂತ

0

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಬಳಿ ಭೀಕರ ಬಸ್ ಅಪಘಾತ ಸಂಭವಿಸಿದೆ.

ಕೆ.ಆರ್.ಪೇಟೆ ನಗರದಿಂದ ಭೇರ್ಯ ಕಡೆಗೆ ಹೋಗುತ್ತಿದ್ದ KSRTC ಬಸ್‌ನ ಬ್ರೇಕ್ ಫೇಲ್ ಆಗಿ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ರೈಲಿಂಗ್ಸ್‌ಗೆ ಡಿಕ್ಕಿ ಹೊಡೆದಿದೆ.

ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ 60ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲುಂಡ ಟೀಮ್ ಇಂಡಿಯಾ; 76 ರನ್ ಗಳಿಂದ ಗೆದ್ದ ಸೌತ್ ಆಫ್ರಿಕಾ!

0

ಟಿ20 ವಿಶ್ವಕಪ್‌ ಆರಂಭವಾದ ನಂತರ 19 ವರ್ಷಗಳಲ್ಲೇ, ಭಾರತ ತಂಡವು ಮೊದಲ ಬಾರಿಗೆ 50 ರನ್‌ಗಳಿಗಿಂತ ಹೆಚ್ಚು ಅಂತರದಿಂದ ಸೋಲೊಪ್ಪಿಕೊಂಡಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 187 ರನ್‌ ಗಳಿಸಿತು. ಸೌತ್ ಆಫ್ರಿಕಾ ತಂಡದ ಪರ ಡೇವಿಡ್ ಮಿಲ್ಲರ್ ಅರ್ಧಶತಕ (63) ಬಾರಿದ್ದರು.

ಟೀಮ್ ಇಂಡಿಯಾ ಪವರ್ ಪ್ಲೇನಲ್ಲಿ ಕೇವಲ 31 ರನ್ ಗಳಿಸುತ್ತ, ಮೂರು ವಿಕೆಟ್ ಕಳೆದುಕೊಂಡಿತು. ಬಳಿಕ ಕೂಡ ಸೌತ್ ಆಫ್ರಿಕಾದ ಬೌಲಿಂಗ್ ದಾಳಿ ತಡೆಯಲು ಸಾಧ್ಯವಾಗದೆ, ಭಾರತ ತಂಡ 18.5 ಓವರ್‌ಗಳಲ್ಲಿ 111 ರನ್‌ನಲ್ಲಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡ 76 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದು, ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಹೀನಾಯ ಸೋಲು ಎನ್ನಲಾಗುತ್ತಿದೆ.

2010 ರ ಟಿ20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 49 ರನ್​ಗಳಿಂದ ಸೋತಿದ್ದು ಈವರೆಗಿನ ಹೀನಾಯ ದಾಖಲೆಯಾಗಿತ್ತು. ಆದರೆ ಈ ಬಾರಿ ಸೌತ್ ಆಫ್ರಿಕಾ ತಂಡವು ಟೀಮ್ ಇಂಡಿಯಾವನ್ನು ಮಕಾಡೆ ಮಲಗಿಸಿದೆ. ಈ ಮೂಲಕ ಭಾರತ ತಂಡಕ್ಕೆ ಟಿ20 ವಿಶ್ವಕಪ್​ನಲ್ಲಿ ಹೀನಾಯ ಸೋಲುಣಿಸುವಲ್ಲಿ ಯಶಸ್ವಿಯಾಗಿದೆ.

“ಮುಡಾ ಹಗರಣದಲ್ಲಿ ಹೊಸ ಟ್ವಿಸ್ಟ್: ಸ್ನೇಹಿಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್

0

ಬೆಂಗಳೂರು : ನಗರದ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಹೊಸ ಎಫ್‌ಐಆರ್ ದಾಖಲಾಗಿದೆ. ಈ ಎಫ್‌ಐಆರ್ ಪವಿತ್ರ ಎಂಬ ಮಹಿಳೆಯು ಸಲ್ಲಿಸಿದ ದೂರಿನ ಆಧಾರದ ಮೇಲೆ ದಾಖಲಾಗಿದ್ದು, ಈ ಮೂಲಕ ಮುಡಾ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಟ್ವಿಸ್ಟ್ ಸಿಕ್ಕಿದೆ.

ಪವಿತ್ರ ಕೊಟ್ಟ ದೂರಿನಲ್ಲಿ ಏನಿದೆ?

“ನನ್ನ ಮೇಲೆ ಬೆದರಿಕೆ ಹಾಕಲಾಗುತ್ತಿದ್ದು, ಪ್ರೊ. ಮೈಲಾರಪ್ಪ ವಿರುದ್ಧ ಕೊಟ್ಟಿರುವ ದೂರು ವಾಪಸ್ ಪಡೆಯುವಂತೆ ಒತ್ತಡ ಹಾಕುತ್ತಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ, ಪೊಲೀಸರವರು ಸ್ನೇಹಿಮಯಿ ಕೃಷ್ಣ ಅವರನ್ನು ಎ1 ಆರೋಪಿಯನ್ನಾಗಿ ದಾಖಲಿಸಿಕೊಂಡಿದ್ದಾರೆ.

ಸದ್ಯ ತನಿಖೆ ನಡೆಯುತ್ತಿದೆ. ಮುಡಾ ಹಗರಣದ ದೂರು ಸಂಬಂಧಿತ ಪ್ರಕರಣಗಳಲ್ಲಿ ಸ್ಥಳೀಯರು ಮತ್ತು ಸಾಮಾಜಿಕ ಕಾರ್ಯಕರ್ತರ ನಡುವಿನ ವಾದ-ವಿವಾದಗಳು ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಈ ಪ್ರಕರಣ ಹೊಸ ತಿರುವು ತಂದುಕೊಟ್ಟಿದೆ.

ಈ ಮೂಲಕ ಮುಡಾ ಹಗರಣ ಸಂಬಂಧಿತ ಪ್ರಕರಣಗಳಲ್ಲಿ ಮುಂದಿನ ಹಂತದ ತನಿಖೆಗೂ ಮರುಬಲ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಚಾಣಕ್ಯ ಮುಕುಲ್ ರಾಯ್ ನಿಧನ!

0

ಕೋಲ್ಕತ್ತಾ:  ಪಶ್ಚಿಮ ಬಂಗಾಳದ ರಾಜಕೀಯ ಚಾಣಕ್ಯ ಮುಕುಲ್ ರಾಯ್ (71) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮಾಜಿ ರೈಲ್ವೆ ಸಚಿವರಾಗಿದ್ದ ರಾಯ್, ಒಂದು ಸಮಯದಲ್ಲಿ ಮುಖ್ಯಮಂತ್ರಿಯರಾದ ಮಮತಾ ಬ್ಯಾನರ್ಜಿಯ ಆಪ್ತ ಸಹಾಯಕರಾಗಿದ್ದರು. ಅವರು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ 1:30ಕ್ಕೆ ಕೊನೆಯುಸಿರೆಳೆದರು. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮುಕುಲ್ ರಾಯ್ ಕೆಲವು ದಿನಗಳ ಹಿಂದೆ ಕೋಮಾದಲ್ಲಿದ್ದರು ಮತ್ತು ನೆನಪಿನ ಶಕ್ತಿ ಕಳೆದುಕೊಂಡಿದ್ದರು.

ಮಮತಾ ಬ್ಯಾನರ್ಜಿಯವರೊಂದಿಗೆ ತೃಣಮೂಲ ಕಾಂಗ್ರೆಸ್ ಸ್ಥಾಪನೆಯಿಂದ ಆರಂಭಿಸಿಕೊಂಡ ರಾಜಕೀಯ ಜೀವನದಲ್ಲಿ, ರಾಯ್ ಪಕ್ಷದ ಎರಡನೇ ನಾಯಕನಾಗಿ ಪರಿಗಣಿತರಾದರು. 2017 ರಲ್ಲಿ ಬಿಜೆಪಿ ಸೇರ್ಪಡೆ ಹೊಂದಿ, 2019 ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು. 2021 ರ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣನಗರದಿಂದ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಪಕ್ಷದೊಳಗಿನ ಪ್ರಭಾವ ಕಡಿಮೆಯಾಗುವುದರ ನಂತರ ಅವರು ಮತ್ತೆ ತೃಣಮೂಲ ಕಾಂಗ್ರೆಸ್ ಸೇರಿ ಮಮತಾ ಬ್ಯಾನರ್ಜಿಯವರ ಬಳಿಗೆ ಹಿಂದಿರುಗಿದರು.

ರಾಜಕೀಯ ಚಾಣಕ್ಯತೆಗಾಗಿ “ಬಂಗಾಳದ ರಾಜಕೀಯ ಚಾಣಕ್ಯ” ಎಂದು ಗುರುತಿಸಲ್ಪಟ್ಟ ಮುಕುಲ್ ರಾಯ್, 1998 ರಲ್ಲಿ ತೃಣಮೂಲ ಕಾಂಗ್ರೆಸ್ ಸ್ಥಾಪನೆಯಲ್ಲಿನಿಂದ ರಾಷ್ಟ್ರ ಮಟ್ಟದ ಪ್ರಮುಖ ನಾಯಕನಾಗುವವರೆಗೆ ರಾಜಕೀಯ ಏರಿಳಿತವನ್ನು ಕಂಡುಬಂದಿದ್ದಾರೆ.

ಬೆಂಗಳೂರು: ಬಿಎಂಟಿಸಿ ಬಸ್ಸುಗಳು ಗ್ರಾಮಾಂತರ ಪ್ರದೇಶಗಳಿಗೆ ವಿಸ್ತರಣೆ!

0

ಬೆಂಗಳೂರು: ನಗರದಲ್ಲಿ ಸಂಚರಿಸುತ್ತಿರುವ ಬಿಎಂಟಿಸಿ ಬಸ್ಸುಗಳು ಇನ್ಮುಂದೆ ಗ್ರಾಮಾಂತರ ಪ್ರದೇಶಗಳಿಗೂ ಸೇವೆ ವಿಸ್ತರಿಸುತ್ತವೆ.

ಈಗಾಗಲೇ ನಗರದಲ್ಲಿ 40 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಬಸ್ಸುಗಳು, ರಾಮನಗರ, ಕನಕಪುರ, ನೆಲಮಂಗಲ-ಹೊಸಕೋಟೆ, ದೇವನಹಳ್ಳಿ-ದೊಡ್ಡಬಳ್ಳಾಪುರ ಭಾಗಗಳಿಗೆ ಸಂಪರ್ಕ ಒದಗಿಸಲಿದೆ.

ಬಿಎಂಟಿಸಿ ಹೊಂದಿರುವ ಒಟ್ಟು 6,750 ಬಸ್ಸುಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳೂ ಸೇರಿವೆ. ಪ್ರತಿದಿನ ಸುಮಾರು 45 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ದಿನಕ್ಕೆ ಬಸ್ಸುಗಳು ಒಟ್ಟು 13 ಲಕ್ಷ ಕಿಲೋಮೀಟರ್ ಸಂಚಾರ ಮಾಡುತ್ತವೆ. ಹೊಸ ವಿಸ್ತರಣೆ ಮೂಲಕ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಆಸ್ಪತ್ರೆಗಳಿಗೆ ಹೋಗುವ ಪ್ರಯಾಣಿಕರಿಗೆ ಸಮಯ ಮತ್ತು ವೆಚ್ಚ ಉಳಿತಾಯವಾಗಲಿದೆ ಎಂದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಾಥಮಿಕವಾಗಿ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ಸ್ಟ್ಯಾಂಡ್‌ದಿಂದ ರಾಮನಗರ, ಬನಶಂಕರಿ ಬಸ್ ಸ್ಟ್ಯಾಂಡ್‌ದಿಂದ ಕನಕಪುರ, ಮೆಜಸ್ಟಿಕ್ ಕೆಂಪೇಗೌಡ ಬಸ್ ಸ್ಟ್ಯಾಂಡ್‌ದಿಂದ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರಕ್ಕೆ ಬಸ್ಸುಗಳು ಸಂಚಾರ ಮಾಡಲಿವೆ.

ಹಾಸನ: ಮಕ್ಕಳ ನಿರ್ಲಕ್ಷ್ಯದಿಂದ ವೃದ್ಧ ದಂಪತಿ ಆತ್ಮಹತ್ಯೆ

0

ಹಾಸನ: ನಗರದ ಕರಿಗೌಡ ಕಾಲೊನಿಯಲ್ಲಿ ವೃದ್ಧ ದಂಪತಿ ಡೇನಿಯಲ್ ಮತ್ತು ಪತ್ನಿ ಮೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕೊಡಗು ಜಿಲ್ಲೆಯ ಹಾರೇಹೊಸೂರು ಗ್ರಾಮದ ಡೇನಿಯಲ್, ಐವತ್ತು ವರ್ಷಗಳ ಹಿಂದೆ ಮೇರಿಯನ್ನು ವಿವಾಹ ಮಾಡಿಕೊಂಡಿದ್ದು, ನೆಲ್ಸನ್ ಮತ್ತು ವಿಲ್ಸನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಡೇನಿಯಲ್ ಕಷ್ಟಪಟ್ಟು ಕಾಫಿ ತೋಟ, ಮನೆ ಮತ್ತು ಆಸ್ತಿ ಮಾಡಿ ಮಕ್ಕಳಿಗೆ ಒಳ್ಳೆಯ ಜೀವನ ಒದಗಿಸಿದ್ದರೂ, ಇತ್ತೀಚಿನ ಕೆಲವು ವರ್ಷಗಳಿಂದ ಮಕ್ಕಳು ವಯೋವೃದ್ಧ ತಂದೆ-ತಾಯಿಯನ್ನು ನಿರ್ಲಕ್ಷಿಸಿದ್ದರು.

ಮಕ್ಕಳ ನಿರ್ಲಕ್ಷ್ಯದಿಂದ ಬೇಸತ್ತ ದಂಪತಿ ಕೆಲವು ದಿನಗಳಿಂದ ವೃದ್ಧಾಶ್ರಮದಲ್ಲಿ ಉಳಿಯಲು ಪ್ರಯತ್ನಿಸಿದ್ದರು. ಆದರೆ ಮನಸ್ಸಿನ ತೀವ್ರ ಒತ್ತಡದಿಂದ ಅವರು, ಬಸ್ ಮೂಲಕ ಬಸ್ ಸ್ಟ್ಯಾಂಡ್‌ ಬಳಿ ಹೋಗಿ ರೈಲ್ವೆ ಟ್ರ್ಯಾಕ್ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡರು. ಮೃತ ದಂಪತಿಯನ್ನು ಗುರುತಿಸಿ ಮಕ್ಕಳಿಗೆ ಮಾಹಿತಿ ನೀಡಲಾಗಿತ್ತು, ಆದರೆ ಅವರು ಮೃತದೇಹಗಳನ್ನು ಕೊಂಡೊಯ್ಯಲು ಹಿಂದೇಟು ಹಾಕಿದ್ದರು. ಕಡೆಗೆ ಸಂಬಂಧಿಕರು ಹಾಗೂ ರೈಲ್ವೇ ಪೊಲೀಸರು ತರಾಟೆಗೆ ತೆಗೆದಕೊಂಡಿದ್ದರಿಂದ ಶವಾಗಾರದ ಬಳಿ ಬಂದು ಒಂದು ಹನಿ ಕಣ್ಣೀರು ಹಾಕದೆ ತಂದೆ ಮೇಲೆಯೇ ಆರೋಪಿಸಿದ್ದಾರೆ.

ತಂದೆ ಮದ್ಯ ಸೇವಿಸುತ್ತಿದ್ದರು. ಇದರಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಆ ಕಾರಣದಿಂದ ಅವರೇ ಮನೆ ಬಿಟ್ಟು ಹೋಗಿದ್ದರು ಎಂದು ಆರೋಪ ಮಾಡಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!