Home Blog Page 139

ಲೇಡಿ ಫಿಟ್ನೆಸ್ ಇನ್‌ಫ್ಲೂಯೆನ್ಸರ್‌ಗೆ ಅಶ್ಲೀಲ ಮೆಸೇಜ್; ಬೆಂಗಳೂರಿನಲ್ಲಿ ಹರಿಯಾಣ ಯುವಕ ಅರೆಸ್ಟ್

0

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಶುರುವಾದ ಏಕಪಕ್ಷೀಯ ಪ್ರೀತಿಯೊಂದು ಮಹಿಳಾ ಫಿಟ್ನೆಸ್ ಇನ್‌ಫ್ಲೂಯೆನ್ಸರ್‌ಗೆ ಭಾರೀ ಕಿರುಕುಳವಾಗಿ ಪರಿಣಮಿಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಇನ್‌ಸ್ಟಾಗ್ರಾಂ ಮೂಲಕ ಅಶ್ಲೀಲ ಸಂದೇಶ ಕಳುಹಿಸಿ, ನಿರಂತರವಾಗಿ ಹಿಂಸಿಸುತ್ತಿದ್ದ ಆರೋಪಿಯೊಬ್ಬ ಯುವತಿಯನ್ನು ಹುಡುಕಿಕೊಂಡು ಹರಿಯಾಣದಿಂದ ಕರ್ನಾಟಕಕ್ಕೆ ಬಂದಿದ್ದು, ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹರಿಯಾಣ ಮೂಲದ ಸುಧೀರ್ ಕುಮಾರ್ ಬಂಧಿತ ಆರೋಪಿ. ಸಂತ್ರಸ್ತ ಯುವತಿ ಬೆಂಗಳೂರಿನಲ್ಲಿ ಲೇಡಿ ಫಿಟ್ನೆಸ್ ಟ್ರೈನರ್ ಹಾಗೂ ನ್ಯೂಟ್ರಿಷನಿಸ್ಟ್ ಇನ್‌ಫ್ಲೂಯೆನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇನ್‌ಸ್ಟಾಗ್ರಾಂನಲ್ಲಿ ಆಕೆಯ ವಿಡಿಯೋ ಮತ್ತು ಪೋಸ್ಟ್‌ಗಳನ್ನು ನೋಡಿ ಆರೋಪಿಯು ಸಂಪರ್ಕಿಸಿದ್ದಾನೆ.

ಆರಂಭದಲ್ಲಿ ಇನ್‌ಸ್ಟಾಗ್ರಾಂ ಮೂಲಕ ಲೈಂಗಿಕವಾಗಿ ಪ್ರಚೋದಿಸುವ ರೀತಿಯಲ್ಲಿ ಸಂದೇಶ ಕಳುಹಿಸಿದ್ದ ಆರೋಪಿ, ಬಳಿಕ ಯುವತಿಯ ವಾಟ್ಸಪ್ ನಂಬರ್ ಪಡೆದು ಅಶ್ಲೀಲ ಸಂದೇಶಗಳ ಮೂಲಕ ಕಿರುಕುಳ ನೀಡುತ್ತಿದ್ದ. ದಿನಗಳು ಕಳೆದಂತೆ ಕಾಟ ಮಿತಿಮೀರಿದ್ದು, ಯುವತಿಯನ್ನು ಬೆಂಬಿಡದೇ ಹಿಂಬಾಲಿಸಲು ಆರಂಭಿಸಿದ್ದಾನೆ. ಇಷ್ಟಕ್ಕೂ ತೃಪ್ತಿಯಾಗದ ಆರೋಪಿ, ಯುವತಿಯನ್ನು ನೇರವಾಗಿ ಭೇಟಿಯಾಗಲು ಹರಿಯಾಣದಿಂದ ಬೆಂಗಳೂರಿಗೆ ಬಂದಿದ್ದ. ನಗರದಲ್ಲಿ ಆಕೆ ಕೆಲಸ ಮಾಡುತ್ತಿದ್ದ ಜಿಮ್‌ಗೆ ತೆರಳಿ ಸಹೋದ್ಯೋಗಿಗಳ ಬಳಿ ವಿಚಾರಿಸಿದ ವಿಷಯ ತಿಳಿದ ಕೂಡಲೇ ಆತಂಕಗೊಂಡ ಯುವತಿ ಪೊಲೀಸರ ಮೊರೆ ಹೋಗಿದ್ದಾಳೆ.

ಯುವತಿಯ ದೂರಿನ ಆಧಾರದ ಮೇಲೆ ದಕ್ಷಿಣ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಕಿರುಕುಳ ಪ್ರಕರಣಗಳಿಗೆ ಇದು ಮತ್ತೊಂದು ಎಚ್ಚರಿಕೆಯ ಘಟನೆ ಆಗಿದೆ.

ಮಾಗಡಿಯಲ್ಲಿ ಘನಘೋರ ಕೃತ್ಯ| ಬೆನ್ನುಮೂಳೆ ಮುರಿದು ನರಳುತ್ತಿದ್ದ ಸ್ನೇಹಿತನನ್ನೇ ಕೊಲೆಗೈದ ಸ್ನೇಹಿತರು!

0

ರಾಮನಗರ:- ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ಮಾಗಡಿ ತಾಲೂಕಿನ ವಾಜರಹಳ್ಳಿ ಗ್ರಾಮದಲ್ಲಿ ಘನಘೋರ ಕೃತ್ಯ ಬೆಳಕಿಗೆ ಬಂದಿದೆ.

ತಮ್ಮ ಸ್ವಾರ್ಥಕ್ಕೆ ಸ್ನೇಹಿತನನ್ನು ತೆಂಗಿನ ಮರ ಹತ್ತಿಸಿ ಆತ ಬಿದ್ದು ಬೆನ್ನು ಮೂಳೆಗೆ ಏಟು ಮಾಡಿಕೊಂಡಾಗ ಚಿಕಿತ್ಸೆಗೆ ಹತ್ತಾರು ಲಕ್ಷ ರೂ. ಖರ್ಚಾಗುತ್ತದೆಂದು ಸ್ನೇಹಿತರೇ ಆತನನ್ನು ಕೊಲೆ ಮಾಡಿದ್ದಾರೆ. ಕೊಲೆಯಾದ ಯುವಕನನ್ನು ವಿನೋದ್ ಕುಮಾರ್ (26) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಸುದೀಪ್ ಮತ್ತು ಪ್ರಜ್ವಲ್ ಎನ್ನಲಾಗಿದೆ. ಮೂವರೂ ಮಾಗಡಿ ತಾಲೂಕಿನ ಕಲ್ಯಾಣಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ಜನವರಿ 1ರಂದು ಹೊಸವರ್ಷ ಆಚರಣೆಗಾಗಿ ಐವರು ಸ್ನೇಹಿತರು ಒಟ್ಟಾಗಿ ಪಾರ್ಟಿಗೆ ತೆರಳಿದ್ದರು. ಈ ವೇಳೆ ಮದ್ಯಕ್ಕೆ ಎಳನೀರು ಬೆರೆಸಲು ತೀರ್ಮಾನಿಸಿದ ಅವರು, ವಿನೋದ್ ಕುಮಾರ್​​ನನ್ನು ತೆಂಗಿನ ಮರ ಹತ್ತುವಂತೆ ಮಾಡಿದ್ದರು ಎನ್ನಲಾಗಿದೆ.

ಆ ಸಂದರ್ಭದಲ್ಲಿ ವಿನೋದ್ ಕುಮಾರ್ ಮರದಿಂದ ಕೆಳಗೆ ಬಿದ್ದಿದ್ದ. ಪರಿಣಾಮವಾಗಿ ಆತನ ಬೆನ್ನುಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗೆ ಹತ್ತಾರು ಲಕ್ಷ ರೂಪಾಯಿ ಖರ್ಚಾಗಬಹುದು ಎಂಬ ಆತಂಕದಿಂದ ಆರೋಪಿಗಳು ಭೀತಿಗೊಂಡಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ವಿನೋದ್​ನನ್ನು ಮನೆಗೆ ಬಿಡುತ್ತೇವೆ ಎಂದು ನಂಬಿಸಿ, ಮಾರ್ಗಮಧ್ಯೆ ವಾಜರಹಳ್ಳಿ ಸಮೀಪದ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾರೆ ಎಂಬುದು ಇದೀಗ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ವಿನೋದ್ ಕುಮಾರ್ ನಾಪತ್ತೆಯಾಗಿರುವ ಬಗ್ಗೆ ಅವರ ಪೋಷಕರು ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೂಕ್ಷ್ಮವಾಗಿ ತನಿಖೆ ನಡೆಸಿದ್ದು, ಸ್ನೇಹಿತರಿಂದಲೇ ಕೊಲೆಯಾಗಿರುವ ರಹಸ್ಯ ಬಯಲಾಗಿದೆ. ಇದೀಗ ಸುದೀಪ್ ಮತ್ತು ಪ್ರಜ್ವಲ್​ನನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರು| ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ಕೇರಳ ಮೂಲದ ವಿಕೃತ ಕಾಮಿ ಅರೆಸ್ಟ್!

0

ಬೆಂಗಳೂರು:- ಹೆಬ್ಬಗೋಡಿಯ ವಿದ್ಯಾನಗರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ವಿಕೃತ ಕಾಮಿಯನ್ನು ಅರೆಸ್ಟ್ ಮಾಡಿದ್ದಾರೆ.

ಅಮಲ್ (23) ಬಂಧಿತ ಆರೋಪಿ. ಈತ ಕೇರಳ ಮೂಲದವನಾಗಿದ್ದು, ಮನೆ ಮಹಡಿ, ಹಾಗೂ ಆಚೆ ಒಣಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನ ಕದಿಯುತ್ತಿದ್ದ. ಹೊರಗಡೆ ಸುತ್ತಾಡಿ ಮನೆಗಳನ್ನು ದೂರದಿಂದಲೇ ಪರಿಶೀಲನೆ ಮಾಡುತ್ತಿದ್ದ. ನಂತರ ಯಾರು ಇಲ್ಲದ ವೇಳೆ ನುಗ್ಗಿ ಒಳ ಉಡುಪುಗಳನ್ನ ಕದ್ದೊಯ್ಯುತ್ತಿದ್ದ. ಬಳಿಕ ಅವುಗಳನ್ನು ತಾನು ಧರಿಸಿಕೊಂಡು ಫೋಟೋ ತೆಗೆದುಕೊಂಡು ವಿಕೃತ ಆನಂದ ಪಡುತ್ತಿದ್ದ ಎಂದು ತಿಳಿದುಬಂದಿದೆ.

ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ವಿದ್ಯಾನಗರದಲ್ಲಿ ವಿಕೃತ ಕಾಮಿ ಅಮಲ್ ನನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಕದ್ದ ಒಳ ಉಡುಪುಗಳನ್ನು ಧರಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿರುವುದು ಮೊಬೈಲ್​​ನಲ್ಲಿ ಪತ್ತೆಯಾಗಿವೆ. ಸದ್ಯ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ತೆರಿಗೆ ವಂಚನೆ; ಸರ್ಕಾರಕ್ಕೆ ಯಾಮರಿಸುತ್ತಿದ್ದ ನೂರಾರು ಖಾಸಗಿ ಬಸ್‌ಗಳು ಸೀಜ್!

0

ಬೆಂಗಳೂರು: ತೆರಿಗೆ ವಂಚಿಸಿ ಓಡಾಡುತ್ತಿದ್ದ ನೂರಾರು ಖಾಸಗಿ ಬಸ್‌ಗಳನ್ನು ಸೀಜ್ ಮಾಡಲಾಗಿದೆ.

ನಗರದಲ್ಲಿ ಖಾಸಗಿ ಬಸ್ ಹಾಗೂ ಇತರೆ ವಾಹನಗಳು ಟ್ಯಾಕ್ಸ್ ಕಟ್ಟುತ್ತಿಲ್ಲ. ಇದರಿಂದ ಸಾರಿಗೆ ಇಲಾಖೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗ್ತಿದೆ. ಇದೀಗ ಸಾರಿಗೆ ಇಲಾಖೆ ಅಪರ ಆಯುಕ್ತ ಎಂ.ಪಿ ಓಂಕಾರೇಶ್ವರಿ ನೇತೃತ್ವದ ತಂಡ ಫೀಲ್ಟ್‌ಗೆ ಇಳಿದಿದೆ. ತೆರಿಗೆ ವಂಚಕರ ವಿರುದ್ಧ ಸಮರ ಸಾರಿದೆ. ಟ್ಯಾಕ್ಸ್ ವಂಚನೆ ಮಾಡಿದವ್ರನ್ನ ಪತ್ತೆ ಹಚ್ಚಿ ನೂರಾರು ಬಸ್‌ಗಳನ್ನ ಸೀಜ್ ಮಾಡಲಾಗಿದೆ.

ಕಳೆದ 5-6 ತಿಂಗಳಲ್ಲಿ 2 ಕೋಟಿಯಷ್ಟು ಟ್ಯಾಕ್ಸ್ ಹಣವನ್ನ ವಸೂಲಿ ಮಾಡಲಾಗಿದೆ. ಸುಮಾರು ದಿನಗಳಿಂದ ಟ್ಯಾಕ್ಸ್ ಕಟ್ಟದೇ ಕಾರ್ಯಾಚರಣೆ ಮಾಡ್ತಿದ್ದ ಬಸ್‌ಗಳನ್ನ ಸೀಜ್ ಮಾಡಲಾಗಿದೆ. ಸೀಜ್ ಮಾಡಿದ ಕೆಲ ಬಸ್‌ಗಳನ್ನ ಆರ್‌ಟಿಓ ಕಚೇರಿ, ಪೊಲೀಸ್ ಠಾಣೆಗಳ ಆವರಣದಲ್ಲಿ ಪಾರ್ಕ್ ಮಾಡಲಾಗಿದೆ. ಇನ್ನೂ ಸೀಜ್ ಮಾಡಿದ ನೂರಾರು ವಾಹನಗಳನ್ನು ನಿಲ್ಲಿಸೋಕೆ ದೇವನಹಳ್ಳಿ ಸಮೀಪ ಇಲಾಖೆಯಿಂದ ಸೀಜರ್ ಯಾರ್ಡ್ ಎಂಬ ಪ್ರತ್ಯೇಕ ವ್ಯವಸ್ಥೆಯನ್ನೇ ಮಾಡಲಾಗಿದೆ.

ಸೀಜ್ ಮಾಡಿದ ವಾಹನಗಳನ್ನು ನಿಲ್ಲಿಸೋಕೆ ಸಾರಿಗೆ ಇಲಾಖೆಗೆ ಜಾಗದ ಕೊರತೆ ಇತ್ತು. ಹೀಗಾಗಿ ಎರಡು ಸೀಜರ್ ಯಾರ್ಡ್ ಸ್ಥಳಗಳನ್ನ ಮಾಡಿಕೊಳ್ಳಲಾಗಿದೆ. ಒಟ್ಟಾರೆ ನಗರದಲ್ಲಿ ಖಾಸಗಿ ಬಸ್ ಆಟಾಟೋಪ ಹೆಚ್ಚಾಗಿದೆ. ಸಾರಿಗೆ ಇಲಾಖೆಗೆ ಲಕ್ಷ ಲಕ್ಷ ಟ್ಯಾಕ್ಸ್ ವಂಚನೆ ಮಾಡಿದ ಖಾಸಗಿ ವಾಹನಗಳ ಮಾಲೀಕರು ಸರ್ಕಾರಕ್ಕೆ ಯಾಮಾರಿಸ್ತಿದ್ರು. ಇದೀಗ ಸಾರಿಗೆ ಇಲಾಖೆ ವಾಹನಗಳನ್ನು ಸೀಜ್ ಮಾಡ್ತಿದೆ.

ಮಾದಕವಸ್ತು ಕಳ್ಳಸಾಗಣೆ ಜಾಲ ಭೇದಿಸಿದ ಸಿಸಿಬಿ; 5.15 ಕೋಟಿ ರೂ. ಮೌಲ್ಯದ ಡ್ರಗ್ಸ್​ ಸೀಜ್, ನೈಜೀರಿಯಾ ಪ್ರಜೆ ಅರೆಸ್ಟ್

0

ಬೆಂಗಳೂರು: ಬೆಂಗಳೂರಿನಲ್ಲಿ ಮಾದಕವಸ್ತು ಕಳ್ಳಸಾಗಣೆ ಜಾಲದ ಮೇಲೆ ಕೇಂದ್ರ ಅಪರಾಧ ವಿಭಾಗ ಪೊಲೀಸರು ದಾಳಿ ನಡೆಸಿ ನೈಜೀರಿಯಾ ಮೂಲದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ಅರ್ನೆಸ್ಟ್ ಒನ್ಯೆಕಾಚಿ ಉಗಾ (45) ಬಂಧಿತ ಆರೋಪಿ. ಮಾರತ್ತಹಳ್ಳಿ ಸಮೀಪದ ಮುನೆಕೊಳಲುವಿನ ಬಾಡಿಗೆ ಮನೆಯಿಂದ 5.15 ಕೋಟಿ ರೂ. ಮೌಲ್ಯದ 2.5 ಕೆಜಿ ಎಂಡಿಎಂಎ ಹಾಗೂ 300 ಎಕ್ಸ್ಟಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ವಿಭಾಗ, ಈತನ ಚಲನವಲನಗಳ ಮೇಲೆ ನಿಗಾ ಇಟ್ಟು ದಾಳಿ ನಡೆಸಿದೆ. ಆರೋಪಿ, ಈ ಹಿಂದೆ ಕಾಡುಗೋಡಿ ಹಾಗೂ ಹೆಣ್ಣೂರು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೆ ಅಕ್ರಮ ಚಟುವಟಿಕೆ ಆರಂಭಿಸಿದ್ದಾನೆ ಎನ್ನಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಡ್ರಗ್ಸ್ ಪೂರೈಕೆ ಜಾಲ ಮತ್ತು ಇತರ ಆರೋಪಿಗಳ ಕುರಿತು ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು| ಇಸ್ರೇಲ್ ರಾಯಭಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ!

0

ಬೆಂಗಳೂರು: ನಗರದಲ್ಲಿನ ಹಲಸೂರು ಠಾಣಾ ವ್ಯಾಪ್ತಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಬಂದಿರುವ ಘಟನೆ ವರದಿಯಾಗಿದೆ.

ರಾಯಭಾರಿ ಕಚೇರಿಯ ಅಧಿಕಾರಿಗಳು ಇ-ಮೇಲ್ ಪರಿಶೀಲನೆ ನಡೆಸುವ ವೇಳೆ ಬಾಂಬ್ ಬೆದರಿಕೆ ಮೇಲ್ ಬಂದಿರುವುದು ಗಮನಕ್ಕೆ ಬಂದಿದೆ. ಮೇಲ್‌ನಲ್ಲಿ ಕಚೇರಿ ಹಾಗೂ ಆವರಣದಲ್ಲಿ ಆರ್‌ಡಿಎಕ್ಸ್ ಬಾಂಬ್ ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ಸ್ಫೋಟವಾಗಲಿದೆ ಎಂದು ಉಲ್ಲೇಖಿಸಲಾಗಿತ್ತು. ತಕ್ಷಣವೇ ರಾಯಭಾರಿ ಕಚೇರಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳದ ಸಹಾಯದಿಂದ ಸುದೀರ್ಘ ಪರಿಶೀಲನೆ ನಡೆಸಿದರು. ಆದರೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆದರಿಕೆ ಮೇಲ್ ಕಳುಹಿಸಿದವರ ಪತ್ತೆಗೆ ತನಿಖೆ ಮುಂದುವರಿದಿದೆ.

ಅಕ್ರಮ ಬ್ಯಾನರ್‌ಗಳಿಗೆ ಜಿಬಿಎ ಬಿಗ್ ಬ್ರೇಕ್: ಬೆಂಗಳೂರಿನಾದ್ಯಂತ ತೆರವು ಕಾರ್ಯಾಚರಣೆ!

0

ಬೆಂಗಳೂರು: ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಬ್ಯಾನರ್ ಗಲಾಟೆಗಳ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಗರಾದ್ಯಂತ ಅನಧಿಕೃತವಾಗಿ ಅಳವಡಿಸಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.

ಸ್ಕೈವಾಕ್, ಬಸ್ ಶೆಲ್ಟರ್‌ಗಳು ಹಾಗೂ ಸಾರ್ವಜನಿಕ ಸ್ಥಳಗಳ ಸಮೀಪ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದ್ದು, ಶಾಂತಿನಗರ, ಸಿ.ವಿ.ರಾಮನ್ ನಗರ, ಶಿವಾಜಿನಗರ, ಚಿಕ್ಕಪೇಟೆ ಹಾಗೂ ಗಾಂಧಿನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹೋರ್ಡಿಂಗ್ಸ್‌ಗಳನ್ನು ತೆಗೆದುಹಾಕಲಾಗಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರವೇ 473 ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ದಂಡ ವಸೂಲಿ ಮಾಡಲಾಗಿದೆ.

ನಗರ ಸೌಂದರ್ಯ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುವ ಇಂತಹ ಅಕ್ರಮಗಳನ್ನು ಇನ್ನು ಮುಂದೆ ಸಹಿಸುವುದಿಲ್ಲ ಎಂದು ಜಿಬಿಎ ಎಚ್ಚರಿಕೆ ನೀಡಿದ್ದು, ಅನುಮೋದನೆ ಇಲ್ಲದೆ ಬ್ಯಾನರ್ ಅಳವಡಿಸುವವರ ವಿರುದ್ಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸುವುದಾಗಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.

ರಾಯಚೂರು| ಲಾರಿ-2 ಗೂಡ್ಸ್ ವಾಹನಗಳ ಮಧ್ಯೆ ಸರಣಿ ಅಪಘಾತ: ಐವರು ದುರ್ಮರಣ

0

ರಾಯಚೂರು:- ಜಿಲ್ಲೆಯ ಸಿಂಧನೂರು ತಾಲೂಕಿನ ಕನ್ನಾರಿ ಕ್ರಾಸ್ ಬಳಿ ಲಾರಿ ಮತ್ತು ಎರಡು ಗೂಡ್ಸ್ ವಾಹನ ಮಧ್ಯೆ ಸರಣಿ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜರುಗಿದೆ.

ಸಣ್ಣ ಯಲ್ಲಪ್ಪ(45), ಹರಿ(25), ರಂಗನಾಥ(12) ಬಸವರಾಜ್(40) ಹಾಗೂ ಟಾಟಾ ಏಸ್‌ ವಾಹನದ ಚಾಲಕ ಮೃತರು. ಇವರು ಆಂಧ್ರ ಮೂಲದವರು. ಭೀಕರ ಅಪಘಾತದಲ್ಲಿ ಕೆಲ ಕುರಿಗಳು ಕೂಡ ಸಾವನ್ನಪ್ಪಿವೆ. ಸಿಂಧನೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಟಾಟಾ ಏಸ್‌ ಮತ್ತು ಬೊಲೆರೊ ಪಿಕಪ್ ವಾಹನದಲ್ಲಿ ಕುರಿಗಳನ್ನು ತುಂಬಿಕೊಂಡು ಒಟ್ಟು ಎಂಟು ಜನರು ಹೊರಟಿದ್ದರು. ಬಳ್ಳಾರಿಯಿಂದ ಸಿಂಧನೂರು ಕಡೆಗೆ ಕುರಿ ತುಂಬಿಕೊಂಡು ಒಂದರ ಹಿಂದೆ ಒಂದರಂತೆ 2 ವಾಹನ ಹೊರಟಿದ್ದವು. ಅತೀ ವೇಗದಲ್ಲಿದ್ದ ಹಿನ್ನೆಲೆ ನಿಯಂತ್ರಣ ತಪ್ಪಿ ಎರಡು ವಾಹನಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್ ವಾಹನದಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡಿದ್ದ ಮೂವರನ್ನು ಸ್ಥಳೀಯ ಸಿಂಧನೂರು ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ಅಪರ ಜಿಲ್ಲಾಧಿಕಾರಿಗಳಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಚುನಾವಣಾ ಕಾರ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಬೆಳಗಾವಿ ವಿಭಾಗ ಮಟ್ಟದಲ್ಲಿ ಗದಗ ಜಿಲ್ಲೆಯ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಡಾ. ದುರಗೇಶ್ ಕೆ.ಆರ್ ಅವರು ರಾಜ್ಯ ಮಟ್ಟದ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಉತ್ತಮ ಸಹಾಯಕ ಚುನಾವಣಾಧಿಕಾರಿ ಕರ್ತವ್ಯ ನಿರ್ವಹಣೆಗೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಅವರನ್ನು ರಾಜ್ಯ ಸರ್ಕಾರಿ ನೌಕರರ ಗದಗ ಜಿಲ್ಲಾ ಸಂಘದಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘದ ಗದಗ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಪದಾಧಿಕಾರಿಗಳಾದ ರಾಜು ಸೊಪಡ್ಲ, ರಾಜು ಕಂತಿಗೊಣ್ಣವರ, ಶ್ರೀಧರ ಚಿನಗುಡಿ, ವಾರ್ತಾಧಿಕಾರಿ ವಸಂತ ಮಡ್ಲೂರ ಮುಂತಾದವರಿದ್ದರು.

ವಿಜ್ಞಾನ ಹಿಂದೂ ಧರ್ಮದ ತುಣುಕಷ್ಟೇ: ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸನಾತನ ಹಿಂದೂ ಧರ್ಮ ಅತ್ಯಂತ ಶ್ರೇಷ್ಠವಾದ ಪರಂಪರೆಯನ್ನು ಹೊಂದಿದ್ದು, ನಮ್ಮ ಧರ್ಮದ ಧೀಶಕ್ತಿಯನ್ನರಿತು ನಾನು ಹಿಂದೂ ಎಂಬ ಅಭಿಮಾನ, ಸ್ವಾಭಿಮಾನದಿಂದ ಪ್ರತಿಯೊಬ್ಬರೂ ಬದುಕಬೇಕು ಎಂದು ಗದಗ ಶ್ರೀ ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಗಳು ನುಡಿದರು.

ಅವರು ಪಟ್ಟಣದ ಶ್ರೀ ಸೋಮೇಶ್ವರ ತೇರಿನ ಮನೆಯ ಹತ್ತಿರ ನಡೆದ ಬೃಹತ್ ಹಿಂದೂ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಭೌದ್ಧಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ವೈಜ್ಞಾನಿಕ ಎಲ್ಲ ಕ್ಷೇತ್ರಗಳಲ್ಲಿ ಶ್ರೀಮಂತಿಕೆ ಹೊಂದಿದ ಹಿಂದೂ ಧರ್ಮ ಜಗತ್ತಿನ ಉಳಿದೆಲ್ಲ ದೇಶಗಳಿಗೆ ಮುಖವಾಣಿಯಾಗಿದೆ. ಹಿಂದೂ ಧರ್ಮ ಅಪರಿಮಿತ, ಸೀಮಾತೀತ, ಶಾಶ್ವತವಾಗಿದೆ. ಹಿಂದೂ ಧರ್ಮ ಸಕಲ ಜೀವರಾಶಿ, ಪ್ರಕೃತಿ ಸೇರಿ ಎಲ್ಲದರಲ್ಲಿ ಶ್ರೇಷ್ಠತೆಯನ್ನೇ ಸಾಧಿಸಿದೆ. ಇಂದು ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಸನಾತನ ಹಿಂದೂ ಧರ್ಮವೇ ಮೂಲಾಧಾರವಾಗಿದೆ. ವಿಜ್ಞಾನ ಹಿಂದೂ ಧರ್ಮದ ತುಣುಕಷ್ಟೇ. ನಮ್ಮ ದೇಶ, ಧರ್ಮ, ಗುರುಪರಂಪರೆಯ ಹಿರಿಮೆ-ಗರಿಮೆಯನ್ನು ಜಗತ್ತಿಗೆ ಸಾರಿದ ವಿವೇಕಾನಂದರನ್ನು ಓದಿದರೆ ನಮ್ಮ ರಕ್ತದ/ಧರ್ಮದ ಶ್ರೇಷ್ಠತೆ ಅರಿವಾಗುತ್ತದೆ.

ಈ ಪುಣ್ಯಭೂಮಿಯಲ್ಲಿ ಸಿಂಹದಂತೆ ಬದುಕಬೇಕಾದ ನಾವೆಲ್ಲ ನರಿ-ಕುರಿಗಳಂತೆ ಬದುಕುತ್ತಿದ್ದೇವೆ. ಕೆಲ ಕಾವಿಧಾರಿಗಳು, ಬುದ್ಧಿಜೀವಿಗಳೆನಿಸಿಕೊಂಡವರು ನಮ್ಮನ್ನು ಮತಿಗೇಡಿಗಳನ್ನಾಗಿಸುತ್ತಿದ್ದಾರೆ. ಜಗತ್ತಿನ ಶ್ರೀಮಂತ ದೇಶಗಳು, ವಿಶ್ವಮಾನ್ಯರೂ ಸಹ ಭಾರತವನ್ನು ಆಧರಿಸುತ್ತಿವೆ. ಹಿಂದೂ ಧರ್ಮದ ಸಾರ ಸಂಗ್ರಹ ಉನ್ನತಮಟ್ಟದ ಜ್ಞಾನ, ಆನಂದ, ಆತ್ಮಸ್ಥೈರ್ಯ ನೀಡುತ್ತದೆ. ಇನ್ನಾದರೂ ಧರ್ಮದ ಶ್ರೇಷ್ಠತೆ, ನಮ್ಮತನ, ಸ್ವರಕ್ಷಣೆಗಾಗಿ ಹೊಸ ಜೀವನದ ಸಂಕಲ್ಪಕ್ಕೆ ದಿಟ್ಟಹೆಜ್ಜೆ ಇಡೋಣ ಎಂದರು.

ಕಾರ್ಯಕ್ರಮದ ದಿಕ್ಸೂಚಿ ನುಡಿಗಳನ್ನಾಡಿದ ಧಾರವಾಡ ವಿಭಾಗ ಸಂಘ ಸಂಚಾಲಕ ಗೋವಿಂದಪ್ಪ ಗೌಡಪ್ಪಗೋಳ, 100 ವರ್ಷಗಳ ಹಿಂದೆ ಹಿಂದೂ ಧರ್ಮ ಸಂಘಟನೆ ಮಾಡುವದೇ ಅಪರಾಧ ಎನ್ನುವ ಭಾವನೆ ಕಾಡುತ್ತಿತ್ತು. ಅಂತಹ ವೇಳೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹರಿಕಾರ ಡಾ. ಕೇಶವ ಬಲಿರಾಂ ಹೆಡಗೆವಾರ ಬಿತ್ತಿದ ಹಿಂದೂ ಧರ್ಮದ ಶ್ರೇಷ್ಠವಾದ ಸಸಿ ಇಂದು ಆಲದ ಮರದಂತೆ ಎಲ್ಲರಿಗೂ ನೆರಳಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. ನಾವೆಲ್ಲ ಬಂಧುಗಳೆಂಬ ಭಾವನೆಯೊಂದಿಗೆ ಧರ್ಮದ ಸಂಘಟನೆ-ರಕ್ಷಣೆಯ ಜತೆಗೆ ರಾಷ್ಟ್ರವನ್ನು ಉತ್ತುಂಗಕ್ಕೇರಿಸುವ ಸಂಕಲ್ಪದೊಂದಿಗೆ ಬಾಳಬೇಕು ಎಂದರು.

ಶಾಸಕ ಡಾ.ಚಂದ್ರು ಲಮಾಣಿ, ಸಣ್ಣೀರಪ್ಪ ಹಳ್ಳೆಪ್ಪನವರ, ಎಂ.ಎಸ್. ದೊಡ್ಡಗೌಡ್ರ, ಬಸಣ್ಣ ಬೆಟಗೇರಿ, ಲೋಹಿತ್ ನೆಲವಿಗಿ, ಶಂಕರ ಬ್ಯಾಡಗಿ, ನಿಂಬಣ್ಣ ಮಡಿವಾಳರ, ಮಹದೇವಪ್ಪ ಬೆಳವಿಗಿ ಸೇರಿ ಗಣ್ಯಮಾನ್ಯರು, ಹಿರಿಯರು, ಹಿಂದೂಪರ ಸಂಘಟನೆಗಳವರು ಇದ್ದರು. ಈರಣ್ಣ ಗಾಣಿಗೇರ, ವೈ.ಪಿ. ನೆಗಳೂರ, ಗಂಗಾಧರ ಮೆಣಸಿನಕಾಯಿ, ಷಣ್ಮುಕ ಗಡ್ಡೆಣ್ಣವರ ನಿರೂಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಧ್ಯಾತ್ಮಿಕ ಚಿಂತಕ ಚಂದ್ರಣ್ಣ ಮಹಾಜನಶೆಟ್ಟರ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಹಿಂದೂ ರಾಷ್ಟ್ರ ವಿಶ್ವಮಾನವತೆಯನ್ನು ಸಾರಿದೆ. ಈಗಲೂ ಸಹ ನಮ್ಮೊಳಗೆ ಧರ್ಮದ ವಿಷಬೀಜ ಬಿತ್ತುತ್ತಿದ್ದು ಎಚ್ಚರಿಕೆಯಿಂದ ಕಿತ್ತುಹಾಕಬೇಕಿದೆ. ಹಿಂದೂ ಧರ್ಮ, ಸಂಸ್ಕೃತಿ, ದೇವಾಲಯ, ಶಿಕ್ಷಣ, ಸಂಪತ್ತು, ಶಿಲ್ಪಕಲೆಗಳ ಮೇಲೆ ಎಷ್ಟೇ ಘೋರವಾದ ದಾಳಿಯಾಗಿದ್ದರೂ ಕಾಲಕಾಲಕ್ಕೆ ದೇವಮಾನವರಾಗಿ ಅವತರಿಸಿದ ಮಹಾಪುರುಷರು ಅವೆಲ್ಲವನ್ನೂ ಹಿಮ್ಮೆಟ್ಟಿಸಿದ್ದಾರೆ. ಹಿಂದೂ ಧರ್ಮದ ಬೆಳಕು ವಿಶ್ವಕ್ಕೆಲ್ಲ ಬೆಳಕು ನೀಡುತ್ತಿದೆ ಎಂದರು.

error: Content is protected !!