Home Blog Page 14

ಬಾಂಗ್ಲಾದೇಶದಲ್ಲಿ ನಿರ್ಣಾಯಕ ಮತದಾನ: 15 ವರ್ಷಗಳ ಹಸೀನಾ ಆಡಳಿತದ ಬಳಿಕ ಹೊಸ ಅಧ್ಯಾಯಕ್ಕೆ ಮತದಾರರ ತೀರ್ಪು

0

ಢಾಕಾ: ಬಾಂಗ್ಲಾದೇಶದಲ್ಲಿ ಇಂದು (ಫೆ.12) ನಿರ್ಣಾಯಕ ರಾಷ್ಟ್ರೀಯ ಚುನಾವಣೆ ನಡೆಯುತ್ತಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತ ಕುಸಿತ ಕಂಡು 18 ತಿಂಗಳ ಬಳಿಕ, ದೇಶದ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈ ಚುನಾವಣೆ ಬಾಂಗ್ಲಾದೇಶದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಘಟ್ಟವಾಗಿ ಪರಿಣಮಿಸಿದೆ.

ಇಂದು ಬೆಳಗ್ಗೆ 7:30ರಿಂದ ದೇಶದಾದ್ಯಂತ 42,700 ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ ಪ್ರಾರಂಭವಾಗಿದೆ. ಸಂಜೆ 4:30ರವರೆಗೆ ಮತದಾನ ನಡೆಯಲಿದ್ದು, ಫೆ.13ರಂದು ಬೆಳಿಗ್ಗೆ ಅಧಿಕೃತ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಮೊದಲ ಬಾರಿಗೆ ಮತದಾರರಾಗಿರುವ ಯುವಕರೂ ಸೇರಿ ಒಟ್ಟು 12.77 ಕೋಟಿ ಮತದಾರರು ನೋಂದಾಯಿತರಾಗಿದ್ದಾರೆ.

ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಆಡಳಿತ ಸಾಗುತ್ತಿದೆ. ಆದರೆ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ. ಇತ್ತೀಚೆಗೆ ದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆಗಳು ಹೆಚ್ಚಾಗಿದ್ದು, ಕೆಲವು ಪ್ರದೇಶಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಹಿಂಸಾಚಾರ ನಡೆದಿರುವ ವರದಿಗಳು ಹೊರಬಿದ್ದಿವೆ.

ರಾಜಕೀಯ ಸಮೀಕರಣಗಳ ಪ್ರಕಾರ, ಖಲೀದಾ ಜಿಯಾ ಅವರ ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷ (ಬಿಎನ್‌ಪಿ) ಪ್ರಮುಖ ಪೈಪೋಟಿದಾರವಾಗಿದ್ದು, ತಾರಿಕ್ ರೆಹಮಾನ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಮುನ್ನಡೆಯಲ್ಲಿದ್ದಾರೆ. ಬಿಎನ್‌ಪಿಗೆ ಎದುರಾಳಿ ಆಗಿರುವ ಜಮಾತ್-ಇ-ಇಸ್ಲಾಮಿ ಕೂಡ ಬಲಿಷ್ಠ ಪೈಪೋಟಿ ನೀಡುವ ನಿರೀಕ್ಷೆ ಇದೆ. ಸಮೀಕ್ಷೆಗಳ ಪ್ರಕಾರ ಎರಡೂ ಪಕ್ಷಗಳ ನಡುವೆ ನೆಕ್-ಟು-ನೆಕ್ ಪೈಪೋಟಿ ಸಾಧ್ಯತೆ ಇದೆ.

ಕಳೆದ ವರ್ಷ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ಬಳಿಕ, ಅವಾಮಿ ಲೀಗ್ ಪಕ್ಷವನ್ನು ವಿಸರ್ಜಿಸಲಾಗಿದ್ದು, ಈ ಚುನಾವಣೆಯಲ್ಲಿ ಸ್ಪರ್ಧಿಸಲು ನಿಷೇಧಿಸಲಾಗಿದೆ. ಇದೀಗ ಮತದಾರರ ತೀರ್ಪು ಬಾಂಗ್ಲಾದೇಶದ ಹೊಸ ರಾಜಕೀಯ ಯುಗಕ್ಕೆ ದಾರಿ ಮಾಡಿಕೊಡಲಿದೆಯೇ ಎಂಬುದರ ಮೇಲೆ ಎಲ್ಲರ ಕಣ್ಣೂ ನೆಟ್ಟಿದೆ.

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಬೆಂಗಳೂರು–ಮೈಸೂರು ಸೇರಿ 11 ಕಡೆ ದಾಳಿ

0

ಬೆಂಗಳೂರು/ಮೈಸೂರು/ದಾವಣಗೆರೆ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಸಮನ್ವಯಿತ ದಾಳಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆದ ಈ ಕಾರ್ಯಾಚರಣೆ ಗಮನಸೆಳೆದಿದೆ.

PWD ಚೀಫ್ ಇಂಜಿನಿಯರ್ ಪುರುಷೋತ್ತಮ ದಾಸ್ ಅವರಿಗೆ ಸಂಬಂಧಿಸಿದಂತೆ ಒಟ್ಟು 11 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ಮೈಸೂರಿನಲ್ಲಿ 5 ಕಡೆ ಹಾಗೂ ಬೆಂಗಳೂರಿನಲ್ಲಿ 6 ಕಡೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದೆ. ಆಸ್ತಿ ವಿವರಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೋಧನೆ ಮುಂದುವರಿದಿದೆ.

ಇದೇ ವೇಳೆ, ದಾವಣಗೆರೆ ಹಾಗೂ ಶಿವಮೊಗ್ಗದಲ್ಲೂ ಲೋಕಾಯುಕ್ತ ದಾಳಿ ವಿಸ್ತರಿಸಲಾಗಿದೆ. ದಾವಣಗೆರೆಯ ಬೆಸ್ಕಾಂ ಸಿವಿಲ್ ವಿಭಾಗದ ಇಂಜಿನಿಯರ್ ಆರ್.ಹೆಚ್. ಅರ್ಜುನ್ ಅವರ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ. ಆದಾಯ ಮೀರಿ ಅಪಾರ ಪ್ರಮಾಣದ ಆಸ್ತಿ ಗಳಿಸಿರುವ ಆರೋಪ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ನೇತೃತ್ವದ ತಂಡ ದಾವಣಗೆರೆ ನಗರದ ನಿಟ್ಟುವಳ್ಳಿಯಲ್ಲಿರುವ ಅರ್ಜುನ್ ಅವರ ವಾಸಸ್ಥಳ, ಕಚೇರಿ ಹಾಗೂ ಶಿವಮೊಗ್ಗದ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಶಿವಮೊಗ್ಗದ ಮನೆಯಲ್ಲಿ ಆಸ್ತಿ ದಾಖಲೆಗಳು ಹಾಗೂ ಚಿನ್ನ-ಬೆಳ್ಳಿ ಪತ್ತೆಯಾಗಿದ್ದು, ಇನ್ನಷ್ಟು ದಾಖಲೆಗಳಿಗಾಗಿ ಶೋಧ ಮುಂದುವರಿದಿದೆ.

ಬಿಕ್ಲು ಶಿವ ಹತ್ಯೆ ಪ್ರಕರಣ| ಹೈಕೋರ್ಟ್‌ನಲ್ಲಿ ಜಾಮೀನು ತಿರಸ್ಕಾರ, ಭೈರತಿ ಬಸವರಾಜ್​​​ ದುಬೈಗೆ ಪರಾರಿ!

0

ಬೆಂಗಳೂರು: ಜುಲೈ 15ರಂದು ಬೆಂಗಳೂರಿನ ಭಾರತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್‌ಗೆ ಸಂಕಷ್ಟ ಹೆಚ್ಚಾಗಿದೆ.

ಜಾಗದ ವಿವಾದಕ್ಕೆ ಸಂಬಂಧಿಸಿದ ಈ ಕೊಲೆ ಪ್ರಕರಣದಲ್ಲಿ ಭೈರತಿ ಬಸವರಾಜ್ ಹೆಸರು ಕೇಳಿಬಂದಿದ್ದು, ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಹೈಕೋರ್ಟ್ ಆದೇಶದ ಬೆನ್ನಲ್ಲೇ ಶಾಸಕ ಭೈರತಿ ಬಸವರಾಜ್ ನಾಪತ್ತೆಯಾಗಿದ್ದು, ಅವರನ್ನು ಪತ್ತೆಹಚ್ಚಲು ಸಿಐಡಿ ತಂಡ ಬೆಂಗಳೂರು ನಗರಾದ್ಯಂತ ಶೋಧ ಕಾರ್ಯ ನಡೆಸಿದೆ.

ಭೈರತಿ ಬಸವರಾಜ್ ಕೆಲ ದಿನಗಳ ಹಿಂದೆಯೇ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ದುಬೈಗೆ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ಭೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ನಡುವೆ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸುವ ಸಿದ್ಧತೆ ನಡೆಸುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲೂ ಜಾಮೀನು ಲಭಿಸದಿದ್ದಲ್ಲಿ, ಅವರು ಶರಣಾಗುವುದು ಅನಿವಾರ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸಿನಿಮಾ–ಸರ್ಜರಿ ಎರಡರಲ್ಲೂ ಸಕ್ಸಸ್: ವೈದ್ಯ ಪದವಿ ಸ್ವೀಕರಿಸಿದ ಕನ್ನಡತಿ ಶ್ರೀಲೀಲಾ

ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರೀಲೀಲಾ ಇದೀಗ ಜೀವನದ ಮತ್ತೊಂದು ಮಹತ್ವದ ಗುರಿಯನ್ನು ಸಾಧಿಸಿದ್ದಾರೆ. ಸಿನಿಮಾ ಮತ್ತು ನೃತ್ಯದ ನಡುವೆಯೇ ಎಂಬಿಬಿಎಸ್ ಪೂರ್ಣಗೊಳಿಸಿದ ಅವರು, ಡಿವೈ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಅಧಿಕೃತವಾಗಿ ವೈದ್ಯ ಪದವಿ ಪಡೆದಿದ್ದಾರೆ.

ಕನ್ನಡ ಸಿನಿಮಾಗಳಿಂದ ತೆಲುಗು ಚಿತ್ರರಂಗಕ್ಕೆ ಹೋಗಿ ಅಲ್ಲಿ ಟಾಪ್ ಹೀರೋಯಿನ್ ಪಟ್ಟಕ್ಕೇರಿದ ಶ್ರೀಲೀಲಾ, ಬಾಲಿವುಡ್‌ನಲ್ಲೂ ಒಟ್ಟಿಗೆ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ. ತಮಿಳು ಚಿತ್ರರಂಗದಲ್ಲೂ ಅವರು ಬೇಡಿಕೆಯ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ.

ಪದವಿ ಸಮಾರಂಭದಲ್ಲಿ ವೈದ್ಯರ ಪ್ರತಿಜ್ಞೆ ಸ್ವೀಕರಿಸುತ್ತಿರುವ ಹಾಗೂ ಅಧಿಕೃತ ಘೋಷಣೆ ನಂತರ ಸಂತಸದಿಂದ ನಗುತ್ತಿರುವ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಿನಿಮಾ ಕ್ಷೇತ್ರದಲ್ಲಿ ಓದಿನ ಹಿನ್ನೆಲೆ ಕಡಿಮೆ ಎನ್ನುವ ಕಲ್ಪನೆಗೆ ಅವರು ಮತ್ತೊಮ್ಮೆ ಸವಾಲು ಹಾಕಿದ್ದಾರೆ.

ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ನಂತರ ಇದೀಗ ಶ್ರೀಲೀಲಾ ಸಹ ವೈದ್ಯೆಯಾಗಿರುವುದು ವಿಶೇಷ. ಚಿತ್ರರಂಗದಲ್ಲಿ ಎಂಜಿನಿಯರ್ ಹಾಗೂ ವೈದ್ಯ ಪದವಿಧರರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಇದು ಮತ್ತೊಂದು ಉದಾಹರಣೆ.

ಪ್ರಸ್ತುತ ಅವರು ತೆಲುಗಿನಲ್ಲಿ ಪವನ್ ಕಲ್ಯಾಣ್ ಜೊತೆ, ತಮಿಳಿನಲ್ಲಿ ಧನುಶ್ ಹಾಗೂ ಪ್ರದೀಪ್ ರಂಗನಾಥನ್ ಜೊತೆ, ಹಿಂದಿಯಲ್ಲಿ ‘ಆಶಿಖಿ 3’ ಹಾಗೂ ರಣ್ವೀರ್ ಸಿಂಗ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದೆಡೆ ವೈದ್ಯೆ, ಮತ್ತೊಂದೆಡೆ ಸ್ಟಾರ್ ನಟಿ — ಎರಡೂ ಜಗತ್ತನ್ನೂ ಸಮತೋಲನಗೊಳಿಸುತ್ತಿರುವ ಶ್ರೀಲೀಲಾ ಇದೀಗ ಯುವಜನತೆಗೆ ಪ್ರೇರಣೆಯಾಗಿದ್ದಾರೆ.

ರಾಯಚೂರು| ಕಾರು-ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ; ಚಾಲಕ ಗಂಭೀರ, ವಾಹನ ನಜ್ಜುಗುಜ್ಜು

0

ರಾಯಚೂರು: ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗ್ರೀನ್ ಲೈನ್ಸ್ ಖಾಸಗಿ ಬಸ್ ಮತ್ತು ಕಾರಿನ ನಡುವೆ ಆಂಧ್ರಪ್ರದೇಶದ ಕರ್ನೂರು ಜಿಲ್ಲೆಯ ಆಲೂರು ಸಮೀಪ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯ ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಸಮಯಪ್ರಜ್ಞೆ ತೋರಿಸಿ ಬೆಂಕಿಯನ್ನು ಆರಿಸಿದ್ದಾರೆ.

ಸ್ವಲ್ಪ ಯಾಮಾರಿದ್ದರೆ ಬೆಂಕಿ ಬಸ್‌ಗೆ ತಗಲುವ ಸಾಧ್ಯತೆ ಇತ್ತು ಎನ್ನಲಾಗಿದೆ. ಘಟನೆಯಿಂದ ರಸ್ತೆ ಸಂಚಾರದಲ್ಲಿ ಅಡಚಣೆ ಉಂಟಾಗಿದ್ದು, ಪ್ರಯಾಣಿಕರು ಸುಮಾರು ಎರಡು ಗಂಟೆಗಳ ಕಾಲ ಚಳಿಯಲ್ಲಿ ಒದ್ದಾಡಿದ ಸ್ಥಿತಿ ನಿರ್ಮಾಣವಾಯಿತು.

ಈ ಘಟನೆ ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಸಾಜ್ ಪಾರ್ಲರ್‌ನ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ: ಸಾಧು ಕೋಕಿಲ, ಮಂಡ್ಯ ರಮೇಶ್ ವಿರುದ್ಧದ ಪ್ರಕರಣ‌ ರದ್ದು

ಬೆಂಗಳೂರು: ಏಳು ವರ್ಷಗಳ ಹಿಂದೆ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಇಬ್ಬರು ಪ್ರಮುಖ ನಟರಿಗೆ ಕರ್ನಾಟಕ ಹೈಕೋರ್ಟ್ ಕ್ಲೀನ್ ಚಿಟ್ ನೀಡಿದೆ.

ಸಾಧು ಕೋಕಿಲಾ ಮತ್ತು ಮಂಡ್ಯ ರಮೇಶ್ ವಿರುದ್ಧ 2017ರಲ್ಲಿ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಮಸಾಜ್ ವೇಳೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ದೂರು ನೀಡಿದ್ದರು. ಈ ಪ್ರಕರಣದಲ್ಲಿ ನಟರಿಗೆ ಸಮನ್ಸ್ ಜಾರಿಯಾಗಿದ್ದು, ವಿಚಾರಣೆ ಆರಂಭವಾಗುವ ಹಂತದಲ್ಲಿತ್ತು.

2019ರಲ್ಲಿ ಹೈಕೋರ್ಟ್ ವಿಚಾರಣೆಗೆ ತಾತ್ಕಾಲಿಕ ತಡೆ ನೀಡಿತ್ತು. ನಂತರ ಪ್ರಕರಣ ರದ್ದುಗೊಳಿಸುವಂತೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ಪೀಠ, ಎಫ್‌ಐಆರ್‌ನಲ್ಲಿ ಸ್ಪಷ್ಟ ಆರೋಪಗಳ ಕೊರತೆ ಹಾಗೂ ಸಮರ್ಪಕ ಸಾಕ್ಷ್ಯಾಧಾರಗಳ ಅಭಾವವನ್ನು ಉಲ್ಲೇಖಿಸಿ ಪ್ರಕರಣವನ್ನು ರದ್ದುಪಡಿಸಿದೆ.

ನಟರ ಪರವಾಗಿ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ವಾದ ಮಂಡಿಸಿದ್ದರು. ಆರೋಪ ಸಾಬೀತುಪಡಿಸಲು ಅಗತ್ಯವಾದ ಕಾನೂನು ಮಾನದಂಡಗಳು ಪೂರೈಸಲಾಗಿಲ್ಲ ಎಂದು ವಾದಿಸಲಾಯಿತು.

ಈ ತೀರ್ಪು ಸಿನಿಮಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣದ ಅಂತ್ಯಕ್ಕೆ ತೆರೆ ಬಿದ್ದಂತಾಗಿದೆ.

ಪಿರಿಯಾಪಟ್ಟಣದಲ್ಲಿ ಅಕ್ರಮ ಕೇರಳ ಲಾಟರಿ ಜಾಲ ಭೇದಿಸಿದ ಪೊಲೀಸ್ ವಿಶೇಷ ತಂಡ: ಇಬ್ಬರ ಬಂಧನ!

0

ಮೈಸೂರು:- ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಅಕ್ರಮವಾಗಿ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಜಾಲವನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿಶೇಷ ತಂಡ ಪತ್ತೆಹಚ್ಚಿ ಭರ್ಜರಿ ಕಾರ್ಯಾಚರಣೆ ನಡೆಸಿದೆ.

ಪಿರಿಯಾಪಟ್ಟಣದಲ್ಲಿ ನಡೆದ ಎರಡು ಪ್ರತ್ಯೇಕ ದಾಳಿಗಳಲ್ಲಿ ಅರುಣ್ ಕುಮಾರ್ ಮತ್ತು ಸ್ವಾಮಿ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅರುಣ್ ಕುಮಾರ್‌ನ್ನು ವೆಂಕಟೇಶ್ವರ ವೇ ಬ್ರಿಡ್ಜ್ ಬಳಿ ಲಾಟರಿ ಮಾರಾಟ ಮಾಡುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದ್ದು, ಸ್ವಾಮಿಯನ್ನು ಸಿಂಚನ ಹೋಟೆಲ್‌ನಲ್ಲಿ ಬಂಧಿಸಲಾಗಿದೆ.

ಬಂಧಿತರಿಂದ ಒಟ್ಟು 78,130 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಅದರಲ್ಲಿ 55,200 ರೂ. ಮೌಲ್ಯದ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳು ಮತ್ತು 22,930 ರೂ. ನಗದು ಹಣ ಸೇರಿವೆ. ಮೈಸೂರು ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರ ಮಾರ್ಗದರ್ಶನದಲ್ಲಿ ಹಾಗೂ ಅಡಿಷನಲ್ ಎಸ್‌ಪಿ ಮಲ್ಲಿಕ್ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಯೂನಿಯನ್ ಬ್ಯಾಂಕ್ ATM ದರೋಡೆ: ಗ್ಯಾಸ್ ಕಟರ್ ಬಳಸಿ 5 ಲಕ್ಷ ಲೂಟಿ!

0

ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹನುಮರಹಳ್ಳಿ ಗ್ರಾಮದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ATM ಯಲ್ಲಿ ದರೋಡೆ ನಡೆದಿದೆ.

ಅಪರಿಚಿತರು ಗ್ಯಾಸ್ ಕಟರ್ ಬಳಸಿ ATM ಯಂತ್ರವನ್ನು ಕತ್ತರಿಸಿ, ಒಳಗಿದ್ದ ಸುಮಾರು 5 ಲಕ್ಷ ರೂಪಾಯಿ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ದರೋಡೆ ವೇಳೆ ಆರೋಪಿಗಳು ಸಿಸಿಟಿವಿ ಕ್ಯಾಮೆರಾಗಳಿಗೆ ಬಿಳಿ ಬಣ್ಣ ಸಿಂಪಡಿಸಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಘಟನೆ ಶಿಗ್ಗಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

ಸೈಬರ್ ವಂಚಕರ ಬಗ್ಗೆ ಎಚ್ಚರಿಕೆಯಿಂದಿರಿ: ಲೋಕಾಯುಕ್ತ ಸಿಪಿಐ ಪರಮೇಶ್ವರ ಕವಟಗಿ

0

ವಿಜಯಸಾಕ್ಷಿ ಸುದ್ದಿ, ರೋಣ: ಸರಕಾರಿ ನೌಕರರು ಸೇರಿದಂತೆ ಸಾರ್ವಜನಿಕರು ಸೈಬರ್ ವಂಚಕರಿಂದ ಎಚ್ಚರಿಕೆಯಿಂದಿರುವುದು ಸೂಕ್ತ. ಇಲ್ಲದಿದ್ದರೆ ಇಬ್ಬರ ಮೇಲೂ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ಲೋಕಾಯುಕ್ತ ಸಿಪಿಐ ಪರಮೇಶ್ವರ ಕವಟಗಿ ಹೇಳಿದರು.

ಅವರು ಬುಧವಾರ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದರು.

ಸೈಬರ್ ವಂಚಕರು ಪರಿಚಯದವರ ಸೋಗಿನಲ್ಲಿ ಮೋಸ ಮಾಡುವ ಹೊಸ ವಿಧಾನವನ್ನು ಬಳಕೆ ಮಾಡಿಕೊಂಡಿದ್ದಾರೆ. ಕಾರಣ ನಿಮ್ಮ ಹೆಸರಿನಲ್ಲಿ ನಿಮಗೆ ಪರಿಚಯ ಇರುವ ವ್ಯಕ್ತಿಗಳ ಮೊಬೈಲ್‌ಗೆ ಲಿಂಕ್ ಕಳಿಸುತ್ತಾರೆ. ಆಗ ನಮಗೆ ಪರಿಚಯ ಇರುವ ವ್ಯಕ್ತಿ ಎಂದು ಭಾವಿಸಿ ಮೊಬೈಲ್‌ಗೆ ಬಂದಿರುವ ಲಿಂಕ್‌ನ್ನು ಒತ್ತಿದರೆ ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲ ದಾಖಲೆಗಳು ಸೈಬರ್ ವಂಚಕರಿಗೆ ಲಭ್ಯವಾಗುತ್ತವೆ. ಜೊತೆಗೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವೂ ಇಲ್ಲದಂತಾಗುತ್ತದೆ ಎಂದು ಎಚ್ಚರಿಸಿದರು.

ಗಜೇಂದ್ರಗಡ ಭಾಗದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿದ್ದು, ಅಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಅರಣ್ಯ ಇಲಾಖೆಯವರು ನಡೆಸಬೇಕು. ಇಲಾಖೆಯವರು ನಿಷ್ಕಾಳಜಿ ವಹಿಸದೆ ಹಸಿರೀಕರಣಕ್ಕೆ ಒಲವು ತೋರಬೇಕು. ಅತಿಕ್ರಮಣವಾದ ಅರಣ್ಯ ಇಲಾಖೆಯ ಜಾಗಗಳನ್ನು ಗುರುತಿಸಿ ಅವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಸಾರ್ವಜನಿಕರು ಇಲಾಖೆಗಳ ವಿರುದ್ಧ ದಾಖಲಿಸಿರುವ ದೂರಗಳ ಬಗ್ಗೆ ಇಲಾಖೆಗಳ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದರು.

ತಹಸೀಲ್ದಾರ ನಾಗರಾಜ ಕೆ, ತಾ.ಪಂ ಇಒ ಚಂದ್ರಶೇಖರ ಖಂದಕೂರ, ಬಿಇಒ ಎ.ಎನ್. ಕಂಬೋಗಿ, ಪಿಎಸ್‌ಐ ಪ್ರಕಾಶ ಬಣಕಾರ, ಕೃಷಿ ಅಧಿಕಾರಿ ಎಸ್.ಎಫ್. ತಹಸೀಲ್ದಾರ, ಜೆ.ಟಿ. ಕೊಪ್ಪದ, ಆರ್.ಎಲ್. ನಾಯಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಲೋಕಾಯುಕ್ತ ಪಿಎಸ್‌ಐ ಎಸ್.ಎಚ್. ತೇಲಿ ಮಾತನಾಡಿ, ಸರಕಾರಿ ಕೆಲಸಕ್ಕೆ ಬರುವ ಸಾರ್ವಜನಿಕರನ್ನು ಸುಖಾಸುಮ್ಮನೆ ತಿರುಗಾಡಿಸಬೇಡಿ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುವುದು ಸರಕಾರಿ ನೌಕರರ ಆದ್ಯ ಕರ್ತವ್ಯವಾಗಿರುತ್ತದೆ ಎಂಬುದನ್ನು ಮರೆಯಬಾರದು ಎಂದರು.

ಫಲಿತಾಂಶ ಸುಧಾರಣೆಗೆ ಕ್ರಾಂತಿಕಾರಿ ಕ್ರಮ!

0

ವಿಜಯಸಾಕ್ಷಿ ಸುದ್ದಿ, ಗದಗ: ಪರೀಕ್ಷಾ ಸಮಯ ಹತ್ತಿರವಾಗುತ್ತಿದ್ದಂತೆ ಮಕ್ಕಳ ಓದಿಗೆ ಅಡ್ಡಿಯಾಗುತ್ತಿರುವ ಮೊಬೈಲ್ ಮತ್ತು ಟಿವಿಗಳನ್ನು ನಿಯಂತ್ರಿಸಲು ಗದಗ ತಾಲೂಕು ಪಂಚಾಯಿತಿ ಕೈಗೊಂಡ ಕ್ರಮವೊಂದು ಈಗ ರಾಜ್ಯದ ಗಮನ ಸೆಳೆಯುತ್ತಿದೆ.

ಗದಗ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸಂಜೆ 7ರಿಂದ ರಾತ್ರಿ 9ರವರೆಗೆ ಪ್ರತಿಯೊಬ್ಬರೂ ತಮ್ಮ ಮೊಬೈಲ್ ಮತ್ತು ಟಿವಿಗಳನ್ನು ಸ್ವಿಚ್ ಆಫ್ ಮಾಡಬೇಕು. ಅಷ್ಟೇ ಅಲ್ಲದೆ, ಗ್ರಾಮದ ಬೀದಿಗಳಲ್ಲಿ ಟ್ರ‍್ಯಾಕ್ಟರ್‌ಗಳಲ್ಲಿ ಜೋರಾಗಿ ಹಾಡು ಹಾಕಿಕೊಂಡು ಓಡಾಡುವುದನ್ನು ನಿಷೇಧಿಸಿ ಡಂಗುರ ಸಾರುವಂತೆ ಗದಗ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಎಲ್ಲ ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಈ ಕ್ರಾಂತಿಕಾರಿ ಸೂಚನೆಗೆ ನಾಂದಿ ಹಾಡಿದ್ದು ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆ ಮತ್ತು ಮಕ್ಕಳ ಏಕಾಗ್ರತೆ ಹೆಚ್ಚಿಸಲು ಪೋಷಕರಲ್ಲಿ ಶಿಸ್ತು ಮೂಡಿಸುವುದು ಅನಿವಾರ್ಯ ಎಂಬ ದೂರದೃಷ್ಟಿಯೊಂದಿಗೆ ಅವರು ನೀಡಿದ ವಿನಂತಿ ಪತ್ರವನ್ನು ಆಧರಿಸಿ, ತಾ.ಪಂ ಇಒ ಈ ಸೂಚನೆ ನೀಡಿದ್ದಾರೆ. ಶಿಕ್ಷಣಾಧಿಕಾರಿಗಳ ಈ ಸಂವೇದನಾಶೀಲ ನಿರ್ಧಾರಕ್ಕೆ ಶೈಕ್ಷಣಿಕ ವಲಯದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ಹಳ್ಳಿಗಳಲ್ಲಿ ಮೊಬೈಲ್‌ನಿಂದ ವಿದ್ಯಾರ್ಥಿಗಳು ಕೆಲಕಾಲ ದೂರ ಉಳಿಯಲಿ ಎನ್ನುವ ಉದ್ದೇಶದಿಂದ ಮೊಟ್ಟ ಮೊದಲ ಬಾರಿಗೆ ಮಹಾರಾಷ್ಟçದ ಸಾಂಗ್ಲಿ ಸಮೀಪದ ಮೋಹಿತೆ ವಡ್ಗಾಂವ್ ಗ್ರಾಮದಲ್ಲಿ ‘ಸೈರನ್’ ಪದ್ಧತಿ ಜಾರಿಗೆ ಬಂದಿತು. ಅದಾದ ನಂತರ ದಕ್ಷಿಣ ಕನ್ನಡ ಕೆಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಫೋನ್ ಬಿಡಿ ಓದಿಗೆ ಸಮಯ ಕೊಡಿ’ ಎಂಬ ಅಭಿಯಾನಗಳು ನಡೆದಿದ್ದವು. ಈಚೆಗಷ್ಟೆ ಬೆಳಗಾವಿ ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಸ್ವಯಂಪ್ರೇರಿತವಾಗಿ ಜನರು ಸಂಜೆ ವೇಳೆ ಟಿವಿ ಬಂದ್ ಮಾಡಿ ಮಕ್ಕಳಿಗೆ ಓದಿಸಲು ಸಹಕರಿಸುತ್ತಿದ್ದಾರೆ. ಆದರೆ, ಸರ್ಕಾರಿ ಮಟ್ಟದಲ್ಲಿ ಅಧಿಕೃತವಾಗಿ ಡಂಗುರ ಸಾರಿಸಿ, ಮೊಬೈಲ್, ಟಿವಿಯಿಂದ ಎರಡು ಗಂಟೆ ದೂರ ಇರುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿರುವುದು ಗದಗ ಜಿಲ್ಲೆಯ ವಿಶೇಷತೆ.

ಗದಗ ತಾಲೂಕು ಪಂಚಾಯಿತಿ ಇಒ ಹೊರಡಿಸಿರುವ ಈ ಆದೇಶದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಗದಗ ಬಿಇಒ ಅವರ ಈ ಕಾರ್ಯ ಇತರ ಜಿಲ್ಲೆಗಳಿಗೂ ಮಾದರಿಯಾಗಲಿ ಎಂಬ ಒತ್ತಾಯ ಕೇಳಿಬರುತ್ತಿದೆ. ಒಂದು ವೇಳೆ ಈ ಪ್ರಯೋಗ ಗದಗದಲ್ಲಿ ಯಶಸ್ವಿಯಾದರೆ, ಮುಂಬರುವ ದಿನಗಳಲ್ಲಿ ಇಡೀ ರಾಜ್ಯಕ್ಕೆ ಇದು ಪಸರಿಸುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾ ಗದಗ ಗ್ರಾಮೀಣ ವಲಯದ ಶಿಕ್ಷಕರು.

“ಕೇವಲ ಶಾಲೆಗಳಲ್ಲಿ ಶಿಕ್ಷಕರು ಪಾಠ ಮಾಡಿದರೆ ಸಾಲದು, ಮನೆಯಲ್ಲಿಯೂ ಪೂರಕ ವಾತಾವರಣ ಇರಬೇಕು. ಸಂಜೆಯ ಎರಡು ಗಂಟೆಗಳ ಕಾಲ ಡಿಜಿಟಲ್ ಉಪವಾಸ ಮಾಡುವುದರಿಂದ ಮಕ್ಕಳಲ್ಲಿ ಓದಿನ ಆಸಕ್ತಿ ಹೆಚ್ಚುವುದರ ಜೊತೆಗೆ ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧವೂ ಸುಧಾರಿಸಲಿದೆ ಎನ್ನುವ ಉದ್ದೇಶದಿಂದ ತಾ.ಪಂ ಇಒ ಅವರಿಗೆ ಮನವಿ ಮಾಡಿಕೊಂಡಿದೆ. ಮನವಿಗೆ ತಕ್ಷಣ ಸ್ಪಂದಿಸಿ, ಎಲ್ಲ ಪಿಡಿಒಗಳಿಗೆ ಸೂಚನೆ ನೀಡುವ ಮೂಲಕ ಶೈಕ್ಷಣಿಕ ಕಾಳಜಿ ಮೆರೆದಿದ್ದಾರೆ”

  • ವಿ.ವಿ. ನಡುವಿನಮನಿ.
    ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ.

ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿನಂತಿ ಮೇರೆಗೆ ಫೆ. 3ರಂದು ಎಲ್ಲ ಪಿಡಿಒಗಳಿಗೆ ಪತ್ರ ಬರೆಯಲಾಗಿದೆ. ಕಸ ವಿಲೇವಾರಿ ವಾಹನದ ಮೂಲಕ ಎರಡು ಗಂಟೆ ಮೊಬೈಲ್, ಟಿವಿಯಿಂದ ದೂರ ಉಳಿಯುವಂತೆ ಡಂಗುರ ಸಾರಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಗಂಭೀರ ಕ್ರಮಗಳನ್ನು ಕೈಗೊಳ್ಳುವ ಚಿಂತನೆ ಮೂಡಿದೆ.

  • ಮಲ್ಲಯ್ಯ ಕೊರವನವರ.
    ತಾ.ಪಂ ಇಒ, ಗದಗ.

error: Content is protected !!