Home Blog Page 14

ಭಾರತ ಕ್ರಿಕೆಟ್ ತಂಡ ಪ್ರಕಟ; ಕ್ಯಾಪ್ಟನ್ ಆಗಿ ಶ್ರೇಯಸ್ ಅಯ್ಯರ್, ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಸ್ಥಾನ

ಮುಂಬೈ: ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಸರಣಿಗಳು ಮತ್ತು ಸೆಪ್ಟೆಂಬರ್‌ನಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ತಂಡವನ್ನು ಪ್ರಕಟಿಸಿದೆ. ಮೂರು ಪ್ರಮುಖ ಟೂರ್ನಿಗಳಿಗೆ ಆಯ್ಕೆಯಾದ ತಂಡದಲ್ಲಿ ಹಲವು ಯುವ ಆಟಗಾರರಿಗೆ ಅವಕಾಶ ನೀಡಲಾಗಿದ್ದು, ಕೆಲವು ಹಿರಿಯ ಆಟಗಾರರು ತಂಡದಿಂದ ಹೊರಗುಳಿದಿದ್ದಾರೆ.

ಜೂನ್ 26ರಿಂದ ಆರಂಭವಾಗಲಿರುವ ಐರ್ಲೆಂಡ್ ವಿರುದ್ಧದ ಟಿ20 ಸರಣಿ ಹಾಗೂ ಜುಲೈ 1ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಶ್ರೇಯಸ್ ಅಯ್ಯರ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ತಿಲಕ್ ವರ್ಮಾ ಉಪನಾಯಕನ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಈ ಬಾರಿ ಟಿ20 ವಿಶ್ವಕಪ್ ವಿಜೇತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಅವಕಾಶ ನೀಡದಿರುವುದು ಗಮನ ಸೆಳೆದಿದೆ. ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಸಮಿತಿ ಕೈಬಿಟ್ಟಿದೆ ಎನ್ನಲಾಗಿದೆ.

ಇನ್ನು ಐಪಿಎಲ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಆರೆಂಜ್ ಕ್ಯಾಪ್ ಗೆದ್ದ ವೈಭವ್ ಸೂರ್ಯವಂಶಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜೊತೆಗೆ ವರುಣ್ ಚಕ್ರವರ್ತಿ, ಅಭಿಷೇಕ್ ಶರ್ಮಾ, ಮೊಹಮ್ಮದ್ ಸಿರಾಜ್ ಸೇರಿದಂತೆ ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.

ವಿಕೆಟ್‌ಕೀಪರ್‌ಗಳಾಗಿ ಸಂಜು ಸ್ಯಾಮ್ಸನ್ ಮತ್ತು ಈಶನ್ ಕಿಶನ್ ಆಯ್ಕೆಯಾಗಿದ್ದಾರೆ. ಏಷ್ಯನ್ ಗೇಮ್ಸ್ ತಂಡದಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಸ್ಥಾನ ಪಡೆದಿದ್ದಾರೆ.

ಟಿ20 ಸರಣಿಗೆ ಭಾರತ ತಂಡ:

ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಈಶನ್ ಕಿಶನ್ (ವಿಕೆಟ್‌ಕೀಪರ್), ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಅರ್ಷ್ದೀಪ್ ಸಿಂಗ್, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್ ಹಾಗೂ ವೈಭವ್ ಸೂರ್ಯವಂಶಿ.

ಏಷ್ಯನ್ ಗೇಮ್ಸ್‌ಗೆ ಭಾರತ ತಂಡ:

ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಈಶನ್ ಕಿಶನ್ (ವಿಕೆಟ್‌ಕೀಪರ್), ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಅರ್ಷ್ದೀಪ್ ಸಿಂಗ್, ವರುಣ್ ಚಕ್ರವರ್ತಿ ಹಾಗೂ ವೈಭವ್ ಸೂರ್ಯವಂಶಿ.

ಕೆನಾಲ್ ಬಿಲ್ ಪಾವತಿಗೆ ₹18 ಸಾವಿರ ಲಂಚ: KBJNL ಇಬ್ಬರು ಅಧಿಕಾರಿಗಳು ಲೋಕಾ ಬಲೆಗೆ

ವಿಜಯಪುರ: ಕೆನಾಲ್ ಕಾಮಗಾರಿಯ ಬಿಲ್ ಪಾವತಿಸಲು ಗುತ್ತಿಗೆದಾರರಿಂದ ಲಂಚದ ಬೇಡಿಕೆ ಇಟ್ಟಿದ್ದ ಕೆಬಿಜೆಎನ್‌ಎಲ್‌ನ ಇಬ್ಬರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಾಲೋಟಗಿ ಗ್ರಾಮದಲ್ಲಿ ನಡೆದಿದೆ.

ಬಂಧಿತರು ಕೆಬಿಜೆಎನ್‌ಎಲ್ ಉಪ ವಿಭಾಗ ನಂ.1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೇವುಲಾಲ್ ಚವ್ಹಾಣ ಹಾಗೂ ಕಿರಿಯ ಅಭಿಯಂತರ ಸಾತಲಿಂಗಪ್ಪ ರೋಡಗಿ ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಗುತ್ತಿಗೆದಾರ ನಾನಾಸಾಹೇಬ್ ರೂಡಗಿ ಅವರು ಕೈಗೊಂಡಿದ್ದ ಕಾಲುವೆ ಕಾಮಗಾರಿಗೆ ಸಂಬಂಧಿಸಿದ ₹3,71,419 ಮೊತ್ತದ ಬಿಲ್ ಪಾವತಿಗಾಗಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೇವುಲಾಲ್ ಚವ್ಹಾಣ ₹10 ಸಾವಿರ ಹಾಗೂ ಕಿರಿಯ ಅಭಿಯಂತರ ಸಾತಲಿಂಗಪ್ಪ ರೋಡಗಿ ₹8 ಸಾವಿರ ಲಂಚ ನೀಡುವಂತೆ ಒತ್ತಾಯಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಲಂಚದ ಬೇಡಿಕೆಯಿಂದ ಬೇಸತ್ತ ಗುತ್ತಿಗೆದಾರ ನಾನಾಸಾಹೇಬ್ ರೂಡಗಿ ವಿಜಯಪುರ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸೂಕ್ಷ್ಮ ಕಾರ್ಯಾಚರಣೆ ರೂಪಿಸಿ, ಸಾಲೋಟಗಿಯಲ್ಲಿ ದಾಳಿ ನಡೆಸಿದರು. ಈ ವೇಳೆ ಲಂಚದ ಹಣ ಸ್ವೀಕರಿಸುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಯಿತು.

ಕಾರ್ಯಾಚರಣೆಯಲ್ಲಿ ಅಧಿಕಾರಿಗಳಿಂದ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಬಳಿಕ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈ ಘಟನೆ ವಿಜಯಪುರ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕ ವಲಯದಲ್ಲಿ ಕೆಬಿಜೆಎನ್‌ಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಬಿಲ್ ಪಾವತಿಗೂ ಲಂಚದ ಹಾವಳಿ ಮುಂದುವರಿದಿರುವುದು ಮತ್ತೆ ಬಹಿರಂಗವಾದಂತಾಗಿದೆ. ವಿಜಯಪುರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ನನ್ನ ನಿಲುವಿನಲ್ಲಿ ಸದ್ಯಕ್ಕೆ ಬದಲಾವಣೆ ಇಲ್ಲ: ಸಿಎಂ-ಸುರ್ಜೇವಾಲಾ ಭೇಟಿಯ ಬಳಿಕ ರಾಮಲಿಂಗಾ ರೆಡ್ಡಿ ಹೇಳಿದ್ದೇನು..?

ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿರುವ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದು ತಿಳಿಸಿದ್ದರೂ, ಸದ್ಯಕ್ಕೆ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.

ರಾಜೀನಾಮೆ ಹಿಂಪಡೆಯುವ ಸಾಧ್ಯತೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆದಿರುವುದನ್ನು ಖಚಿತಪಡಿಸಿದರು.

ನಿನ್ನೆ ನಾನು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಸುರ್ಜೇವಾಲಾ ಅವರು ಕರೆ ಮಾಡಿದ್ದರು. ಇಂದು ಬೆಳಗ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ನಿನ್ನೆ ಸಿಎಂ ಅವರು ಮನೆಗೆ ಬರುತ್ತೇನೆ ಎಂದಿದ್ದರು. ನಾನು ಹೋಟೆಲ್‌ನಲ್ಲಿ ಇದ್ದ ಕಾರಣ ಅಲ್ಲಿಯೇ ಬಂದು ಭೇಟಿಯಾದರು ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಇಬ್ಬರೂ ತಮ್ಮ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ ಎಂದು ಹೇಳಿರುವುದಾಗಿ ಅವರು ತಿಳಿಸಿದರು. ಆದರೆ, ತಮಗೆ ನೀಡಲಾಗಿರುವ ನೀರಾವರಿ ಇಲಾಖೆಯ ಕುರಿತು ಹೆಚ್ಚಿನ ಮಾಹಿತಿ ಇಲ್ಲದಿರುವುದರಿಂದ, ಮುಂದಿನ ಬೆಳವಣಿಗೆಗಳನ್ನು ಗಮನಿಸುವುದಾಗಿ ಹೇಳಿದರು.

“2023 ಹಾಗೂ 2026ರಲ್ಲಿ ಎರಡು ಬಾರಿ ನನಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಅದು ಈಡೇರಿಲ್ಲ. ಇದೀಗ ಯಾವುದೇ ಕಾರಣಕ್ಕೂ ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದು ನಾಯಕರು ಹೇಳುತ್ತಿದ್ದಾರೆ. ಮುಂದಿನ ನಿರ್ಧಾರ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ,” ಎಂದು ಅವರು ಹೇಳಿದರು.

ಇದೇ ವೇಳೆ, ಇಂದು ಸಂಜೆಯೊಳಗೆ ಈ ಗೊಂದಲಕ್ಕೆ ಪರಿಹಾರ ಸಿಗುವ ವಿಶ್ವಾಸ ವ್ಯಕ್ತಪಡಿಸಿದ ರಾಮಲಿಂಗಾ ರೆಡ್ಡಿ, ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ನೋಡುವಂತೆ ಕರೆ ನೀಡಿದರು.

ನಕಾರಾತ್ಮಕವಾಗಿ ಯೋಚಿಸುವ ಅಗತ್ಯವಿಲ್ಲ. ಸಕಾರಾತ್ಮಕ ಬೆಳವಣಿಗೆ ಆಗುವ ನಿರೀಕ್ಷೆ ಇದೆ. ಸಿಎಂ ಹಾಗೂ ಸುರ್ಜೇವಾಲಾ ಅವರು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಮತ್ತೆ ಮಾತುಕತೆಗೆ ಕರೆದರೆ ಖಂಡಿತವಾಗಿ ಹೋಗುತ್ತೇನೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.

ರಾಮಲಿಂಗಾರೆಡ್ಡಿ ನಮ್ಮ ಸ್ನೇಹಿತರು, ಎಲ್ಲಾ ಸಮಸ್ಯೆ ಬಗೆಹರಿಸಲಾಗಿದೆ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: “ರಾಮಲಿಂಗಾರೆಡ್ಡಿ ಅವರು ನನ್ನ ಸ್ನೇಹಿತರು, ಅವರೊಂದಿಗೆ ಮಾತನಾಡಿದ್ದು, ಎಲ್ಲಾ ಸಮಸ್ಯೆ ಬಗೆಹರಿಸಲಾಗಿದೆ. ಯಾವುದೇ ಕಾರಣಕ್ಕೂ ಅವರ ರಾಜಿನಾಮೆ ಅಂಗೀಕರಿಸುವುದಿಲ್ಲ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದಲ್ಲಿ ಮಾಜಿ ಸಿಎಂ ದೇವರಾಜ ಅರಸು ಅವರ ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು.

ಶುಕ್ರವಾರ ರಾತ್ರಿ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿದ ವಿಚಾರವಾಗಿ ಕೇಳಿದಾಗ, “ಅನಗತ್ಯವಾಗಿ ತಲೆಕೆಡಿಸಿಕೊಂಡು ಏನೇನೋ ಸ್ಟೋರಿ ಮಾಡಬೇಡಿ. ಅವರು ರಾಜಿನಾಮೆಯನ್ನು ವಾಟ್ಸಪ್ ನಲ್ಲಿ ಕಳಿಸಿಕೊಟ್ಟಿದ್ದು ನಿಜ. ಈಗ ಆ ವಿಚಾರ ಬಗೆಹರಿಸಲಾಗಿದೆ” ಎಂದು ತಿಳಿಸಿದರು.

ರಾಜ್ಯಸಭೆಗೆ 3, ವಿಧಾನ ಪರಿಷತ್ತಿಗೆ ಐವರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ:

ಇಂದು ನಾವು ಎಲ್ಲಾ ಐವರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ರಾಜ್ಯ ಸಭೆ ಚುನಾವಣೆಗೆ 3 ಹಾಗೂ ವಿಧಾನ ಪರಿಷತ್ ಚುನಾವಣೆಗೆ 5 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ನಿನ್ನೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನಾಮಪತ್ರ ಸಲ್ಲಿಸಿದ್ದರು.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾದ ಪವನ್ ಖೇರಾ ಅವರನ್ನು ನಮ್ಮ ರಾಜ್ಯದಿಂದ ಕಣಕ್ಕೆ ಇಳಿಸಲಾಗಿದೆ. ಜೊತೆಗೆ ಎಐಸಿಸಿ ಕಾರ್ಯದರ್ಶಿ, ಯುವ ಮುಖಂಡ ಮನ್ಸೂರ್ ಅಲಿ ಖಾನ್ ಅವರಿಗೂ ಅವಕಾಶ ನೀಡಿದ್ದೇವೆ. ಕೆಪಿಸಿಸಿ ಅಧ್ಯಕ್ಷರೂ ಸೇರಿದಂತೆ ವಿಧಾನ ಪರಿಷತ್ ಚುನಾವಣೆಯ ಎಲ್ಲ ಐದು ಸ್ಥಾನಗಳಿಗೂ ಕಾಂಗ್ರೆಸ್ ಕಾರ್ಯಕರ್ತರಿಗೇ ಅವಕಾಶ ನೀಡಲಾಗಿದೆ” ಎಂದರು.

ರಾಜಕೀಯ ಬಿಟ್ಟು ರಾಜ್ಯದ ಜನರ ಹಿತಕ್ಕಾಗಿ ಕೆಲಸ ಮಾಡೋಣ

ಸಿದ್ದರಾಮಯ್ಯ ಅವರ ಸರಕಾರದ ವಿರುದ್ಧ ಜನರ ಆಕ್ರೋಶದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಿಎಂ ಬದಲಾವಣೆಯಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಶುಭ ಕೋರಿದ್ದಾರೆ.

ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಾನು ಗೌರವಯುತವಾಗಿ ಹೋಗಿ ಅವರನ್ನು ಭೇಟಿ ಮಾಡುವೆ. ಅವರು ರಾಜಕಾರಣ ಮಾಡುವುದು ಬೇಡ, ನಾವು ರಾಜಕಾರಣ ಮಾಡುವುದು ಬೇಡ. ರಾಜ್ಯದ ಜನತೆಯ ಹಿತಕ್ಕಾಗಿ ನಾವು ಎಲ್ಲರೂ ಸೇರಿ ಏನು ಕೆಲಸ ಮಾಡಬೇಕೋ ಅದನ್ನು ಮಾಡೋಣ” ಎಂದು ತಿಳಿಸಿದರು.

3 ದಿನ ಅನ್ನ-ನೀರಿಲ್ಲದೆ ವಿದ್ಯಾರ್ಥಿಗಳ ನರಕಯಾತನೆ: ಸಮಾಜ ಕಲ್ಯಾಣ ಇಲಾಖೆ ವಿರುದ್ಧ ಬೀದಿಗಿಳಿದ ವಿದ್ಯಾರ್ಥಿಗಳು

0

ರಾಯಚೂರು: ಸರ್ಕಾರಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳೇ ಸಿಗದಿರುವ ಆಘಾತಕಾರಿ ಘಟನೆ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ. ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಕಳೆದ ಮೂರು ದಿನಗಳಿಂದ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಅನುಭವಿಸಿದ್ದಾರೆ.

ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ವಿವಿಧ ಗ್ರಾಮೀಣ ಭಾಗಗಳಿಂದ ಬಂದಿರುವ ನೂರಾರು ವಿದ್ಯಾರ್ಥಿಗಳು ಹಸಿವು ಮತ್ತು ದಾಹದ ನಡುವೆ ದಿನ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆರಂಭದಲ್ಲಿ ತಮ್ಮ ಬಳಿಯಿದ್ದ ಹಣದಲ್ಲಿ ಊಟ ಮಾಡಿಕೊಂಡ ವಿದ್ಯಾರ್ಥಿಗಳು, ಬಳಿಕ ಹಣ ಖಾಲಿಯಾದ ನಂತರ ಪಕ್ಕದ ಹಾಸ್ಟೆಲ್‌ಗಳಿಗೆ ತೆರಳಿ ಆಹಾರ ಕೇಳಿ ತಿಂದಿರುವುದಾಗಿ ಆರೋಪಿಸಿದ್ದಾರೆ.

ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. “ನಮಗೆ ಊಟ ಕೊಡಿ, ಕುಡಿಯುವ ನೀರು ಕೊಡಿ” ಎಂದು ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ.

ಈ ಅವ್ಯವಸ್ಥೆಗೆ ಹಾಸ್ಟೆಲ್ ವಾರ್ಡನ್ ಮೆಹಬೂಬ್ ಅವರ ನಿರ್ಲಕ್ಷ್ಯವೇ ಕಾರಣ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹಾಸ್ಟೆಲ್ ಆರಂಭವಾಗಿದೆ ಎಂದು ಕರೆಸಿ, ಬಳಿಕ ಯಾವುದೇ ಸೌಲಭ್ಯ ಒದಗಿಸಿಲ್ಲ ಎಂದು ದೂರಿದ್ದಾರೆ. ಸಮಸ್ಯೆ ಕುರಿತು ಪ್ರಶ್ನಿಸಿದಾಗಲೂ ವಾರ್ಡನ್ ಉಡಾಫೆಯಾಗಿ ವರ್ತಿಸಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

ಪ್ರತಿಭಟನೆ ತೀವ್ರಗೊಂಡ ಬಳಿಕ ಸ್ಥಳಕ್ಕೆ ಬಂದ ವಾರ್ಡನ್ ವಿರುದ್ಧ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಪ್ರಕರಣ ಇದೀಗ ಸಮಾಜ ಕಲ್ಯಾಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಲಂಡನ್‌ನಲ್ಲಿ ಸಿಜೆಐ ಸೂರ್ಯ ಕಾಂತ್ ಭಾಷಣಕ್ಕೆ ಅಡ್ಡಿ: ಗದ್ದಲ ಸೃಷ್ಟಿಸಿದವರ ವಿರುದ್ಧ ಭಾರತೀಯ ಹೈಕಮಿಷನ್ ಕಿಡಿ

ನವದೆಹಲಿ: ಲಂಡನ್‌ನಲ್ಲಿ ನಡೆದ ಪ್ರತಿಷ್ಠಿತ ಕಾರ್ಯಕ್ರಮವೊಂದರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಭಾಷಣದ ವೇಳೆ ಕೆಲವರು ಗದ್ದಲ ಸೃಷ್ಟಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯನ್ನು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ತೀವ್ರವಾಗಿ ಖಂಡಿಸಿದೆ.

ಜೂನ್ 4ರಂದು ಲಂಡನ್‌ನ ಬರ್ಕ್‌ಬೆಕ್ ಕಾಲೇಜಿನಲ್ಲಿ ‘ಕೃತಕ ಬುದ್ಧಿಮತ್ತೆ ಮತ್ತು ಅಂತರರಾಷ್ಟ್ರೀಯ ಕಾನೂನು’ ವಿಷಯದ ಕುರಿತು ಸೂರ್ಯ ಕಾಂತ್ ಉಪನ್ಯಾಸ ನೀಡುತ್ತಿದ್ದರು. ಭಾಷಣದ ಬಳಿಕ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಕೆಲವರು ವಿಷಯಕ್ಕೆ ಸಂಬಂಧಿಸದ ಪ್ರಶ್ನೆಗಳನ್ನು ಕೇಳಲು ಮುಂದಾದರು. ಭಾರತದಲ್ಲಿ ವಿರೋಧದ ಧ್ವನಿಗಳನ್ನು ಹತ್ತಿಕ್ಕಲಾಗುತ್ತಿದೆ ಎಂಬ ಆರೋಪಗಳನ್ನು ಮುಂದಿಟ್ಟು ಚರ್ಚೆ ಆರಂಭಿಸಲು ಯತ್ನಿಸಿದರು.

ಈ ವೇಳೆ ಕಾರ್ಯಕ್ರಮದ ನಿರೂಪಕರು ಮಧ್ಯಪ್ರವೇಶಿಸಿ, ಪ್ರಶ್ನೆಗಳು ಕಾರ್ಯಕ್ರಮದ ವಿಷಯಕ್ಕೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿ ಚರ್ಚೆಯನ್ನು ಸ್ಥಗಿತಗೊಳಿಸಿದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನೆಗೆ ಪ್ರತಿಕ್ರಿಯಿಸಿರುವ ಭಾರತೀಯ ಹೈಕಮಿಷನ್, ಗೌರವಾನ್ವಿತ ಸಾರ್ವಜನಿಕ ವೇದಿಕೆಗಳಲ್ಲಿ ಇಂತಹ ವರ್ತನೆ ಒಪ್ಪಲಾಗದು ಎಂದು ಹೇಳಿದೆ. ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದ್ದರೂ, ಅದು ಶಾಂತಿಯುತ ಮತ್ತು ಸಭ್ಯ ರೀತಿಯಲ್ಲಿರಬೇಕು ಎಂದು ಸೂಚಿಸಿದೆ.

ಇದಕ್ಕೂ ಮುನ್ನ ತಮ್ಮ ಭಾಷಣದಲ್ಲಿ ಸೂರ್ಯ ಕಾಂತ್ ಅವರು, ಕೃತಕ ಬುದ್ಧಿಮತ್ತೆ ನ್ಯಾಯಾಂಗ, ಆಡಳಿತ ಹಾಗೂ ಜಾಗತಿಕ ವ್ಯವಸ್ಥೆಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಆದರೆ ತಂತ್ರಜ್ಞಾನವು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಮಾನವ ಘನತೆಯ ಮೌಲ್ಯಗಳಿಗೆ ಬದ್ಧವಾಗಿರಬೇಕು ಎಂದು ಒತ್ತಿ ಹೇಳಿದ್ದರು.

ಜಾಗತಿಕ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕತೆಗೆ ಮೋದಿ ಮಾಸ್ಟರ್ ಪ್ಲಾನ್

ನವದೆಹಲಿ: ಜಾಗತಿಕ ಆರ್ಥಿಕ ಅನಿಶ್ಚಿತತೆ, ಮಧ್ಯಪ್ರಾಚ್ಯ ಸಂಘರ್ಷ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳ ನಡುವೆಯೂ ಭಾರತದ ಆರ್ಥಿಕ ಪ್ರಗತಿಯ ವೇಗವನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಹೊಸ ಕಾರ್ಯತಂತ್ರ ರೂಪಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ (EAC) ಸದಸ್ಯರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ದೇಶದ ಆರ್ಥಿಕ ಭವಿಷ್ಯದ ಕುರಿತು ಮಹತ್ವದ ಚರ್ಚೆ ನಡೆಸಿದರು.

ಸಭೆಯಲ್ಲಿ ಭಾರತದ ಸ್ಥೂಲ ಆರ್ಥಿಕ ಸ್ಥಿರತೆಯನ್ನು ಮತ್ತಷ್ಟು ಬಲಪಡಿಸುವುದು, ಹೂಡಿಕೆಗಳನ್ನು ಆಕರ್ಷಿಸುವುದು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡುವ ಕುರಿತು ಸುದೀರ್ಘ ಸಮಾಲೋಚನೆ ನಡೆಯಿತು. ಜಾಗತಿಕ ಸವಾಲುಗಳ ನಡುವೆಯೂ ದೇಶದ ಬೆಳವಣಿಗೆಗೆ ಅಡ್ಡಿಯಾಗದಂತೆ ದೀರ್ಘಾವಧಿಯ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವ ಅಗತ್ಯವನ್ನು ಒತ್ತಿ ಹೇಳಲಾಯಿತು.

ನಾಗರಿಕರ ಜೀವನವನ್ನು ಇನ್ನಷ್ಟು ಸುಲಭಗೊಳಿಸುವ ‘ಈಸ್ ಆಫ್ ಲಿವಿಂಗ್’ ಹಾಗೂ ಉದ್ಯಮಿಗಳಿಗೆ ಅನುಕೂಲಕರ ವಾತಾವರಣ ಕಲ್ಪಿಸುವ ‘ಈಸ್ ಆಫ್ ಡೂಯಿಂಗ್ ಬಿಸಿನೆಸ್’ ಸುಧಾರಣೆಗಳ ಕುರಿತೂ ಸಭೆಯಲ್ಲಿ ವಿಶೇಷ ಗಮನ ಹರಿಸಲಾಯಿತು. ಹೂಡಿಕೆ ಸ್ನೇಹಿ ನೀತಿಗಳ ಮೂಲಕ ಉದ್ಯಮ ವಲಯಕ್ಕೆ ಉತ್ತೇಜನ ನೀಡುವ ಬಗ್ಗೆ ಸಲಹೆಗಳನ್ನು ಮಂಡಿಸಲಾಯಿತು.

ಇದೇ ವೇಳೆ ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ಜಾಗತಿಕ ತೈಲ ಮಾರುಕಟ್ಟೆ, ವ್ಯಾಪಾರ ಮತ್ತು ಸರಬರಾಜು ಸರಪಳಿಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಚರ್ಚೆ ನಡೆಯಿತು. ಇಂತಹ ಸವಾಲುಗಳನ್ನು ಎದುರಿಸಲು ಭಾರತ ಮುಂಚಿತ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಆರ್ಥಿಕ ತಜ್ಞರು ಸಲಹೆ ನೀಡಿದರು.

ಒಟ್ಟಾರೆ, ಜಾಗತಿಕ ಅಸ್ಥಿರತೆಯ ನಡುವೆಯೂ ಭಾರತದ ಆರ್ಥಿಕ ಬೆಳವಣಿಗೆಗೆ ಯಾವುದೇ ಹಿನ್ನಡೆಯಾಗದಂತೆ ಸಮಗ್ರ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಈ ಸಭೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಜಾನ್ವಿ ಕಪೂರ್ ಪಾತ್ರದ ಬಗ್ಗೆ ಆಕ್ರೋಶ: ‘ಪೆದ್ದಿ’ ನಿರ್ದೇಶಕರಿಂದ ಸ್ಪಷ್ಟನೆ

ಹೈದರಾಬಾದ್: ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳತ್ತ ದಾಪುಗಾಲಿಡುತ್ತಿರುವ ನಡುವೆಯೇ, ನಾಯಕಿ ಜಾನ್ವಿ ಕಪೂರ್ ಪಾತ್ರದ ಬಗ್ಗೆ ಹೊಸ ವಿವಾದ ಎದ್ದಿದೆ. ಚಿತ್ರದಲ್ಲಿ ನಟಿಗೆ ಸಮರ್ಪಕ ಪ್ರಾಮುಖ್ಯತೆ ನೀಡಲಾಗಿಲ್ಲ ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕೆಲವು ಸಿನಿಪ್ರೇಮಿಗಳು ಮತ್ತು ನೆಟ್ಟಿಗರು, ಜಾನ್ವಿ ಪಾತ್ರವನ್ನು ಕಥೆಯ ಕೇಂದ್ರಬಿಂದುವಾಗಿಸುವ ಬದಲು ಗ್ಲಾಮರ್ ಅಂಶಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ‘ದೇವರ’ ಚಿತ್ರದ ಬಳಿಕ ಮತ್ತೊಮ್ಮೆ ಇದೇ ರೀತಿಯ ಚರ್ಚೆ ಜಾನ್ವಿ ಪಾತ್ರದ ಸುತ್ತ ಶುರುವಾಗಿದೆ.

ಈ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಬುಚ್ಚಿ ಬಾಬು ಸನಾ, ಚಿತ್ರದ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. “ರಾಮ್ ಚರಣ್ ಮತ್ತು ಜಾನ್ವಿ ನಡುವಿನ ಪ್ರೇಮಕಥೆಯೇ ಚಿತ್ರದ ಪ್ರಮುಖ ಭಾವನಾತ್ಮಕ ಅಂಶ. ಯಾವುದೇ ವಿವಾದ ಸೃಷ್ಟಿಸುವ ಅಥವಾ ನಟಿಯ ಪಾತ್ರವನ್ನು ಕಡಿಮೆ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ” ಎಂದು ಹೇಳಿದ್ದಾರೆ.

ಹಳ್ಳಿ ಹಿನ್ನೆಲೆಯ ಕಥೆ ಹಾಗೂ ಪಾತ್ರಗಳ ಸ್ವಭಾವಕ್ಕೆ ಅನುಗುಣವಾಗಿಯೇ ಚಿತ್ರಕಥೆ ರೂಪಿಸಲಾಗಿದೆ ಎಂದು ಹೇಳಿರುವ ಅವರು, ಜಾನ್ವಿ ಪಾತ್ರದ ಬಗ್ಗೆ ಬಂದಿರುವ ನೆಗೆಟಿವ್ ಪ್ರತಿಕ್ರಿಯೆಗಳು ತಮ್ಮನ್ನು ಅಚ್ಚರಿಗೊಳಿಸಿವೆ ಎಂದಿದ್ದಾರೆ.

ಸದ್ಯ ‘ಪೆದ್ದಿ’ ಚಿತ್ರದ ಯಶಸ್ಸಿನ ಜೊತೆಗೆ ಜಾನ್ವಿ ಕಪೂರ್ ಪಾತ್ರದ ಚಿತ್ರಣವೂ ಚರ್ಚೆಯ ವಿಷಯವಾಗಿದ್ದು, ನಿರ್ದೇಶಕರ ಸ್ಪಷ್ಟನೆ ಬಳಿಕ ಈ ವಿವಾದ ಯಾವ ದಿಕ್ಕು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕೋರ್ಟ್ʼಗೆ ಗೈರುಹಾಜರಾದ ಬಿಜೆಪಿ ಶಾಸಕ ಶರಣು ಸಲಗರ್ʼಗೆ ಜಾಮೀನು ರಹಿತ ವಾರಂಟ್ ಜಾರಿ!

ಬೀದರ್: ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ಅವರಿಗೆ ಕೋರ್ಟ್‌ಗೆ ಗೈರುಹಾಜರಾದ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರಂಟ್ (NBW) ಜಾರಿಯಾಗಿದೆ. ಈ ಬೆಳವಣಿಗೆಯಿಂದ ಶಾಸಕ ಸಲಗರ್ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ.

2023ರಲ್ಲಿ ನಡೆದಿದ್ದ ಗೋಹತ್ಯೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯ ವಿಚಾರಣೆಗೆ ಶಾಸಕ ಶರಣು ಸಲಗರ್ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದ್ದು, ಸಾಕ್ಷ್ಯ ದಾಖಲಾತಿ ಪ್ರಕ್ರಿಯೆ ನಡೆಯಬೇಕಿತ್ತು.

2023ರ ಜುಲೈ 1ರಂದು ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಶಾಸಕ ಶರಣು ಸಲಗರ್ ಹಾಗೂ ಅವರ ಬೆಂಬಲಿಗರು ಸ್ಥಳಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಮುಸ್ಲಿಂ ಸಮುದಾಯದ ಮನೆಯೊಂದರ ಬಳಿ ಗೋಹತ್ಯೆ ತಡೆಯುವ ವಿಚಾರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡು ಗಲಾಟೆ ನಡೆದಿತ್ತು.

ಘಟನೆಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಇದೀಗ ನ್ಯಾಯಾಲಯದ ವಿಚಾರಣೆಯ ಹಂತದಲ್ಲಿದೆ. ಈ ನಡುವೆ ವಿಚಾರಣೆಗೆ ಗೈರಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಶಾಸಕ ಸಲಗರ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

ಪ್ರಕರಣದ ಮುಂದಿನ ವಿಚಾರಣೆ ವೇಳೆ ಶಾಸಕ ಶರಣು ಸಲಗರ್ ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ ಇದ್ದು, ಕಾನೂನು ಪ್ರಕ್ರಿಯೆ ಮುಂದುವರಿಯಲಿದೆ.

KCET 2026 ಟಾಪರ್ಸ್ ಪಟ್ಟಿ ಪ್ರಕಟ: ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ತನಿಷಾ ಕಾರ್ತಿಕ್ʼಗೆ ಮೊದಲ ರ್ಯಾಂಕ್!

ಬೆಂಗಳೂರು: 2026ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಪ್ರಕಟಿಸಿದ್ದು, ವಿವಿಧ ವೃತ್ತಿಪರ ಕೋರ್ಸ್‌ಗಳ ಟಾಪರ್‌ಗಳ ಪಟ್ಟಿಯೂ ಬಹಿರಂಗಗೊಂಡಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಆರ್‌ವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ತನಿಷಾ ಕಾರ್ತಿಕ್ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮೆರೆದಿದ್ದಾರೆ.

ಏಪ್ರಿಲ್ 22, 23 ಮತ್ತು 24ರಂದು ನಡೆದಿದ್ದ ಯುಜಿ ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಇಂಜಿನಿಯರಿಂಗ್ ವಿಭಾಗದ ಮೊದಲ ಮೂರು ಸ್ಥಾನಗಳನ್ನು ವಿದ್ಯಾರ್ಥಿಗಳು ಅಲಂಕರಿಸಿದ್ದಾರೆ.

ಇಂಜಿನಿಯರಿಂಗ್ ವಿಭಾಗದ ಟಾಪ್-3 ರ್ಯಾಂಕ್‌ಗಳು

  • ತನಿಷಾ ಕಾರ್ತಿಕ್ (ಆರ್‌ವಿ ಪಿಯು ಕಾಲೇಜು, ಬೆಂಗಳೂರು) – 1ನೇ ರ್ಯಾಂಕ್
  • ಶ್ರಾಜನ್ (ಸರ್ ಎಂ.ವಿ. ಪಿಯು ಕಾಲೇಜು, ಬೆಳ್ತಂಗಡಿ) – 2ನೇ ರ್ಯಾಂಕ್
  • ನಿನಾದ್ ವಸಿಷ್ಠ (ಆರ್‌ವಿ ಪಿಯು ಕಾಲೇಜು, ಜಯನಗರ) – 3ನೇ ರ್ಯಾಂಕ್

ವೆಟನರಿ ವಿಭಾಗ

  • ನಯನಾ ಗೋಪಿ – 1ನೇ ರ್ಯಾಂಕ್
  • ಅಮೂಲ್ಯ – 2ನೇ ರ್ಯಾಂಕ್
  • ರಿತ್ವಿಕ್ ಕುಮಾರ್ – 3ನೇ ರ್ಯಾಂಕ್

ಬಿಎಸ್‌ಸಿ ಅಗ್ರಿಕಲ್ಚರ್ ವಿಭಾಗ

  • ನಿನಾದ್ ವಸಿಷ್ಠ – 1ನೇ ರ್ಯಾಂಕ್
  • ಅನ್ಮೊಲ್ ಪ್ರಭು – 2ನೇ ರ್ಯಾಂಕ್
  • ಸಮಯ್ – 3ನೇ ರ್ಯಾಂಕ್

ಬಿಎಸ್‌ಸಿ ನರ್ಸಿಂಗ್, ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮಾ ಹಾಗೂ ಡಿ-ಫಾರ್ಮಾ ವಿಭಾಗಗಳಲ್ಲಿ

  • ನಯನಾ ಗೋಪಿ – 1ನೇ ರ್ಯಾಂಕ್
  • ಅಮೂಲ್ಯ – 2ನೇ ರ್ಯಾಂಕ್
  • ಸುಚಿತ್ರಾ – 3ನೇ ರ್ಯಾಂಕ್

ಈ ಬಾರಿಯ KCET ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು, ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಫಲಿತಾಂಶ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ಕೌನ್ಸೆಲಿಂಗ್ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಗೆ ಕೆಇಎ ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆಯಿದೆ.

error: Content is protected !!