ವಿಜಯಸಾಕ್ಷಿ ಸುದ್ದಿ, ಗದಗ: ಹಿಂದಿನ ಕಾಲದಿಂದಲೂ ಮಹಿಳೆ ಸಂಗೋಪನೆಯ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಇದು ಆಕೆಗೆ ಜನ್ಮ ಜಾತವಾದ ಕೌಶಲ್ಯವಾಗಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾಳೆ. ಮಹಿಳೆಯರು ಸರ್ಕಾರದ ಹಾಗೂ ಇಂತಹ ಕಾರ್ಯಕ್ರಮದ ಹಲವಾರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಅದಕ್ಕಾಗಿ ನೀಡಲಾಗುವ ತರಬೇತಿಗಳನ್ನು ಪಡೆದು ಬದುಕಿನಲ್ಲಿ ಆರ್ಥಿಕ ಸದೃಢತೆ ಹೊಂದಬೇಕು, ಇದರಿಂದ ಕುಟುಂಬ ನಿರ್ವಹಣೆಗೆ ಸಹಾಯವಾಗಲಿದೆ ಎಂದು ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿಯ ನಿರ್ದೇಶಕ, ಸಹಕಾರ ರತ್ನ ಪುರಸ್ಕೃತ ಎಚ್.ಜಿ. ಹಿರೇಗೌಡ್ರ ಅಭಿಪ್ರಾಯಪಟ್ಟರು.
ಸಹಕಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಗದಗ ಜಿಲ್ಲಾ ಸಹಕಾರ ಯೂನಿಯನ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯ ಎಲ್ಲಾ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಲಿಂಗರಾಜಗೌಡ ಎಚ್. ಪಾಟೀಲ ಮಾತನಾಡಿ, ಬಸವಾದಿ ಶರಣರ ಕಾಲಕ್ಕಿಂತ ಮೊದಲು ಮಹಿಳೆಯರನ್ನು ಅಬಲೆಯರು ಎಂದು ಕರೆಯುತ್ತಾ ಬಂದಿದ್ದೇವೆ. ಅಂದಿನ ಕಾಲದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ಸ್ವಾತಂತ್ರ ಇರುತ್ತಿರಲಿಲ್ಲ. ಅಂತಹ ಕಾಲದಲ್ಲಿ ಬಸವಾದಿ ಶರಣರು ಮಹಿಳೆಯರಿಗೆ ಕೂಡಾ ಸಮಾನ ಸ್ಥಾನಮಾನ ಸಿಗಬೇಕೆಂದು ಹೊರಾಟ ಮಾಡುತ್ತಾ ಬಂದು ಇಂದಿನ ಕಾಲದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸಮಾಜದ ದುರ್ಬಲ, ಶೋಷಿತ ಮತ್ತು ಅಸಹಾಯಕ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧಿಸಲು ಸ್ಥಾಪಿಸಲ್ಪಟ್ಟಿರುವ ಮತ್ತು ರಾಜ್ಯದ ಮಹಿಳೆಯರಿಗೆ ನೆರವು ನೀಡುವ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಂಡಾಪೂರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದ್ಯಾಮಣ್ಣ ಸವದತ್ತಿ, ತಾಮ್ರಗುಂಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಗಂಗಮ್ಮ ಕಡಕೋಳ, ರಡ್ಡೇರನಾಗನೂರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಸುನಿತಾ ಪಾಟೀಲ, ಒಕ್ಕಲಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಪುಷ್ಪಾ ಜಂತ್ಲಿ, ಹಾಲಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ದಾಕ್ಷಾಯಣಿ ಹೊಕ್ಕಳದ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಮಾರಾಟಾಧಿಕಾರಿ ಬಿ.ಆರ್. ನಿಡಗುಂದಿ, ಗದಗ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಎಚ್.ಎಂ. ಶಾಂತಾ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಅಧೀಕ್ಷಕರಾದ ಜಿ.ಎಂ. ಉಳವಿ, ಧಾರವಾಡ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥರಾದ ಡಾ. ಪ್ರಸನ್ನ ಎಸ್. ಪಟ್ಟೇದ, ಹಾಲು ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಸಿ.ಎಸ್. ಕಲ್ಲನಗೌಡರ, ಜಿ.ಸಿ. ಸಾಲೋಟಗಿಮಠ, ಬಸವರಾಜ ಜುಮ್ಮಣ್ಣವರ, ಡಿ.ಐ. ನದಾಫ್, ಮಲ್ಲಿಕಾರ್ಜುನ ಉಣಚಗೇರಿ, ಕಿರಣಕುಮಾರ ಹುಗ್ಗಿ ಉಪಸ್ಥಿತರಿದ್ದರು.
ತರಬೇತಿ ಕಾರ್ಯಾಗಾರದಲ್ಲಿ ಡಾ. ಪ್ರಜ್ಞಾ ಮತ್ತಿಹಳ್ಳಿ, ಲಲಿತಾ ಎಸ್. ಅಳವುಂಡಿ, ಡಾ. ಮಲ್ಲೂರ ಬಸವರಾಜ ಎನ್ ಉಪನ್ಯಾಸ ನೀಡಿದರು. ಸಾವಿತ್ರಿ ಮೊರಬದ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು. ಮಹಿಳಾ ಸಹಕಾರ ಶಿಕ್ಷಕಿ ರಶೀದಾಬಾನು ಸಿ. ಯಲಿಗಾರ ವಂದಿಸಿದರು.
ಗದಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಸ್.ಕೆ. ಕುರಡಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಹಿಳೆಯರಿಗೆ ಸರ್ಕಾರದ ಹಲವಾರು ಸ್ವ-ಉದ್ಯೋಗದ ಯೋಜನೆಗಳಿದ್ದು, ಅದಕ್ಕಾಗಿ ನಿರ್ದಿಷ್ಟ ತರಬೇತಿಗಳನ್ನು ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ ಎಂದರು.

