Home Blog Page 144

ಜೂ. 26ಕ್ಕೆ ರಾಜ್ಯಾದ್ಯಂತ ‘ರಕ್ಷಕ-2’ ಅಬ್ಬರ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಸರ್ವೇಶ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ‘ರಕ್ಷಕ-2’ ಕನ್ನಡ ಚಲನಚಿತ್ರವು ಜೂನ್ 26ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಈ ಹಿಂದೆ ಶತದಿನೋತ್ಸವ ಕಂಡ ‘ರಕ್ಷಕ’ ಹಾಗೂ ‘ದೊಡ್ಡಣ್ಣ ಪುಟ್ಟಣ್ಣ’ ಚಿತ್ರಗಳ ನಿರ್ದೇಶಕರಾದ ಡಾ. ಆರ್. ವಿಜಯಕುಮಾರ್ ನಟಿಸಿ, ನಿರ್ದೇಶಿಸಿರುವ ಮೂರನೇ ಚಿತ್ರ ಇದಾಗಿದೆ. ಲವ್, ಆಕ್ಷನ್, ಫ್ಯಾಮಿಲಿ, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಕಾಮಿಡಿಯ ಸಮನ್ವಯದೊಂದಿಗೆ ಮೂಡಿ ಬಂದಿರುವ ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಕುಟುಂಬ ಸಮೇತ ಕುಳಿತು ವೀಕ್ಷಿಸಬಹುದಾದ ಮನರಂಜನಾ ಚಿತ್ರವಾಗಿದೆ.

ಚಿತ್ರದ ನಿರ್ದೇಶಕ ಡಾ. ಆರ್. ವಿಜಯಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದು, ಖ್ಯಾತ ಹಾಸ್ಯ ನಟ ಲಯಕೋಕಿಲ ಹೆಡ್ ಕಾನ್ಸ್ಟೇಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನಾಗಿ ರಾಜವಂಶಿ, ನಾಯಕಿಯಾಗಿ ರಾಧಿಕಾ, ಪ್ರಮುಖ ಪಾತ್ರದಲ್ಲಿ ಮಧುಶ್ರೀ ಅಭಿನಯಿಸಿದ್ದಾರೆ. ಹಿರಿಯ ನಟ ಸುರೇಂದ್ರ ಕುಮಾರ್ ಖಳನಾಯಕನಾಗಿ ನಟಿಸಿದ್ದು, ಮುರಳಿಕೃಷ್ಣ, ವಿಜಯ್ ಮಧಾಳೇ, ಅರವಿಂದ್ ಹಾಗೂ ರೋಹಿಣಿ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದು, ಛಾಯಾಗ್ರಹಣವನ್ನು ವಿಜಯ್ ಮಧಾಳೇ ಮತ್ತು ಆಕಾಶ್, ಸಂಕಲನವನ್ನು ವಿಜಯ್ ಮಧಾಳೇ, ಸಾಹಸ ನಿರ್ದೇಶನವನ್ನು ವೈಲೆಂಟ್ ವೇಲು, ಪ್ರಸಾಧನವನ್ನು ಜೀವನ್ ನಿರ್ವಹಿಸಿದ್ದಾರೆ. ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ ಹಂಡಿಗಿ ಚಿತ್ರದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿದ್ದಾರೆ.

ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ ಮತ್ತು ನಿರ್ದೇಶನವನ್ನು ಡಾ. ಆರ್. ವಿಜಯಕುಮಾರ್ ವಹಿಸಿಕೊಂಡಿದ್ದು, ವಿ. ಶಿವ್ ಸರ್ವೇಶ್ ಚಿತ್ರವನ್ನು ನಿರ್ಮಿಸಿದ್ದಾರೆ. ವಿಎಸ್‌ಕೆ ಸಿನಿ ಕ್ರಿಯೇಷನ್ಸ್ ಸಂಸ್ಥೆ ಚಿತ್ರವನ್ನು ವಿಶಾಲ ಕರ್ನಾಟಕದಲ್ಲಿ ವಿತರಣೆ ಮಾಡುತ್ತಿದೆ.

ಚಿತ್ರಮಂದಿರಗಳಿಗೆ ಆಗಮಿಸಿ ‘ರಕ್ಷಕ-2’ ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ನಿರ್ದೇಶಕ ಡಾ. ಆರ್. ವಿಜಯಕುಮಾರ್ ಮನವಿ ಮಾಡಿದ್ದಾರೆ.

ಲಕ್ಷ್ಮೇಶ್ವರ ಸಮೀಪ ಭೀಕರ ರಸ್ತೆ ಅಪಘಾತ; ಅಕ್ಕ-ತಮ್ಮ ಬಲಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಗೋನಾಳ ಗ್ರಾಮದ ಸಮೀಪದ ಸಂಕ್ಲಿಪುರ ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅಕ್ಕ ಮತ್ತು ತಮ್ಮ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಸವಣೂರ ಕಡೆಯಿಂದ ಲಕ್ಷ್ಮೇಶ್ವರದತ್ತ ಅತಿವೇಗವಾಗಿ ಬರುತ್ತಿದ್ದ ಐಶರ್/ಕ್ಯಾಂಟರ್ ವಾಹನವು ಸಂಕ್ಲಿಪುರ ಕ್ರಾಸ್‌ನಿಂದ ಸವಣೂರ ರಸ್ತೆಯತ್ತ ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಕುಂದಗೋಳ ತಾಲೂಕಿನ ಕಡಪಟ್ಟಿಹಳ್ಳಾಳ ಗ್ರಾಮದ ಗೌರವ್ವ ಯಲ್ಲಪ್ಪ ಬಾರ್ಕಿ (43) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಚಾಲಕ ಫಕೀರೇಶ ಬಾರ್ಕಿ (40) ಅವರನ್ನು ತಕ್ಷಣ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

ಬಳಿಕ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು.

ಒಂದೇ ಕುಟುಂಬದ ಅಕ್ಕ-ತಮ್ಮ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಮೃತರ ತಂದೆ ನೀಡಿದ ದೂರಿನ ಮೇರೆಗೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ನಾಗರಾಜ ಗಡದ ತನಿಖೆ ಕೈಗೊಂಡಿದ್ದಾರೆ.

ಸಂತೋಷ ಲಾಡ್‌ಗೆ ಸಚಿವ ಸ್ಥಾನ ನೀಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಸಂತೋಷ ಶಿವಾಜಿ ಲಾಡ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಮರಾಠಾ ಸಮುದಾಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದೆ.

ಮರಾಠಾ ವಿದ್ಯಾವರ್ಧಕ ಸಂಘ (ರಿ) ಗದಗ-ಬೆಟಗೇರಿ ಅಧ್ಯಕ್ಷ ಅರುಣಕುಮಾರ ಬಿ. ಚವ್ಹಾಣ ಅವರ ಅಧ್ಯಕ್ಷತೆಯಲ್ಲಿ ಜೂನ್ 19ರಂದು ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಮಾಹಿತಿ ತಂತ್ರಜ್ಞಾನ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾಗಿ ಮತ್ತು ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿರುವ ಸಂತೋಷ ಲಾಡ್ ಅವರು ಆಡಳಿತಾತ್ಮಕ ಅನುಭವ ಹೊಂದಿದ್ದು, ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಸಮಾನತೆ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಕ್ಷೇತ್ರದ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಆಗ್ರಹಿಸಲಾಯಿತು.

ಸಭೆಯಲ್ಲಿ ಬಸವರಾಜ ಜೆ. ಹುಬ್ಬಳ್ಳಿ, ಸುರೇಶ ಎಸ್. ಬೇಂದ್ರೆ, ನರಸಪ್ಪ ಬಿ. ತುಕ್ಕಪ್ಪನವರ, ಮಾರುತಿ ಆರ್. ಅರಳಿಕಟ್ಟಿ, ಶಿವಾಜಿ ವೈ. ಗ್ವಾರಿ, ಹನಮಂತಪ್ಪ ಎಸ್. ಹೆಬ್ಬಳ್ಳಿ, ಮಂಜು ಎನ್. ಮಾನೆ, ಶಿವಾಜಿರಾವ ಪಾವನ, ಸುಭಾಷ್ ವಿ. ಕದಡಿ, ಈರಣ್ಣ ಪವಾರ, ನಾರಾಯಣರಾವ ಗಾಯಕವಾಡ ಹಾಗೂ ರಾಜಮಾತಾ ಜೀಜಾಬಾಯಿ ಮಹಿಳಾ ಮಂಡಳದ ಪದಾಧಿಕಾರಿಗಳಾದ ಶೃತಿ ವಿ. ಗ್ವಾರಿ, ಅಶ್ವಿನಿ ಜಗತಾಪ, ಕೋಕಿಲಾ ಎಸ್. ಘೋರ್ಪಡೆ, ದೀಪಾ ಮಹಡಿಕ, ಮಾಲಾ ಜಾಧವ, ಶೋಭಾ ಘಾಟಗೆ, ಜ್ಯೋತಿ ಮಾನೆ, ಪದ್ಮಾವತಿ ಸೆಳಕೆ ಹಾಗೂ ಸುರೇಖಾ ಬೇಂದ್ರೆ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.

ಯೋಗದಿಂದ ಆರೋಗ್ಯ, ಸಂಗೀತದಿಂದ ಮನಶಾಂತಿ: ಕಲ್ಪನಾ ಚಚಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕೆಎಲ್‌ಇ ಶಾಲೆಯಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನ ಹಾಗೂ ವಿಶ್ವ ಸಂಗೀತ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಶಿಕ್ಷಕ ವಿರೇಂದ್ರ ಗಂಗಲ್ ಮಾತನಾಡಿ, ಯೋಗವು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಕಾಪಾಡುವ ಭಾರತೀಯರ ಪ್ರಾಚೀನ ಪರಂಪರೆಯಾಗಿದ್ದು, ನಿಯಮಿತ ಯೋಗಾಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲೆ ಕಲ್ಪನಾ ಚಚಡಿ ಮಾತನಾಡಿ, ಸಂಗೀತವು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದ್ದು, ಮನಸ್ಸಿಗೆ ಸಂತೋಷ, ಶಾಂತಿ ಹಾಗೂ ನೆಮ್ಮದಿಯನ್ನು ನೀಡುತ್ತದೆ. ಸಂಗೀತ ಆಲಿಸುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ಉಲ್ಲಾಸಗೊಳ್ಳುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯೋಗ ತರಬೇತುದಾರರಾದ ಗಿರಿಜಾ ಮುತ್ತಿನಪೆಂಡಿಮಠ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿವಿಧ ಯೋಗಾಸನಗಳ ಪ್ರದರ್ಶನ ನೀಡಿದರು.

ಸಂಗೀತ ಶಿಕ್ಷಕಿ ಶೋಭಾ ಬಡಿಗೇರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ವಿಕ್ಟರ್ ಝಳಕಿ ಹಾಗೂ ಸ್ವಪ್ನೀಲ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪಾಶ್ಚಾತ್ಯ ಸಂಗೀತ ಕಲಾ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದರು.

ಬಳಿಕ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಎಪಿಎಂಸಿ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಆವರಣದಲ್ಲಿ ಎದುರಾಗಿರುವ ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ನಿಯೋಗವು ಹೆಸ್ಕಾಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ ಕಲ್ಯಾಣಶೆಟ್ಟರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಸಂಸ್ಥೆಯ ಹಿರಿಯ ಮುಖಂಡ ಈಶ್ವರಪ್ಪ ಮುನವಳ್ಳಿ ನೇತೃತ್ವದ ನಿಯೋಗವು ಎಪಿಎಂಸಿ ವ್ಯಾಪ್ತಿಯಲ್ಲಿನ ವಿದ್ಯುತ್ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರ ಪರಿಹಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.

ಈ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ, ಉಪಾಧ್ಯಕ್ಷ ಜಯದೇವ ಮೆಣಸಗಿ, ಪ್ರಕಾಶ ಉಗಲಾಟ, ಶಿದ್ರಾಮಪ್ಪ ಉಮಚಗಿ, ಡಿ.ವಿ. ಗಣಾಚಾರಿ ಉಪಸ್ಥಿತರಿದ್ದರು ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಚೆನ್ನವೀರ ಹುಣಸೀಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಎಪಿಎಂಸಿ ವ್ಯಾಪ್ತಿಯ ವಿದ್ಯುತ್ ಸಮಸ್ಯೆಯನ್ನು ಶೀಘ್ರ ಪರಿಹರಿಸಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಬೇಕು.”

— ರಾಜೇಶ ಕಲ್ಯಾಣಶೆಟ್ಟರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಹೆಸ್ಕಾಂ

ಸಂಭ್ರಮ ಶನಿವಾರಕ್ಕೆ ಅದ್ದೂರಿ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳಿಗೆ ಸಂತಸದಾಯಕ ಹಾಗೂ ಅನುಭವಾತ್ಮಕ ಕಲಿಕೆಯನ್ನು ಒದಗಿಸುವ ‘ಸಂಭ್ರಮ ಶನಿವಾರ’ ಕಾರ್ಯಕ್ರಮವು ಮಕ್ಕಳಲ್ಲಿ ಸೃಜನಶೀಲತೆ, ನಾಯಕತ್ವ ಮತ್ತು ಸಂವಹನ ಕೌಶಲ್ಯಗಳನ್ನು ಬೆಳೆಸುವ ಅತ್ಯುತ್ತಮ ಶೈಕ್ಷಣಿಕ ಕಾರ್ಯಕ್ರಮವಾಗಿದೆ ಎಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ ಹೇಳಿದರು.

ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ.1ರಲ್ಲಿ ಶನಿವಾರ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಮೊದಲ ‘ಸಂಭ್ರಮ ಶನಿವಾರ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ರೂಪಿಸುವ ಕಾರ್ಯವನ್ನು ಶಿಕ್ಷಕರು ಸಮರ್ಪಕವಾಗಿ ನಿರ್ವಹಿಸುತ್ತಿದ್ದು, ಸಮುದಾಯದವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಪಿ. ಪ್ರಭಯ್ಯನಮಠ ಮಾತನಾಡಿ, ವಿಶೇಷ ಚೇತನ ವಿದ್ಯಾರ್ಥಿಗಳ ಪಾಲಕರನ್ನು ಮಕ್ಕಳೊಂದಿಗೆ ಸನ್ಮಾನಿಸುವ ಮೂಲಕ ಅವರ ಜೀವನ ಸಾಧನೆಗಳನ್ನು ಪರಿಚಯಿಸಲಾಗುತ್ತಿದೆ. ಇದರಿಂದ ವಿಶೇಷ ಚೇತನರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿ, ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೆ ಬಲ ಸಿಗಲಿದೆ ಎಂದು ಹೇಳಿದರು.

ಶಿಕ್ಷಣ ಸಂಯೋಜಕ ಮುರಳಿ ಸೊಲ್ಲಾಪೂರ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಬಿ. ಹೊಸಮನಿ ಕಾರ್ಯಕ್ರಮ ನಿರೂಪಿಸಿ, ಸರ್ವಮಂಗಳಾ ಗುಜಮಾಗಡಿ ವಂದಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಾ ಜಕರಡ್ಡಿ, ಪವಿತ್ರಾ ಹಿರೇಮಠ, ಸುನಂದಾ ಕುಂಟೋಜಿ, ಹೇಮಲತಾ ಆಸಂಗಿ ಸೇರಿದಂತೆ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಣ ಸೇವೆಗೆ ಕೈಜೋಡಿಸಿದ ದಾನಿಗಳು

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಶಾಲೆಗಳು ಮತ್ತಷ್ಟು ಸಬಲೀಕರಣಗೊಳ್ಳಬೇಕಾದರೆ ಸಮುದಾಯ, ದಾನಿಗಳು ಹಾಗೂ ಸಂಘ-ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದು ಹಿರಿಯ ಕರ ಸಲಹೆಗಾರ ಮುಕುಂದ ಪೋತ್ನೀಸ್ ಹೇಳಿದರು.

ನಗರದ ಶತಮಾನೋತ್ಸವದ ಹೆಗ್ಗಳಿಕೆಯ ಸರ್ಕಾರಿ ಗಂಡು ಮಕ್ಕಳ ಶಾಲೆ ನಂ.1ರಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಪ್ರಗತಿಗೆ ಸಮಾಜದ ಎಲ್ಲ ವರ್ಗದವರು ಕೈಜೋಡಿಸಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರಷ್ಟೇ ಅಲ್ಲ, ದಾನಿಗಳ ಸಹಕಾರವೂ ಮಹತ್ವದ್ದಾಗಿದೆ. ಎಂ.ಜಿ. ಕವಾಡ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಮುಲ್ತಾನಮಲಜಿ ಗುಮಾನಮಲಜಿ ಕವಾಡ ಅವರ ಸ್ಮರಣಾರ್ಥ ಕೈಗೊಂಡಿರುವ ಈ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣಪ್ರೇಮಿ ಹಾಗೂ ದಾನಿ ಜಯಂತಿಲಾಲ ಕವಾಡ, ಗದಗದ ಶತಮಾನೋತ್ಸವ ಶಾಲೆಗಳು ನಗರದ ಹೆಮ್ಮೆ. ಸರ್ಕಾರಿ ಹೆಣ್ಣು ಮಕ್ಕಳ ಶಾಲೆ, ಗಂಡು ಮಕ್ಕಳ ಶಾಲೆ ನಂ.1 ಹಾಗೂ ಶಾಲೆ ನಂ.11ರ ಎಲ್ಲ ವಿದ್ಯಾರ್ಥಿಗಳಿಗೆ ನಮ್ಮ ಕುಟುಂಬದ ವತಿಯಿಂದ ಸ್ಕೂಲ್ ಬ್ಯಾಗ್ ವಿತರಿಸಲಾಗಿದ್ದು, ಮಕ್ಕಳು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಪ್ರಭಯ್ಯನಮಠ, ಶಿಕ್ಷಣ ಸಂಯೋಜಕ ಮುರಳಿ ಸೊಲ್ಲಾಪೂರ, ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ, ಹೇಮಾದೇವಿ ಕವಾಡ, ಪೃಥ್ವಿರಾಜ್ ಬಾಫಣಾ, ಬಾವೇಶ್, ಪ್ರಿಯಲ್ ಕವಾಡ, ಶೈಲೇಶ್ ಬಾಗಮಾರ, ಪರವೀನ್ ಸಂಕಲೇಚಾ, ಮೋಹಿತ್, ಅಕ್ಷತಾ ಕವಾಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರಾದ ಆರ್.ಬಿ. ಹೊಸಮನಿ, ಹೇಮಲತಾ ಆಸಂಗಿ, ಶಿಕ್ಷಕಿಯರಾದ ಪವಿತ್ರಾ ಹಿರೇಮಠ, ಸರ್ವಮಂಗಳಾ ಗುಜಮಾಗಡಿ ಹಾಗೂ ಶಾಲೆಯ ಪಾಲಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮೂರು ಶಾಲೆಗಳ ವತಿಯಿಂದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯೋಪಾಧ್ಯಾಯಿನಿ ವಿಜಯಾ ಜಕರಡ್ಡಿ ಸ್ವಾಗತಿಸಿದರು. ಕಾವ್ಯಾ ದಂಡಿನ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಸುನಂದಾ ಕುಂಟೋಜಿ ವಂದಿಸಿದರು.

“ಶಿಕ್ಷಣಕ್ಕೆ ನೀಡುವ ದಾನವೇ ಶ್ರೇಷ್ಠ ದಾನ. ಸರ್ಕಾರಿ ಶಾಲೆಗಳ ಮಕ್ಕಳ ಭವಿಷ್ಯ ಉಜ್ವಲವಾಗಬೇಕು ಎಂಬ ಉದ್ದೇಶದಿಂದ ಈ ನೆರವು ನೀಡಿದ್ದೇವೆ.”

— ಜಯಂತಿಲಾಲ ಕವಾಡ, ದಾನಿ

ವಿದ್ಯುತ್ ಖಾಸಗೀಕರಣಕ್ಕೆ ರೈತರ ಕಿಡಿ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಮೂಲಕ ರೈತರು, ಬಡವರು ಹಾಗೂ ಸಾಮಾನ್ಯ ಗ್ರಾಹಕರ ಹಿತಾಸಕ್ತಿಗೆ ಧಕ್ಕೆ ತರುತ್ತಿವೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಡಂಬಳ ಉಪತಹಸೀಲ್ದಾರ್ ನಾಡಕಚೇರಿ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.

ಖಾಸಗೀಕರಣ ವಿರೋಧಿಸಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಉಪತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ ಅವರಿಗೆ ಮನವಿ ಸಲ್ಲಿಸಿ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ಖಾಸಗಿ ಕಂಪನಿಗಳಿಗೆ ವಹಿಸಬಾರದು ಎಂದು ಆಗ್ರಹಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಶಂಕರಗೌಡ ಜಯನಗೌಡ್ರ, ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಹುನ್ನಾರ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದು, 2023ರ ವಿದ್ಯುತ್ ತಿದ್ದುಪಡಿ ಕಾಯ್ದೆ ಮೂಲಕ ಅದಕ್ಕೆ ಮತ್ತಷ್ಟು ವೇಗ ನೀಡಲಾಗಿದೆ ಎಂದು ಆರೋಪಿಸಿದರು.

ಪ್ರೀ-ಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ ಹೆಸರಿನಲ್ಲಿ ದೇಶದ ಕೋಟ್ಯಂತರ ಗ್ರಾಹಕರಿಂದ ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಿ ಅದಾನಿ ಹಾಗೂ ಟಾಟಾ ಕಂಪನಿಗಳಿಗೆ ಲಾಭ ಮಾಡಿಕೊಡುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ದೂರಿದರು.

ರೈತ ಮುಖಂಡರಾದ ಈರಣ್ಣ ಕರವೀರಮಠ, ಸಂತೋಷ ಮಠದ, ಪರಶುರಾಮ ವಡ್ಡರ, ಎಸ್.ಪಿ. ಕಾಡಸಿದ್ದೇಶ್ವರಮಠ ಹಾಗೂ ಮಲ್ಲಪ್ಪ ಮಠದ ಮಾತನಾಡಿ, ಖಾಸಗೀಕರಣ ಜಾರಿಯಾದರೆ ಗೃಹ ಜ್ಯೋತಿ, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಗಂಗಾ ಕಲ್ಯಾಣ ಸೇರಿದಂತೆ ಜನಪರ ಯೋಜನೆಗಳು ಅಪಾಯಕ್ಕೆ ಸಿಲುಕಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರ ಖಾಸಗೀಕರಣ ಪ್ರಕ್ರಿಯೆಯಿಂದ ಹಿಂದೆ ಸರಿಯದಿದ್ದರೆ ರಾಜ್ಯಾದ್ಯಂತ ಬಂದ್, ಜೈಲ್ ಭರೋ, ಬಾರ್ಕೋಲ್ ಚಳವಳಿ ಸೇರಿದಂತೆ ವಿವಿಧ ಹೋರಾಟಗಳನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಜುಲೈ 22ರಂದು ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮನವಿ ಸ್ವೀಕರಿಸಿದ ಉಪತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ, ರೈತರ ಬೇಡಿಕೆಗಳನ್ನು ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

“ವಿದ್ಯುತ್ ಖಾಸಗೀಕರಣಗೊಂಡರೆ ರೈತರ ಬದುಕು ಕತ್ತಲಲ್ಲಿ ಮುಳುಗಲಿದೆ. ಸಬ್ಸಿಡಿ ಕಡಿತವಾಗಲಿದೆ, ದರ ಏರಿಕೆಯಾಗಲಿದೆ. ಸರ್ಕಾರ ಜನಪರ ನಿಲುವು ಕೈಬಿಟ್ಟು ಕಾರ್ಪೊರೇಟ್ ಪರ ನಿಂತರೆ ರಾಜ್ಯಾದ್ಯಂತ ಉಗ್ರ ಹೋರಾಟ ಅನಿವಾರ್ಯ.”

— ಶಂಕರಗೌಡ ಜಯನಗೌಡ್ರ, ಜಿಲ್ಲಾ ಅಧ್ಯಕ್ಷರು, ರೈತ ಸಂಘ ಮತ್ತು ಹಸಿರು ಸೇನೆ

ಶಿಕ್ಷಕರ ಹಿತಾಸಕ್ತಿಗಾಗಿ ಶ್ರಮಿಸಿದ ನಾಯಕತ್ವ ಎಲ್ಲರಿಗೂ ಮಾದರಿ : ಬಸವರಾಜ ಬಳ್ಳಾರಿ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುಬ್ಬಳ್ಳಿ ಘಟಕದ ಅಧ್ಯಕ್ಷರು ಹಾಗೂ ಸಂಘಟನಾ ಚತುರರೆಂದೇ ಗುರುತಿಸಿಕೊಂಡಿರುವ ಎಂ.ಎಚ್. ಜಂಗ್ಲಿ ಅವರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಬಸವರಾಜ ವೆಂಕಪ್ಪ ಬಳ್ಳಾರಿ ಅವರು ಜಂಗ್ಲಿಯವರನ್ನು ಸನ್ಮಾನಿಸಿ ಮಾತನಾಡಿ, ಶಿಕ್ಷಕರ ಸಂಘಟನೆ ಹಾಗೂ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಅವರು ಸಲ್ಲಿಸಿರುವ ಸೇವೆ ಅನನ್ಯವಾಗಿದೆ ಎಂದು ಶ್ಲಾಘಿಸಿದರು.

ಜಂಗ್ಲಿಯವರು ತಮ್ಮ ಸೇವಾವಧಿಯಲ್ಲಿ ಶಿಕ್ಷಕರ ಹಿತಾಸಕ್ತಿಗಳ ರಕ್ಷಣೆಗಾಗಿ ನಿರಂತರವಾಗಿ ಶ್ರಮಿಸಿದ್ದು, ಸಂಘಟನಾತ್ಮಕ ಚಟುವಟಿಕೆಗಳ ಮೂಲಕ ಶಿಕ್ಷಕರ ಸಮುದಾಯದ ವಿಶ್ವಾಸ ಗಳಿಸಿದ್ದಾರೆ. ಅವರ ನಿಸ್ವಾರ್ಥ ಸೇವಾ ಮನೋಭಾವ ಹಾಗೂ ನಾಯಕತ್ವ ಗುಣಗಳು ಇತರರಿಗೆ ಮಾದರಿಯಾಗಿವೆ ಎಂದು ಹೇಳಿದರು.

ನಿವೃತ್ತಿ ಜೀವನವು ಜಂಗ್ಲಿಯವರಿಗೆ ಆರೋಗ್ಯ, ನೆಮ್ಮದಿ, ಸಂತೋಷ ಹಾಗೂ ಸಮೃದ್ಧಿಯನ್ನು ತರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ರಾಜು ಕಂಟಿಗೊಣ್ಣವರ, ಪ್ರಲ್ಹಾದ ಗೆಜ್ಜಿ, ಅಮೀರನಾಯಕ, ಮುತ್ತು ಮಲಕಶೆಟ್ಟಿ, ರಾಜು ನರಗುಂದ, ಕರೀಮಸಾಬ ಸುಣಗಾರ, ಎಸ್.ಎಸ್. ಪಾರ್ವತಿಮಠ, ರಾಜಕುಮಾರ ಸೊಪಡ್ಲ, ಎಸ್.ಎಚ್. ಬಾದನಹಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಜಂಗ್ಲಿಯವರಿಗೆ ಶುಭ ಹಾರೈಕೆಗಳನ್ನು ಸಲ್ಲಿಸಿದರು.

“ಶಿಕ್ಷಕರ ಹಕ್ಕುಗಳ ರಕ್ಷಣೆ ಹಾಗೂ ಸಂಘಟನೆಯ ಬಲವರ್ಧನೆಗೆ ಎಂ.ಎಚ್. ಜಂಗ್ಲಿಯವರ ಕೊಡುಗೆ ಗಮನಾರ್ಹವಾಗಿದೆ. ಅವರ ಸೇವೆ ಶಿಕ್ಷಕರ ಸಮುದಾಯಕ್ಕೆ ಸದಾ ಸ್ಮರಣೀಯ.”

– ಬಸವರಾಜ ವೆಂಕಪ್ಪ ಬಳ್ಳಾರಿ, ರಾಜ್ಯ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ

ನೀಟ್ ಹಗರಣಕ್ಕೆ ವಿದ್ಯಾರ್ಥಿಗಳು ಹೊಣೆಗಾರರಲ್ಲ: ಎಂ. ಶಾಂತಿ

0

ವಿಜಯಸಾಕ್ಷಿ ಸುದ್ದಿ, ಗದಗ: ನೀಟ್-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮೂಲ ಆರೋಪಿಗಳನ್ನು ಪತ್ತೆಹಚ್ಚುವ ಬದಲು ವೈದ್ಯಕೀಯ ವಿದ್ಯಾರ್ಥಿಗಳನ್ನೇ ಹೊಣೆಗಾರರನ್ನಾಗಿ ಬಿಂಬಿಸುತ್ತಿರುವ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ನಡೆ ಖಂಡನೀಯ ಎಂದು ಎಐಡಿಎಸ್ಓ (ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್) ಗದಗ ಜಿಲ್ಲಾ ಘಟಕ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಸಂಚಾಲಕಿ ಎಂ. ಶಾಂತಿ, ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಮರುಪರೀಕ್ಷೆ ಘೋಷಣೆಯಾದ ಬಳಿಕ ದೇಶದಲ್ಲಿ ಹಲವಾರು ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಆತ್ಮಹತ್ಯೆ ಪ್ರಕರಣಗಳೂ ವರದಿಯಾಗಿವೆ. ಆದರೂ ಕೇಂದ್ರ ಸರ್ಕಾರ ಈ ಪ್ರಕರಣದಲ್ಲಿ ತನ್ನ ನೈತಿಕ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳದೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲವನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಬದಲು, ಟೆಲಿಗ್ರಾಂ ನಿಷೇಧ ಸೇರಿದಂತೆ ವಿವಿಧ ಕ್ರಮಗಳ ಮೂಲಕ ವಿಷಯವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ದೂರಿದರು.

ಇದೇ ವೇಳೆ, ಕೋಚಿಂಗ್ ಮಾಫಿಯಾದ ಹಿಡಿತದಲ್ಲಿ ಸಿಲುಕಿರುವ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರ, ಇದೀಗ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಅನುಮಾನದ ದೃಷ್ಟಿ ಹರಿಸುತ್ತಿದೆ ಎಂದು ಎಐಡಿಎಸ್ಓ ಟೀಕಿಸಿದೆ.

ನೀಟ್-ಯುಜಿ ಮರುಪರೀಕ್ಷೆಯ ಹಿನ್ನೆಲೆಯಲ್ಲಿ ದೇಶದ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರಜೆ ನೀಡಬಾರದು ಹಾಗೂ ಪರೀಕ್ಷೆಯ ಪಾವಿತ್ರ್ಯ ಕಾಪಾಡುವ ಹೆಸರಿನಲ್ಲಿ ಅವರ ಮೇಲೆ ನಿಗಾ ವಹಿಸಬೇಕು ಎಂದು ಎನ್‌ಎಂಸಿ ಹೊರಡಿಸಿರುವ ಸೂಚನೆ ವಿದ್ಯಾರ್ಥಿ ಸಮುದಾಯವನ್ನು ಅಪರಾಧಿಗಳಂತೆ ಕಾಣುವ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಲಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ಬೃಹತ್ ಕೋಚಿಂಗ್ ಮಾಫಿಯಾದ ಕೈವಾಡವಿರುವುದು ಬಹಿರಂಗ ಸತ್ಯವಾಗಿದ್ದರೂ, ಅದರ ವಿರುದ್ಧ ಕ್ರಮ ಜರುಗಿಸುವ ಬದಲು ವೈದ್ಯಕೀಯ ವಿದ್ಯಾರ್ಥಿಗಳನ್ನು ಗುರಿಯಾಗಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಕುಗ್ಗಿಸುವ ಮತ್ತು ಶಿಕ್ಷಣ ಕ್ಷೇತ್ರದ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುವ ಕ್ರಮವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎನ್‌ಎಂಸಿ ಹೊರಡಿಸಿರುವ ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಜೊತೆಗೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಸಂಪೂರ್ಣ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊತ್ತುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಎಐಡಿಎಸ್ಓ ಆಗ್ರಹಿಸಿದೆ.

“ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ಕೋಚಿಂಗ್ ಮಾಫಿಯಾದ ಕೈವಾಡವಿರುವುದು ಸ್ಪಷ್ಟವಾಗಿದ್ದರೂ, ವೈದ್ಯಕೀಯ ವಿದ್ಯಾರ್ಥಿಗಳನ್ನೇ ಅಪರಾಧಿಗಳಂತೆ ಬಿಂಬಿಸುವುದು ಅತ್ಯಂತ ಖಂಡನೀಯ. ವಿದ್ಯಾರ್ಥಿಗಳ ಮೇಲೆ ಕಣ್ಗಾವಲು ಇಡುವ ಎನ್‌ಎಂಸಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಪ್ರಶ್ನೆ ಪತ್ರಿಕೆ ಸೋರಿಕೆಯ ನೈತಿಕ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊತ್ತುಕೊಳ್ಳಬೇಕು.”

– ಎಂ. ಶಾಂತಿ, ಜಿಲ್ಲಾ ಸಂಚಾಲಕಿ, ಎಐಡಿಎಸ್ಓ ಗದಗ