Home Blog Page 144

Bengaluru Power Cut: ಬೆಂಗಳೂರಿಗರಿಗೆ ಮುಗಿಯದ ‘ಪವರ್’ ಸಮಸ್ಯೆ; ಶನಿವಾರವೂ ಈ ಏರಿಯಾಗಳಲ್ಲಿ ಇರಲ್ಲ ಕರೆಂಟ್!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಶನಿವಾರವೂ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಎಲ್ಲೆಲ್ಲಿ ಪವರ್ ಕಟ್?

ಕೆಎಂಎಫ್, ವೈಎನ್‌ಕೆ ನ್ಯೂ ಟೌನ್ 208, 407 ಬಿ ಸೆಕ್ಟರ್, ಅಲ್ಲಾಳಸಂದ್ರ, ಶಾರದನಗರ, ಜನಪ್ರಿಯ, ಅನ್ರಿಯಾ, ಮಾರುತಿ ನಗರ, ಕೋಗಿಲು, ಬಿ.ಬಿ ರಸ್ತೆ ಯಲಹಂಕ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ.

ಬಾಗಲೂರು ಕ್ರಾಸ್, ವೆಂಕಟಾಲ, ನಿಟ್ಟೆ ಕಾಲೇಜು, ಬಿಎಸ್‌ಎಫ್‌, ಐಎಎಫ್‌, ಇಂಟರ್‌ನ್ಯಾಷನಲ್ ಸ್ಕೂಲ್, ಕಾಗೆನ್ ಅಡ್ಯಾನ್ ಕಾಲೇಜು, ರಾಯಣ್ಣನ ಶಾಲೆ ಪಾಲನಹಳ್ಳಿ, ದ್ವಾರಕಾನಗರ ಇತ್ಯಾದಿ. ಪೂರ್ವಂಕರ ಆರ್‌ಎಂಜೆಡ್ ಗ್ಯಾಲೇರಿಯಾ, ತಿರುಮಲ ನಗರ, ಅಟ್ಟೂರು ಬಡಾವಣೆ 1ನೇ ಅಡ್ಡರಸ್ತೆ- ಯಿಂದ 10ನೇ ಅಡ್ಡರಸ್ತೆ, ಎಸ್ಕಾರ್ಟ್ಸ್ ಬಡಾವಣೆ, ದೊಡ್ಡಬೆಟ್ಟಹಳ್ಳಿ, ಟಿಪ್ಪು ಸರ್ಕಲ್, ಚಿಕ್ಕಬೆಟ್ಟಹಳ್ಳಿ, ಕಾವೇರಿ ಬಡಾವಣೆ, ಗಿರಿಧಾಮನಗರ, ಎಎಂಎಸ್ ಬಡಾವಣೆ, ಡಿಫೆನ್ಸ್‌ ಕಾಲೊನಿ, ಎಂ.ಎಸ್‌. ಪಾಳ್ಯ, ಶಿಕ್ಷಕರ ಕಾಲೊನಿ, ಬಿಇಎಲ್ 6ನೇ ಬ್ಲಾಕ್, ಎಚ್‌ಎಂಟಿ 3ನೇ ಬ್ಲಾಕ್, ಎಚ್‌ಎಂಟಿ 4ನೇ ಬ್ಲಾಕ್ ಹಾಗೂ ಎಚ್‌ಎಂಟಿ 6ನೇ ಬ್ಲಾಕ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಕಲಬುರ್ಗಿ| ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದ ವಿದ್ಯಾರ್ಥಿ ಪ್ರಶ್ನಿಸಿದ್ದಕ್ಕೆ ಮೇಲ್ವಿಚಾರಕರ ಮೇಲೆ ಹಲ್ಲೆ!

0

ಕಲಬುರ್ಗಿ:- ನಗರದ ಡಾ. ಮಾಲಕರೆಡ್ಡಿ ಹೋಮಿಯೋಪಥಿಕ್ ಕಾಲೇಜಿನಲ್ಲಿ ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಸಹಾಯಕ ಪ್ರಾಧ್ಯಾಪಕರ ಮೇಲೆ ವಿದ್ಯಾರ್ಥಿ ಹಲ್ಲೆ ಮಾಡಿರುವ ಘಟನೆ ಜರುಗಿದೆ.

ಸಹಾಯಕ ಪ್ರಾಧ್ಯಾಪಕ ಶಿವರಾಜಕುಮಾರ್​ ಮೇಲೆ ವಿದ್ಯಾರ್ಥಿ ಶಹಬಾಜ್​​ ಎಂಬಾತನಿಂದ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಇಂದು ಡಾ.ಮಾಲಕರೆಡ್ಡಿ ಹೋಮಿಯೋಪಥಿಕ್ ಕಾಲೇಜಿನಲ್ಲಿ ಮಟೇರಿಯಾ ಮೆಡಿಕಾ ವಿಷಯದ ಇಂಟರ್ನಲ್ ಎಕ್ಸಾಮ್​ ನಡೆದಿತ್ತು. ಈ ವೇಳೆ ವಿದ್ಯಾರ್ಥಿ ಶಹಬಾಜ್​ ಮೊಬೈಲ್ ಬಳಸಿಕೊಂಡು ಕಾಪಿ ಮಾಡಲು ಮುಂದಾಗಿದ್ದ. ಇದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರಾಗಿದ್ದ ಸಹಾಯಕ ಪ್ರಾಧ್ಯಾಪಕ ಶಿವರಾಜಕುಮಾರ್​, ಪ್ರಶ್ನಿಸಿ ಉತ್ತರ ಪತ್ರಿಕೆ ಪಡೆದುಕೊಂಡಿದ್ದರು.

ವಿದ್ಯಾರ್ಥಿಯನ್ನು ತಕ್ಷಣವೇ ಪರೀಕ್ಷಾ ಹಾಲ್‌ನಿಂದ ಹೊರಹೋಗುವಂತೆ ಸೂಚಿಸಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿ ತಕ್ಷಣ ಪ್ರಾಧ್ಯಾಪಕ ಶಿವರಾಜಕುಮಾರ್ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ. ಈ ಆಕಸ್ಮಿಕ ಘಟನೆಯಿಂದ ಕೆಲಕಾಲ ಕಾಲೇಜು ಆವರಣದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿತ್ತು.

ಇನ್ನು ವಿದ್ಯಾರ್ಥಿ ಶಹಬಾಜ್ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಅಲ್ಲದೇ ಮುಂದಿನ ಪರೀಕ್ಷೆಗಳಿಗೆ ಅವಕಾಶ ನೀಡದಿರಲು ಕಾಲೇಜು ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ.

ಪೊಲೀಸಪ್ಪನ ಕಿರುಕುಳ ತಾಳಲಾರದೇ ನೇಣಿಗೆ ಕೊರಳೊಡ್ಡಿದ ವಿಧವಾ ಮಹಿಳೆ!

0

ಶಿವಮೊಗ್ಗ:- ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಪೊಲೀಸಪ್ಪನ ಕಾಟ ತಾಳಲಾರದೆ ವಿಧವೆ ಮಹಿಳೆ ವಾಟ್ಸಾಪ್​​ನಲ್ಲಿ ಡೆತ್ ನೋಟ್​ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಸ್ವಾತಿ ಎಂದು ಗುರುತಿಸಲಾಗಿದೆ. ಇನ್ನು ತಂದೆ ಮತ್ತು ತಾಯಿ ಸಾವಿನಿಂದ ಹೆಣ್ಣು ಮಕ್ಕಳ್ಳಿಬ್ಬರು ಅನಾಥವಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಮೃತಳ ಹೆತ್ತವರು ಟಾರ್ಚರ್ ಕೊಟ್ಟ ಪೋಲಿಸ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಮೃತ ಸ್ವಾತಿಗೆ 7 ವರ್ಷಗಳ ಹಿಂದೆ ಮದುವೆಯಾಗಿತ್ತು. ಒಂದು ವಾರದ ಹಿಂದಷ್ಟೇ ಪತಿ ಜಗದೀಶ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಪೊಲೀಸ್ ಮೋಹನ್,​ ಸ್ವಾತಿಗೆ ಫೇಸ್​ಬುಕ್​ನಲ್ಲಿ ಮೆಸೇಜ್ ಮಾಡಿದ್ದ. ಆತನ ಅಕೌಂಟ್​ ಅನ್ನು ಸ್ವಾತಿ ಬ್ಲಾಕ್ ಮಾಡಿದ್ದರು. ಇದಕ್ಕೆ ಕೋಪಗೊಂಡ ಪೋಲಿಸ್ ಬೇರೆ ಅಕೌಂಟ್​ ನಿಂದ ಸ್ವಾತಿ ಬಗ್ಗೆ ಅಪಪ್ರಚಾರ ಮಾಡಿದ್ದ. ಬಳಿಕ ಈತನ ಕಾಟ ತಾಳಲಾರದೆ ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ್ಯೂ ಟೌನ್​​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಡೆತ್ ನೋಟ್ ನಲ್ಲಿ ಏನಿದೆ?

ಅಮ್ಮ ದಯವಿಟ್ಟು ಕ್ಷಮಿಸಿ. ನನ್ನ ಬಗ್ಗೆ ಇಲ್ಲಸಲ್ಲದ ಹಾಗೆ ಮೋಹನ್ ಅಪಪ್ರಚಾರ ಮಾಡಿದ್ದಾರೆ. ನನಗೆ ತಡಿಯುವುದಕ್ಕೆ ಆಗುತ್ತಿಲ್ಲ. ನನ್ನ ಗಂಡ ಸತ್ತಿದು ಫುಲ್ ಡ್ರಿಂಕ್ಸ್ ಮಾಡಿ. ಈ ಮೋಹನ್ ಎನ್ನುವ ಪೊಲೀಸ್ ನನ್ನ ಬಗ್ಗೆ ಜನಗಳ ಹತ್ತಿರ ಏನೇನೋ ಹೇಳಿರುವುದು ನನಗೆ ಈಗ ಬೆಳಿಗ್ಗೆ ವಿಷಯ ಗೊತಾಯ್ತು. ಅವನನ್ನು ಮಾತ್ರ ಸಮ್ಮನೇ ಬಿಡಬೇಡಿ ಎಂದಿದ್ದಾರೆ.

ಅವರು ಯಾರು ಅಂತಾನೆ ನಂಗೆ ಗೊತ್ತಿಲ್ಲ. ಫೇಸ್​ಬುಕ್​ನಲ್ಲಿ ಮೆಸೇಜ್​​ ಮಾಡಿದ್ದರು. ನಾನು ಬ್ಲಾಕ್ ಮಾಡಿದೆ. ಅದೇ ಸಿಟ್ಟಿಗೆ ಏನೇನೋ ಹೇಳಿದ್ದಾರೆ. ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ. ದಯವಿಟ್ಟು ಸ್ವಾರಿ ಅಮ್ಮ ಎಂದು ಬರೆದಿದ್ದಾರೆ.

ಗುಜರಾತ್‌ ನಲ್ಲಿ ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು!

0

ಗುಜರಾತ್‌: ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಜರಾತ್ ವಲ್ಸಾದ್ ಜಿಲ್ಲೆಯ ಕಪ್ರಡಾ ತಾಲ್ಲೂಕಿನಲ್ಲಿ ನಡೆದಿದೆ. ಅತಿ ವೇಗವಾಗಿ ಬಂದ ಸರಕು ಸಾಗಣೆ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಅಪಘಾತದ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಏಳು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಲು ಸೂಚನೆ ನೀಡಿದ್ದಾರೆ.

ಸರ್ಕಾರ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ನೀಡುತ್ತಿಲ್ಲ: ಎನ್. ರವಿಕುಮಾರ್ ಆರೋಪ

0

ಬೆಂಗಳೂರು: ಸರ್ಕಾರಿ ನೌಕರರು, ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲವಾಗಿದೆ. ನಾವು ಅಲ್ಪಸಂಖ್ಯಾತರಿಗೆ, ಮುಸಲ್ಮಾನ ಬಂಧುಗಳಿಗೆ ಮಾತ್ರ ರಕ್ಷಣೆ ಕೊಡುವುದಾಗಿ ರಾಜ್ಯ ಸರಕಾರ ಘೋಷಿಸಲಿ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದರೂ ನಾವೇನೂ ಮಾಡುವುದಿಲ್ಲ ಎಂದು ತಿಳಿಸಿ ಎಂದು ಒತ್ತಾಯಿಸಿದರು. ಇದು ನಮ್ಮ ಸರಕಾರ ಎಂದು ಇವರಿಗೆ ಅನಿಸಿರಬೇಕು ಎಂದು ತಿಳಿಸಿದರು.

ಕರ್ನಾಟಕದಲ್ಲಿ ಹಿಂದೂ ರಾಷ್ಟ್ರೀಯ ನಾಯಕರು, ದೇವಾನುದೇವತೆಗಳ ಭಾವಚಿತ್ರದ ಮೆರವಣಿಗೆ ಮಾಡಬಾರದೆಂದು ಘೋಷಣೆ ಮಾಡಿಬಿಡಿ ಎಂದು ತಿಳಿಸಿದರು. ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಮೆರವಣಿಗೆ ಮಾತ್ರ ಮಾಡಬೇಕೆಂದು ಪ್ರಕಟಿಸಿ ಎಂದು ಹೇಳಿದರು. ಗಣಪತಿ ಉತ್ಸವ, ಶಿವಾಜಿ ಜಯಂತಿ ಬಂದಾಗ ಹೀಗಾಗುತ್ತಿದೆ. ಯಾಕೆ ಕರ್ನಾಟಕ ರಾಜ್ಯದಲ್ಲಿ ಈ ಥರ ತುಷ್ಟೀಕರಣ ಆಗುತ್ತಿದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಡಿ.ಕೆ.ಶಿವಕುಮಾರ್ ಅವರ ಮೈ ಬ್ರದರರ್ಸ್ ಪಾಲಿಸಿಯಿಂದ ಹೀಗಾಗುತ್ತಿದೆ. ಹಾಗಿದ್ದರೆ ಹಿಂದೂಗಳು ನಿಮ್ಮ ಸಹೋದರರಲ್ಲವೇ ಎಂದು ಕೇಳಿದರು. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದಾಗ ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಗಮನ ಸೆಳೆದರು.

ಚಪ್ಪಲಿ ಹೊಲಿದ ಅಣ್ಣಂದಿರು, ನ್ಯಾಯ ಹೊತ್ತ ತಂಗಿ: ಪದ್ಮಾವತಿ ನಾಗಣ್ಣ ಮಾದಿಗರ ಪ್ರೇರಣಾದಾಯಕ ಸಾಧನೆ

0

ದಾಂಡೇಲಿ: ಕುಟುಂಬದ ಆರ್ಥಿಕ ಸಂಕಷ್ಟದ ನಡುವೆ ಬೆಳೆದ ಪದ್ಮಾವತಿ ನಾಗಣ್ಣ ಮಾದಿಗ ಇಂದು ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದು, ಬಡತನದ ವಿರುದ್ಧದ ಹೋರಾಟಕ್ಕೆ ಪ್ರೇರಣಾದಾಯಕ ಉದಾಹರಣೆಯಾಗಿದ್ದಾರೆ.

ತಂದೆಯ ನಿಧನದ ನಂತರ ಅಣ್ಣಂದಿರು ಜೀವನವನ್ನೇ ತಂಗಿಯ ಶಿಕ್ಷಣಕ್ಕೆ ಅರ್ಪಿಸಿದರು. ರಸ್ತೆ ಬದಿಯಲ್ಲಿ ಚಪ್ಪಲಿ ಹೊಲಿಯುತ್ತಾ ಅವಳ ಕನಸಿಗೆ ಬೆಂಬಲ ನೀಡಿದರು.

ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಪದ್ಮಾವತಿ, ಇಂಗ್ಲಿಷ್ ಅಡೆತಡೆಯನ್ನು ಮೀರಿ ಕಾನೂನು ಪದವಿ ಪಡೆದು ನ್ಯಾಯಾಂಗ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿದ್ದಾರೆ.

ಮಾದಿಗ ಸಮುದಾಯದ ಉತ್ತರ ಕನ್ನಡ ಜಿಲ್ಲೆಯ ಮೊದಲ ಮಹಿಳಾ ನ್ಯಾಯಾಧೀಶೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪದ್ಮಾವತಿ, “ಕನ್ನಡ ಮಾಧ್ಯಮದಲ್ಲೂ ದೊಡ್ಡ ಸಾಧನೆ ಸಾಧ್ಯ” ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ.

ಮಂಡ್ಯಕ್ಕೆ ಎರಡು ಕೈಗಾರಿಕೆಗಳನ್ನಾದರೂ ತರುತ್ತೇನೆ; ARAI ಕೇಂದ್ರಕ್ಕೆ ₹1000 ಕೋಟಿ ಹೂಡಿಕೆ ಮಾಡುತ್ತೇವೆ: HDK

0

ಮಂಡ್ಯ: ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ. ಪರಸ್ಪರ ಟೀಕೆ, ದೋಷಾರೋಪ ಮಾಡಿಕೊಳ್ಳುವ ಅಗತ್ಯವೂ ಇಲ್ಲ. ನಾವೆಲ್ಲರೂ ಸೇರಿ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯೋಣ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಆದಿಚುಂಚನಗಿರಿಯಲ್ಲಿ ಶುಕ್ರವಾರ ಪ್ರಖ್ಯಾತ ವಿಜ್ಞಾನಿ ಡಾ. ಎಂ.ಕೆ. ಸೂರಪ್ಪ ಅವರಿಗೆ ಶ್ರೀ ಆದಿಚುಂಚನಗಿರಿ ಕ್ಷೇತ್ರದ ವತಿಯಿಂದ ನೀಡಲಾಗುವ ‘ವಿಜ್ಞಾತಂ 2026’ ಪ್ರಶಸ್ತಿಯನ್ನು ಪ್ರಧಾನ ಮಾಡಿ ಮಾತನಾಡಿದರು.

ವೇದಿಕೆಯ ಮೇಲೆ ಕೂತಿದ್ದ ರಾಜ್ಯದ ಸಚಿವರುಗಳ ಎದುರಿನಲ್ಲಿಯೇ ರಾಜ್ಯದ ಪ್ರಗತಿಯ ಬಗ್ಗೆ ಒತ್ತಿ ಹೇಳಿದ ಸಚಿವರು; ಮಂಡ್ಯ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಮತ್ತಷ್ಟು ಅಭಿವೃದ್ಧಿ ಹೊಂದಬೇಕಾಗಿದೆ. ಪಕ್ಷಾತೀತವಾಗಿ ನನ್ನನ್ನು ಈ ಕ್ಷೇತ್ರದ ಜನರು ಗೆಲ್ಲಿಸಿದ್ದಾರೆ. ಈ ಜನರಿಗೆ ದ್ರೋಹ ಮಾಡುವ ವ್ಯಕ್ತಿ ನಾನಲ್ಲ. ಶ್ರೀ ಕಾಲಭೈರವನ ಸನ್ನಿಧಿಯಲ್ಲಿ, ಗುರು ಸಾನ್ನಿಧ್ಯದಲ್ಲಿ ಹೇಳುತ್ತಿದ್ದೇನೆ. ಮಂಡ್ಯಕ್ಕೆ ಕನಿಷ್ಠಪಕ್ಷ ಎರಡು ಕೈಗಾರಿಕೆಗಳನ್ನಾದರೂ ತರುತ್ತೇನೆ ಎಂದು ಘೋಷಿಸಿದರು.

ಈಗಾಗಲೇ ನಾನು ಘೋಷಣೆ ಮಾಡಿದ್ದೇನೆ. ಮಂಡ್ಯಕ್ಕೆ ₹500 ಕೋಟಿ ವೆಚ್ಚದಲ್ಲಿ ಜಾಗತಿಕ ಮಟ್ಟದ ARAI ಸಂಶೋಧನಾ ಕೇಂದ್ರವನ್ನು ತರಲಾಗುವುದು. ಕೇಂದ್ರ ಬಜೆಟ್‌ʼನಲ್ಲೇ ಯೋಜನೆಗೆ ಹಣ ಮೀಸಲು ಇಡಲಾಗಿದ್ದು, 100 ಎಕರೆ ಜಾಗ ಬೇಕೆಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ.

ಅದಷ್ಟು ಬೇಗ ರಾಜ್ಯ ಸರಕಾರ ಸೂಕ್ತ ಜಾಗವನ್ನು ಕೆಐಎಡಿಬಿ ಯಿಂದ ಗುರುತಿಸಿ ಅಭಿವೃದ್ಧಿ ಮಾಡಿ ನಮಗೆ ಹಸ್ತಾಂತರ ಮಾಡಬೇಕು. ಜನಪ್ರತಿನಿಧಿಗಳಿಗೆ ಜಾಗ ಕೊಡುವ ಅಧಿಕಾರ ಇಲ್ಲ. ಈ ಬಗ್ಗೆ ರಾಜಕೀಯ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವರು ಹೇಳಿದರು.

ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್‌ ಆಫ್ ಇಂಡಿಯಾ (ARAI) ಕೇಂದ್ರಕ್ಕೆ ಕೊನೆಪಕ್ಷ ₹1000 ಕೋಟಿಯನ್ನಾದರೂ ಹೂಡಿಕೆ ಮಾಡಲಾಗುವುದು. ಈ ಯೋಜನೆ ಮಂಡ್ಯದ ಚಿತ್ರಣವನ್ನೇ ಬದಲಿಸಲಿದೆ. ಉದ್ಯೋಗ ಸೃಷ್ಟಿ ಅಷ್ಟೇ ಅಲ್ಲದೆ, ಪರೋಕ್ಷ ಉದ್ಯೋಗಗಳನ್ನು ಭಾರೀ ಪ್ರಮಾಣದಲ್ಲಿ ಸೃಷ್ಟಿಸಿ ದೊಡ್ಡ ಮಟ್ಟದ ಆಟೋ ಇಕೋ ಸಿಸ್ಟಮ್ ಅನ್ನು ಸೃಷ್ಟಿ ಮಾಡುತ್ತದೆ. ಜತೆಗೆ, ಮತ್ತೊಂದು ಕೈಗಾರಿಕೆಯನ್ನು ತರುವ ಬಗ್ಗೆ ನಾನು ನಿಕಟವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಕೇಂದ್ರ ಸಚಿವರು ಹೇಳಿದರು.

ಭ್ರದಾವತಿಯಲ್ಲಿನ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (VSIL) ಪುನಶ್ಚೇತನಕ್ಕೆ ನಾನು ಕೆಲಸ ಮಾಡುತ್ತಿದ್ದೇನೆ. ಉಕ್ಕು ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ನಾನು ದೃಢವಾಗಿ ದುಡಿಮೆ ಮಾಡುತ್ತಿದ್ದೇನೆ.

ಆರಂಭಿಕ ಹಂತದಲ್ಲಿ ಕನಿಷ್ಠ ₹5000 ಕೋಟಿಗಳನ್ನಾದರೂ ಈ ಕಾರ್ಖಾನೆಗೆ ಹೂಡಿಕೆ ಮಾಡಲಾಗುವುದು. ಅನೇಕ ರೀತಿಯ ತಾಂತ್ರಿಕ ಚರ್ಚೆಗಳು ನಡೆಯುತ್ತಿವೆ. ಡಿಪಿಆರ್ ಕೆಲಸ ನಡೆಯುತ್ತಿದೆ. ಹಾಗೆಯೇ ಹೆಚ್ ಎಂಟಿ ಗೂ ಕಾಯಕಲ್ಪ ನೀಡುವ ಉದ್ದೇಶವಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ನಾವು ಗಮನವಿಟ್ಟು ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಸ್ನೇಹಮಯಿ ಕೃಷ್ಣ ಬಂಧನ: ದುರಾಡಳಿತದ ಪರಮಾವಧಿ – ಆರ್. ಅಶೋಕ್ ಆಕ್ರೋಶ

0

ಬೆಂಗಳೂರು: ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಂಧನಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಸ್ನೇಹಮಯಿ ಕೃಷ್ಣ ಬಂಧನ ದುರಾಡಳಿತದ ಪರಮಾವಧಿ. ಕರ್ನಾಟಕದಲ್ಲಿ ಈ ಸರ್ಕಾರ ಎಮರ್ಜೆನ್ಸಿ ಸ್ಥಿತಿ ತಂದಂತಾಗಿದೆ” ಎಂದು ಕಿಡಿಕಾರಿದರು.

ಮುಡಾ ಪ್ರಕರಣದ ವಿರುದ್ಧ ಸ್ನೇಹಮಯಿ ಕೃಷ್ಣ ಹೋರಾಟ ನಡೆಸಿದ್ದರು. ಈ ವಿಚಾರದಲ್ಲಿ ನಾವು ಸಹ ಪಾದಯಾತ್ರೆ ಮಾಡಿದ್ದೇವೆ. ಇದನ್ನು ಸರ್ಕಾರ ಸಹಿಸಿಕೊಳ್ಳಲಾಗದೆ, ನ್ಯಾಯಕ್ಕಾಗಿ ಕೋರ್ಟ್ ಮೂಲಕ ಹೋರಾಟ ನಡೆಸುತ್ತಿರುವ ವ್ಯಕ್ತಿಯನ್ನು ಬಂಧಿಸಿದೆ ಎಂದು ಆರೋಪಿಸಿದರು.

“ಗಾಂಧೀ ಆದರ್ಶಗಳಿಗೆ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ನ್ಯಾಯದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ” ಎಂದು ಆರ್. ಅಶೋಕ್ ಆರೋಪಿಸಿದರು.

ಮುಡಾದ ಮಾಜಿ ಆಯುಕ್ತ ಡಿ.ಬಿ ನಟೇಶ್ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಸೈಬರ್ ಪೊಲೀಸರು ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿರುವುದು ತಿಳಿದುಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಲಕ್ಕುಂಡಿ “ಚಿನ್ನದ ನಿಧಿ” ನಾಟಕ ಬಯಲು: 20 ಲಕ್ಷ ಸುಲಿಗೆ ಪ್ರಕರಣದಲ್ಲಿ ಉತ್ತರಾಖಂಡ ಕಿಂಗ್‌ಪಿನ್ ಬಂಧನ

0

ಗದಗ: ಐತಿಹಾಸಿಕ ಖ್ಯಾತಿಯ ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯ ಮುಚ್ಚುವ ವೇಳೆ 455 ಗ್ರಾಂ ಚಿನ್ನ ಪತ್ತೆಯಾದ ಘಟನೆ ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ 2022ರಲ್ಲಿ ನಡೆದಿದ್ದ ನಿಧಿ ವಂಚನೆ ಪ್ರಕರಣಕ್ಕೆ ಮರುಜೀವ ಸಿಕ್ಕಿದೆ.

ಧಾರವಾಡ ಮೂಲದ ಬಸೀರಾಬೇಗಂ ಅವರು 2022ರಲ್ಲಿ ಗದಗ ಗ್ರಾಮೀಣ ಪೊಲೀಸ್ ಠಾಣೆಗೆ ಸಲ್ಲಿಸಿದ್ದ ದೂರಿನಲ್ಲಿ “ನಿಧಿ ಸಿಕ್ಕಿದೆ” ಎಂದು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಿದ್ದರು. ಆದರೆ ಪ್ರಕರಣ ಪ್ರಗತಿ ಕಾಣದೆ ಉಳಿದಿತ್ತು.

ಇದೀಗ 2026ರ ಫೆಬ್ರವರಿ 11ರಂದು ಸಮಾಜಸೇವಕ ಪೀರಸಾಬ್ ಕೌತಾಳ “ಸರ್ಕಾರಿಗೆ ಸೇರಬೇಕಾದ ನಿಧಿ ಕೆಲವರ ಪಾಲಾಗಿದೆ” ಎಂದು ಮರು ದೂರು ನೀಡಿದರು. ಹಂಡೆಯಲ್ಲಿ ಚಿನ್ನದ ನಾಣ್ಯಗಳಿರುವ ವಿಡಿಯೋ ದೃಶ್ಯಾವಳಿಯನ್ನೂ ಸಲ್ಲಿಸಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ರೋಹನ್ ಜಗದೀಶ್ ಮರು ತನಿಖೆಗೆ ಆದೇಶಿಸಿದರು.

ತನಿಖೆಯಲ್ಲಿ ಉತ್ತರಾಖಂಡ ಮೂಲದ ಹಜರತ್ ಮಾಲ್ವಿ ಬಂಧನವಾಗಿದ್ದು, 2022ರಲ್ಲಿ ಗದಗ ನಗರದಲ್ಲಿ ಹಂಡೆ ಖರೀದಿಸಿ ಅದರಲ್ಲಿ ಗೋಲ್ಡ್ ಬಣ್ಣದ ನಕಲಿ ಬಿಸ್ಕೆಟ್‌ಗಳನ್ನು ಇಟ್ಟು “ಐತಿಹಾಸಿಕ ನಿಧಿ ಪತ್ತೆ” ನಾಟಕವಾಡಿರುವುದು ಬಯಲಾಗಿದೆ. ಲಕ್ಕುಂಡಿ ಗ್ರಾಮದ ಸಣ್ಣ ಬಸಪ್ಪ ಹಾಗೂ ದೊಡ್ಡ ಬಸಪ್ಪರ ಜಮೀನಿನಲ್ಲಿ ನಿಧಿ ಶೋಧ ಮಾಡುವ ನೆಪದಲ್ಲಿ ಪರಿಚಯ ಬೆಳೆಸಿ, ವಿಧಿವಿಧಾನ ಮತ್ತು ಪ್ರಯಾಣ ಖರ್ಚು ಹೆಸರಿನಲ್ಲಿ ಸುಮಾರು 20 ಲಕ್ಷ ರೂ. ಸುಲಿಗೆ ಮಾಡಿದ್ದಾನೆ.

ಪೂರ್ವಯೋಜನೆಯಂತೆ ಹಂಡೆ ಹೂತು ನಂತರ ಪತ್ತೆ ಮಾಡಿದಂತೆ ತೋರಿಸಿ, ಹಣದ ವಿಚಾರದಲ್ಲಿ ಗಲಾಟೆ ಉಂಟಾದಾಗ “ಚಿನ್ನ ಮಣ್ಣಾಗಿದೆ” ಎಂದು ಹೇಳಿ ಪರಾರಿಯಾಗಿದ್ದಾನೆ. ಪ್ರಾಥಮಿಕ ತನಿಖೆ ಪ್ರಕಾರ ದೆಹಲಿ ಹಾಗೂ ಧಾರವಾಡ ಮೂಲದ ಮಹಿಳೆಯರು ಸೇರಿದಂತೆ 8ಕ್ಕೂ ಹೆಚ್ಚು ಮಂದಿ ಮೋಸಕ್ಕೆ ಬಲಿಯಾಗಿದ್ದಾರೆ. ಹಣ ವರ್ಗಾವಣೆ, ವಿಡಿಯೋ ಚಿತ್ರೀಕರಣ ಹಾಗೂ ಸಹಾಯಕರ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.

ಎಸ್ಪಿ ರೋಹನ್ ಜಗದೀಶ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, “ನಿಧಿ ಪತ್ತೆ, ಗುಪ್ತ ಸಂಪತ್ತು” ಹೆಸರಿನಲ್ಲಿ ಸಂಪರ್ಕಿಸಿದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.

ಭಕ್ತರ ಹಣ ದುರ್ಬಳಕೆ ಆರೋಪ: ಹಾಸನಾಂಬೆ ದೀಪಾಲಂಕಾರ ಟೆಂಡರ್ ಮೇಲೆ ಲೋಕಾಯುಕ್ತ ದಾಳಿ

0

ಹಾಸನ: ಇತಿಹಾಸ ನಿರ್ಮಿಸಿದ ಹಾಸನಾಂಬೆ ದೇವಸ್ಥಾನ ಉತ್ಸವ ಇದೀಗ ಅವ್ಯವಹಾರದ ನೆರಳಿಗೆ ಸಿಲುಕಿದೆ. ವಿದ್ಯುತ್ ದೀಪಾಲಂಕಾರ ಟೆಂಡರ್‌ನಲ್ಲಿ ಭಾರೀ ಗೋಲ್ಮಾಲ್ ನಡೆದಿದೆ ಎಂದು ಆರ್‌ಟಿಐ ಕಾರ್ಯಕರ್ತ ಮನು ಆರೋಪಿಸಿದ್ದಾರೆ.

ಲೋಕಾಯುಕ್ತ ಅಧಿಕಾರಿ ಗಾಯಿತ್ರಿ ಮಹಾನಗರ ಪಾಲಿಕೆ ಕಚೇರಿಯಲ್ಲೇ ಅಧಿಕಾರಿಗಳ ವಿಚಾರಣೆ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ನಿಯಮ ಉಲ್ಲಂಘನೆ ಮಾಡಿ ಅನುಭವ ಹೊಂದಿದವರಿಗೆ ಮಾತ್ರ ಆದ್ಯತೆ ಎನ್ನುವ ಶರತ್ತು ಸೇರಿಸಿ, ಎಲ್ಲಾ ಗುತ್ತಿಗೆಗಳನ್ನು ಒಬ್ಬರಿಗೇ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಅರ್ಜಿದಾರರು ಹಲವರಿದ್ದರೂ ಒಬ್ಬನೇ ಗುತ್ತಿಗೆದಾರನಿಗೆ ಅವಕಾಶ ನೀಡಲಾಗಿದೆ. ಖರೀದಿಗಿಂತ ಹೆಚ್ಚಾಗಿ ದುಂದು ವೆಚ್ಚ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ. ದೀಪಾಲಂಕಾರದಲ್ಲೇ 15 ಲಕ್ಷಕ್ಕೂ ಅಧಿಕ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಸರಿಯಾದ ದಾಖಲೆ ಸಲ್ಲಿಸದಿದ್ದರೆ ವರದಿ ಮಾಡಲಾಗುತ್ತದೆ ಎಂದು ಲೋಕಾಯುಕ್ತ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಪ್ರಕರಣವು ರಾಜ್ಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ.

error: Content is protected !!