Home Blog Page 149

ಹುಣಸೂರು ಚಿನ್ನದಂಗಡಿ ದರೋಡೆ ಪ್ರಕರಣ: ಬಿಹಾರದ ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ!

0

ಮೈಸೂರು: ಜಿಲ್ಲೆಯ ಹುಣಸೂರಿನಲ್ಲಿ ನಡೆದ ಭಾರೀ ಚಿನ್ನದಂಗಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಐದು ಜನರಿದ್ದ ಕಳ್ಳರ ಗ್ಯಾಂಗ್, ಹುಣಸೂರಿನ ‘ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್’ ಚಿನ್ನದಂಗಡಿಯಲ್ಲಿ ಸುಮಾರು 7 ಕೆಜಿ ಬಂಗಾರ ಹಾಗೂ ಡೈಮಂಡ್ಸ್‌ನ್ನು ಕೇವಲ ಐದು ನಿಮಿಷಗಳಲ್ಲಿ ದೋಚಿ ಪರಾರಿಯಾಗಿತ್ತು.

ಈ ಪ್ರಕರಣದ ತನಿಖೆಗೆ ಮೈಸೂರು ಜಿಲ್ಲಾ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ಬಿಹಾರ ಮತ್ತು ಕರ್ನಾಟಕ ರಾಜ್ಯಗಳ ಪೊಲೀಸರ ಸಂಯುಕ್ತ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಬಿಹಾರದ ಭಾಗಲ್ಪುರ್ ಜಿಲ್ಲೆಯ ಪಂಕಜ್ ಕುಮಾರ್ ಹಾಗೂ ದರ್ಭಾಂಗ್ ಜಿಲ್ಲೆಯ ಹೃಷಿಕೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಒಂದು ಚಿನ್ನದ ಸರ, ಒಂದು ಉಂಗುರ, ಒಂದು ಲಕ್ಷ ರೂ. ನಗದು, ಚಿನ್ನಾಭರಣ ಸಂಗ್ರಹಿಸುವ ಸ್ಟೋರೇಜ್ ಕೇಸ್ ಹಾಗೂ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಪಂಕಜ್ ಕುಮಾರ್ ಬಿಹಾರ ಪೊಲೀಸರ ಪಟ್ಟಿಯಲ್ಲಿ 16 ವಿವಿಧ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದಾನೆ. ಬಿಹಾರ, ಕರ್ನಾಟಕ, ರಾಜಸ್ಥಾನ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ದರೋಡೆ, ಡಕಾಯಿತಿ ಹಾಗೂ ಕೊಲೆ ಯತ್ನ ಸೇರಿದಂತೆ ಹಲವು ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕಾಗಿ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕಕ್ಕೆ ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನ

0

ಬೆಂಗಳೂರು: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯವು ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. 2024–25ನೇ ಸಾಲಿನಲ್ಲಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿರುವುದಕ್ಕಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ರಾಜ್ಯ ಸರ್ಕಾರವನ್ನು ಅಭಿನಂದಿಸಿದೆ.

ಬೆಂಗಳೂರಿನಲ್ಲಿ ಆಯೋಜಿಸಲಾದ 13ನೇ ರಾಷ್ಟ್ರೀಯ ಸಮ್ಮೇಳನದಲ್ಲಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಗೌರವವು ರಾಜ್ಯದ ರೈತಪರ ನೀತಿಗಳು ಹಾಗೂ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ದೊರೆತ ಮಹತ್ವದ ಮಾನ್ಯತೆಯಾಗಿದೆ.

ರಾಜ್ಯದಲ್ಲಿ ಒಟ್ಟು 27,04,166 ರೈತರು ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದು, ಇವರಲ್ಲಿ 11,85,642 ರೈತರು ವಿಮಾ ಪರಿಹಾರಕ್ಕಾಗಿ ಕ್ಲೇಮ್ ಸಲ್ಲಿಸಿದ್ದಾರೆ. ಈ ಮೂಲಕ ಒಟ್ಟು ₹2,094 ಕೋಟಿ ಮೊತ್ತದ ಪರಿಹಾರ ವಿತರಿಸಲಾಗಿದೆ. ನೈಸರ್ಗಿಕ ವಿಕೋಪಗಳು ಹಾಗೂ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ತಲುಪಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಕೇಂದ್ರ ಕೃಷಿ ಇಲಾಖೆಯು ಕರ್ನಾಟಕ ಸರ್ಕಾರದ ರೈತಪರ ದೃಷ್ಟಿಕೋನ, ಪರಿಣಾಮಕಾರಿ ಆಡಳಿತ ಮತ್ತು ಯೋಜನೆಗಳ ಸಮರ್ಥ ಅನುಷ್ಠಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲಿ ಉತ್ತಮ ಕಾರ್ಯಕ್ಷಮತೆ ಮುಂದುವರಿಸಬೇಕೆಂದು ಶುಭ ಹಾರೈಸಿದೆ.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಮುಂಗಾರು ಬೆಳೆಗೆ ಶೇ. 2 ಮತ್ತು ಹಿಂಗಾರು ಬೆಳೆಗೆ ಶೇ. 1.5 ರಷ್ಟು ಮಾತ್ರ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಉಳಿದ ಪ್ರೀಮಿಯಂ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತವೆ. ಈ ಯೋಜನೆ ರೈತರ ಆದಾಯ ರಕ್ಷಣೆ ಹಾಗೂ ಆರ್ಥಿಕ ಭದ್ರತೆಗೆ ಮಹತ್ವದ ಸಹಕಾರ ನೀಡುತ್ತಿದೆ.

ಮಣ್ಣಿನೊಳಗಿಂದ ಹೊರಬರುತ್ತಿದೆ ಲಕ್ಕುಂಡಿಯ ಮಹಿಮೆ: ಶಿಲ್ಪಗಳೇ ಹೇಳುತ್ತಿವೆ ಸಾವಿರ ವರ್ಷದ ಕಥೆ!

0

ಗದಗ: ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಹೊಸ ಹೊಸ ಪ್ರಾಚೀನ ಅವಶೇಷಗಳು ಪತ್ತೆಯಾಗುತ್ತಿವೆ.

ಲಕ್ಕುಂಡಿ ಕೋಟೆಯ ವೀರಭದ್ರೇಶ್ವರ ದೇವಸ್ಥಾನದ ಸಮೀಪ ಉತ್ಖನನ ಕಾರ್ಯ ನಡೆಯುತ್ತಿದ್ದು, ಈ ವೇಳೆ ಶಿವಲಿಂಗದ ಪಾನಿ ಪೀಠ, ಶಿವಲಿಂಗ ಮೂರ್ತಿ ಹಾಗೂ ಕಲ್ಲಿನಲ್ಲಿ ಕೆತ್ತಿದ ನಾಗರ ಹಾವು ಶಿಲ್ಪ ಪತ್ತೆಯಾಗಿದೆ.

ಇದರೊಂದಿಗೆ ಕೊಡಲಿ ಆಕಾರದ ಪ್ರಾಚ್ಯವಸ್ತುವೂ ಉತ್ಖನನದಲ್ಲಿ ಸಿಕ್ಕಿರುವುದು ಪುರಾತತ್ವ ವಲಯದಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸಿದೆ.

ನಿನ್ನೆ ಸಾಯಂಕಾಲ ಉತ್ಖನನ ವೇಳೆ ಪುರಾತನ ಕಾಲದ ಲೋಹದ ಗಂಟೆ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಇದು ಹಿತ್ತಾಳೆಯಿಂದ ತಯಾರಿಸಿದ ಪುರಾತನ ಗಂಟೆಯಾಗಿರಬಹುದು ಎಂದು ಶಂಕಿಸಲಾಗಿದೆ.

ಸುಮಾರು 35 ಕಾರ್ಮಿಕರು ಅತ್ಯಂತ ಸೂಕ್ಷ್ಮವಾಗಿ ಉತ್ಖನನ ಕಾರ್ಯ ನಡೆಸುತ್ತಿದ್ದು, ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಾರ್ಯಾಚರಣೆ ಮುಂದುವರಿದಿದೆ. ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಉತ್ಖನನ ನಡೆಯುತ್ತಿದೆ. ಉತ್ಖನನ ನಡೆಯುತ್ತಿರುವ ಪಕ್ಕದ ಕೋಟೆ ಗೋಡೆಯಲ್ಲಿಯೇ ಅನೇಕ ಪ್ರಾಚ್ಯವಸ್ತುಗಳು ಹುದುಗಿಕೊಂಡಿರುವುದು ಕಂಡುಬಂದಿದ್ದು, ಲಕ್ಕುಂಡಿಯ ಶಿಲ್ಪಕಲೆಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತಿದೆ. ಒಂದೊಂದು ಶಿಲೆಯೂ ಪುರಾತನ ಕಾಲದ ಕಲಾ ವೈಭವವನ್ನು ಸಾರುತ್ತಿದೆ.

ಈ ಅಪರೂಪದ ಶಿಲ್ಪಕಲೆಗಳು ರಾಜ್ಯದಾದ್ಯಂತ ಜನರಲ್ಲಿ ಕುತೂಹಲ ಹೆಚ್ಚಿಸಿವೆ. ಚಿನ್ನದ ಶ್ರೀಮಂತಿಕೆಯಿಂದ ಮಾತ್ರವಲ್ಲ, ಕಲೆಯ ಶ್ರೀಮಂತಿಕೆಯಿಂದಲೂ ಲಕ್ಕುಂಡಿ ಅಪರೂಪದ ನಾಡು ಎನ್ನುವುದನ್ನು ಈ ಉತ್ಖನನ ಸಾರಿ ಸಾರಿ ಸಾಬೀತು ಮಾಡುತ್ತಿದೆ.

ದಾವಣಗೆರೆ ಕಿರು ಮೃಗಾಲಯದಲ್ಲಿ ನಾಲ್ಕು ಚುಕ್ಕೆ ಜಿಂಕೆಗಳ ಸಾವು!

0

ದಾವಣಗೆರೆ: ದಾವಣಗೆರೆಯ ಆನಗೋಡ ಬಳಿ ಇರುವ ಕಿರು ಮೃಗಾಲಯದಲ್ಲಿ ಕಳೆದ ಮೂರು ದಿನಗಳ ಅವಧಿಯಲ್ಲಿ ನಾಲ್ಕು ಚುಕ್ಕೆ ಜಿಂಕೆಗಳು ಸಾವನ್ನಪ್ಪಿವೆ.

ಹೆಮರಾಜಿಕ್ ಸೆಪ್ಟಿಸೆಮಿಯಾ ಎಂಬ ಸಾಂಕ್ರಾಮಿಕ ರೋಗದಿಂದ ಜಿಂಕೆಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಜನವರಿ 16ರಂದು ಮೊದಲ ಚುಕ್ಕೆ ಜಿಂಕೆ ಸಾವನ್ನಪ್ಪಿದ್ದು, ಮರುದಿನ ಇನ್ನೆರಡು ಜಿಂಕೆಗಳು ಮೃತಪಟ್ಟಿವೆ. ಇದುವರೆಗೆ ಒಟ್ಟು ನಾಲ್ಕು ಚುಕ್ಕೆ ಜಿಂಕೆಗಳ ಸಾವು ಸಂಭವಿಸಿದೆ. ಘಟನೆಯ ಹಿನ್ನೆಲೆ ಮೃಗಾಲಯದಲ್ಲಿ ಕಟ್ಟುನಿಟ್ಟಿನ ಜೈವಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಉಳಿದ ಪ್ರಾಣಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕರ ಪ್ರವೇಶ ಹಾಗೂ ವೀಕ್ಷಣೆಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ತಿಳಿಸಿದ್ದಾರೆ. ಪ್ರಸ್ತುತ ಮೃಗಾಲಯದಲ್ಲಿ 94 ಹೆಣ್ಣು, 58 ಗಂಡು ಹಾಗೂ 18 ಮರಿಗಳು ಸೇರಿದಂತೆ ಒಟ್ಟು 170 ಚುಕ್ಕೆ ಜಿಂಕೆಗಳು ಇವೆ. ಉಳಿದ ಜಿಂಕೆಗಳ ಆರೋಗ್ಯದ ಮೇಲೆ ನಿಕಟ ನಿಗಾ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

12 ವರ್ಷ, ಒಂದೇ ವೇದಿಕೆ: ಬಿಗ್ ಬಾಸ್ ಫಿನಾಲೆಯಲ್ಲಿ ಸುದೀಪ್ ಭಾವನಾತ್ಮಕ ಸಂದೇಶ

ಕನ್ನಡದ ಬಿಗ್ ಬಾಸ್ ಶೋ ಆರಂಭವಾದಾಗಿನಿಂದಲೂ ನಿರಂತರವಾಗಿ ನಿರೂಪಣೆ ಮಾಡುತ್ತಿರುವ ಏಕೈಕ ವ್ಯಕ್ತಿ ಕಿಚ್ಚ ಸುದೀಪ್. ಇದೀಗ ಅವರು 12ನೇ ಸೀಸನ್ ಅನ್ನು ಸಹ ಯಶಸ್ವಿಯಾಗಿ ಮುಗಿಸಿದ್ದಾರೆ.

ಫಿನಾಲೆ ವೇದಿಕೆಯಲ್ಲಿ ಬಿಗ್ ಬಾಸ್ ಸುದೀಪ್‌ಗೆ ವಿಶೇಷ ಧನ್ಯವಾದ ಸಲ್ಲಿಸಿದೆ.
“ಈ ಶೋಗೆ ಜೀವ ತುಂಬಿದವರು ನೀವು. 12 ವರ್ಷಗಳ ಕಾಲ ನಿರಂತರವಾಗಿ ಶೋ ನಡೆಸಿರುವುದು ದಾಖಲೆ. ನೀವು ಈ ವೇದಿಕೆಗೆ ಮಾರ್ಗದರ್ಶಕರಾಗಿದ್ದೀರಿ” ಎಂದು ಬಿಗ್ ಬಾಸ್ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, “ನಾನು ಈ ಶೋ ನಿರಂತರವಾಗಿ ನಡೆಸಲು ಕಾರಣ ಸ್ಪರ್ಧಿಗಳು ನೀಡುವ ಗೌರವ. ಪ್ರೀತಿ ಇಲ್ಲದೆ ಯಾವುದೇ ಸಾಧನೆ ಸಾಧ್ಯವಿಲ್ಲ. ನೀವು ನೀಡುವ ಪ್ರೀತಿ ನನಗೆ ಶಕ್ತಿ” ಎಂದರು.

ತಮ್ಮ ಕೆಲಸದ ಬದ್ಧತೆ ಬಗ್ಗೆ ಮಾತನಾಡಿದ ಅವರು, “ರಾತ್ರಿ 3:30ಕ್ಕೆ ಮನೆಗೆ ಬಂದರೂ ಕೂಡ ನಾನು ಈ ಕೆಲಸವನ್ನು ಕೈಬಿಡಲು ಸಾಧ್ಯವಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಅಷ್ಟು ಜನ ಒಳಗೆ ಕುಳಿತಿದ್ದಾರೆ” ಎಂದು ಹೇಳಿದರು.

“ಈ ವೇದಿಕೆ ಬಹಳ ಶುದ್ಧವಾದದ್ದು. ಇಲ್ಲಿ ಭಾಗವಹಿಸಿದ ಅನೇಕರು ಜೀವನದಲ್ಲಿ ಮುಂದುವರೆದಿದ್ದಾರೆ. ಈ ವೇದಿಕೆಯ ಪ್ರಾಮಾಣಿಕತೆಯೇ ನನ್ನನ್ನು ಇಲ್ಲಿ ನಿಲ್ಲಿಸಿದೆ” ಎಂದು ಹೇಳಿದರು.

ಇದಲ್ಲದೆ, ತಮ್ಮ ತಂಡದ ಪಾತ್ರವನ್ನು ಒಪ್ಪಿಕೊಂಡು, ನಿರ್ದೇಶಕ ಪ್ರಕಾಶ್ ಹಾಗೂ ಸಿಬ್ಬಂದಿಗಳಿಗೆ ಧನ್ಯವಾದ ಸಲ್ಲಿಸಿದರು. ಸುದೀಪ್ ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

 

ಮಗನನ್ನು ಶಾಲೆಗೆ ಬಿಡಲು ಹೋಗ್ತಿದ್ದಾಗ ದುರಂತ; ಕಾಲೇಜು ಬಸ್ ಡಿಕ್ಕಿ ಹೊಡೆದು ತಾಯಿ-ಮಗ ಸಾವು

0

ಬೆಂಗಳೂರು:- ಬೆಂಗಳೂರಿನ ವಿವೇಕನಗರ ಮುಖ್ಯ ರಸ್ತೆಯಲ್ಲಿ ಶಾಲೆಗೆ ಬಿಡಲು ಹೋಗ್ತಿದ್ದಾಗ ಕಾಲೇಜು ಬಸ್ ಡಿಕ್ಕಿಯಾಗಿ ತಾಯಿ, ಮಗ ಸಾವನ್ನಪ್ಪಿರುವ ಘಟನೆ ಜರುಗಿದೆ.

ತಾಯಿ ಸಂಗೀತಾ (37), ಮಗ ಪಾರ್ಥ (8) ಮೃತ ದುರ್ದೈವಿಗಳು. ಇವರು ಆಂಧ್ರ ಮೂಲದವರು. ಸಂಗೀತಾ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡ್ತಿದ್ದರು. ಇಬ್ಬರು ಮಕ್ಕಳಿದ್ದು, ಅದೇ ಶಾಲೆಗೆ ಸೇರಿಸಿದ್ದರು. ಪತಿ ಪ್ರಸಾದ್ ಊರಿನಲ್ಲಿ ವ್ಯವಸಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇಂದು ಬೆಳಿಗ್ಗೆ 6:30ರ ಸುಮಾರಿಗೆ ಮಗನೊಂದಿಗೆ ಶಾಲೆಗೆ ಕೆಲಸಕ್ಕೆ ತೆರಳ್ತಿದ್ದರು. ಈ ವೇಳೆ ರಸ್ತೆ ದಾಟುವಾಗ ಖಾಸಗಿ ಕಾಲೇಜಿನ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲೇ ತಾಯಿ-ಮಗ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅಶೋಕ ನಗರ ಪೊಲೀಸ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬೋರಿಂಗ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಬಿಗ್‌ ಬಾಸ್‌ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ಸಿಕ್ಕ ಹಣವೆಷ್ಟು?

ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯಗೊಂಡಿದ್ದು, 113 ದಿನಗಳ ಕಾಲ ನಡೆದ ಈ ಶೋನಲ್ಲಿ ಗಿಲ್ಲಿ ನಟ ವಿನ್ನರ್ ಆಗಿದ್ದಾರೆ. ಕೋಟ್ಯಂತರ ವೋಟುಗಳೊಂದಿಗೆ ಗೆಲುವು ಸಾಧಿಸಿದ ಗಿಲ್ಲಿ, ಈ ಸೀಸನ್‌ನ ಜನಪ್ರಿಯ ಸ್ಪರ್ಧಿಯಾಗಿದ್ದರು. ರನ್ನರ್ ಅಪ್ ಆಗಿ ಹೊರಹೊಮ್ಮಿದವರು ರಕ್ಷಿತಾ ಶೆಟ್ಟಿ.

ರಕ್ಷಿತಾ ಶೆಟ್ಟಿಯ ಬಿಗ್ ಬಾಸ್ ಪಯಣ ಈ ಸೀಸನ್‌ನ ಪ್ರಮುಖ ಹೈಲೈಟ್ ಆಗಿದೆ. ಅವರು ಬಿಗ್ ಬಾಸ್ ಮನೆಗೆ ಬಂದ ಮೊದಲ ದಿನವೇ ಹೊರಹಾಕಲ್ಪಟ್ಟಿದ್ದರು. ಆದರೆ ಒಂದು ವಾರದ ಬಳಿಕ ಮರು ಎಂಟ್ರಿ ಪಡೆದು, ಯಾವುದೇ ಸಿನಿಮಾ ಅಥವಾ ಸ್ಟಾರ್ ಬ್ಯಾಕ್‌ಗ್ರೌಂಡ್ ಇಲ್ಲದೆ ಫಿನಾಲೆ ವರೆಗೆ ತಲುಪಿದ್ದು ಗಮನಾರ್ಹ ಸಾಧನೆ.

ಫಿನಾಲೆ ವೇಳೆ ಕಿಚ್ಚ ಸುದೀಪ್ ಅವರು ರಕ್ಷಿತಾ ಬಳಿ, “50 ಲಕ್ಷ ಗೆದ್ದರೆ ಏನು ಮಾಡುತ್ತೀರಾ?” ಎಂದು ಪ್ರಶ್ನಿಸಿದರು. ಇದಕ್ಕೆ ರಕ್ಷಿತಾ, “20 ಹಸು ಖರೀದಿ ಮಾಡುತ್ತೇನೆ, ಒಂದು ಹಸುವಿಗೆ 1 ಲಕ್ಷ ರೂಪಾಯಿ” ಎಂದು ಉತ್ತರಿಸಿದ್ದರು. ಈ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ಪಡೆದಿತ್ತು.

ಆದರೆ ರನ್ನರ್ ಅಪ್ ಆಗಿದ್ದರಿಂದ ರಕ್ಷಿತಾಗೆ 50 ಲಕ್ಷ ಸಿಗಲಿಲ್ಲ. ಆದರೂ ಸಹ ಅವರಿಗೆ ಮಹತ್ವದ ಬಹುಮಾನ ದೊರೆತಿದೆ.
ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ 20 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗಿದ್ದು, ಟಿಎ ಶರವಣ ಅವರು ವೇದಿಕೆಗೆ ಬಂದು ಚೆಕ್ ಹಸ್ತಾಂತರಿಸಿದರು.
ಇದಕ್ಕೆ ಜೊತೆಗೆ ಜಾರ್ ಅಪ್ಲಿಕೇಶನ್ ವತಿಯಿಂದ 5 ಲಕ್ಷ ರೂಪಾಯಿ ನಗದು ಬಹುಮಾನವೂ ನೀಡಲಾಯಿತು.

ಒಟ್ಟು 25 ಲಕ್ಷ ರೂಪಾಯಿ ಬಹುಮಾನ ಪಡೆದ ರಕ್ಷಿತಾಗೆ, ಮಧ್ಯಮ ವರ್ಗದ ಕುಟುಂಬದಿಂದ ಬಂದ ವ್ಯಕ್ತಿಯಾಗಿ ಇದು ದೊಡ್ಡ ಬೆಂಬಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಿಗ್ ಬಾಸ್ ಸೀಸನ್ 12ರಲ್ಲಿ ರಕ್ಷಿತಾ ಶೆಟ್ಟಿಯ ಪಯಣ ಕೇವಲ ಆಟವಲ್ಲ, ಅದು ಹೋರಾಟ, ಸಹನೆ ಮತ್ತು ಸಾಧನೆಯ ಕಥೆಯಾಗಿ ಉಳಿದಿದೆ.

ಮಗನ ಮಾರ್ಕ್ಸ್‌ಕಾರ್ಡ್ ತರಲು ಶಾಲೆಗೆ ಹೋದ ತಂದೆ ಕುಸಿದು ಬಿದ್ದು ಸಾವು!

0

ಅಸ್ಸಾಂ: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ನಡುವೆ, ಅಸ್ಸಾಂನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.

ಯುಕೆಜಿಯಲ್ಲಿ ಓದುತ್ತಿದ್ದ ಮಗನ ಮಾರ್ಕ್ಸ್‌ಕಾರ್ಡ್ ಪಡೆಯಲು ಶಾಲೆಗೆ ತೆರಳಿದ್ದ ತಂದೆ, ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ದೀಪಂಕರ್ ಬೋರ್ಡೊಲೊಯ್ (35) ಎಂದು ಗುರುತಿಸಲಾಗಿದೆ. ಅವರು ಅಸ್ಸಾಂನ ಜೋರ್ಹತ್ ಜಿಲ್ಲೆಯ ಸ್ಯಾಮ್‌ಫೋರ್ಡ್ ಶಾಲೆಗೆ ಜನವರಿ 15ರಂದು ಮಗನ ಫಲಿತಾಂಶದ ಮಾರ್ಕ್ಸ್‌ಕಾರ್ಡ್ ತರಲು ತೆರಳಿದ್ದರು. ಕೆಲಸಕ್ಕೆ ಒಂದು ದಿನ ರಜೆ ಹಾಕಿ ಶಾಲೆಗೆ ಬಂದಿದ್ದ ಅವರು, ಮಾರ್ಕ್ಸ್‌ಕಾರ್ಡ್ ಪಡೆದು ಶಾಲೆಯಿಂದ ಹೊರಬರುವಾಗ ಕುಸಿದು ಬಿದ್ದರು.

ಸ್ಥಳದಲ್ಲಿದ್ದ ಶಾಲಾ ಸಿಬ್ಬಂದಿ ಹಾಗೂ ಪೋಷಕರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆಯ ಬಳಿಕ ಶಾಲಾ ಆವರಣದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ.

ದೀಪಂಕರ್ ಬೋರ್ಡೊಲೊಯ್ ಅವರು ಅಸ್ಸಾಂ ಸರ್ಕಾರದ ಟಿಯೋಕ್ ವಿಭಾಗದ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಪತ್ನಿ ಗೃಹಿಣಿ. ಕುಟುಂಬದವರ ಪ್ರಕಾರ, ಅವರಿಗೆ ಹಿಂದೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎನ್ನಲಾಗಿದೆ.

“ಗಿಲ್ಲಿಗೆ ಬಂಪರ್ ಮಳೆ: 50 ಲಕ್ಷ ಕ್ಯಾಶ್, ಕಾರು, ಸುದೀಪ್ ಗಿಫ್ಟ್ – ಬಿಗ್ ಬಾಸ್ ಟ್ರೋಫಿಯಲ್ಲೂ ಕನ್ನಡದ ಹೆಮ್ಮೆ!”

ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಕೊನೆಗೂ ಗ್ರ್ಯಾಂಡ್ ಫಿನಾಲೆಯೊಂದಿಗೆ ತೆರೆ ಬಿದ್ದಿದೆ. ಈ ಬಾರಿ ದಾಖಲೆ ಮತಗಳೊಂದಿಗೆ ಗಿಲ್ಲಿ ನಟ ವಿನ್ನರ್ ಆಗಿ ಹೊರಹೊಮ್ಮಿದ್ದು, ಕೋಟಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ಫೈನಲ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ವಿನ್ನರ್ ಬಹುಮಾನಗಳನ್ನು ಘೋಷಿಸಿದರು. ಗಿಲ್ಲಿ ನಟನಿಗೆ ಟ್ರೋಫಿಯ ಜೊತೆಗೆ 50 ಲಕ್ಷ ರೂ. ನಗದು, ಮಾರುತಿ ಸುಜುಕಿ ಕಂಪನಿಯಿಂದ ಒಂದು ಕಾರು ಹಾಗೂ ಸುದೀಪ್ ಅವರಿಂದ ವೈಯಕ್ತಿಕವಾಗಿ 10 ಲಕ್ಷ ರೂ. ವಿಶೇಷ ಬಹುಮಾನ ಲಭಿಸಿದೆ. ಈ ಮೂಲಕ ಗಿಲ್ಲಿಗೆ ಲಕ್ಕಿ ಬಂಪರ್ ಸಿಕ್ಕಂತಾಗಿದೆ.

ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ವಿವಿಧ ಪ್ರಾಯೋಜಕರಿಂದ ಒಟ್ಟು 25 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ.
ಮೂರನೇ ಸ್ಥಾನ ಪಡೆದ ಅಶ್ವಿನಿ ಗೌಡಗೆ 12 ಲಕ್ಷ ರೂ. ಬಹುಮಾನ ಲಭಿಸಿದೆ.

ಈ ಬಾರಿ ನೀಡಲಾದ ಬಿಗ್ ಬಾಸ್ ಟ್ರೋಫಿಯೂ ವಿಭಿನ್ನವಾಗಿದೆ. ಟ್ರೋಫಿಯಲ್ಲಿ ಕರ್ನಾಟಕದ ಇತಿಹಾಸ ಮತ್ತು ಕನ್ನಡ ಸಂಸ್ಕೃತಿಯ ಪ್ರತೀಕಗಳನ್ನು ಕೆತ್ತಲಾಗಿದೆ. ಆನೆ, ಅರಮನೆ, ದರ್ಪಣ ಸುಂದರಿ, ಮೇಲ್ಭಾಗದಲ್ಲಿರುವ ಬಿಗ್ ಬಾಸ್ ಕಣ್ಣು ಹಾಗೂ ಒಳಭಾಗದಲ್ಲಿರುವ ಕನ್ನಡ ಸಂಖ್ಯೆಗಳ ಕ್ಲಾಕ್ ವಿನ್ಯಾಸ – ಟ್ರೋಫಿಗೆ ವಿಶೇಷ ಗೌರವ ತಂದಿದೆ. ಇದು ಕನ್ನಡತನವನ್ನು ರಾಷ್ಟ್ರಮಟ್ಟಕ್ಕೆ ತೋರಿಸುವ ಪ್ರಯತ್ನವೆಂದು ಮೆಚ್ಚುಗೆ ವ್ಯಕ್ತವಾಗಿದೆ.

ಈ ಸೀಸನ್ ಮೂಲಕ ಬಿಗ್ ಬಾಸ್ ಕೇವಲ ರಿಯಾಲಿಟಿ ಶೋ ಅಲ್ಲ, ಕನ್ನಡಿಗರ ಭಾವನೆಗಳ ಹಬ್ಬ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

ಅಬಕಾರಿ ಇಲಾಖೆಯಲ್ಲಿ 2,500 ಕೋಟಿ ರೂ. ಲಂಚ ಹಗರಣ ನಡೆದಿದೆ; ಆರ್. ಅಶೋಕ್ ಗಂಭೀರ ಆರೋಪ

0

ಬೆಂಗಳೂರು: ಕರ್ನಾಟಕ ಅಬಕಾರಿ ಇಲಾಖೆಯಲ್ಲಿ 2,500 ಕೋಟಿ ರೂ. ಲಂಚ ಹಗರಣ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್, ಈ ಹಗರಣಕ್ಕೆ ನೈತಿಕ ಹೊಣೆ ಹೊತ್ತು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಪರವಾನಗಿಗಳನ್ನು ಹರಾಜು ಮಾಡಲಾಗುತ್ತಿದ್ದು, ಇದರಿಂದ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ. ಇತ್ತೀಚೆಗೆ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯಕ್ 25 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿರುವುದು ಇದಕ್ಕೆ ಸಾಕ್ಷಿ ಎಂದರು.

ಈ ಹಗರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆಗಾರರು ಎಂದು ಹೇಳಿದ ಅಶೋಕ್, ತಿಮ್ಮಾಪುರ ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿಯನ್ನೇ ಹೊಣೆಗಾರರನ್ನಾಗಿ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

error: Content is protected !!