Home Blog Page 154

ನೀಟ್ ಆಕಾಂಕ್ಷಿಗೆ ಮಾದಕದ್ರವ್ಯ ನೀಡಿ ಅತ್ಯಾಚಾರ: ಮಗು ಹುಟ್ಟುತ್ತಿದ್ದಂತೆ ಪತಿ ಪರಾರಿ

0

ಲಕ್ನೋ: 2023ರಲ್ಲಿ ನೀಟ್ ಆಕಾಂಕ್ಷಿಯ ಮೇಲೆ ಮಾದಕದ್ರವ್ಯ ನೀಡಿ ಅತ್ಯಾಚಾರ ನಡೆಸಿದ ಪ್ರಕರಣ ಇದೀಗ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಗರ್ಭಿಣಿಯಾಗಿರುವುದು ತಿಳಿದ ಬಳಿಕ ಆರೋಪಿಯು ದೇವಸ್ಥಾನದಲ್ಲಿ ಮದುವೆಯಾಗಿದ್ದರೂ, ಮಗಳು ಜನಿಸಿದ ತಕ್ಷಣ ಪತ್ನಿಯನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ನೀಟ್ ಪರೀಕ್ಷೆಗಾಗಿ ಲಕ್ನೋಗೆ ಬಂದಿದ್ದ ಯುವತಿ ಗೋಮತಿ ನಗರದಲ್ಲಿ ವಾಸವಿದ್ದು, ತರಬೇತಿ ಕೇಂದ್ರಕ್ಕೆ ಹಾಜರಾಗುತ್ತಿದ್ದರು. ಈ ವೇಳೆ ಕ್ಯಾಬ್ ಚಾಲಕ ಆದಿತ್ಯ ಯಾದವ್ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿತು. ಒಂದು ದಿನ ಆತ ಹೋಟೆಲ್ ಕೋಣೆಗೆ ಕರೆದೊಯ್ದು ಚಹಾದಲ್ಲಿ ಮಾದಕದ್ರವ್ಯ ಬೆರೆಸಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಪರಿಣಾಮವಾಗಿ ಯುವತಿ ಗರ್ಭಿಣಿಯಾಗಿದ್ದರು.

ಗರ್ಭದ ವಿಚಾರ ತಿಳಿದ ಬಳಿಕ ಆದಿತ್ಯ ಯಾದವ್ ಮದುವೆಯಾಗುವುದಾಗಿ ಹೇಳಿ, ಚಂದ್ರಿಕಾ ದೇವಿ ದೇವಸ್ಥಾನದಲ್ಲಿ ತನ್ನ ಇಬ್ಬರು ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದಾನೆ. ಆದರೆ ಪತ್ನಿಯನ್ನು ತನ್ನ ಕುಟುಂಬಕ್ಕೆ ಪರಿಚಯಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಗಳು ಜನಿಸಿದ ನಂತರ ಆರೋಪಿಯು ಪತ್ನಿಯನ್ನು ಬಾಡಿಗೆ ಮನೆಯಲ್ಲಿ ಇರಿಸಿ ಮೂರು ದಿನ ಗಂಡನಂತೆ ಇದ್ದು, ಔಷಧಿ ತರಲು ಹೋಗುತ್ತೇನೆಂದು ಹೇಳಿ ಮನೆ ಬಿಟ್ಟಿದ್ದಾನೆ. ನಂತರ ಫೋನ್ ನಂಬರ್ ಬದಲಾಯಿಸಿ ಸಂಪರ್ಕ ಕಡಿತಗೊಳಿಸಿದ್ದಾನೆ. ಸ್ನೇಹಿತರ ಮೂಲಕ ಸಂಪರ್ಕಿಸಿದಾಗ “ನೀನು ಮತ್ತು ನಿನ್ನ ಮಗಳು ಬದುಕಲು ಅರ್ಹರಲ್ಲ” ಎಂದು ಹೇಳಿದ್ದಾನೆಂದು ಮಹಿಳೆ ಆರೋಪಿಸಿದ್ದಾರೆ.

ಈ ಕುರಿತು ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣದ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Gadag Breaking: ಆಕಸ್ಮಿಕವಾಗಿ ಜೋಡೆತ್ತುಗಳ ಸಾವು, ರೈತನ ಆಕ್ರಂದನ

0

ಗದಗ: ಆಕಸ್ಮಿಕವಾಗಿ ಜೋಡೆತ್ತುಗಳು ಸಾವನ್ನಪ್ಪಿದ ದುರ್ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಾಮೇನಹಳ್ಳಿ ಗ್ರಾಮದ ವೆಂಕಟೇಶ ಬಾಗಲಿ ಅವರಿಗೆ ಸೇರಿದ ಎರಡು ಎತ್ತುಗಳನ್ನು ಮನೆಯ ಪಕ್ಕದಲ್ಲೇ ಕಟ್ಟಲಾಗಿತ್ತು. ಸುಮಾರು ₹1 ಲಕ್ಷ 20 ಸಾವಿರ ಖರ್ಚು ಮಾಡಿ ಇತ್ತೀಚೆಗೆ ಎತ್ತುಗಳನ್ನು ಖರೀದಿಸಿದ್ದರು.

ಏಕಾಏಕಿ ಎರಡು ಎತ್ತುಗಳು ಸಾವನ್ನಪ್ಪಿರುವುದು ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದೆ. ಮನೆಯ ಮಕ್ಕಳಂತೆ ಸಾಕಿದ್ದ ಎತ್ತುಗಳ ಸಾವು ಕಂಡು ವೆಂಕಟೇಶ ಹಾಗೂ ಕುಟುಂಬದವರು ಗೋಳಾಡುತ್ತಿದ್ದಾರೆ. ಜೀವನೋಪಾಯಕ್ಕೆ ಅವಲಂಬನೆಯಾಗಿದ್ದ ಜೋಡೆತ್ತುಗಳ ಸಾವು ರೈತನಿಗೆ ಭಾರೀ ಆರ್ಥಿಕ ನಷ್ಟ ಉಂಟುಮಾಡಿದೆ.

ಸರ್ಕಾರ ತಕ್ಷಣ ಪರಿಹಾರ ನೀಡಿ ನೆರವಿಗೆ ಬರಬೇಕು ಎಂದು ರೈತ ವೆಂಕಟೇಶ ಒತ್ತಾಯಿಸಿದ್ದಾರೆ. ಘಟನೆಯ ಕುರಿತು ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸುವ ನಿರೀಕ್ಷೆಯಿದೆ.

ಲಿಂಗಾಯತ–ಗಾಣಿಗ ಪರಸ್ಪರ ಪ್ರತ್ಯೇಕವಲ್ಲ, ಗಾಣಿಗವು ಲಿಂಗಾಯತ ಒಳಗಿನ ವಿಶಿಷ್ಟ ವೃತ್ತಿಜಾತಿ: ಹೈಕೋರ್ಟ್

0

ಬೆಂಗಳೂರು: ಲಿಂಗಾಯತ ಮತ್ತು ಗಾಣಿಗ ಎಂಬುದು ಕಾನೂನಿನಲ್ಲಿ ಪರಸ್ಪರ ಪ್ರತ್ಯೇಕ ಗುರುತಾಗಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಆದರೆ ವಿಶಾಲವಾದ ಲಿಂಗಾಯತ ಗುಂಪಿನೊಳಗೆ ಗಾಣಿಗವು ಒಂದು ವಿಭಿನ್ನ ವೃತ್ತಿಪರ ಜಾತಿಯಾಗಿ ಅಸ್ತಿತ್ವದಲ್ಲಿರಬಹುದು ಎಂದು ನ್ಯಾಯಾಲಯ ತಿಳಿಸಿದೆ.

ಮೇಲಿನ ಅಭಿಪ್ರಾಯವನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೀಡಿದ್ದ ಜಾತಿ ಪ್ರಮಾಣ ಪತ್ರದ ಅರ್ಜಿಯನ್ನು ಪೊಲೀಸ್ ಕಾನ್ಸ್ಟೇಬಲ್ ಟಿ.ಎನ್. ಜಗದೀಶ್ ವಜಾಗೊಳಿಸುವಾಗ ಪ್ರಕಟಿಸಿದೆ.

ನ್ಯಾಯಾಲಯವು ಹೇಳಿರುವಂತೆ, ಪೂರ್ವಜರ ದಾಖಲೆಗಳಲ್ಲಿಲಿಂಗಾಯತಎಂದು ವಿವರಿಸಲಾದ ವ್ಯಕ್ತಿಯು, ಪುರಾವೆಗಳ ಆಧಾರದ ಮೇಲೆ, ಅದರೊಳಗೆ ಗಾಣಿಗ ಗುರುತನ್ನು ಸ್ಥಾಪಿಸಬಹುದು. ಲಿಂಗಾಯತ ಮತ್ತು ಗಾಣಿಗರು ಪರಸ್ಪರ ಪ್ರತ್ಯೇಕತೆ ಹೊಂದಿಲ್ಲ, ಆದರೆ ಗಾಣಿಗವು ಲಿಂಗಾಯತ ಸಮುದಾಯದೊಳಗಿನ ವಿಶಿಷ್ಟ ವೃತ್ತಿಪರ ಜಾತಿಯಾಗಿದೆ.

ಒಬ್ಬ ವ್ಯಕ್ತಿ ಧಾರ್ಮಿಕ ಸಂಬಂಧದಿಂದ ಲಿಂಗಾಯತವಾಗುತ್ತಾನೆ ಹಾಗೂ ಜಾತಿ ವರ್ಗೀಕರಣದಿಂದ ಗಾಣಿಗರಾಗಬಹುದು. ಆದರೆ ಗಾಣಿಗರು ಎಲ್ಲ ಲಿಂಗಾಯತರಿಗೆ ಅನಿವಾರ್ಯವಾಗಿ ಅನ್ವಯಿಸುವುದಿಲ್ಲ. ಗುರುತುಗಳ ಸಹಬಾಳ್ವೆ ಕಾನೂನಿನ ಅನುಮತಿಗಳ ವಿಷಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯವು, ಪ್ರತಿವಾದಿ ರಾಜಕುಮಾರ್ ವೈ. ಬಿಳಗಿ ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ಪಿಎಸ್ಐ ಆಗಿ ಸಾರ್ವಜನಿಕ ಉದ್ಯೋಗದಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ, ಅವರ ನೇಮಕಾತಿಯ ಸಿಂಧುತ್ವವನ್ನು ಒಪ್ಪಿಕೊಂಡಿದೆ.

ಸಾಕು ಮಗ, ಸಹೋದರಿಯಿಂದಲೇ ಮಹಿಳೆಯ ಕೊಲೆ: ಕಾರಣವೇನು?

0

ತುಮಕೂರು: ತುರುವೇಕೆರೆ ಬಿಇಒ ಕಚೇರಿಯ ಎಫ್ಡಿಎ ಜಯಲಕ್ಷ್ಮೀ ಅವರ ಹತ್ಯೆ ಪ್ರಕರಣ ತುಮಕೂರು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಚಿಕ್ಕನಾಯಕನಹಳ್ಳಿಯ ಜೋಗಿಹಳ್ಳಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಸಹೋದರಿ ಅನುಸೂಯಾ ಮತ್ತು ಸಾಕು ಮಗ ಚಂದ್ರಶೇಖರ್ ಬಂಧಿತರಾಗಿದ್ದಾರೆ.

ಮೊದಲಿಗೆ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ತಿಳಿಸಲಾಗಿತ್ತು. ಆದರೆ ಶ್ರೀನಿವಾಸ್ ಎಂಬಾತ ಅನುಮಾನ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ತಿರುವು ಪಡೆದುಕೊಂಡಿತು. ಮರಣೋತ್ತರ ಪರೀಕ್ಷೆಯ ನಂತರ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ.

ಜಯಲಕ್ಷ್ಮೀ ಗಂಡನನ್ನು ಕಳೆದುಕೊಂಡ ಬಳಿಕ ಶ್ರೀನಿವಾಸ್ ಜೊತೆ ಕಳೆದ 20 ವರ್ಷಗಳಿಂದ ವಾಸಿಸುತ್ತಿದ್ದರು. ಮಕ್ಕಳಿಲ್ಲದ ಕಾರಣ ಸಹೋದರಿಯ ಮಗನನ್ನು ದತ್ತು ಪಡೆದಿದ್ದರು. ಇತ್ತೀಚೆಗೆ ತುರುವೇಕೆರೆಯಲ್ಲಿ ಹೊಸ ಮನೆಗೆ ಹೋಗುವ ನಿರ್ಧಾರ ಮಾಡಿದ್ದು, ಬಾಡಿಗೆ ಮನೆಗೆ ಮುಂಗಡ ಹಣ ನೀಡಿದ್ದರು. ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆರೋಪಿಗಳು ಕೊಲೆಗೈದಿರಬಹುದೆಂದು ಶಂಕಿಸಲಾಗಿದೆ.

ಕೊಲೆ ಹಿಂದೆ ಆರ್ಥಿಕ ಲಾಭ ಮತ್ತು ಅನುಕಂಪದ ಆಧಾರಿತ ಸರ್ಕಾರಿ ನೌಕರಿ ಪಡೆಯುವ ಉದ್ದೇಶ ಇರಬಹುದೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವೈದ್ಯರಿಲ್ಲದೆ ಹೆರಿಗೆ ಮಾಡಿದ ನರ್ಸ್‌ಗಳು: ಸಿಂದಗಿಯಲ್ಲಿ ಬಾಣಂತಿ–ನವಜಾತ ಶಿಶು ಸಾವು, ಕುಟುಂಬಸ್ಥರ ಆಕ್ರೋಶ

0

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಹೆರಿಗೆ ನಡೆದ ಪರಿಣಾಮ ಬಾಣಂತಿ ಮತ್ತು ನವಜಾತ ಶಿಶು ಮೃತಪಟ್ಟಿರುವ ಘಟನೆ ಆಕ್ರೋಶಕ್ಕೆ ಕಾರಣವಾಗಿದೆ.

ಢವಳಾರ ಗ್ರಾಮದ ಮೈತ್ರಾ ಅವರನ್ನು ಮೊದಲು ಯಂಕಂಚಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಸಿಂದಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಯಿತು. ಕುಟುಂಬದವರ ಆರೋಪದಂತೆ, ಅಲ್ಲಿ ವೈದ್ಯರು ಲಭ್ಯವಿರಲಿಲ್ಲ. ನರ್ಸ್‌ಗಳೇ ಹೆರಿಗೆ ಮಾಡಿಸಿದ ವೇಳೆ ನವಜಾತ ಗಂಡು ಶಿಶು ಸಾವನ್ನಪ್ಪಿದೆ.

ಹೆರಿಗೆಯ ಬಳಿಕ ಮೈತ್ರಾಗೆ ಭಾರೀ ರಕ್ತಸ್ರಾವ ಉಂಟಾಗಿ ಸ್ಥಿತಿ ಗಂಭೀರಗೊಂಡಿತ್ತು. ತಕ್ಷಣ ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಲಾದರೂ, ಮಾರ್ಗಮಧ್ಯೆ ಅಂಬ್ಯುಲೆನ್ಸ್‌ನಲ್ಲೇ ಅವರು ಮೃತಪಟ್ಟಿದ್ದಾರೆ.

“ವೈದ್ಯರು ಕರ್ತವ್ಯದಲ್ಲಿದ್ದರೆ ನಮ್ಮ ಮಗಳು ಮತ್ತು ಮೊಮ್ಮಗ ಉಳಿಯುತ್ತಿದ್ದರು” ಎಂದು ಪೋಷಕರು ಕಣ್ಣೀರಿನಿಂದ ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿ ಆರೋಗ್ಯ ಇಲಾಖೆ ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಜಿಲ್ಲಾ ವೈದ್ಯಾಧಿಕಾರಿ ಸಂಪತ್ ಕುಮಾರ್, ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ರಕ್ತ, ರೌದ್ರ, ಡಬಲ್ ರೋಲ್: ‘ಟಾಕ್ಸಿಕ್’ ಟೀಸರ್‌ನಲ್ಲಿ ಯಶ್ ಅಬ್ಬರ

ಟಾಕ್ಸಿಕ್ ಚಿತ್ರದ ಹೊಸ ಟೀಸರ್ ಬಿಡುಗಡೆಯಾಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಯಶ್ ರಾ ಲುಕ್ ಮತ್ತು ಆ್ಯಕ್ಷನ್ ಅವತಾರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಕಿಕ್ ಕೊಟ್ಟಿದೆ.

ಟೀಸರ್‌ನಲ್ಲಿ ದ್ವಿಪಾತ್ರದ ಸುಳಿವು ಸಿಕ್ಕಿದ್ದು, ಯಂಗ್ ಲುಕ್‌ನಲ್ಲಿ ಕಾಣಿಸಿಕೊಂಡ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿದೆ. ರಾಯನ ಮಗನಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಹರಿದಾಡುತ್ತಿದೆ. ಟೀಸರ್‌ನಲ್ಲಿ ಸಾಕಷ್ಟು ರಕ್ತಪಾತದ ದೃಶ್ಯಗಳು ಇದ್ದು, ಯಶ್ ಸಂಪೂರ್ಣ ವೈಲೆಂಟ್ ಮೋಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

“ಈ ಸಲ ಯುದ್ಧನೇ ಬೇರೆ” ಎಂಬ ಡೈಲಾಗ್ ಚಿತ್ರದ ಟೋನ್ ಅನ್ನು ಸ್ಪಷ್ಟಪಡಿಸಿದೆ. “ಹಠ ಬಿಡೋ ಮಾತೇ ಇಲ್ಲ” ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ಧುರಂದರ್ 2 ವಿರುದ್ಧದ ಸಂದೇಶ ಎಂದು ಹೇಳಲಾಗುತ್ತಿದೆ.

ಹಿಂದಿನ ಟೀಸರ್‌ನಲ್ಲಿ ಲೈಂಗಿಕ ದೃಶ್ಯ ತೋರಿಸಿದ ಹಿನ್ನೆಲೆ ವಿವಾದ ಉಂಟಾಗಿತ್ತು. ದೂರು ದಾಖಲಾಗಿದ್ದರೂ ಚಿತ್ರದ ಹೈಪ್ ಕಡಿಮೆಯಾಗಲಿಲ್ಲ. ಮೊದಲ ಟೀಸರ್ 100 ಮಿಲಿಯನ್ ವೀಕ್ಷಣೆ ಗಳಿಸಿತ್ತು. ಈಗಿನ ಟೀಸರ್ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ.

ಚಿತ್ರಕ್ಕೆ ಗೀತು ಮೋಹನ್ದಾಸ್ ನಿರ್ದೇಶನ ಮಾಡಿದ್ದು, ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ಯಶ್ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಿಯಾರಾ ಅಡ್ವಾಣಿ, ನಯನತಾರಾ ಹಾಗೂ ಹುಮಾ ಖುರೇಶಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಾರ್ಚ್ 19ರಂದು ಸಿನಿಮಾ ಬಿಡುಗಡೆಯಾಗಲಿದೆ.

ಇಂದು ರಾಮನಗರಕ್ಕೆ ವಿಸಿಟ್ ಕೊಡಲಿದ್ದಾರೆ ಸಚಿವೆ ನಿರ್ಮಲಾ ಸೀತಾರಾಮನ್!

0

ರಾಮನಗರ:- ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಂದು ರಾಮನಗರ ಜಿಲ್ಲೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಕೊಡಲಿದ್ದಾರೆ.

ಇಂದು ಬೆಳಗ್ಗೆ 11ಕ್ಕೆ ಬೆಂಗಳೂರಿನಿಂದ ರಸ್ತೆ ಮೂಲಕ ರಾಮನಗರ ತಾಲೂಕಿನ ಬನ್ನಿಕುಪ್ಪೆ ಗ್ರಾಮಕ್ಕೆ ಭೇಟಿ ನೀಡಿ, ನೂತನವಾಗಿ ನಿರ್ಮಾಣವಾಗುತ್ತಿರುವ ವೇದವಿದ್ಯಾ ವಿಹಾರ ಗುರುಕುಲದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಮಧ್ಯಾಹ್ನ 1ಕ್ಕೆ ಮತ್ತೆ ವಾಪಸ್ಸಾಗಲಿದ್ದಾರೆ.

ವೇದವಿದ್ಯಾ ವಿಹಾರ ಗುರುಕುಲದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಹ್ವಾನಿತರಿಗಷ್ಟೇ ಪ್ರವೇಶಕ್ಕೆ ಅವಕಾಶವಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.

‘ನಾನು ಇನ್ನು ಸುಮ್ಮನಿರುವುದಿಲ್ಲ’: ನಟ ಗೋವಿಂದ ವಿರುದ್ಧ ಮತ್ತೆ ಮಾತಾಡಿದ ಸುನೀತಾ

ನಟ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ನಡುವಿನ ವೈವಾಹಿಕ ಬಿಕ್ಕಟ್ಟು ಮತ್ತೆ ಚರ್ಚೆಗೆ ಗ್ರಾಸವಾಗಿದೆ. ವಿವಾಹೇತರ ಸಂಬಂಧದ ಆರೋಪದ ಬಳಿಕ, ಗೋವಿಂದ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದರು. ಆದರೆ ಇದೀಗ ಸುನೀತಾ ಮತ್ತೊಮ್ಮೆ ವ್ಲಾಗ್ ಮೂಲಕ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ.

“ನಾನು ಯಾವಾಗಲೂ ಸತ್ಯವನ್ನೇ ಹೇಳುತ್ತೇನೆ. ನನ್ನ ಮುಗ್ಧತೆಯನ್ನು ಬಳಸಿಕೊಂಡು ಹಲವರು ಲಾಭ ಪಡೆದಿದ್ದಾರೆ. ಆದರೆ ಈಗ ನಾನು ಬದಲಾಗಿದ್ದೇನೆ. ನನ್ನದೇ ಆದ ಗುರುತನ್ನು ನಿರ್ಮಿಸಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.

“ಗೋವಿಂದ ಬದಲಾದರೆ ನಾನು ಅವನನ್ನು ಕ್ಷಮಿಸಲು ಸಿದ್ಧಳಿದ್ದೇನೆ. ಆದರೆ ಪ್ರತಿಯೊಂದಕ್ಕೂ ಒಂದು ವಯಸ್ಸು ಇದೆ. ಯೌವನದಲ್ಲಿ ನಾನು ಸಹ ಜೀವನವನ್ನು ಆನಂದಿಸಿದ್ದೇನೆ. ಆದರೆ ಈಗ ಸ್ಥಿರತೆ ಮತ್ತು ಗೌರವ ಬೇಕು” ಎಂದು ಹೇಳಿದ್ದಾರೆ.

ಗೋವಿಂದ ಸ್ಪಷ್ಟ ಉತ್ತರ ನೀಡುತ್ತಿಲ್ಲ ಎಂದು ಸುನೀತಾ ಆರೋಪಿಸಿದ್ದಾರೆ. “ಅವನು ನಗುವ ಮೂಲಕ ವಿಷಯ ತಪ್ಪಿಸುತ್ತಾನೆ. ಅವನ ಸಹವಾಸವೂ ಒಳ್ಳೆಯದಲ್ಲ. ಯಾರೊಂದಿಗಾದರೂ ಸಂಬಂಧ ಹೊಂದಿದ್ದರೆ ಏನಾಗುತ್ತದೆ ಎಂದು ನಾನು ಮೊದಲೇ ಹೇಳಿದ್ದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

40 ವರ್ಷಗಳ ಸಂಬಂಧ ಒಂದು ದಿನದಲ್ಲಿ ಮುರಿಯುವುದಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದರೂ, ಮುಂದಿನ ದಿನಗಳಲ್ಲಿ ಗೌರವ ಮತ್ತು ಸ್ಪಷ್ಟತೆ ಬೇಕೆಂದು ಸುನೀತಾ ಸ್ಪಷ್ಟಪಡಿಸಿದ್ದಾರೆ.

ಕೆಎಂಎಫ್‌ನಿಂದ ಮಾಸ್ಟರ್ ಪ್ಲ್ಯಾನ್; ನಂದಿನಿ ನಕಲಿ ತುಪ್ಪದ ಹಾವಳಿ ತಡೆಗೆ ಬರ್ತಿದೆ QR ಸ್ಕ್ಯಾನ್!

0

ಬೆಂಗಳೂರು: ರಾಜ್ಯದ ಹೆಮ್ಮೆಯ ನಂದಿನಿ ಉತ್ಪನ್ನಗಳ ಸುರಕ್ಷತೆಯನ್ನು ಹೆಚ್ಚಿಸಲು ಕೆಎಂಎಫ್ ಹೊಸ ಯೋಜನೆ ಜಾರಿಗೆ ತಂದಿದೆ.

ನಕಲಿ ಉತ್ಪನ್ನಗಳ ಹಾವಳಿಗೆ ಬ್ರೇಕ್ ಹಾಕಲು ತುಪ್ಪದ ಪ್ಯಾಕೆಟ್ ಮತ್ತು ಬಾಟಲ್‌ಗಳಲ್ಲಿ QR ಕೋಡ್ ಅಳವಡಿಸಲಾಗಿದೆ. ಗ್ರಾಹಕರು ಕೋಡ್ ಸ್ಕ್ಯಾನ್ ಮಾಡಿದರೆ, OTP ಮೂಲಕ ಉತ್ಪನ್ನದ ಸಂಪೂರ್ಣ ಮಾಹಿತಿ (ತಯಾರಿಕಾ ಸ್ಥಳ, ದಿನಾಂಕ, ಮಾರ್ಕೆಟ್ ಕೋಡ್) ತಮ್ಮ ಫೋನ್‌ನಲ್ಲಿ ಪಡೆಯಬಹುದು. ಈ ಕ್ರಮವು ನಂದಿನಿ ಬ್ರ್ಯಾಂಡ್ ಶ್ರೇಣಿಯನ್ನು ಕಾಪಾಡಲು ಹಾಗೂ ನಕಲಿ ಉತ್ಪನ್ನ ತಡೆಗೆ ಸಹಕಾರಿ ಆಗಲಿದೆ.

ಹಂತ ಹಂತವಾಗಿ ಇತರ ಉತ್ಪನ್ನಗಳ ಮೇಲೆಯೂ ಈ ವ್ಯವಸ್ಥೆಯನ್ನು ಜಾರಿಗೆ ತರಲು ಕೆಎಂಎಫ್ ಯೋಚನೆ ಮಾಡುತ್ತಿದೆ ಎನ್ನಲಾಗಿದೆ.

ಪ್ರಿಯಕರನಿಗಾಗಿ ಕೆಲಸ ಮಾಡುತ್ತಿದ್ದ ಮನೆಗೆ ಕನ್ನ; ಖತರ್ನಾಕ್ ಆಂಟಿ ಅರೆಸ್ಟ್!

0

ಬೆಂಗಳೂರು: ಪ್ರಿಯಕರನ ಸಾಲ ತೀರಿಸೋಕೆ ತಾನೂ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಮಹಿಳೆಯೋರ್ವಳು ಚಿನ್ನಾಭರಣ ದೋಚಿರುವ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುಸಾಪಾಳ್ಯದಲ್ಲಿ ಜರುಗಿದೆ.

ಪ್ರಮೀಳಾ ಬಂಧಿತ ಆರೋಪಿತೆ. ಆಕೆಯ ಪ್ರಿಯಕರನನ್ನು ಸುಧಾಕರ್ ಎಂದು ಗುರುತಿಸಲಾಗಿದೆ. ಚಿನ್ನಾಭರಣವನ್ನು ಕದ್ದು, ಅದನ್ನು ಮಾರಾಟ ಮಾಡಿದ ಹಣವನ್ನು ಪ್ರಿಯಕರನಿಗೆ ನೀಡಿದ್ದಳು ಎಂದು ತಿಳಿದುಬಂದಿದೆ.

ಪ್ರಮೀಳಾಗೆ ಮದುವೆಯಾಗಿ ಗಂಡ ಬಿಟ್ಟಿದ್ದು, ಪ್ರಿಯಕರನಿಗೆ ಮದುವೆಯಾಗಿ ಎರಡು ಮಕ್ಕಳಿದ್ದವು. ಬೊಮ್ಮನಹಳ್ಳಿಯ ಗಾರ್ಮೆಂಟ್ಸ್ನಲ್ಲಿ ಇಬ್ಬರು ಕೆಲಸ ಮಾಡುವಾಗ ಪರಿಚಯವಾಗಿ ಪ್ರೀತಿಯಾಗಿತ್ತು. ಬಳಿಕ ಅಲ್ಲಿ ಕೆಲಸ ಬಿಟ್ಟು ಖಾಸಗಿ ಅಪಾರ್ಟ್ಮೆಂಟ್‌ನಲ್ಲಿ ಮನೆಕೆಲಸ ಮಾಡುತ್ತಿದ್ದಳು. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಸುಧಾರಕ್ ಪ್ರಮೀಳಾಗೆ ಸಾಲ ತೀರಿಸೋಕೆ 20 ಸಾವಿರ ರೂ. ಕೇಳಿದ್ದ. ಆಗ ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿ, ಮಾರಾಟ ಮಾಡಿ ಪ್ರಿಯಕರನಿಗೆ ಹಣ ಕೊಟ್ಟಿದ್ದಳು.

ಒಂದು ತಿಂಗಳ ಬಳಿಕ ಮನೆ ಮಾಲೀಕರಿಗೆ ಚಿನ್ನ ಕಳ್ಳತನದ ವಿಷಯ ಗೊತ್ತಾಗಿತ್ತು. ನಂತರ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರು ದಾಖಲಿಸಿ ಪೊಲೀಸರು ಮನೆಕೆಲಸದಾಕೆ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಅರೋಪಿತೆ ಕಳ್ಳತನ ಮಾಡಿರುವುದಾಗಿ ಬಾಯಿಬಿಟ್ಟಿದ್ದಾಳೆ.

ಇದೀಗ ಆರೋಪಿತೆಯಿಂದ ಒಟ್ಟು 3.4 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದ್ದು, ಪರಾರಿಯಾಗಿರುವ ಪ್ರಮೀಳಾ ಪ್ರಿಯಕರ ಸುಧಾಕರ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

error: Content is protected !!