Home Blog Page 156

2,500 ಕೋಟಿ ರೂ. ಅಬಕಾರಿ ಲಂಚ ಹಗರಣ ಆರೋಪ: ಸಿಎಂ ಸಿದ್ದರಾಮಯ್ಯ ನೇರ ಹೊಣೆ – ಆರ್. ಅಶೋಕ್

0

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆದ 2,500 ಕೋಟಿ ರೂ. ಭ್ರಷ್ಟಾಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆಗಾರರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಶೋಕ್, ಸರ್ಕಾರವು ಇಲಾಖೆಗೆ ಆದಾಯ ಗುರಿ ನಿಗದಿಪಡಿಸುವ ನೆಪದಲ್ಲಿ ಅಬಕಾರಿ ಪರವಾನಗಿಗಳನ್ನು ಹರಾಜು ಮಾಡುವ ವ್ಯವಸ್ಥೆ ಜಾರಿಗೆ ತಂದಿದೆ ಎಂದು ಆರೋಪಿಸಿದರು. ಅಬಕಾರಿ ಉಪ ಆಯುಕ್ತ ಜಗದೀಶ್ ನಾಯಕ್ ಅವರು 25 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವುದು ಈ ಭ್ರಷ್ಟಾಚಾರದ ಸ್ಪಷ್ಟ ಉದಾಹರಣೆ ಎಂದರು.

ತಿಮ್ಮಾಪುರ ರಾಜೀನಾಮೆ ನೀಡದಿದ್ದರೆ, ಈ ಹಗರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಹೊಣೆಗಾರರನ್ನಾಗಿ ಪರಿಗಣಿಸಬೇಕಾಗುತ್ತದೆ ಎಂದು ಅಶೋಕ್ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಪಕ್ಷವು ವಿಕಸಿತ್ ಭಾರತ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಗೆ ವಿರೋಧ ವ್ಯಕ್ತಪಡಿಸಲು ಮಹಾತ್ಮ ಗಾಂಧಿಯವರ ಹೆಸರನ್ನು ಬಳಸಿಕೊಳ್ಳುತ್ತಿದೆ. ಆದರೆ ಮತ್ತೊಂದೆಡೆ ರಾಜ್ಯವನ್ನು ವ್ಯಸನದ ಗೂಡಾಗಿಸುವ ಮೂಲಕ ಗಾಂಧಿಯವರ ಆದರ್ಶಗಳಿಗೆ ದ್ರೋಹ ಮಾಡುತ್ತಿದೆ ಎಂದು ಅವರು ಟೀಕಿಸಿದರು.

CL-7 ಪರವಾನಗಿಗೆ 1.25 ಕೋಟಿ ರೂ., CL-2 ಪರವಾನಗಿಗೆ 1.5 ಕೋಟಿ ರೂ. ಲಂಚ ವಸೂಲಿ ಮಾಡಲಾಗಿದೆ. CL-9 ಪರವಾನಗಿಗಳ ಮೂಲಕ 92 ಕೋಟಿ ರೂ. ಹಾಗೂ ಮೈಕ್ರೋಬ್ರೂವರಿ ಪರವಾನಗಿಗೆ 2.5 ಕೋಟಿ ರೂ. ಲಂಚ ಪಡೆಯಲಾಗಿದೆ ಎಂದು ಆರೋಪಿಸಿದರು.

ಒಟ್ಟಿನಲ್ಲಿ 2,500 ಕೋಟಿ ರೂ. ಲಂಚ ಸಂಗ್ರಹವಾಗಿದ್ದು, ಈ ಹಣವನ್ನು ಅಸ್ಸಾಂ ಚುನಾವಣೆಗೆ ಕಳುಹಿಸಲಾಗುತ್ತಿದೆ. ಸಚಿವರಿಗೆ ಅಥವಾ ಅವರ ಮಗನಿಗೆ ಹಣ ನೀಡಬೇಕೆಂದು ಉಲ್ಲೇಖಿಸುವ ಆಡಿಯೋ ದಾಖಲೆ ಬಹಿರಂಗವಾಗಿದೆ ಎಂದು ಅಶೋಕ್ ಆರೋಪಿಸಿದರು. ಅಬಕಾರಿ ಇಲಾಖೆಯ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದೆ ಎಂದು ಸ್ಪಷ್ಟಪಡಿಸಿದರು.

ಮೈಸೂರಿನ ಹೋಟೆಲ್ʼನಲ್ಲಿ RFO ಶವ ಪತ್ತೆ: ಸರ್ಕಾರಿ ಅಧಿಕಾರಿ ಸಾವಿನ ಸುತ್ತ ಅನುಮಾನದ ಹುತ್ತ!

0

ಮೈಸೂರು: ನಗರದ ಕೇಂದ್ರ ಬಸ್ ನಿಲ್ದಾಣದ ಸಮೀಪದ ಖಾಸಗಿ ಹೋಟೆಲ್ ಒಂದರಲ್ಲಿ ಆರ್ಎಫ್ (ರೇಂಜ್ ಫಾರೆಸ್ಟ್ ಆಫೀಸರ್) ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಟಿ. ನರಸೀಪುರದ ಆರ್ಎಫ್ ಕಾಂತರಾಜ್ ಚೌಹಾಣ್ ಮೃತರಾಗಿರುವುದು ದೃಢಪಟ್ಟಿದೆ.

ಮೈಸೂರು ನಗರದ ಯುವರಾಜ್ ಗೆಲಾಕ್ಸಿ ಹೋಟೆಲ್ ಸಮೀಪ, ಕುಮಾರನ್ ಜ್ಯುವೆಲರ್ಸ್ ಹಿಂಭಾಗದ ಕಾರಿಡಾರ್ನಲ್ಲಿ ಕಾಂತರಾಜ್ ಚೌಹಾಣ್ ಅವರ ಶವ ಪತ್ತೆಯಾಗಿದೆ. ಘಟನೆ ಅವರ ಸಾವಿನ ಬಗ್ಗೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಲಷ್ಕರ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಂತರಾಜ್ ಚೌಹಾಣ್ ಕೇವಲ 15 ದಿನಗಳ ಹಿಂದಷ್ಟೇ ಟಿ. ನರಸೀಪುರಕ್ಕೆ ವರ್ಗಾವಣೆಯಾಗಿದ್ದರು. ನಿನ್ನೆ ಮಧ್ಯಾಹ್ನ ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ತಮ್ಮ ಸ್ನೇಹಿತ ಮಲ್ಲನಗೌಡ ಪಾಟೀಲ್ ಅವರೊಂದಿಗೆ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದರು ಎಂದು ತಿಳಿದುಬಂದಿದೆ. ಆದರೆ ಅವರು ಏಕಾಏಕಿ ಮೃತಪಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇನ್ನೂ ಆತಂಕಕಾರಿ ಅಂಶವೆಂದರೆ, ಕಾಂತರಾಜ್ ಚೌಹಾಣ್ ಅವರೊಂದಿಗೆ ಇದ್ದ ಸ್ನೇಹಿತ ಮಲ್ಲನಗೌಡ ಪಾಟೀಲ್ ಸದ್ಯ ನಾಪತ್ತೆಯಾಗಿದ್ದಾರೆ. ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಮತ್ತಷ್ಟು ತಿರುವು ದೊರೆತಿದ್ದು, ಪೊಲೀಸರು ಆತನ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ..! ವಿಡಿಯೋ ವೈರಲ್

0

ಬೆಂಗಳೂರು: ರಾಜ್ಯದ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗೆ ಸಂಬಂಧಿಸಿದಂತೆ ವೈರಲ್ ಆಗಿರುವ ವಿಡಿಯೋ ಒಂದು, ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಡಿಜಿಪಿ ದರ್ಜೆಯ ಐಪಿಎಸ್ ಅಧಿಕಾರಿ ಡಾ. ರಾಮಚಂದ್ರ ರಾವ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕಚೇರಿ ಆವರಣದಲ್ಲೇ ಮಹಿಳೆಯರೊಂದಿಗೆ ಅನುಚಿತ ವರ್ತನೆ ನಡೆದಿದೆ ಎಂದು ಆರೋಪಿಸಲಾಗುತ್ತಿದೆ. ಈ ಘಟನೆಗಳು ಕರ್ತವ್ಯದ ವೇಳೆಯಲ್ಲೇ ನಡೆದಿವೆ ಎಂಬುದು ಜನರಲ್ಲಿ ಹೆಚ್ಚು ಆಕ್ರೋಶ ಹುಟ್ಟಿಸಿದೆ.

ಪೊಲೀಸ್ ಇಲಾಖೆ ಎಂಬುದು ಶಿಸ್ತು, ನೈತಿಕತೆ ಮತ್ತು ಜನರ ನಂಬಿಕೆಯ ಮೇಲೆ ನಿಂತಿರುವ ವ್ಯವಸ್ಥೆ. ಇಂತಹ ಆರೋಪಗಳು ಇಲಾಖೆ ಗೌರವಕ್ಕೆ ಧಕ್ಕೆ ತರುತ್ತವೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಇನ್ನೊಂದು ಕಡೆ, ಈ ವಿಡಿಯೋದ ಸತ್ಯಾಸತ್ಯತೆ ಕುರಿತು ಅಧಿಕೃತ ತನಿಖೆಯ ಅಗತ್ಯವಾಗಿದೆ. ಯಾವುದೇ ಅಂತಿಮ ತೀರ್ಮಾನ ತನಿಖೆಯ ನಂತರ ಮಾತ್ರ ಹೊರಬರಬೇಕು ಎಂಬುದು ಕಾನೂನು ತತ್ವ.

ಈ ಪ್ರಕರಣ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿದ್ದು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ತನಿಖೆ, ಸ್ಪಷ್ಟನೆ ಮತ್ತು ಕ್ರಮಗಳೇ ಈ ಪ್ರಕರಣದ ದಿಕ್ಕು ನಿರ್ಧರಿಸಲಿವೆ.

ಪವಾಡದ ಹೆಸರಿನಲ್ಲಿ ನಾಟಕ: ನಾನು ಚೆನ್ನಮ್ಮ ವಂಶಸ್ಥ ಎಂದು ಹೇಳಿಕೊಂಡ ಸ್ವಾಮಿಗೆ ಲಕ್ಕುಂಡಿ ಗ್ರಾಮಸ್ಥರಿಂದ ಶಾಕ್!

0

ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳ ಇದೀಗ ಅಚ್ಚರಿ ಘಟನೆಯ ಸಾಕ್ಷಿಯಾಗಿದೆ. ನಾನೊಬ್ಬ ಪವಾಡ ಪುರುಷ ಎಂದು ಹೇಳಿಕೊಂಡು ಬಂದ ಸ್ವಯಂ ಘೋಷಿತ ಸ್ವಾಮಿಯೊಬ್ಬ ಉತ್ಖನನ ಸ್ಥಳಕ್ಕೆ ಬಂದು ಹೈಡ್ರಾಮ ನಡೆಸಿದ್ದಾನೆ.

ತಾನು ಎಸ್.ಸಿ. ಹಿರೇಮಠ ಎಂದು ಪರಿಚಯಿಸಿಕೊಂಡ ಸ್ವಾಮಿ, “ನಾನು ರಾಣಿ ಚೆನ್ನಮ್ಮ ವಂಶಸ್ಥ” ಎಂದು ಹೇಳಿಕೊಂಡು, ತಾನು ನಿಂತಿರುವ ಜಾಗದಲ್ಲಿ ಸಾವಿರ ಕೆಜಿ ತೂಕದ ಚಾಮುಂಡಿ ಮೂರ್ತಿ ಇದೆ ಎಂದು ಹೇಳಿದ್ದಾನೆ.

ಇನ್ನೂ ಮುಂದೆ ಹೋಗಿ, “ಈ ಮೂರ್ತಿ ಬಂಗಾರ ಹಾಗೂ ವಜ್ರಖಚಿತವಾಗಿದೆ. ಹತ್ತು ಅಡಿ ಆಳಕ್ಕೆ ತೆಗಿದರೆ ಮೂರ್ತಿ ಸಿಗುತ್ತದೆ” ಎಂದು ಹೇಳಿ ಜನರ ಗಮನ ಸೆಳೆದಿದ್ದಾನೆ. ಕೈಯಲ್ಲಿ ಪತ್ರಿಕಾಯಿ ಹಿಡಿದುಕೊಂಡು ನಾಟಕೀಯವಾಗಿ ವರ್ತಿಸಿದ ಸ್ವಾಮಿ, ಸ್ಥಳದಲ್ಲಿ ಪವಾಡ ತೋರಿಸುವಂತೆ ವರ್ತನೆ ನಡೆಸಿದ್ದಾನೆ. ಆದರೆ ಸ್ಥಳೀಯರು ಈ ಹೇಳಿಕೆಗಳನ್ನು ಸಂಪೂರ್ಣ ಸುಳ್ಳು ಎಂದು ತಿರಸ್ಕರಿಸಿದ್ದಾರೆ. ಲಕ್ಕುಂಡಿಯ ಇತಿಹಾಸಕ್ಕೂ, ಚಾಮುಂಡಿಗೂ ಯಾವುದೇ ಸಂಬಂಧವಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಮ್ಮ ಊರಿಗೆ ಬಂದು ಸುಳ್ಳು ಹೇಳ್ತಿಯಾ?” ಎಂದು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಸ್ವಾಮಿಯನ್ನು ಸ್ಥಳದಿಂದ ಓಡಿಸಿದ್ದಾರೆ. ಗ್ರಾಮಸ್ಥರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸ್ವಯಂಘೋಷಿತ ಸ್ವಾಮಿ ಹಿಂಬದಿಯಿಂದ (ರಿವರ್ಸ್) ಓಡಿ ಪರಾರಿಯಾಗಿದ್ದಾನೆ.

ಸ್ಥಳೀಯರ ಮಾತಿನಲ್ಲಿ, “ಇವನು ಪವಾಡ ಪುರುಷ ಅಲ್ಲ, ಸುಳ್ಳು ಸ್ವಾಮಿ” ಎಂಬುದೇ ಈಗ ಲಕ್ಕುಂಡಿಯಲ್ಲಿ ಚರ್ಚೆಯ ವಿಷಯವಾಗಿದೆ.

ತಂತ್ರಜ್ಞಾನಕ್ಕೆ ಜಯ: ಸೇಫ್ ಸಿಟಿ ಯೋಜನೆಯಿಂದ ಪೋಷಕರಿಂದ ಬೇರ್ಪಟ್ಟ ಮಕ್ಕಳ ರಕ್ಷಣೆ

0

ಬೆಂಗಳೂರು: ಸೇಫ್ ಸಿಟಿ ಯೋಜನೆಯಡಿ ನಗರಾದ್ಯಂತ ತಂತ್ರಜ್ಞಾನ ಆಧಾರಿತ ತ್ವರಿತ ಕಾರ್ಯಾಚರಣೆಗಳನ್ನು ಕೈಗೊಂಡಿರುವ ಬೆಂಗಳೂರು ಪೊಲೀಸರು, ಕಾಣೆಯಾಗಿದ್ದ ಹಾಗೂ ಪೋಷಕರಿಂದ ತಪ್ಪಿಸಿಕೊಂಡಿದ್ದ ಹಲವು ಮಕ್ಕಳನ್ನು ಕೆಲವೇ ನಿಮಿಷಗಳಲ್ಲಿ ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ.

ಸೇಫ್ ಸಿಟಿ ಯೋಜನೆ ಹಾಗೂ 112 ತುರ್ತು ಸಹಾಯವಾಣಿ ಮೂಲಕ ಕಾರ್ಯಾಚರಣೆ ನಡೆಸಲಾಗಿದ್ದು, ಪೊಲೀಸ್ ನಿಯಂತ್ರಣ ಕೊಠಡಿ ಮತ್ತು ಜಿಪಿಎಸ್ ಆಧಾರಿತ ಹೊಯ್ಸಳ ಗಸ್ತು ವಾಹನಗಳನ್ನು ತ್ವರಿತವಾಗಿ ನಿಯೋಜಿಸಲು ಸಾಧ್ಯವಾಗಿದೆ ಎಂದು ಬೆಂಗಳೂರು ಪೊಲೀಸ್ ಇಲಾಖೆಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡಿಸೆಂಬರ್ 27ರಂದು ಜೆ.ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾನಸಿಕವಾಗಿ ಅಸ್ವಸ್ಥ ಮಹಿಳೆಯೊಬ್ಬರು ಎರಡು ವರ್ಷದ ಮಗುವನ್ನು ಕರೆದೊಯ್ಯಲು ಯತ್ನಿಸಿದ ಘಟನೆ ವರದಿಯಾಗಿತ್ತು. ಇದನ್ನು ಗಮನಿಸಿದ ಸಹಾಯಕ ಉಪನಿರೀಕ್ಷಕರು ತಕ್ಷಣ ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡಿದ್ದು, ಕೇವಲ ಐದು ನಿಮಿಷಗಳಲ್ಲಿ ಹೊಯ್ಸಳ ಗಸ್ತು ವಾಹನ ಸ್ಥಳಕ್ಕೆ ತಲುಪಿ ಮಗುವನ್ನು ರಕ್ಷಿಸಿ ತಾಯಿಗೆ ಒಪ್ಪಿಸಿದರು.

ಅದೇ ದಿನ ರಾತ್ರಿ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ 16 ವರ್ಷದ ಮಾನಸಿಕ ಸವಾಲುಗಳನ್ನು ಎದುರಿಸುತ್ತಿದ್ದ ಬಾಲಕನನ್ನು ತುರ್ತು ಕರೆ ಬಂದ ಕೆಲವೇ ನಿಮಿಷಗಳಲ್ಲಿ ಪತ್ತೆಹಚ್ಚಿ ತಾಯಿಯೊಂದಿಗೆ ಮರುಸೇರಿಸಲಾಗಿದೆ.

ಜನವರಿ 3ರಂದು ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ಹೆಗ್ಗನಹಳ್ಳಿಯ ಸಂಜೀವಿನಿ ನಗರ ಬಳಿ ನಾಲ್ಕು ವರ್ಷದ ಮಗು ರಸ್ತೆ ಬದಿಯಲ್ಲಿ ಒಂಟಿಯಾಗಿ ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದರು. 11 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದ ಹೊಯ್ಸಳ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದರು.

ಜನವರಿ 4ರಂದು ಕಾಡುಗೋಡಿ ಠಾಣಾ ವ್ಯಾಪ್ತಿಯ ನಾಗುಂದಳ್ಳಿಯಲ್ಲಿ ರಸ್ತೆಯಲ್ಲಿ ಓಡಾಡುತ್ತಿದ್ದ ಇಬ್ಬರು ಮಕ್ಕಳ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, 17 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದ ಹೊಯ್ಸಳ ಸಿಬ್ಬಂದಿ ಮಕ್ಕಳನ್ನು ರಕ್ಷಿಸಿ ಮನೆಗೆ ತಲುಪಿಸಿದ್ದಾರೆ.

ಜನವರಿ 14ರಂದು ಗಿರಿನಗರ ಠಾಣಾ ವ್ಯಾಪ್ತಿಯ ಹೊಸಕೆರಹಳ್ಳಿ ಫ್ಲೈಓವರ್ ಸಮೀಪ ರಸ್ತೆಯಲ್ಲಿ ಮಗು ಓಡಾಡುತ್ತಿರುವುದು ಕಮ್ಯಾಂಡ್ ಸೆಂಟರ್ ಸಿಬ್ಬಂದಿಯ ಗಮನಕ್ಕೆ ಬಂದಿದೆ. ನಾಲ್ಕು ನಿಮಿಷಗಳೊಳಗೆ ಸ್ಥಳಕ್ಕೆ ತಲುಪಿದ ಪೊಲೀಸರು ಪರಿಶೀಲನೆ ನಡೆಸಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

ಈ ಎಲ್ಲಾ ಪ್ರಕರಣಗಳಲ್ಲಿಯೂ 20 ನಿಮಿಷಗಳೊಳಗೆ ಪೊಲೀಸ್ ಸಿಬ್ಬಂದಿ ಸ್ಪಂದಿಸಿರುವುದು ಗಮನಾರ್ಹ ವಾಗಿದೆ. ಸೇಫ್ ಸಿಟಿ ಯೋಜನೆಯ ತಂತ್ರಜ್ಞಾನಾಧಾರಿತ ಪೊಲೀಸ್ ವ್ಯವಸ್ಥೆಯ ಪರಿಣಾಮಕಾರಿತ್ವಕ್ಕೆ ಇದು ಉತ್ತಮ ಉದಾಹರಣೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: ಎಂಟನೇ ಚಾಲಕರಹಿತ ರೈಲು ಹೆಬ್ಬಗೊಡಿಗೆ ಆಗಮನ

0

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ಲಭಿಸಿದೆ. ಕೋಲ್ಕತ್ತಾದ ಟಿಟಾಘರ್‌ನಿಂದ ಹೊರಟಿದ್ದ ಎಂಟನೇ ಚಾಲಕರಹಿತ ಮೆಟ್ರೋ ರೈಲು ಇಂದು ಬೆಳಿಗ್ಗೆ ಬೆಂಗಳೂರಿನ ಹೆಬ್ಬಗೊಡಿ ಮೆಟ್ರೋ ಡಿಪೋಗೆ ಸುರಕ್ಷಿತವಾಗಿ ಆಗಮಿಸಿದೆ.

ಆರು ಕೋಚ್‌ಗಳನ್ನು ಒಳಗೊಂಡ ಈ ಮೆಟ್ರೋ ರೈಲು ಜನವರಿ 10ರಂದು ಟಿಟಾಘರ್‌ನಿಂದ ಹೊರಟಿದ್ದು, ಇದೀಗ ಬೆಂಗಳೂರು ಮೆಟ್ರೋದ ಯೆಲ್ಲೋ ಲೈನ್ ಕಾರ್ಯಾಚರಣೆಗೆ ಸಿದ್ಧಗೊಳ್ಳುತ್ತಿದೆ. ಹೊಸದಾಗಿ ಬಂದಿರುವ ರೈಲಿನ ತಾಂತ್ರಿಕ ಮತ್ತು ಸುರಕ್ಷತಾ ಪರಿಶೀಲನೆಗಳನ್ನು ನಾಳೆಯಿಂದ (ಜನವರಿ 20) ಆರಂಭಿಸಲಾಗುತ್ತದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಯೆಲ್ಲೋ ಲೈನ್‌ನಲ್ಲಿ ಏಳು ಮೆಟ್ರೋ ರೈಲುಗಳು ಸಂಚರಿಸುತ್ತಿವೆ. ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಈ ಎಂಟನೇ ರೈಲಿಗೆ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ.

ಆರ್.ವಿ. ರಸ್ತೆದಿಂದ ಬೊಮ್ಮಸಂದ್ರದವರೆಗೆ 19.15 ಕಿಲೋಮೀಟರ್ ಉದ್ದದ ಯೆಲ್ಲೋ ಲೈನ್‌ನಲ್ಲಿ ಒಟ್ಟು 16 ನಿಲ್ದಾಣಗಳಿವೆ. ಈ ಮಾರ್ಗದ ಸುಗಮ ಕಾರ್ಯಾಚರಣೆಗೆ ಒಟ್ಟು 16 ಚಾಲಕರಹಿತ ಮೆಟ್ರೋ ರೈಲುಗಳನ್ನು ಆರ್ಡರ್ ಮಾಡಲಾಗಿದ್ದು, ಈಗಾಗಲೇ ಎಂಟು ರೈಲುಗಳು ನಗರ ತಲುಪಿವೆ.

ಪ್ರಸ್ತುತ 10ರಿಂದ 12 ನಿಮಿಷಗಳಿಗೊಮ್ಮೆ ಮೆಟ್ರೋ ಸಂಚಾರ ನಡೆಯುತ್ತಿದ್ದು, ಹೊಸ ರೈಲು ಸೇವೆಗೆ ಸೇರಿದ ಬಳಿಕ 8ರಿಂದ 10 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸುವ ಸಾಧ್ಯತೆ ಇದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಭಾರತದಲ್ಲಿ ಪಂದ್ಯ ಆಡದಿದ್ದರೆ ವಿಶ್ವಕಪ್ʼನಿಂದ ಬಾಂಗ್ಲಾ ಔಟ್: ICC ವಾರ್ನಿಂಗ್

0

2026ರ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಲ್ಲಿ ಆಡಲು ಬಾರದಿರುವುದಾಗಿ ಪಟ್ಟು ಹಿಡಿದಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಐಸಿಸಿ ಕಠಿಣ ಎಚ್ಚರಿಕೆ ನೀಡಿದೆ. ಭಾರತದಲ್ಲಿ ಪಂದ್ಯ ಆಡದಿದ್ದರೆ, ವಿಶ್ವಕಪ್ ಟೂರ್ನಿಯಿಂದಲೇ ಹೊರಗಿಡಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನ್ನ ನಿಲುವು ಬದಲಿಸಿಕೊಳ್ಳಲು ಜನವರಿ 21 ರವರೆಗೆ ಐಸಿಸಿ ಗಡುವು ನೀಡಿದೆ. ನಿಗದಿತ ಅವಧಿಯೊಳಗೆ ಬಾಂಗ್ಲಾ ಭಾರತಕ್ಕೆ ಬರಲು ಒಪ್ಪದಿದ್ದರೆ, ಪುರುಷರ ಟಿ20 ರ್ಯಾಂಕಿಂಗ್ ಆಧಾರದಲ್ಲಿ ಬೇರೊಂದು ಯುರೋಪಿಯನ್ ತಂಡಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಐಸಿಸಿ ಎಚ್ಚರಿಕೆ ನೀಡಿದೆ.

ಐಪಿಎಲ್‌ನಿಂದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ಹೊರಗಿಟ್ಟ ಬಳಿಕ ಬಾಂಗ್ಲಾದೇಶ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಭದ್ರತಾ ಕಾರಣಗಳನ್ನು ಉಲ್ಲೇಖಿಸಿ, ತನ್ನ ಪಾಲಿನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಬಿಸಿಬಿ ಒತ್ತಾಯಿಸಿದೆ.

ಅದಕ್ಕಾಗಿ ಐರ್ಲೆಂಡ್ ವಿರುದ್ಧದ ಲೀಗ್ ಪಂದ್ಯಗಳ ಸ್ಥಳ ಬದಲಾವಣೆಯನ್ನೂ ಬಾಂಗ್ಲಾದೇಶ ಕೇಳಿಕೊಂಡಿದೆ. ಆದರೆ ಭಾರತದಲ್ಲಿ ಆಡುವ ಇತರ ಯಾವುದೇ ತಂಡಗಳು ಭದ್ರತಾ ವಿಚಾರದಲ್ಲಿ ಯಾವುದೇ ಆತಂಕ ವ್ಯಕ್ತಪಡಿಸಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಬಿಸಿಬಿ ಮತ್ತು ಐಸಿಸಿ ನಡುವಿನ ವಿವಾದ ಈಗ ಮೂರನೇ ವಾರಕ್ಕೆ ತಲುಪಿದೆ. ಐಸಿಸಿ ಟಿ20 ವಿಶ್ವಕಪ್ 2026 ಫೆಬ್ರವರಿ 7 ರಂದು ಪಾಕಿಸ್ತಾನ ಹಾಗೂ ನೆದರ್ಲೆಂಡ್ ನಡುವಿನ ಪಂದ್ಯದಿಂದ ಆರಂಭವಾಗಲಿದೆ. ಬಾಂಗ್ಲಾದೇಶ ನಿರಾಕರಣೆ ಮುಂದುವರಿಸಿದರೆ, ಬೇರೊಂದು ತಂಡಕ್ಕೆ ಅವಕಾಶ ನೀಡುವ ಉದ್ದೇಶದಿಂದ ಜನವರಿ 21 ರವರೆಗೆ ಐಸಿಸಿ ಅಂತಿಮ ಗಡುವು ನೀಡಿದೆ.

ಚುಕ್ಕಿ ಜಿಂಕೆಗಳ ಸರಣಿ ಸಾವು: ದಾವಣಗೆರೆ ಮೃಗಾಲಯದಲ್ಲಿ ಆತಂಕ, ವೀಕ್ಷಕರಿಗೆ ತಾತ್ಕಾಲಿಕ ನಿರ್ಬಂಧ

0

ದಾವಣಗೆರೆ: ಜಿಲ್ಲೆಯ ಆನಗೋಡು ಬಳಿ ಇರುವ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಸಂಭವಿಸಿರುವ ಘಟನೆ ಪ್ರಾಣಿ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಕೇವಲ ಮೂರೇ ದಿನಗಳಲ್ಲಿ ನಾಲ್ಕು ಚುಕ್ಕಿ ಜಿಂಕೆಗಳು ಸಾವನ್ನಪ್ಪಿವೆ.

ವೈದ್ಯರ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಸಾವಿಗೆ ಕಾರಣವಾಗಿ ಹೆಮರಾಜಿಕ್ ಸೆಪ್ಟಿಸೆಮಿಯಾ ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮೃಗಾಲಯದಲ್ಲಿ ತುರ್ತು ಚಿಕಿತ್ಸಾ ಕ್ರಮಗಳು ಜಾರಿಗೊಳಿಸಲಾಗಿದೆ.

ಮೃಗಾಲಯದಲ್ಲಿ ಸದ್ಯ ಸುಮಾರು 170 ಚುಕ್ಕಿ ಜಿಂಕೆಗಳು ಇದ್ದು, ಅವುಗಳ ಜೀವ ಉಳಿಸಲು ವೈದ್ಯರು ರೋಗನಿರೋಧಕ ಔಷಧ ಚಿಕಿತ್ಸೆ ಆರಂಭಿಸಿದ್ದಾರೆ. ಪ್ರತಿಯೊಂದು ಪ್ರಾಣಿಯ ಆರೋಗ್ಯವನ್ನು ನಿಕಟವಾಗಿ ಗಮನಿಸಲಾಗುತ್ತಿದೆ.

ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ, ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಮೃಗಾಲಯ ವೀಕ್ಷಣೆಗೆ ತಾತ್ಕಾಲಿಕ ನಿರ್ಬಂಧ ಹೇರಿದ್ದಾರೆ.

ಈ ಘಟನೆ ಮೃಗಾಲಯಗಳಲ್ಲಿ ಪ್ರಾಣಿಗಳ ಆರೋಗ್ಯ ಸಂರಕ್ಷಣೆಯ ಮಹತ್ವವನ್ನು ಮತ್ತೆ ನೆನಪಿಸುತ್ತದೆ. ಮುಂದಿನ ದಿನಗಳಲ್ಲಿ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ.

ಖಾಸಗಿ ಕಾಲೇಜು ಬಸ್ ಡಿಕ್ಕಿ: ತಾಯಿ–ಮಗ ಸ್ಥಳದಲ್ಲೇ ಸಾವು!

0

ಬೆಂಗಳೂರು: ಖಾಸಗಿ ಕಾಲೇಜು ಬಸ್ ಡಿಕ್ಕಿಯಾಗಿ ತಾಯಿ ಮತ್ತು ಮಗ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಇಂದು ಬೆಂಗಳೂರಿನ ವಿವೇಕನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಆಂಧ್ರ ಪ್ರದೇಶದ ಸಂಗೀತಾ (37) ಹಾಗೂ ಅವರ ಪುತ್ರ ಪಾರ್ಥ (8) ಮೃತ ದುರ್ದೈವಿಗಳು.

ಘಟನಾ ಸ್ಥಳಕ್ಕೆ ಅಶೋಕನಗರ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಳಿಕ ಬಸ್ ಚಾಲಕ ಸುನೀಲ್ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಸಂಗೀತಾ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ತಮ್ಮ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು. ಮಕ್ಕಳಿಬ್ಬರನ್ನೂ ಅದೇ ಶಾಲೆಗೆ ಸೇರಿಸಿದ್ದರು. ಅವರ ಪತಿ ಪ್ರಸಾದ್ ಊರಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಬೆಳಿಗ್ಗೆ ಸುಮಾರು 6:30ರ ವೇಳೆಗೆ ಮಗ ಪಾರ್ಥನೊಂದಿಗೆ ಶಾಲೆಗೆ ತೆರಳುತ್ತಿದ್ದ ವೇಳೆ ರಸ್ತೆ ದಾಟುವಾಗ ಖಾಸಗಿ ಕಾಲೇಜಿನ ಬಸ್ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ತಾಯಿ ಮತ್ತು ಮಗ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಅಶೋಕನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಕ್ಸೋ ಸಂತ್ರಸ್ತೆ ಗುರುತು ಬಹಿರಂಗ ಆರೋಪ: ಮಾಜಿ ಸಚಿವ ಬಿ. ಶ್ರೀರಾಮುಲು ವಿರುದ್ಧ FIR

0

ಬಳ್ಳಾರಿ: ಪೋಕ್ಸೊ ಪ್ರಕರಣದ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಮಾಜಿ ಸಚಿವ ಬಿ. ಶ್ರೀರಾಮುಲು ವಿರುದ್ಧ ಬಳ್ಳಾರಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಹಾಗೂ ಬಾಲ ನ್ಯಾಯ ಕಾಯ್ದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಬಳ್ಳಾರಿಯಲ್ಲಿ ಜನವರಿ 1ರಂದು ನಡೆದ ಘರ್ಷಣೆ ಹಾಗೂ ಕೊಲೆ ಘಟನೆ ಖಂಡಿಸಿ, ಬಿಜೆಪಿ ವತಿಯಿಂದ ಜನವರಿ 17ರಂದು ಬಳ್ಳಾರಿ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಭಾಷಣ ಮಾಡುವ ವೇಳೆ, ಪೋಕ್ಸೊ ಸಂತ್ರಸ್ತೆಯ ಗುರುತನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜನವರಿ 18ರಂದು ಪ್ರಕರಣ ದಾಖಲಿಸಲಾಗಿದೆ.

ದೂರಿನ ಪ್ರಕಾರ, ಶಾಸಕ ಭರತ್ ರೆಡ್ಡಿ ಅವರು ಯುವಕರನ್ನು ಮಾದಕ ವ್ಯಸನಕ್ಕೆ ದೂಡಿದ್ದಾರೆ ಎಂದು ಆರೋಪಿಸುತ್ತಿದ್ದ ವೇಳೆ, ನಾಲ್ಕೈದು ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿ ನಗರದ ಶಾಲೆಯೊಂದರ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸಂತ್ರಸ್ತೆಯ ಹೆಸರು, ಶಾಲೆ, ತರಗತಿ ಹಾಗೂ ಜಾತಿಯ ಮಾಹಿತಿಯನ್ನೂ ಬಹಿರಂಗಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೋಕ್ಸೊ ಕಾಯ್ದೆಯ ಪ್ರಕಾರ, ಸಂತ್ರಸ್ತೆಯ ಹೆಸರು ಹಾಗೂ ಗುರುತಿಗೆ ಕಾರಣವಾಗುವ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದು ಕಾನೂನಿನ ಉಲ್ಲಂಘನೆಯಾಗಿದೆ. ಆದರೂ, ಶ್ರೀರಾಮುಲು ಅವರು ಸಾರ್ವಜನಿಕ ವೇದಿಕೆಯಲ್ಲಿ ಸಂತ್ರಸ್ತೆಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಎಂದು ಆರೋಪಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ಭಾನುವಾರ ಎಪಿಎಂಸಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನೀಡಿದ ದೂರಿನ ಆಧಾರದಲ್ಲಿ, ಮಹಿಳಾ ಪೊಲೀಸ್ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯ ಕಲಂ 23(1) ಮತ್ತು 23(2), ಹಾಗೂ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸೆಕ್ಷನ್ 74ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

error: Content is protected !!