Home Blog Page 161

ಶಿವಮೊಗ್ಗದಲ್ಲಿ ತನ್ನದೇ ಗನ್‌ʼನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ!

ಶಿವಮೊಗ್ಗ: ತನ್ನದೇ ಲೈಸೆನ್ಸ್ ಹೊಂದಿದ್ದ ಗನ್‌ನಿಂದ ಗುಂಡು ಹಾರಿಸಿಕೊಂಡು ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ತಟ್ಟೆಕೊಡ್ಲು ಗ್ರಾಮದಲ್ಲಿ ನಡೆದಿದೆ.

ತಟ್ಟೆಕೊಡ್ಲು ನಿವಾಸಿ ರಾಮಚಂದ್ರ ರಾವ್ (85) ಆತ್ಮಹತ್ಯೆ ಮಾಡಿಕೊಂಡವರು. ಅವರು ತಮ್ಮ ಮನೆಯ ಕೋಣೆಯಲ್ಲೇ ಗನ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡಿದ್ದು, ಘಟನೆಯ ತೀವ್ರತೆಗೆ ತಲೆ ಸಂಪೂರ್ಣ ಛಿದ್ರಗೊಂಡಿದೆ. ಮನೆಯ ಗೋಡೆಗಳ ಮೇಲೂ ರಕ್ತದ ಕಲೆಗಳು ಕಂಡುಬಂದಿವೆ.

ಮೂರು ದಿನಗಳ ಹಿಂದೆ ರಾಮಚಂದ್ರ ರಾವ್ ಅವರು ಬಿದ್ದು ತಲೆಗೆ ಗಂಭೀರ ಗಾಯ ಮಾಡಿಕೊಂಡಿದ್ದರು. ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ನೋವು ಕಡಿಮೆಯಾಗಿರಲಿಲ್ಲ ಎನ್ನಲಾಗಿದೆ. ಇದೇ ಕಾರಣದಿಂದ ತೀವ್ರ ನೋವು ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಗುಂಡಿನ ಸದ್ದು ಕೇಳಿ ಮನೆಯವರು ಸ್ಥಳಕ್ಕೆ ಧಾವಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಳಗ್ಗೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡವೂ ಸ್ಥಳ ಪರಿಶೀಲನೆ ನಡೆಸಿದೆ.

ಬಳಸಿದ ಗನ್‌ಗೆ ಮಾನ್ಯ ಪರವಾನಗಿ ಇತ್ತೇ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಸ್ಪೆಷಲ್ ಫ್ಲೈಟ್ʼ​ನಲ್ಲಿ ಒಟ್ಟಿಗೆ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!

ಬೆಂಗಳೂರು: ರಾಜ್ಯದ ರಾಜಕೀಯ ಬೆಳವಣಿಗೆಗಳ ನಡುವೆಯೇ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಲು ಸೋಮವಾರ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ನಂತರದ ರಾಜಕೀಯ ಬೆಳವಣಿಗೆಗಳು, ಸಂಪುಟ ರಚನೆ, ಅಧಿಕಾರ ಹಂಚಿಕೆ ಹಾಗೂ ಪಕ್ಷದ ಸಂಘಟನೆಗೆ ಸಂಬಂಧಿಸಿದ ಮಹತ್ವದ ವಿಷಯಗಳ ಕುರಿತು ಚರ್ಚಿಸಲು ಇಬ್ಬರು ನಾಯಕರು ದೆಹಲಿಗೆ ತೆರಳಿರುವುದಾಗಿ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ, ಹಿರಿಯ ಕಾಂಗ್ರೆಸ್ ನಾಯಕ ಹೆಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಪ್ರಮುಖ ಮುಖಂಡರು ಸಹ ಈ ನಿಯೋಗದೊಂದಿಗೆ ದೆಹಲಿಗೆ ತೆರಳಿದ್ದಾರೆ. ಹೀಗಾಗಿ ಈ ಭೇಟಿ ಕಾಂಗ್ರೆಸ್ ಪಕ್ಷದ ಒಳರಾಜಕೀಯದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಪಕ್ಷದ ಉನ್ನತ ನಾಯಕರೊಂದಿಗೆ ಸಭೆಗಳು ನಡೆಯಲಿವೆ ಎನ್ನಲಾಗಿದೆ.

ರಾಜ್ಯ ಸಚಿವ ಸಂಪುಟದ ಅಂತಿಮ ರೂಪುರೇಷೆ, ಉಪಮುಖ್ಯಮಂತ್ರಿ ಹುದ್ದೆಗಳ ಹಂಚಿಕೆ, ಪ್ರಮುಖ ಖಾತೆಗಳ ವಿತರಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತಂತೆ ಈ ಸಭೆಗಳಲ್ಲಿ ಮಹತ್ವದ ನಿರ್ಧಾರಗಳು ಹೊರಬೀಳುವ ಸಾಧ್ಯತೆ ಇದೆ.

ಇದೇ ವೇಳೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ನಂತರ ಪಕ್ಷದಲ್ಲಿ ಸಮನ್ವಯ ಕಾಪಾಡುವುದು ಮತ್ತು ಮುಂದಿನ ರಾಜಕೀಯ ಕಾರ್ಯತಂತ್ರ ರೂಪಿಸುವ ಕುರಿತು ಕೂಡ ಚರ್ಚೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.

IPL ಫೈನಲ್ ಬೆಂಗಳೂರಿನಲ್ಲಿ ನಡೆಯಬೇಕಿತ್ತು: ಗುಜರಾತ್ ಪ್ರಭಾವದಿಂದ ಪಂದ್ಯ ಕಳೆದುಕೊಂಡೆವು – ಡಿ.ಕೆ. ಶಿವಕುಮಾರ್

ಬೆಂಗಳೂರು: ಐಪಿಎಲ್ ಸೀಸನ್-19ರ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಬೇಕಾಗಿತ್ತು. ಆದರೆ ಗುಜರಾತ್ ತಮ್ಮ ಪ್ರಭಾವ ಬಳಸಿ ಪಂದ್ಯವನ್ನು ಕರ್ನಾಟಕದಿಂದ ಕಿತ್ತುಕೊಂಡಿದೆ ಎಂದು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಐಪಿಎಲ್ ಫೈನಲ್ ಪಂದ್ಯವನ್ನು ಬೆಂಗಳೂರಿನಲ್ಲಿ ಆಯೋಜಿಸಲು ರಾಜ್ಯ ಸರ್ಕಾರ ಅಗತ್ಯ ಅನುಮತಿಗಳನ್ನು ನೀಡಿತ್ತು. ಆದಾಗ್ಯೂ, ಅಂತಿಮವಾಗಿ ಪಂದ್ಯವನ್ನು ಗುಜರಾತ್‌ಗೆ ವರ್ಗಾಯಿಸಲಾಗಿದೆ. ಇದು ನಮ್ಮ ರಾಜ್ಯದ ಕ್ರೀಡಾಭಿಮಾನಿಗಳಿಗೆ ಮತ್ತು ಕ್ರೀಡಾ ಮೂಲಸೌಕರ್ಯಕ್ಕೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫೈನಲ್ ಪಂದ್ಯ ಕರ್ನಾಟಕದಲ್ಲೇ ನಡೆಯಬೇಕಿತ್ತು. ಅದಕ್ಕಾಗಿ ನಾವು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು. ಆದರೆ ಗುಜರಾತ್ ತನ್ನ ಪ್ರಭಾವ ಬಳಸಿಕೊಂಡು ಪಂದ್ಯವನ್ನು ತನ್ನತ್ತ ಸೆಳೆದಿದೆ. ನಮ್ಮ ಸ್ಟೇಡಿಯಂಗೆ ಮಾತ್ರವಲ್ಲ, ರಾಜ್ಯದ ಯುವಕರಿಗೂ ಇದರಿಂದ ಅನ್ಯಾಯವಾಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಬೆಂಗಳೂರು ದೇಶದ ಪ್ರಮುಖ ಕ್ರೀಡಾ ಕೇಂದ್ರಗಳಲ್ಲಿ ಒಂದಾಗಿದ್ದು, ದೊಡ್ಡ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲು ಎಲ್ಲ ರೀತಿಯ ಸಾಮರ್ಥ್ಯ ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ, ಐಪಿಎಲ್ 2026ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಡಿ.ಕೆ. ಶಿವಕುಮಾರ್ ಅಭಿನಂದನೆ ಸಲ್ಲಿಸಿದರು.

ಆರ್‌ಸಿಬಿ ಕರ್ನಾಟಕದ ಹೆಸರಿನಲ್ಲಿ ಆಡುತ್ತಿರುವ ತಂಡ. ತಂಡದ ಆಟಗಾರರು ಇಡೀ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕರ್ನಾಟಕ ಸರ್ಕಾರದ ಪರವಾಗಿ ಹಾಗೂ ರಾಜ್ಯದ ಕೋಟ್ಯಂತರ ಅಭಿಮಾನಿಗಳ ಪರವಾಗಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಆರ್‌ಸಿಬಿ ಸಾಧನೆ ರಾಜ್ಯದ ಕ್ರೀಡಾಭಿಮಾನಿಗಳಿಗೆ ಹೆಮ್ಮೆಯ ಕ್ಷಣವಾಗಿದ್ದು, ಮುಂದಿನ ದಿನಗಳಲ್ಲಿಯೂ ತಂಡ ಇದೇ ರೀತಿ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

ಕೋಟಿ ವೆಚ್ಚದ ಹೈಟೆಕ್ ಹಾಸ್ಟೆಲ್‌ ನಲ್ಲಿ ವಿದ್ಯಾರ್ಥಿಗಳ ನರಕಯಾತನೆ..!

ಗದಗ: ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂದು ಸರ್ಕಾರ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ವಸತಿ ನಿಲಯ ಇದೀಗ ಅವ್ಯವಸ್ಥೆಯ ಅಡ್ಡೆಯಾಗಿರುವ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿಗಳಿಗೆ ನೀಡಬೇಕಾದ ಮೂಲ ಸೌಲಭ್ಯಗಳೇ ಇಲ್ಲದಂತಾಗಿದ್ದು, ಆಹಾರದಿಂದ ಹಿಡಿದು ಕುಡಿಯುವ ನೀರಿನವರೆಗೆ ಎಲ್ಲ ಕ್ಷೇತ್ರದಲ್ಲೂ ಭಾರೀ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಗದಗ ನಗರದ ಗಂಗಿಮಡಿಯಲ್ಲಿ ಇರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಪಂಗಡದ ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಸರ್ಕಾರದಿಂದ ಕೋಟಿ ಕೋಟಿ ಅನುದಾನ ಬಂದಿದ್ದರೂ, ವಿದ್ಯಾರ್ಥಿಗಳಿಗೆ ಸಮರ್ಪಕ ಸೌಲಭ್ಯ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.

ಧಾನ್ಯದಲ್ಲೇ ನುಸಿಗಳ ಸಾಮ್ರಾಜ್ಯ- ಅದೇ ಆಹಾರ ವಿದ್ಯಾರ್ಥಿಗಳ ಹೊಟ್ಟೆಗೆ..!

ವಸತಿ ನಿಲಯದ ಅಡುಗೆಮನೆಗೆ ಸರಬರಾಜಾಗುತ್ತಿರುವ ಗೋಧಿ ಹಾಗೂ ಇತರ ಧಾನ್ಯಗಳಲ್ಲಿ ನುಸಿಗಳು ಬುಸುಗುಟ್ಟುತ್ತಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದೇ ಕಳಪೆ ಧಾನ್ಯ ಮತ್ತು ಹಳೇ ತರಕಾರಿಗಳಿಂದ ಊಟ ತಯಾರಿಸಲಾಗುತ್ತಿದ್ದು, ಅನಾರೋಗ್ಯದ ಭೀತಿ ಎದುರಾಗಿದೆ ಎಂದು ಹೇಳಿದ್ದಾರೆ.

“ಮೇನು ಪ್ರಕಾರ ಊಟ ನೀಡುವುದಿಲ್ಲ. ಮೊಟ್ಟೆ, ಬಾಳೆಹಣ್ಣು ನೀಡದೇ ಹಣ ದುರುಪಯೋಗ ಮಾಡಲಾಗುತ್ತಿದೆ. ಪ್ರಶ್ನೆ ಮಾಡಿದರೆ ನಮ್ಮನ್ನೇ ಟಾರ್ಗೆಟ್ ಮಾಡುತ್ತಾರೆ” ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

ಗಲೀಜು ನೀರಿಗೆ ವಿದ್ಯಾರ್ಥಿಗಳ ಅಲರ್ಜಿ- ಕುಡಿಯುವ ನೀರಿಗೂ ಪರದಾಟ

ಬೇಸಿಗೆಯ ಬಿಸಿಯಲ್ಲಿ ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಚಿಗಟ್ಟಿದ ನೀರಿನ ಟ್ಯಾಂಕ್‌ಗಳಲ್ಲಿನ ನೀರನ್ನೇ ಸ್ನಾನ ಮತ್ತು ನಿತ್ಯಕರ್ಮಗಳಿಗೆ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ.

ಗಲೀಜು ನೀರು ಬಳಸುತ್ತಿರುವ ಪರಿಣಾಮ ಅನೇಕ ವಿದ್ಯಾರ್ಥಿಗಳಿಗೆ ಚರ್ಮದ ಅಲರ್ಜಿ, ಮೈತುಂಬಾ ತುರಿಕೆ ಕಾಣಿಸಿಕೊಂಡಿದ್ದು, ಆರೋಗ್ಯ ಸಮಸ್ಯೆ ಹೆಚ್ಚಾಗಿದೆ ಎಂದು ಆರೋಪಿಸಲಾಗಿದೆ. ಅನಾರೋಗ್ಯ ಕಾಣಿಸಿಕೊಂಡರೂ ಚಿಕಿತ್ಸೆ ವ್ಯವಸ್ಥೆ ಮಾಡುವತ್ತ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಧೂಳು ತಿನ್ನುತ್ತಿರುವ ಕಂಪ್ಯೂಟರ್‌ಗಳು

ವಿದ್ಯಾರ್ಥಿಗಳು ವಾಸಿಸುವ ಕೊಠಡಿಗಳಲ್ಲಿ ಸ್ವಚ್ಛತೆ ಎಂಬುದೇ ಕಾಣಿಸದಂತಾಗಿದೆ. ಕಂಪ್ಯೂಟರ್‌ಗಳು ಧೂಳು ತಿನ್ನುತ್ತಿದ್ದು, ಹೈಟೆಕ್ ವಸತಿ ನಿಲಯದ ಹೆಸರಿಗೆ ಮಾತ್ರ ಸೌಲಭ್ಯಗಳು ಉಳಿದಿವೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

“ಸರ್ಕಾರ ಅನುದಾನ ಕೊಡುತ್ತಿದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳ ಬದುಕೇ ದುಸ್ತರವಾಗಿದೆ” ಎಂದು ಅವರು ಆರೋಪಿಸಿದ್ದಾರೆ.

ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳ ಕಿಡಿ

ಜಿಲ್ಲಾ ಮಟ್ಟದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ಸಮಸ್ಯೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅಧಿಕಾರಿಗಳು ಡೋಂಟ್ ಕೇರ್ ಧೋರಣೆ ತಾಳಿದ್ದಾರೆ. ಬಡ ವಿದ್ಯಾರ್ಥಿಗಳ ಗೋಳಾಟ ಕೇಳುವವರೇ ಇಲ್ಲ” ಎಂದು ಆರೋಪಿಸಿದ್ದಾರೆ.

ಇನ್ನಾದರೂ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ವಸತಿ ನಿಲಯದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಸಾಂತ್ವನ ಭೇಟಿಯೇ ಸಿಎಂ ವಿಜಯ್‌ಗೆ ತಲೆನೋವಾ? ಅಜಿತ್ ಮನೆ ಹೊರಗಿನಿಂದಲೇ ಶುರುವಾಯ್ತು ಹೊಸ ರಾಜಕೀಯ ಚರ್ಚೆ!

ನಟ ಅಜಿತ್ ಕುಮಾರ್ ಅವರ ತಾಯಿ ನಿಧನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ಭೇಟಿ ನೀಡಿದ್ದ ಘಟನೆ ಈಗ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಅನಿರೀಕ್ಷಿತ ಚರ್ಚೆಗೆ ಕಾರಣವಾಗಿದೆ. ಸಂತಾಪ ಸೂಚಿಸುವ ಕಾರ್ಯಕ್ರಮದಲ್ಲಿ ನಟಿ ತ್ರಿಷಾ ಕೃಷ್ಣನ್ ಸಹ ಕಾಣಿಸಿಕೊಂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಶೇಷವಾಗಿ ತ್ರಿಷಾಗೆ ನೀಡಲಾದ ಭದ್ರತೆ, ವಾಹನ ವ್ಯವಸ್ಥೆ ಹಾಗೂ ಪ್ರೋಟೋಕಾಲ್ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿಯ ಅಧಿಕೃತ ಕಾರ್ಯಕ್ರಮದ ಭಾಗವಾಗಿ ನಟಿಗೆ ನೀಡಲಾದ ಸೌಲಭ್ಯಗಳು ಸಾರ್ವಜನಿಕ ಸಂಪನ್ಮೂಲಗಳ ಬಳಕೆಯ ಮಾನದಂಡಗಳಿಗೆ ಅನುಗುಣವಾಗಿವೆಯೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ರಾಜಕೀಯ ವಿಶ್ಲೇಷಕರ ಅಭಿಪ್ರಾಯದಂತೆ, ಸಾರ್ವಜನಿಕ ಹುದ್ದೆಯಲ್ಲಿರುವ ನಾಯಕರ ಪ್ರತಿಯೊಂದು ನಡೆಗೂ ಹೆಚ್ಚಿನ ಗಮನ ಸಿಗುವುದು ಸಹಜ. ಅದರಲ್ಲೂ ಸಿನಿರಂಗ ಮತ್ತು ರಾಜಕೀಯದ ಪ್ರಭಾವ ಒಂದೇ ಕಡೆ ಸೇರುವಾಗ ಇಂತಹ ಚರ್ಚೆಗಳು ಮತ್ತಷ್ಟು ತೀವ್ರಗೊಳ್ಳುತ್ತವೆ.

ಕೆಲವರು ಇದನ್ನು ಅನಗತ್ಯ ವಿವಾದವೆಂದು ತಳ್ಳಿಹಾಕಿದರೆ, ಮತ್ತೊಂದು ವಲಯ ಸಾರ್ವಜನಿಕ ಹುದ್ದೆಯಲ್ಲಿರುವವರ ನಡೆ-ನುಡಿಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಮತ್ತು ಹೊಣೆಗಾರಿಕೆ ಅಗತ್ಯ ಎಂದು ವಾದಿಸುತ್ತಿದೆ.

ಒಟ್ಟಾರೆ, ಅಜಿತ್ ಕುಟುಂಬಕ್ಕೆ ಸಾಂತ್ವನ ಹೇಳಲು ನಡೆದ ಭೇಟಿಯು ಈಗ ರಾಜಕೀಯ, ಪ್ರೋಟೋಕಾಲ್ ಮತ್ತು ಸಾರ್ವಜನಿಕ ಹೊಣೆಗಾರಿಕೆ ಕುರಿತ ಚರ್ಚೆಯಾಗಿ ಬದಲಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರದ ಬಗ್ಗೆ ಅಧಿಕೃತ ಸ್ಪಷ್ಟನೆ ಬರುತ್ತದೆಯೇ ಎಂಬುದರತ್ತ ಗಮನ ನೆಟ್ಟಿದೆ.

ಹಿಮಾಚಲ ದುರಂತದಲ್ಲಿ ಬೆಂಗಳೂರಿನ 7 ಮಂದಿ ಸಾವು: ಸಂತ್ರಸ್ತರಿಗೆ ನೆರವು ನೀಡಲು ವಿಜಯೇಂದ್ರ ಆಗ್ರಹ

ಬೆಂಗಳೂರು: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಸಚ್ ಪಾಸ್ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಎರಡು ಕುಟುಂಬಗಳಿಗೆ ಸೇರಿದ ಏಳು ಮಂದಿ ಸೇರಿದಂತೆ ಒಟ್ಟು ಎಂಟು ಮಂದಿ ಮೃತಪಟ್ಟಿರುವ ಘಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಪ್ರವಾಸಕ್ಕೆ ತೆರಳಿದ್ದ ಕುಟುಂಬಗಳು ದುರಂತಕರವಾಗಿ ಸಾವನ್ನಪ್ಪಿರುವ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ ಎಂದು ತಿಳಿಸಿದ್ದಾರೆ. ಸಂತಸದ ಕ್ಷಣಗಳನ್ನು ಕಳೆಯಲು ತೆರಳಿದ್ದ ಕುಟುಂಬಗಳು ದುರ್ಘಟನೆಯಲ್ಲಿ ಜೀವ ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರವು ಹಿಮಾಚಲ ಪ್ರದೇಶ ಸರ್ಕಾರದೊಂದಿಗೆ ತಕ್ಷಣ ಸಂಪರ್ಕ ಸಾಧಿಸಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ಮೃತರ ಪಾರ್ಥಿವ ಶರೀರಗಳನ್ನು ಶೀಘ್ರವಾಗಿ ಬೆಂಗಳೂರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಸಂತ್ರಸ್ತ ಕುಟುಂಬಗಳಿಗೆ ಬೇಕಾದ ಎಲ್ಲಾ ರೀತಿಯ ನೆರವು ಮತ್ತು ಬೆಂಬಲ ಒದಗಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಎಲ್ಲರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿರುವ ಅವರು, ಕುಟುಂಬದ ಸದಸ್ಯರನ್ನು ಕಳೆದುಕೊಂಡು ದುಃಖದಲ್ಲಿರುವ ಬಂಧು-ಬಳಗಕ್ಕೆ ಈ ಆಘಾತವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.

ಬೆಂಗಳೂರು ಪಿಜಿಗೆ ನುಗ್ಗಿದ ಖದೀಮರ ಕೈಚಳಕ: ಚಾರ್ಜಿಂಗ್ʼಗೆ ಇಟ್ಟಿದ್ದ 8 ಮೊಬೈಲ್ ಗಳ ಕಳ್ಳತನ

ಬೆಂಗಳೂರು: ನಗರದ ಹೊಸಪಾಳ್ಯ ಪ್ರದೇಶದಲ್ಲಿರುವ ಬಾಯ್ಸ್ ಪಿಜಿಯೊಂದರಲ್ಲಿ ತಡರಾತ್ರಿ ನುಗ್ಗಿದ ಕಳ್ಳರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಚಾರ್ಜಿಂಗ್‌ಗೆ ಇಟ್ಟಿದ್ದ ಎಂಟು ದುಬಾರಿ ಮೊಬೈಲ್ ಫೋನ್‌ಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಹೊಸಪಾಳ್ಯದ ಕೂಡ್ಲು ಮುಖ್ಯರಸ್ತೆಯಲ್ಲಿರುವ ‘ಸಾಯಿ ಆರಾಧ್ಯ ಲಕ್ಸುರಿ ಪಿಜಿ ಫಾರ್ ಜೆಂಟ್ಸ್’ನಲ್ಲಿ ಈ ಕಳ್ಳತನ ನಡೆದಿದ್ದು, ಪಿಜಿಯಲ್ಲಿ ವಾಸವಾಗಿರುವ 27 ವರ್ಷದ ಕ್ಯಾಬ್ ಚಾಲಕ ದರ್ಶನ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನ ಪ್ರಕಾರ, ಮೇ 28ರಂದು ರಾತ್ರಿ ಕೆಲಸ ಮುಗಿಸಿ ಪಿಜಿಗೆ ಬಂದಿದ್ದ ದರ್ಶನ್ ತಮ್ಮ ಎರಡು ಮೊಬೈಲ್ ಫೋನ್‌ಗಳನ್ನು ಚಾರ್ಜಿಂಗ್‌ಗೆ ಇಟ್ಟು ಮಲಗಿದ್ದರು. ಅವರೊಂದಿಗೆ ಕೊಠಡಿಯಲ್ಲಿ ವಾಸವಾಗಿದ್ದ ಸ್ನೇಹಿತರು ಹಾಗೂ ಪಕ್ಕದ ಕೊಠಡಿಯಲ್ಲಿದ್ದ ನಿವಾಸಿಗಳೂ ಸಹ ತಮ್ಮ ಮೊಬೈಲ್‌ಗಳನ್ನು ಚಾರ್ಜ್‌ಗೆ ಇಟ್ಟಿದ್ದರು.

ಆದರೆ ಮೇ 29ರಂದು ಬೆಳಗ್ಗೆ ಸುಮಾರು 6 ಗಂಟೆಗೆ ಎದ್ದು ನೋಡಿದಾಗ ದರ್ಶನ್ ಅವರ ಮೊಬೈಲ್‌ಗಳು ಕಾಣೆಯಾಗಿದ್ದವು. ಬಳಿಕ ಇತರ ಕೊಠಡಿಗಳಲ್ಲಿ ಪರಿಶೀಲನೆ ನಡೆಸಿದಾಗ ಒಟ್ಟು ಎಂಟು ಮೊಬೈಲ್ ಫೋನ್‌ಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿಜಿಯಲ್ಲಿ ಯಾವುದೇ ಭದ್ರತಾ ಸಿಬ್ಬಂದಿ (ಸೆಕ್ಯೂರಿಟಿ ಗಾರ್ಡ್) ಇರಲಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಇದಲ್ಲದೆ, ಪಿಜಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇಬ್ಬರು ಕಳ್ಳರು ಮಧ್ಯರಾತ್ರಿ ವೇಳೆ ಕಟ್ಟಡದೊಳಗೆ ನುಗ್ಗಿ, ಕೊಠಡಿಗಳಿಂದ ಮೊಬೈಲ್ ಫೋನ್‌ಗಳನ್ನು ಕಳವು ಮಾಡಿ ಪರಾರಿಯಾಗಿರುವುದು ದಾಖಲಾಗಿದೆ.

ಪಿಜಿ ನಿವಾಸಿಗಳು ರಾತ್ರಿ ವೇಳೆ ತಮ್ಮ ಕೊಠಡಿಗಳ ಬಾಗಿಲುಗಳನ್ನು ಲಾಕ್ ಮಾಡದೇ ಮಲಗಿದ್ದ ಕಾರಣ ಕಳ್ಳರಿಗೆ ಸುಲಭವಾಗಿ ಕೃತ್ಯ ಎಸಗಲು ಅವಕಾಶ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಗುರುತು ಪತ್ತೆ ಮಾಡುವ ಕಾರ್ಯ ನಡೆಯುತ್ತಿದ್ದು, ಕಳ್ಳರ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಬಾಲಿವುಡ್‌ನಲ್ಲಿ ರೆಡಿಯಾಗ್ತಿದೆ ಸಲ್ಮಾನ್ ಖಾನ್ ಕೃಷ್ಣಮೃಗ ಭೇಟೆ ಕೇಸು ಕುರಿತು ಸಿನಿಮಾ

ಬಾಲಿವುಡ್‌ನಲ್ಲಿ ಮತ್ತೊಂದು ದೊಡ್ಡ ವಿವಾದಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಸಲ್ಮಾನ್ ಖಾನ್ ಅವರ ಬಹುಚರ್ಚಿತ ಕೃಷ್ಣಮೃಗ ಬೇಟೆ ಪ್ರಕರಣವನ್ನು ಆಧರಿಸಿ ನಿರ್ಮಾಣವಾಗುತ್ತಿರುವ ‘ಕಾಲಾ ಹಿರನ್: ದಿ ಬ್ಯಾಟಲ್ ಆಫ್ ಲೆಗಸಿ’ ಸಿನಿಮಾ ಈಗಾಗಲೇ ಬಿಡುಗಡೆಯಾದ ಪೋಸ್ಟರ್‌ನಿಂದಲೇ ಭಾರೀ ಚರ್ಚೆಗೆ ಕಾರಣವಾಗಿದೆ.

ಚಿತ್ರದ ಪೋಸ್ಟರ್‌ನಲ್ಲಿ ಸಲ್ಮಾನ್ ಖಾನ್ ಅವರನ್ನು ಹೋಲುವ ವ್ಯಕ್ತಿಯೊಬ್ಬ ರೈಫಲ್ ಹಿಡಿದು ಕಾಣಿಸಿಕೊಂಡಿದ್ದು, ಅವರ ಟ್ರೇಡ್‌ಮಾರ್ಕ್ ಬ್ರೇಸ್ಲೆಟ್ ಮಾದರಿಯ ಆಭರಣವನ್ನೂ ಬಳಸಲಾಗಿದೆ. ಇದರಿಂದ ಸಿನಿಮಾ ನೇರವಾಗಿ ಸಲ್ಮಾನ್ ಖಾನ್ ಪ್ರಕರಣವನ್ನೇ ಕೇಂದ್ರೀಕರಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿವಾದಾತ್ಮಕ ವಿಷಯಗಳನ್ನು ತೆರೆಗೆ ತರುವ ಮೂಲಕ ಗುರುತಿಸಿಕೊಂಡಿರುವ ನಿರ್ಮಾಪಕ ಅಮಿತ್ ಜಾನಿ, ಈ ಚಿತ್ರ ನೈಜ ಘಟನೆಗಳು ಮತ್ತು ನ್ಯಾಯಾಂಗ ಪ್ರಕ್ರಿಯೆಗಳ ಆಧಾರದ ಮೇಲೆ ರೂಪುಗೊಳ್ಳುತ್ತಿದೆ ಎಂದು ಹೇಳಿದ್ದಾರೆ. ಜೊತೆಗೆ, “ಇದು ದೇಶದ ಅತಿದೊಡ್ಡ ವಿವಾದಾತ್ಮಕ ಸಿನಿಮಾ ಆಗಲಿದೆ” ಎಂಬ ಹೇಳಿಕೆ ನೀಡಿ ಕುತೂಹಲ ಹೆಚ್ಚಿಸಿದ್ದಾರೆ.

ಮತ್ತೊಂದು ಪ್ರಮುಖ ಅಂಶವೆಂದರೆ, ಚಿತ್ರದಲ್ಲಿ ಕೃಷ್ಣಮೃಗ ಬೇಟೆ ಪ್ರಕರಣದ ಜೊತೆಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಹೆಸರು ಕೂಡ ಪ್ರಸ್ತಾಪವಾಗಲಿದೆಯಂತೆ. ಹೀಗಾಗಿ ಸಿನಿಮಾ ಬಿಡುಗಡೆಯ ಮುನ್ನವೇ ಹೊಸ ವಿವಾದಗಳು ಹುಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

‘ಉದಯಪುರ ಫೈಲ್ಸ್’ ಖ್ಯಾತಿಯ ಅಮಿತ್ ಜಾನಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಭರತ್ ಎಸ್. ಶ್ರೀನಾಥ್ ನಿರ್ದೇಶಿಸುತ್ತಿದ್ದು, ಜಾನಿ ಫೈರ್‌ಫಾಕ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಜೂನ್ 20ರಂದು ಬಿಡುಗಡೆಯಾಗಲಿರುವ ಟೀಸರ್ ಮೇಲೆ ಇದೀಗ ಬಾಲಿವುಡ್ ಹಾಗೂ ಅಭಿಮಾನಿಗಳ ಕಣ್ಣು ನೆಟ್ಟಿದೆ.

ಡಿವೋರ್ಸ್ ಅರ್ಜಿ ಬೆನ್ನಲ್ಲೇ ರೌದ್ರಾವತಾರ! ಹೆಂಡತಿ ಸಿಗದಿದ್ದಕ್ಕೆ ಅತ್ತೆ-ಮಾವನ ಮೇಲೆ ಮಚ್ಚು ಬೀಸಿದ ಅಳಿಯ

ಬೆಂಗಳೂರು: ವೈವಾಹಿಕ ಕಲಹದ ಹಿನ್ನೆಲೆ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ ಪತ್ನಿಯ ಮೇಲಿನ ಆಕ್ರೋಶವನ್ನು ಅತ್ತೆ-ಮಾವನ ಮೇಲೆ ತೀರಿಸಿಕೊಂಡ ಘಟನೆ ಬೆಂಗಳೂರಿನ ಕುಂಬಳಗೂಡು ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಮಿಣಿಕೆ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಮಚ್ಚಿನಿಂದ ನಡೆಸಿದ ಭೀಕರ ದಾಳಿಯಲ್ಲಿ ದಂಪತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೈಯದ್ ಅಹ್ಮದ್ (55) ಮತ್ತು ನಸ್ರಿನಾ ಭಾನು (48) ಹಲ್ಲೆಗೊಳಗಾದವರು. ಫರ್ಹಾನ್ ಮುಬಾರಕ್ ಎಂಬಾತನೇ ದಾಳಿ ನಡೆಸಿದ ಆರೋಪಿ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಫರ್ಹಾನ್ ಮುಬಾರಕ್ ಐದು ವರ್ಷಗಳ ಹಿಂದೆ ಸೈಯದ್ ಅಹ್ಮದ್ ಪುತ್ರಿಯನ್ನು ವಿವಾಹವಾಗಿದ್ದ. ಆದರೆ ಮದುವೆಯಾದ ಕೇವಲ ಮೂರು ತಿಂಗಳಲ್ಲೇ ದಂಪತಿ ಬೇರ್ಪಟ್ಟಿದ್ದರು. ನಾಲ್ಕು ತಿಂಗಳ ಹಿಂದೆ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಆರೋಪಿ ತೀವ್ರ ಅಸಮಾಧಾನಗೊಂಡಿದ್ದ ಎನ್ನಲಾಗಿದೆ.

ಬಕ್ರೀದ್ ಹಬ್ಬದ ದಿನ ಪತ್ನಿಯ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಮನೆಗೆ ಬಂದಿದ್ದ ಫರ್ಹಾನ್, ಆಕೆ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಅತ್ತೆ-ಮಾವನ ಮೇಲೆ ಮಚ್ಚಿನಿಂದ ಏಕಾಏಕಿ ದಾಳಿ ನಡೆಸಿದ್ದಾನೆ. 15ಕ್ಕೂ ಹೆಚ್ಚು ಬಾರಿ ಮಚ್ಚು ಬೀಸಿದ ಪರಿಣಾಮ ದಂಪತಿಯ ತಲೆ, ಕೈ, ಕಾಲು ಹಾಗೂ ಭುಜ ಭಾಗಗಳಿಗೆ ಗಂಭೀರ ಗಾಯಗಳಾಗಿವೆ.

ಘಟನೆಯ ದೃಶ್ಯಗಳು ಅಪಾರ್ಟ್‌ಮೆಂಟ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಕುಂಬಳಗೂಡು ಪೊಲೀಸರು ಪರಾರಿಯಾಗಿರುವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಭೀಮಾತೀರದ 6 ಮಂದಿಯ ಸಾಮೂಹಿಕ ಹತ್ಯೆ ಪ್ರಕರಣ: 12 ಆರೋಪಿಗಳ ಬಂಧನ

ವಿಜಯಪುರ: ಜಿಲ್ಲೆಯ ಭೀಮಾತೀರ ಪ್ರದೇಶವನ್ನು ಬೆಚ್ಚಿಬೀಳಿಸಿದ್ದ 6 ಮಂದಿಯ ಸಾಮೂಹಿಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದು, 12 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಇಂದು ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಚಡಚಣ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಮೇ 29ರಂದು ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಜಮೀನೊಂದರಲ್ಲಿ ನಡೆದ ಭೀಕರ ಹತ್ಯಾಕಾಂಡ ರಾಜ್ಯದಾದ್ಯಂತ ಸಂಚಲನ ಮೂಡಿಸಿತ್ತು. ಡಬಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿ, ಬಳಿಕ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಆರು ಮಂದಿಯನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು.

ಘಟನೆಯಲ್ಲಿ ಚಡಚಣದ ಪ್ರತಿಷ್ಠಿತ ನಿರಾಳೆ ಕುಟುಂಬದ ಐವರು ಸದಸ್ಯರು ಹಾಗೂ ಅವರೊಂದಿಗೆ ಬಂದಿದ್ದ ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದರು. ದುಂಡಪ್ಪ ನಿರಾಳೆ (65), ಶಿವಪುತ್ರ ನಿರಾಳೆ (58), ಚಂದ್ರಕಾಂತ ನಿರಾಳೆ (55), ರಾಹುಲ್ ನಿರಾಳೆ (25), ಸಮರ್ಥ ನಿರಾಳೆ (23) ಮತ್ತು ಶಬ್ಬೀರ್ ಅತ್ತಾರ್ (45) ಮೃತರು.

ಈ ಕೃತ್ಯವನ್ನು ಗೋವಿಂದಪುರ ಗ್ರಾಮದ ಅಪ್ಪುಗೌಡ ಪಾಟೀಲ್ ಕುಟುಂಬದ ಸದಸ್ಯರು ನಡೆಸಿದ್ದಾರೆ ಎಂದು ಆರೋಪಿಸಿ ನಿರಾಳೆ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಈಗಾಗಲೇ 12 ಮಂದಿಯನ್ನು ಬಂಧಿಸಿದ್ದು, ಹತ್ಯೆಯ ಹಿಂದಿನ ನಿಖರ ಕಾರಣ ಮತ್ತು ಸಂಚಿನ ಕುರಿತು ಹೆಚ್ಚಿನ ವಿಚಾರಣೆ ಮುಂದುವರಿದಿದೆ.