Home Blog Page 163

ಕೆಐಎಬಿಯಿಂದ ದಾಖಲೆಯ 5.2 ಲಕ್ಷ ಮೆಟ್ರಿಕ್ ಟನ್ ಸರಕು ಸಾಗಾಟ!

0

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಬಿ) ಸರಕು ಸಾಗಾಟ ಕ್ಷೇತ್ರದಲ್ಲೂ ಹೊಸ ದಾಖಲೆ ನಿರ್ಮಿಸಿದೆ. ಕಳೆದ ವರ್ಷ ಕೆಐಎಬಿಯಿಂದ ಒಟ್ಟು 5 ಲಕ್ಷ 20 ಸಾವಿರ 985 ಮೆಟ್ರಿಕ್ ಟನ್ ಸರಕು ಸಾಗಾಟವಾಗಿದ್ದು, ಇದು ವಿಮಾನ ನಿಲ್ದಾಣದ ಇತಿಹಾಸದಲ್ಲೇ ಮಹತ್ವದ ಸಾಧನೆಯಾಗಿದೆ.

2024ರ ಅವಧಿಗೆ ಹೋಲಿಸಿದರೆ 2025ರಲ್ಲಿ ಸರಕು ಸಾಗಾಟದಲ್ಲಿ ಶೇ.5ರಷ್ಟು ಏರಿಕೆ ದಾಖಲಾಗಿದೆ. ಆಗಸ್ಟ್ 7ರಂದು ಒಂದೇ ದಿನದಲ್ಲಿ 2,207 ಮೆಟ್ರಿಕ್ ಟನ್ ಸರಕು ಸಾಗಾಟ ಮಾಡುವ ಮೂಲಕ ಗರಿಷ್ಠ ದೈನಂದಿನ ಸರಕು ಸಾಗಾಟದ ದಾಖಲೆಯನ್ನೂ ಕೆಐಎಬಿ ತನ್ನ ಮುಡಿಗೆ ಏರಿಸಿಕೊಂಡಿದೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ದೇಶೀಯ ಹಾಗೂ ಅಂತಾರಾಷ್ಟ್ರೀಯವಾಗಿ ಒಟ್ಟು 37 ವಿಮಾನ ನಿಲ್ದಾಣಗಳಿಗೆ ಸರಕು ಸಾಗಾಟ ನಡೆಯುತ್ತಿದೆ. ಭಾರತದ ಅತಿದೊಡ್ಡ ದೇಶೀಯ ಸರಕು ಟರ್ಮಿನಲ್ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಕೆಐಎಬಿ, 8.2 ಎಕರೆ ವಿಸ್ತೀರ್ಣದಲ್ಲಿ 3 ಲಕ್ಷ 70 ಸಾವಿರ ಚದರ ಅಡಿ ವಿಸ್ತಾರದ ಎ-ಗ್ರೇಡ್ ಗೋದಾಮನ್ನು ಹೊಂದಿದೆ.

ಕೆಐಎಬಿಯಿಂದ ಹೆಚ್ಚಾಗಿ ಕೃಷಿ ಉತ್ಪನ್ನಗಳು, ಔಷಧಿಗಳು, ಆಟೋ ಭಾಗಗಳು ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ಸಾಗಾಟ ನಡೆಯುತ್ತಿದೆ. ಚಿಕಾಗೋ, ಸಿಂಗಾಪುರ, ಲಂಡನ್, ಹೀಥ್ರೋ, ಫ್ರಾಂಕ್‌ಫರ್ಟ್ ಮತ್ತು ಲೀಪ್ಜಿಗ್ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ನಗರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ನಡೆಯುತ್ತಿದೆ. ಈ ಸಾಧನೆಯೊಂದಿಗೆ ಬೆಂಗಳೂರು ವಿಮಾನ ನಿಲ್ದಾಣದ ಜಾಗತಿಕ ಮಹತ್ವ ಮತ್ತಷ್ಟು ಹೆಚ್ಚಾಗಿದೆ.

ಕೆಲವರಿಗೆ ಲೂಟಿ ಚಪಲ, ನನಗೆ ಸೇವೆ ಚಪಲ: ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

0

ಬೆಂಗಳೂರು: ಕೆಲವರಿಗೆ ಜನರನ್ನು ಲೂಟಿ ಮಾಡಿ ದುಡ್ಡು ಮಾಡುವ ಚಪಲ. ನನಗೆ ಜನರ ಜತೆ ನಿಂತು ಅವರ ಸಹಾಯಕ್ಕೆ ನಿಲ್ಲುವ ಚಪಲ. ಒಬ್ಬೊಬ್ಬರಿಗೆ ಒಂದೊಂದು ಚಪಲ ಇರುತ್ತದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಹೇಳಿದರು.

ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು ಸಚಿವರು. ಕುಮಾರಸ್ವಾಮಿ ಅವರಿಗೆ ಮಾತನಾಡುವ ಚಪಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿರುವ ಮಾತಿಗೆ ಸಚಿವರು ತಿರುಗೇಟು ಕೊಟ್ಟರು.

ನಿಮ್ಮದೊಂದು ರೀತಿ‌ ಚಪಲ, ನನ್ನದೊಂದು ರೀತಿ ಚಪಲ. ನಿಮ್ಮದು ಹಣ ಮಾಡುವ ಚಪಲ. ನನ್ನದು ನಮ್ಮದು ಜನರ ಸಮ ಸ್ಪಂದಿಸಿ ಅವರ ಬೆಂಬಲ ಪಡೆಯುವ ಚಪಲ. ಅವರಿಗೂ ನನಗೂ ಇರುವ ವ್ಯತ್ಯಾಸ ಇಷ್ಟೇ ಎಂದು ಟೀಕಾಕಾರರಿಗೆ ಟಾಂಗ್ ಕೊಟ್ಟರು ಕೇಂದ್ರ ಸಚಿವರು.

ಸ್ವಜಾತಿಯವರಿಂದಲೇ‌ ಅನ್ಯಾಯ ಆಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು; ನಾನು ಆ ವರದಿಯನ್ನು ನೋಡಿದ್ದೇನೆ. ಕಷ್ಟ ಬಂದ ಕ್ಯಾಸ್ಟ್ ಅಂತಾರೆ. ಆದರೆ ಅವರು ಅವರು ಪ್ರತಿನಿಧಿಸುವ ಜಾತಿಗೆ ಏನು ಮಾಡಿದ್ದಾರ ಬೆಳಗ್ಗೆಯಿಂದ ಸಂಜೆವರೆಗೂ‌ ಹಣ ಹೊಡೆಯಬೇಕು ಎನ್ನುವವರು ಅವರು. ಬೇಕು ಅಂತಾರೆ. ಜನರ ಬೆಂಬಲ ಯಾವ ರೀತಿ ಪಡೆಯಬೇಕು ಎನ್ನುವುದಕ್ಕಿಂತ ಕ್ಷಣ ಕ್ಷಣವೂ ರಾಜ್ಯದ ಲೂಟಿ ಮಾಡಬೇಕು ಎಂದು ಕೆಲಸ ಮಾಡ್ತಿದ್ದಾರೆ. ಅಂತಹ ವ್ಯಕ್ತಿಗಳಿಗೆ ಜಾತಿ ಹೆಸರಿನಲ್ಲಿ ಬೆಂಬಲ ಕೊಡ್ತಾರಾ? ಎಂದು ಅವರು ಟ್ವೀಟ್ ಟೀಕಿಸಿದರು.

ನಾನು ಬಾಯಿ ಚಪಲಕ್ಕೆ ಮಾತಾಡಲ್ಲ. ಇಂಥವರು ನಡೆಸುವ ಅಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ಕೊಡ್ತಿದ್ದೇನೆ ಅಷ್ಟೇ. ನಾನು ಮಾತನಾಡುವುದು ನನ್ನ ಮತ್ತು ಜನತೆಯ ಸಂಬಂಧ ಬೆಳೆಸಿಕೊಳ್ಳಲು. ಈ ಅಣ್ಣ ತಮ್ಮಂದಿರದ್ದು ಕಟ್ಟಿಕೊಂಡು ನನಗೇನಾಗಬೇಕು? ದಿನ ಬೆಳಗಾದರೆ ಯಾರ ತಲೆ ಒಡೆಯಬೇಕು? ಯಾರ ಜಮೀನಿಗೆ ಫೆನ್ಸಿಂಗ್ ಹಾಕಬೇಕು? ಯಾವ ರೀತಿ ಅಕ್ರಮವಾಗಿ ಸಂಪಾದನೆ ಮಾಡಬೇಕು ಎನ್ನುವ ಜಾತಿ ಹೆಸರು ಹೇಳಿದಾಕ್ಷಣ ಬೆಂಬಲ ಕೊಡ್ತಾರ? ಎಂದು ಖಾರವಾಗಿ ಪ್ರಶ್ನಿಸಿದರು.

ಕುಟುಂಬದೊಂದಿಗೆ ಗೋಕರ್ಣ ಬೀಚ್‌ನಲ್ಲಿ ಬೋಟಿಂಗ್‌ಗೆ ತೆರಳಿದ್ದ ಬೆಂಗಳೂರಿನ ಮಹಿಳೆ ಸಾವು

0

ಕಾರವಾರ: ಕುಟುಂಬದೊಂದಿಗೆ ಆನಂದದ ಪ್ರವಾಸಕ್ಕೆ ಬಂದಿದ್ದ ಮಹಿಳೆಗೆ ಗೋಕರ್ಣ ಪ್ಯಾರಡೈಸ್ ಬೀಚ್ ಕೊನೆಯ ತಾಣವಾಗಿದ್ದು, ಬೋಟಿಂಗ್ ವೇಳೆ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಘಟನೆ ನೋವುಂಟುಮಾಡಿದೆ.

ಮೃತ ಮಹಿಳೆಯನ್ನು ಬೆಂಗಳೂರು ನಿವಾಸಿ ನಾಗರತಿನಮ್ (58) ಎಂದು ಗುರುತಿಸಲಾಗಿದೆ. ಪ್ರವಾಸದ ಭಾಗವಾಗಿ ಬೀಚ್‌ನಲ್ಲಿ ಬೋಟಿಂಗ್ ಮಾಡಲು ತೆರಳಿದ್ದ ಅವರು, اچಾನಕ್ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಕುಟುಂಬಸ್ಥರು 108 ಆಂಬುಲೆನ್ಸ್‌ಗೆ ಕರೆ ಮಾಡಿದರೂ, ಅದು ಸಮಯಕ್ಕೆ ಸ್ಥಳಕ್ಕೆ ಬಂದಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪರಿಸ್ಥಿತಿ ಗಂಭೀರವಾಗಿದ್ದರಿಂದ ಕುಮಟಾದಿಂದ ಖಾಸಗಿ ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರೂ, ಚಿಕಿತ್ಸೆ ಪಡೆಯುವ ಮುನ್ನವೇ ಮಹಿಳೆ ಮಾರ್ಗಮಧ್ಯೆ ಅಸುನೀಗಿದ್ದಾರೆ. ಈ ಘಟನೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಅಭಿಮಾನಿಗಳ ಪೈಲ್ವಾನ್ ‘ಕೊಬ್ಬರಿ ಹೋರಿ’ ನಿಧನ: ಕರ್ಜಗಿಯಲ್ಲಿ ಭಾವುಕ ವಿದಾಯ, ಸಾವಿರಾರು ಜನರಿಂದ ಗೌರವ ನಮನ

0

ಹಾವೇರಿ: ಕೇವಲ ಒಂದು ಹೋರಿ ಅಲ್ಲ… ಗ್ರಾಮಸ್ಥರ ಹೆಮ್ಮೆ, ಅಭಿಮಾನಿಗಳ ಹೃದಯದ ಹೀರೋ ಆಗಿದ್ದ ‘ಕೊಬ್ಬರಿ ಹೋರಿ’ ಇದೀಗ ಅನಾರೋಗ್ಯದಿಂದ ನಿಧನರಾಗಿದ್ದು, ಕರ್ಜಗಿ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ.

ಕರ್ಜಗಿ ಓಂ–112 ಹೆಸರಿನಿಂದ ಪ್ರಸಿದ್ಧಿಯಾಗಿದ್ದ ಈ ಹೋರಿ, ರೈತ ಜಗದೀಶ್ ನಾಗಪ್ಪ ಮಾಣೆಗಾರ ಅವರ ಸಾಕಾಣಿಕೆಯಲ್ಲಿ ಬೆಳೆದಿತ್ತು. ನಾಲ್ಕು ವರ್ಷಗಳ ಹಿಂದೆ ಸುಮಾರು 3 ಲಕ್ಷ ರೂಪಾಯಿ ನೀಡಿ ಖರೀದಿಸಲ್ಪಟ್ಟ ಈ ಹೋರಿ, ರಾಜ್ಯಮಟ್ಟದ ಹೋರಿ ಸ್ಪರ್ಧೆಗಳಲ್ಲಿ ತನ್ನ ಶೌರ್ಯ ಪ್ರದರ್ಶಿಸಿ ಮೂರು ಬೈಕ್‌, ಬೆಳ್ಳಿ ಗದೆ, ಟ್ರಜೂರಿ ಸೇರಿದಂತೆ ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿತ್ತು.

‘ಅಭಿಮಾನಿಗಳ ಪೈಲ್ವಾನ್’ ಎಂದು ಕರೆಸಿಕೊಂಡಿದ್ದ ಕೊಬ್ಬರಿ ಹೋರಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆ ಗ್ರಾಮಕ್ಕೆ ಸಾವಿರಾರು ಜನರು ಆಗಮಿಸಿ ಅಂತಿಮ ದರ್ಶನ ಪಡೆದರು. ಮಾಲೀಕರು ಹೋರಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟ ದೃಶ್ಯ ಎಲ್ಲರನ್ನೂ ಕಳವಳಗೊಳಿಸಿತು.

ಗ್ರಾಮದ ಪ್ರಮುಖ ಬೀದಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಕೊಬ್ಬರಿ ಹೋರಿಗೆ ಅಂತಿಮ ಗೌರವ ಸಲ್ಲಿಸಲಾಯಿತು. ನಂತರ ಮಾಲೀಕರ ಜಮೀನಿನಲ್ಲಿ ಗೌರವಪೂರ್ವಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಶಿಡ್ಲಘಟ್ಟ ಪ್ರಕರಣ: ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ – ನಿಖಿಲ್ ಕುಮಾರಸ್ವಾಮಿ

0

ಬೆಂಗಳೂರು: ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಮುಖಂಡನಿಂದ ಧಮ್ಕಿ ಹಾಕಿದ ಆರೋಪದ ಪ್ರಕರಣದಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಶಿಡ್ಲಘಟ್ಟದಲ್ಲಿ ಪೌರಾಯುಕ್ತೆಯ ವಿರುದ್ಧ ಕಾಂಗ್ರೆಸ್ ಮುಖಂಡ ತುಚ್ಚವಾಗಿ ಮಾತನಾಡಿದ್ದಾರೆ. ಇದು ಖಂಡನೀಯ. ಆದರೆ ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ಮೌನ ವಹಿಸಿದೆ” ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ತಂದಿರುವ ದ್ವೇಷ ಭಾಷಣ ಮಸೂದೆ ಕುರಿತು ತೀವ್ರ ಟೀಕೆ ನಡೆಸಿದ ನಿಖಿಲ್, “ಈ ಬಿಲ್ ಕಾಂಗ್ರೆಸ್ ಮುಖಂಡರಿಗೆ ಅನ್ವಯವಾಗುವುದಿಲ್ಲ. ಇದು ವಿಪಕ್ಷಗಳು ಮತ್ತು ಮಾಧ್ಯಮಗಳ ಧ್ವನಿ ಕಟ್ಟಿಹಾಕಲು ಮಾತ್ರ ಬಳಕೆಯಾಗುತ್ತಿದೆ. ಸರ್ಕಾರದ ವಿರುದ್ಧ ಮಾತನಾಡುವವರನ್ನು ಮೌನಗೊಳಿಸುವುದೇ ಇದರ ಉದ್ದೇಶ” ಎಂದು ಕಿಡಿಕಾರಿದರು.

ಶಿಡ್ಲಘಟ್ಟ ಪ್ರಕರಣದ ಮೊದಲ ದಿನವೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಹಿಳಾ ಅಧಿಕಾರಿಗೆ ಕರೆ ಮಾಡಿ ಧೈರ್ಯ ತುಂಬಿದ ವಿಚಾರವನ್ನು ಸ್ಮರಿಸಿದ ನಿಖಿಲ್, “ಈ ಸರ್ಕಾರಕ್ಕೆ ಹೆಣ್ಣುಮಕ್ಕಳಿಗೆ ಕಿಂಚಿತ್ತಾದರೂ ಗೌರವ ಇದ್ದರೆ, ದಯಾ-ದಾಕ್ಷಿಣ್ಯವಿಲ್ಲದೆ ಸಂಬಂಧಿಸಿದ ಕಾಂಗ್ರೆಸ್ ಮುಖಂಡನ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ–ಮಿತ್ರಪಕ್ಷಗಳ ಗೆಲುವಿಗೆ ಬೆಂಗಳೂರಿನಲ್ಲಿ ವಿಜಯೋತ್ಸವ

0

ಬೆಂಗಳೂರು: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಜಯಭೇರಿಯ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯ ಬಳಿ ಇಂದು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.

ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಮುಂಬೈಯಲ್ಲಿ ಅತಿ ದೊಡ್ಡ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷವು ಭಾರೀ ಮುನ್ನಡೆ ಸಾಧಿಸಿದೆ. ಇದು ಸಂತಸದ ವಿಚಾರ ಎಂದರು. ಕಾಂಗ್ರೆಸ್‍ನವರು ಮತಪತ್ರದಲ್ಲಿ ಚುನಾವಣೆ ಮಾಡಿದರೆ ಗೆಲ್ಲುವುದಾಗಿ ಹೇಳುತ್ತಿದ್ದರು.

ಅದರಲ್ಲೂ ನಮ್ಮ ರಾಜ್ಯದಲ್ಲಿ ಸೋತಿದ್ದಾರೆ. ಈಗ ಮತ್ತೆ ಇವಿಎಂ ಹ್ಯಾಕ್ ಆಗಿದೆ ಎನ್ನಲಿದ್ದಾರೆ ಎಂದು ವ್ಯಂಗ್ಯವಾಡಿದರು. 30 ವರ್ಷಗಳ ನಂತರ ಬಿಜೆಪಿ ಮೇಯರ್ ಚುಕ್ಕಾಣಿ ಹಿಡಿಯುವುದು ಅತ್ಯಂತ ಖುಷಿ ತಂದಿದೆ ಎಂದು ತಿಳಿಸಿದರು.

ಕೇರಳದ ತಿರುವನಂತಪುರದಲ್ಲೂ ನಾವು ಗೆದ್ದಿದ್ದೇವೆ. ನರೇಂದ್ರ ಮೋದಿ ಜೀ ಅವರು ಮಾಡುವ ಕೆಲಸ ಇದಕ್ಕೆ ಕಾರಣ; ಬಿಜೆಪಿಗೆ ಪರ್ಯಾಯ ಯಾವುದೂ ಇಲ್ಲವೆಂದು ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಮುಂಬೈ ಜನತೆಯನ್ನು ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ, ನಾಯಕರನ್ನು ಅಭಿನಂದಿಸಿದರು.

ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಪ್ತಗಿರಿಗೌಡ ಅವರು ಮಾತನಾಡಿ, ರಾಷ್ಟ್ರದ ಅತ್ಯಂತ ಶ್ರೀಮಂತ ನಗರಪಾಲಿಕೆ ಬೃಹನ್ಮುಂಬೈಯಲ್ಲಿ ಬಿಜೆಪಿ ಮಿತ್ರಕೂಟ ಗೆದ್ದಿದೆ. ಮುಂಬೈ ಜನತೆ ನಿಜವಾದ ಶಿವಸೇನೆ ಯಾರೆಂದು ತೋರಿಸಿದ್ದಾರೆ ಎಂದು ತಿಳಿಸಿದರು. ಅಲ್ಲಿ ಶಿವಸೇನೆ ಹೆಸರಿನಲ್ಲಿ ಬಹಳ ಬೂಟಾಟಿಕೆ ನಡೆಯುತ್ತಿತ್ತು ಎಂದು ನುಡಿದರು.

ನಮ್ಮ ಮೇಲೆ ಠಾಕ್ರೆಯವರ ಕುಟುಂಬ ಮಾಡಿದ ಆರೋಪಗಳೆಲ್ಲವನ್ನೂ ಬದಿಗೊತ್ತಿ ನಿಜವಾದ ಶಿವಸೇನೆ ಯಾವುದು, ರಾಷ್ಟ್ರಕ್ಕೆ ಮುಂಚೂಣಿಯಲ್ಲಿ ಯಾರು ನಡೆಸಿಕೊಂಡು ಹೋಗಬೇಕೆಂದು ಜನ ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು. ಇದು ಪ್ರಜಾಪ್ರಭುತ್ವದ ನೈಜ ಗೆಲುವು ಎಂದು ವಿಶ್ಲೇಷಿಸಿದರು. ಕಾರ್ಯಕರ್ತರು ಮತ್ತು ನಾಯಕರಿಗೆ ಅಭಿನಂದನೆ ಸಲ್ಲಿಸಿದರು.

ಪಾಮ್ ಆಯಿಲ್ ಟ್ಯಾಂಕರ್ ಲಾರಿ ಪಲ್ಟಿ: ಅಡುಗೆ ಎಣ್ಣೆಗಾಗಿ ಮುಗಿಬಿದ್ದ ಜನ

0

ಕಂಪ್ಲಿ: ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಲಾಪುರ ಸಮೀಪ ಪಾಮ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಅಪಾರ ಪ್ರಮಾಣದಲ್ಲಿ ಅಡುಗೆ ಎಣ್ಣೆ ರಸ್ತೆಗೆ ಸೋರಿಕೆಯಾಗಿದೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಬಕೆಟ್‌, ಕ್ಯಾನ್‌ಗಳು ಮತ್ತು ವಿವಿಧ ಪಾತ್ರೆಗಳನ್ನು ಹಿಡಿದು ಸೋರಿದ ಪಾಮ್ ಆಯಿಲ್ ಅನ್ನು ಸಂಗ್ರಹಿಸಿಕೊಂಡಿದ್ದಾರೆ.

ಅಪಘಾತದಲ್ಲಿ ಅದೃಷ್ಟವಶಾತ್ ಲಾರಿಯ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಂಪ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟ್ಯಾಂಕರ್ ಪಲ್ಟಿಯಾಗಲು ಕಾರಣ ಏನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸಿಎಂ ಸ್ಥಾನದ ವಿಚಾರವನ್ನು ಮಾಧ್ಯಮಗಳಲ್ಲಿ ಚರ್ಚಿಸುವುದು ಸರಿಯಲ್ಲ: ಡಿ.ಕೆ. ಶಿವಕುಮಾರ್

0

ನವದೆಹಲಿ: “ಸಿಎಂ ಸ್ಥಾನದ ವಿಚಾರ ನನ್ನ, ಸಿಎಂ ಹಾಗೂ ಹೈಕಮಾಂಡ್ ನಡುವಣ ವಿಚಾರ. ಇದು ಸಾರ್ವಜನಿಕವಾಗಿ ಚರ್ಚೆ ಮಾಡುವ ವಿಷಯವಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.

ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. ರಾಹುಲ್ ಗಾಂಧಿ ಅವರ ಜೊತೆ ಸಿಎಂ ಸ್ಥಾನದ ಬಗ್ಗೆ ಚರ್ಚೆ ಮಾಡಲಾಯಿತೇ ಎಂದು ಕೇಳಿದಾಗ, ಈ ರೀತಿ ಉತ್ತರಿಸಿದರು.

ಇಂದು ಅಸ್ಸಾಂ ಚುನಾವಣೆ ಸಂಬಂಧ ಹೈಕಮಾಂಡ್ ನಾಯಕರ ಜತೆ ಸಭೆ ಇದೆ, ಈ ಸಭೆಯ ಯೋಜನೆಗಳೇನು ಎಂದು ಕೇಳಿದಾಗ, “ನಮ್ಮ ಪಕ್ಷದ ಯೋಜನೆಗಳನ್ನು ಬಹಿರಂಗಪಡಿಸಲು ಹೇಗೆ ಸಾಧ್ಯ? ಇದನ್ನು ಪಕ್ಷದ ಮಟ್ಟದಲ್ಲಿ ಮಾತ್ರ ಚರ್ಚೆ ಮಾಡಲಾಗುವುದು. ಸಾರ್ವಜನಿಕವಾಗಿ ಅಲ್ಲ. ಏನಾದರೂ ಮಾಹಿತಿ ನೀಡುವುದಿದ್ದರೆ, ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಇದ್ದಾರೆ, ಅವರು ನೀಡುತ್ತಾರೆ” ಎಂದರು.

ಈ ಪ್ರವಾಸದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ನಾನು ಪಕ್ಷದ ನಾಯಕರನ್ನು ಭೇಟಿ ಮಾಡುವ ಉದ್ದೇಶದಿಂದಲೇ ದೆಹಲಿಗೆ ಬಂದಿದ್ದೇನೆ, ನೋಡೋಣ” ಎಂದರು.

ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಕಾನೂನಾತ್ಮಕ ವಿಚಾರಗಳನ್ನು ಚರ್ಚೆ ಮಾಡಬೇಕಾಗಿದ್ದು, ಹೀಗಾಗಿ ಕಾನೂನು ತಜ್ಞರು ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದೇನೆ” ಎಂದು ತಿಳಿಸಿದರು.

ಆಸ್ತಿಗಾಗಿ ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನಿಗೆ ಚಟ್ಟ ಕಟ್ಟಿದ ಅಣ್ಣ

0

ಮಂಡ್ಯ: ಮಾಯಪ್ಪನಹಳ್ಳಿ ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಯೋಗೇಶ್ (30) ಎಂಬ ವ್ಯಕ್ತಿಯನ್ನು ತಮ್ಮ ಅಣ್ಣ ಲಿಂಗರಾಜು ಮತ್ತು ಅಣ್ಣನ ಮಕ್ಕಳು ಭರತ್, ದರ್ಶನ್ ಸೇರಿ 28 ಬಾರಿ ಇರಿದು ಕೊಂದು ಹತ್ಯೆ ಮಾಡಿದ್ದಾರೆ. ಕೊಲೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಪೊಲೀಸ್ ಹೇಳಿಕೆಯಲ್ಲಿ, ದೀರ್ಘಕಾಲದಿಂದ ಲಿಂಗರಾಜು ಮತ್ತು ಯೋಗೇಶ್ ನಡುವೆ ಆಸ್ತಿ ವಿವಾದ ನಡೆದು ಬಂದಿದ್ದು, ಕುಟುಂಬದಲ್ಲಿ ಆಗಾಗ ಜಗಳ ಸಂಭವಿಸುತ್ತಿರುತ್ತಿತ್ತು. ಈ ವಿವಾದವೇ ಕೊನೆಯದಾಗಿ ಹತ್ಯೆಗೆ ಕಾರಣವಾಗಿದೆ ಎನ್ನಲಾಗಿದೆ. ಯೋಗೇಶ್ ಅವರ ಮದುವೆ ಈ ತಿಂಗಳ 21 ರಂದು ನಿಗದಿಯಾಗಿತ್ತು, ಆದರೆ ದುರಾದೃಷ್ಟವಶಾತ್ ಅಣ್ಣನಿಂದಲೇ ಅವರು ಕೊಲೆಯಾಗಿದ್ದಾರೆ.

ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆ, ಸ್ಥಳೀಯರು ಮತ್ತು ಭಾಗವಹಿಸಿದ ಬಂಧು–ಸ್ನೇಹಿತರನ್ನು ಆಘಾತಕ್ಕೊಳಪಡಿಸಿದೆ. ಪೊಲೀಸರು ಆರೋಪಿಗಳನ್ನು ಹುಡುಕಲು ಬಲೆ ಬೀಸಿ ತೀವ್ರ ತನಿಖೆ ಆರಂಭಿಸಿದ್ದಾರೆ.

ಬಿಗ್ ಬಾಸ್ ರಣಹದ್ದು ವಿವಾದ: ತಪ್ಪು ಮಾಹಿತಿ ಹಂಚಿದ ಪ್ರೋಗ್ರಾಂ ಹೆಡ್‌ಗೆ ಅರಣ್ಯ ಇಲಾಖೆಯಿಂದ ನೋಟಿಸ್

ರಾಮನಗರದಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಕಾರ್ಯಕ್ರಮ ಮತ್ತೊಂದು ವಿವಾದಕ್ಕೆ ಸಿಲುಕಿದೆ. ರಣಹದ್ದು ಸಂರಕ್ಷಣಾ ಟ್ರಸ್ಟ್ ತಪ್ಪು ಮಾಹಿತಿ ಹರಡಲಾಗಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಕಾರ್ಯಕ್ರಮದ ಹೆಡ್‌ಗೆ ನೋಟಿಸ್ ಜಾರಿ ಮಾಡಿದೆ.

ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ, ರಣಹದ್ದಿನ ಗುಣಗಳನ್ನು ತಪ್ಪಾಗಿ ವಿವರಿಸುವ ಮೂಲಕ “ಹೊಂಚು ಹಾಕಿ ಸಂಚು ಮಾಡಿ ಲಬಕ್ ಅಂತ ಹಿಡಿಯುವುದು” ಎಂದು ಹೇಳಿದ್ದಾರೆ. ರಣಹದ್ದುಗಳು ಬೇಟೆಯಾಡುವುದಿಲ್ಲ, ಹದ್ದು ಮತ್ತು ರಣಹದ್ದಿನ ವ್ಯತ್ಯಾಸವೂ ಸ್ಪಷ್ಟವಾಗಿದೆ. ಈ ತಪ್ಪು ವಿವರಣೆ ಪಕ್ಷಿ ಪ್ರೇಮಿಗಳ ಮನಸ್ಸಿನಲ್ಲಿ ಬೇಸರ ಮೂಡಿಸಿದೆ.

ಕೆಲವಾರಗಳ ಹಿಂದೆ ನಡೆದ ಸ್ಪರ್ಧಿಗಳ ಟಾಸ್ಕ್‌ನಲ್ಲಿ, ರಣಹದ್ದಿನ ಫೋಟೋ ಬಳಸಿ ವ್ಯಕ್ತಿಯ ಗುಣಕ್ಕೆ ಹೋಲಿಕೆ ಮಾಡಲಾಗಿತ್ತು. ಈ ಘಟನೆಯ ನಂತರ, ಡಿಆರ್‌ಎಫ್ಓ ಸುಷ್ಮಾ ನೋಟಿಸ್ ನೀಡಿದ್ದು, ಖಾಸಗಿ ಚಾನಲ್ ಸ್ಪಷ್ಟೀಕರಣ ನೀಡಬೇಕಾಗಿ ತಿಳಿಸಲಾಗಿದೆ. ಈ ಮೂಲಕ ಹದ್ದು–ರಣಹದ್ದುಗಳ ವಿಭಿನ್ನತೆಯನ್ನು ಹಾಗೂ ರಕ್ಷಣೆ ಮುಖ್ಯತೆಯನ್ನು ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ.

error: Content is protected !!