Home Blog Page 165

ರಾಮಗಿರಿ ಬಳಿ ಕಾರು-ಬೈಕ್ ಮುಖಾಮುಖಿ ಡಿಕ್ಕಿ, ಐವರಿಗೆ ಗಂಭೀರ ಗಾಯ: ಸಿಸಿಟಿವಿಯಲ್ಲಿ ಅಪಘಾತದ ಭೀಕರತೆ ಸೆರೆ

0

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಭಾರೀ ಆತಂಕ ಮೂಡಿಸಿದೆ. ಅತಿವೇಗದಲ್ಲಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ದೂರಕ್ಕೆ ಚಿಮ್ಮಿ ಬಿದ್ದಿದೆ. ಅಪಘಾತದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ನೋಡುಗರಲ್ಲಿ ಬೆಚ್ಚಿಬೀಳಿಸುವಂತಿದೆ.

ಈ ಅಪಘಾತದಲ್ಲಿ ಐವರು ಗಾಯಗೊಂಡಿದ್ದು, ಮಹಮ್ಮದಲ್ ತಂದೆ ಗೌಸ್ಮುದ್ದೀನ್ ಒಂಟಿ (27), ಫಾತಿಮಾ ಪತ್ನಿ ಗೌಸ್ಮುದ್ದೀನ್ ಒಂಟಿ (53), ಸಮ್ರೀನ್ ಪುತ್ರಿ ಖುಬುದ್ದೀನ್ ಒಂಟಿ (5), ಗಂಗವ್ವ ಪತ್ನಿ ಭೀಮಪ್ಪ ನಾಯ್ಕರ್ (75) ಹಾಗೂ ಭೀಮಪ್ಪ ತಂದೆ ರಾಮಪ್ಪ ನಾಯ್ಕರ್ (80) ಗಾಯಾಳುಗಳಾಗಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಘಟನೆಯ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವೇನು ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

70 ಸಾವಿರ ರೂ. ಕಾರನ್ನು ಮಾಡಿಫೈ ಮಾಡಿದ ವಿದ್ಯಾರ್ಥಿಗೆ 1 ಲಕ್ಷ ರೂ. ದಂಡ!

0

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಹಾಗೂ ವಾಹನಗಳ ಅಕ್ರಮ ಮಾಡಿಫಿಕೇಶನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹದ್ದೇ ಘಟನೆಯಲ್ಲಿ ಕೇವಲ ₹70 ಸಾವಿರ ಮೌಲ್ಯದ ಕಾರಿಗೆ ವಿದ್ಯಾರ್ಥಿಯೊಬ್ಬರಿಗೆ ₹1.11 ಲಕ್ಷ ದಂಡ ವಿಧಿಸಿರುವ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.

ಕೇರಳ ಮೂಲದ ವಿದ್ಯಾರ್ಥಿಯೊಬ್ಬರು ಜನವರಿ 2ರಂದು ನಗರದ ಹೆಣ್ಣೂರು ರಸ್ತೆ ಬಳಿ ಕಾರು ಚಲಾಯಿಸುತ್ತಿದ್ದ ವೇಳೆ, ಕಾರಿನ ಹಿಂದಿನಿಂದ ಬೆಂಕಿಯ ಕಿಡಿ ಹಾಗೂ ಭಾರೀ ಶಬ್ದ ಹೊರಬರುತ್ತಿರುವ ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದರಿಂದ ಆತಂಕಗೊಂಡ ದಾರಿಹೋಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನ ಆಧಾರದಲ್ಲಿ ಸಂಚಾರಿ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಸಂಬಂಧಿತ ಕಾರು ಹಾಗೂ ವಿದ್ಯಾರ್ಥಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದರು. ಪ್ರಕರಣ ದಾಖಲಿಸುವ ಬದಲು, ಸಂಚಾರ ಪೊಲೀಸರು ನಿಯಮ ಉಲ್ಲಂಘನೆ ಸಂಬಂಧ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ದೂರು ಸಲ್ಲಿಸಿದರು.

ತನಿಖೆ ನಡೆಸಿದ ಆರ್‌ಟಿಒ ಅಧಿಕಾರಿಗಳು, ಕಾರಿನಲ್ಲಿ ಅಕ್ರಮವಾಗಿ ಮಾಡಿಫೈ ಮಾಡಲಾದ ಸೈಲೆನ್ಸರ್ ಇರುವುದನ್ನು ದೃಢಪಡಿಸಿದರು. ಈ ಸೈಲೆನ್ಸರ್ ಅತಿಯಾದ ಶಬ್ದವನ್ನು ಉಂಟುಮಾಡುವುದಲ್ಲದೆ, ಇತರ ವಾಹನ ಚಾಲಕರಲ್ಲಿ ಭಯ ಹುಟ್ಟಿಸುವಂತೆ ಬೆಂಕಿಯ ಕಿಡಿಗಳನ್ನು ಹೊರಸೂಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕೃತ್ಯ ಮೋಟಾರು ವಾಹನ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಸಾರ್ವಜನಿಕ ಸುರಕ್ಷತೆಗೆ ಅಪಾಯಕಾರಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ವಿದ್ಯಾರ್ಥಿಗೆ ರಾಜಕೀಯ ಪ್ರಭಾವವಿದ್ದು, ಕಡಿಮೆ ದಂಡ ವಿಧಿಸುವಂತೆ ಪೊಲೀಸರ ಮೇಲೆ ಒತ್ತಡವೂ ಬಂದಿತ್ತು ಎನ್ನಲಾಗಿದೆ. ಆದರೆ ಯಾವುದೇ ಒತ್ತಡಕ್ಕೆ ಮಣಿಯದೆ ಅಧಿಕಾರಿಗಳು ₹1,11,500 ದಂಡ ವಿಧಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ದಂಡ ಪಾವತಿಸಿದ ಬಳಿಕ ಕಾರನ್ನು ಬಿಡುಗಡೆ ಮಾಡಲಾಗಿದೆ. ಇಂತಹ ಅಕ್ರಮ ವಾಹನ ಮಾಡಿಫಿಕೇಶನ್‌ಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಮನೆಯಲ್ಲಿ ಹಲ್ಲಿ ಇದ್ದರೆ ಒಳ್ಳೆಯದೇ.? ಕೆಟ್ಟದ್ದೇ.? ಇಲ್ಲಿದೆ ನೋಡಿ ಉತ್ತರ

0

ಹಲ್ಲಿಗಳ ಕಾಟ ಇಲ್ಲದ ಮನೆಗಳೇ ವಿರಳ. ಮನೆಯ ಗೋಡೆಗಳು ಹಾಗೂ ಮೂಲೆಗಳಲ್ಲಿ ಹಲ್ಲಿಗಳ ಓಡಾಟ ಸಾಮಾನ್ಯ. ಅನೇಕರು ಈ ಪುಟ್ಟ ಜೀವಿಗಳನ್ನು ಕಂಡ ಕೂಡಲೇ ಭಯಪಟ್ಟು ಅವುಗಳನ್ನು ಓಡಿಸಲು ಪ್ರಯತ್ನಿಸುತ್ತಾರೆ.

ಆದರೆ ವಾಸ್ತವದಲ್ಲಿ ಹಲ್ಲಿಗಳಿಂದ ಭಯಪಡುವ ಅಗತ್ಯವಿಲ್ಲ. ಅವು ಮನೆಯಲ್ಲಿ ಇದ್ದರೆ ಮನೆ ಸ್ವಚ್ಛವಾಗಿರಲು ಮತ್ತು ಸುರಕ್ಷಿತವಾಗಿರಲು ಸಹಾಯ ಮಾಡುತ್ತವೆ. ಹೌದು, ಹಲ್ಲಿಗಳು ಮನೆಯೊಳಗೆ ಇದ್ದರೆ ಹಲವು ಪ್ರಯೋಜನಗಳಿವೆ. ಅವು ಯಾವುವು ಎಂಬುದನ್ನು ಈಗ ನೋಡೋಣ.

ಕೀಟ ನಿಯಂತ್ರಣದಲ್ಲಿ ಸಹಾಯಕ

ಹಲ್ಲಿಗಳು ನೊಣ, ಜಿರಳೆ, ಜೇಡ ಸೇರಿದಂತೆ ಹಲವಾರು ಕೀಟಗಳನ್ನು ಆಹಾರವಾಗಿ ಸೇವಿಸುತ್ತವೆ. ಇದರಿಂದ ಮನೆಯಲ್ಲಿ ಕೀಟಗಳ ಸಂಖ್ಯೆ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಹಲ್ಲಿಗಳಿರುವುದರಿಂದ ಕೀಟನಾಶಕ ಸ್ಪ್ರೇಗಳನ್ನು ಬಳಸುವ ಅವಶ್ಯಕತೆ ಕಡಿಮೆಯಾಗುತ್ತದೆ. ಕೀಟನಾಶಕಗಳ ಬಳಕೆ ಗಾಳಿಯನ್ನು ಕಲುಷಿತಗೊಳಿಸುವುದಲ್ಲದೆ, ಸಸ್ಯಗಳು ಹಾಗೂ ಜೇನುನೊಣಗಳಂತಹ ಪ್ರಯೋಜನಕಾರಿ ಕೀಟಗಳಿಗೆ ಹಾನಿಯುಂಟುಮಾಡಬಹುದು. ಹಲ್ಲಿಗಳು ಈ ಹಾನಿಯನ್ನು ತಪ್ಪಿಸುವಲ್ಲಿ ಸಹಾಯಕವಾಗುತ್ತವೆ.

ಮನೆಯ ವಾತಾವರಣ ಆರೋಗ್ಯಕರ ಎಂಬ ಸೂಚನೆ

ಮನೆಯಲ್ಲಿ ಹಲ್ಲಿಗಳಿರುವುದು ಮನೆಯ ಪರಿಸರ ಸಮತೋಲನದಲ್ಲಿದ್ದು ಆರೋಗ್ಯಕರವಾಗಿದೆ ಎಂಬುದಕ್ಕೆ ಒಂದು ಸೂಚನೆ. ಅವು ನೈಸರ್ಗಿಕ ಕೀಟ ನಿಯಂತ್ರಕರಾಗಿ ಕಾರ್ಯನಿರ್ವಹಿಸಿ, ಮನೆಯೊಳಗೆ ಅನಗತ್ಯ ಕೀಟಗಳು ಹೆಚ್ಚಾಗದಂತೆ ನೋಡಿಕೊಳ್ಳುತ್ತವೆ. ಆದರೆ ಅವು ಆಹಾರ ಪದಾರ್ಥಗಳ ಹತ್ತಿರ ಬರದಂತೆ ಸ್ವಚ್ಛತೆಗೆ ಗಮನ ಕೊಡುವುದು ಅಗತ್ಯ.

 ಸೊಳ್ಳೆಗಳ ಕಾಟದಿಂದ ರಕ್ಷಣೆ

ಹಲ್ಲಿಗಳು ಸೊಳ್ಳೆಗಳನ್ನು ಬೇಟೆಯಾಡುವಲ್ಲಿ ಬಹಳ ಪರಿಣಾಮಕಾರಿ. ರೋಗಗಳನ್ನು ಹರಡುವ ಸೊಳ್ಳೆಗಳನ್ನು ತಿನ್ನುವ ಮೂಲಕ, ಅವು ನಿಮ್ಮ ಮನೆಯ ಆರೋಗ್ಯವನ್ನು ಕಾಪಾಡುತ್ತವೆ. ಒಟ್ಟಾರೆ, ಹಲ್ಲಿಗಳು ಮನೆಯಲ್ಲಿ ಇದ್ದರೆ ಕೀಟ, ನೊಣ ಹಾಗೂ ಸೊಳ್ಳೆಗಳ ಕಾಟದಿಂದ ಮುಕ್ತಿ ಸಿಗುತ್ತದೆ. ಜೊತೆಗೆ ಮನೆಯ ವಾತಾವರಣವನ್ನು ಸ್ವಚ್ಛ, ಸುರಕ್ಷಿತ ಮತ್ತು ಆರಾಮದಾಯಕವಾಗಿಡಲು ಸಹಕಾರಿಯಾಗುತ್ತವೆ.

ಮದುವೆ ಸಂಭ್ರಮದ ನಡುವೆ ದುರಂತ; ಮಾಯಪ್ಪನಹಳ್ಳಿಯಲ್ಲಿ ಆಸ್ತಿಗಾಗಿ ತಮ್ಮನ ಬರ್ಬರ ಹತ್ಯೆ!

0

ಮಂಡ್ಯ: ಆಸ್ತಿ ವಿಚಾರವಾಗಿ ಸಹೋದರರ ನಡುವೆ ಉಂಟಾದ ಜಗಳ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿರುವ ಘಟನೆ ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ನಡೆದಿದೆ.

ಯೋಗೇಶ್ (35) ಎಂಬವರು ಈ ಹತ್ಯೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ಯೋಗೇಶ್‌ನ ಅಣ್ಣ ಲಿಂಗರಾಜ ಹಾಗೂ ಅಣ್ಣನ ಮಕ್ಕಳಾದ ಭರತ್ ಮತ್ತು ದರ್ಶನ್ ಅವರು ಹರಿತವಾದ ಆಯುಧಗಳಿಂದ ಯೋಗೇಶ್‌ನ್ನು ಮನೆಯ ಕೊಟ್ಟಿಗೆಯಲ್ಲೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯೋಗೇಶ್‌ನ ಮದುವೆ ಕೆಲವೇ ದಿನದಲ್ಲಿ ನಿಶ್ಚಯವಾಗಿದ್ದರಿಂದ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಇರುವಾಗಲೇ ಈ ದುರ್ಘಟನೆ ಸಂಭವಿಸಿರುವುದು ಮನಕಲಕುವಂತಾಗಿದೆ.

ಆಸ್ತಿಯ ಹಂಚಿಕೆ ವಿಚಾರವಾಗಿ ಸಹೋದರರ ನಡುವೆ ಹಿಂದಿನಿಂದಲೂ ಆಗಾಗ್ಗೆ ಕಲಹ ನಡೆಯುತ್ತಿತ್ತು. ಇಂದು ಬೆಳಿಗ್ಗೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೊಲೆ ನಡೆದ ಬಳಿಕ ಆರೋಪಿಗಳಾದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯ ಕುರಿತು ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಶೋಧ ಕಾರ್ಯ ಆರಂಭಿಸಲಾಗಿದೆ.

ಜುಬೀನ್ ಗರ್ಗ್ ಸಾವು: ಅಪಘಾತವೇ? ಆರೋಗ್ಯ ಸಮಸ್ಯೆಯೇ? ಅಥವಾ ರಾಜಕೀಯ ಆಟವೇ? ಬೆಚ್ಚಿ ಬೀಳಿಸುವ ಸತ್ಯ ಬಹಿರಂಗ

ಅಸ್ಸಾಂ ಜನರ ಹೃದಯದ ಧ್ವನಿಯಾಗಿದ್ದ ಜುಬೀನ್ ಗರ್ಗ್ ನಿಧನ, ಕೇವಲ ಸೆಲೆಬ್ರಿಟಿ ಸಾವಲ್ಲ – ಅದು ಅಸ್ಸಾಂ ರಾಜ್ಯವನ್ನೇ ಶೋಕದಲ್ಲಿ ಮುಳುಗಿಸಿದ ಘಟನೆ. ಪುನೀತ್ ರಾಜ್‌ಕುಮಾರ್ ಅಗಲಿಕೆಯ ಬಳಿಕ ಕರ್ನಾಟಕದಲ್ಲಿ ಹೇಗೆ ಶೋಕಮಯ ವಾತಾವರಣ ನಿರ್ಮಾಣವಾಗಿತ್ತೋ, ಅದೇ ರೀತಿಯ ಭಾವನಾತ್ಮಕ ನಿರ್ವಾತ ಪರಿಸ್ಥಿತಿ ಜುಬೀನ್ ನಿಧನದ ನಂತರ ಅಸ್ಸಾಂನಲ್ಲಿ ನಿರ್ಮಾಣವಾಗಿತ್ತು.

ಆದರೆ ಜುಬೀನ್ ಸಾವು ಮೊದಲ ದಿನದಿಂದಲೇ ಅನುಮಾನಗಳಿಂದ ಆವರಿಸಿಕೊಂಡಿತ್ತು. ರಹಸ್ಯ, ಪ್ರಶ್ನೆಗಳು, ಸಂಶಯಗಳು – ಎಲ್ಲವೂ ಒಂದೊಂದಾಗಿ ಹೊರಬರುತ್ತಿದ್ದವು. ಇದೀಗ ಸಿಂಗಪುರ ಪೊಲೀಸ್ ತನಿಖೆಯ ಮೂಲಕ ಹಲವು ಅಂಶಗಳು ಬಹಿರಂಗಗೊಂಡಿವೆ.

ಘಟನೆ ನಡೆದಿದ್ದು ಸಿಂಗಪುರದ ಲಾಜುರಾಸ್ ದ್ವೀಪದ ಬಳಿ. ಜುಬೀನ್ ತಮ್ಮ ಮ್ಯಾನೇಜರ್ ಜೊತೆ ಬೋಟಿನಲ್ಲಿ ಪ್ರಯಾಣಿಸುತ್ತಿದ್ದರು. ನೀರಿಗೆ ಇಳಿಯುವ ಮೊದಲು ಅವರು ಲೈಫ್ ಜಾಕೆಟ್ ಹಾಕಿದ್ದರು. ಆದರೆ ಅದು ಅಸೌಕರ್ಯವಾಗಿದೆ ಎಂದು ಅದನ್ನು ತೆಗೆದರು. ಮತ್ತೊಂದು ಲೈಫ್ ಜಾಕೆಟ್ ಹಾಕುವಂತೆ ಹೇಳಿದರೂ ಅವರು ನಿರಾಕರಿಸಿದರು. ನಂತರ ನೀರಿಗೆ ಧುಮುಕಿ ಈಜಲು ಆರಂಭಿಸಿದರು.

ಆದರೆ ಕೆಲವೇ ನಿಮಿಷಗಳಲ್ಲಿ ಅವರ ದೇಹ ನೀರಿನ ಮೇಲೆ ಬೆನ್ನಿನ ಭಾಗ ಮೇಲಕ್ಕೆ ತೇಲಲು ಆರಂಭಿಸಿತು. ಗಾಬರಿಗೊಂಡ ಬೋಟಿನ ಸಿಬ್ಬಂದಿ ತಕ್ಷಣ ಅವರನ್ನು ಮೇಲಕ್ಕೆತ್ತಿ ಸಿಪಿಆರ್ ನೀಡಿದರು. ನಂತರ ಆಸ್ಪತ್ರೆಗೆ ದಾಖಲಿಸಿದರೂ, ಜೀವ ಉಳಿಸಲಾಗಲಿಲ್ಲ.

ಇಲ್ಲಿ ಬರುವ ದೊಡ್ಡ ಶಾಕ್ ಏನೆಂದರೆ – ಸಿಂಗಪುರ ಪೊಲೀಸರು ನೀಡಿದ ವರದಿ ಪ್ರಕಾರ, ಜುಬೀನ್ ನೀರಿಗೆ ಇಳಿಯುವ ಮುನ್ನ ಮದ್ಯ ಸೇವಿಸಿದ್ದರು. ರಕ್ತ ಪರೀಕ್ಷೆಯಲ್ಲಿ ಹೆಚ್ಚಿನ ಪ್ರಮಾಣದ ಆಲ್ಕೊಹಾಲ್ ಪತ್ತೆಯಾಗಿದೆ. ಜೊತೆಗೆ ಅವರಿಗೆ ಬಿಪಿ ಸಮಸ್ಯೆ ಮತ್ತು ಎಪಿಲೆಪ್ಸಿ ಎಂಬ ಆರೋಗ್ಯ ತೊಂದರೆ ಇದ್ದು, ಇವುಗಳ ಸಂಯೋಜನೆಯಿಂದಲೇ ಅವರು ಅಚಾನಕ ಸಾವನ್ನಪ್ಪಿರುವ ಸಾಧ್ಯತೆ ಹೆಚ್ಚು ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಈ ವರದಿಯನ್ನು ಅಸ್ಸಾಂ ಸರ್ಕಾರ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ, “ಇದು ಅಪಘಾತವಲ್ಲ, ಕೊಲೆ. ಸತ್ಯ ಹೊರತೆಗೆದೇ ತರುತ್ತೇವೆ” ಎಂದು ಬಹಿರಂಗವಾಗಿ ಹೇಳಿದ್ದಾರೆ.

ಇದರಿಂದಾಗಿ ಜನರಲ್ಲಿ ಮತ್ತಷ್ಟು ಅನುಮಾನ ಗಾಢವಾಗಿದೆ. ಸುಶಾಂತ್ ಸಿಂಗ್ ರಾಜ್‌ಪುತ್ ಸಾವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡ ಮಾದರಿಯೇ ಈಗ ಜುಬೀನ್ ಗರ್ಗ್ ಪ್ರಕರಣದಲ್ಲೂ ನಡೆಯುತ್ತಿದೆಯೇ ಎಂಬ ಪ್ರಶ್ನೆ ತೀವ್ರವಾಗಿ ಕೇಳಿಬರುತ್ತಿದೆ.

ಸದ್ಯಕ್ಕಿಲ್ಲ ವಿಜಯ್ ‘ಜನ ನಾಯಗನ್’ಗೆ ಬಿಡುಗಡೆ ಭಾಗ್ಯ: ಸುಪ್ರೀಂಕೋರ್ಟ್‌ನಲ್ಲೂ ಹಿನ್ನಡೆ

ದಳಪತಿ ವಿಜಯ್ ಅಭಿಮಾನಿಗಳು ಕಾದು ಕುಳಿತಿದ್ದ ‘ಜನ ನಾಯಗನ್’ ಸಿನಿಮಾ ಸದ್ಯಕ್ಕೆ ಬಿಡುಗಡೆಯ ಕನಸೇ ದೂರವಾಗುತ್ತಿದೆ. ಜನವರಿ 09ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾ, ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡದೇ ಇರುವ ಕಾರಣದಿಂದಾಗಿ ಥಿಯೇಟರ್‌ಗಳಿಗೆ ಬರಲೇ ಇಲ್ಲ.

ಈ ವಿಚಾರದಿಂದ ಕೋಪಗೊಂಡ ನಿರ್ಮಾಪಕರು ನೇರವಾಗಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದರು. ಹೈಕೋರ್ಟ್ ಆರಂಭದಲ್ಲಿ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶ ನೀಡಿದ್ದು ವಿಜಯ್ ಅಭಿಮಾನಿಗಳಿಗೆ ಸ್ವಲ್ಪ ನಿಟ್ಟುಸಿರು ಕೊಟ್ಟಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಹೈಕೋರ್ಟ್ ತನ್ನದೇ ಆದೇಶಕ್ಕೆ ತಡೆ ನೀಡಿದ್ದು, ಚಿತ್ರತಂಡಕ್ಕೆ ದೊಡ್ಡ ಶಾಕ್ ನೀಡಿತು.

ಇದರಿಂದ ಬೇಸತ್ತ ತಂಡ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಶೀಘ್ರವಾಗಿ ಪ್ರಮಾಣ ಪತ್ರ ಕೊಡಿಸುವಂತೆ ಮನವಿ ಮಾಡಿದರೂ, ಸುಪ್ರೀಂಕೋರ್ಟ್ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್‌ನಲ್ಲಿಯೇ ಇತ್ಯರ್ಥ ಮಾಡಿಕೊಳ್ಳಿ ಎಂದು ಸೂಚಿಸಿದೆ. ಅಲ್ಲದೆ, ಈ ಅರ್ಜಿಯ ವಿಚಾರಣೆಯ ಬಗ್ಗೆ ನ್ಯಾಯಾಲಯಕ್ಕೆ ಆಸಕ್ತಿ ಇಲ್ಲ ಎಂಬ ಸ್ಪಷ್ಟ ಸಂದೇಶವೂ ನೀಡಲಾಗಿದೆ.

ಇದರಿಂದ ‘ಜನ ನಾಯಗನ್’ ಪ್ರಕರಣ ಮತ್ತೆ ಮದ್ರಾಸ್ ಹೈಕೋರ್ಟ್‌ಗೆ ವಾಪಸ್ ಬಂದು ತಲುಪಿದೆ. ಈಗಾಗಲೇ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜನವರಿ 23ಕ್ಕೆ ನಿಗದಿಪಡಿಸಿದ್ದು, ಆ ದಿನ ಕೂಡ ಸ್ಪಷ್ಟ ಆದೇಶ ಹೊರಬರುವ ಬಗ್ಗೆ ಅನುಮಾನ ಮುಂದುವರಿದಿದೆ.

ಇದಕ್ಕಿಂತ ದೊಡ್ಡ ಆತಂಕ ಎಂದರೆ, ಇನ್ನೇನು ಕೆಲವೇ ತಿಂಗಳಲ್ಲಿ ತಮಿಳುನಾಡಿನಲ್ಲಿ ಚುನಾವಣಾ ಘೋಷಣೆ ಸಾಧ್ಯತೆ ಇದೆ. ಒಂದೊಮ್ಮೆ ಚುನಾವಣೆ ಘೋಷಣೆ ಆದರೆ, ಸ್ವತಃ ಸ್ಪರ್ಧಿ ಆಗಿರುವ ವಿಜಯ್ ಅವರ ಸಿನಿಮಾ ‘ಜನ ನಾಯಗನ್’ ಬಿಡುಗಡೆ ಆಗದೇ ಹೋಗುವ ಸಾಧ್ಯತೆ ಹೆಚ್ಚಿದೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಜಯ್ ಅಭಿಮಾನಿಗಳಲ್ಲಿ ಅನುಮಾನ ಬಲವಾಗಿ ಕೇಳಿಬರುತ್ತಿದೆ. “ಸಿನಿಮಾ ಬಿಡುಗಡೆ ತಡೆಯಲು ಉದ್ದೇಶಿತ ಪಿತೂರಿ ನಡೆಯುತ್ತಿದೆ” ಎಂಬ ಆರೋಪಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮತ್ತೆ ಹದಗೆಟ್ಟ ಬೆಂಗಳೂರಿನ ವಾಯು ಗುಣಮಟ್ಟ; AQI 170 — ಮಕ್ಕಳು, ಹಿರಿಯರ ಆರೋಗ್ಯದಲ್ಲಿ ಆತಂಕ

0

ಬೆಂಗಳೂರು: ಕಳೆದ ಕೆಲ ದಿನಗಳ ಹೋಲಿಕೆಗೆ ಇಂದು ಬೆಂಗಳೂರಿನ ವಾಯು ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಂತೆ ತೋರುವುದಾದರೂ, ಇಂದಿನ ವಾಯು ಗುಣಮಟ್ಟ ಸೂಚ್ಯಂಕ (AQI) ನೋಡಿದರೆ ನಗರದ ಗಾಳಿ ಇನ್ನೂ ಅನಾರೋಗ್ಯಕಾರಿ ಮಟ್ಟದಲ್ಲೇ ಇದೆ.

ವಾಹನಗಳ ಹೊಗೆ, ಧೂಳು ಹಾಗೂ ನಿರಂತರ ನಿರ್ಮಾಣ ಚಟುವಟಿಕೆಗಳಿಂದ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಇದರಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಿದೆ.

ಇಂದು ಬೆಂಗಳೂರಿನ AQI 170 ದಾಖಲಾಗಿದ್ದು, ಡಿಸೆಂಬರ್ ತಿಂಗಳಿಗಿಂತ ಸ್ವಲ್ಪ ಸುಧಾರಣೆ ಕಂಡಿದೆ. ಆದರೆ ಕಳೆದ ತಿಂಗಳಲ್ಲಿ ಕೆಲ ದಿನಗಳಲ್ಲಿ AQI 200ರ ಗಡಿ ದಾಟಿದ್ದರಿಂದ ನಗರವಾಸಿಗಳಲ್ಲಿ ಆತಂಕ ಮೂಡಿತ್ತು. ಸಿಲ್ಕ್ ಬೋರ್ಡ್, ವೈಟ್‌ಫೀಲ್ಡ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಗಂಭೀರವಾಗಿ ಹದಗೆಟ್ಟಿತ್ತು. ಇತ್ತೀಚೆಗೆ ವಾತಾವರಣದಲ್ಲಿ ಅಲ್ಪ ಮಟ್ಟಿನ ಸುಧಾರಣೆ ಕಂಡರೂ, ಒಟ್ಟಾರೆ ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕಾರಿ ಹಂತದಲ್ಲೇ ಇದೆ. ಈ ಪರಿಸ್ಥಿತಿ ಮುಂದುವರಿದರೆ ಬೆಂಗಳೂರು ದೆಹಲಿಯಂತಾಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ PM2.5 ಮಟ್ಟ 82 ಮತ್ತು PM10 ಮಟ್ಟ 108 ದಾಖಲಾಗಿದೆ. PM10 ಎನ್ನುವುದು ಮಾನವನ ಕೂದಲಿಗಿಂತ ಸುಮಾರು 7 ಪಟ್ಟು ತೆಳುವಾದ ಧೂಳಿನ ಕಣಗಳಾಗಿದ್ದರೆ, PM2.5 ಮಾನವನ ಕೂದಲಿನ ದಪ್ಪದ ಕೇವಲ ಶೇ. 3ರಷ್ಟು ಮಾತ್ರ ಇರುವ ಅತಿ ಸೂಕ್ಷ್ಮ ಕಣಗಳಾಗಿವೆ. ಇವು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದೊಳಗೆ ಪ್ರವೇಶಿಸಿ ರಕ್ತವನ್ನು ಸೇರುವ ಸಾಧ್ಯತೆ ಇರುವುದರಿಂದ, ಶ್ವಾಸಕೋಶ ಕ್ಯಾನ್ಸರ್, ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.

ರಾಜ್ಯದ ಇತರ ನಗರಗಳ ಇಂದಿನ ವಾಯು ಗುಣಮಟ್ಟ ಸೂಚ್ಯಂಕ (AQI):

ಬೆಂಗಳೂರು – 170
ಮಂಗಳೂರು – 167
ಮೈಸೂರು – 89
ಬೆಳಗಾವಿ – 128
ಕಲಬುರ್ಗಿ – 68
ಶಿವಮೊಗ್ಗ – 138
ಬಳ್ಳಾರಿ – 168
ಹುಬ್ಬಳ್ಳಿ – 93
ಉಡುಪಿ – 162
ವಿಜಯಪುರ – 69
ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ತ್ವರಿತ ಕ್ರಮಗಳ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಳ್ಳದಲ್ಲಿ ಎಮ್ಮೆ ಮೈ ತೊಳೆಯಲು ತೆರಳಿದ್ದ ಯುವಕ ನೀರಲ್ಲಿ ಮುಳುಗಿ ಸಾವು!

0

ಚಿತ್ರದುರ್ಗ: ಹಳ್ಳದಲ್ಲಿ ಎಮ್ಮೆ ಮೈ ತೊಳೆಯಲು ಹೋಗಿದ್ದ ಯುವಕ ಕಾಲುಜಾರಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೊರ್ಲತ್ತು ಗ್ರಾಮದ ಸಮೀಪ ನಡೆದಿದೆ.

ಮೃತ ಯುವಕನನ್ನು ಗೊರ್ಲತ್ತು ಗ್ರಾಮದ ವೆಂಕಟೇಶ್ (23) ಎಂದು ಗುರುತಿಸಲಾಗಿದೆ. ಎಮ್ಮೆಗಳಿಗೆ ನೀರು ಕುಡಿಸಿ ಬಳಿಕ ಹಳ್ಳದಲ್ಲಿ ಮೈ ತೊಳೆಯುವ ವೇಳೆ ಕಾಲು ಜಾರಿ ನೀರಿಗೆ ಬಿದ್ದ ವೆಂಕಟೇಶ್, ನೀರಿನ ಆಳಕ್ಕೆ ಕೊಚ್ಚಿ ಹೋಗಿದ್ದು, ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಸಂಜೆಯಾದರೂ ವೆಂಕಟೇಶ್ ಮನೆಗೆ ಮರಳದ ಹಿನ್ನೆಲೆ ಆತಂಕಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹಳ್ಳದ ಬಳಿ ತೆರಳಿ ಶೋಧ ನಡೆಸಿದ್ದಾರೆ. ಈ ವೇಳೆ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಹಳ್ಳದಲ್ಲಿ ಮುಳುಗಿದ್ದ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.

ಈ ಘಟನೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಗ್ರಾಮದಲ್ಲಿ ದುಃಖದ ವಾತಾವರಣ ಆವರಿಸಿದೆ.

ಕಾರು-ಬೈಕ್ ಟಚ್ ಆಗಿದ್ದಕ್ಕೆ ನಡುರಸ್ತೆಯಲ್ಲೇ ಗಲಾಟೆ; ಒಬ್ಬರಿಗೊಬ್ಬರು ಅವಾಚ್ಯವಾಗಿ ನಿಂದಿಸಿಕೊಂಡ ಯುವಕ-ಯುವತಿ!

0

ಬೆಂಗಳೂರು:- ಕಾರು ಮತ್ತು ಬೈಕ್ ಟಚ್ ಆಗಿದ್ದಕ್ಕೆ ನಡುರಸ್ತೆಯಲ್ಲಿ‌ಯೇ ಯುವಕ-ಯುವತಿ ಗಲಾಟೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೆರೆಕೋಡಿ ಮುಖ್ಯರಸ್ತೆಯಲ್ಲಿ ಗುರುವಾರ ರಾತ್ರಿ 8 ಗಂಟೆಯ ಸುಮಾರಿಗೆ ಜರುಗಿದೆ.

ಓರ್ವ ಯುವತಿ ಮತ್ತು ಯುವಕನ ನಡುವೆ ನಡೆದ ತಳ್ಳಾಟ ಗಲಾಟೆಯಲ್ಲಿ ಅವಾಚ್ಯವಾಗಿ ಒಬ್ಬರಿಗೊಬ್ಬರು ನಿಂದಿಸಿಕೊಂಡಿದ್ದಾರೆ. ಗಲಾಟೆ ಕಾರಣಕ್ಕೆ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ಟಚ್ ಆಗಿದ್ದಕ್ಕೆ ಕೈಯಿಂದ ಪರಸ್ಪರ ಮಿರರ್ ಡ್ಯಾಮೇಜ್ ಮಾಡಿರುವ ಆರೋಪ ಕೇಳಿಬಂದಿದೆ.

ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಬೆಂಗಳೂರು| ಬಾಲಭವನದಲ್ಲಿ ಸ್ಕೇಟಿಂಗ್ ಬೋರ್ಡ್ ಪಾರ್ಕ್: ಚಿಣ್ಣರು ಮತ್ತು ಯುವಕರಿಗೆ ಹೊಸ ತಾಣ

0

ಬೆಂಗಳೂರು: ಕಬ್ಬನ್ ಪಾರ್ಕ್ ಆವರಣದಲ್ಲಿನ ಬಾಲಭವನವು ಈಗಾಗಲೇ ಚಿಣ್ಣರು ಮತ್ತು ಯುವಕರಿಗೆ ಪ್ರಿಯ ತಾಣವಾಗಿದ್ದು, ಈಗ ಅವರಿಗೆ ಮತ್ತೊಂದು ಮನೋರಂಜನಾತ್ಮಕ ಆಕರ್ಷಣೆ ಸಿಗಲಿದೆ.

ಆಧುನಿಕ ಸ್ಕೇಟಿಂಗ್ ಬೋರ್ಡ್ ಪಾರ್ಕ್ ನಿರ್ಮಾಣವು ಶೀಘ್ರದಲ್ಲೇ ಆರಂಭವಾಗಲಿದೆ. ಬಾಲಭವನ ಸೊಸೈಟಿ ಮತ್ತು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪಾರ್ಕ್ ನಿರ್ಮಿಸಲಾಗುತ್ತಿದೆ. ವಿಶ್ವೇಶ್ವರಯ್ಯ ಮ್ಯೂಸಿಯಂ ಹಿಂಭಾಗದಲ್ಲಿರುವ ಬೋಟಿಂಗ್ ಪ್ರದೇಶದ ಬಳಿ, ಬಾಲಭವನದ ಅರ್ಧ ಎಕರೆ ಜಾಗದಲ್ಲಿ ಈ ಪಾರ್ಕ್ ರೂಪುಗೊಳ್ಳಲಿದೆ.

ಹೈಬ್ರಿಡ್ ವಿನ್ಯಾಸದಲ್ಲಿ ರೂಪುಗೊಂಡಿರುವ ಈ ಸ್ಕೇಟಿಂಗ್ ಬೋರ್ಡ್ ಪಾರ್ಕ್‌ನಲ್ಲಿ ಒಂದೇ ಸಮಯದಲ್ಲಿ ಸುಮಾರು 40 ಮಂದಿ ಚಿಣ್ಣರು ಮತ್ತು ಯುವಕರು ಸ್ಕೇಟಿಂಗ್ ಸವಾಲು ಅನುಭವಿಸಬಹುದಾಗಿದೆ. ಪಾರ್ಕ್‌ವನ್ನು ಒಲಿಂಪಿಕ್ ಮಟ್ಟದ ಸೌಲಭ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಐದು ವರ್ಷ ಮೇಲ್ಪಟ್ಟ ಮಕ್ಕಳಲ್ಲಿ ಕ್ರೀಡಾ ಪ್ರತಿಭೆಯನ್ನು ಬೆಳೆಸುವುದೇ ಮುಖ್ಯ ಉದ್ದೇಶ. ಜನವರಿಯ ಅಂತ್ಯದೊಳಗೆ ಕಾಮಗಾರಿ ಪ್ರಾರಂಭವಾಗಲಿದ್ದು, ಮೇ ತಿಂಗಳೊಳಗೆ ಸ್ಕೇಟಿಂಗ್ ಬೋರ್ಡ್ ಪಾರ್ಕ್ ಲೋಕಾರ್ಪಣೆ ಸಾಧ್ಯ ಎಂದು ನಿರೀಕ್ಷಿಸಲಾಗಿದೆ. ಈ ಹೊಸ ಕ್ರೀಡಾ ಚಟುವಟಿಕೆ, ಬಾಲಭವನಕ್ಕೆ ಭೇಟಿ ನೀಡುವ ಪೋಷಕರು ಮತ್ತು ಸಾರ್ವಜನಿಕರಲ್ಲಿ ಸಂತೋಷ ಮತ್ತು ಹರ್ಷವನ್ನು ಮೂಡಿಸಿದೆ.

error: Content is protected !!