ವಿಜಯಸಾಕ್ಷಿ ಸುದ್ದಿ, ಕೊಪ್ಪಳ: 20ನೇ ದಿನಗಳಿಂದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪ.ಹಿ. ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ನಡೆಯುತ್ತಿರುವ ಅನಿರ್ದಿಷ್ಟ ಧರಣಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕಟ್ಟಡ ಮತ್ತು ಬಾರ್ ಬೆಂಡಿಂಗ್ ಇತರೆ ನಿರ್ಮಾಣಕಾರರ ಸಂಘದ ಕಟ್ಟಡ ಮೇಸ್ತ್ರಿಗಳು ಅಶೋಕ ವೃತ್ತದಿಂದ ಧರಣಿ ಸ್ಥಳಕ್ಕೆ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಘೋಷಣೆ ಕೂಗುತ್ತಾ ಧರಣಿ ಹೋರಾಟ ನಡೆಸಿದರು.
ಬಿಜೆಪಿ ಎಂ.ಎಲ್.ಸಿ ಹೇಮಲತಾ ನಾಯಕ ಮಾತನಾಡಿ, ನಾನು ಸದನದಲ್ಲಿ ಬಲ್ಡೋಟಾ ವಿಸ್ತರಣೆಯ ನಿಲುಗಡೆ, ಬಸಾಪುರ ಕೆರೆ ರಕ್ಷಣೆ ಮಾಡಲು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ದುಂಬಾಲು ಬಿದ್ದಿದ್ದೇನೆ. ನನಗೆ ಚರ್ಚೆ ಮಾಡಲು ಸರಕಾರ ಅವಕಾಶ ಕೊಡುತ್ತಿಲ್ಲ. ಮುಖ್ಯಮಂತ್ರಿಗಳಲ್ಲಿ ಸರ್ವ ಪಕ್ಷದ ನಿಯೋಗದಿಂದ ಭೇಟಿ ಮಾಡಿದಾಗ “ಇಷ್ಟು ದಿನ ಈ ಸಮಸ್ಯೆ ಉಲ್ಬಣಗೊಳ್ಳಲು ಬಿಟ್ಟು ಈಗ ಏನು ಮಾಡುತ್ತೀರಿ?” ಎಂದಾಗಲೂ ಯಾರೂ ಮಾತಾಡಲಿಲ್ಲ. ಜಿಲ್ಲಾ ಮಂತ್ರಿ ತಂಗಡಗಿಯವರು ಮುಖ್ಯಮಂತ್ರಿಗಳಿಗೆ “ಶ್ರೀ ಗವಿಸಿದ್ದೇಶ್ವರರು ಹೋರಾಟಕ್ಕೆ ಧುಮುಕಿದ್ದಾರೆ” ಎಂದು ಮನವರಿಕೆ ಮಾಡಿದಾಗ ಜಿಲ್ಲಾಧಿಕಾರಿಗೆ ತಕ್ಷಣ ಕರೆ ಮಾಡಿ ತಾತ್ಕಾಲಿಕವಾಗಿ ವಿಸ್ತರಣಾ ಚಟುವಟಿಕೆ ನಿಲ್ಲಿಸಲು ಮೌಖಿಕ ಆದೇಶ ಮಾಡಿದ್ದು ಬಿಟ್ಟರೆ, ಇದುವರೆಗೆ ಲಿಖಿತ ಆದೇಶ ಮಾಡಿಲ್ಲ. ನಾನು ಇದನ್ನು ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ತರುವಂತೆ ಹೋರಾಡುತ್ತೇನೆ. ಇದರಲ್ಲಿ ಇಡೀ ಕೊಪ್ಪಳ ನಗರ, ಭಾಗ್ಯನಗರ ಮತ್ತು 20ಕ್ಕೂ ಹೆಚ್ಚು ಬಾಧಿತ ಹಳ್ಳಿಗಳ ಆರೋಗ್ಯ ರಕ್ಷಣೆ ಹಿತಕ್ಕಾಗಿ ಹೋರಾಡುತ್ತೇನೆ ಎಂದರು.
ಜೆಡಿಎಸ್ ಮುಖಂಡ ರಾಜು ನಾಯಕ, ಬಿಜೆಪಿ ಎಸ್.ಸಿ. ಘಟಕದ ಅಧ್ಯಕ್ಷ ಗಣೇಶ ಹೊರತಟ್ನಾಳ ಹೋರಾಟ ಬೆಂಬಲಿಸಿ ಮಾತನಾಡಿದರು. ಬಿಜೆಪಿ ಮುಖಂಡರಾದ ಮಹೇಶ ವಿ.ಅಂಗಡಿ, ರಮೇಶ ಮಲ್ಲಪ್ಪ ಕವಲೂರು, ಪೀರಾ ಹುಸೇನ ಹೊಸಳ್ಳಿ, ಪಿ.ವಿ. ಪರೂತಗೌಡ್ರ, ನೀಲಕಂಠಯ್ಯ ಹಿರೇಮಠ, ಕೀರ್ತಿ ಪಾಟೀಲ್, ಗೀತಾ ಮುತ್ತಾಳ, ವಾಣಿಶ್ರೀ ಎಚ್.ಎಮ್, ಡಾ. ಗೀತಾ ಮಠದ ಧರಣಿಗೆ ಬೆಂಬಲ ಸೂಚಿಸಿದರು. ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮುಂದೆ ಇನ್ನಷ್ಟು ವಿಭಿನ್ನವಾಗಿ ಹೋರಾಟ ಮಾಡುವ ಯೋಜನೆ ಹೊಂದಿರುವ ಸಂಘಟಕರು, ಸಾರ್ವಜನಿಕರ ಸಹಭಾಗಿತ್ವಕ್ಕೆ ಮನವಿ ಮಾಡಿದ್ದಾರೆ.
ಹೋರಾಟದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ಮಂಜುನಾಥ ಜಿ.ಗೊಂಡಬಾಳ, ಮಹಾದೇವಪ್ಪ ಮಾವಿನಮಡು, ವೆಂಕಟೇಶ, ದುರುಗೇಶ, ನಾಗರಾಜ್ ಚಾಳೀಸ್, ಮಂಜುನಾಥಗೌಡ ಯತ್ನಟ್ಟಿ, ಮಖಬೂಲ್ ರಾಯಚೂರು, ಬಸವರಾಜ್ ನರೇಗಲ್, ಮೂಕಪ್ಪ ಮೇಸ್ತ್ರಿ ಬಸಾಪುರ, ಡಿ.ಎಂ. ಬಡಿಗೇರ್, ಎಸ್.ಬಿ. ರಾಜೂರ, ಮುದಕಪ್ಪ ಹೊಸಮನಿ, ಬಸವರಾಜ್ ಶೀಲವಂತರ, ಕಾಶಪ್ಪ ಚಲವಾದಿ ಮುಂತಾದವರಿದ್ದರು.
ಇದೇ ವೇಳೆ ಖ್ಯಾತ ಸಿನಿಮಾ ನಿರ್ದೇಶಕ ಮಹಾದೇವ ಹಡಪದ ಧಾರವಾಡ, ಚಿಂತಕ ಜಿ.ಕೆ. ಗೋವಿಂದರಾವ ಅವರ ಮೊಮ್ಮಗಳು ಎ. ಅನನ್ಯ, ಸಾಹಿತಿ ಮಲ್ಲಿಕಾರ್ಜುನ ಹಿರೇಮಠ, ನೈಸರ್ಗಿಕ ಕೃಷಿಕರಾದ ದೇವೇಂದ್ರಪ್ಪ ಬಳೂಟಗಿ ಧರಣಿ ಸ್ಥಳಕ್ಕೆ ಬಂದು ಬೆಂಬಲಿಸಿ ಮಾತನಾಡಿದರು. ಬಾಲ ನ್ಯಾಯಮಂಡಳಿ ಸದಸ್ಯರು ನೇತ್ರಾ ಬಿ. ಪಾಟೀಲ್, ಕವಿತಾ ಬಿ.ಒಂಟಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ರವಿ ಕಾಂತನವರ, ಮೌಲಾ ಹುಸೇನ್, ರಮೇಶ ಎಚ್.ಎಚ್. ಭಾಗವಹಿಸಿದ್ದರು.

