ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ದುರ್ಗಾ ಪೂಜಾ ಸಂಭ್ರಮದ ನಡುವೆ ಭೀಕರ ದುರಂತ ಸಂಭವಿಸಿದೆ.
ಉತ್ತರ ಕೋಲ್ಕತ್ತಾದ ಚೋರ್ ಬಗಾನ್ ಸಾರ್ವಜನಿಕ ದುರ್ಗಾ ಪೂಜಾ ಪೆಂಡಾಲ್ನಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಸುಮಾರು 35 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಿರೀಶ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಶಾರದಾ ಪಾರ್ಕ್ನಲ್ಲಿರುವ ಚೋರ್ ಬಗಾನ್ ಪೂಜಾ ಪೆಂಡಾಲ್ನಲ್ಲಿ ಈ ಘಟನೆ ನಡೆದಿದೆ. ಮಳೆಯ ನಡುವೆಯೇ ಪೆಂಡಾಲ್ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದ್ದು, ನಿರ್ಗಮನ ದ್ವಾರದ ಬಳಿ ಜನದಟ್ಟಣೆ ಉಂಟಾಗಿದೆ. ಈ ವೇಳೆ ನೂಕುನುಗ್ಗಲು ಸಂಭವಿಸಿದೆ ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಕೋಲ್ಕತ್ತಾ ಪೊಲೀಸರು, ವಿಪತ್ತು ನಿರ್ವಹಣಾ ತಂಡ ಹಾಗೂ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅಂಬುಲೆನ್ಸ್ಗಳ ಮೂಲಕ ಗಾಯಾಳುಗಳನ್ನು ರಕ್ಷಿಸಿ ಎಂಸಿಎಚ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೂಜಾ ಪೆಂಡಾಲ್ಗೆ ಸಾರ್ವಜನಿಕರ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹಾಗೂ ಮುಖ್ಯ ಕಾರ್ಯದರ್ಶಿ ಮನೋಜ್ ಅಗರ್ವಾಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

