Home Blog Page 3

ಕಾಲಗರ್ಭ ಸೇರುವ ಮುನ್ನ ರಕ್ಷಣೆಯಾಗಲಿ

0

ವಿಜಯಸಾಕ್ಷಿ ಸುದ್ದಿ, ರಾಯಚೂರು: ಇತಿಹಾಸವೆಂದೊಡನೆ ನಮ್ಮ ಅಕ್ಷಿಪಟಲದ ಮೇಲೆ ರಾಜ-ಮಹಾರಾಜರ ಶೌರ್ಯ, ಸಾಹಸಗಳು ಸಿಂಹದಂತೆ ಘರ್ಜಿಸುತ್ತಿದ್ದರೂ ಕಲಾ ಪ್ರೌಢಿಮೆಗೆ ಕರಗುವ ಮೃದುವಾದ ಮನಸ್ಸು, ಪ್ರೀತಿಗಾಗಿ ಬೆಲೆ ಕಟ್ಟಲಾಗದ ಭವ್ಯ ಮಹಲುಗಳ ಅರ್ಪಣೆ, ಕಲೆಯನ್ನು ಬೆಳೆಸಿದ ಅವರ ಹೃದಯ ಶ್ರೀಮಂತಿಕೆ ಗೋಚರವಾಗುತ್ತದೆ. ಅವರು ಅಂದು ರಕ್ತ, ಬೆವರು, ಹಣದ ಹೊಳೆಯನ್ನೇ ಹರಿಸಿ ನಿರ್ಮಿಸಿದ ನೂರಾರು ಸ್ಮಾರಕಗಳನ್ನು ಇಂದು ನಮ್ಮಿಂದ ರಕ್ಷಿಸಿಕೊಳ್ಳಲಾಗುತ್ತಿಲ್ಲವಲ್ಲ ಎಂಬುದೋದೇ ಅಳಲು.

ಇಂತಹ ಅಳಿವಿನ ಅಂಚಿನಲ್ಲಿರುವ ಸ್ಮಾರಕಗಳ ಪಟ್ಟಿಗೆ ಪುರಾತನ ಕಾಲದಲ್ಲಿ ಎಡೆದೊರೆ 2000 ನಾಡಿನ ಮೊರಟ 300 ವಿಭಾಗದ (ಈಗಿನ ಸಿರಿವಾರ ತಾಲೂಕಿನ ಮಲ್ಲಟ ಗ್ರಾಮ) ಬಳಗಾನೂರು ಗ್ರಾಮದ ಬ್ರಾಹ್ಮಣರಿಗೆ ದತ್ತಿ ನೀಡಲಾದ ಸರ್ವನಮಸ್ಯದ ಅಗ್ರಹಾರವಾಗಿದ್ದ ಪಿರಿಯ ಬಳೆಗಾರನೂರೆಂದೇ ಪ್ರಚಲಿತದಲ್ಲಿತ್ತು.

ಈ ಊರು ನಂತರದ ದಿನಗಳಲ್ಲಿ ರಾಯಚೂರು ದೋ-ಆಬ್ ಪ್ರದೇಶಕ್ಕೆ ಸೇರಿತು. ಬಳಗಾನೂರು ಗ್ರಾಮವನ್ನು ಕಲ್ಯಾಣ ಚಾಲುಕ್ಯರು, ಕಲಚೂರಿಯರು, ಸೇವುಣರು, ವಿಜಯನಗರದ ಅರಸರು, ಬಹುಮನಿ ಸುಲ್ತಾನರ ರಾಜರುಗಳ ಆಡಳಿತಕ್ಕೊಳಪಟ್ಟಿದ್ದ 22 ಅಗ್ರಹಾರಗಳಲ್ಲಿ ಒಂದಾಗಿತ್ತು.

ಬಳಗಾನೂರು ಕಳಚೂರಿಯರ ಮನೆತನದ ರಾಯಮುರಾರಿ ಸೋವಿದೇವನ ಆಳ್ವಿಕೆಯಲ್ಲಿ ಒಳಪಟ್ಟ ಈ ಬಳಗಾನೂರು ಅಂದು ಸಕಲ ಸಿರಿ-ಸಂಪತ್ತಿನಿಂದ ರಾರಾಜಿಸುತ್ತ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.

ಕ್ರಿ.ಶ 1175ರಲ್ಲಿ ಕಳಚೂರಿ ಅರಸ ರಾಯಮುರಾರಿ ಸೋವಿ ದೇವನ ಆಳ್ವಿಕೆಯಲ್ಲಿ, ವಡ್ಡವ್ಯವಹಾರಿಯಾಗಿದ್ದ ಸಬ್ಬದೇವಶೆಟ್ಟಿ ಎಂಬ ವರ್ತಕ ಈ ಲಕ್ಷ್ಮೀನಾರಾಯಣ ದೇವಸ್ಥಾನವನ್ನು ಕಟ್ಟಿಸಿದ. ಇದು ವೇಸರ ಶೈಲಿಯಲ್ಲಿರುವ ಏಕಕೂಟ ವೈಷ್ಣವ ದೇವಸ್ಥಾನದ ಗರ್ಭಗುಡಿಯಲ್ಲಿ ನಾರಾಯಣ ತನ್ನ ಎಡತೊಡೆಯ ಮೇಲೆ ಲಕ್ಷ್ಮೀದೇವಿಯನ್ನು ಕೂಡಿಸಿಕೊಂಡಿರುವ ಕಪ್ಪುಶಿಲೆಯ ವಿಗ್ರಹವಿದೆ. ಇದು ಭಾರತದಲ್ಲಿಯೇ ಎರಡನೆಯದೆನ್ನಬಹುದಾದ ಅಪರೂಪದ ದಕ್ಷಿಣಾಭಿ ಲಕ್ಷ್ಮೀನಾರಾಯಣ ದೇವಸ್ಥಾನವೆಂದು ಹೇಳಲಾಗುತ್ತದೆ.

ಮಾರುತಿ ದೇವಸ್ಥಾನ ದಕ್ಷಿಣಾಭಿಮುಖವಾಗಿದ್ದು, ವಿಶೇಷವೆಂಬಂತೆ ಮಾರುತಿ ದೇವರ ಕೈಯಲ್ಲಿ ತ್ರಿಶೂಲವಿರುವುದನ್ನು ಕಾಣಬಹುದು. ಅದೇ ರೀತಿ ವೀರಭದ್ರೇಶ್ವರ ದೇವಾಲಯ ಉತ್ತರಾಭಿಮುಖವಾಗಿದೆ. ಗರ್ಭಗೃಹದಲ್ಲಿ ನಿಂತ ಭಂಗಿಯ ಕಪ್ಪು ಶಿಲೆಯ ವೀರಭದ್ರೇಶ್ವರ ವಿಗ್ರಹವಿದೆ. ನಗರೇಶ್ವರ ದೇವಾಲಯದ ಹತ್ತಿರದಲ್ಲಿ ಕ್ರಿ.ಶ 11 ಮತ್ತು 12ನೇ ಶತಮಾನದ ಎರಡು ತೃಟಿತ ಜೈನ ತೀರ್ಥಂಕರರ ವಿಗ್ರಹಗಳು, ತೃಟಿತ ಶಾಸನೋಕ್ತ ಮನೋಹರ ಚನ್ನಕೇಶವ ವಿಗ್ರಹ, ನವ ಶಿಲಾಯುಗ ಕಾಲದ ಮಾನವರು ವಾಸಮಾಡಿದ ಬೂದಿದಿಬ್ಬ, ನಾಗಭೂಷಣ ದೇವಾಲಯವಿದೆ.

ಐತಿಹಾಸಿಕ ಕುರುಹುಗಳಾಗಿರುವ ಮಂದಿರಗಳು ಜನರ ತಾತ್ಸಾರದಿಂದ ದನದ ಕೊಟ್ಟಿಗೆಗಳಾಗಿ, ತಿಪ್ಪೆಗುಂಡಿಗಳಾಗಿ ವಿರೂಪಗೊಂಡು ತಿಪ್ಪೆಯಲ್ಲಿಟ್ಟ ವಜ್ರದಂತಾಗಿದೆ. ಆದರೂ ಚಳಿ, ಗಾಳಿ, ಮಳೆಗಳಿಗೆ ಮೈಯೊಡ್ಡಿ ನಿಂತಿರುವ ಈ ದೇವಾಲಯಗಳು ಜೀರ್ಣೋದ್ಧಾರವಾದೀತೆ ಎಂದು ಕಾದು ಕುಳಿತಿವೆ. ಈ ಭಾಗದ ಜನ, ಜನಪ್ರತಿನಿಧಿಗಳು, ಪುರಾತತ್ವ ಇಲಾಖೆ ಸುಮ್ಮನೆ ಕುಳಿತರೆ ಮುಂದಿನ ಪೀಳಿಗೆಗೂ ಪೂರ್ವಜರ ಕಲಾಸಿರಿ ಕಳಚೂರಿಯರ ಕೊಂಡಿ ಕಳಚಿ ಕಾಲಗರ್ಭ ಸೇರುವ ಮುನ್ನ ರಕ್ಷಿಸಿ ಬಳುವಳಿಯಾಗಿ ಬಿಟ್ಟು ಹೋಗುವ ಕಾರ್ಯ ಆಗಬೇಕಿದೆ.

ತೋಟದ ಯಲ್ಲಮ್ಮ ದೇವಸ್ಥಾನ ಜಿಲ್ಲೆಯಲ್ಲಿಯೇ ಶಿಲಾಶಾಸನವುಳ್ಳ ಏಕೈಕ ತೋಟದ ಯಲ್ಲಮ್ಮ ದೇವಸ್ಥಾನ ಊರ ಹೊರವಲಯದಲ್ಲಿದ್ದು, ಇದರ ಮುಂಭಾಗದಲ್ಲಿ ಶಕ್ತಿ ಶಾಸನೋಕ್ತ ಗರ್ಭಗೃಹದಲ್ಲಿ ಯಲ್ಲಮ್ಮ ದೇವಿಯ ಮೂರ್ತಿಯಿದೆ ಹಾಗೂ 12ನೇ ಶತಮಾನಕ್ಕೆ ಸೇರಿದ ನವರಂಗವಿದೆ.

ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಮೈಮೇಲೆ ಡೀಸೆಲ್ ಸುರಿದುಕೊಂಡು ಕಾಂಗ್ರೆಸ್ ಕಾರ್ಯಕರ್ತರ ಆತ್ಮಹುತಿ ಯತ್ನ

0

ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಗಜೇಂದ್ರಗಡದಲ್ಲಿ ನಡೆಯುತ್ತಿದ್ದ ಹಕ್ಕೊತ್ತಾಯದ ವೇಳೆ ತಾಲೂಕಿನ ಮಾರನಬಸರಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ರವಿ ಗಡಾದ ಹಾಗೂ ದಿಂಡೂರ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಸಂಗಪ್ಪ ತೇಜಿ ಮೈಮೇಲೆ ಡೀಸೆಲ್ ಸುರಿದುಕೊಂಡು ಪ್ರತಿಭಟಿಸಿದಾಗ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಕೆಲ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ತಡೆದರು.

ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರ ಆದೇಶ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರ ರೈತರಿಂದ 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆ ಜೋಳವನ್ನು 2400 ರೂ ಬೆಲೆಯಲ್ಲಿ ಖರೀದಿ ಕೇಂದ್ರವನ್ನು ತೆರೆಯುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅಕ್ಟೋಬರ್ 31ರಂದು ಗದುಗಿನ ವಿಜಯಸಾಕ್ಷಿ ದಿನಪತ್ರಿಕೆ ಈ ಕುರಿತು ವರದಿ ಪ್ರಕಟಿಸಿತ್ತು. ಸರಕಾರ ಕೂಡಲೇ ಮೆಕ್ಕೆ ಜೋಳ ಖರೀದಿ ಕೇಂದ್ರ ತೆರೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿ.ಆರ್. ನಾರಾಯಣರೆಡ್ಡಿ ಬಣದ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ವಿಜಯಸಾಕ್ಷಿ ಪತ್ರಿಕೆ ಮೂಲಕ ಆಗ್ರಹಿಸಿದ್ದರು. ಇಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಮಹತ್ವದ ಆದೇಶ ನೀಡಿದ್ದು, ರಾಜ್ಯದ ಎಲ್ಲಾ ರೈತರಿಗೂ ಸಂತಸ ತಂದಿದೆ.

ಈ ಆದೇಶ ನೀಡಿರುವುದು ಸ್ವಾಗತಾರ್ಹ ಎಂದು ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ತಿಳಿಸಿದ್ದಾರೆ.

ಗದುಗಿನ ಆಝಾದ್ ಕೋ-ಆ ಬ್ಯಾಂಕ್‌ಗೆ ‘ಉತ್ತಮ ಸಹಕಾರಿ ಬ್ಯಾಂಕ್’ ಗೌರವ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸರ್ಕಾರದ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಗಳ ವತಿಯಿಂದ ಗದುಗಿನ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ ದಿ. ಆಝಾದ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ್ನು `ಉತ್ತಮ ಸಹಕಾರಿ ಬ್ಯಾಂಕ್’ ಎಂದು ಗುರುತಿಸಿ ಗೌರವಿಸಿದೆ.

ಇತ್ತೀಚೆಗೆ ಹಾವೇರಿಯ ರಜನಿ ಸಭಾಂಗಣದಲ್ಲಿ ಜರುಗಿದ ಅಖಿಲ ಭಾರತ ಸಹಕಾರ ಸಪ್ತಾಹ-2025ರ ‘ಆತ್ಮ ನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು’ ಧ್ಯೇಯದ ಕಾರ್ಯಕ್ರಮದಲ್ಲಿ ಅತಿಥಿ ಗಣ್ಯಮಾನ್ಯರ ಉಪಸ್ಥಿತಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬ್ಯಾಂಕ್‌ಗೆ ಗೌರವ ಸಲ್ಲಿಸಲಾಯಿತು.

ಆಝಾದ್ ಬ್ಯಾಂಕ್‌ನ ನಿರ್ದೇಶಕರಾದ ಆರ್.ಎಲ್. ಬಾಗಲಕೋಟಿ, ಎಂ.ಎ. ಹಣಗಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎ.ಜಿ. ಯರಗುಡಿ ಗೌರವ ಸ್ವೀಕರಿಸಿದರು. ಆಝಾದ್ ಬ್ಯಾಂಕ್‌ಗೆ ಈ ಗೌರವವನ್ನು ನೀಡಿದ್ದಕ್ಕೆ ಇಲಾಖೆ, ಮಹಾಮಂಡಳಕ್ಕೆ ಬ್ಯಾಂಕ್‌ನ ಚೇರಮನ್ ಹಾಜಿ ಸರ್ಫರಾಜ್‌ಅಹ್ಮದ್ ಎಸ್.ಉಮಚಗಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

ಜಾನುವಾರು ಕಳ್ಳತನ: ಇಬ್ಬರು ನ್ಯಾಯಾಂಗ ವಶಕ್ಕೆ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶುಕ್ರವಾರ ತಡರಾತ್ರಿ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಹೊರವಲಯದ ನೆಲೋಗಲ್ ಕ್ರಾಸ್ ಹತ್ತಿರ ಜಾನುವಾರುಗಳ ಕಳ್ಳತನ ಪ್ರಕರಣ ನಡೆದಿದ್ದು, ಈ ಕುರಿತು ಸರ್ಕಾರದ ತರ್ಫೇ ಪಿಎಸ್‌ಐ ಈರಪ್ಪ ರಿತ್ತಿ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಸಂದರ್ಭದಲ್ಲಿ 1 ಆಕಳು, 3 ಸಣ್ಣ ಕೋಣಗಳು, 5 ಹೋರಿಕರು ಸೇರಿದಂತೆ 10 ಜಾನುವಾರುಗಳನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಗೂಡ್ಸ್ ವಾಹನದಲ್ಲಿ ಜಾನುವಾರುಗಳಿಗೆ ಹಿಂಸೆ ನೀಡುವ ರೀತಿಯಲ್ಲಿ ಹಗ್ಗದಿಂದ ಕಟ್ಟಿ ಸೂಕ್ತ ಜಾಗ ಇಲ್ಲದಿದ್ದರೂ ಸಹ ಇಕ್ಕಟ್ಟಾಗಿ ಅವುಗಳನ್ನು ನಿಲ್ಲಿಸಿ ಅವುಗಳಿಗೆ ಆಹಾರ, ನೀರಿನ ವ್ಯವಸ್ಥೆ ಮಾಡದೇ ಉಪವಾಸ ಇಟ್ಟು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡಿಕೊಂಡು ಹೋಗುತ್ತಿರುವಾಗ ಪ್ರಿವೆನ್ಷನ್ ಆಫ್ ಕ್ರೂಯಾಲಿಟಿ ಟು ಎನಿಮಲ್ ಆ್ಯಕ್ಟ್-1960ನೇದ್ದರ ಅಡಿಯಲ್ಲಿ ಪಿಎಸ್‌ಐ ಈರಪ್ಪ ರಿತ್ತಿ ಸರ್ಕಾರಿ ತರ್ಪಿ ದೂರು ನೀಡಿ ಪ್ರಕರಣ ದಾಖಲಿಸಿದ್ದು, ಇಬ್ಬರು ಆರೋಪಿತರನ್ನು ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ. ಪಿಎಸ್‌ಐ (ಅವಿ) ಎಸ್.ಟಿ. ಕಡಬಿನ ತನಿಖೆ ಕೈಗೊಂಡಿದ್ದಾರೆ.

ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸುಣಗಾರ ಓಣಿಯಲ್ಲಿ ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಭೆಯ ಅಧ್ಯಕ್ಷತೆಯನ್ನು ಸಮಾಜ ಸಂಘಟನೆಯ ಜಿಲ್ಲಾಧ್ಯಕ್ಷ ರಾಮಣ್ಣ ಇರಕಲ್ಲ ವಹಿಸಿ ಮಾತನಾಡಿ, ಕನ್ನಡ ಭಾಷೆ ಮಾತನಾಡುವ ನಾವೆಲ್ಲರೂ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಧ್ಯೇಯವಾಕ್ಯದಿಂದ ಕನ್ನಡ ಉಳಿಸಿ, ಕನ್ನಡ ಬೆಳೆಸಿರಿ ಎಂದರು.

ಸಮಾಜ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹಾದಿಮನಿ ಮಾತನಾಡಿ, ಮಕ್ಕಳ ಸಾಂಸ್ಕೃತಿಕ ವೇಷ-ಭೂಷಣ ನಾಡಿನ ಪರಂಪರೆಯನ್ನು ಬಿಂಬಿಸುತ್ತದೆ. ನಾಡಿನ ಕಲೆ, ಸಾಹಿತ್ಯ, ವಾಸ್ತುಶಿಲ್ಪ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಿಕ್ಷಕರಾದ ಬಸವರಾಜ ಹಾಗೂ ದೀನಬಂಧು ಆದಿ ಕನ್ನಡ ನಾಡು-ನುಡಿ ಹಾಗೂ ಕನ್ನಡ ಪ್ರೀತಿಯ ಅಕ್ಕರೆಯ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಹರೀಶ ಬಾರಕೇರ, ಮಂಜುನಾಥ ಗುಡಿಸಾಗರ, ರಾಜು ಪೂಜಾರ, ಮಹಿಳಾ ಸಂಘಟನೆಯ ಅಧ್ಯಕ್ಷ ಸುಜಾತ ಗುಡಿಸಾಗರ, ಆನಂದ ಸುಣಗಾರ, ದೇವು ನವಲಗುಂದ, ಗಿರಿಜಾ ಬಾರಕೇರ, ಕವಿತಾ ಗುಡಿಸಾಗರ, ಸೌಮ್ಯ ಸುಣಗಾರ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

ದರ್ಗಾ ಶಾಂತಿ, ಮಾನವೀಯ ಮೌಲ್ಯಗಳ ಕೇಂದ್ರ

0

ವಿಜಯಸಾಕ್ಷಿ ಸುದ್ದಿ, ಗದಗ: ದರ್ಗಾ ಎಂದರೆ ಕೇವಲ ಧಾರ್ಮಿಕ ಬಂಧನವಲ್ಲ. ಇದು ಶಾಂತಿ, ಪ್ರೀತಿ, ಸಹಿಷ್ಣುತೆ, ಸಾಮರಸ್ಯ ಹಾಗೂ ಮಾನವೀಯತೆ ಹರಡುವ ಪವಿತ್ರ ತಾಣ. ಇಲ್ಲಿ ಬರುವ ಪ್ರತಿಯೊಬ್ಬರೂ ತಮ್ಮ ಮನದ ಭಾರವನ್ನು ಇಳಿಸಿ ನೆಮ್ಮದಿ ಮತ್ತು ಆಶೀರ್ವಾದವನ್ನು ಪಡೆದು ಹಿಂತಿರುಗುತ್ತಾರೆ ಎಂದು ಗುಲಬರ್ಗಾದ ಸಜ್ಜಾದೇ ನಶಿನ್ ಖ್ವಾಜಾ ಬಂದೇ ನವಾಜ್ ಗೇಸುದರಾಜ್ ದರ್ಗಾದ ಹಜರತ್ ಸೈಯದ್ ಮೊಹಮ್ಮದ್ ಅಲಿ ಅಲ್‌ಹುಸೇನಿ ಹೇಳಿದರು.

ನಗರದ ಕಾಗದಗಾರ ಓಣಿಯಲ್ಲಿ ಹಜರತ್ ಸೈಯದ್ ಶಾವಲಿ ದರ್ಗಾದ ನವೀಕೃತ ಕಟ್ಟಡ ಹಾಗೂ ನೂತನ ನೆಮ್ಮದಿ ಭವನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇಂದು ಉದ್ಘಾಟನೆಯಾಗುತ್ತಿರುವ ನೆಮ್ಮದಿ ಕೇಂದ್ರ ನಮ್ಮ ಸಮುದಾಯದ ಕಲ್ಯಾಣಕ್ಕೆ ಮತ್ತೊಂದು ಮಹತ್ವದ ಹೆಜ್ಜೆ. ಆರೋಗ್ಯ ತಪಾಸಣೆ, ಮಾರ್ಗದರ್ಶನ, ಸೇವಾ ಕೇಂದ್ರ ಮತ್ತು ಸಾರ್ವಜನಿಕ ನೆರವಿನ ವಿವಿಧ ವಿಭಾಗಗಳ ಮೂಲಕ ಜನರ ಅಗತ್ಯಗಳನ್ನು ಪೂರೈಸುವ ವ್ಯವಸ್ಥೆಯನ್ನು ಇಲ್ಲಿ ಒದಗಿಸಲಾಗಿರುವುದು ಸಂತಸ ತಂದಿದೆ. ನಗರಸಭೆಯ 17ನೇ ವಾರ್ಡಿನ ನಗರಸಭೆ ಸದಸ್ಯರಾದ ಆಸ್ಮಾ ಮುನ್ನಾಸಾಬ ರೇಶ್ಮಿ ಹಾಗೂ ಕಾಂಗ್ರೆಸ್ ಯುವ ಮುಖಂಡ ಮುನ್ನಾಸಾಬ ಅ.ರೇಶ್ಮಿ, ಮೊಹ್ಮದಲಿ ಕಾಗದಗಾರ ಜನ್ದಿಸಾಬ ಕಾಗದಗಾರ, ಹಾಮಿದುಲ್ಲಾ ಶಿರಹಟ್ಟಿ, ಮಹ್ಮದಲಿ ದೊಡ್ಡಮನಿ, ಮೆಹಬೂಬ ಕಾಗದಗಾರ, ಮಹ್ಮದರಫೀಕ ದಾಲಾಯತ ಸೇರಿದಂತೆ ಕಾಗದಗೇರಿ ಓಣಿಯ ಸಮಸ್ತ ಗುರು-ಹಿರಿಯರು ಕೈಗೊಂಡ ಒಳ್ಳೆಯ ಕಾರ್ಯ ಸಮಾಜೋಪಯೋಗಿಯಾಗಿದೆ ಎಂದು ಹಜರತ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ ಹೇಳಿದರು.

ಸರಕಾರದ ಮುಖ್ಯ ಸಚೇತಕ ಹಾಗೂ ವಿಧಾನಪರಿಷತ್ ಸದಸ್ಯ ಸಲೀಂ ಅಹಮದ್ ಮಾತನಾಡಿ, ದರ್ಗಾದ ಸೇವಾದಾರರು, ಸಂಘಟಕರು, ಸ್ಥಳೀಯರು ನೀಡಿರುವ ಸಹಕಾರ ಹೆಮ್ಮೆ ಮೂಡಿಸಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಆಜಾದ್ ಕೋ-ಆಪರೇಟೀವ್ ಬ್ಯಾಂಕ್ ಚೇರಮನ್ ಸರಫರಾಜ್ ಎಸ್.ಉಮಚಗಿ ಮಾತನಾಡಿ, ದರ್ಗಾದ ಸೇವಾ ಪರಂಪರೆಯಲ್ಲಿ ಶಿಕ್ಷಣದ ಉತ್ತೇಜನವು ಸದಾ ಮುಖ್ಯವಾಗಿರಬೇಕು. ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ವಿದ್ಯಾರ್ಥಿ ವೇತನ, ಕೌಶಲ್ಯಾಭಿವೃದ್ಧಿ ಮತ್ತು ಸಮಾಜಮುಖಿ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸುತ್ತಿದ್ದೇವೆ ಎಂದರು.

ಕಾಂಗ್ರೆಸ್ ಯುವ ಮುಖಂಡ ಮುನ್ನಾಸಾಬ ರೇಶ್ಮಿ ಮಾತನಾಡಿ, ಹಜರತ್ ಸೈಯದ್ ಶಾವಲಿ ದರ್ಗಾದ ನವೀಕರಿಸಲಾದ ಕಟ್ಟಡ ಹಾಗೂ ನೂತನ ನೆಮ್ಮದಿ ಭವನ ನಿರ್ಮಾಣಕ್ಕೆ ಅನುದಾನ ನೀಡಿ ಸಮಾಜಬಾಂಧವರಿಗೆ ಅನುಕೂಲ ಕಲ್ಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹಾಗೂ ಗಣ್ಯರನ್ನು ಶ್ಲಾಘಿಸಿದರು.

ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಮಹಾರಾಷ್ಟ್ರದ ಸಜ್ಜಾದೇ ನಶೀನ ನಿಲಂಗಾ ಶರೀಫನ ಹಜರತ್ ಸಯ್ಯದ್ ಹೈದರಪಾಷಾ ಖಾದರಿ ಸಾನ್ನಿಧ್ಯ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ನಗರಸಭೆ ಸದಸ್ಯರಾದ ಆಸ್ಮಾ ಮುನ್ನಾಸಾಬ ರೇಶ್ಮಿ, ಜೈನುಲಾಬ್ದೀನ್ ಆರ್.ನಮಾಜಿ, ಬರಕತಅಲಿ ಮುಲ್ಲಾ, ಪರವೀನಬಾನು ಮುಲ್ಲಾ, ಧಾರವಾಡದ ಕುತುಬಅಲಿಶಾ ಮದಾರಿ, ಗಣ್ಯರಾದ ಖಲಂದರ ಗೌಸುಸಾಬ ರೆಹಮಾನವರ, ಪ್ರಭು ಬುರಬುರೆ, ಈಶ್ವರಸಾ ಮೇರವಾಡೆ, ರತ್ನಾಕರಭಟ್ ಜೋಶಿ, ಎಸ್.ಡಿ. ಮಕಾನದಾರ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಅನಿಲ ಸಿದ್ದಮ್ಮನಹಳ್ಳಿ, ಇಂಜಿನಿಯರ್ ಎ.ಎಚ್. ಹೊಸಳ್ಳಿ, ಅಬ್ದುರ್‌ರಜಾಕ್ ಡಂಕೇದ, ಮೊಹ್ಮದಯುಸುಫ್ ಇಟಗಿ, ಮೀರಾಸಾಬ ಕಲ್ಯಾಣಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸಜ್ಜಾದೇ ನಶಿನ್ ಖ್ವಾಜಾ ಬಂದೇ ನವಾಜ್ ಗೇಸುದರಾಜ್ ದರ್ಗಾದ ಹಜರತ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ ಅವರು ಧಾರ್ಮಿಕ ಮಂತ್ರೋಚ್ಛಾರಣೆ ಮಾಡಿದರು. ಜಿಲ್ಲಾ ಸರಕಾರಿ ವಕೀಲರಾದ ಎಂ.ಎ. ಕುಕನೂರ ಸ್ವಾಗತಿಸಿದರು. ಎಂ.ಎ. ಶಿರಹಟ್ಟಿ, ಅಲ್ಲಾಭಕ್ಷ ಕೊಟಗಿ ಕಾರ್ಯಕ್ರಮ ನಿರೂಪಿಸಿದರು. ಮಹ್ಮದಲಿ ರೆಹಮಾನಸಾಬ ಕಾಗದಗಾರ ವಂದಿಸಿದರು.


ಬಾಕ್ಸ್

ಕಟ್ಟಡ ಹಾಗೂ ನೂತನ ನೆಮ್ಮದಿ ಭವನ ಉದ್ಘಾಟನೆ ನೆರವೇರಿಸಿದ ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಮಾತನಾಡಿ, ನಮ್ಮ ಗದಗ ಶತಮಾನಗಳಿಂದ ಸಾಮಾಜಿಕ ಸಾಮರಸ್ಯ ಮತ್ತು ಭಕ್ತಿ-ಭಾವಗಳ ಸಂಕೇತವಾಗಿದ್ದು, ಈ ಹೊಸ ಕೇಂದ್ರ ಅದರ ಸೇವಾ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲಿದೆ ಎಂದರು.

ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು: ಮೀನುಗಾರಿಕೆ ಕ್ಷೇತ್ರವನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಲು ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಮೀನುಗಾರಿಕೆ ಇಲಾಖೆ ಆಯೋಜಿಸಿದ “ವಿಶ್ವ ಮೀನುಗಾರಿಕೆ ದಿನಾಚರಣೆ ಮತ್ತು 2025ರ ಮತ್ಸ್ಯ ಮೇಳ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 320 ಕಿ.ಮೀ. ಕರಾವಳಿ ಪ್ರದೇಶ ಮತ್ತು 5.5 ಲಕ್ಷ ಹೆಕ್ಟೇರ್ ಒಳನಾಡು ಜಲಪ್ರದೇಶವಿದೆ. ರಾಜ್ಯ ಮೀನು ರಫ್ತಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ದೇಶದ ಮೀನು ಉತ್ಪಾದನೆಯಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ. ಮೀನುಗಾರಿಕೆ 10 ಲಕ್ಷ ಜನರ ಜೀವನದ ಆಧಾರವಾಗಿದೆ.

ಸರ್ಕಾರ ನೇತೃತ್ವದಲ್ಲಿ ಯಾಂತ್ರೀಕೃತ ದೋಣಿಗಳ ಡೀಸೆಲ್ ಮಿತಿಯನ್ನು ವಾರ್ಷಿಕ 1.5 ಲಕ್ಷ ಲೀಟರ್‌ನಿಂದ 2 ಲಕ್ಷ ಲೀಟರ್‌ಗೆ ಹೆಚ್ಚಿಸಲಾಗಿದೆ. ನಾಡ ದೋಣಿಗಳಿಗೆ ಕೈಗಾರಿಕಾ ಎಣ್ಣೆ ಪ್ರತೀ ಲೀಟರ್‌ಗೆ 35 ರೂ. ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಮೀನುಗಾರ ಸಮುದಾಯದ ಏಳಿಗೆಗೆ ಸರ್ಕಾರ ಪ್ರತಿ ಬಜೆಟ್‌ನಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಮುದಾಯದ ಅಭಿವೃದ್ಧಿಗೆ ತೊಡಗಿರುವುದಾಗಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯಕ್ಕೆ ಜನಪದದ ಕೊಡುಗೆ ಅಪಾರ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಕನ್ನಡ ಸಾಹಿತ್ಯ ಎಲ್ಲ ಸಾಹಿತ್ಯಗಳಿಗಿಂತ ಶ್ರೇಷ್ಠವಾದದ್ದು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದು, ಕನ್ನಡದ ಕುವೆಂಪು, ದ.ರಾ. ಬೇಂದ್ರೆ, ಮಾಸ್ತಿ ಅವರ ಕೊಡುಗೆ ಅಪಾರವಾಗಿದೆ. ಕನ್ನಡವನ್ನು ಲಿಪಿಗಳ ರಾಣಿ ಎಂದು ಕರೆಯಲಾಗುತ್ತದೆ. ಕನ್ನಡ ಸಾಹಿತ್ಯಕ್ಕೆ ಜನಪದದ ಕೊಡುಗೆ ಅಪಾರ ಎಂದು ಕೊಟ್ರಯ್ಯ ಹೊಂಬಾಳ್ಮಠ ಹೇಳಿದರು.

ಅವರು ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಶ್ರೀ ಜ.ಅ. ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಪ್ರೌಢಶಾಲೆಯಲ್ಲಿ ಶಿರಹಟ್ಟಿ ತಾಲೂಕಾ ಕಸಾಪ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ನಿವೃತ್ತ ಶಿಕ್ಷಕ ಬಿ.ಎಂ. ಯರಕದ ಕಾರ್ಯಕ್ರಮ ಉದ್ಘಾಟಿಸಿದರು. ವೈ.ಬಿ. ಪಾಟೀಲ, ನವೀನಕುಮಾರ ಅಳವಂಡಿ, ಬಿ.ಎಂ. ಈಟಿ, ಎ.ಎಸ್. ಮಠದ, ಮಲ್ಲೇಶ ಭಜಂತ್ರಿ, ಎಂ.ಕೆ. ರೋಣದ, ಅರುಣ ರಾವಣಕಿ, ಕುಮಾರ ಕಲ್ಮಠ, ಅಂಬಿಕಾ ಕಮ್ಮಾರ ಮುಂತಾದವರು ಉಪಸ್ಥಿತರಿದ್ದರು.

ರೈತರಿಂದ ವಿನೂತನ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳ ಆಶ್ರಯದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶನಿವಾರ 8ನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಧರಣಿ ನಿರತ ರೈತರು ಪಾಳಾ-ಬಾದಾಮಿ ರಸ್ತೆಯಲ್ಲಿ ಕುಳಿತು ಜೋಳದ ರೊಟ್ಟಿ ಊಟ ಮಾಡಿದರು.

ಪಟ್ಟಣದ ಹಳ್ಳದಕೇರಿ ಓಣಿಯ ನಾಗಪ್ಪ ಓಂಕಾರಿ, ಈರಪ್ಪ ಮಾಗಡಿ, ದುಂಡಪ್ಪ ಕೊಟಗಿ, ದೇವಪ್ಪ ಕರಿಯತ್ತಿನ, ಕೊಟ್ಟಪ್ಪ ಅಮರಶೆಟ್ಟಿ, ಶಿವನಗೌಡ ಅಡರಕಟ್ಟಿ, ದ್ಯಾಮಣ್ಣ ಕಮತದ, ಗಿರಿಜವ್ವ ಕರಿಯತ್ತಿನ, ಪ್ರೇಮವ್ವ ಹರಪನಹಳ್ಳಿ ಇವರು ಜೋಡೆತ್ತಿನ ಎರಡು ಚಕ್ಕಡಿಯಲ್ಲಿ ಜೋಳದ ಕಡಕ್ ರೊಟ್ಟಿ, ಬುತ್ತಿ, ಮಡಿಕಿ ಕಾಳು ಪಲ್ಯ, ಶೇಂಗಾ ಚಟ್ನಿ ಕಟ್ಟಿಕೊಂಡು ಧರಣಿನಿರತ ವೇದಿಕೆಗೆ ಆಗಮಿಸಿದ್ದರು. ನಂತರ ನಡು ರಸ್ತೆಯಲ್ಲೇ ತಾಡಪತ್ರಿ ಹಾಸಿಕೊಂಡು ಸಾಲಾಗಿ ಕುಳಿತು ರೈತರು ಊಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ರೈತರ ಊಟ ಮುಗಿಯುವವರೆಗೆ ಅರ್ಧ ತಾಸು ರಾಜ್ಯ ಹೆದ್ದಾರಿ ಸಂಚಾರ ಬಂದ್ ಆಗಿತ್ತು.

ಪಟ್ಟಣ ಹಾಗೂ ಬೇರೆ ಬೇರೆ ಊರುಗಳಿಂದ ಬಂದಿದ್ದ ರೈತರು, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಖಡಕ್ ರೊಟ್ಟಿ ಊಟ ಮಾಡಿದ್ದು ವಿಶೇಷವಾಗಿತ್ತು. ಚಂಬಣ್ಣ ಬಾಳಿಕಾಯಿ, ಸಿ.ಆರ್. ಲಕ್ಕುಂಡಿಮಠ, ಶರಣು ಗೋಡಿ, ಬಸವರಾಜ ಹಿರೇಮನಿ, ಸೋಮಣ್ಣ ಡಾಣಗಲ್ಲ, ವೀರಣ್ಣ ಪವಾಡದ, ಅಮರೇಶ ತೆಂಬದಮನಿ, ಜ್ಞಾನದೇವ ಬೋಮಲೆ, ಅಭಯ ಜೈನ್, ಪವನ್ ಬಂಕಾಪೂರ ಮತ್ತಿತರರು ಇದ್ದರು.

ಲಕ್ಷ್ಮೇಶ್ವರದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸುವವರೆಗೂ ಅಹೋರಾತ್ರಿ ಹೋರಾಟ ನಡೆಯಲಿದೆ ಎಂದು ಹೋರಾಟದ ನೇತೃತ್ವ ವಹಿಸಿರುವ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಎಂ.ಎಸ್. ದೊಡ್ಡಗೌಡ್ರ, ರವಿಕಾಂತ ಅಂಗಡಿ ತಿಳಿಸಿದ್ದಾರೆ.

error: Content is protected !!