ವಿಜಯಸಾಕ್ಷಿ ಸುದ್ದಿ, ಗದಗ: ನಿರಂತರ ಪುಸ್ತಕ ಓದುವುದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಅತಿಯಾದ ಮೊಬೈಲ್ ದುರ್ಬಳಕೆಯಿಂದ ಬದುಕು ಬೀದಿಗೆ ಬೀಳುವುದು ನಿಶ್ಚಿತ. ಇದನ್ನರಿತು ವಿದ್ಯಾರ್ಥಿಗಳು ಎಚ್ಚರಿಕೆಯ ಹೆಜ್ಜೆಯನ್ನು ಇಡುವುದು ಇಂದು ಅತ್ಯವಶ್ಯವಿದೆ ಎಂದು ಹಿರಿಯ ಶಿಕ್ಷಕ ಎಂ.ಐ. ಶಿವನಗೌಡ್ರ ಅಭಿಪ್ರಾಯಪಟ್ಟರು.
ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಪುಸ್ತಕದ ಮಹತ್ವ ಹಾಗೂ ಮೊಬೈಲ್ ಬಳಕೆ ಮತ್ತು ದುರ್ಬಳಕೆಯ ಬಗ್ಗೆ ಹೊರತಂದ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಪುಸ್ತಕದೊಂದಿಗೆ ನಿರಂತರ ತಮ್ಮ ಸ್ನೇಹ ಇರಲಿ. ಓದುವ ಹವ್ಯಾಸ ರೂಢಿ ಮಾಡಿಕೊಳ್ಳಿ. ಪುಸ್ತಕ ಹೇಳುತ್ತದೆ-ತಲೆ ತಗ್ಗಿಸಿ ನನ್ನನ್ನು ನೋಡು, ನಾನು ಸದಾ ತಲೆ ಎತ್ತುವಂತೆ ಮಾಡುತ್ತೇನೆ. ಮೊಬೈಲ್ ಹೇಳುತ್ತದೆ-ತಲೆ ತಗ್ಗಿಸಿ ನನ್ನನ್ನು ಒಮ್ಮೆ ನೋಡು, ಮತ್ಯಾವತ್ತೂ ನಿನ್ನನ್ನು ತಲೆ ಎತ್ತದಂತೆ ಮಾಡುತ್ತೇನೆ. ಇಂತಹ ಸಂದೇಶವುಳ್ಳ ಕಿರುಪತ್ರವನ್ನು ಇಂದು ಶಾಲೆಯಲ್ಲಿ ಪ್ರತಿ ಕೋಣೆಗೆ ಅಂಟಿಸಲಾಗಿದೆ. ದಿನಕ್ಕೆ ಒಂದು ಬಾರಿಯಾದರೂ ಈ ಸಂದೇಶವನ್ನು ಮೆಲುಕು ಹಾಕಿದರೆ ನಿಮ್ಮ ಜೀವನ ಯಶಸ್ವಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಂಕ್ರಮ್ಮ ಆರ್.ಹಣಮಗೌಡ್ರು, ಮಂಜುಳಾ ಪಿ.ಸಾಮ್ರಾಣಿ, ಸುಮಂಗಲ ಎಂ.ಪತ್ತಾರ್, ಶಾರದಾ ಬಾಣದ, ಶೋಭಾ ಎಸ್.ಗಾಳಿ, ರಮೇಶ್ ಬಸರಿ, ಸಾವಿತ್ರಿ ಎ.ಗದ್ದನಕೇರಿ, ಎನ್.ಆರ್. ಶಿರೋಳ್, ಸಬಿಯಾ ಯು.ಕುಷ್ಟಗಿ, ಗಂಗಾ ಎಂ.ಅಳವಂಡಿ, ಮಂಜುಳಾ ಟಿ, ಶಶಿಕಲಾ ಬಿ.ಗುಳೇದವರ, ಪದ್ಮಾ ವಿ.ದಾಸರ್, ಲಕ್ಷ್ಮಮ್ಮ ಮಾಳೋತ್ತರ್, ಶಾರದಾ ಬಾಣದ ಮುಂತಾದವರು ಉಪಸ್ಥಿತರಿದ್ದರು. ಸಂಜೀವಿನಿ ಕೂಲಗುಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮೀ ಅಣ್ಣಿಗೇರಿ ಮಾತನಾಡಿ, ವಿದ್ಯಾರ್ಥಿ ಜೀವನವೆಂದರೆ ಸುವರ್ಣಕಾಲ. ಇದರ ಸದುಪಯೋಗವನ್ನು ಮಾಡಿಕೊಂಡು ಬಂಗಾರದಂತಹ ಬದುಕನ್ನು ಕಟ್ಟಿಕೊಳ್ಳಲು ಇದು ಅತ್ಯಂತ ಮಹತ್ವದ ಕಾಲಘಟ್ಟ. ಈ ಶಾಲೆಯಲ್ಲಿ ನಿಮಗೆ ಉತ್ತಮ ಶೈಕ್ಷಣಿಕ ವಾತಾವರಣನ್ನು ಕಲ್ಪಿಸಲಾಗಿದೆ. ಈ ಕರಪತ್ರಗಳು ತಮ್ಮ ಬದುಕಿನ ಪಥವನ್ನು ಬದಲಿಸಲಿ ಎಂದು ಹೇಳಿದರು.